ಡಿಸೆಂಬರ್ 2 / 2019
ಆಗಮನ ಕಾಲದ ಮೊದಲನೆಯ ಸೋಮವಾರ
ಮೊದಲನೇ ವಾಚನ ಯೆಶಾಯ 4:2-6
ಕೀರ್ತನೆ: 122-2, 3-4, 4-5, 6-7, 8-9
ಶುಭಸಂದೇಶ : ಮತ್ತಾಯ 8:5-11
ಆಗಮನ ಕಾಲದ ಮೊದಲನೆಯ ಸೋಮವಾರ
ಮೊದಲನೇ ವಾಚನ ಯೆಶಾಯ 4:2-6
ಕೀರ್ತನೆ: 122-2, 3-4, 4-5, 6-7, 8-9
ಶುಭಸಂದೇಶ : ಮತ್ತಾಯ 8:5-11
ಮೊದಲನೇ ವಾಚನ ಯೆಶಾಯ 4:2-6
2 : ಆ ದಿನದಂದು ಸರ್ವೇಶ್ವರಸ್ವಾಮಿ ಅನುಗ್ರಹಿಸುವ ಗಿಡಮರಗಳು ಸುಂದರವಾಗಿರುವುವು, ಸಮೃದ್ಧಿಯಾಗಿ ಬೆಳೆದಿರುವುವು. ಭೂಮಿಯ ಸಿರಿಸುಗ್ಗಿ ಅಳಿದುಳಿದ ಇಸ್ರಯೇಲರಿಗೆ ಹಿಗ್ಗನ್ನೂ ಹೆಮ್ಮೆಯನ್ನೂ ತರುವುದು.
3 : ಸಿಯೋನಿನಲ್ಲಿ ಉಳಿದವರು, ಜೆರುಸಲೇಮಿನಲ್ಲಿ ಮಿಕ್ಕವರು - ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿರುವ ಜೆರುಸಲೇಮಿನ ನಿವಾಸಿಗಳೆಲ್ಲರು - ಪವಿತ್ರರೆನಿಸಿ ಕೊಳ್ಳುವರು.
4 : ಆಗ ಒಡೆಯರಾದ ಸ್ವಾಮಿ ನ್ಯಾಯನಿರ್ಣಯ ಮಾಡುವ ತಮ್ಮ ಚೈತನ್ಯದಿಂದಲೂ ಸುಟ್ಟು ಶುಚಿಮಾಡುವ ಚೈತನ್ಯದಿಂದಲೂ ಸಿಯೋನಿನ ಮಹಿಳೆಯರ ಕಲ್ಮಶವನ್ನು ತೊಡೆದುಹಾಕುವರು.
5 : ಸಿಯೋನ್ ಪರ್ವತದ ಮೇಲೆಲ್ಲ, ಅಲ್ಲಿನ ಸಭಾಕೂಟಗಳ ಮೇಲೆಲ್ಲ ಹಗಲಲ್ಲಿ ಧೂಮಮೇಘವನ್ನು, ರಾತ್ರಿಯಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ದೇವರ ಮಹಿಮೆ ಛತ್ರಿಯಂತೆಯೂ ಚಪ್ಪರದಂತೆಯೂ ಎಲ್ಲರನ್ನು ಆವರಿಸುವುದು.
6 : ಅದು ಹಗಲಿನ ಬಿಸಿಲಲ್ಲಿ ನೆರಳನ್ನೂ ಮಳೆಗಾಳಿ ಬಂದಾಗ ಆಶ್ರಯವನ್ನೂ ಕೊಡುವ ಮಂಟಪವಾಗಿರುವುದು.
ಕೀರ್ತನೆ: 122-2, 3-4, 4-5, 6-7, 8-9
1 : ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ / ಆಯಿತೆನಗೆ ಆನಂದ, ಜನರೆನ್ನ ಕರೆದಾಗ
2 : ನಮ್ಮ ಕಾಲುಗಳು ಓ ಜೆರುಸಲೇಮೇ / ತಲುಪಿವೆ ನಿನ್ನ ಪುರದ್ವಾರಗಳನೇ
3 : ನೋಡು, ಜೆರುಸಲೇಮ್ ಪಟ್ಟಣವಿದು / ಗಟ್ಟಿಯಾಗಿಯೆ ಕಟ್ಟಲ್ಪಟ್ಟಿಹುದು
4 : ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ / ಮಾಡುವರಿಲ್ಲಿಯೆ ಪ್ರಭುವಿನ ನಾಮ ಕೀರ್ತನೆ / ಪಾಲಿಪರಿಂತು ಇಸ್ರೇಲರಿಗೆ ವಿಧಿಸಿದಾಜ್ಞೆ
5 : ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು / ದಾವೀದನ ಮನೆತನದವರ ಸಿಂಹಾಸನ ಗಳು
6 : ಜೆರುಸಲೇಮಿನ ಶುಭಕ್ಕಾಗಿ ಮಾಡಿರಿ ಪ್ರಾರ್ಥನೆ / “ಜೆರುಸಲೇಮ್, ನಿನ್ನಭಿಮಾನಿಗಳಿಗೆ ಪ್ರವರ್ಧನೆ
7 : ಶುಭವಿರಲೀ ನಿನ್ನೀ - ಪೌಳಿಗೋಡೆಗಳೊಳಗೆ / ಸಂರಕ್ಷಣೆ ಇರಲಿ ನಿನ್ನ ಅರಮನೆಗಳೊಳಗೆ”
8 : ನನ್ನ ಬಂಧುಬಳಗದವರ ನಿಮಿತ್ತ / “ನಿನಗೆ ಶುಭವಿರಲಿ” ಎಂಬುದು ನನ್ನ ಮತ
9 : ನಮ್ಮ ಸ್ವಾಮಿದೇವರ ಮಂದಿರದ ನಿಮಿತ್ತ / ಹರಸುವೆ ನಿನ್ನ ಸುಕ್ಷೇಮವನು ಹಾರೈಸುತ //
ಶುಭಸಂದೇಶ : ಮತ್ತಾಯ 8:5-11
5 : ಯೇಸುಸ್ವಾಮಿ ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು.
6 : “ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾಶ್ರ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ. ಬಹಳವಾಗಿ ನರಳುತ್ತಿದ್ದಾನೆ,” ಎಂದು ವಿನಂತಿಸಿದನು.
7 : ಯೇಸು, “ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ,” ಎಂದರು
8 : ಅದಕ್ಕೆ ಆ ಶತಾಧಿಪತಿ, “ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು.
9 : ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು. ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು, ‘ಬಾ’ ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ, ‘ಹೋಗು’ ಎಂದರೆ ಹೋಗುತ್ತಾನೆ. ಸೇವಕನಿಗೆ, ‘ಇಂಥದ್ದನ್ನು ಮಾಡು’ ಎಂದರೆ ಮಾಡುತ್ತಾನೆ," ಎಂದನು.
10 : ಈ ಮಾತನ್ನು ಕೇಳಿದ್ದೇ ಯೇಸುವಿಗೆ ಅತ್ಯಾಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು: "ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
11 : ಪೂರ್ವ ಪಶ್ಚಿಮ ದಿಕ್ಕುಗಳಿಂದ ಅನೇಕ ಜನರು ಬಂದು ಅಬ್ರಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು.
ಚಿಂತನೆ
ಪ್ರಭು, ತಾವು ನನ್ನ ಮನೆಯನ್ನು ಪ್ರವೇಶಿಸಲು ನಾನು ಪಾತ್ರನಲ್ಲ. ಆದರೆ ತಾವು ಒಂದೇ ಒಂದು ಮಾತನ್ನು ನುಡಿಯಿರಿ, ನನ್ನ ಆತ್ಮವು ಸ್ವಸ್ಥವಾಗುವುದು ಪ್ರತಿ ಬಾರಿ ಪರಮಪ್ರಸಾದವನ್ನು ಸ್ವೀಕರಿಸುವ ಮುನ್ನ ನುಡಿಯುವ ಈ ಮೇಲಿನ ಮಾತುಗಳು ರೂಪಗೊಂಡಿದ್ದು ಇಂದಿನ ಶುಭಸಂದೇಶದಲ್ಲಿ ಕಾಣುವ ಶತಾಧಿಪತಿಯ ಮಾತುಗಳಿಂದ, ಈತ ೧೦೦ ಮಂದಿ ಸೈನಿಕರ ಮೇಲಾಧಿಕಾರಿ, ಈತ ಅನ್ಯಧರ್ಮಿಯವ. ಇವನು ಹೆರೋದ್ ಅಂತಿಪಾಸನ ಸೇನೆಯಲ್ಲಿ ದುಡಿಯುತ್ತಿದ್ದು ದೇವರಿಗೆ ಭಯಪಡುವವನಾಗಿದ್ದ ಹಾಗೂ ಯೆಹೂದ್ಯರ ಹಿತ್ಯೆಷಿ ಈತನ ವಿಶ್ವಾಸವನ್ನು ನೋಡಿದ ಕ್ರಿಸ್ತ ಆತನ ಸೇವಕನನ್ನು ಗುಣಪಡಿಸುತ್ತಾರೆ. ನಮ್ಮ ವಿಶ್ವಾಸವು ಅಚಲವಾಗಿದ್ದರೆ ಎಲ್ಲವೂ ಸಾಧ್ಯ ಎಂಬುದು ಈ ಅದ್ಬುತದಿಂದ ವ್ಯಕ್ತವಾಗುತ್ತದೆ. ಯೇಸು ಬಂದ್ದದ್ದು ಯೆಹೂದ್ಯರಿಗೆ ಮಾತ್ರವಲ್ಲ, ಸರ್ವರಿಗೂ, ಎಲ್ಲಾ ಧರ್ಮ, ಕುಲದವರಿಗೂ ಎಂಬುದನ್ನು ಸಾಬೀತುಪಡಿಸುತ್ತಾರೆ.
No comments:
Post a Comment