23/ಹಸಿರು/ಶನಿ/ಐಚ್ಛಿಕ ಸ್ಮರಣೆ - 1ನೇ ಸಂತ ಕ್ಲೆಮೆಂಟ್ (ಜಗ ಮತ್ತು ರ.ಸಾ)
1ನೇ ವಾಚನ - 1 ಮಕ್ಕ 6: 1-13
ಕೀರ್ತನೆ - 9: 2-4, 6, 16, 18
ಶುಭಸಂದೇಶ - ಲೂಕ 2೦: 27-4೦
1ನೇ ವಾಚನ - 1 ಮಕ್ಕ 6: 1-13
ಅರಸ ಅಂತಿಯೋಕನು ಮೆಸಪಟೋಮಿಯದಲ್ಲಿ ಸಂಚಾರಮಾಡುತ್ತಿದ್ದನು. ಪರ್ಷಿಯಾದಲ್ಲಿದ್ದ ಎಲಿಮಾ ಎಂಬಲ್ಲಿ ಒಂದು ಊರು ಸಿರಿಸಂಪತ್ತು. ಬೆಳ್ಳಿಬಂಗಾರಗಳಿಗೆ ಹೆಸರಾಗಿದೆ, ಅಲ್ಲಿದ್ದ ಒಂದು ದೇವಾಲಯ ಅಪಾರ ನಿಧಿಯುಳ್ಳದ್ದಾಗಿದೆ, ಮೊದಲು ಗ್ರೀಸ್ ದೇಶವನ್ನು ಆಳುತ್ತಿದ್ದ ಮ್ಯಾಸಿಡೋನಿಯದ ಅರಸ ಫಿಲಿಪ್ಪನ ಮಗ ಅಲೆಕ್ಸಾಂಡರನು ಬಿಟ್ಟುಹೋಗಿದ್ದ ಚಿನ್ನದ ಡಾಲೂ ಕವಚಗಳೂ ಅದರಲ್ಲಿಯೇ ಇವೆ ಎಂಬ ಸಮಾಚಾರವನ್ನು ಅವನು ಕೇಳಿದ್ದನು. ಆ ಊರನ್ನು ಹಿಡಿದುಕೊಂಡು ಸುಲಿಗೆ ಮಾಡಬೇಕೆಂಬ ಹವಣಿಕೆಯಿಂದ ಅಲ್ಲಿಗೆ ಬಂದನು. ಆದರೆ ಅವನಿಗೆ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಈ ಸುದ್ದಿ ಆ ಊರೊಳಗಿದ್ದ ಜನರಿಗೆ ಮುಟ್ಟಲು ಅವರು ಅವನ ಸಂಗಡ ಯುದ್ಧ ಮಾಡಿದರು. ಅವನು ಬಹು ವ್ಯಸನಕ್ರಾಂತನಾಗಿ ಅಲ್ಲಿಂದ ಕಾಲುಕಿತು, ಬಾಬಿಲೋನಿಗೆ ಹಿಂದಿರುಗಿದನು. ಇದಲ್ಲದೆ ಅಂತಿಯೋಕನು ಪರ್ಷಿಯಾದಲ್ಲಿದ್ದಾಗ ಒಬ್ಬನು ಬಂದು, ಅವನಿಗೆ ಹೀಗೆಂದು ವರದಿಮಾಡಿದನು: “ಜುದೇಯದ ವಿರುದ್ಧ ಹೋಗಿದ್ದ ಸೈನ್ಯವೆಲ್ಲಾ ಹಿಂದೂಡಲ್ಪಟ್ಟಿತು. ಮೊದಲು ಅಪಾರ ಬಲದೊಂದಿಗೆ ಹೋದ ಲೂಸ್ಯನು ನಾಚಿಕೆಗೀಡಾಗಿ ಹಿಂದಿರುಗಿದನು. ಅವನ ಸೈನ್ಯದವರು ಬಿಟ್ಟುಹೋಗಿದ್ದ ಎಲ್ಲವನ್ನು ಜುದೇಯದವರು ದೋಚಿಕೊಂಡು ಹೋದರು. ಆದುದರಿಂದ ಈಗ ಅವರು ಶಸ್ತ್ರಾಸ್ತ್ರಗಳುಳ್ಳವರಾಗಿ ಪರಾಕ್ರಮದ ವಿಷಯಗಳಲ್ಲಿ ಯಾವ ಕೊರತೆಯೂ ಇಲ್ಲದೆ ಬಲಾಢ್ಯರಾಗಿದ್ದಾರೆ. ಜೆರುಸಲೇಮಿನಲ್ಲಿದ್ದ ಬಲಿಪೀಠದ ಮೇಲೆ ನೀವು ಕಟ್ಟಿಸಿದ್ದ ‘ವಿನಾಶಕರ ವಿಕಟಮೂರ್ತಿ’ಯನ್ನು ಕೆಡವಿ ಹಾಕಿದ್ದಾರೆ. ದೇವಾಲಯದ ಸುತ್ತಲೂ ಮೊದಲಿನಂತೆ ಎತ್ತರವಾದ ಗೋಡೆಗಳನ್ನು ಕಟ್ಟಿಸಿದ್ದಾರೆ. ಇದಲ್ಲದೆ, ನಿಮಗೆ ಸೇರಿದ ಬೇತ್ಸೂರ ಊರನ್ನು ಭದ್ರಗೊಳಿಸಿದ್ದಾರೆ,” ಎಂದರು. ಅರಸನು ಈ ಸುದ್ದಿಯನ್ನು ಕೇಳಿ ಆಶ್ಚರ್ಯ ಚಕಿತನಾದನು ಹಾಗು ಬಹು ಖಿನ್ನನಾದನು. ತಾನು ಹಾರೈಸಿದಂತೆ ಆಗದಿದ್ದುದನ್ನು ಕಂಡು ದುಃಖಕ್ರಾಂತನಾಗಿ ನೊಂದು, ಹಾಸಿಗೆ ಹಿಡಿದನು. ಅವನು ಬಹು ದುಃಖಿತನಾಗಿ ಇನ್ನು ಸಾಯುವುದೇ ಲೇಸೆಂದೆಣಿಸಿ ಅಲ್ಲಿಯೇ ಬಹುದಿನದವರೆಗೆ ನಿಂತುಬಿಟ್ಟನು. ತನ್ನ ಸ್ನೇಹಿತರನ್ನು ಅಲ್ಲಿಗೆ ಕರೆಸಿಕೊಂಡನು. ಅವರಿಗೆ, “ನನ್ನ ಕಣ್ಣಿಗೆ ನಿದ್ರೆಯಿಲ್ಲ; ಚಿಂತೆಯಿಂದ ನನ್ನ ಅಂತರಂಗವು ಕುಂದಿಹೋಗಿದೆ. ನಾನು ನನ್ನ ಅಧಿಕಾರದಲ್ಲಿ ಮೆರೆಯುತ್ತಿದ್ದಾಗ ಜನೋಪಕಾರಿಯೂ ಪ್ರೀತಿ ಪಾತ್ರನೂ ಆಗಿದ್ದೆ; ಆದರೆ ಈಗ ಎಂತಹ ವಿಪತ್ತಿಗೆ ನಾನು ಗುರಿಯಾದೆ; ಎಂತಹ ಮಹಾ ಪ್ರವಾಹದಲ್ಲಿ ನಾನೀಗ ಸಿಕ್ಕಿಬಿದ್ದಿದ್ದೇನೆ! ಜೆರುಸಲೇಮಿನಲ್ಲಿ ನಾನು ನಡೆಸಿದ ಅತ್ಯಾಚಾರಗಳ ಸ್ಮರಣೆ ನನಗೀಗ ಬರುತ್ತಿದೆ. ಅಲ್ಲಿದ್ದ ಬೆಳ್ಳಿ ಬಂಗಾರದ ಪಾತ್ರೆಗಳನ್ನೆಲ್ಲ ನಾನು ಅಪಹರಿಸಿದೆ. ಕಾರಣವಿಲ್ಲದೆ ಜುದೇಯದ ನಿವಾಸಿಗಳನ್ನು ನಾಶಮಾಡುವುದಕ್ಕೆ ಜನರನ್ನು ಕಳುಹಿಸಿದೆ. ಈ ಕಾರಣದಿಂದಲೇ, ಈಗ ನನ್ನ ಮೇಲೆ ಈ ವಿಪತ್ತು ಬಂದಿದೆ ಎಂದು ನನಗೀಗ ಗೊತ್ತಾಯಿತು. ಆದುದರಿಂದಲೇ ನಾನೀಗ ಚಿಂತಾನುತಾಪದಿಂದ ಪರದೇಶದಲ್ಲಿ ಸಾಯುತ್ತಿದ್ದೇನೆ,” ಎಂದು ಹೇಳಿ
ಕೀರ್ತನೆ - 9: 2-4, 6, 16, 18
2 : ಪರಾತ್ಪರನೇ, ಮಾಡುವೆನು ನಿನ್ನ ನಾಮಸ್ತುತಿ / ಹರ್ಷಾನಂದಗೊಳ್ವೆನು ದೇವಾ, ನಿನ್ನಲ್ಲತಿ //
3 : ನಿನ್ನ ಕಂಡು ನನ್ನ ವೈರಿಗಳು ಗೈದರು ಪಲಾಯನ / ಎದ್ದು ಬಿದ್ದು ಅವರೆಲ್ಲರೂ ಹೊಂದಿದರು ವಿನಾಶನ //
4 : ನ್ಯಾಯಪೀಠದಲಿ ಕುಳಿತೆನ್ನ ವ್ಯಾಜ್ಯತೀರಿಸಿದೆ / ನೀತಿಗನುಸಾರವಾಗಿ ನ್ಯಾಯ ಸ್ಥಾಪಿಸಿದೆ //
6 : ನಿಶ್ಯೇಷವಾಗಿ ಹೋದರು ವಿರೋಧಿಗಳು / ನಾಶವಾಗಿ ಹೋದವು ಅವರ ನಗರಗಳು / ಇಲ್ಲವಾದವು ಅವರ ಯಾವ ನೆನಪುಗಳು //
16 : ಪ್ರಭುವಿತ್ತ ನ್ಯಾಯತೀರ್ಪೇ ಆತನಿಗೆ ಪ್ರಚಾರಕ / ದುಷ್ಟರ ಗೈದ ಕುಯುಕ್ತಿಯೇ ಅವರಿಗೆ ಸಂಹಾರಕ //
18 : ದರಿದ್ರರನು ದೇವರು ಎಂದಿಗು ಮರೆಯುವುದಿಲ್ಲ / ನಿರ್ಗತಿಕರ ನಿರೀಕ್ಷೆ ಕೈಗೂಡದೆ ಇರುವುದಿಲ್ಲ //
ಶುಭಸಂದೇಶ - ಲೂಕ 2೦: 27-4೦
ಅನಂತರ ಸತ್ತಮೇಲೆ ಪುನರುತ್ಥಾನ ಇಲ್ಲ ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆಹಾಕಿದರು: “ಬೋಧಕರೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,’ ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ. ಅವನ ಹೆಂಡತಿಯನ್ನು ಎರಡನೆಯವನು, ಅನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು. ಕಟ್ಟಕಡೆಗೆ ಆ ಮಹಿಳೆಯೂ ಮರಣ ಹೊಂದಿದಳು. ಹೀಗಿರುವಲ್ಲಿ ಪುನರುತ್ಥಾನದ ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹ ಆಗಿದ್ದರಲ್ಲವೆ?” ಎಂದರು. ಅದಕ್ಕೆ ಯೇಸು, “ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ. ಆದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಾಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರು ಎಂದಿಗೂ ಸಾಯುವಂತಿಲ್ಲ; ಪುನರುತ್ಥಾನದ ಫಲ ಆಗಿರುವ ಅವರು ದೇವರ ಮಕ್ಕಳಾಗಿರುವರು. ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ ‘ಉರಿಯುವ ಪೊದೆ’ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ’ ಎಂದು ಹೇಳಲಾಗಿದೆ. “ಹೀಗಿರುವಲ್ಲಿ ದೇವರು ಜೀವಂತರ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು,” ಎಂದರು. ಇದನ್ನು ಕೇಳಿದ ಕೆಲವು ಧರ್ಮಶಾಸ್ತ್ರಿಗಳು, “ಬೋಧಕರೇ, ಚೆನ್ನಾಗಿ ಹೇಳಿದಿರಿ,” ಎಂದರು. ಮುಂದೆ ಯಾವ ಪ್ರಶ್ನೆ ಕೇಳುವುದಕ್ಕೂ ಅವರಾರು ಧೈರ್ಯಗೊಳ್ಳಲಿಲ್ಲ.
ಚಿಂತನೆ
ಚಿಂತನೆ
ಧ.ಕಾಂಡ ೨೫:೫-೧೦ರ ಪ್ರಕಾರ ವಿಧವೆಯಾದ ಅಣ್ಣನ ಹೆಂಡತಿಯನ್ನು ಮದುವೆ ಮಾಡಿಕೊಂಡು ಅಣ್ಣನ ಸಂತಾನವು ನಶಿಸಿಹೋಗದಂತೆ ಅಥವಾ ಕೊನೆಯಾಗದಂತೆ ನೋಡಿಕೊಳ್ಳುವುದು ತಮ್ಮನ ಹೊಣೆಗಾರಿಯಾಗಿತ್ತು. ಸದ್ದುಕಾಯರು ಪುನರುತ್ಥಾನದಲ್ಲಿ ಮತ್ತು ದೇವದೂರತರಲ್ಲಿ ಅಸ್ತಿತ್ವದಲ್ಲಿ ವಿಶ್ವಾಸವಿರಲಿಲ್ಲ. ಹಾಗಾಗಿ ಯೇಸುವನ್ನು ಪರೀಕ್ಷಿಸುವ ಸಲುವಾಗಿ ಒಂದು ಕಾಲ್ಪನಿಕ ಕಥೆ ಹೇಳುವುದರ ಮೂಲಕ ತಮ್ಮ ಮೂರ್ಖತನವನ್ನು ಪ್ರದರ್ಶಿಸುತ್ತಾರೆ. ಅವರ ಪ್ರಶ್ನೆಗೆ ಯೇಸುವು ಮಿ. ಕಾಂಡ೩:೬. ೧೫-೧೬ ಉಲ್ಲೇಖಿಸುತ್ತಾ ಅಬ್ರಹಾಮ್, ಇಸಾಕ, ಯೆಕೋಬರು ದೇವರ ಸನ್ನಿಧಿಯಲ್ಲಿ ಜೀವಂತವಾಗಿದ್ದಾರೆ ಎಂದು ಸದ್ದು ಕಾಯರಿಗೆ ತಿಳಿಸುವುದರ ಮೂಲಕ ಪುನರುತ್ಥಾನವಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತಾರೆ.
No comments:
Post a Comment