Tuesday, 24 December 2019

ಕ್ರಿಸ್ತಜಯಂತಿಯ ಏಳನೆಯ ದಿನ

ಡಿಸೆಂಬರ್ 31/ 2019
ಕ್ರಿಸ್ತಜಯಂತಿಯ ಏಳನೆಯ ದಿನ
ಸಂತ ಸಿಲ್ವೆಸ್ಟರ್ ಮೊದಲನೆಯವರು (ವಿಶ್ವಗುರು)
ಮೊದಲನೇ ವಾಚನ: 1 ಯೊವಾನ್ನ 2: 18 - 21
ಕೀರ್ತನೆ: 96 :11-12, 13
ಶುಭಸಂದೇಶ : ಯೊವಾನ್ನ 1: 1- 18
-----------------------
ಮೊದಲನೇ ವಾಚನ: 1 ಯೊವಾನ್ನ 2: 18 - 21
18 : ನನ್ನ ಪ್ರಿಯ ಮಕ್ಕಳೇ, ಅಂತಿಮ ಕಾಲ ಸಮೀಪಿಸಿತು. ಕ್ರಿಸ್ತವಿರೋಧಿ ಬರುವನೆಂದು ನೀವು ಕೇಳಿದ್ದೀರಿ. ಈಗಾಗಲೇ ಅನೇಕ ಕ್ರಿಸ್ತ ವಿರೋಧಿಗಳು ತಲೆದೋರಿದ್ದಾರೆ. ಇದರಿಂದ ಅಂತಿಮಕಾಲ ಸನ್ನಿಹಿತವಾಯಿತೆಂದು ನಮಗೆ ತಿಳಿದುಬರುತ್ತದೆ.
19 : ಈ ಕ್ರಿಸ್ತವಿರೋಧಿಗಳು ನಮ್ಮವರಾಗಿರಲಿಲ್ಲ. ಆದಕಾರಣ, ಅವರು ನಮ್ಮನ್ನು ತೊರೆದರು. ಅವರು ನಮ್ಮವರೇ ಆಗಿದ್ದರೆ, ನಮ್ಮೊಂದಿಗೇ ಇರುತ್ತಿದ್ದರು. ಆದರೆ ಅವರು ನಮ್ಮನ್ನು ತೊರೆದು ಹೋದರು. ಇದರಿಂದ ಕ್ರೈಸ್ತರೆನಿಸಿಕೊಳ್ಳುವವರೆಲ್ಲರೂ ನಮ್ಮವರಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ.
20 : ನೀವಾದರೋ ಪರಿಶುದ್ಧವಾದವರಿಂದ ಅಭಿಷಿಕ್ತರಾಗಿದ್ದೀರಿ. ಸತ್ಯವನ್ನು ಅರಿತವರಾಗಿದ್ದೀರಿ.
21 : ನೀವು ಸತ್ಯವನ್ನು ಅರಿಯದವರೆಂದು ಭಾವಿಸಿ ನಾನು ಬರೆಯುತ್ತಿಲ್ಲ, ನೀವು ಸತ್ಯವನ್ನು ಅರಿತವರು; ಸತ್ಯದಿಂದ ಸುಳ್ಳು ಜನಿಸದೆಂಬುದನ್ನು ತಿಳಿದವರು. ಆದುದರಿಂದ ನಾನು ನಿಮಗೆ ಬರೆದಿದ್ದೇನೆ.
----------------
ಕೀರ್ತನೆ: 96 :11-12, 13
 ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು
11 : ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು | ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು ||
12 : ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು | ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು ||
13 : ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವನು ಖರೆಯಾಗಿ | ಜಗಕು, ಜನತೆಗು ತೀರ್ಪಿಸುವನು ನೀತಿನಿಯಮಾನುಸಾರವಾಗಿ ||
----------------------
ಶುಭಸಂದೇಶ : ಯೊವಾನ್ನ 1: 1- 18
1 : ಜಗತ್ತು ಉಂಟಾಗುವ ಮೊದಲೇ ‘ದಿವ್ಯವಾಣಿ’ ಎಂಬವರಿದ್ದರು. ಆ ದಿವ್ಯವಾಣಿ ದೇವರಾಗಿದ್ದರು. ಆ ದಿವ್ಯವಾಣಿ ದೇವರೊಂದಿಗೆ ಇದ್ದರು;
2 : ಅನಾದಿಯಿಂದಲೇ ಅವರು ದೇವರೊಂದಿಗೆ ಇದ್ದರು.
3 : ದಿವ್ಯವಾಣಿಯ ಮುಖಾಂತರವೇ ಸಮಸ್ತವೂ ಉಂಟಾಯಿತು. ಉಂಟಾದವುಗಳಲ್ಲಿ ಯಾವುದೂ ಆ ದಿವ್ಯವಾಣಿಯಿಂದಲ್ಲದೆ ಆದುದಲ್ಲ.
4 : ಆ ದಿವ್ಯವಾಣಿಯಲ್ಲಿ ಸಜ್ಜೀವವಿತ್ತು. ಆ ಜೀವವೇ ಮಾನವಜನಾಂಗದ ಜ್ಯೋತಿಯಾಗಿತ್ತು.
5 : ಆ ಜ್ಯೋತಿ ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲಿಗಾದರೋ ಅದನ್ನು ನಿಗ್ರಹಿಸಲಾಗಲಿಲ್ಲ.
6 : ದೇವರು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು. ಆತನ ಹೆಸರು ಯೊವಾನ್ನ.
7 : ಈತನು ಸಾಕ್ಷಿಕೊಡಲು ಬಂದನು. ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಿದನು.
8 : ಈತನೇ ಜ್ಯೋತಿಯಾಗಿರಲಿಲ್ಲ; ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಲೆಂದೇ ಬಂದವನು.
9 : ನಿಜವಾದ ಜ್ಯೋತಿ ಆ ದಿವ್ಯವಾಣಿಯೇ. ಮಾನವರೆಲ್ಲರನ್ನು ಬೆಳಗಿಸಲು ಲೋಕಕ್ಕೆ ಆಗಮಿಸಲಿದ್ದ ಜಗಜ್ಯೋತಿ ಅವರೇ.
10 : ದಿವ್ಯವಾಣಿ ಲೋಕದಲ್ಲಿ ಇದ್ದರು. ಅವರ ಮುಖಾಂತರವೇ ಲೋಕವು ಉಂಟಾಯಿತು. ಲೋಕವಾದರೋ ಅವರನ್ನು ಅರಿತುಕೊಳ್ಳದೆ ಹೋಯಿತು.
11 : ಅವರು ತಮ್ಮ ಸ್ವದೇಶಕ್ಕೆ ಬಂದರು; ಸ್ವಜನರೇ ಅವರನ್ನು ಬರಮಾಡಿಕೊಳ್ಳದೆ ಹೋದರು.
12 : ಕೆಲವರಾದರೋ ಅವರನ್ನು ಬರಮಾಡಿ ಕೊಂಡರು. ಅಂಥವರಿಗೆ, ಅಂದರೆ ಅವರಲ್ಲಿ ವಿಶ್ವಾಸ ಇಟ್ಟವರಿಗೆ, ದೇವರ ಮಕ್ಕಳಾಗುವ ಹಕ್ಕನ್ನು ಅವರು ಕೊಟ್ಟರು.
13 : ಅಂಥವರ ಜನನವು ರಕ್ತಸಂಬಂಧದಿಂದ ಅಲ್ಲ, ಶಾರೀರಕ ಇಚ್ಛೆಯಿಂದ ಅಲ್ಲ, ಮಾನವಸಹಜ ಬಯಕೆಯಿಂದಲೂ ಅಲ್ಲ, ದೇವರಿಂದಲೇ ಆದುದು.
14 : ಆ ದಿವ್ಯವಾಣಿ ಮನುಷ್ಯ ಆದರು. ಮನುಷ್ಯನಾಗಿ ನಮ್ಮೊಡನೆ ವಾಸಮಾಡಿದರು. ಅವರ ಮಹಿಮೆಯನ್ನು ನಾವು ನೋಡಿದೆವು. ಪಿತನಿಂದ ಪಡೆದ ಆ ಮಹಿಮೆ ಏಕೈಕ ಪುತ್ರನಿಗೆ ಮೀಸಲಾದ ಮಹಿಮೆಯೇ. ಎಂದೇ ಅವರು ವರಪ್ರಸಾದದಿಂದಲೂ ಸತ್ಯದಿಂದಲೂ ಪರಿಪೂರ್ಣರಾಗಿದ್ದರು.
15 : ಯೊವಾನ್ನನು ಅವರನ್ನು ಕುರಿತು ಸಾಕ್ಷಿ ನುಡಿಯುತ್ತಾ, “ ‘ಅವರು ನನ್ನ ಬಳಿಕ ಬಂದವರಾದರೂ ನನಗಿಂತ ಮೊದಲೇ ಇದ್ದವರು; ಆದುದರಿಂದ ಅವರು ನನಗಿಂತಲೂ ಶ್ರೇಷ್ಠರು’ ಎಂದು ನಾನು ಹೇಳಿದ್ದು ಅವರನ್ನು ಕುರಿತೇ,” ಎಂದು ಘೋಷಿಸಿದನು.
16 : ಅವರ ಪರಿಪೂರ್ಣತೆಯಿಂದ ನಾವೆಲ್ಲರು ವರಪ್ರಸಾದದ ಮೇಲೆ ವರಪ್ರಸಾದವನ್ನು ಪಡೆದಿದ್ದೇವೆ.
17 : ಧರ್ಮಶಾಸ್ತ್ರವನ್ನು ಮೋಶೆಯ ಮುಖಾಂತರ ಕೊಡಲಾಯಿತು. ವರಪ್ರಸಾದ ಹಾಗೂ ಸತ್ಯವಾದರೋ ಯೇಸುಕ್ರಿಸ್ತರ ಮುಖಾಂತರ ಬಂದವು.
18 : ಯಾರೂ ಎಂದೂ ದೇವರನ್ನು ಕಂಡಿಲ್ಲ; ಪಿತನ ವಕ್ಷಸ್ಥಳದಲ್ಲಿರುವ, ಸ್ವತಃ ದೇವರಾಗಿರುವ ಏಕೈಕ ಪುತ್ರನೇ ಅವರನ್ನು ತಿಳಿಯಪಡಿಸಿದ್ದಾರೆ.
-----------------------------------
ಚಿಂತನೆ
ಕ್ರಿಸ್ತನ ಪುನರುತ್ಥಾನದ ನಂತರ ಕ್ರೈಸ್ತರ ಸಂಖ್ಯೆ ವೃದ್ದಿಯಾಯಿತು. ಸಂಖ್ಯೆ ಬೆಳೆದಂತೆ ಸಮಸ್ಯೆಗಳು, ಗೊಂದಲಗಳು ಹೆಚ್ಚಾದವು. ಕೆಲವರಲ್ಲಿ ಯೇಸು ನಿಜವಾಗಿಯೂ ದೇವರೆ? ಅವರಿಗೆ ಆದಿ-ಅಂತ್ಯ ಇಲ್ಲವಾ? ಎಂಬ ಪ್ರಶ್ನೆ ಕಾಡತೊಡಗಿದವು. ಈ ಎಲ್ಲಾ ಪ್ರಶ್ನೆಗಳಿಗೆ ಯೊವಾನ್ನ ಇಂದಿನ ಶುಭಸಂದೇಶದಲ್ಲಿ ಉತ್ತರ ನೀಡುತ್ತಾನೆ. ಯೇಸುವು ಜಗತ್ತು ಉಂಟಾಗುವ ಮೊದಲೇ `ದಿವ್ಯವಾಣಿ' ಯಾಗಿದ್ದರು, ಅವರಿಂದಲೇ ಸರ್ವವೂ ಉಂಟಾಯಿತು, ಕಾಲವು ಪರಿಪಕ್ವವಾದಾಗ ಆ `ದಿವ್ಯವಾಣಿ' ಮನುಷ್ಯರಾದರು ಎಂದು ತಿಳಿಸುತ್ತಾ ಕ್ರಿಸ್ತನ ದೈವತ್ವವನ್ನು ತಿಳಿಸುತ್ತಾರೆ. ಯೊವಾನ್ನ ೧:೧-೧೮ ಯೇಸುವಿನ ಜೀವನದ ಸಾರಾಂಶವನ್ನು ವಿವರಿಸುತ್ತದೆ. ಯೇಸು ಜಗತ್ತಿಗೆ ಜ್ಯೋತಿಯಾಗಿ ಬಂದರು ಆದರೆ ಜನ ಅಂಧಕಾರವನ್ನು ಬಯಸಿದರು. ಯೇಸು ಸ್ವೀಕರಿಸುವ ಪ್ರತಿಯೊಬ್ಬರು ನಿತ್ಯ ಜೀವ ಹೊಂದುವರು. ವರ್ಷದ ಕೊನೆ ದಿನಕ್ಕೆ ಕಾಲಿಟ್ಟಿದ್ದೇವೆ, ದೇವರು ಮಾಡಿದ ಮಹಾ ಉಪಕಾರಗಳಿಗೆ ಕೃತಜ್ಞತೆ ಸಲ್ಲಿಸೋಣ. ಕಹಿ ನೆನಪುಗಳನ್ನು ಮರೆಯೋಣ. ಹೊಸ ಭರಸೆಯೊಂದಿಗೆ ನೂತನ ವರ್ಷವನ್ನು ಸ್ವಾಗತಿಸೋಣ.

No comments:

Post a Comment