21/ಬಿಳಿ/ಗುರು/ಪೂಜ್ಯ ಕನ್ಯಾ ಮರಿಯಮ್ಮನವರನ್ನು ದೇವಾಲಯದಲ್ಲಿ ಕಾಣಿಕೆಯಾಗಿ ಅರ್ಪಿಸಿದ ಸ್ಮರಣೆ
1ನೇ ವಾಚನ - ಮಕ್ಕ 2: 15-29
ಕೀರ್ತನೆ - 50: 1-2,5-6,14-15
ಶುಭಸಂದೇಶ - ಲೂಕ: 41-44
1ನೇ ವಾಚನ - ಮಕ್ಕ 2: 15-29
ಅದೇ ಸಮಯಕ್ಕೆ ಧರ್ಮವಿರೋಧ ಕಾರ್ಯಗಳಲ್ಲಿ ತೊಡಗಿದ್ದ ಅರಸನ ಅಧಿಕಾರಿಗಳು ಯಜ್ಞ ಅರ್ಪಿಸುವುದಕ್ಕಾಗಿ ಮೋದೀನ್ ಊರಿಗೆ ಬಂದರು. ಅನೇಕ ಜನ ಇಸ್ರಯೇಲರು ಅದೇ ಎಡೆಗೆ ಬಂದರು. ಮತ್ತಾತಿಯನೂ ಅವನ ಮಕ್ಕಳೂ ಅಲ್ಲಿಗೆ ಬಂದರು. ಅರಸನ ಅಧಿಕಾರಿಗಳು ಮತ್ತಾತಿಯನನ್ನು ಉದ್ದೇಶಿಸಿ, “ನೀನು ಈ ಊರಿಗೆ ಮುಖ್ಯಸ್ಥ, ಸನ್ಮಾನಿತ ಹಾಗು ಹಿರಿಯವನು. ಆದುದರಿಂದ ನೀನೇ ಮುಂದಾಳಾಗಿ ನಿಂತು, ಎಲ್ಲ ಜನಾಂಗದವರು, ಜುದೇಯದ ನಿವಾಸಿಗಳು ಹಾಗು ಜೆರುಸಲೇಮಿನಲ್ಲಿ ಉಳಿದಿರುವವರು ಮಾಡಿದಂತೆ, ಅರಸನ ಅಪ್ಪಣೆಯ ಮೇರೆಗೆ ನಡೆದುಕೋ; ಆಗ ನೀನೂ ನಿನ್ನ ಮನೆಯವರೂ ಅರಸನ ಮಿತ್ರರೆಂದು ಪರಿಗಣಿತರಾಗುವಿರಿ; ನಿನಗೂ ನಿನ್ನ ಮಕ್ಕಳಿಗೂ ಬೆಳ್ಳಿ, ಬಂಗಾರ ಮತ್ತಿತರ ಸಂಭಾವನೆಗಳನ್ನು ಗೌರವಾರ್ಥವಾಗಿ ಕೊಡಲಾಗುವುದು,” ಎಂದು ಹೇಳಿದರು. ಆಗ ಮತ್ತಾತಿಯನು ಉದ್ವೇಗದಿಂದ, “ಅರಸನ ಸಾಮ್ರಾಜ್ಯದಲ್ಲಿರುವ ಎಲ್ಲ ಜನಾಂಗಗಳು ಬೇಕಾದರೆ ಆತನ ಮಾತನ್ನು ಕೇಳಲಿ; ಪ್ರತಿಯೊಬ್ಬನು ತನ್ನ ಪೂರ್ವಜರ ಪೂಜಾಕ್ರಮಗಳನ್ನು ತೊರೆದು, ಅರಸನ ಆಜ್ಞೆಯ ಮೇರೆಗೆ ಬೇಕಾದರೆ ನಡೆಯಲಿ; ಆದರೆ ನಾನು, ನನ್ನ ಮಕ್ಕಳು, ನನ್ನ ಬಂಧುಬಳಗದವರು ನಮ್ಮ ಪಿತೃಗಳ ಒಡಂಬಡಿಕೆಯ ಪ್ರಕಾರವೇ ನಡೆಯುತ್ತೇವೆ. ಧರ್ಮಶಾಸ್ತ್ರದ ನಿಬಂಧನೆಗಳನ್ನು ನಾವು ಉಲ್ಲಂಘಿಸಲಾರೆವು. ಇಲ್ಲ, ಎಂದಿಗೂ ಇಲ್ಲ; ಅರಸನ ಮಾತನ್ನು ಕೇಳಿ, ನಾವು ನಮ್ಮ ಆರಾಧನಾ ವಿಧಿಗಳನ್ನು ಬಿಟ್ಟು ಎಡಕ್ಕಾಗಲಿ, ಬಲಕ್ಕಾಗಲಿ ಹೋಗುವುದಿಲ್ಲ,” ಎಂದು ಗಟ್ಟಿಯಾಗಿ ಹೇಳಿದನು. ಅವನು ಈ ಮಾತುಗಳನ್ನಾಡಿ ಮುಗಿಸುವಷ್ಟರಲ್ಲಿ ಒಬ್ಬ ಯೆಹೂದ್ಯನು, ಮೋದೀನದ ಒಂದು ಜಗಲಿಯ ಮೇಲೆ ಅರಸನ ಅಪ್ಪಣೆಯ ಮೇರೆಗೆ ಏರ್ಪಡಿಸಲಾಗಿದ್ದ ಯಜ್ಞವನ್ನು ಅರ್ಪಿಸಲು ಅಲ್ಲಿಗೆ ಬಂದು ಎಲ್ಲರ ಮುಂದೆ ನಿಂತನು. ಮತ್ತಾತಿಯನು ಅದನ್ನು ನೋಡಿ ಆವೇಶಪೂರಿತನಾದನು; ಅವನ ಮೈ ನಡುಗಿತು. ನ್ಯಾಯ ಪ್ರಮಾಣಕ್ಕನುಸಾರ ತನ್ನ ಕೋಪವನ್ನು ತೋರಿಸಲು ಓಡಿಹೋಗಿ, ಅದೇ ಜಗಲಿಯ ಮೇಲೆ ಆ ವ್ಯಕ್ತಿಯನ್ನು ಕಡಿದುಹಾಕಿದನು. ಅಂಥ ಯಜ್ಞವನ್ನು ಅರ್ಪಿಸಲು ಜನರನ್ನು ಒತ್ತಾಯಪಡಿಸಿದ್ದ ಅಧಿಕಾರಿಯನ್ನು ಕೂಡ ಕೊಂದುಹಾಕಿದನು; ಆ ಜಗಲಿಯನ್ನೂ ಕೆಡವಿಹಾಕಿದನು. ಸಾಲು ಎಂಬವನ ಮಗ ಜಿಮ್ರಿಯೆಂಬವನಿಗೆ ಫಿನೆಹಾಸನು ಮಾಡಿದಂತೆಯೇ ಇವನೂ ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನಾಗಿದ್ದನು. ತರುವಾಯ ಮತ್ತಾತಿಯನು ಊರಲ್ಲೆಲ್ಲಾ ಘಂಟಾಘೋಷವಾಗಿ, “ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನು, ಒಡಂಬಡಿಕೆಯನ್ನು ಕಾಪಾಡಿಕೊಳ್ಳಲು ಆಶಿಸುವವನು, ನನ್ನ ಹಿಂದೆ ಬರಲಿ,” ಎಂದು ಕರೆಕೊಟ್ಟನು. ಅನಂತರ ಅವನೂ ಅವನ ಮಕ್ಕಳೂ ಊರಲ್ಲಿ ತಮಗಿದ್ದುದನ್ನೆಲ್ಲ ಅಲ್ಲೇ ಬಿಟ್ಟು ಗುಡ್ಡಗಳಿಗೆ ಓಡಿಹೋದರು. ಇವರಂತೆಯೇ ನ್ಯಾಯನೀತಿಯನ್ನು ಅರಸುತ್ತಿದ್ದ ಅನೇಕರು ಕಾಡುಸೇರಿ ಅಲ್ಲೇ ಬೀಡುಮಾಡಿದರು.
ಕೀರ್ತನೆ - 50: 1-2,5-6,14-15
1 : ದೇವಾಧಿದೇವನಾದ ಪ್ರಭುವಿನ ನುಡಿ ಇಡೀ ಜಗಕೆ / ಆತನ ಸನ್ನಿಧಿಗೆ ಕರೆ, ಪೂರ್ವದಿಂದ ಪಶ್ಚಿಮದವರೆಗೆ //
2 : ಸುರ ಸುಂದರವಾದ ಸಿಯೋನಿನಿಂದ / ಉದಯಸಿಹನು ದೇವನು ಶೋಭೆಯಿಂದ //
5 : “ಬಲಿ ಮೂಲಕ ಒಡಂಬಡಿಕೆ ಗೈದ ಭಕ್ತರನು / ಸಭೆ ಸೇರಿಸಿ ಇಲ್ಲೆನ್ನ ಮುಂದೆ,” ಎನ್ನುತಿಹನು //
6 : ದೇವನೇ ಸತ್ಯಸ್ವರೂಪಿ, ನ್ಯಾಯಾಧಿಪತಿ / ಇದನು ಸಾರಿ ಹೇಳಲಿ ಆಕಾಶ ಪ್ರಕೃತಿ //
14 : ದೇವರಿಗೆ ಧನ್ಯವಾದವೆ ನಿನ್ನ ಬಲಿಯರ್ಪಣೆಯಾಗಿರಲಿ / ಪರಾತ್ಪರನಿಗೆ ಮಾಡಿದ ಹರಕೆಗಳು ಸಮರ್ಪಿತವಾಗಲಿ //
15 : ಕಷ್ಟದಲಿ ಮೊರೆಯಿಡೆ, ನೆರವಾಗುವೆ / ಆಗ ನೀ ನನ್ನನು ಕೊಂಡಾಡುವೆ //
ಶುಭಸಂದೇಶ - ಲೂಕ 19: 41-44
ಯೇಸುಸ್ವಾಮಿ ಜೆರುಸಲೇಮ್ ಪಟ್ಟಣಕ್ಕೆ ಇನ್ನೂ ಹತ್ತಿರವಾಗಿ ಬಂದು ಅದನ್ನು ನೋಡಿ, “ಇಂದಾದರೂ ನೀನು ಶಾಂತಿಮಾರ್ಗವನ್ನು ಅರಿತುಕೊಂಡಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಆದರೆ ಅದು ಈಗ ನಿನ್ನ ಕಣ್ಣಿಗೆ ಮರೆಯಾಗಿದೆ. ಕಾಲವು ಬರುವುದು. ಆಗ ಶತ್ರುಗಳು ನಿನ್ನ ಸುತ್ತಲೂ ಆಳ್ವೇಲಿಯೆಬ್ಬಿಸಿ, ಮುತ್ತಿಗೆ ಹಾಕಿ, ಎಲ್ಲೆಡೆಯೂ ನುಗ್ಗಿ, ನಿನ್ನನ್ನೂ ನಿನ್ನೊಳಗಿನ ಜನರನ್ನೂ ಧ್ವಂಸಮಾಡುವರು; ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ, ದೇವರು ನಿನ್ನನ್ನು ಅರಸಿ ಬಂದ ಕಾಲವನ್ನು ನೀನು ಅರಿತುಕೊಳ್ಳದೆ ಹೋದೆ,” ಎಂದು ಅದರ ಸಲುವಾಗಿ ಕಣ್ಣೀರಿಟ್ಟರು.
ಚಿಂತನೆ
ಚಿಂತನೆ
ಜೆರುಸಲೇಮ್ ಪಟ್ಟಣವು ಜುದೇಯ ಪ್ರಾಂತ್ಯದ ರಾಜಧಾನಿಯಾಗಿತ್ತು. ಅಲ್ಲಿದ್ದ ಪವಿತ್ರ ದೇವಾಲಯವು ಯೆಹೂದ್ಯರನ್ನು ಧಾರ್ಮಿಕವಾಗಿ ಒಂದುಗೂಡಿಸಿತ್ತು. ಜೆರುಸಲೇಮ್ ನಗರವು ಯೆಹೂದ್ಯರ ಧಾರ್ಮಿಕ ಕೇಂದ್ರವಾಗಿತ್ತು. `ಮೆಸ್ಸಾಯ' ಬರುವುದು ಜೆರುಸಲೇಮಿನಿಂದ ಎಂದು ಯೆಹೂದ್ಯರು ನಂಬಿದ್ದರು. ಆದರೆ `ಮೆಸ್ಸಾಯ' ಬಂದಾಗ ಅವರು ಆತನನ್ನು ಗುರುತಿಸದೇ ಹೋದರು. ಆತನ ಅದ್ಬುತ ಕಾರ್ಯಗಳನ್ನು ಕಣ್ಣಾರೆ ಕಂಡರೂ ತಿರಸ್ಕರಿಸಿದರು. ಜೆರುಸಲೇಮಿಗೆ ಬಂದೊದಗುವ ದುರ್ಗತಿಯನ್ನು ಹಾಗೂ ಅವರ ಪಾಪದ ಬದುಕನ್ನು ಕಂಡು ಕಣ್ಣೀರಿಡುತ್ತಾರೆ.
ಯೇಸು ಪ್ರವಾದಿಸಿದ ಪ್ರಕಾರ ಕ್ರಿ.ಶ. ೭೦ ಭವ್ಯ ಮಹಾದೇವಾಲಯವನ್ನು ಹಾಗೂ ಜೆರುಸಲೇಮ್ ನಗರವನ್ನು ಸಂಪೂರ್ಣವಾಗಿ ರೋಮನ್ನರು ನಾಶಪಡಿಸುತ್ತಾರೆ. ಇತಿಹಾಸಕಾರ ಜೋಸೆಪುಸ್ ತನ್ನ ಪುಸ್ತಕ `ಯೆಹೂದ್ಯರ ಯುದ್ಧಗಳು' (Wಚಿಡಿಜ iಜಿ ಣhe ಎeತಿs)ರಲ್ಲಿ ಜೆರುಸಲೇಮ್ ನಗರದ ಬಗ್ಗೆ ಸಂಕ್ಷೀಪ್ತವಾಗಿ ಬರೆದಿದ್ದಾನೆ.
No comments:
Post a Comment