Saturday, 28 December 2019

5 ಜನವರಿ 2020

5 ಜನವರಿ 2020

ಭಾನುವಾರ/ಬಿಳಿ/ಪ್ರಭುವಿನ ದೈವದರ್ಶನದ ಮಹೋತ್ಸವ       
1ನೇ  ವಾಚನ  -  ಯೆಶಾಯ  60:  1-6   
ಕೀರ್ತನೆ  -  72:  1-2,  7-8,  10-13         
2ನೇ  ವಾಚನ  -  ಎಫೆ  3:  2-3,  5-6       
ಶುಭಸಂದೇಶ  - ಮತ್ತಾಯ  2:  1-12  


ವಾಚನಗಳು

ಮೊದಲನೇ ವಾಚನ

ಯೆಶಾಯ ಪ್ರವಾದಿಯ ಗ್ರಂಥದಿಂದ ವಾಚನ

1ನಿನಗೆ ಬೆಳಕು ಬಂದಿದೆ ಜೆರುಸಲೇಮೇ, ಏಳು, ಪ್ರಕಾಶಿಸು; ನಿನ್ನ ಮೇಲೆ ಉದಯಿಸಿದೆ ಸರ್ವೇಶ್ವರನ ತೇಜಸ್ಸು. 2ಇಗೋ ಜಗತ್ತನು ಮುತ್ತಿದೆ ಕತ್ತಲು ಜನಾಂಗಗಳನು ಆವರಿಸಿದೆ ಕಾರ್ಗತ್ತಲು. ನಿನ್ನ ಮೇಲಾದರೋ ಉದಯಿಸುವನು ಸರ್ವೇಶ್ವರನು ನಿನ್ನಲ್ಲಿ ಗೋಚರವಾಗುವುದು ಆತನಾ ತೇಜಸ್ಸು. 3ರಾಷ್ಟ್ರಗಳು ಬರುವುವು ನಿನ್ನ ಬೆಳಕಿಗೆ ಅರಸರು ನಿನ್ನ ಉದಯದ ಶೋಭೆಗೆ. 4ನೀ ನೋಡು ಸುತ್ತಮುತ್ತಲ ಕಣ್ಣೆತ್ತಿ ಬರುತಿಹರು ನಿನ್ನ ಮಕ್ಕಳೆಲ್ಲರು ಗುಂಪಾಗಿ. ದೂರದಿಂದ ಬರುತಿಹರು ಗಂಡುಮಕ್ಕಳು ಕಂಕುಳಿನಲ್ಲಿ ಹೊತ್ತ ಆ ಹೆಣ್ಣುಮಕ್ಕಳು. 5ಇದನ್ನು ನೋಡಿ ನೀ ಬೆಳಗುವೆ ಕಾಂತಿಯಿಂದ ಉಬ್ಬುವುದು ನಿನ್ನ ಎದೆ ಆನಂದದಿಂದ. ಹರಿಯುವುದು ನಿನ್ನೆಡೆಗೆ ಸಮುದ್ರ ವ್ಯಾಪಾರ ಸಮೃದ್ಧಿ ದೊರಕುವುದು ನಿನಗೆ ಅನ್ಯಜನಾಂಗಗಳ ಆಸ್ತಿಪಾಸ್ತಿ. 6ತುಂಬಿರುವುವು ನಿನ್ನೊಳು ಒಂಟೆಗಳ ಗುಂಪುಗಳು ಮಿದ್ಯಾನಿನ, ಏಫದ ಪ್ರಾಯದ ಒಂಟೆಗಳು. ಬರುವರೆಲ್ಲರು ಶೆಬದಿಂದ, ತರುವರು ಬಂಗಾರ, ಧೂಪಗಳನು ಸಾರುವರೆಲ್ಲರು ಸರ್ವೇಶ್ವರನ ಸ್ತುತ್ಯಕಾರ್ಯಗಳನು.


ಕೀರ್ತನೆ 
        
ಶ್ಲೋಕ: ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ|

1 : ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ||

2 : ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ|
     ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ||

3 : ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು |
     ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು|
     ಆತನ ಜನ, ಆತನೆ ಮೇಯಿಸುವ ಕುರಿಗಳು, ನಾವು||

4 : ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದದೊಂದಿಗೆ|
     ಆತನ ಆವರಣದಲಿ ನಿಲ್ಲಿರಿ ಸ್ತುತಿಸ್ತೋತ್ರಗಳೊಂದಿಗೆ|
     ಆತನ ನಾಮವನು ಕೊಂಡಾಡಿ ಉಪಕಾರಸ್ಮರಣೆಯೊಂದಿಗೆ||

5 : ಹೌದು, ಪ್ರಭುವೆನಿತೋ ಒಳ್ಳೆಯವನು|
     ಇರುವುದಾತನ ಪ್ರೀತಿ ಯುಗಯುಗಕು |
     ಆತನ ಸತ್ಯತೆ ತಲತಲಾಂತರಕು ||


ಎರಡನೇ ವಾಚನ 

ಸಂತ ಫೌಲನು ಎಫೆಸದವರಿಗೆ ಬರೆದ ಪತ್ರದಿಂದ ವಾಚನ


2ದೇವರು ತಮ್ಮ ಕೃಪಾತಿಶಯದ ಬಗ್ಗೆ ಸಾರುವ ಹೊಣೆಯನ್ನು ನಿಮ್ಮ ಸಲುವಾಗಿ ನನಗೆ ಕೊಟ್ಟಿರುತ್ತಾರೆಂಬುದನ್ನು ನೀವೇ ಬಲ್ಲಿರಿ. 3ದೇವರು ತಮ್ಮ ನಿಗೂಢ ಯೋಜನೆಯನ್ನು ನನಗೆ ಪ್ರಕಟಗೊಳಿಸಿದ್ದಾರೆ. ಇದರ ಬಗ್ಗೆ ನಾನು ಮೊದಲೇ ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ. 5ಹಿಂದಿನ ಕಾಲದವರಿಗೆ ಈ ರಹಸ್ಯವನ್ನು ತಿಳಿಸಿರಲಿಲ್ಲ. ಆದರೆ ಈಗ ದೇವರು ಪವಿತ್ರಾತ್ಮರ ಮುಖಾಂತರ ಪೂಜ್ಯ ಪ್ರೇಷಿತರಿಗೂ ಪ್ರವಾದಿಗಳಿಗೂ ಅದನ್ನು ಪ್ರಕಟಿಸಿದ್ದಾರೆ. 6ಶುಭಸಂದೇಶದ ಮೂಲಕ ಅನ್ಯಜನರೂ ಯೇಸುಕ್ರಿಸ್ತರಲ್ಲಿ ದೇವಜನರೊಡನೆ ಸಹಬಾಧ್ಯರು, ಹಕ್ಕುದಾರರು, ಒಂದೇ ಶರೀರದ ಅಂಗಗಳು, ಹಾಗೂ ದೇವರು ಮಾಡಿದ ವಾಗ್ದಾನದಲ್ಲಿ ಪಾಲುಗಾರರು; ಇದೇ ಆ ರಹಸ್ಯ.



ಶುಭಸಂದೇಶ

ಸಂತ ಮತ್ತಾಯನು ಬರೆದ ಶುಭಸಂದೇಶದಿಂದ ವಾಚನ

1ಯೇಸುಸ್ವಾಮಿ ಜನಿಸಿದ್ದು ಹೆರೋದರಸನ ಕಾಲದಲ್ಲಿ; ಜುದೇಯ ನಾಡಿನ ಬೆತ್ಲೆಹೇಂ ಎಂಬ ಊರಿನಲ್ಲಿ. ಕೆಲವು ಜ್ಯೋತಿಷಿಗಳು ಪೂರ್ವದಿಕ್ಕಿನಿಂದ ಹೊರಟು ಜೆರುಸಲೇಮಿಗೆ ಬಂದರು. 2ಯೆಹೂದ್ಯರ ಅರಸ ಹುಟ್ಟಿದ್ದಾರಲ್ಲವೇ, ಅವರೆಲ್ಲಿ?" ಎಂದು ವಿಚಾರಿಸಿದರು; "ಅವರನ್ನು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಅವರನ್ನು ಆರಾಧಿಸಲು ಇಲ್ಲಿಗೆ ಬಂದಿದ್ದೇವೆ," ಎಂದರು. 3ಇದನ್ನು ಕೇಳಿದ್ದೇ ಹೆರೋದರಸನು ಬಹಳ ತಳಮಳಗೊಂಡನು; ಅಂತೆಯೇ ಜೆರುಸಲೇಮ್ ಆದ್ಯಂತವೂ ಗಲಿಬಿಲಿಗೊಂಡಿತು. 4ಯೆಹೂದ್ಯರ ಎಲ್ಲ ಮುಖ್ಯ ಯಾಜಕರನ್ನೂ ಧರ್ಮಶಾಸ್ತ್ರಿಗಳನ್ನೂ ಅವನು ಸಭೆ ಸೇರಿಸಿದನು. "ಕ್ರಿಸ್ತ ಹುಟ್ಟಬೇಕಾದುದು ಎಲ್ಲಿ?" ಎಂದು ಅವರನ್ನು ವಿಚಾರಿಸಿದನು. 5ಅದಕ್ಕೆ ಅವರು "ಜುದೇಯದಲ್ಲಿರುವ ಬೆತ್ಲೆಹೇಮಿನಲ್ಲೇ ಹುಟ್ಟುವನು; 
ಏಕೆಂದರೆ:
6'ಜುದೇಯ ನಾಡಿನ ಬೆತ್ಲೆಹೇಮೇ,
 ಜುದೇಯದ ಪ್ರಮುಖ ಪಟ್ಟಣಗಳಲ್ಲಿ
    ನೀನು ಅಲ್ಪಳೇನೂ ಅಲ್ಲ.
 ಕಾರಣ ನನ್ನ ಪ್ರಜೆ ಇಸ್ರಯೇಲನ್ನು
 ಪರಿಪಾಲಿಸುವವನು ನಿನ್ನಿಂದಲೇ
    ಉದಯಿಸಲಿರುವನು",
ಎಂದು ಪ್ರವಾದಿ ಬರೆದಿದ್ದಾನೆ" 
ಎಂದು ಉತ್ತರವಿತ್ತರು.

7ಆಗ ಹೆರೋದನು ಆ ಜ್ಯೋತಿಷಿಗಳನ್ನು ಗೋಪ್ಯವಾಗಿ ಬರಮಾಡಿಕೊಂಡು ಅವರಿಗೆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಂಡನು. 8ಅನಂತರ ಅವರನ್ನು ಬೆತ್ಲೆಹೇಮಿಗೆ ಕಳುಹಿಸಿಕೊಡುತ್ತಾ, "ನೀವು ಹೋಗಿ ಆ ಮಗುವನ್ನು ಚೆನ್ನಾಗಿ ಹುಡುಕಿರಿ; ಕಂಡಕೂಡಲೇ ನನಗೆ ಬಂದು ತಿಳಿಸಿರಿ. ನಾನೂ ಹೋಗಿ ಆ ಮಗುವನ್ನು ಆರಾಧಿಸಬೇಕು", ಎಂದು ಹೇಳಿದನು. 9ಜ್ಯೋತಿಷಿಗಳು ಅರಸನ ಮಾತಿಗೆ ತಲೆಬಾಗಿ ಹೊರಟರು. 10ಪೂರ್ವದಿಕ್ಕಿನಲ್ಲಿ ಮೊದಲೇ ಅವರಿಗೆ ಕಾಣಿಸಿಕೊಂಡಿದ್ದ ನಕ್ಷತ್ರ ಪುನಃ ಕಾಣಿಸಿಕೊಂಡಿತು. ಅವರು ಪರಮಾನಂದಭರಿತರಾದರು. ಆ ನಕ್ಷತ್ರ ಅವರ ಮುಂದೆ ಮುಂದೆ ಸಾಗುತ್ತಾ ಮಗು ಇದ್ದ ಸ್ಥಳದ ಮೇಲೆ ಬಂದು ನಿಂತುಬಿಟ್ಟಿತು. 11ಜ್ಯೋತಿಷಿಗಳು ಆ ಮನೆಯನ್ನು ಪ್ರವೇಶಿಸಿ ಮಗುವನ್ನು ತಾಯಿ ಮರಿಯಳ ಬಳಿ ಕಂಡು ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ತಮ್ಮ ತಮ್ಮ ಬೊಕ್ಕಸಗಳನ್ನು ಬಿಚ್ಚಿ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳ ಇವುಗಳನ್ನು ಮಗುವಿಗೆ ಪಾದಕಾಣಿಕೆಯಾಗಿ ಸಮರ್ಪಿಸಿದರು. 12ಹೆರೋದನ ಬಳಿಗೆ ಹಿಂದಿರುಗಬಾರದೆಂದು ಕನಸಿನಲ್ಲಿ ದೈವಾಜ್ಞೆಯಾದ್ದರಿಂದ ಅವರು ಬೇರೆ ಮಾರ್ಗವಾಗಿ ತಮ್ಮ ದೇಶಕ್ಕೆ ಮರಳಿದರು.

ಚಿಂತನೆ
ಭಾನುವಾರ ಕರ್ತರ ದೈವದರ್ಶನದ ಹಬ್ಬ

ಮತ್ತಾಯನು ಯೇಸು ಸ್ಥಾಪಿಸುವ ರಾಜ್ಯ ವಿಭಿನ್ನವಾದುದು ಎಂಬುದನ್ನು ಈ ಮೂರು ಕಾಯಕ ಉಪಕಥೆಯಲ್ಲಿ ಮುಂತಿಳಿಸಿದ್ದಾನೆ. ಈ ಜ್ಯೋತಿಷಿಗಳು ಬಹುಶಃ ಬ್ಯಾಬಿಲೋನ್ ಅಥವಾ ಮೆಸಪಟೋಮಿಯಾದಿಂದ ಬಂದಿರಬಹುದು ಎಂದು ಹಲವರ ಊಹೆಯಾಗಿದೆ. ನಕ್ಷತ್ರವನ್ನು ಹಿಂಬಾಲಿಸುತ್ತಾ ಮಗುವಿದ್ದ ಸ್ಥಳ ಸೇರಿ, ಮಗುವನ್ನು ಕಂಡು ನಮಿಸಿದ ಜ್ಯೋತಿಷಿಗಳು ತಮ್ಮ ಬೊಕ್ಕಸದಲ್ಲಿದ್ದ ಚಿನ್ನ, ಪರಿಮಳ ದ್ರವ್ಯ ಮತ್ತು ರಕ್ತ ಬೋಳವನ್ನು ಕಾಣಿಕೆಯಾಗಿ ಸಮರ್ಪಿಸಿದರು. ಜ್ಯೋತಿಷಿಗಳು ನೀಡಿದ ಕಾಣಿಕೆಯು ಕ್ರಿಸ್ತನ ವ್ಯಕ್ತಿತ್ವವನ್ನು ಸೂಚಿಸುತ್ತದೆ ಮತ್ತು ಆತನ ಜೀವನದಲ್ಲಿ ಸಂಭವಿಸಲಿರುವ ಘಟನೆಗಳಿಗೆ ಅನುಗುಣವಾಗಿದೆ.

ಚಿನ್ನ : ಕ್ರಿಸ್ತನ ಅರಸತ್ವವನ್ನು ಸೂಚಿಸುತ್ತದೆ.
ಪರಿಮಳ ದ್ರವ್ಯ : ಇದು ಕ್ರಿಸ್ತನ ಯಾಜಕತ್ವವನ್ನು ಸೂಚಿಸುತ್ತದೆ. (ಹಿಬ್ರಿಯ 4:14 ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನ ಯಾಜಕ)
ರಕ್ತಬೋಳ : ಇದು ಕ್ರಿಸ್ತನ ಸಾವನ್ನು ಮುಂತಿಳಿಸುತ್ತದೆ. 
ಚಿನ್ನ ರಾಜನಿಗೆ, ಪರಿಮಳ ದ್ರವ್ಯ ಯಾಜಕನಿಗೆ, ರಕ್ತಬೋಳ ಸಾಯುವ ವ್ಯಕ್ತಿಗೆ.

ಈ ಕಾಣಿಕೆಗಳನ್ನು ಈ ಮೂವರು ಜ್ಞಾನಿಗಳು ತಂದರು. ಕ್ರಿಸ್ತನ ಜನನದ ಸಂದರ್ಭದಲ್ಲೇ ಇದು ಕ್ರಿಸ್ತ ಮುಂದೆ ಎಂತಹ ವ್ಯಕ್ತಿಯಾಗುತ್ತಾನೆ ಎಂಬುದನ್ನು ಸಾಂಕೇತಿಕವಾಗಿ ತಿಳಿಸಲಾಗಿದೆ.

ಕರ್ತರ ದೈವದರ್ಶನದ ಹಬ್ಬ ನಮಗೆ ನೀಡುವ ಮುಖ್ಯ ಸಂದೇಶ: ಕ್ರಿಸ್ತ ಕೇವಲ ಯೆಹೂದ್ಯರ ಆಸ್ತಿಯಲ್ಲ. ಆತ ಸರ್ವರಿಗೂ ಸೇರಿದವ, ಕ್ರಿಸ್ತನಿಂದ ಸ್ವರ್ಗದ ಬಾಗಿಲು ಎಲ್ಲರಿಗೂ ತೆರೆಯುವಂತಾಯಿತು. ಯೆಹೂದ್ಯರ ಗರ್ವಕ್ಕೆ, ಜಂಭಕ್ಕೆ ಪೆಟ್ಟಾಯಿತು. ಜ್ಯೋತಿಷಿಗಳಂತೆ ನಾವು ಸಹ ಕ್ರಿಸ್ತನ ದರ್ಶನಕ್ಕೆ ಮುಂದಾಗಬೇಕು ಎಂಬುದನ್ನು ಈ ಹಬ್ಬ ಸೂಚಿಸುತ್ತದೆ.
----------------------------
ದೇವರ ದಿವ್ಯದರ್ಶನದ ಹಬ್ಬ ಪ್ರಭುವನ್ನು ಕಂಡು ಪುಳಕಿತರಾದರು
ಪ್ರವಾದಿ ಯೆಶಾಯನು ಹರಿದು ಹಂಚಿ ಹೋಗಿದ್ದ ಯೆಹೂದ್ಯ ಜನತೆಗೆ ಭರವಸೆಯ ಸಂದೇಶವನ್ನು ನೀಡುತ್ತಾನೆ. ರಕ್ಷಕರ ಜನನದಿಂದ ಅವರ ಜೀವನದ ದಿಕ್ಕೆ ಬದಲಾಗುವುದರ ಕುರಿತು ಮುಂತಿಳಿಸಿತ್ತಾನೆ. ಮುದುಡಿದ ಮನಸ್ಸಿಗೆ ಅರಳುವಂತಹ ದಿವ್ಯ ಸಂದೇಶವನ್ನು ನೀಡಿ, ಹೊಸ ಬದಕನ್ನು ರೂಪಿಸುವ ರಕ್ಷಕ ಬರುವನೆಂದು, ಆತನ ಬರುವಿಕೆಯಿಂದ ಸಕಲವೂ ಹೊಸತಾಗುವುದೆಂದು ಪ್ರವಾದಿಯು ತಿಳಿಸುತ್ತಾನೆ.

ಪೌಲ ಕ್ರಿಸ್ತನನ್ನು ತನ್ನ ಒಡಲಲ್ಲಿ ತುಂಬಿಕೊಂಡಿದ್ದ. ಆತ ಕ್ರಿಸ್ತಮಯನಾಗಿದ್ದ. ದೈವ ಯೋಜನೆಯ ನಿಗೂಡತೆಯನ್ನು ಆಳವಾಗಿ ಅರಿತುಕೊಂಡಿದ್ದ. ಆ ಕಾರಣದಿಂದಲೇ ಅವನು ಎಡೆಬಿಡದೆ ಅದನ್ನು ಸರ್ವರೂ ಅರಿತುಕೊಳ್ಳಬೇಕೆಂದು ಬಯಸುತ್ತಾನೆ. ಮಾತ್ರವಲ್ಲದೆ ಹಗಳಿರುಳೆನ್ನದೆ ಈ ಶುಭಸಂದೇಶವನ್ನು ಬೋಧಿಸುತ್ತಾನೆ ಹಾಗೂ ಸರ್ವರು ಅರಿತು ಕೊಳ್ಳುವಂತೆ ಪ್ರೋತ್ಸಾಹಿಸುತ್ತಾನೆ. 

ಪೂರ್ವ ದೇಶದ ಜ್ಞಾನಿಗಳು ಕ್ರಿಸ್ತನನ್ನು ಹುಡುಕುತ್ತಾ ಸಾಗಿದರು. ಯಾವ ಅಡೆತಡೆಗೂ ಅವರು ಜಗ್ಗಲೂ ಇಲ್ಲ, ನಿರಾಶರಾಗಲೂ ಇಲ್ಲ. ಅಂತಿಮವಾಗಿ ಪ್ರಭುವನ್ನು ಕಂಡು ಪುಳಕಿತರಾದರು. ಅವರನ್ನು ಆರಾಧಿಸಿ ನಮಿಸಿ ಪುನೀತರಾದರು. ಅವರ ಮನದಾಸೆ ಪೂರ್ಣಗೊಂಡಿತು. ರಕ್ಷಣೆಯ ಬೆಳಕು ಅವರನ್ನು ಆವರಿಸಿತು. ಕ್ರಿಸ್ತನೇ ಆ ರಕ್ಷಣೆಯ ಬೆಳಕು. ಆ ಬೆಳಕಿನ ಪಥದಲ್ಲಿ ಅವರು ಸಾಗಿ ಇತರರಿಗೂ ಬೆಳಕಾದರು. ರಕ್ಷಣೆ ಹೊಂದಲು ಬಯಸುವವರು ಕ್ರಿಸ್ತನನ್ನು ಕಾಣುವ ಮನದಾಸೆಯುಳ್ಳವರಾಗಬೇಕು ಹಾಗೂ ಯಾವ ಅಡೆತಡೆಗೂ ಅಂಜದೆ ಅಳುಕದೆ ಮುನ್ನುಗ್ಗಿ ನಡೆಯಬೇಕು. 
------------------------

No comments:

Post a Comment