Sunday, 10 November 2019

ಸಾಧಾರಣ ಕಾಲದ ಮೂವತ್ಮೂರನೇ ಭಾನುವಾರ


17/ಹಸಿರು/ಭಾನು
1ನೇ ವಾಚನ - ಮಲಾಕಿ: 4:1-2
ಕೀರ್ತನೆ  -  98:  5-6, 7, 8-9
2ನೇ ವಾಚನ - 2 ಥೆಸ 3: 7-12
ಶುಭಸಂದೇಶ - ಲೂಕ 21: 5-19


1ನೇ ವಾಚನ - ಮಲಾಕಿ: 4:1-2
“ಇಗೋ, ಆ ದಿನ ಬರುತ್ತಿದೆ. ಒಲೆಯಂತೆ ಉರಿಯುತ್ತಿದೆ. ಎಲ್ಲ ಅಹಂಕಾರಿಗಳು, ದುಷ್ಕರ್ಮಿಗಳು, ಒಣಹುಲ್ಲಿನಂತೆ ಆಗಿಹೋಗಿದ್ದಾರೆ. ಆದ್ದರಿಂದ ಬರಲಿರುವ ಆ ದಿನದಂದು ಸುಟ್ಟು ಭಸ್ಮವಾಗುತ್ತಾರೆ. ಬುಡ ರೆಂಬೆಸಹಿತ ಬೂದಿಯಾಗುತ್ತದೆ,” ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ. “ನನ್ನ ನಾಮದಲ್ಲಿ ಭಯಭಕ್ತಿಯಿಂದ ಇರುವ ನಿಮಗಾದರೋ ಜೀವೋದ್ಧಾರಕನೆಂಬ ಸೂರ್ಯನು ಉದಯಿಸಿ, ಸುಕ್ಷೇಮವನ್ನೀಯುವ ಕಿರಣಗಳನ್ನು ಬೀರುವನು. ಕೊಟ್ಟಿಗೆಯಿಂದ ಹೊರಬಂದ ಕರುಗಳಂತೆ ನೀವು ಕುಣಿದು ಕುಪ್ಪಳಿಸುವಿರಿ.

ಕೀರ್ತನೆ  -  98:  5-6, 7, 8-9
5 : ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ / ಭಜಿಸಿರಿ ಆತನನು ವಾದ್ಯಮೇಳದೊಂದಿಗೆ //
6 : ಊದಿರಿ ಕೊಂಬನು, ತುತೂರಿಯನು / ಉದ್ಘೋಷಿಸಿರಿ ಪ್ರಭು ರಾಜನನು //
7 : ಗರ್ಜಿಸಲಿ ಸಮುದ್ರವು ಅದರಲ್ಲಿರುವುದೆಲ್ಲವು / ಕೀರ್ತಿಸಲಿ ಜಗವು, ಅದರೊಳು ವಾಸಿಸುವ ಜನರೆಲ್ಲರು //
8 : ಚಪ್ಪಾಳೆ ಹೊಡೆಯಲಿ ನದಿಗಳು / ತಟ್ಟಾಡಲಿ ಬೆಟ್ಟಗುಡ್ಡಗಳು //
9 : ಏಕೆನೆ ಬರುವನಾತ ಇಹಲೋಕಕೆ ನ್ಯಾಯತೀರಿಸಲು / ಜಗಕು, ಜನತೆಗು, ನ್ಯಾಯನೀತಿಗನುಸಾರ ತೀರ್ಪುಕೊಡಲು //

2ನೇ ವಾಚನ - 2 ಥೆಸ 3: 7-12
ನಾವು ಹೇಗೆ ನಡೆದುಕೊಂಡೆವೊ ಹಾಗೆಯೇ, ನೀವು ಸಹ ನಡೆದುಕೊಳ್ಳಬೇಕೆಂಬುದು ನಿಮಗೆ ತಿಳಿದ ವಿಷಯ. ನಾವು ನಿಮ್ಮ ಬಳಿಯಿದ್ದಾಗ ಸೋಮಾರಿಗಳಾಗಿರಲಿಲ್ಲ. ಪುಕ್ಕಟೆಯಾಗಿ ನಾವು ಯಾರ ಅನ್ನವನ್ನೂ ಉಣ್ಣಲಿಲ್ಲ. ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳೂ ನಾವೇ ಕಷ್ಟಪಟ್ಟು ದುಡಿದಿದ್ದೇವೆ. ನಿಮ್ಮಿಂದ ಪೋಷಣೆ ಪಡೆಯಲು ನಮಗೆ ಹಕ್ಕಿಲ್ಲವೆಂದಲ್ಲ; ನೀವು ನಮ್ಮನ್ನು ಅನುಸರಿಸಿ ನಡೆಯುವಂತೆ, ನಿಮಗೆ ಆದರ್ಶವಾಗಿ ಇರಬೇಕೆಂದೇ ನಾವು ಹೀಗೆ ಮಾಡಿದೆವು. ನಾವು ನಿಮ್ಮೊಡನಿದ್ದಾಗ, “ದುಡಿಯಲೊಲ್ಲದವನು ಉಣಲೂಬಾರದು,” ಎಂದು ನಿಮಗೆ ಆಜ್ಞಾಪಿಸಿದ್ದೆವು. ಈಗಲಾದರೋ ನಿಮ್ಮಲ್ಲಿ ಕೆಲವರು ದುಡಿಯದೆ ಮೈಗಳ್ಳರಾಗಿ ಅಲ್ಲಲ್ಲಿ ಅಲೆದಾಡುತ್ತಾ ಹರಟೆಮಲ್ಲರಾಗಿದ್ದಾರೆಂದು ನಮಗೆ ತಿಳಿದು ಬಂದಿದೆ. ಇಂಥವರು ತಮ್ಮ ಜೀವನೋಪಾಯಕ್ಕಾಗಿ ತಾವೇ ದುಡಿದು ಸಂಪಾದಿಸಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ಎಚ್ಚರಿಸಿ ಆಜ್ಞಾಪಿಸುತ್ತೇವೆ.

ಶುಭಸಂದೇಶ - ಲೂಕ 21: 5-19
“ಈ ಮಹಾದೇವಾಲಯವು ಅಂದವಾದ ಕಲ್ಲುಗಳಿಂದಲೂ ಅಮೂಲ್ಯವಾದ ಕೊಡುಗೆಗಳಿಂದಲೂ ಎಷ್ಟು ಅಲಂಕೃತವಾಗಿದೆ!” ಎಂದು ಕೆಲವರು ಮಾತನಾಡುತ್ತಿದ್ದರು. ಆಗ ಯೇಸು, “ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು,” ಎಂದರು. “ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೆ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?” ಎಂದು ಕೆಲವರು ಕೇಳಿದರು. ಅದಕ್ಕೆ ಯೇಸುಸ್ವಾಮಿ, “ನೀವು ಮೋಸಹೋಗದಂತೆ ಜಾಗರೂಕರಾಗಿರಿ. ಅನೇಕರು ‘ನಾನೇ ಆತ, ನಾನೇ ಆತ,’ ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು, ‘ಕಾಲವು ಸಮೀಪಿಸಿಬಿಟ್ಟಿತು,’ ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ. ಸಮರ ಸಂಕಲಹಗಳ ಸುದ್ದಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಅಂತ್ಯವು ಕೂಡಲೇ ಬರುವುದಿಲ್ಲ,” ಎಂದರು. ಅದೂ ಅಲ್ಲದೆ ಯೇಸು ಇಂತೆಂದರು: “ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕ್ಕಿಳಿಯುವುವು; ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರುವುವು; ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು. ಇದೆಲ್ಲಾ ಸಂಭವಿಸುವುದಕ್ಕೆ ಮುಂಚೆ ನಿಮ್ಮನ್ನು ಬಂಧಿಸಿ ಹಿಂಸೆಗೊಳಪಡಿಸುವರು. ಪ್ರಾರ್ಥನಾ ಮಂದಿರಗಳಿಗೂ ಕಾರಾಗೃಹಗಳಿಗೂ ಎಳೆದೊಪ್ಪಿಸುವರು; ನನ್ನ ನಾಮದ ನಿಮಿತ್ತ ನಿಮ್ಮನ್ನು ಅರಸರ ಹಾಗೂ ಅಧಿಪತಿಗಳ ಮುಂದಕ್ಕೆ ಎಳೆಯುವರು. ಶುಭಸಂದೇಶಕ್ಕೆ ಸಾಕ್ಷಿಕೊಡಲು ಇದು ನಿಮಗೆ ಸದವಕಾಶವಾಗಿರುತ್ತದೆ. ಆಗ ವಾದಿಸುವುದು ಹೇಗೆಂದು ನೀವು ಮುಂಚಿತವಾಗಿ ಚಿಂತಿಸಬೇಕಾಗಿಲ್ಲ; ಇದು ನಿಮಗೆ ಮನದಟ್ಟಾಗಿರಲಿ. ಏಕೆಂದರೆ ನಿಮ್ಮ ವಿರೋಧಿಗಳಾರೂ ಪ್ರತಿಭಟಿಸಲು ಅಥವಾ ವಿರೋಧಿಸಲು ಆಗದಂಥ ವಾಕ್ಚಾತುರ್ಯವನ್ನೂ ಜ್ಞಾನಶಕ್ತಿಯನ್ನೂ ನಿಮಗೆ ಕೊಡುವೆನು. ನಿಮ್ಮ ತಂದೆತಾಯಿಗಳೇ, ಒಡಹುಟ್ಟಿದವರೇ, ಬಂಧು ಮಿತ್ರರೇ, ನಿಮ್ಮನ್ನು ಪರಾಧೀನ ಮಾಡುವರು; ಮಾತ್ರವಲ್ಲ, ನಿಮ್ಮಲ್ಲಿ ಕೆಲವರನ್ನು ಕೊಂದು ಹಾಕಿಸುವರು. ನೀವು ನನ್ನವರು ಆದುದರಿಂದಲೇ ಎಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೂ ನಿಮ್ಮ ತಲೆ ಕೂದಲೊಂದೂ ನಾಶವಾಗುವುದಿಲ್ಲ. ಸೈರಣೆಯಿಂದಿರಿ, ಸಂರಕ್ಷಣೆಯನ್ನು ಪಡೆಯುವಿರಿ.

ಚಿಂತನೆ

ಯೇಸು ಜೇರುಸಲೇಮ್ ಮಹಾದೇವಾಲಯದ ನಾಶದ ಕುರಿತು ಮುಂತಿಳಿಸುತ್ತಾರೆ. ಮಹಾದೇವಾಲಯದ ಕುರಿತು ಒಂದು ಚಿತ್ರಣ, ಕ್ರಿ.ಪೂ. ೯೯೮ರಲ್ಲಿ ದಾವಿದ ಅರಸ ಜೆರುಸಲೇಮನ್ನು ರಾಜಧಾನಿಯಾಗಿ ಮಾಡಿಕೊಂಡ. ಒಂದು ಗುಡಾರ ನಿರ್ಮಿಸಿ ದೇವರ ಮಂಜೂಷ ಇಟ್ಟು ಧಾರ್ಮಿಕ ಕೇಂದ್ರವಾಗಿ ಮಾಡಿದ (೨ ಸಮುವೇಲ ೬). ದೇವರಿಗೆ ಭವ್ಯ ದೇವಾಲಯದ ಕನಸುಕಂಡ. ಕ್ರಿ.ಪೂ ೯೬೦ರಲ್ಲಿ ಆತನ ಮಗ ಸೊಲೋಮೋನ ಸುಂದರ, ಭವ್ಯ ದೇವಾಲಯ ನಿರ್ಮಿಸಿದ. ಅದು ಪ್ರಾಚೀನ ಪ್ರಪಂಚದ ಏಳು ಅದ್ಬುತಗಳಲ್ಲಿ ಒಂದಾಗಿತ್ತು. ಕ್ರಿ.ಪೂ. ೫೮೭ರಲ್ಲಿ ಬ್ಯಾಬಿಲೋನಿಯರಿಂದ ದೇವಾಲಯದ ವಿನಾಶವಾಯಿತು (೨ ಅರಸ ೨೫:೧-೧೭). ಕ್ರಿ.ಪೂ. ೫೧೫ರಲ್ಲಿ ಜೆರುಬಾಬೆಲನಿಂದ ಪುನರ್ನಿರ್ಮಾಣವಾಯಿತು (ನೆಹೆಮಿಯ ೧೨). ಕ್ರಿ.ಶ. ೨೮-೬೪ರಲ್ಲಿ ಹೆರೋದನು ದೇವಾಲಯದ ಜೀಣೋದ್ದಾರ ಕಾರ್ಯ ಕೈಗೊಂಡು ಸುಂದರ, ಭವ್ಯವಾದ ದೇವಾಲಯವನ್ನಾಗಿಸುತ್ತಾನೆ. ಯೇಸು ದೇವಾಲಯದ ನಾಶದ ಬಗ್ಗೆ ಮುಂತಿಳಿಸಿದಂತೆ ಕ್ರಿ.ಶ. ೭೦ರಲ್ಲಿ ರೋಮನ್ನರಿಂದ ದೇವಾಲಯವು ಸಂಪೂರ್ಣ ನಾಶವಾಗುತ್ತದೆ. 

ದೇವಾಲಯದ ನಾಶವು ದೇವರ ನ್ಯಾಯತೀರ್ಪಿನ ಮುನ್ಸೂಚನೆಯಾಗಿದೆ. ಯೇಸು ತಮ್ಮ ಬೋಧನೆ ಮತ್ತು ಕಾರ್ಯಗಳಲ್ಲಿ ದೇವರನ್ನು ಆಯ್ಕೆ ಮಾಡಲು ಕರೆ ನೀಡಿದರು. ಆದರೆ ಇಸ್ರೆಯೇಲರು ಯೇಸುವನ್ನು ತಿರಸ್ಕರಿಸಿ ತೀರ್ಪಿಗೆ ಗುರಿಯಾದರು.

No comments:

Post a Comment