ಡಿಸೆಂಬರ್ 1 2019
ಆಗಮನ ಕಾಲದ ಮೊದಲನೆಯ ಭಾನುವಾರ
ಮೊದಲನೇ ವಾಚನ ಯೆಶಾಯ 2:1-5
ಕೀರ್ತನೆ: 122-2, 3-4, 4-5, 6-7, 8-
ಶುಭಸಂದೇಶ : ಮತ್ತಾಯ 24:37-44
ಎರಡನೇ ವಾಚನ : ರೋಮನರಿಗೆ 13:11-14
ಮೊದಲನೇ ವಾಚನ ಯೆಶಾಯ 2:1-5
1 : ಜುದೇಯ ಮತ್ತು ಜೆರುಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನು ಕಂಡ ದರ್ಶನದಲ್ಲಿ ಕೇಳಿಬಂದ ದೈವೋಕ್ತಿ:
2 : ಸರ್ವೇಶ್ವರನ ಶ್ರೀ ನಿವಾಸದ ಪರ್ವತವು ಅಂತಿಮ ಕಾಲದಂದು ಪ್ರತಿಷ್ಠೆಗೊಳ್ಳುವುದು, ಗುಡ್ಡಬೆಟ್ಟಗಳಿಗಿಂತ ಎತ್ತರವಾಗಿ ಬೆಳೆದು ಬರುವುವು ಅದರತ್ತ ಸಕಲ ರಾಷ್ಟ್ರಗಳು ಜಲಧಾರೆಯಂತೆ ಹರಿದು ಬರುವುವು.
3 : ದೇಶವಿದೇಶಗಳವರು ಬಂದು ಹೇಳುವರು ಹೀಗೆ: “ಬನ್ನಿ, ಹೋಗೋಣ ಸರ್ವೇಶ್ವರಸ್ವಾಮಿಯ ಪರ್ವತಕ್ಕೆ ಇಸ್ರಯೇಲರ ದೇವರ ಮಂದಿರಕ್ಕೆ. ಬೋಧಿಸುವನಾತ ನಮಗೆ ತನ್ನ ಮಾರ್ಗಗಳನು ನಾವು ಹಿಡಿದು ನಡೆವಂತೆ ಆತನ ಪಥವನು ಹೊರಡುವುದು ಧರ್ಮಶಾಸ್ತ್ರ ಸಿಯೋನಿನಿಂದ ಸ್ವಾಮಿಯ ದಿವ್ಯವಾಣಿ ಜೆರುಸಲೇಮಿನಿಂದ.
4 : ಬಗೆಹರಿಸುವನು ದೇಶದೇಶಗಳ ವ್ಯಾಜ್ಯವನು ತೀರಿಸುವನು ರಾಷ್ಟ್ರರಾಷ್ಟ್ರಗಳ ನ್ಯಾಯವನು ಹಾಕುವರವರು ಕುಲುಮೆಗೆ ತಮ್ಮಾಯುಧಗಳನು. ಮಾರ್ಪಡಿಸುವರು ಕತ್ತಿಗಳನು ನೇಗಿಲ ಗುಳಗಳನ್ನಾಗಿ ಭರ್ಜಿಗಳನು ಕುಡುಗೋಲುಗಳನ್ನಾಗಿ. ಕತ್ತಿಯನೆತ್ತರು ಜನಾಂಗ ಜನಾಂಗದೆದುರಿಗೆ ಯುದ್ಧವಿದ್ಯೆಯ ಕಲಿಕೆ ಅಗತ್ಯವಿರದು ಅವರಿಗೆ.
5 : ಯಕೋಬ ಮನೆತನದವರೇ, ಬನ್ನಿ, ಸ್ವಾಮಿಯ ಬೆಳಕಿನಲ್ಲಿ ನಡೆಯೋಣ.
ಕೀರ್ತನೆ: 122-2, 3-4, 4-5, 6-7, 8-9
1 : ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ / ಆಯಿತೆನಗೆ ಆನಂದ, ಜನರೆನ್ನ ಕರೆದಾಗ
2 : ನಮ್ಮ ಕಾಲುಗಳು ಓ ಜೆರುಸಲೇಮೇ / ತಲುಪಿವೆ ನಿನ್ನ ಪುರದ್ವಾರಗಳನೇ
3 : ನೋಡು, ಜೆರುಸಲೇಮ್ ಪಟ್ಟಣವಿದು / ಗಟ್ಟಿಯಾಗಿಯೆ ಕಟ್ಟಲ್ಪಟ್ಟಿಹುದು
4 : ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ / ಮಾಡುವರಿಲ್ಲಿಯೆ ಪ್ರಭುವಿನ ನಾಮ ಕೀರ್ತನೆ / ಪಾಲಿಪರಿಂತು ಇಸ್ರೇಲರಿಗೆ ವಿಧಿಸಿದಾಜ್ಞೆ
5 : ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು / ದಾವೀದನ ಮನೆತನದವರ ಸಿಂಹಾಸನ ಗಳು
6 : ಜೆರುಸಲೇಮಿನ ಶುಭಕ್ಕಾಗಿ ಮಾಡಿರಿ ಪ್ರಾರ್ಥನೆ / “ಜೆರುಸಲೇಮ್, ನಿನ್ನಭಿಮಾನಿಗಳಿಗೆ ಪ್ರವರ್ಧನೆ
7 : ಶುಭವಿರಲೀ ನಿನ್ನೀ - ಪೌಳಿಗೋಡೆಗಳೊಳಗೆ / ಸಂರಕ್ಷಣೆ ಇರಲಿ ನಿನ್ನ ಅರಮನೆಗಳೊಳಗೆ”
8 : ನನ್ನ ಬಂಧುಬಳಗದವರ ನಿಮಿತ್ತ / “ನಿನಗೆ ಶುಭವಿರಲಿ” ಎಂಬುದು ನನ್ನ ಮತ
9 : ನಮ್ಮ ಸ್ವಾಮಿದೇವರ ಮಂದಿರದ ನಿಮಿತ್ತ / ಹರಸುವೆ ನಿನ್ನ ಸುಕ್ಷೇಮವನು ಹಾರೈಸುತ //
ಎರಡನೇ ವಾಚನ : ರೋಮನರಿಗೆ 13:11-14
11 : ಇದೆಂಥ ಕಾಲವೆಂದು ತಿಳಿದಿರುವ ನೀವು ಇದೆಲ್ಲವನ್ನು ಮಾಡಬೇಕು. ನಿದ್ರೆಯಿಂದ ಎಚ್ಚೆತ್ತುಕೊಳ್ಳುವ ವೇಳೆಯು ಸವಿೂಪಿಸಿತು. ನಾವು ಕ್ರಿಸ್ತಯೇಸುವನ್ನು ವಿಶ್ವಾಸಿಸಲು ಆರಂಭಿಸಿದಾಗ ಇದ್ದುದಕ್ಕಿಂತಲೂ ಈಗ ನಮ್ಮ ಉದ್ಧಾರವು ಸವಿೂಪವಾಗಿದೆ.
12 : ಇರುಳು ಬಹುಮಟ್ಟಿಗೆ ಕಳೆಯಿತು. ಹಗಲು ಸವಿೂಪಿಸಿತು. ಇನ್ನು ಅಂಧಕಾರಕ್ಕೆ ಅನುಗುಣವಾದ ದುಷ್ಕøತ್ಯಗಳನ್ನು ತ್ಯಜಿಸಿಬಿಡೋಣ. ಬೆಳಕಿಗೆ ಅನುಗುಣವಾದ ಆಯುಧಗಳನ್ನು ಧರಿಸಿಕೊಳ್ಳೋಣ.
13 : ದುಂದೌತಣ - ಕುಡಿತಗಳಲ್ಲಾಗಲೀ, ಕಾಮವಿಲಾಸ - ನಿರ್ಲಜ್ಜಾಕೃತ್ಯಗಳಲ್ಲಾಗಲೀ, ಕಲಹ - ಮತ್ಸರಗಳಲ್ಲಾಗಲೀ ಕಾಲಕಳೆಯದೆ ಬೆಳಕಿನಲ್ಲಿ ಬಾಳುವವರಂತೆ ಸಭ್ಯರಾಗಿ ವರ್ತಿಸೋಣ.
14 : ದೇಹದ ದುರಿಚ್ಛೆಗಳಿಗೆ ಬಲಿಯಾಗದೆ ಕ್ರಿಸ್ತಂಬರರಾಗಿರಿ.
ಶುಭಸಂದೇಶ : ಮತ್ತಾಯ 24:37-44
37 : ನೋವನ ಕಾಲದಲ್ಲಿ ಆದಂತೆಯೇ ನರಪುತ್ರನು ಬರುವಾಗಲೂ ಆಗುವುದು.
38 : ಜಲಪ್ರಳಯಕ್ಕೆ ಹಿಂದಿನ ದಿನಗಳಲ್ಲಿ ನೋವನು ನಾವೆಯನ್ನು ಹತ್ತುವ ದಿನದವರೆಗೆ ಜನರು ತಿನ್ನುತ್ತಲೇ ಇದ್ದರು; ಕುಡಿಯುತ್ತಲೇ ಇದ್ದರು; ಮದುವೆ ಮಾಡಿಕೊಳ್ಳುವುದರಲ್ಲೂ ಮಾಡಿಕೊಡುವುದರಲ್ಲೂ ನಿರತರಾಗಿದ್ದರು.
39 : ಜಲಪ್ರಳಯ ಬಂದು ಅವರನ್ನು ಕೊಚ್ಚಿಕೊಂಡು ಹೋಗುವ ತನಕ ಅದರ ಅರಿವೇ ಅವರಿಗಿರಲಿಲ್ಲ. ನರಪುತ್ರನು ಆಗಮಿಸುವಾಗಲೂ ಹಾಗೆಯೇ ನಡೆಯುವುದು.
40 : ಆಗ ಹೊಲದಲ್ಲಿದ್ದ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು. ಇನ್ನೊಬ್ಬನನ್ನು ಬಿಡಲಾಗುವುದು.
41 : ಒಂದೇ ಕಲ್ಲಿನಲ್ಲಿ ಬೀಸುತ್ತ ಇರುವ ಇಬ್ಬರು ಮಹಿಳೆಯರಲ್ಲಿ ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.
42 : ನಿಮ್ಮ ಪ್ರಭು ಯಾವ ದಿನ ಬರುತ್ತಾನೆಂದು ನಿಮಗೆ ತಿಳಿಯದು, ಆದ್ದರಿಂದ ಎಚ್ಚರವಾಗಿರಿ.
43 : ಕಳ್ಳನು ಬರುವ ಗಳಿಗೆ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಲು ಬಿಡನು, ಅಲ್ಲವೆ?
44 : ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು.
ಚಿಂತನೆ
ಆಗಮನ ಕಾಲ ಭರವಸೆಯ ಕಾಲ. ಕ್ರಿಸ್ತ ಜಯಂತಿಯನ್ನು ನಿರಿಕ್ಷೀಸುವುದರೊಂದಿಗೆ ಪ್ರಭುವಿನ ಅಂತಿಮ ಬರುವಿಕೆಗೆ ಕಾಯುವ ಕಾಲ. ಕ್ರಿಸ್ತ ಜಯಂತಿಯ ಮುನ್ನ ಬರುವ ನಾಲ್ಕು ವಾರಗಳೇ ಈ ಆಗಮನ ಕಾಲ. ಇದರಲ್ಲಿ ಮೊದಲೆರಡು ಭಾನುವಾರಗಳು ಪ್ರಭುವಿನ ಬಗ್ಗೆ ಹೇಳುತ್ತವೆ. ಆಂಗ್ಲ ಭಾಷೆಯಲ್ಲಿ ಆಗಮನಕಾಲವನ್ನು 'Advent' ಎನ್ನುತ್ತಾರೆ. Advent ಎಂದರೆ Coming or Arrival ಎಂದರ್ಥ.
ಈ ಆಗಮನ ಕಾಲದ ಕೇಂದ್ರಬಿಂದು ಅಥವಾ ಪ್ರಮುಖ ಆಕರ್ಷಣೆ ಕ್ರಿಸ್ತ ಜಯಂತಿ. ಈ ಆಗಮನ ಕಾಲದ ಎಲ್ಲಾ ವಾಚನಗಳು ನಮ್ಮನ್ನು ಕ್ರಿಸ್ತನ ಎರಡನೆಯ ಬರುವಿಕೆಯ ಬಗ್ಗೆ, ಪಾಪಗಳ ತೀರ್ಪಿನ ಬಗ್ಗೆ, ನಿತ್ಯಜೀವದ ಭರವಸೆಯ ಬಗ್ಗೆ ತಿಳಿಸುತ್ತವೆ. ಕೆಲವೊಮ್ಮೆ ಈ ವಾಚನಗಳು ನಮ್ಮನ್ನು ಗೊಂದಲಕ್ಕೇ ದೂಡಬಹುದು ಅಥವಾ ಗಾಬರಿಗೊಳಿಸುವಂತಿರಬಹುದು. ಆದರೆ ಗೊಂದಲ ಪಡುವ ಅವಶ್ಯಕತೆ ಇಲ್ಲ. ಪ್ರಭುವಿನ ಮಾರ್ಗವನ್ನು ಅನುಸರಿಸಿತ್ತ, ಅವರ ತತ್ವಗಳ ಪ್ರಕಾರ ಜೀವಿಸುತ್ತ, ಅವರ ಸಂದೇಶ ಸಾರುತ್ತಾ ಅವರ ನಿರೀಕ್ಷೆಯಲ್ಲಿ ಜೀವಿಸುವುದು ನಮ್ಮಕರ್ತವ್ಯ. ಸದಾ ಎಚ್ಚರದಿಂದ್ದಿದ್ದು ಕ್ರಿಸ್ತರನ್ನು ಎದುರುಗೊಳ್ಳಲು ಸಿದ್ಧರಿರಬೇಕು. ಕ್ರಿಸ್ತನಿಗಾಗಿ ತಯಾರಾಗದಿದ್ದರೆ ಅದಕ್ಕಿಂತ ಮತ್ತೊಂದು ದುರಂತವಿಲ್ಲ.
No comments:
Post a Comment