1 ಜನವರಿ 2020
ದೇವಮಾತೆ ಮರಿಯಮ್ಮನವರ ಮಹೋತ್ಸವ
ದೇವಮಾತೆ ಮರಿಯಮ್ಮನವರ ಮಹೋತ್ಸವ
ಪ್ರಥಮ ವಾಚನ : ಸಂಖ್ಯಾ 6: 22-27
ಕೀರ್ತನೆ : 67:1-2, 3-4, 5-7
ದ್ವಿತೀಯ ವಾಚನ : ಗಲಾತ್ಯ 4: 4-7
ಶುಭಸಂದೇಶ : ಲೂಕ 2: 16-21
----------------------------
----------------------------
ವಾಚನಗಳು
ಮೊದಲನೇ ವಾಚನ
ಸಂಖ್ಯಾಕಾಂಡದಿಂದ ವಾಚನ
22ಸರ್ವೇಶ್ವರ ಮೋಶೆಗೆ ಹೀಗೆಂದರು; 23“ನೀನು ಆರೋನನಿಗೂ ಅವನ ಮಕ್ಕಳಿಗೂ ಹೀಗೆ ಆಜ್ಞಾಪಿಸು: ‘ನೀವು ಇಸ್ರಯೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಹೇಳಬೇಕು -24ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸಿ, ಕಾಪಾಡಲಿ! 25ಸರ್ವೇಶ್ವರ ಪ್ರಸನ್ನ ಮುಖದಿಂದ ನಿಮ್ಮನ್ನು ನೋಡಿ, ನಿಮಗೆ ದಯೆತೋರಲಿ! 26 ಸರ್ವೇಶ್ವರ ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು, ಶಾಂತಿಯನ್ನು ಅನುಗ್ರಹಿಸಲಿ!’ 27ಹೀಗೆ ಅವರು ಇಸ್ರಯೇಲರ ಮೇಲೆ ನನ್ನ ಹೆಸರನ್ನು ಉಚ್ಚರಿಸುವಾಗ ನಾನು ಅವರನ್ನು ಆಶೀರ್ವದಿಸುವೆನು.”
------------------------------
ಕೀರ್ತನೆ
ಶ್ಲೋಕ: ಹರಸು ದೇವಾ, ನಮ್ಮನಾಶೀರ್ವದಿಸು
1 : ಹರಸು ದೇವಾ, ನಮ್ಮನಾಶೀರ್ವದಿಸು|
ನಿನ್ನ ಮುಖ ಕಾಂತಿಯಿಂದೆಮ್ಮನು ಬೆಳಗಿಸು ||
2 : ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ|
ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತಿಗೆಲ್ಲ ||
3 : ನಿನ್ನ ಕೀರ್ತಿಸಲಿ ದೇವಾ, ಜನರು|
ಸಂಕೀರ್ತಿಸಲಿ ಅವರೆಲ್ಲರೂ ||
5 : ನಿನ್ನ ಕೀರ್ತಿಸಲಿ ದೇವಾ, ಜನರು|
ಸಂಕೀರ್ತಿಸಲಿ ಅವರೆಲ್ಲರೂ ||
6 : ಇತ್ತನೆಮ್ಮ ದೇವನು ಆಶೀರ್ವಾದವನು|
ಕೊಟ್ಟಿತೆಮ್ಮ ಭೂಮಿಯು ಸಂತುಷ್ಟ ಬೆಳೆಯನು||
7 : ನಮ್ಮೆಲ್ಲರನು ದೇವನು ಹರಸಲಿ|
ಎಲ್ಲೆಡೆ ಆತನ ಭಯಭಕ್ತಿಯಿರಲಿ ||
----------------------------
----------------------------
ಎರಡನೇ ವಾಚನ
ಸಂತ ಪೌಲನು ಗಲಾತಿಯರಿಗೆ ಬರೆದ ಪತ್ರದಿಂದ ವಾಚನ
4-5ಕಾಲವು ಪರಿಪಕ್ವವಾದಾಗ ದೇವರು ತಮ್ಮ ಪುತ್ರನನ್ನೇ ಕಳುಹಿಸಿಕೊಟ್ಟರು. ಇವರು ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡುಗಡೆ ಮಾಡುವುದಕ್ಕಾಗಿಯೂ ದೇವಪುತ್ರರ ಪದವಿಯನ್ನು ನಮಗೆ ಒದಗಿಸಿಕೊಡುವುದಕ್ಕಾಗಿಯೂ ಒಬ್ಬ ಸ್ತ್ರೀಯಲ್ಲಿ ಜನಿಸಿದರು. ಧರ್ಮಶಾಸ್ತ್ರಕ್ಕೆ ಅಧೀನರಾಗಿಯೇ ಹುಟ್ಟಿದರು. 6ನೀವು ದೇವರ ಮಕ್ಕಳಾಗಿರುವುದರಿಂದಲೇ, “ಅಪ್ಪಾ, ತಂದೆಯೇ,” ಎಂದು ಕರೆಯುವ ತಮ್ಮ ಪುತ್ರನ ಆತ್ಮವನ್ನು ದೇವರು ನಮ್ಮ ಹೃದಯಗಳಿಗೆ ಕಳುಹಿಸಿದ್ದಾರೆ. 7ಆದ್ದರಿಂದ, ದೇವರ ಅನುಗ್ರಹದಿಂದಲೇ ನೀನು ಇನ್ನು ಮನೆಯಾಳಲ್ಲ, ಮಗನಾಗಿದ್ದೀಯ. ಮಗನೆಂದ ಮೇಲೆ ನೀನು ವಾರಸುದಾರನೂ ಹೌದು.
---------------------
---------------------
ಶುಭಸಂದೇಶ
ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ
16ಅಲ್ಲಿಂದ ತ್ವರೆಯಾಗಿ ಹೋಗಿ, ಮರಿಯಳನ್ನೂ ಜೋಸೆಫನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡರು. 17ಕಂಡಮೇಲೆ ಆ ಮಗುವಿನ ವಿಷಯವಾಗಿ ದೂತನು ತಮಗೆ ಹೇಳಿದ್ದನ್ನೆಲ್ಲ ಅವರಿಗೆ ತಿಳಿಯಪಡಿಸಿದರು. 18ಕುರುಬರು ಹೇಳಿದ ವಿಷಯವನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು. 19ಮರಿಯಳಾದರೋ ಈ ವಿಷಯಗಳನ್ನೆಲ್ಲಾ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಲೋಚಿಸುತ್ತಾ ಬಂದಳು. 20ಇತ್ತ, ಕುರುಬರು ತಾವು ಕೇಳಿದ್ದನ್ನು ನೆನೆಯುತ್ತಾ, ದೇವರ ಮಹಿಮೆಯನ್ನು ಸಾರುತ್ತಾ, ಕೊಂಡಾಡುತ್ತಾ ಹಿಂದಿರುಗಿದರು. ದೇವದೂತನು ಅವರಿಗೆ ತಿಳಿಸಿದಂತೆ ಎಲ್ಲವೂ ಸಂಭವಿಸಿತ್ತು.
21ಎಂಟನೆಯ ದಿನ ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಸಂದರ್ಭದಲ್ಲಿ ಅದಕ್ಕೆ 'ಯೇಸು' ಎಂಬ ಹೆಸರನ್ನಿಟ್ಟು ನಾಮಕರಣ ಮಾಡಿದರು. ಈ ಹೆಸರನ್ನು ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದನು.
----------------------------
----------------------------
ಚಿಂತನೆ
ದೇವಮಾತೆಯ ದಿನ
ಚರಿತ್ರೆಯ ಪುಟಗಳನ್ನು ತಿರುವಿದಾಗ ನಮಗೆ ಅನೇಕ ಧೀರ ಮಹಿಳೆಯರ, ದೇಶಪ್ರೇಮಕ್ಕಾಗಿ ಹೋರಾಡಿದ ವೀರ ವನಿತೆಯರ ಪರಿಚಯವಾಗುತ್ತದೆ; ಭಕ್ತಿ, ಶ್ರದ್ಧೆಯಿಂದ ಸಮಾಜ ಕಲ್ಯಾಣಕ್ಕೋಸ್ಕರ ದುಡಿದ ಮಹಿಳೆಯರ ಅರಿವು ಆಗುತ್ತದೆ. ಅದೇ ರೀತಿಯಲ್ಲಿ ಪವಿತ್ರ ಗ್ರಂಥದ ಪುಟಗಳನ್ನು ತಿರುವಿದಾಗ ಹಳೆಯ ಒಡಂಬಡಿಕೆಯಲ್ಲಿ ಶೌರ್ಯ ಪ್ರದರ್ಶಿಸಿದ ರಾಣಿ ಎಸ್ತೇರಳು, ಅತ್ತೆಯ ಮೇಲೆ ಗೌರವವಿಟ್ಟು ಆಶ್ರಯನೀಡಿ, ಪ್ರೀತಿಯನ್ನು ಧಾರೆಯೆರೆದ ವಿಧವೆ ರೂತಳು, ಅನೈತಿಕತೆಯ ಹಾದಿ ತುಳಿಯದೆ ಧೈರ್ಯವಾಗಿ ನಿಂತ ಸುಸಾನ್ನಳು - ಹೀಗೆ ಹಲವರ ಪರಿಚಯವಾಗುತ್ತದೆ. ಆದರೆ ಇವರೆಲ್ಲರಿಗಿಂತಲೂ ಶ್ರೇಷ್ಠಳು, ವಿಭಿನ್ನಳು, ಧೈರ್ಯವಂತಳು, ವಿನಮ್ರಳು ನಮ್ಮ `ದೇವರ ತಾಯಿ'-'ಮರಿಯ'. ``ಸರ್ವಕ್ಕೂ ಜೀವ ಕೊಟ್ಟಾತನಿಗೆ, ತನ್ನ ಗರ್ಭದಲ್ಲಿ ಜೀವ ನೀಡಿ 'ಮರಿಯ' ದೇವರ ಮಾತೆಯಾದಳು'', ಎನ್ನುತ್ತಾರೆ ಸಂತ ಆನ್ಸೆಲ್ಮ್. ಕ್ರಿ.ಶ. ೪೩೧ ರಲ್ಲಿ ಧರ್ಮಸಭೆ ಮರಿಯಳನ್ನು `ಥಿಯೋಟೊಕೊಸ್' (Theotokos) ಎಂದರೆ 'ದೇವರ ತಾಯಿ' ಎಂದು ಘೋಷಿಸಿತು. ಧರ್ಮಸಭೆಯು ಹೊಸವರ್ಷದ ಮೊದಲ ದಿನವನ್ನು ದೇವರ ತಾಯಿ ಮರಿಯಳಿಗೆ ಸಮರ್ಪಿಸಿ ಗೌರವಿಸುತ್ತದೆ. ನಾವೀಗ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷದ ನಮ್ಮೆಲ್ಲ ಕಾರ್ಯಗಳು, ಯೋಜನೆಗಳು ಸಫಲವಾಗಲಿ. ಕಳೆದ ವರ್ಷದ ಕಹಿ ನೆನಪುಗಳನ್ನು ಮರೆಯುತ್ತಾ, 'ಹೊಸ ವರ್ಷ ನಮಗೆಲ್ಲರಿಗೂ ತರಲಿ ಹರುಷ', ಎಂದು ದೇವಮಾತೆಯ ಮೂಲಕ ಪ್ರಾರ್ಥಿಸೋಣ.
------------------
ಪೀಠಿಕೆ: ಪ್ರಕೃತಿಯಲ್ಲಿ ಚಿಗುರುವ ಚಿಗುರು, ವಸಂತ ಕಾಲ ಆರಂಭವಾಗುವುದನ್ನು ಸೂಚಿಸುತ್ತದೆ. ಅದರಿಂದ ಗಿಡಮರಗಳಲ್ಲಿ ಹೊಸ ಸೊಬಗು ಸೂಸಿ ಪ್ರಕೃತಿ ಹೊಸತನವನ್ನು ಧರಿಸಿಕೊಳ್ಳುತ್ತಾಳೆ. ಅದು ಮನಸ್ಸಿಗೆ ಹಿತವಾದ ಆನಂದವನ್ನುಂಟು ಮಾಡುತ್ತದೆ. ಆ ಚಿಗುರು ನಮಗೊಂದು ಭರವಸೆಯ ಸಂಕೇತ. ಹಾಗೆಯೇ ಹೊಸವರುಷವೂ ಸಹ ಹೊಸ ಹೊಸ ಭರವಸೆಗಳನ್ನು ಹೊತ್ತು ತರುತ್ತದೆ. ನಮ್ಮ ಜಿಡ್ಡುಗಟ್ಟಿದ ಮನಸುಗಳು, ಚಿಂತನೆಗಳು, ಹಾಗೂ ಭಾವಗಳು ನವನವೀನವಾದರೆ ನಮ್ಮ ಬದುಕೇ ಹೊಸತಾಗುತ್ತದೆ. ಅಂತೆಯೇ ಧರ್ಮಸಭೆಯ ಸದಸ್ಯರು ಸಹ ಹೊಸ ಹೊಸ ಆಲೋಚನೆಗಳೊಂದಿಗೆ ಚಿರನೂತನವಾಗಿರಲೆಂದು ಧರ್ಮಸಭೆಯ ಸೇವಕಿ ಹಾಗೂ ನಾಯಕಿಯಾಗಿರುವ ದೇವರ ತಾಯಿ (THEOTOKAS - GOD-BEARER) ಮಾತೆ ಮರಿಯಳು ಭರವಸೆಯ ಬದುಕಿನೆಡೆಗೆ ನಮ್ಮನ್ನು ನಡೆಸಲು ಸದಾ ಹಾತೊರೆಯುತ್ತಾಳೆ. ಸೇವೆ ಆಕೆಯ ಉದಾತ್ತ ಗುಣ. ಆಕೆ ಸದಾ ದೇವರ ಚಿತ್ತಕ್ಕೆ ಮಣಿದು ಬಾಳಿದ ಧೀಮಂತ ದೈವಾನುಗ್ರಹಭರಿತೆ ಹಾಗೂ ವೀರವನಿತೆ. ಎಂತಹ ಕಠಿಣ ಸಮಯದಲ್ಲಿಯೂ ಭಾವೋದ್ವೇಗಕ್ಕೆ ಒಳಗಾಗದೆ ಸ್ಥಿರಚಿತ್ತಳಾಗಿ, ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವಾಸ ತುಂಬಿದ ಮಹಿಳೆಯಾಗಿ ಧರ್ಮಸಭೆಯನ್ನು ನಡೆಸುತ್ತಾ ಸರ್ವರ ಬದುಕಿಗೆ ಸದಾ ಸ್ಫೂರ್ತಿದಾತೆಯಾಗಿದ್ದಾಳೆ. ಈ ಕಾರಣದಿಂದಲೇ ಧರ್ಮಸಭೆ ಇಂತಹ ಸದ್ಗುಣಗಳನ್ನುಳ್ಳ ಸಾತ್ವಿಕ ವನಿತೆಯನ್ನು ವರ್ಷದ ಪ್ರಾರಂಭದ ದಿನದಿಂದಲೇ ನಮಗೆ ಆದರ್ಶ ಮಾತೆಯನ್ನಾಗಿ ಧರ್ಮಸಭೆಯು ನಮಗೆ ಕೊಡುತ್ತದೆ. ಆಕೆಯ ವಿಶ್ವಾಸ ಅಗಾಧ, ಆಕೆಯ ನಂಬಿಕೆ ಅನಂತ ಹಾಗೂ ಭರವಸೆಗಳು ಅಪಾರ. ಆಕೆಯಂತೆ ನಾವು ಸಹ ವಿಶ್ವಾಸದಲ್ಲಿ, ನಂಬಿಕೆಯಲ್ಲಿ, ನಡೆಯಲ್ಲಿ, ನುಡಿಯಲ್ಲಿ, ಬದ್ಧತೆಯಲ್ಲಿ, ಹಾಗೂ ಪ್ರಾಮಾಣಿಕತೆಯಲ್ಲಿ ಸದೃಢರಾಗಿ, ಧೃತಿಗೆಡದೆ ಲೋಕದ ಆಶಾಪಾಶಗಳಿಗೆ ಬಲಿಯಾಗದೆ ತ್ರೈಏಕ ದೇವನೆಡೆಗೆ ಸಾಗಲು ಸಶಕ್ತರಾಗುವಂತೆ ಧರ್ಮಸಭೆಯು ನಮ್ಮನ್ನು ಪ್ರೇರೇಪಿಸುತ್ತಾಳೆ. ಈ ಸತ್ಯವನ್ನು ಗ್ರಹಿಸಲು ವರ್ಷದ ಪ್ರಾರಂಭದಿಂದಲೇ ನಮಗೆ ತ್ರೈಏಕನ ಸ್ಪರ್ಶ ಬೇಕಲ್ಲವೆ?
ಮೊದಲನೆಯ ವಾಚನ: ದೇವರು ನಮ್ಮನ್ನು ನಿರಂತರವೂ ಆಶೀರ್ವದಿಸುತ್ತಾರೆ. ಆ ಆಶೀರ್ವಾದವು ನಮಗೆ ಫಲಿಸಬೇಕಾದರೆ ನಾವೂ ಸಹ ಇತರರನ್ನು ಪ್ರೀತಿಪೂರ್ವಕವಾಗಿಯೂ ಗೌರವಪೂರ್ವಕವಾಗಿಯೂ ಪೂರ್ಣಮನಸ್ಸಿನಿಂದ ಸರ್ವೇಶ್ವರ ಪ್ರಸನ್ನ ಮುಖದಿಂದ ನಿಮ್ಮನ್ನು ನೋಡಿ ನಿಮಗೆ ದಯೆತೋರಲಿ ಎಂದು ಆಶೀರ್ವದಿಸಬೇಕು ಎಂದು ಇಂದಿನ ಮೊದಲ ವಾಚನ ನಮಗೆ ಕರೆ ನೀಡುತ್ತದೆ. ಜರುಸಲೇಮ್ ದೇವಾಲಯದಲ್ಲಿ ಯೆಹೂದ್ಯರು ವಾರ್ಷಿಕ ಬಲಿ ಅರ್ಪಿಸಲು ಬಂದಾಗ ಚದುರಿಹೋಗಿದ್ದ ಆ ಜನರು ತಮ್ಮ ವಿಶ್ವಾಸವನ್ನು ಕಳೆದುಕೊಳ್ಳದಂತೆ ಯಾಜಕರು ಅವರನ್ನು ಆ ರೀತಿ ಆಶೀರ್ವದಿಸುತ್ತಿದ್ದರು.
ಎರಡನೆಯ ವಾಚನ: ದೇವರು ಸದಾ ಕಾರ್ಯನಿರತರಾಗಿದ್ದಾರೆ. ಅವರ ಯೋಜನೆಗಳು ಸದಾ ನಿಗೂಢವಾಗಿರುತ್ತವೆ. ಅವುಗಳನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಅಸಾಧ್ಯ. ಏಕೆಂದರೆ ಅವು ನಮ್ಮ ಬುದ್ಧಿಶಕ್ತಿಗೆ ನಿಲುಕವು. ದೇವರು ತಮ್ಮ ಯೋಜನೆಯನ್ನು ಮನುಕುಲದ ಒಳಿತಿಗಾಗಿ ತಮ್ಮ ಇಷ್ಟದಂತೆ ನೆರವೇರಿಸಿಯೇ ತೀರುವರು. ಅದರಲ್ಲಿ ಯಾವ ಸಂಶಯವೂ ಇಲ್ಲ.
ಶುಭಸಂದೇಶದಲ್ಲಿ ಮುಗ್ಧ ಮನಸ್ಸಿನ ಕುರುಬರು ದೇವದೂತರ ಸಂದೇಶವನ್ನು ಕಿಂಚಿತ್ತೂ ಸಂಶಯವಿಲ್ಲದೆ ವಿಶ್ವಾಸಿಸಿ ತ್ವರೆಯಿಂದ ಹೋಗಿ ಕಂದನನ್ನು ನಮಿಸಿ, ಆರಾಧಿಸಿ, ಧನ್ಯರಾಗುತ್ತಾರೆ. ಮಾತ್ರವಲ್ಲದೆ ಇತರರಿಗೆ ಆ ಸಂತಸದ ಮಹಿಮೆಯ ಸಂದೇಶವನ್ನು ಸಾರುತ್ತಾ, ದೇವರನ್ನು ಕೊಂಡಾಡುತ್ತ ಸಾಗುತ್ತಾರೆ. ಕ್ರಿಸ್ತನನ್ನು ಕಾಣಲು ಮುಗ್ಧ ಹಾಗೂ ನಿಷ್ಕಲ್ಮಶ ಮನಸ್ಸು ಅತಿ ಅವಶ್ಯಕ. ಹೊಸವರುಷ ಹೊಸ ಹರುಷವನ್ನು ತರಬೇಕಾದರೆ ನಮ್ಮ ಕಲ್ಮಶ ತುಂಬಿದ ಮನಸುಗಳು ಶುದ್ಧವಾಗಬೇಕು. ದ್ವೇಷದ ಮನಗಳಲ್ಲಿ ಪ್ರೀತಿ ಮೊಳೆತಾಗ ಶಾಂತಿಯ ವಾತಾವರಣ ಉಂಟಾಗಿ ಕ್ರಿಸ್ತನ ಬೆಳಕು ಪ್ರಕಾಶಿಸತೊಡಗುತ್ತದೆ. ಹೊಸವರುಷ ಕತ್ತಲೆಯ ಬದುಕಿನ ಜಂಜಾಟದಿಂದ ಆ ನೆಮ್ಮದಿಯ ಪ್ರಕಾಶದ ಕಡೆಗೆ ಕೈ ಬೀಸಿ ಕರೆಯುತ್ತಿದೆ. ಮಾತೆ ಮರಿಯಮ್ಮನವರಲ್ಲಿ ದೈವೀ ವಿಶ್ವಾಸದ ದೀವಿಗೆ ಸದಾ ಬೆಳಗುವುದರೊಂದಿಗೆ ಅವರ ಬದುಕು ದೈವೀ ಕೇಂದ್ರವಾಗಿತ್ತು. ಆ ಕಾರಣದಿಂದಲೇ ಆಕೆಯು ದೈವ ಯೋಜನೆಯನ್ನು ಸಿದ್ಧಿಗೆ ತರಲು ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು. ನಮ್ಮ ಬದುಕು ಕೂಡ ನಮ್ಮ ಪ್ರಭು ದೇವನಲ್ಲಿ ಕೇಂದ್ರೀಕೃತವಾದರೆ ಸಾಫಲ್ಯದೆಡೆಗೆ ಸಾಗಲು ನಮ್ಮೆಲ್ಲರ ಮಮತೆಯ ಮಾತೆ ಮರಿಯ ಸಹಾಯಕರಾಗುತ್ತಾರೆ.

© 'ದನಿ' ಮಾಧ್ಯಮ ಮನೆ
ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
No comments:
Post a Comment