ಡಿಸೆಂಬರ್ 8/ 2019
ಮೊದಲನೇ ವಾಚನ ಯೆಶಾಯ 11:1-10
ಕೀರ್ತನೆ: 72:1-2, 7-8, 12-13, 17
ಎರಡನೇ ವಾಚನ : ರೋಮನರಿಗೆ 15:4-9
ಶುಭಸಂದೇಶ : ಮತ್ತಾಯ 3:1-12
1 : ಜೆಸ್ಸೆಯನ ಬುಡದಿಂದ ಒಡೆಯುವು ದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು.
2 : ನೆಲಸುವುದಾತನ ಮೇಲೆ ಜ್ಞಾನವಿವೇಕ ದಾಯಕ ಆತ್ಮ; ಶಕ್ತಿ ಸಮಾಲೋಚನೆಯನ್ನೀಯುವ ಆತ್ಮ; ಸರ್ವೇಶ್ವರನ ಅರಿವನು, ಭಯವನು ಹುಟ್ಟಿಸುವ ಆತ್ಮ ಅಹುದು, ನೆಲಸುವುದಾತನ ಮೇಲೆ ಸರ್ವೇಶ್ವರನ ಆತ್ಮ
3 : ಸರ್ವೇಶ್ವರನ ಭಯಭಕ್ತಿ ಅವಗೆ ಪರಿಮಳದಂತೆ. ತೀರ್ಪಿಡನಾತ ಕಣ್ಣಿಗೆ ತೋಚಿದಂತೆ ನಿರ್ಣಯಿಸನಾತ ಕಿವಿಗೆ ಬಿದ್ದಂತೆ.
4 : ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯನೀತಿಯಿಂದ ನಾಡ ದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ.
5 : ಸದ್ಧರ್ಮವೇ ಆತನಿಗೆ ನಡುಕಟ್ಟು ಪ್ರಾಮಾಣಿಕತೆಯೇ ಸೊಂಟಪಟ್ಟಿ.
6 : ಬಾಳುವುವು ತೋಳಕುರಿಮರಿಗಳು ಒಂದಿಗೆ ಮಲಗುವುವು ಮೇಕೆಚಿರತೆಗಳು ಜೊತೆಗೆ ಮೊಲೆಯುಣ್ಣುವುವು ಕರುಕೇಸರಿಗಳು ಒಟ್ಟಿಗೆ ನಡೆಸುವುದವುಗಳನು ಚಿಕ್ಕಮಗು ಮೇಯಿಸುವುದಕೆ.
7 : ಮೇಯುವುವು ಕರಡಿ, ಆಕಳುಗಳು ಒಟ್ಟಿಗೆ ಮಲಗುವುವು ಅವುಗಳ ಮರಿಗಳು ಜೊತೆಗೆ ಎತ್ತಿನ ಹುಲ್ಲು ಮೇವಾಗುವುದು ಸಿಂಹಕೆ.
8 : ಆಡುವುದು ಮೊಲೆಗೂಸು ನಾಗರ ಹುತ್ತದ ಮೇಲೆ ಕೈ ಹಾಕುವುದು ಮೊಲೆಬಿಟ್ಟ ಮಗು ಹಾವಿನಬಿಲದ ಒಳಗೆ.
9 : ಹಾನಿಯನು, ಕೇಡನು ಮಾಡರಾರೂ ನನ್ನ ಪರ್ವತದ ಮೇಲೆ. ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಜ್ಞಾನ, ಧರೆಯ ಮೇಲೆ.
10 : ಆ ದಿನದಂದು ಜೆಸ್ಸೆಯನ ಸಂತಾನದ ಕುಡಿ ಸರ್ವಜನಾಂಗಗಳಿಗೆ ಧ್ವಜಪ್ರಾಯವಾಗಿ ನಿಲ್ಲುವುದು. ಆತನನ್ನು ರಾಷ್ಟ್ರಗಳು ಆಶ್ರಯಿಸುವುವು; ವೈಭವದಿಂದಿರುವುದಾತನ ವಿಶ್ರಾಂತಿ ನಿಲಯವು.
ಕೀರ್ತನೆ: 72:1-2, 7-8, 12-13, 17
1 : ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ / ಕಲಿಸು ನಿನ್ನ ನೀತಿಯನು ರಾಜಕುವರನಿಗೆ //
2 : ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ / ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ //
7 : ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ / ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ //
8 : ಸಾಗರದಿಂದ ಸಾಗರದವರೆಗಿರಲಿ ಆತನ ಆಧಿಪತ್ಯ / ಮಹಾ ನದಿಯಿಂದ ಬುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ //
12 : ಏಕೆನೆ ಕಾಪಾಡುವನಾತ ಮೊರೆಯಿಡುವ ಬಡವರನು / ಉದ್ಧರಿಸುವನಾತ ದಿಕ್ಕಿಲ್ಲದ ದೀನದಲಿತರನು //
13 : ದೀನದರಿದ್ರರಿಗೆ ದಯೆಯ ತೋರುವನು / ದಲಿತರ ಪ್ರಾಣವನು ಕಾಪಾಡುವನು //
17 : ಶಾಶ್ವತವಾಗಲಿ ಶ್ರೀನಾಮ ಆತನಿಗೆ / ಬೆಳಗಲಿ ಆತನ ಕೀರ್ತಿ ಸೂರ್ಯನಿರುವವರೆಗೆ / ಆತನಾಶೀರ್ವಾದ ಕೋರಲಿ ಸರ್ವರು ತಮಗೆ / ಶುಭವೆನ್ನಲಿ ಸಕಲ ರಾಷ್ಟ್ರಗಳು ಆತನಿಗೆ //
ಎರಡನೇ ವಾಚನ : ರೋಮನರಿಗೆ 15:4-9
1 : ವಿಶ್ವಾಸದಲ್ಲಿ ದೃಢವಾಗಿರುವ ನಾವು ನಮ್ಮ ಹಿತವನ್ನೇ ಬಯಸದೆ ವಿಶ್ವಾಸದಲ್ಲಿ ದೃಢವಲ್ಲದವರ ಲೋಪದೋಷಗಳನ್ನು ಸಹಿಸಿಕೊಳ್ಳಬೇಕು.
2 : ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೇ ಬಯಸಿ, ವಿಶ್ವಾಸದಲ್ಲಿ ಅವನು ಮತ್ತಷ್ಟು ಪ್ರವರ್ಧಿಸುವಂತೆ ನೆರವಾಗಬೇಕು.
3 : ಕ್ರಿಸ್ತಯೇಸು ತಮ್ಮ ಸ್ವಂತ ಹಿತವನ್ನು ಎಂದಿಗೂ ಬಯಸಲಿಲ್ಲ, “ದೇವರೇ, ನಿಮ್ಮನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೆ ಎರಗಿವೆ,” ಎಂದು ಲಿಖಿತವಾಗಿರುವ ವಾಕ್ಯ ಅವರಿಗೆ ಅನ್ವಯಿಸುತ್ತದೆ.
4 : ಪ್ರಾಚೀನ ಗ್ರಂಥಗಳಲ್ಲಿ ಬರೆದಿರುವುದೆಲ್ಲವೂ ನಮ್ಮ ಉಪದೇಶಕ್ಕಾಗಿಯೇ ಬರೆಯಲಾಗಿದೆ. ಪವಿತ್ರಗ್ರಂಥ ಪಠನದಿಂದ ದೊರಕುವ ಸ್ಥೈರಣೆ ಮತ್ತು ಉತ್ತೇಜನದಿಂದಾಗಿ ನಾವು ನಿರೀಕ್ಷೆಯುಳ್ಳವರಾಗಬೇಕೆಂದೇ ಇವೆಲ್ಲಾ ಬರೆಯಲಾಗಿದೆ.
5 : ಆ ಸ್ಥೈರಣೆ ಮತ್ತು ಉತ್ತೇಜನದ ಮೂಲವಾಗಿರುವ ದೇವರು, ನೀವೆಲ್ಲರು ಕ್ರಿಸ್ತಯೇಸುವನ್ನು ಅನುಸರಿಸುತ್ತಾ ಒಮ್ಮನಸ್ಸಿನಿಂದ ಬಾಳುವಂತೆ ಮಾಡಲಿ.
6 : ಹೀಗೆ ಒಮ್ಮನಸ್ಸಿನಿಂದಲೂ ಒಕ್ಕೊರಲಿನಿಂದಲೂ ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರನ್ನು ಕೊಂಡಾಡುವಂತಾಗಲಿ.
7 : ಕ್ರಿಸ್ತಯೇಸು ನಿಮ್ಮನ್ನು ಅಂಗೀಕರಿಸಿದಂತೆ ದೇವರ ಮಹಿಮೆಗಾಗಿ ನೀವು ಸಹ ಒಬ್ಬರನ್ನು ಒಬ್ಬರು ಅಂಗೀಕರಿಸಿರಿ.
8 : ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನಗಳನ್ನು ನೆರವೇರಿಸಿ ತಮ್ಮ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸುವಂತೆ
9 : ಮತ್ತು ದೇವರು ತೋರಿದ ಕರುಣೆಗಾಗಿ ಅವರನ್ನು ಯೆಹೂದ್ಯರಲ್ಲದವರು ಸಹ ಸ್ತುತಿಸಲು ಸಾಧ್ಯವಾಗುವಂತೆ ಕ್ರಿಸ್ತಯೇಸು ಯೆಹೂದ್ಯರಿಗೆ ಅಧೀನರಾದರು. ಇದಕ್ಕೆ ಸಾದೃಶ್ಯವಾಗಿ ಪವಿತ್ರ ಗ್ರಂಥದಲ್ಲಿ ಹೀಗೆಂದು ಹೇಳಲಾಗಿದೆ: “ಈ ಕಾರಣದಿಂದ ನಾನು ಯೆಹೂದ್ಯರಲ್ಲದವರ ನಡುವೆ ನಿಮ್ಮನ್ನು ಕೊಂಡಾಡುವೆನು ನಿಮ್ಮ ನಾಮವನು ಸಂಕೀರ್ತಿಸುವೆನು.”
ಶುಭಸಂದೇಶ : ಮತ್ತಾಯ 3:1-12
1 : ಆ ಕಾಲದಲ್ಲಿ ಸ್ನಾನಿಕ ಯೊವಾನ್ನನು ಜುದೇಯ ಪ್ರಾಂತ್ಯದ ಬೆಂಗಾಡಿಗೆ ಹೋಗಿ ಬೋಧನೆ ಮಾಡಲು ಪ್ರಾರಂಭಿಸಿದನು.
2 : "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯವು ಸಮೀಪಿಸಿತು," ಎಂದು ಸಾರಿಹೇಳುತ್ತಾ ಬಂದನು.
3 : "ಸರ್ವೇಶ್ವರನಿಗೆ ಮಾರ್ಗವನ್ನು ನೇರಪಡಿಸಿರಿ, ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ, ಎಂದು ಬೆಂಗಾಡಿನಲ್ಲೊಬ್ಬನು ಘೋಷಿಸುತ್ತಿದ್ದಾನೆ," ಎಂದು ಪ್ರವಾದಿ ಯೆಶಾಯನು ಸೂಚಿಸಿದ ವ್ಯಕ್ತಿ ಈತನೇ.
4 : ಒಂಟೆ ತುಪ್ಪಟದ ಹೊದಿಕೆ, ಸೊಂಟದಲ್ಲಿ ತೊಗಲಿನ ನಡುಕಟ್ಟು - ಇವೇ ಈತನ ಉಡುಗೆ. ಮಿಡತೆ ಮತ್ತು ಕಾಡುಜೇನು ಇವೇ ಈತನ ಆಹಾರ.
5 : ಜನರು ಜೆರುಸಲೇಮಿನಿಂದಲೂ ಇಡೀ ಜುದೇಯ ಪ್ರಾಂತ್ಯದಿಂದಲೂ ಜೋರ್ಡನ್ ನದಿಯ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಈತನ ಬಳಿಗೆ ಬರುತ್ತಿದ್ದರು;
6 : ತಮ್ಮ ತಮ್ಮ ಪಾಪಗಳನ್ನು ಒಪ್ಪಿಕೊಳ್ಳುತ್ತಾ ಜೋರ್ಡನ್ ನದಿಯಲ್ಲಿ ಈತನಿಂದ ಸ್ನಾನದೀಕ್ಷೆಯನ್ನು ಪಡೆಯುತ್ತಿದ್ದರು.
7 : ಫರಿಸಾಯರಲ್ಲೂ ಸದ್ದುಕಾಯರಲ್ಲೂ ಅನೇಕರು ತನ್ನಿಂದ ಸ್ನಾನದೀಕ್ಷೆ ಪಡೆಯಲು ಬರುವುದನ್ನು ಯೊವಾನ್ನನು ನೋಡಿದನು. ಅವರನ್ನು ಉದ್ದೇಶಿಸಿ, "ಎಲೈ ವಿಷಸರ್ಪಗಳ ಪೀಳಿಗೆಯೇ, ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳಬಹುದೆಂದು ನಿಮಗೆ ಎಚ್ಚರಿಕೆ ಕೊಟ್ಟವರಾರು?
8 : ನೀವು ಪಾಪಕ್ಕೆ ವಿಮುಖರಾಗಿದ್ದೀರಿ ಎಂಬುದನ್ನು ಸತ್ಕಾರ್ಯಗಳಿಂದ ವ್ಯಕ್ತಪಡಿಸಿರಿ.
9 : ‘ಅಬ್ರಹಾಮನೇ ನಮ್ಮ ಪಿತಾಮಹ’ ಎಂದು ನಿಮ್ಮಲ್ಲೇ ಕೊಚ್ಚಿಕೊಳ್ಳಬೇಡಿ. ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಸಂತಾನ ಪ್ರಾಪ್ತವಾಗುವಂತೆ ಮಾಡಬಲ್ಲರೆಂದು ನಾನು ನಿಮಗೆ ಹೇಳುತ್ತೇನೆ.
10 : ಈಗಾಗಲೇ ಮರದ ಬುಡಕ್ಕೆ ಕೊಡಲಿ ಬಿದ್ದಿದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು.
11 : ಹೃದಯ ಪರಿವರ್ತನೆಯ ಗುರುತಾಗಿ ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ಆದರೆ ನನ್ನ ನಂತರ ಬರುವ ಒಬ್ಬರು ನಿಮಗೆ ಪವಿತ್ರಾತ್ಮ ಹಾಗೂ ಅಗ್ನಿಯಿಂದ ದೀಕ್ಷಾಸ್ನಾನ ಕೊಡುವರು. ಅವರು ನನಗಿಂತಲೂ ಶಕ್ತರು. ಅವರ ಪಾದರಕ್ಷೆಗಳನ್ನು ಹೊರಲು ಸಹ ನಾನು ಅರ್ಹನಲ್ಲ.
12 : ಅವರ ಕೈಯಲ್ಲಿ ಮೊರವಿದೆ; ತಮ್ಮ ಕಣದಲ್ಲಿಯ ರಾಶಿಯನ್ನು ತೂರುವರು. ಗಟ್ಟಿ ಕಾಳನ್ನು ಮಾತ್ರ ಕಣಜಕ್ಕೆ ತುಂಬುವರು; ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟು ಹಾಕುವರು," ಎಂದು ಎಚ್ಚರಿಸಿದನು.
ಚಿಂತನೆ
ಯೊವಾನ್ನಾನ ಬೋಧನೆಯ ಸಾರಾಂಶ: ಪಶ್ಚಾತ್ತಾಪ ಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖವಾಗಿರಿ. ಯೇಸುವಿಗಾಗಿ ಹಾದಿಯನ್ನು ಸಿದ್ಧಪಡಿಸಲು ಬಂದವನೇ ಸ್ನಾನಿಕ ಯೊವಾನ್ನ. ಯೊವಾನ್ನನಿಗೆ ತಾನು ಯಾರು, ಏನು ಮಾಡಬೇಕು, ಗುರಿ ಮತ್ತು ಉದ್ದೇಶ ಸ್ಪಷ್ಟವಾಗಿತ್ತು. ದೇವರನ್ನು ಸ್ವೀಕರಿಸಲು ನಾವು ಪಾಪನಿಂದ ವಿಮುಖರಾಗಬೇಕು. ರಕ್ಷಕನ ಆಗಮನವು ಸನಿಹವಾಗಿರುವುದರಿಂದ ನಾವು ತ್ವರಿತವಾಗಿ ತಯಾರಾಗಬೇಕೆಂದು ಯೊವಾನ್ನ ಕರೆ ನೀಡುತ್ತಿದ್ದಾನೆ.
ಸರ್ವೇಶ್ವರ ಸ್ವಾಮಿಗೆ ಮಾರ್ಗವನ್ನು ಸಿದ್ಧಮಾಡಿ, ಆತನ ಹಾದಿಯನ್ನು ಸರಾಗಮಾಡಿ ಎಂಬ ಪ್ರವಾದಿಯ ಮಾತುಗಳು ನಮ್ಮ ಬದುಕನ್ನು ಸರಿಮಾಡಬೇಕು. ಹಳ್ಳಕೊಳ್ಳಗಳು ಮಟ್ಟವಾಗಬೇಕು ತಗ್ಗು ಮುಗ್ಗಾದ ಸ್ಥಳ ಸಮತಲವಾಬೇಕು, ಹಾದಿ ಸುಗಮವಾಗಬೇಕು. ಅಂದರೆ ನಮ್ಮ ಜೀವನದಲ್ಲಿ ಬದಲಾವಣೆ ಯಾಗಬೇಕು, ಕೆಟ್ಟಮಾರ್ಗ ತೊರೆದು ದೇವರ ಹಾದಿಯಲ್ಲಿ ಸಾಗಬೇಕು. ಅಹಂಕಾರ, ದರ್ಪ ಜಂಭದ ಬೆಟ್ಟಗುಡ್ಡಗಳು ಮಟ್ಟವಾಗಬೇಕು. ಕಳ್ಳತನ, ಮೋಸ, ವಂಚನೆ, ಅನ್ಯಾಯ, ಅನೀತಿ, ಲೋಭ, ಕಾಮುಕತನ, ಸ್ವಾರ್ಥ, ಅನೈತಿಕತೆಯಿಂದ ಅಂಕುಡೊಂಕಾಗಿರುವ ಬದುಕು ಸರಿಯಾಗಬೇಕು. ಈ ಆಗಮನ ಕಾಲ ಪರಿವರ್ತನೆಯ, ಪಶ್ಚಾತ್ತಾಪದ ಕಾಲವಾಗಲಿ, ಈ ಕಾಲದಲ್ಲಿ ಬೇರೆಯವರನ್ನು ಬದಲಿಸುವ ಮುನ್ನ ನಮ್ಮನ್ನು ನಾವು ಬದಲಾಯಿಸಿಕೊಳ್ಳೋಣ. ಲೌಕಿಕ ವಿಷಯಗಳಿಗಿಂತ ಆಧ್ಯಾತ್ಮಿಕ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡೋಣ.
No comments:
Post a Comment