Sunday, 17 November 2019

ಸಾಧಾರಣ ಕಾಲದ ಮೂವತ್ನಾಲ್ಕನೇ ವಾರ ಸೋಮವಾರ


25/ಹಸಿರು/ಸೋಮ/ಐಚ್ಛಿಕ ಸ್ಮರಣೆ - ಅಲೆಕ್ಸಾಂಡ್ರಿಯಾದ ಸಂತ ಕಥರೀನ(ಕ ಮತ್ತು ರ.ಸಾ)
1ನೇ ವಾಚನ - ದಾನಿ 1: 1-6, 8-2೦ 
ಕೀರ್ತನೆ - ಅಜರ್ಯ 1: 29-33
ಶುಭಸಂದೇಶ - ಲೂಕ 21: 1-4


1ನೇ ವಾಚನ - ದಾನಿ 1: 1-6, 8-2೦ 
ಜುದೇಯದ ಅರಸ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬಾಬಿಲೋನಿನ ರಾಜ ನೆಬೂಕದ್ನೆಚ್ಚರನು ಜೆರುಸಲೇಮಿಗೆ ಬಂದು ಮುತ್ತಿಗೆ ಹಾಕಿದನು. ಸರ್ವೇಶ್ವರಸ್ವಾಮಿ ಜುದೇಯದ ಅರಸ ಯೆಹೋಯಾಕೀಮನನ್ನು ಅವನ ಕೈವಶವಾಗುವಂತೆ ಮಾಡಿದರು. ಅಂತೆಯೇ ದೇವಾಲಯದ ಅನೇಕ ಪೂಜಾಪಾತ್ರೆಗಳು ಅವನ ಕೈವಶವಾದವು. ನೆಬೂಕದ್ನೆಚ್ಚರನು ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ, ತನ್ನ ದೇವರ ಮಂದಿರಕ್ಕೆ ತಂದು, ಆ ದೇವರ ಭಂಡಾರಕ್ಕೆ ಸೇರಿಸಿಕೊಂಡನು. ಅನಂತರ ಆ ರಾಜನು ತನ್ನ ಕಂಚುಕಿಯರಲ್ಲಿ ಮುಖ್ಯಸ್ಥನಾದ ಅಶ್ಪೆನಜನಿಗೆ, “ನೀನು ಇಸ್ರಯೇಲರಲ್ಲಿ, ಅಂದರೆ ರಾಜವಂಶೀಯರಲ್ಲಿ ಮತ್ತು ಪ್ರಧಾನರಲ್ಲಿ ಕೆಲವು ಯುವಕರನ್ನು ಇಲ್ಲಿಗೆ ಕರೆದು ಬಾ. ಅವರು ಅಂಗದೋಷವಿಲ್ಲದವರಾಗಿರಬೇಕು. ಸುಂದರರು, ಸಮಸ್ತ ಶಾಸ್ತ್ರಜ್ಞರು, ಪಂಡಿತರು, ವಿದ್ಯಾನಿಪುಣರು, ರಾಜಾಲಯದಲ್ಲಿ ಸನ್ನಿಧಿಸೇವೆ ಮಾಡಲು ಸಮರ್ಥರೂ ಆಗಿರಬೇಕು. ಅವರಿಗೆ ಬಾಬಿಲೋನ್ ಪಂಡಿತರ ಭಾಷೆಯನ್ನೂ ಶಾಸ್ತ್ರಗಳನ್ನೂ ಕಲಿಸಬೇಕು,” ಎಂದು ಅಪ್ಪಣೆಕೊಟ್ಟನು. ಇದಲ್ಲದೆ, “ಇನ್ನು ಮುಂದಕ್ಕೆ ಅವರು ಸನ್ನಿಧಿಸೇವಕರಾಗುವಂತೆ, ನನ್ನ ಭೋಜನ ಪದಾರ್ಥಗಳನ್ನು ಹಾಗೂ ನಾನು ಕುಡಿಯುವ ದ್ರಾಕ್ಷಾರಸವನ್ನು ಅವರಿಗೆ ಪ್ರತಿದಿನ ಬಡಿಸುವ ಏರ್ಪಾಡುಮಾಡಿ ಅವರನ್ನು ಮೂರು ವರ್ಷ ಪೋಷಿಸಬೇಕು” ಎಂದು ಆಜ್ಞಾಪಿಸಿದನು. ಹೀಗೆ ಆರಿಸಿಕೊಂಡ ಯುವಕರಲ್ಲಿ ದಾನಿಯೇಲನು, ಹನನ್ಯನು, ಮಿಶಾಯೇಲನು, ಅಜರ್ಯನು ಎಂಬ ಯೆಹೂದ್ಯರು ಸೇರಿದ್ದರು. ಕಂಚುಕಿಯರ ನಾಯಕನು ಇವರಿಗೆ ನಾಮಕರಣಮಾಡಿ ದಾನಿಯೇಲನಿಗೆ ‘ಬೇಲ್ತೆಶಚ್ಚರ್’, ಹನನ್ಯನಿಗೆ ‘ಶದ್ರಕ್’, ಮಿಶಾಯೇಲನಿಗೆ ‘ಮೇಶಕ್’, ಹಾಗೂ ಅಜರ್ಯನಿಗೆ ‘ಅಬೇದ್‍ನೆಗೋ’, ಎಂಬ ಹೆಸರಿಟ್ಟನು. ಆದರೆ ದಾನಿಯೇಲನು ತಾನು ರಾಜನ ಭೋಜನ ಪದಾರ್ಥಗಳನ್ನು ತಿಂದು ಹಾಗೂ ರಾಜನು ಕುಡಿಯುವ ದ್ರಾಕ್ಷಾರಸವನ್ನು ಕುಡಿದು ತನ್ನನ್ನೇ ಅಶುದ್ಧ ಮಾಡಿಕೊಳ್ಳಬಾರದೆಂದು ನಿಶ್ಚಯಿಸಿಕೊಂಡನು. ಕಂಚುಕಿಯರ ನಾಯಕನಿಗೆ, “ಕ್ಷಮಿಸು, ನಾನು ಅಶುದ್ಧನಾಗಲಾರೆ,” ಎಂದು ವಿನಂತಿಸಿದನು. ಕಂಚುಕಿಯರ ನಾಯಕನು ದಾನಿಯೇಲನ ಮೇಲೆ ಕನಿಕರ ಮತ್ತು ದಯೆ ತೋರುವಂತೆ ದೇವರು ಅನುಗ್ರಹಿಸಿದ್ದರು. ಆದುದರಿಂದ ಆ ನಾಯಕನು ದಾನಿಯೇಲನಿಗೆ, “ನಿಮಗೆ ಅನ್ನಪಾನಗಳನ್ನು ಏರ್ಪಡಿಸಿದ ನನ್ನೊಡೆಯನಾದ ರಾಜನು ನಿಮ್ಮಂತೆ ಆಯ್ಕೆಯಾದ ಯುವಕರ ಮುಖಕ್ಕಿಂತ ನಿಮ್ಮ ಮುಖ ಬಾಡಿರುವುದನ್ನು ನೋಡಿ ನನ್ನ ತಲೆ ತೆಗೆಸಬಹುದೆಂಬ ಭಯ ನನಗಿದೆ. ಇದಕ್ಕೆ ನೀವು ಕಾರಣರಾಗಬಹುದಲ್ಲವೆ?” ಎಂದು ಹೇಳಿದನು. ದಾನಿಯೇಲನು ತನ್ನನ್ನೂ, ಹನನ್ಯ, ಮಿಶಾಯೇಲ, ಅಜರ್ಯ ಇವರನ್ನೂ ನೋಡಿಕೊಳ್ಳಲು ಆ ನಾಯಕನು ನೇಮಿಸಿದ್ದ ವಿಚಾರಕನ ಬಳಿಗೆ ಬಂದು, “ಅಯ್ಯಾ, ಹತ್ತು ದಿನಗಳ ಮಟ್ಟಿಗೆ ನಮ್ಮನ್ನು ಪರೀಕ್ಷಿಸಿನೋಡು. ಸೇವಕರಾದ ನಮಗೆ ಭೋಜನಕ್ಕೆ ಬದಲಾಗಿ ಕಾಯಿಪಲ್ಯ, ಪಾನಕ್ಕೆ ಬದಲಾಗಿ ನೀರು ಒದಗಿಸಿದರೆ ಸಾಕು. ಆಮೇಲೆ ನಮ್ಮ ಮುಖಗಳನ್ನೂ ರಾಜಭೋಜನ ಉಣ್ಣುವ ಯುವಕರ ಮುಖಗಳನ್ನೂ ಹೋಲಿಸಿನೋಡು. ಅನಂತರ ನಿನಗೆ ತೋಚಿದ ಹಾಗೆ ನಮಗೆ ಮಾಡು,” ಎಂದು ಕೇಳಿಕೊಂಡನು. ವಿಚಾರಕನು ಅವರ ಬಿನ್ನಹಕ್ಕೆ ಒಪ್ಪಿ ಹತ್ತುದಿನದವರೆಗೆ ಪರೀಕ್ಷಿಸಿದನು. ಹತ್ತು ದಿನಗಳಾದ ಮೇಲೆ ರಾಜಭೋಜನ ಉಣ್ಣುತ್ತಿದ್ದ ಎಲ್ಲ ಯುವಕರಿಗಿಂತ ಇವರು ಸುಂದರವಾಗಿಯೂ ಪುಷ್ಟರಾಗಿಯೂ ಕಾಣಿಸಿದರು. ಅಂದಿನಿಂದ ವಿಚಾರಕನು ಇವರಿಗೆ ನೇಮಕವಾದ ಭೋಜನ ಪದಾರ್ಥಗಳನ್ನೂ ಕುಡಿಯಬೇಕಾದ ದ್ರಾಕ್ಷಾರಸವನ್ನೂ ತೆಗೆದುಬಿಟ್ಟು ಕಾಯಿಪಲ್ಯಗಳನ್ನೇ ಕೊಡುತ್ತಾ ಬಂದನು. ಹೀಗಿರಲು ದೇವರು ಆ ನಾಲ್ಕು ಮಂದಿ ಯುವಕರಿಗೆ ಸಕಲ ಶಾಸ್ತ್ರಗಳಲ್ಲೂ ವಿದ್ಯೆಗಳಲ್ಲೂ ಜ್ಞಾನ ವಿವೇಕಗಳನ್ನು ದಯಪಾಲಿಸಿದರು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ ದಿವ್ಯ ದರ್ಶನಗಳನ್ನೂ ಅರ್ಥೈಸುವುದರಲ್ಲಿ ಪ್ರವೀಣನಾದನು. ರಾಜನು ನೇಮಿಸಿದ ಕಾಲವು ಕಳೆಯಿತು. ಆ ಯುವಕರನ್ನು ರಾಜಸನ್ನಿಧಿಗೆ ಕರೆದು ತರುವ ಸಮಯವು ಬಂದಿತು. ಕಂಚುಕಿಯರ ನಾಯಕ ಅವರನ್ನು ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆದು ತಂದನು. ರಾಜನು ಅವರ ಸಂಗಡ ಮಾತಾಡುವಾಗ ಅಲ್ಲಿದ್ದ ಯುವಕರಲ್ಲೆಲ್ಲ ದಾನಿಯೇಲನಿಗೆ, ಹನನ್ಯನಿಗೆ, ಮೀಶಾಯೇಲನಿಗೆ, ಅಜರ್ಯನಿಗೆ, ಸಮಾನರು ಯಾರೂ ಕಂಡುಬರಲಿಲ್ಲ. ಆದಕಾರಣ ಆ ನಾಲ್ವರು ಸನ್ನಿಧಿ ಸೇವಕರಾದರು. ಬಳಿಕ ರಾಜನು ಶಾಸ್ತ್ರೀಯ ವಿದ್ಯೆಯ ಎಲ್ಲ ವಿಷಯಗಳಲ್ಲಿ ಅವರನ್ನು ವಿಚಾರ ಮಾಡಿದಾಗ ಸಮಸ್ತ ರಾಜ್ಯದಲ್ಲಿನ ಎಲ್ಲ ಜೋಯಿಸರಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿ ಕಂಡುಬಂದರು.

ಕೀರ್ತನೆ - ಅಜರ್ಯ 1: 29-33
29: ನಮ್ಮ ಪೂರ್ವಜರ ದೇವರಾದ ಸರ್ವೇಶ್ವರ,
ನೀವು ಪರಮಪೂಜ್ಯರು ಎಂದೆಂದಿಗೂ ಮಹೋನ್ನತ ರು
30: ಮಹಿಮಾಯುತವಾದ ನಿಮ್ಮ ನಾಮ ಸ್ತುತ್ಯಾರ್ಹವಾದುದು, ಪರಮಪೂಜ್ಯ ವಾದುದು, ಎಂದೆಂದಿಗೂ ಮಹಾ ಘನತರ ವಾದುದು.
31: ಪರಮ ವೈಭವದಿಂದ ಕುಡಿದ ಮಂದಿರದಲ್ಲಿ ನೀವು ಸ್ತುತಿಸ್ತೋತ್ರಕ್ಕೆ ಪಾತ್ರರು: ನೀವು ಪರಮಪೂಜ್ಯರು ಎಂದೆಂದಿಗೂ ಮಹೋನ್ನತರು
32: ಸಾಗರಾಧಿಗಳನ್ನು ಸಮೀಕ್ಷಿಸುವ ನಿಮಗೆ ಸೋತ್ರ!
ಕೆರೂಬಿಗಳ ಮೇಲೆ ಆಸೀನರಾಗಿರುವ ನಿಮಗೆ ಸ್ತೋತ್ರ!
ನೀವು ಪರಮಪೂಜ್ಯರು ಎಂದೆಂದಿಗೂ ಮಹೋನ್ನತರು
33: ನಿಮ್ಮ ಸಾಮ್ರಾಜ್ಯದ ಸಿಂಹಾಸನದ ಮೇಲೆ ಮಂಡಿಸಿರುವ ನಿಮಗೆ ಸೋತ್ರ:
ನೀವು ಪರಮಪೂಜ್ಯರು ಎಂದೆಂದಿಗೂ ಮಹೋನ್ನತರು

ಶುಭಸಂದೇಶ - ಲೂಕ 21: 1-4
ದೇವಾಲಯದ ಕಾಣಿಕೆಯ ಪೆಟ್ಟಿಗೆಯಲ್ಲಿ ಧನವಂತರು ತಮ್ಮ ಕಾಣಿಕೆಯನ್ನು ಹಾಕುತ್ತಿದ್ದುದನ್ನು ಯೇಸುಸ್ವಾಮಿ ಗಮನಿಸಿದರು. ಅಷ್ಟರಲ್ಲಿ ಒಬ್ಬ ಬಡವಿಧವೆ ಅಲ್ಲಿಗೆ ಬಂದು, ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು. ಅದನ್ನು ಕಂಡ ಯೇಸು, “ಈ ಬಡವಿಧವೆ ಅವರೆಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸಿದಳೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅವರೆಲ್ಲರು ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು; ಈಕೆಯಾದರೋ, ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲಾ ಕೊಟ್ಟುಬಿಟ್ಟಳು,” ಎಂದರು.
ಚಿಂತನೆ
ಯೇಸು ತಮ್ಮ ಶಿಷ್ಯರಿಗೆ ಫರಿಸಾಯರ ಮತ್ತು ಧರ್ಮಶಾಸ್ತ್ರಿಗಳ ಕಪಟತನವನ್ನು ಮತ್ತು ಡಂಭಾಚಾರವನ್ನು ವರ್ಣಿಸಿ ದೇವಾಲಯಕ್ಕೆನ ಹೋಗಿ ಕಾಣಿಕೆ ಪೆಟ್ಟಿಗೆ ಕಾಣುವಂತೆ ಕುಳಿತು ಕೊಳ್ಳುತ್ತಾರೆ. ಯೇಸು ಹಣ ಹಾಕುವವರನ್ನು ನೋಡಲು ಕೂರಲಿಲ್ಲ. ಹಲವಾರು ಜನ ಕಾಣಿಕೆ ಪೆಟ್ಟಿಗೆಯಲ್ಲಿ ಕಾಣಿಕೆ ಹಾಕುತ್ತಿರುವುದು ಯೇಸುವಿನ ಕಣ್ಣಿಗೆ ಬಿತ್ತು. ಬಡವಿಧವೆಯ ತನ್ನ ಬಳಿ ಇದ್ದ ೨ ತಾಮ್ರದ ನಾಣ್ಯಗಳನ್ನು ಹಾಕುತ್ತಾಳೆ. ಆ `ಬಡವಿಧವೆ'ಗೆ ಈ ಎರಡು ತಾಮ್ರದ ನಾಣ್ಯಗಳು ಬಹಳ ಬೆಲೆಯುಳ್ಳವು. ಆದರೆ ಅವಳು ಅದ್ಯಾವುದನ್ನೂ ಲೆಕ್ಕಿಸದೆ ದೇವರಿಗೆ ಕಾಣಿಕೆಯಾಗಿ ಅರ್ಪಿಸುತ್ತಾಳೆ. ಇತರರು ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆ ನೀಡಿದರೆ ಬಡ ವಿಧವೆಯು ತನ್ನ ಸಮಸ್ತವನ್ನು ಅರ್ಪಿಸಿದಳು. ನಾವು ಎಷ್ಟು ನೀಡಿದೆ ಎನ್ನುವುದಕ್ಕಿಂತ ಎಷ್ಟು ಕಳೆದುಕೊಂಡೆ ಎಂಬುದು ಮುಖ್ಯ. ಆ ಬಡ ಮಹಿಳೆಯಂತೆ ನಾವು ಉದಾರಿಗಳಾಗಬೇಕು ಮತ್ತು ನಮ್ಮನ್ನೇ ಸಂಪೂರ್ಣವಾಗಿ ದೇವರಿಗೆ ಅರ್ಪಿಸಬೇಕೆಂದು ತಿಳಿಸುತ್ತಾರೆ.

No comments:

Post a Comment