4 ಜನವರಿ 2020
ಶನಿವಾರ/ಬಿಳಿ/ಕ್ರಿಸ್ತಜಯಂತಿ ಕಾಲದ ವಾರದ ದಿನ
1ನೇ ವಾಚನ - ಯೊವಾನ್ನ 3: 7-10
ಕೀರ್ತನೆ - 98: 1, 7-9
ಶುಭಸಂದೇಶ - ಯೊವಾನ್ನ 1: 35-42
ವಾಚನಗಳು
ಮೊದಲನೇ ವಾಚನ
ಸಂತ ಯೊವಾನ್ನನು ಬರೆದ ಶುಭಸಂದೇಶದಿಂದ ವಾಚನ
7ಪ್ರಿಯ ಮಕ್ಕಳೇ, ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸುವುದಕ್ಕೆ ಯಾರಿಗೂ ಅವಕಾಶ ಕೊಡಬೇಡಿ. ಕ್ರಿಸ್ತಯೇಸು ಸತ್ಯಸ್ವರೂಪಿಯಾಗಿರುವಂತೆಯೇ ಸತ್ಯಕ್ಕನುಸಾರ ನಡೆಯುವ ಪ್ರತಿ ಒಬ್ಬನೂ ಸತ್ಯವಂತನೇ. 8ಪಾಪಮಾಡುವವನು ಸೈತಾನನ ಸಂತಾನದವನು. ಸೈತಾನನು ಆದಿಯಿಂದಲೂ ಪಾಪಮಾಡಿದವನೇ. ಅವನ ದುಷ್ಕøತ್ಯಗಳನ್ನು ವಿನಾಶಗೊಳಿಸಲೆಂದೇ ದೇವರ ಪುತ್ರ ಕಾಣಿಸಿಕೊಂಡದ್ದು. 9ದೇವರಿಂದ ಜನಿಸಿದ ಯಾವನೂ ಪಾಪಮಾಡನು. ದೇವರ ಜೀವದ ಕುಡಿ ಅವನಲ್ಲಿರುವುದು. ಅವನು ಪಾಪದಲ್ಲಿ ಜೀವಿಸನು. ಏಕೆಂದರೆ, ಅವನು ದೇವರಿಂದ ಜನಿಸಿದವನು. 10ಸನ್ಮಾರ್ಗದಲ್ಲಿ ನಡೆಯದವನೂ ಸಹೋದರನನ್ನು ಪ್ರೀತಿಸದವನೂ ದೇವರಿಂದ ಜನಿಸಿದವನಲ್ಲ. ಹೀಗೆ ದೇವರ ಮಕ್ಕಳು ಯಾರು ಮತ್ತು ಸೈತಾನನ ಮಕ್ಕಳು ಯಾರು ಎಂಬುದನ್ನು ತಿಳಿಯಬಹುದು.
ಕೀರ್ತನೆ
ಶ್ಲೋಕ: ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ| ನಮ್ಮ ದೇವ ಸಾಧಿಸಿದ ಜಯಗಳಿಕೆ||
98:1ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು|
ಎಸಗಿಹನಾತನು ಪವಾಡಕಾರ್‍ಯಗಳನು|
ಗಳಿಸಿತಾತನ ಕೈ ಪೂತಭುಜ ಗೆಲುವನು||
7 ಗರ್ಜಿಸಲಿ ಸಮುದ್ರವು ಅದರಲ್ಲಿರುವುದೆಲ್ಲವು|
ಕೀರ್ತಿಸಲಿ ಜಗವು, ಅದರೊಳು ವಾಸಿಸುವ ಜನರೆಲ್ಲರು||
8 ಚಪ್ಪಾಳೆ ಹೊಡೆಯಲಿ ನದಿಗಳು|
ತಟ್ಟಾಡಲಿ ಬೆಟ್ಟಗುಡ್ಡಗಳು||
9: ಏಕೆನೆ ಬರುವನಾತ ಇಹಲೋಕಕೆ ನ್ಯಾಯತೀರಿಸಲು|
ಜಗಕೂ, ಜನತೆಗೂ, ನ್ಯಾಯನೀತಿಗನುಸಾರ ತೀರ್ಪುಕೊಡಲು|
ಪರಮ ಪವಿತ್ರನು ನಮ್ಮ ದೇವರು||
ಶುಭಸಂದೇಶ
ಸಂತ ಯೊವಾನ್ನನು ಬರೆದ ಶುಭಸಂದೇಶದಿಂದ ವಾಚನ
35ಮಾರನೆಯ ದಿನ ಯೊವಾನ್ನನು ತನ್ನಿಬ್ಬರು ಶಿಷ್ಯರ ಸಂಗಡ ನಿಂತುಕೊಂಡಿರುವಾಗ, ಯೇಸುಸ್ವಾಮಿ ಆ ಮಾರ್ಗವಾಗಿ ಹೋಗುತ್ತಿದ್ದರು. 36ಅವರನ್ನು ನೋಡುತ್ತಲೇ ಯೊವಾನ್ನನು ತನ್ನ ಆ ಶಿಷ್ಯರಿಗೆ, ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ, ಎಂದು ಹೇಳಿದನು. 37ಇದನ್ನು ಕೇಳಿದ ಆ ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. 38ಯೇಸುಸ್ವಾಮಿ, ತಮ್ಮನ್ನು ಹಿಂಬಾಲಿಸಿ ಬರುತ್ತಿರುವುದನ್ನು ನೋಡಿ, ನಿಮಗೆ ಏನು ಬೇಕು? ಎಂದು ಕೇಳಿದರು. ಅವರು, ರಬ್ಬಿ, ತಾವು ವಾಸ ಮಾಡುವುದೆಲ್ಲಿ? ಎಂದು ವಿಚಾರಿಸಿದರು. ('ರಬ್ಬಿ' ಎಂದರೆ ಗುರುದೇವ ಎಂದು ಅರ್ಥ). 39ಯೇಸು ಉತ್ತರವಾಗಿ, ಬಂದು ನೋಡಿ ಎನ್ನಲು ಅವರು ಹೋಗಿ ಯೇಸುಸ್ವಾಮಿ ಇದ್ದ ಸ್ಥಳವನ್ನು ಕಂಡು ಆ ದಿನವನ್ನು ಅವರೊಡನೆ ಕಳೆದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು. 40ಯೊವಾನ್ನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ್ದ ಇಬ್ಬರು ಶಿಷ್ಯರಲ್ಲಿ ಸಿಮೋನ ಪೇತ್ರನ ಸಹೋದರನಾದ ಅಂದ್ರೆಯನು ಒಬ್ಬನು.
41ಇವನು ಮೊದಲು ತನ್ನ ಸಹೋದರ ಸಿಮೋನನನ್ನು ಕಂಡು, ನಮಗೆ 'ಮೆಸ್ಸೀಯ' ಸಿಕ್ಕಿದ್ದಾರೆ, ಎಂದು ತಿಳಿಸಿ 42ಅವನನ್ನು ಯೇಸುವಿನ ಬಳಿಗೆ ಕರೆತಂದನು. ('ಮೆಸ್ಸೀಯ' ಎಂದರೆ ಅಭಿಷಿಕ್ತನಾದ ಲೋಕೋದ್ಧಾರಕ ಎಂದು ಅರ್ಥ). ಯೇಸು ಸಿಮೋನನನ್ನು ನೋಡಿ, ಯೊವಾನ್ನನ ಮಗನಾದ ಸಿಮೋನನೇ, ಇನ್ನು ಮುಂದೆ ನಿನ್ನನ್ನು ಕೇಫನೆಂದು ಕರೆಯುವರು, ಎಂದು ನುಡಿದರು. ('ಕೇಫ' ಎಂದರೆ 'ಪೇತ್ರ' ಇಲ್ಲವೇ 'ಬಂಡೆ' ಎಂದರ್ಥ).
ಹೊಸ ಒಡಂಬಡಿಕೆಯಲ್ಲಿ ಕ್ರಿಸ್ತನಿಗೆ ಹಲವು ಹೆಸರುಗಳನ್ನು ನೀಡಲಾಗಿದೆ, ದೇವರ ಪುತ್ರ, ಮನುಷ್ಯ ಪುತ್ರ, ರಕ್ಷಕ, ಗುರುದೇವ ಅಭಿಷಿಕ್ತ, ಇತ್ಯಾದಿ. ಈ ಎಲ್ಲಾ ಹೆಸರುಗಳಲ್ಲಿ ಶ್ರೇಷ್ಠವಾದ ನಾಮಾಂಕಿತ `ದೇವರ ಕುರಿಮರಿ'. ಯೆಹೂದ್ಯರು ತಮ್ಮ ಪಾಪ ಪರಿಹಾರಕ್ಕಾಗಿ ಪ್ರಾಣಿಗಳನ್ನು ದಹನ ಬಲಿಯನ್ನಾಗಿ ಅರ್ಪಿಸುತ್ತಿದ್ದರು. ಆದರೆ ಕ್ರಿಸ್ತ ನಮ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸ್ನಾನಿಕ ಯೊವಾನ್ನ ತನ್ನ ಶಿಷ್ಯರಿಗೆ ಸೂಕ್ತವಾದ ನಾಮಾಂಕಿತದಿಂದ ಯೇಸುವನ್ನು ಪರಿಚಯಿಸುತ್ತಾನೆ. ಕ್ರಿಸ್ತನ ಪರಿಚಯದ ನಂತರ ಯೊವಾನ್ನನ ಶಿಷ್ಯರು ಯೇಸುವನ್ನು ಹಿಂಬಾಲಿಸುತ್ತಾರೆ. ಯೊವಾನ್ನ ಕ್ರಿಸ್ತನನ್ನು ಇತರರಿಗೆ ಪರಿಚಯಿಸಿದಂತೆ ನಾವು ಕೂಡ ನಮ್ಮ ಬದುಕಿನ ಮೂಲಕ ಕ್ರಿಸ್ತನನ್ನು ಇತರರಿಗೆ ಪರಿಚಯ ಮಾಡುವುದು ನಮ್ಮ ಕರ್ತವ್ಯ.
ಚಿಂತನೆ
ದೇವರ ಕುರಿಮರಿ
ದೇವರ ಕುರಿಮರಿ
ಹೊಸ ಒಡಂಬಡಿಕೆಯಲ್ಲಿ ಕ್ರಿಸ್ತನಿಗೆ ಹಲವು ಹೆಸರುಗಳನ್ನು ನೀಡಲಾಗಿದೆ, ದೇವರ ಪುತ್ರ, ಮನುಷ್ಯ ಪುತ್ರ, ರಕ್ಷಕ, ಗುರುದೇವ ಅಭಿಷಿಕ್ತ, ಇತ್ಯಾದಿ. ಈ ಎಲ್ಲಾ ಹೆಸರುಗಳಲ್ಲಿ ಶ್ರೇಷ್ಠವಾದ ನಾಮಾಂಕಿತ `ದೇವರ ಕುರಿಮರಿ'. ಯೆಹೂದ್ಯರು ತಮ್ಮ ಪಾಪ ಪರಿಹಾರಕ್ಕಾಗಿ ಪ್ರಾಣಿಗಳನ್ನು ದಹನ ಬಲಿಯನ್ನಾಗಿ ಅರ್ಪಿಸುತ್ತಿದ್ದರು. ಆದರೆ ಕ್ರಿಸ್ತ ನಮ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸ್ನಾನಿಕ ಯೊವಾನ್ನ ತನ್ನ ಶಿಷ್ಯರಿಗೆ ಸೂಕ್ತವಾದ ನಾಮಾಂಕಿತದಿಂದ ಯೇಸುವನ್ನು ಪರಿಚಯಿಸುತ್ತಾನೆ. ಕ್ರಿಸ್ತನ ಪರಿಚಯದ ನಂತರ ಯೊವಾನ್ನನ ಶಿಷ್ಯರು ಯೇಸುವನ್ನು ಹಿಂಬಾಲಿಸುತ್ತಾರೆ. ಯೊವಾನ್ನ ಕ್ರಿಸ್ತನನ್ನು ಇತರರಿಗೆ ಪರಿಚಯಿಸಿದಂತೆ ನಾವು ಕೂಡ ನಮ್ಮ ಬದುಕಿನ ಮೂಲಕ ಕ್ರಿಸ್ತನನ್ನು ಇತರರಿಗೆ ಪರಿಚಯ ಮಾಡುವುದು ನಮ್ಮ ಕರ್ತವ್ಯ.
------------------------
ಸನ್ಮಾರ್ಗಕ್ಕೆ ಮುಕ್ತ ಆಹ್ವಾನ!
ಸನ್ಮಾರ್ಗ, ಅದು ಕ್ರಿಸ್ತ ಯೇಸುವಿನ ಮಾರ್ಗ. ಮಾನವರೆಲ್ಲರೂ ಸನ್ಮಾರ್ಗದಲ್ಲಿ ಸಾಗಲು ಕರೆಯಲ್ಪಟ್ಟವರು. ಅದನ್ನು ಅನುಸರಿಸುವವನಿ/ಳಿಗೆ ರಕ್ಷಣೆಯ ಪಥ ಸುಲಭವಾಗುತ್ತದೆ. ದುರ್ಮಾರ್ಗ ಸೈತಾನನದು. ದುಮಾರ್ಗದಿಂದ ಮಾನವನನ್ನು ಸನ್ಮಾರ್ಗಕ್ಕೆ ತರಲು ದೇವರಪುತ್ರ ಮಾನವರಾದರು. ಪಾಪವನ್ನು ಬಿಟ್ಟು ಮತ್ತೆಲ್ಲದರಲ್ಲಿಯೂ ಪ್ರಭು ಯೇಸು ನಮ್ಮಂತೆಯೇ ಜೀವಿಸಿದರು.
ಪ್ರಭು ಯೇಸುವಿನ ಪರಮ ಗುರಿ, ದೇವರ ರಾಜ್ಯದ ಮರುಸ್ಥಾಪನೆಯಾಗಿತ್ತು. ಅದರ ಸ್ಥಾಪನೆಗೆ ಅವರು ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿದರು. ಅದನ್ನು ವಿಶ್ವದೆಲ್ಲೆಡೆ ನಿರಂತರವಾಗಿ ಹರಡುತ್ತಿರಬೇಕೆಂದು ಬಯಸಿದರು. ಅದಕ್ಕಾಗಿ ಅವರು ತಮ್ಮ ಸೇವೆಯ ಆರಂಭದಲ್ಲಿಯೇ ಕೆಲವರನ್ನು ವಿಶೇಷವಾಗಿ ಆರಿಸಿಕೊಂಡು ಅವರಿಗೆ ಆ ಸ್ವರ್ಗಸಾಮ್ರಾಜ್ಯದ ರೂಪುರೇಶೆಗಳನ್ನು ಬೋಧಿಸಿದರು, ಅವರ ಬುದ್ಧಿಯನ್ನು ವಿಕಾಸಗೊಳಿಸಿದರು, ಮಾತ್ರವಲ್ಲ ಅವರು ಆ ಪವಿತ್ರ ಕಾರ್ಯವನ್ನು ಅಂಜದೆ ಅಳುಕದೆ ಮುನ್ನಡೆಸುವಂತೆ ಪವಿತ್ರಾತ್ಮರಿಂದ ಅಭ್ಯಂಗಿಸಿದರು. ಹಾಗೆ ಆಯ್ಕೆಯಾದವರೇ ಪ್ರೇಷಿತರು. ಸ್ನಾನದೀಕ್ಷೆಯ ಮೂಲಕ ನಾವು ಈ ಸಾಮ್ರಾಜ್ಯದ ಪ್ರಜೆಗಳಾಗಿದ್ದೇವೆ. ಅದನ್ನು ಉಳಿಸಿ ಬೆಳೆಸಿ ಪೋಷಿಸುವುದು ನಮ್ಮಲ್ಲರ ಕರ್ತವ್ಯವಾಗಿದೆ!
---------------------
No comments:
Post a Comment