24/ಬಿಳಿ/ ಭಾನು/ ಕ್ರಿಸ್ತರಾಜರ ಮಹೋತ್ಸವ
1ನೇ ವಾಚನ - 2 ಸಮು 5: 1-3
ಕೀರ್ತನೆ - 122: 1-2, 3-5
2ನೇ ವಾಚ - ಕೊಲೊ 1: 11-2೦
ಶುಭಸಂದೇಶ - ಲೂಕ 23:35-43
1ನೇ ವಾಚನ - 2 ಸಮು 5: 1-3
ಕೀರ್ತನೆ - 122: 1-2, 3-5
2ನೇ ವಾಚ - ಕೊಲೊ 1: 11-2೦
ಶುಭಸಂದೇಶ - ಲೂಕ 23:35-43
1ನೇ ವಾಚನ - 2 ಸಮು 5: 1-3
ಅನಂತರ ಇಸ್ರಯೇಲರ ಎಲ್ಲ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. “ನಾವು ನಿಮ್ಮ ರಕ್ತಸಂಬಂಧಿಗಳು; ಹಿಂದಿನ ದಿವಸಗಳಲ್ಲಿ, ಅಂದರೆ ಸೌಲನ ಆಳ್ವಿಕೆಯಲ್ಲಿ, ಇಸ್ರಯೇಲರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವರು ನೀವೇ. ನಿಮ್ಮನ್ನು ಕುರಿತು ಸರ್ವೇಶ್ವರಸ್ವಾಮಿ, ‘ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗಿರುವೆ,’ ಎಂದು ವಾಗ್ದಾನಮಾಡಿದ್ದಾರೆ,” ಎಂದರು. ಹೆಬ್ರೋನಿನಲ್ಲಿದ್ದ ಅರಸ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಯೇಲರ ಹಿರಿಯರೊಡನೆ ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದರು.
ಕೀರ್ತನೆ - 122: 1-2, 3-5
1 : ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ / ಆಯಿತೆನಗೆ ಆನಂದ, ಜನರೆನ್ನ ಕರೆದಾಗ
2 : ನಮ್ಮ ಕಾಲುಗಳು ಓ ಜೆರುಸಲೇಮೇ / ತಲುಪಿವೆ ನಿನ್ನ ಪುರದ್ವಾರಗಳನೇ
3 : ನೋಡು, ಜೆರುಸಲೇಮ್ ಪಟ್ಟಣವಿದು / ಗಟ್ಟಿಯಾಗಿಯೆ ಕಟ್ಟಲ್ಪಟ್ಟಿಹುದು
4 : ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ / ಮಾಡುವರಿಲ್ಲಿಯೆ ಪ್ರಭುವಿನ ನಾಮ ಕೀರ್ತನೆ / ಪಾಲಿಪರಿಂತು ಇಸ್ರೇಲರಿಗೆ ವಿಧಿಸಿದಾಜ್ಞೆ
5 : ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು / ದಾವೀದನ ಮನೆತನದವರ ಸಿಂಹಾಸನಗಳು
2ನೇ ವಾಚನ - ಕೊಲೊ 1: 11-2೦
ದೇವರ ಮಹಿಮಾಶಕ್ತಿಯಿಂದ ನೀವು ಬಲಗೊಂಡು ಎಲ್ಲವನ್ನೂ ತಾಳ್ಮೆಯಿಂದಲೂ ಸಮಾಧಾನದಿಂದಲೂ ಸಹಿಸಿಕೊಳ್ಳುವಿರಿ. ಪಿತನಿಗೆ ಹರ್ಷದಿಂದ ಕೃತಜ್ಞತಾಸ್ತುತಿ ಸಲ್ಲಿಸುವಿರಿ. ಏಕೆಂದರೆ, ಬೆಳಕಿನಲ್ಲಿರುವ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯದಲ್ಲಿ ಪಾಲುಗಾರರಾಗಲು ನಿಮ್ಮನ್ನು ಯೋಗ್ಯರನ್ನಾಗಿ ಅವರು ಮಾಡಿದ್ದಾರೆ. ದೇವರು ನಮ್ಮನ್ನು ಅಂಧಕಾರದ ಆಡಳಿತದಿಂದ ಬಿಡುಗಡೆಮಾಡಿ ತಮ್ಮ ಪುತ್ರನ ಸಾಮ್ರಾಜ್ಯಕ್ಕೆ ಸುರಕ್ಷಿತವಾಗಿ ತಂದಿದ್ದಾರೆ. ಈ ಪುತ್ರನಲ್ಲಿ ನಮಗೆ ಪಾಪಕ್ಷಮೆ ದೊರಕಿದೆ, ವಿಮೋಚನೆ ಲಭಿಸಿದೆ. ಅದೃಶ್ಯ ದೇವನ ಸದೃಶ್ಯರೂಪನು ಕ್ರಿಸ್ತ, ಸೃಷ್ಟಿಗೆಲ್ಲ ಜೇಷ್ಠಪುತ್ರನಾತ. ಇರಲಿ ಇಹದಲಿ, ಇರಲಿ ಪರದಲಿ, ಅಶರೀರ ಒಡೆಯರಾಗಲಿ, ಒಡೆತನವಾಗಲಿ, ಅಧಿಕಾರಿಗಳಾಗಲಿ, ಆಧಿಪತ್ಯವಾಗಿರಲಿ, ಆದುದೆಲ್ಲವೂ ಆತನಲಿ, ಆತನಿಂದ, ಆತನಿಗಾಗಿ. ಎಲ್ಲಕ್ಕೂ ಮೊದಲೇ ಇರುವನಾತ, ಸಮಸ್ತಕ್ಕೂ ಆಧಾರಭೂತ. ಸಭೆಯೆಂಬ ಶರೀರಕ್ಕೆ ಶಿರಸ್ಸಾತ, ಆದಿಸಂಭೂತ, ಆಗಲೆಲ್ಲದರಲೂ ಅಗ್ರಸ್ಥ, ಸತ್ತವರಿಂದ ಮೊದಲೆದ್ದು ಬಂದನಾತ. ಆ ಸುತನಲ್ಲೇ ಇರಿಸಲು ನಿರ್ಧರಿಸಿದನು ಪಿತದೇವ ತನ್ನ ಸರ್ವ ಸಂಪೂರ್ಣತೆಯನು. ಶಿಲುಬೆಯಿಂದಾತ ಹರಿಸಿದ ರಕುತದಿಂದ ಆಗುತಲಿದೆ ಶಾಂತಿಸಮಾಧಾನ, ನಡೆದಿದೆ ದೇವರೊಡನೆ ಸಂಧಾನ, ಇಹಪರಗಳೆಲ್ಲಕ್ಕೂ ಆತನ ಮುಖೇನ.
ಶುಭಸಂದೇಶ - ಲೂಕ 23:35-43
ಜನರು ನೋಡುತ್ತಾ ನಿಂತಿದ್ದರು. ಅಲ್ಲಿದ್ದ ಮುಖಂಡರು ಯೇಸುವನ್ನು ಮೂದಲಿಸುತ್ತಾ, “ಇವನು ಇತರರನ್ನು ರಕ್ಷಿಸಿದ; ಇವನು ದೇವರಿಂದಲೇ ಅಭಿಷಿಕ್ತನಾದ ಲೋಕೋದ್ಧಾರಕನು ಮತ್ತು ಅವರಿಂದಲೇ ಆಯ್ಕೆಯಾದವನು ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ,” ಎಂದರು. ಸೈನಿಕರು ಮುಂದೆ ಬಂದು ಹುಳಿರಸವನ್ನು ಅವರತ್ತ ಒಡ್ಡಿ, “ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೊ,” ಎಂದು ಅಣಕಿಸುತ್ತಿದ್ದರು. ಯೇಸುವಿನ ಶಿಲುಬೆಯ ಮೇಲ್ಗಡೆ, “ಇವನು ಯೆಹೂದ್ಯರ ಅರಸ” ಎಂಬ ಲಿಖಿತವಿತ್ತು. ತೂಗುಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, “ನೀನು ಕ್ರಿಸ್ತ, ಅಲ್ಲವೆ? ಹಾಗಾದರೆ ನಿನ್ನನ್ನು ನೀನೇ ರಕ್ಷಿಸಿಕೋ, ನಮ್ಮನ್ನೂ ರಕ್ಷಿಸು,” ಎಂದು ಹಂಗಿಸಿದನು. ಆದರೆ ಮತ್ತೊಬ್ಬ ಅಪರಾಧಿ ಅವನನ್ನು ಖಂಡಿಸುತ್ತಾ, “ನಿನಗೆ ದೇವರ ಭಯಬೇಡವೇ? ನೀನು ಸಹ ಇದೇ ಶಿಕ್ಷೆಗೆ ಗುರಿಯಾಗಿರುವೆ; ನಮಗೇನೋ ಶಿಕ್ಷೆ ನ್ಯಾಯವಾಗಿದೆ, ನಮ್ಮ ಕೃತ್ಯಕ್ಕೆ ತಕ್ಕ ಫಲ ಸಿಕ್ಕಿದೆ; ಇವರಾದರೋ, ನಿರಪರಾಧಿ!” ಎಂದನು. ಬಳಿಕ ಅವನು, “ಸ್ವಾಮಿ ಯೇಸುವೇ, ನೀವು ರಾಜ್ಯಾಧಿಕಾರದೊಡನೆ ಬರುವಾಗ ನನ್ನನ್ನು ಜ್ಞಾಪಿಸಿಕೊಳ್ಳಿ,” ಎಂದು ಬೇಡಿಕೊಂಡನು. ಅವನಿಗೆ ಯೇಸು, “ಇಂದೇ ನೀನು ನನ್ನೊಡನೆ ಪರಂಧಾಮದಲ್ಲಿರುವೆ ಎಂದು ನಿಶ್ಚಯವಾಗಿ ಹೇಳುತ್ತೇನೆ,” ಎಂದರು.
ಚಿಂತನೆ
ಚಿಂತನೆ
ಧರ್ಮಸಭೆ ಇಂದು ಕ್ರಿಸ್ತರಾಜರ ಹಬ್ಬವನ್ನು ಆಚರಿಸುತ್ತಿದೆ. ಅರಸ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಅರಮನೆ, ಅಧಿಕಾರ ಸೈನ್ಯ, ಸೇವಕರು, ಸಂಪತ್ತು. ಪ್ರಭುಕ್ರಿಸ್ತರು ಒಬ್ಬ ಅರಸನಾಗಿದ್ದರೂ ಅವರ ಸಾಮ್ರಾಜ್ಯ ಈ ಲೋಕದ್ದಾಗಿರಲಿಲ್ಲ. ಅವರ ಸಾಮ್ರಾಜ್ಯ ಈ ಲೋಕಕ್ಕೆ ವಿರುದ್ದವಾದ ಸಾಮ್ರಾಜ್ಯವಾಗಿತ್ತು. ಅಲ್ಲಿ ಅರಮನೆ, ಅಧಿಕಾರ, ಸೈನ್ಯ, ಸಂಪತ್ತು, ಯುದ್ದಕ್ಕೆ ಬದಲಾಗಿ ಸೇವೆ, ನ್ಯಾಯ, ತ್ಯಾಗ, ಪ್ರೀತಿಯೇ ಅದರ ಜೀವಾಳವಾಗಿತ್ತು. ಪ್ರಭು ಕ್ರಿಸ್ತ ಈ ಸಾಮ್ರಾಜ್ಯವನ್ನು ಕಟ್ಟಲು ಶಸ್ತ್ರಾಸ್ತ್ರ, ರಾಜಕೀಯ, ಹಣದ ಬೆಂಬಲ ಉಪಯೋಗಿಸಲಿಲ್ಲ. ಬದಲಾಗಿ ಮಾನವ ಮೌಲ್ಯಗಳನ್ನು ದೈವಾನುಗ್ರಹದ ಪ್ರೇರಣೆಯನ್ನು ಬೋಧಿಸಿದರು. ಈ ಸಾಮ್ರಾಜ್ಯ ದೇಹಕ್ಕೆ ಸಂಬಂಧ ಪಟ್ಟಿರಬಾರದು, ಆತ್ಮದಲ್ಲಿ ನೆಲೆಸಿರಬೇಕು. ಇಹಲೋಕದ ರಾಜರ ಸಾಮ್ರಾಜ್ಯ ಸ್ವಾರ್ಥ ಅಧಿಕಾರಕ್ಕಾಗಿ, ಕ್ರಿಸ್ತನ ಸಾಮ್ರಾಜ್ಯ ದೀನ ಜನರ ಸೇವೆಗಾಗಿ. ಇಹದ ರಾಜರು ಹೆಣ್ಣು, ಹೊನ್ನು, ಮಣ್ಣಿನ ಹಿಂದೆ ಹೋದರೆ ಕ್ರಿಸ್ತ ನಿರ್ಗತಿಕರು, ಪಾಪಿಗಳು, ಶೋಷಿತರ ಹಿಂದೆ ನಡೆದರು. ಇಹದ ಅರಸರು ಅರಮನೆಯಲ್ಲಿ ಜನಿಸಿ, ಚಿನ್ನದ ಸಿಂಹಾಸನದಲ್ಲಿ ಕೂತರೆ, ಕ್ರಿಸ್ತ ಗೋದಲಿಯಲ್ಲಿ ಜನಿಸಿ, ಮುಳ್ಳಿನ ಕಿರೀಟ ಹೊತ್ತು, ಶಿಲುಬೆಯನ್ನೇ ಸಿಂಹಾಸನ ಮಾಡಿಕೊಂಡರು. ರಾಜರ ಸೇವೆಗೆ ನೂರಾರು ಆಳುಗಳಿದ್ದರೆ, ಕ್ರಿಸ್ತ ತನ್ನ ಶಿಷ್ಯರ ಪಾದತೊಳೆದರು. ಶಾಂತಿ, ಪ್ರೀತಿ, ಸೇವೆಯೇ ಕ್ರಿಸ್ತನ ಸಾಮ್ರಾಜ್ಯದ ತತ್ವಗಳು. ಕ್ರಿಸ್ತನ ತತ್ವಗಳಿಂದ ಪ್ರೇರಿತರಾಗಿ ನಮ್ಮ ಕುಟುಂಬಗಳಲ್ಲಿ, ಧರ್ಮಕೇಂದ್ರಗಳಲ್ಲಿ ಕ್ರಿಸ್ತನ ಸಾಮ್ರಾಜ್ಯವನ್ನು ಸ್ಥಾಪಿಸಬೇಕಿದೆ.
No comments:
Post a Comment