Thursday, 26 December 2019

2 ಜನವರಿ 2020

ಗುರು/ಬಿಳಿ/ಸಂತರಾದ ಮಹಾ ಬಾಸಿಲ್ ಮತ್ತು ಗ್ರೆಗೋರಿ ನಜಿಯಾಂಜೆನ್(ಧರ್ಮಾ  ಮತ್ತು  ಧ.ಪ) ಸ್ಮರಣೆ

ಪ್ರಥಮ ವಾಚನ: 1 ಯೊವಾನ್ನ 2: 22-28
ಕೀರ್ತನೆ:  98:  1-5
ಶುಭಸಂದೇಶ: ಯೊವಾನ್ನ 1: 19-28

ವಾಚನಗಳು

ಮೊದಲನೇ  ವಾಚನ

ಸಂತ ಯೊವಾನ್ನರ  ಮೊದಲ ಪತ್ರದಿಂದವಾಚನ

22ಅಸತ್ಯವಾದಿ ಎಂದರೆ ಯಾರು? ಯೇಸುವೇ ಕ್ರಿಸ್ತ ಎಂಬುದನ್ನು ಯಾರು ಅಲ್ಲಗಳೆಯುತ್ತಾನೋ ಅವನೇ ಅಸತ್ಯವಾದಿ; ಅವನೇ ಕ್ರಿಸ್ತವಿರೋಧಿ. ಅವನು ಪಿತನನ್ನು ಮತ್ತು ಪುತ್ರನನ್ನು ತಿರಸ್ಕರಿಸುತ್ತಾನೆ. 23ಪುತ್ರನನ್ನು ತಿರಸ್ಕರಿಸುವವನು ಪಿತನನ್ನೂ ತಿರಸ್ಕರಿಸುತ್ತಾನೆ. ಪುತ್ರನನ್ನು ಅಂಗೀಕರಿಸುವವನು ಪಿತನನ್ನೂ ಅಂಗೀಕರಿಸುತ್ತಾನೆ. 24ಮೊದಲಿನಿಂದಲೂ ನೀವು ಯಾವ ಸಂದೇಶವನ್ನು ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಸಲಿ. ಮೊದಲಿನಿಂದಲೂ ನೀವು ಕೇಳಿದ ಸಂದೇಶ ನಿಮ್ಮಲ್ಲಿ ನೆಲೆಸಿದರೆ ಪುತ್ರನಲ್ಲಿಯೂ ಪಿತನಲ್ಲಿಯೂ ನೀವು ನೆಲೆಸುತ್ತೀರಿ. 25ಕ್ರಿಸ್ತಯೇಸು ನಮಗೆ ವಾಗ್ದಾನ ಮಾಡಿರುವ ನಿತ್ಯಜೀವ ಇದೇ 26ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸಬೇಕೆಂದಿರುವವರನ್ನು ಕುರಿತು ಇದನ್ನು ನಿಮಗೆ ಬರೆದಿದ್ದೇನೆ. 27ನೀವು ಕ್ರಿಸ್ತಯೇಸುವಿನಿಂದ ಅಭಿಷಿಕ್ತರಾಗಿದ್ದೀರಿ. ಆ ಅಭಿಷೇಕವು ನಿಮ್ಮಲ್ಲಿ ನೆಲೆಸಿದೆ. ಆದ್ದರಿಂದ ಯಾರೂ ನಿಮಗೆ ಬೋಧಿಸುವ ಅವಶ್ಯಕತೆಯಿಲ್ಲ. ಆ ಅಭಿಷೇಕವೇ ನಿಮಗೆ ಎಲ್ಲವನ್ನೂ ಬೋಧಿಸುತ್ತಾ ಬರುತ್ತದೆ. ಈ ಬೋಧನೆ ಸತ್ಯವಾದುದು, ಮಿಥ್ಯವಾದುದಲ್ಲ. ಅದರ ಪ್ರಕಾರವೇ ಕ್ರಿಸ್ತಯೇಸುವಿನಲ್ಲಿ ನೆಲೆಸಿರಿ. 28ಹೌದು ಪ್ರಿಯ ಮಕ್ಕಳೇ, ಕ್ರಿಸ್ತಯೇಸು ಪ್ರತ್ಯಕ್ಷರಾಗುವಾಗ, ಅವರ ಪುನರಾಗಮನದ ಪ್ರಯುಕ್ತ ಅವರ ಮುಂದೆ ನಾವು ನಾಚಿಕೆ ಪಡದೆ ಧೈರ್ಯದಿಂದಿರುವಂತೆ ಅವರಲ್ಲಿ ನೆಲೆಗೊಂಡಿರೋಣ.

ಕೀರ್ತನೆ 

ಶ್ಲೋಕ: ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ| ನಮ್ಮ ದೇವ ಸಾಧಿಸಿದ ಜಯಗಳಿಕೆ||

1: ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು| 
    ಎಸಗಿಹನಾತನು ಪವಾಡಕಾರ್ಯಗಳನು| 
    ಗಳಿಸಿತಾತನ ಕೈ ಪೂತಭುಜ ಗೆಲುವನು ||

2: ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು| 
    ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು ||

3: ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ| 
    ನಮ್ಮ ದೇವ ಸಾಧಿಸಿದ ಜಯಗಳಿಕೆ|| 
    ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು| 
    ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು||

4: ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ| 
    ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ||


ಶುಭಸಂದೇಶ

ಸಂತ ಯೊವಾನ್ನನು ಬರೆದ ಶುಭಸಂದೇಶದಿಂದ ವಾಚನ

19ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳಿಸಿದರು. ಇವರು, ನೀನು ಯಾರು? ಎಂದು ಪ್ರಶ್ನಿಸಿದರು.  20ಯೊವಾನ್ನನು ಅದಕ್ಕೆ ಉತ್ತರವಾಗಿ, ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ, ಎಂದು ಸ್ಪಷ್ಟವಾಗಿ ಹೇಳಿದನು. ಏನನ್ನೂ ಮರೆಮಾಚಲಿಲ್ಲ. 21ಹಾಗಾದರೆ, ನೀನು ಎಲೀಯನೋ? ಎಂದು ಕೇಳಲು 'ಅಲ್ಲ' ಎಂದನು. ನೀನು ಬರಬೇಕಾಗಿದ್ದ ಪ್ರವಾದಿಯಿರಬಹುದೇ? ಎಂದು ಅವರು ಮತ್ತೆ ಕೇಳಲು, ಅದೂ ಅಲ್ಲ, ಎಂದು ಮರುನುಡಿದನು. 22ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು. ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರಕೊಡಬೇಕಾಗಿದೆ. ನಿನ್ನನ್ನು ಕುರಿತು ನೀನು ಏನು ಹೇಳುತ್ತೀ? ಎಂದು ಅವರು ಮತ್ತೊಮ್ಮೆ ಕೇಳಿದರು.  23ಅದಕ್ಕೆ ಯೊವಾನ್ನನು, ಪ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂದು ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು, ಎಂದು ಯೆಶಾಯ ಪ್ರವಾದಿಯ ಮಾತುಗಳಲ್ಲೇ ಉತ್ತರಕೊಟ್ಟನು.

24-25ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು, ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ? ಎಂದು ಪ್ರಶ್ನಿಸಿದರು.  26ಪ್ರತ್ಯುತ್ತರವಾಗಿ ಯೊವಾನ್ನನು, ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ.  27ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ, ಎಂದನು.

28ಯೊವಾನ್ನನು ಸ್ನಾನದೀಕ್ಷೆ ಕೊಡತ್ತಿದ್ದ ಜೋರ್ಡನ್ ನದಿಯ ಆಚೆದಡದಲ್ಲಿದ್ದ ಬೆಥಾನಿಯ ಎಂಬಲ್ಲಿ ಇದೆಲ್ಲವೂ ನಡೆಯಿತು.


ಚಿಂತನೆ
ಅನನ್ಯತೆ

ಪ್ರತಿ ವ್ಯಕ್ತಿಯಲ್ಲೂ ಅನನ್ಯತೆ ಇದೆ. ಪ್ರತಿಯೊಬ್ಬರೂ ತಮ್ಮ ಅನನ್ಯತೆಯನ್ನು ಅನುಸರಿಸಬೇಕು. ನಮ್ಮಲ್ಲಿ ಬಹುತೇಕ ಮಂದಿ ಒಳ್ಳೆಯವರಾಗಿ ಕಾಣಿಸಲು ಇಷ್ಟ ಪಡುತ್ತೇವೆ. ಅದಕ್ಕಾಗಿ ನಾವು ಹಾತೊರೆಯುತ್ತೇವೆ. ಅನ್ಯರ ಸಮ್ಮತಿಯೇ ನಮಗೆ ಮುಖ್ಯವಾಗುವುದರಿಂದ ನಮ್ಮ ಅನನ್ಯತೆಯನ್ನು ನಾವು ಅನುಸರಿಸುವುದಿಲ್ಲ. ದೇವರು ನಮಗೆ ಅನನ್ಯತೆಯನ್ನು ನೀಡಿದ್ದಾನೆ. ಅದನ್ನು ಅನುಸರಿಸಲು ಧೈರ್ಯ ಬೇಕು. ``ನಾವು ಬೇರೆಯವರಿಗಿಂತ ಭಿನ್ನವಾಗಿರಬೇಕು' ಎಂಬ ಅಹಂಕಾರದಿಂದಲ್ಲ. `ನಾನು ಯಾರು' ಎಂಬುದರ ಅರಿವಿನಿಂದ ಸ್ನಾನಿಕ ಯೊವಾನ್ನನಿಗೆ `ನಾನು ಯಾರು, ನನ್ನ ಗುರಿ ಏನು' ಎಂಬ ಸ್ಪಷ್ಟ ಅರಿವಿತ್ತು. ನಮ್ಮಲ್ಲಿ ಅನೇಕರಿಗೆ `ನಾನು ಯಾರು?' ನನ್ನ ಕರ್ತವ್ಯವೇನು? ನನ್ನ ಗುರಿ ಏನು? ಎಂಬುದರ ಸ್ಪಷ್ಟ ಅರಿವಿಲ್ಲ. ಸ್ನಾನಿಕ ಯೊವಾನ್ನರ ಬದುಕು ನಮಗೆ ಪ್ರೇರಣೆ ಮತ್ತು ಆದರ್ಶವಾಗಲಿ.
---------------------
ನಾನು ಅಪಾತ್ರನು               
ನೀವು ನಿತ್ಯವೂ ಕ್ರಿಸ್ತನನ್ನು ಅಂಗೀಕರಿಸಿದರೆ ನಿಮಗೆ ನಿತ್ಯಜೀವ ಲಭಿಸುವುದು ಮತ್ತು ಅಂಗೀಕರಿಸದಿದ್ದರೆ ನಿತ್ಯಜೀವವನ್ನು ಕಳೆದುಕೊಳ್ಳುವಿರಿ. ಕ್ರಿಸ್ತನನ್ನು ಅಂಗೀಕರಿಸುವವನನ್ನು ಪಿತನನ್ನು ಅಂಗೀಕರಿಸುವನು ಎಂದು ಸಂತ ಯೊವಾನ್ನನು ಈ ವಾಚನದಲ್ಲಿ ತಿಳಿಸುತ್ತಾನೆ. ಹಾಗಾದರೆ ಕ್ರಿಸ್ತನನ್ನು ಅಂಗೀಕರಿಸಲು ನಾವೇನು ಮಾಡಬೇಕು? ಕ್ರಿಸ್ತನೇ ನಮ್ಮ ರಕ್ಷಕನೆಂದು ವಿಶ್ವಾಸಿಸಲು ಪ್ರಾರಂಭಿಸಬೇಕು!
ಹಳೆಯ ಒಡಂಬಡಿಕೆಯ ಕೊನೆಯ ಹಾಗೂ ಹೊಸ ಒಡಂಬಡಿಕೆಯ ಪ್ರಥಮ ಪ್ರವಾದಿಯೇ ಸಂತ ಸ್ನಾನಿಕ ಯೊವಾನ್ನ. ಇವರು ಹಳೆಯ ಮತ್ತು ಹೊಸ ಒಡಂಬಡಿಕೆಯ ಸುಭದ್ರ ಕೊಂಡಿ. ದೈವ ಯೋಜನೆಯನ್ನು ಸಾಕಾರಗೊಳಿಸುವುದರಲ್ಲಿ ಇವರಿಗಿದ್ದ ನಿಷ್ಠೆ, ಪ್ರಾಮಾಣಿಕತೆ ಹಾಗೂ ಬದ್ಧತೆ ಅಪಾರವಾದುದು. ಕ್ರಿಸ್ತನನ್ನು ಲೋಕಕ್ಕೆ ಪರಿಚಯಗೊಳಿಸುವುದೇ ಇವರ ಪರಮ ಗುರಿಯಾಗಿತ್ತು. ಜನರ ಪ್ರಶ್ನೆಗೆ ಇವರ ಉತ್ತರ ಸುಸ್ಪಷ್ಟವಾಗಿತ್ತು. ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ, ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ ಎಂದು ಉದ್ಗರಿಸಿದರು. ತನ್ನ ಶಿಷ್ಯರು ಕ್ರಿಸ್ತನನ್ನು ಕಂಡು ಹರ್ಷಭರಿತರಾದಾಗ ತಾವು ಸಂತೃಪ್ತಿಯ ನಗೆ ಬೀರಿ ಮರೆಯಾದರು. ನಿಜವಾದ ಕ್ರೈಸ್ತನ ಹಾಗೂ ಸುವಾರ್ತಾಸೇವಕನ ಗುಣ ಇದಾಗಿರಬೇಕು ಎಂಬುದರಲ್ಲಿ ಸಂಶಯವಿದೆಯೇ? 
---------------------------------

ಇಂದಿನ ಸಂತರು

1. ಸಂತ ಮಹಾ ಬಾಸಿಲ್‌(330-379)

ಸಂತ ಬಾಸಿಲ್‌ರವರನ್ನು ಸೆಜ಼ಾರಿಯಾದ "ಮಹಾ ಬಾಸಿಲ್"ಎಂತಲೂ ಕರೆಯುತ್ತಾರೆ. ಇವರು ಅನುಕೂಲಸ್ಥ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ, ತಾಯಿಗಳಿಬ್ಬರೂ ಧರ್ಮಭೀರುಗಳಾಗಿದ್ದರು. ಇವರ ತಾತ, ಕ್ರೈಸ್ತ ರಕ್ತಸಾಕ್ಷಿಯಾಗಿದ್ದರು. ಬಾಸಿಲ್‌ರವರ ಉನ್ನತ ವಿದ್ಯಾಭ್ಯಾಸವು, ಏಷ್ಯಾ ಮೈನರ್‌ನ ಕಪ್ಪದೋಕ್ಯದಲ್ಲಿ ಜರುಗುತ್ತದೆ. ಅಲ್ಲಿ, ನಜೀಯಾಂಜೇನ್‍ನ ಗ್ರಿಗೊರಿಯವರನ್ನು ಸಂಧಿಸಿ, ಕ್ರಮೇಣ ಅವರಿಬ್ಬರೂ ಆತ್ಮೀಯ ಗೆಳೆಯರಾಗುತ್ತಾರೆ.

ಆರು ವರ್ಷಗಳು ಅಥೆನ್ಸ್‌ನಲ್ಲಿ ಕಳೆದು, ಬಾಸಿಲ್‍ನವರು ಈಜಿಪ್ಟ್, ಸಿರಿಯಾಗಳಲ್ಲಿ ಪ್ರವಾಸಮಾಡಿ, ಸೆಜ಼ಾರಿಯಾಗೆ ವಾಪಸಾಗುತ್ತಾರೆ. ಅಲ್ಲಿ ನ್ಯಾಯವಾದಿಯಾಗಿದ್ದು, ಕೆಲಕಾಲ ಭಾಷಾಲಂಕಾರವನ್ನು ಬೋಧಿಸುತ್ತಾರೆ. ಬಾಸಿಲ್‌ರವರು, ಪೆಬೆಸ್ತಾದ ಯೂಸ್ತೇಥಿಯಸ್‍ನವರನ್ನು ಭೇಟಿಯಾದಾಗ, ಅವರ ಬಾಳು ಸಂಪೂರ್ಣ ಬದಲಾಗುತ್ತದೆ. ಆಗ ಅವರು, ತಮ್ಮ ಕಾನೂನು ಕಾಯಕವನ್ನು ತ್ಯಜಿಸಿ, ತಮ್ಮನ್ನು ಸಂಪೂರ್ಣವಾಗಿ ದೇವರ ಸೇವೆಗೆ ಸಮರ್ಪಿಸಿಕೊಳ್ಳುತ್ತಾರೆ. ಅದರ ಕುರಿತಾಗಿ ತಮ್ಮ ಪತ್ರವೊಂದಲ್ಲಿ ಅವರು, "ನನ್ನ ಯೌವನವನ್ನು ಹಾಳುಮಾಡಿಕೊಂಡೆ. ಈಗ, ನಿದ್ರೆಯಿಂದ ಎಚ್ಚೆತ್ತು, ಅದ್ಭುತವಾದ ಸುವಾರ್ತೆಯ ಸತ್ಯವನ್ನು ಕಂಡುಕೊಂಡೆ! ರಾಜರುಗಳ ವಿವೇಕದಲ್ಲಿ ಹುರುಳಿಲ್ಲ" ಎಂದು ಬರೆದುಕೊಂಡಿದ್ದಾರೆ.

ಮುಂದೆ ಇವರು, ಸಿಸೇರಿಯಾದ ಧರ್ಮಾಧ್ಯಕ್ಷರಾಗುತ್ತಾರೆ. ಇವರು, ನೈಸಿಯಾದ ವಿಶ್ವಾಸಸೂತ್ರವನ್ನು ಬಲವಾಗಿ ಬೆಂಬಲಿಸಿದ ಪ್ರಭಾವಶಾಲಿ ದೈವಶಾಸ್ತ್ರಜ್ಞರು. ಆದಿ ಕ್ರೈಸ್ತಸಭೆಯಲ್ಲಿ ಪಾಖಂಡಿಗಳಾಗಿದ್ದ ಏರಿಯನ್ನರನ್ನು ಕಟುವಾಗಿ ಇವರು ವಿರೋಧಿಸುತ್ತಾರೆ.

ಮಹಾಬಾಸಿಲ್‌ರವರು, ತಮ್ಮ ದೈವಶಾಸ್ತ್ರೀಯ ನಿಶ್ಚಿತ ಅಭಿಪ್ರಾಯಗಳನ್ನು, ರಾಜಕೀಯ ಸಂಪರ್ಕಗಳೊಂದಿಗೆ ಮೇಳೈಸುವ ಸಾಮರ್ಥ್ಯವನ್ನು ಹೊಂದಿದ್ದವರು. ಜೊತೆಗೆ ಇವರು ಬಡವರ ಮತ್ತು ಹಕ್ಕುಬಾಧ್ಯತೆಗಳಿಲ್ಲದ ದಲಿತರ ಆರೈಕೆಯನ್ನೂ ಮಾಡುತ್ತಿದ್ದರು.

ಕಥೋಲಿಕ್ಕರ ಸನ್ಯಾಸಿಮಠಗಳಲ್ಲಿನ ಸಮುದಾಯ ಜೀವನ, ಕ್ರೈಸ್ತ ಪೂಜಾವಿಧಿಗಳ ಪ್ರಾರ್ಥನೆ, ದೈಹಿಕ ಶ್ರಮಗಳನ್ನೊಳಗೊಂಡ ಮಾರ್ಗದರ್ಶಕಸೂತ್ರಗಳನ್ನು ಸ್ಥಾಪಿಸಿದರು ಸ್ವಯಂ ಬಾಸಿಲ್‌ರವರೆ, ಹಾಗಾಗಿ, ಇವರು, "ಸಭೆಯ ಸಮುದಾಯ ಸನ್ಯಾಸತ್ವದ ಪಿತಾಮಹ" ಎನ್ನಿಸಿಕೊಳ್ಳುತ್ತಾರೆ, ಸಂತರ ಪಟ್ಟಕ್ಕೇರಿದ ಇವರಿಗೆ, "ಪ್ರಧಾನ ಗುರು" ಎಂಬ ಬಿರುದೂ ಸಹ ಇದೆ. "ಧಾರ್ಮಿಕ ರಹಸ್ಯಗಳನ್ನು ಸಾಕ್ಷಾತ್ಕಾರದಲ್ಲಿ ತಿಳಿಸುವವರು" ಎಂಬ ವಿಶೇಷಣವೂ ಈ ಸಂತರಿಗೆ ಇದೆ.

ಕೇವಲ 49 ವರ್ಷ ವಯಸ್ಸಿನಲ್ಲೇ ತೀರಿಕೊಂಡ ಅವರ ಪುಣ್ಯದಿನವನ್ನು ಜನವರಿ 1 ರಂದು ಆಚರಿಸಲಾಗುತ್ತದೆ.


2. ನಜಿಯಾಂಜಸ್‍ನ ಸಂತ ಗ್ರಿಗೊರಿ(ಕಾಲ-329-390)

ನಜಿಯಾಂಜಸ್‍ನ ಗ್ರಿಗೊರಿಯವರು ಏಶಿಯಾ ಮೈನರ್‌ನ ಕಪ್ಪದೋಕಿಯಾದ ಏರಿಯಾಂಜೆಸ್ ಗ್ರಾಮದಲ್ಲಿ ಗ್ರೀಕ್ ತಂದೆ ತಾಯಿಗಳಿಗೆ ಜನಿಸಿದರು. ಇವರದು ಅನುಕೂಲಸ್ಥ ಜಮೀನುದಾರ ಕುಟುಂಬ. ತಾಯಿ ನೋನ್ನಾ, ತನ್ನ ಪತಿಯನ್ನು ಕ್ರೈಸ್ತರನ್ನಾಗಿಸಿದರು, ಮುಂದೆ ತಂದೆಯವರು ಆ ಪ್ರದೇಶದ ಧರ್ಮಾಧ್ಯಕ್ಷರೂ ಆದರು. 

ಗ್ರಿಗೊರಿಯವರು, ಅಥೆನ್ಸ್‌ನಲ್ಲಿ ಅಲಂಕಾರಶಾಸ್ತ್ರವನ್ನೂ ತತ್ವಶಾಸ್ತ್ರವನ್ನೂ ಕಲಿಯಲು ಹೋಗುವಾಗ, ಅಥೆನ್ಸ್ ಬಳಿ ಜೋರಾದ ಬಿರುಗಾಳಿ ಏಳುತ್ತದೆ. ಆಗ, ದೇವರು ತಮ್ಮನ್ನು ರಕ್ಷಿಸಿದರೆ, ತಮ್ಮ ಇಡಿ ಜೀವಿತಾವಧಿಯನ್ನು ದೇವರ ಸೇವೆಗೆ ಒಪ್ಪಿಸುವೆ ಎಂದು ಪ್ರಾರ್ಥಿಸುತ್ತಾರೆ. ಅಂತೆಯೇ ದೇವರ ಸೇವೆಗಿಳಿಯುತ್ತಾರೆ ಸಹ.

ಅಥೆನ್ಸ್‌ನಲ್ಲಿ ಸೆಜ಼ಾರಿಯಾದ ಬೇಸಿಲ್‌ರವರು ಸಹಪಾಠಿಯಾಗಿದ್ದು, ಅವರಿಬ್ಬರೂ ಗಾಢವಾದ
ಗೆಳೆಯರಾಗುತ್ತಾರೆ. ನಜಿಯಾಂಜೆಸ್‍ಗೆ ವಾಪಸಾದಾಗ, ಹೊಸದಾಗಿ ಪ್ರಾರಂಭವಾಗಿದ್ದ ಸನ್ಯಾಸಿಮಠವೊಂದಕ್ಕೆ ಸೇರಲು ಬೇಸಿಲ್‌ರವರು ಗ್ರಿಗೊರಿಯವರನ್ನು ಆಹ್ವಾನಿಸುತ್ತಾರೆ. ಅಲ್ಲಿ ದೀರ್ಘಕಾಲ ಮೌನದೀಕ್ಷಾಸೇವೆಯಲ್ಲಿ ಕಳೆದು ನಂತರ, ಧರ್ಮಾಧ್ಯಕ್ಷರಾಗಿದ್ದ ತಂದೆಯ ಕರೆಯ ಮೇರೆಗೆ ಅವರಿಗೆ ಸಹಾಯಕರಾಗಲು ಅವರಲ್ಲಿಗೆ ತೆರಳುತ್ತಾರೆ. ಅಲ್ಲಿನ ವ್ಯಾಪಕ ವಿರೋಧಿಶಕ್ತಿಗಳನ್ನು ಹತ್ತಿಕ್ಕಲು ಇವರ ಸಾಮರ್ಥ್ಯ ಉಪಯುಕ್ತವಾಗುತ್ತದೆ. ಆದರೆ ಬೇಸಿಲ್‌ ಮತ್ತು ಗ್ರಿಗೊರಿಯವರ ಸ್ನೇಹ ಹಳಸಲು ಇದು ಕಾರಣವಾಗುತ್ತದೆ. ಇದರಿಂದಾಗಿ ಗ್ರಿಗೊರಿಯವರ ಆರೋಗ್ಯವೂ ಹದಗೆಡುತ್ತದೆ

ಗ್ರಿಗೊರಿಯವರ 41ನೇ ವಯಸ್ಸಿನಲ್ಲಿ, ಸೆಜ಼ಾರಿಯಾದ ಧರ್ಮಾಧ್ಯಕ್ಷರ ಸಹಾಯಕರಾಗಿ ಆಯ್ಕೆಯಾಗುತ್ತಾರೆ. ಅಲ್ಲಿನ ಪಾಖಂಡ ಏರಿಯನ್ನರ (ಈ ಪಂಗಡದವರು, “ಕ್ರಿಸ್ತರು, ದೈವಾಂಶ ಸಂಭೂತರಲ್ಲ, ಮನುಷ್ಯರಲ್ಲಿ ಸ್ವಲ್ಪ ಉನ್ನತ ಸ್ಥಾನದವರು, ಅಷ್ಟೇ’, ಎಂದು ಸಾರುತ್ತಿದ್ದವರು) ಹಾವಳಿಯನ್ನು ತಗ್ಗಿಸುತ್ತಾರೆ.

ಆಗಿನ ಚಕ್ರವರ್ತಿ ತೀರಿಕೊಂಡ ಬಳಿಕ, ಪ್ರಸಿದ್ಧ ಕಾನ್‌ಸ್ಟಾಂಟಿನೋಪಲ್ ಪ್ರದೇಶದಲ್ಲಿ ಕ್ರೈಸ್ತತ್ವವನ್ನು ಹರಡಲು, ಗ್ರಿಗೊರಿಯವರನ್ನು ಅಲ್ಲಿನ ಧರ್ಮಾಧ್ಯಕ್ಷರನ್ನಾಗಿ ಕಳುಹಿಸಲಾಗುತ್ತದೆ. ಅಲ್ಲಿದ್ದ ಭ್ರಷ್ಟಾಚಾರ, ಹಿಂಸಾಚಾರಗಳ ಎದುರು ನಿಲ್ಲಲು ಈ ಸೂಕ್ಷ್ಮ ಮನಸ್ಸಿನ ಗ್ರಿಗೊರಿಯವರು, ಹಿಂದೆಮುಂದೆ ನೋಡಬೇಕಾಯಿತಾದರೂ ಅಲ್ಲಿ ಉತ್ಕೃಷ್ಟ ಪ್ರಬೋಧನೆಗಳನ್ನು ನೀಡಿ, ಕ್ರೈಸ್ತ ವಿಶ್ವಾಸವನ್ನು ಗಟ್ಟಿಗೊಳಿಸಲು ಸಮರ್ಥರಾಗುತ್ತಾರೆ. ಆದರೆ ಅಲ್ಲಿ ಅವರು, ತುಂಬಾ ದುಃಖ, ವೇದನೆ, ಆರೋಪ, ಅಸಮಾಧಾನಗಳನ್ನು ಅನುಭವಿಸಬೇಕಾಗುತ್ತದೆ.

ಸಂತ ಗ್ರಿಗೊರಿಯವರು ತಮ್ಮ ಅಂತಿಮ ದಿನಗಳನ್ನು, ಮೌನದಿಂದಲೂ ಉಗ್ರ ಸಂಯಮದಿಂದಲೂ ಕಳೆಯುತ್ತಾರೆ. ಈ ಸಮಯದಲ್ಲಿ ಅವರು ತುಂಬಾ ಗಹನವಾದ, ಸುಂದರವಾದ ಧಾರ್ಮಿಕ ಕವನಗಳನ್ನು ರಚಿಸುತ್ತಾರೆ. ಅವುಗಳಲ್ಲಿ ಅವರ ಆತ್ಮಕಥೆಯೂ ಅಡಗಿದ ಕವನಗಳಿವೆ.

ಏರಿಯನ್ನರ ಪಾಖಂಡವಾದಗಳಿಂದ ಧರ್ಮಸಭೆಗೆ ಸಾಕಷ್ಟು ಹಾನಿಯಾಗಿತ್ತು. ಈ ಪರ್ವವನ್ನು ಕ್ಯಾಥೊಲಿಕ್ಕರು ಎಂದಿಗೂ ಮರೆಯಲಾರರು! ಆದರೆ, “ಯೇಸುಕ್ರಿಸ್ತರು,’ಎಲ್ಲೆಡೆಯೂ ಸದಾ ಶಾಂತಿ, ಸಮಾಧಾನ ಇರುತ್ತದೆಯೆಂದು ಹೇಳಿಲ್ಲ. ಬದಲಾಗಿ, ಅವರು, ಸಮಸ್ಯೆಗಳೂ, ವಿರೋಧಗಳೂ ನೋವು, ಸಂಘರ್ಷಗಳೂ ಇದ್ದೇ ಇರುತ್ತವೆ” ಎಂದು ಹೇಳಿದ್ದಾರೆ, ಎಂಬುದನ್ನು ಮನಗಂಡು ಅವರು ಸಮಾಧಾನ ಹೊಂದುತ್ತಿದ್ದರು.

ಅವರ ಉದ್ಧೃತ ವಾಕ್ಯವೊಂದು ಹೀಗಿದೆ , “ನಾವು, ಅವರನ್ನು ಪ್ರೀತಿಸಬೇಕೆಂದೇ ಕ್ರಿಸ್ತರು ಅಪೇಕ್ಷಿಸುತ್ತಾರೆ. ನಾವು ಬೇಡಿದ್ದನ್ನು ಕೊಡಲು ಅವರು ಸಿದ್ಧರಾಗಿಯೇ ಇರುತ್ತಾರೆ. ಆದರೆ, ಬೇಡುವಾಗ, ಅದರಲ್ಲಿ ಸಂಕುಚಿತ ಮನೋಭಾವ ಇರಕೂಡದು, ಬೇಡಿಕೆ, ಲಘುವಾಗಿಯೂ ಇರಬಾರದು"
ಸಂತ ಗ್ರೆಗರಿಯವರು, ಜನವರಿ 25, 390ರಲ್ಲಿ ನಿಧನರಾದರು. ಅವರ ಪುಣ್ಯದಿನವನ್ನು ಜನವರಿ 2 ರಂದು ಆಚರಿಸಲಾಗುತ್ತದೆ.

No comments:

Post a Comment