Sunday, 17 November 2019

ಸಾಧಾರಣ ಕಾಲದ ಮೂವತ್ಮೂರನೇ ವಾರ ಶುಕ್ರವಾರ

22/ಕೆಂಪು/ಶುಕ್ರ/ಸಂತ ಸಿಸಿಲಿಯಾ(ಕ.ಮತ್ತು ರ.ಸಾ)(ಸ್ಮರಣೆ)
1ನೇ  ವಾಚನ - 1 ಮಕ್ಕ 4:36-37, 52-59
ಕೀರ್ತನೆ - 1 ಪೂರ್ವ 29: 1೦-12
ಶುಭಸಂದೇಶ - ಲೂಕ 19: 45-48


1ನೇ  ವಾಚನ - 1 ಮಕ್ಕ 4:36-37, 52-59
ಇತ್ತ ಯೂದನೂ ಅವನ ಬಂಧುಗಳೂ, “ನಮ್ಮ ಶತ್ರುಗಳಂತೂ ಸೋತುಹೋದರು; ನಾವಿನ್ನು ಪವಿತ್ರಾಲಯವನ್ನು ಶುಚಿಮಾಡುವುದಕ್ಕೆ ಹೋಗೋಣ; ಅದನ್ನು ಹೊಸದಾಗಿ ಪ್ರತಿಷ್ಠಿಸೋಣ,” ಎಂದುಕೊಂಡರು. ಸೈನ್ಯವೆಲ್ಲಾ ಮರಳಿ ಕೂಡಿಬರಲು, ಅವರೆಲ್ಲರು ಸಿಯೋನ್ ಗಿರಿಗೆ ಹೋದರು. ಅವರು 148ನೇ ವರ್ಷದ ಒಂಬತ್ತನೆಯ ತಿಂಗಳಾದ ಮಾರ್ಗಶಿರ ಮಾಸದ ಇಪ್ಪತ್ತೈದನೆಯ ದಿವಸ ನಸುಕಿನಲ್ಲಿಯೇ ಎದ್ದು ತಾವು ಹೊಸದಾಗಿ ರಚಿಸಿದ್ದ ದಹನಬಲಿಪೀಠದ ಮೇಲೆ ಧರ್ಮಶಾಸ್ತ್ರಕ್ಕೆ ಸರಿಯಾಗಿ ಬಲಿಯನ್ನು ಅರ್ಪಿಸಿದರು. ಯಾವ ದಿನ ಮತ್ತು ಯಾವ ಗಳಿಗೆಯಲ್ಲಿ ಅನ್ಯರು ಅದನ್ನು ಹೊಲೆಮಾಡಿದ್ದರೋ ಅದೇ ದಿನ ಗಾಯನ, ವೀಣೆ, ಕಿನ್ನರಿ, ತಾಳಗಳ ಸಂಭ್ರಮದಿಂದ ಅದನ್ನು ಹೊಸದಾಗಿ ಪ್ರತಿಷ್ಠಿಸಿದರು. ಜನರೆಲ್ಲರು ಬೋರಲು ಬಿದ್ದು, ತಮಗೆ ಜಯವನ್ನು ಕೊಟ್ಟ ದೇವರನ್ನು ಕೊಂಡಾಡಿ ಆರಾಧಿಸಿದರು. ಬಲಿಪೀಠದ ಪ್ರತಿಷ್ಠೆಯ ಹಬ್ಬವನ್ನು ಎಂಟು ದಿನಗಳವರೆಗೆ ಆಚರಿಸಿದರು. ಉಲ್ಲಾಸದಿಂದ ದಹನಬಲಿಗಳನ್ನು ಅರ್ಪಿಸಿದರು. ವಿಮೋಚನಾ ಮತ್ತು ಕೃತಜ್ಞತಾಸ್ತುತಿಯ ಬಲಿಯನ್ನು ಅರ್ಪಿಸಿದರು. ದೇವಾಲಯದ ಮುಂಭಾಗವನ್ನು ಚಿನ್ನದ ಮುಕುಟಗಳಿಂದಲೂ ಸಣ್ಣ ಸಣ್ಣ ಗುಬುಟುಗಳಿಂದಲೂ ಶೃಂಗರಿಸಿ, ಅದರ ಮಹಾದ್ವಾರಗಳನ್ನೂ ಯಾಜಕರ ಕೋಣೆಗಳನ್ನೂ ಪ್ರತಿಷ್ಠಿಸಿ, ಅವುಗಳಿಗೆ ಕದಗಳನ್ನು ಹಚ್ಚಿದರು. ಜನರಲ್ಲಿ ಉತ್ಸಾಹವು ತುಂಬಿತು; ಅನ್ಯ ಜನರಿಂದಾಗಿದ್ದ ಅಪಮಾನವು ದೂರ ಆಯಿತು. ತರುವಾಯ ಯೂದನು, ಅವನ ಬಂಧುಗಳು ಹಾಗು ಇಸ್ರಯೇಲರ ಸಭೆಯೆಲ್ಲವು ಕೂಡಿ, ಬಲಿಪೀಠದ ಪ್ರತಿಷ್ಠೆಯ ದಿನಗಳನ್ನು ಪ್ರತಿವರ್ಷ ಇದೇ ಕಾಲದಲ್ಲಿ ಅಂದರೆ, ಮಾರ್ಗಶಿರ ಮಾಸದ ಇಪ್ಪತ್ತೈದನೆಯ ದಿವಸದಿಂದ ಎಂಟು ದಿನಗಳವರೆಗೆ ಅತಿ ಸಂಭ್ರಮ ಸಂತೋಷದಿಂದ ಆಚರಿಸಬೇಕೆಂದು ಗೊತ್ತುಮಾಡಿದರು.

ಕೀರ್ತನೆ - 1 ಪೂರ್ವ 29: 1೦-12
10 : ಅನಂತರ ದಾವೀದನು ನೆರೆದ ಸಭೆಯ ಮುಂದೆ ಸರ್ವೇಶ್ವರನನ್ನು ಹೀಗೆ ಸ್ತುತಿಸಿದನು:
11 : “ಹೇ ಸರ್ವೇಶ್ವರಾ, ನಮ್ಮ ಪಿತೃ ಯಕೋಬನ ದೇವರೇ, ಸದಾಕಾಲಕ್ಕೂ ಸ್ತುತಿಸ್ತೋತ್ರ ಸಲ್ಲಲಿ ನಿಮಗೆ ! ಹೇ ಸರ್ವೇಶ್ವರಾ, ಮಹಿಮೆ, ಪ್ರತಾಪ, ವೈಭವ, ಪರಾಕ್ರಮ, ಪ್ರತಿಭೆ, ನಿಮ್ಮವೇ. ಭೂಮ್ಯಾಕಾಶಗಳಲ್ಲಿರುವ ಸಮಸ್ತವೂ ನಿಮ್ಮದೇ. ಸರ್ವೇಶ್ವರಾ, ರಾಜ್ಯಭಾರವೂ ನಿಮ್ಮದೇ. ಸರ್ವವನು ಮಹೋನ್ನತರಾಗಿ ಆಳುವವರೂ ನೀವೇ.
12 : ಆಸ್ತಿ-ಪಾಸ್ತಿ, ಐಶ್ವರ್ಯ ಬರುವುದು ನಿಮ್ಮಿಂದಲೇ ಸರ್ವಾಧಿಕಾರ, ಬಲಪರಾಕ್ರಮ ಇರುವುದು ನಿಮ್ಮ ಕೈಯಲ್ಲೇ. ಪಟ್ಟ ಪದವಿಗೆ, ಸರ್ವಶಕ್ತಿ ಸಾಹಸಕ್ಕೆ ಮೂಲ ನೀವೇ.

ಶುಭಸಂದೇಶ - ಲೂಕ 19: 45-48
ಅನಂತರ ಯೇಸುಸ್ವಾಮಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ಮಾರಾಟ ಮಾಡುತ್ತಿದ್ದವರನ್ನು ಹೊರಗಟ್ಟುತ್ತಾ, “ ‘ಪ್ರಾರ್ಥನಾಲಯವೀ ನನ್ನ ಆಲಯ!’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ; ನೀವಾದರೋ ಇದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾರ್ಪಡಿಸಿದ್ದೀರಿ,” ಎಂದರು. ಪ್ರತಿನಿತ್ಯ ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದರು. ಇತ್ತ ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ಪ್ರಜಾಪ್ರಮುಖರೂ ಅವರನ್ನು ಕೊಲೆಮಾಡಲು ಹವಣಿಸುತ್ತಿದ್ದರು. ಆದರೆ ಅವರಿಂದ ಏನೂ ಮಾಡಲಾಗಲಿಲ್ಲ. ಏಕೆಂದರೆ, ಜನರೆಲ್ಲರೂ ಯೇಸುವಿನ ಬೋಧನೆಗೆ ಮಾರುಹೋಗಿದ್ದರು. ಅವರ ಬಾಯಿಂದ ಬಂದ ಒಂದೊಂದು ಮಾತನ್ನೂ ಕೇಳಲು ಆತುರರಾಗಿದ್ದರು.
ಚಿಂತನೆ
ಯೇಸು ಕೊನೆಯ ಬಾರಿ ದೇವಾಲಯವನ್ನು ಪ್ರವೇಶಿಸುತ್ತಾರೆ. ಕಡೆಯ ಬಾರಿ ಪ್ರವೇಶಿಸಿದ ಯೇಸು ದೇವಾಲಯದ ಶುದ್ದತೆಗೆ ಮುಂದಾಗುತ್ತಾರೆ. ದೇವಾಲಯ ಪ್ರಾರ್ಥನಾ ಮಂದಿರ ಅಲ್ಲಿ ಆಧ್ಯಾತ್ಮಿಕತೆಗೆ ಹೆಚ್ಚಿನ ಮಹತ್ವ ನೀಡಬೇಕು. ಪ್ರಾರ್ಥನಾ ಮಂದಿರ ದೇವರ ಅನುಭವವನ್ನು ನೀಡಬೇಕು. ಯೆಹೂದ್ಯರಿಗೆ ಇದ್ದದ್ದು ಕೇವಲ ಒಂದೇ ಒಂದು ದೇವಾಲಯ ಅದು ಅವರ ಪುಣ್ಯಕ್ಷೇತ್ರವಾಗಿತ್ತು. ದೇವರೆ ಜನರ ನಡುವೆ ಜೀವಿಸುತ್ತಿದ್ದಾರೆಂದು ಯೆಹೂದ್ಯರು ನಂಬಿದ್ದರು. ಆದರೆ ಆ ಮಹಾದೇವಾಲಯದಲ್ಲಿ ದೇವರ ಮತ್ತು ಧರ್ಮದ ಹೆಸರಲ್ಲಿ ಅನ್ಯಾಯ, ಅಕ್ರಮ ನಡೆಯುತ್ತಿತ್ತು. ಬಡವರ ಮತ್ತು ಯಾತ್ರಿಕರ ಸುಲಿಗೆ ನಡೆಯುತ್ತಿತ್ತು. ನಾಣ್ಯ ವಿನಿಮಯದ ಹಾಗೂ ದಹನ ಬಲಿ ಪ್ರಾಣಿಗಳ ಹೆಸರಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರು. ಯೇಸು ಅವರ ಶೋಷಣೆಯನ್ನು ತೀವ್ರವಾಗಿ ಖಂಡಿಸುತ್ತಾರೆ ಮತ್ತು ಚಾಟಿ ಬೀಸುತ್ತಾರೆ. ಇಂದಿನ ನಮ್ಮ ಪುಣ್ಯಕ್ಷೇತ್ರಗಳು ಮತ್ತು ಮಹಾದೇವಾಲಯಗಳ ಸ್ಥಿತಿಯ ಕುರಿತು ಅವಲೋಕನ ಮಾಡಬೇಕಿದೆ.

No comments:

Post a Comment