Friday, 6 December 2019

ಆಗಮನ ಕಾಲದ ಮೊದಲನೆಯ ಶನಿವಾರ

ಡಿಸೆಂಬರ 7
ಸಂತ ಅಂಬ್ರೋಸ್ (ಧರ್ಮಾಧ್ಯಕ್ಷ ಮತ್ತು ಧರ್ಮಸಭೆಯ ಪಂಡಿತ)
ಮೊದಲನೆಯ ವಾಚನ:  ಯೆಶಾಯ 30:19 - 21, 23 - 26
ಕೀರ್ತನೆ 147:1 - 2, 3 - 4, 5 - 6
ಶುಭಸಂದೇಶ- ಮತ್ತಾಯ 9:35 - 10:1, 6 - 8

ಯೆಶಾಯ 30:19 - 21, 23 - 26
19 : ಜೆರುಸಲೇಮಿನಲ್ಲಿ ವಾಸಿಸುವ ಸಿಯೋನಿನ ಜನರೇ, ನೀವಿನ್ನು ಅಳಬೇಕಾಗಿಲ್ಲ. ನಿಮ್ಮ ಕೂಗನ್ನು ಕೇಳಿದ್ದೇ, ಸರ್ವೇಶ್ವರ ನಿಮಗೆ ಕೃಪೆತೋರಿಸುವರು. ನಿಮ್ಮ ಸ್ವರವನ್ನು ಕೇಳಿದಾಕ್ಷಣ ಸದುತ್ತರವನ್ನು ದಯಪಾಲಿಸುವರು.
20 : ಅವರು ನಿಮಗೆ ಕಷ್ಟಸಂಕಟವನ್ನು ಅನ್ನಪಾನವಾಗಿ ಕೊಟ್ಟರೂ ನಿಮ್ಮ ಬೋಧಕರು ಇನ್ನು ನಿಮಗೆ ಮರೆಯಾಗಿ ಇರುವುದಿಲ್ಲ. ನೀವು ಅವರನ್ನು ಕಣ್ಣಾರೆ ಕಾಣುವಿರಿ.
21 : ನೀವು ಬಲಕ್ಕಾಗಲೀ ಎಡಕ್ಕಾಗಲೀ ತಿರುಗಿದರೆ ‘ಇದೇ ಮಾರ್ಗ, ಇದರಲ್ಲೇ ನಡೆಯಿರಿ’ ಎಂಬ ಮಾತು ಹಿಂದಿನಿಂದ ನಿಮ್ಮ ಕಿವಿಗೆ ಕೇಳಿಸುವುದು.
23 : ಆಗ ಸರ್ವೇಶ್ವರ ಹೊಲದ ಬಿತ್ತನೆಗೆ ಬೇಕಾದ ಮಳೆಯನ್ನು ನಿಮಗೆ ಸುರಿಸುವರು. ಆ ಹೊಲದ ಬೆಳೆಯಿಂದ ಸಾರವತ್ತಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವರು. ಅಂದು ನಿಮ್ಮ ದನಕರುಗಳು ವಿಶಾಲವಾದ ಹುಲ್ಲು ಗಾವಲುಗಳಲ್ಲಿ ಮೇಯುವುವು.
24 : ಹೊಲಗೇಯುವ ನಿಮ್ಮ ಎತ್ತು ಕತ್ತೆಗಳು ಮೊರದಿಂದಲೂ ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವುವು.
25 : ಕೋಟೆಕೊತ್ತಲಗಳು ಬಿದ್ದುಹೋಗುವುವು. ಶತ್ರುಗಳ ಮಹಾಸಂಹಾರ ನಡೆಯುವ ಆ ದಿನದಂದು ಉನ್ನತ ಪರ್ವತಗಳಿಂದಲೂ ಎತ್ತರವಾದ ಗುಡ್ಡಗಳಿಂದಲೂ ತೊರೆಗಳೂ ನೀರಿನ ಕಾಲುವೆಗಳೂ ಹರಿಯುವುವು.
26 : ಇದಲ್ಲದೆ ಚಂದ್ರನ ಬೆಳಕು ಸೂರ್ಯನ ಬೆಳಕಿನಂತಿರುವುದು. ಸೂರ್ಯನ ಬೆಳಕು ಏಳ್ಮಡಿ ಹೆಚ್ಚುವುದು. ಏಳು ದಿನಗಳ ಬೆಳಕು ಒಂದೇ ದಿನದ ಬೆಳಕಿನಂತಾಗುವುದು. ಅಂದು ಸರ್ವೇಶ್ವರ ತಮ್ಮ ಜನರ ಹುಣ್ಣುಗಳನ್ನು ಕಟ್ಟುವರು. ತಮ್ಮ ಪೆಟ್ಟಿನಿಂದ ಜನರಿಗಾದ ಗಾಯಗಳನ್ನು ಗುಣಪಡಿಸುವರು.
ಕೀರ್ತನೆ 147:1 - 2, 3 - 4, 5 - 6
1 : ನಮ್ಮ ದೇವರನು ಹೊಗಳಿ ಹಾಡುವುದು ಉಚಿತ / ಆತನ ಸ್ತುತಿ ಮನೋಹರ, ಅದು ಬಲುಸೂಕ್ತ
2 : ನಿರ್ಮಿಸುತಿಹನು ಪ್ರಭು ಮರಳಿ ಜೆರುಸಲೇಮನು / ಒಂದು ಸೇರಿಸುತಿಹನು ಚದರಿದ ಇಸ್ರಯೇಲರನು
3 : ವಾಸಿಮಾಡುವನು ಮುರಿದ ಮನಸ್ಸುಳ್ಳವರನು / ಕಟ್ಟಿ ಗುಣಪಡಿಸುವನು ಅವರ ಗಾಯಗಳನು
4 : ನಿಯಮಿಸಿಹನು ತಾರೆಗಳ ಸಂಖ್ಯೆಯನು / ಇಟ್ಟಿಹನು ಪ್ರತಿಯೊಂದಕೂ ಹೆಸರನು
5 : ನಮ್ಮ ಪ್ರಭು ಘನವಂತ, ಪರಾಕ್ರಮಿ / ಅಪರಿಮಿತವಾದುದು ಆತನ ಜ್ಞಾನನಿಧಿ
6 : ಆಧಾರವಾಗಿಹನು ಪ್ರಭು ದೀನರಿಗೆ / ತುಳಿದುಬಿಡುವನು ದುರ್ಜನರನು ನೆಲಕೆ
ಶುಭಸಂದೇಶ -  ಮತ್ತಾಯ 9:35 - 10:1, 6 - 8
35 : ಯೇಸುಸ್ವಾಮಿ, ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾಮಂದಿರಗಳಲ್ಲಿ ಬೋಧಿಸಿದರು. ಶ್ರೀ ಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾ ತರಹದ ರೋಗರುಜಿನಗಳನ್ನು ಗುಣಪಡಿಸಿದರು.
36 : ಆ ಜನಸಮೂಹವನ್ನು ಕಂಡಾಗ ಅವರ ಮನ ಕರಗಿತು.
37 : ಏಕೆಂದರೆ, ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು.
38 : ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, "ಬೆಳೆಯೇನೋ ಹೇರಳ; ಕೊಯಿಲಿಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ," ಎಂದರು.
1 : ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು.
5 : ಆ ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸುಸ್ವಾಮಿ ಅವರಿಗೆ ಕೊಟ್ಟ ಆದೇಶ ಇದು: "ಪರಕೀಯರತ್ತ ಹೋಗಲೇಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ.
6 : ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ;
7 : ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ.
8 : ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ.
ಚಿಂತನೆ
ಯೇಸು ತಾವು ಸ್ಥಾಪಿಸಲು ಬಂದ ದ್ಯೆವ ಸಾಮ್ರಾಜ್ಯವನ್ನು ಎರಡು ರೀತಿಯಲ್ಲಿ ಅನಾವರಣ ಗೊಳಿಸಿದರು. ಮೊದಲನೆಯದಾಗಿ ಬೋಧನೆ ಮತ್ತು ಎರಡನೆಯದಾಗಿ ತಮ್ಮನ್ನು ವಿಶ್ವಾಸಿಸಿ ಬಳಿ ಬಂದವರ ಎಲ್ಲಾ ರೀತಿಯ ರೋಗಗಳನ್ನು ಗುಣಪಡಿಸಿದರು. ಜನರ ಕಷ್ಟಕ್ಕೆ, ನೋವಿಗೆ ಅವರ ಮನ ಸದಾ ಮಿಡಿಯುತ್ತಿತು. ಕುರುಬನಿಲ್ಲದ ಕುರಿಗಳಂತೆ ಇದ್ದ ಜನರನ್ನು ಕಂಡು ಅವರ ಉದ್ದಾರಕ್ಕಾಗಿ ಶ್ರಮಿಸಿದರು. ಇಸ್ರಯೇಲ್ ಜನರನ್ನು ಕುರುಮರಿಗೂ ಮತ್ತು ಸರ್ವೇಶ್ವರರಾದ ದೇವರನ್ನು ಕುರುಬನಿಗೂ ಹೋಲಿಕೆ ಮಾಡಿರುವ ದೃಶ್ಯಗಳು ಸಾಕಷ್ಟು ಕಂಡುಬರುತ್ತದೆ. (ಸ.ಕಾಂಡ ೨೪:೧೭, ಎಜಕೀಯೇಲ್ ೩೪:೫, ಮತ್ತಾಯ ೧೦:೬), ಗಾಯಾಳುಗಳನ್ನು, ರೋಗಿಗಳನ್ನು ಹಾರೈಸಲು ಔಷಧಿಯೇನೋ ಅಧಿಕವಾಗಿದೆ ಆದರೆ ಅದನ್ನು ಈ ಜನರಿಗೆ ಹಂಚುವ ವೈದ್ಯರ ಸಂಖ್ಯೆ ಅತೀ ಕಡಿಮೆ. ಹಾಗಾಗಿ ತಮ್ಮ ಶಿಷ್ಯರನ್ನು ಸಿದ್ಧಗೊಳಿಸುತ್ತಿದ್ದಾರೆ. ಶಿಷ್ಯರಂತೆ ನಾವು ದೇವರ ಸೇನೆಗೆ, ದೈವ ಸಾಮ್ರಾಜ್ಯದ ಸ್ಥಾಪನೆಗೆ ದುಡಿಯಬೇಕಿದೆ.

No comments:

Post a Comment