Sunday, 15 December 2019

ಆಗಮನ ಕಾಲದ ಮೂರನೆಯ ಮಂಗಳವಾರ

ಡಿಸೆಂಬರ್ 17/  2019
ಆಗಮನ ಕಾಲದ ಮೂರನೆಯ ಮಂಗಳವಾರ
ಮೊದಲನೇ ವಾಚನ:  ಆದಿಕಾಂಡ 49:2, 8-10
 ಕೀರ್ತನೆ:  72:3-4, 7-8, 17
ಶುಭಸಂದೇಶ : ಮತ್ತಾಯ 1: 1-17
----------------
ಮೊದಲನೇ ವಾಚನ:  ಆದಿಕಾಂಡ 49:2, 8-10
2 : ಯಕೋಬನ ಮಕ್ಕಳೇ, ಕೂಡಿಬಂದು ಕೇಳಿ ನೀವೆಲ್ಲರು ಆಲಿಸಿ ನಿಮ್ಮ ತಂದೆ ಇಸ್ರಯೇಲನ ಮಾತನ್ನು:
8 : ಯೆಹೂದನೇ, ವಂದಿಸುವರು ನಿನ್ನನು ಸಹೋದರರು ನಿನ್ನ ಕೈಯಲ್ಲಿರುವುದು ಶತ್ರುಗಳ ಕುತ್ತಿಗೆಯು ಎರಗುವರು ನಿನಗೆ ನಿನ್ನ ಅಣ್ಣತಮ್ಮಂದಿರು.
9 : ನನ್ನ ಪುತ್ರ ಯೆಹೂದ, ನೀ ಪ್ರಾಯದ ಸಿಂಹದಂತೆ ಬೇಟೆಹಿಡಿದು ಬೆಟ್ಟ ಏರಿದ ಕಂಠೀರವನಂತೆ ಕಾಲು ಮಡಿಚಿ ಹೊಂಚು ಕೂತ ಕೇಸರಿಯಂತೆ ಈ ಸಿಂಹಿಣಿಯನ್ನು ಕೆಣಕುವ ಕೆಚ್ಚು ಯಾರಿಗಿದೆ?
10 : ರಾಜ್ಯಾಧಿಕಾರ ಪಡೆದವನು ಬರುವ ತನಕ ರಾಷ್ಟ್ರಗಳು ಆತನಿಗೆ ತಲೆಬಾಗುವ ತನಕ ತಪ್ಪದು ರಾಜದಂಡ ಯೆಹೂದನ ಕೈಯಿಂದ ಕದಲದು ಮುದ್ರೆಕೋಲು ಅವನ ವಂಶದಿಂದ.
----------
ಕೀರ್ತನೆ:  72:3-4, 7-8, 17
3 : ಬೆಟ್ಟಗುಡ್ಡಗಳಿಂದ ಬರಲಿ ಸಮೃದ್ಧಿ / ನಿನ್ನ ಪ್ರಜೆಗೆ ಫಲಿಸಲಿ ನ್ಯಾಯನೀತಿ //
4 : ದೀನದಲಿತರನಾತ ಉದ್ಧರಿಸಲಿ / ಬಡಬಗ್ಗರಿಗೆ ನ್ಯಾಯ ದೊರಕಿಸಲಿ / ಪ್ರಜಾಹಿಂಸಕರನು ಸದೆಬಡಿಯಲಿ //
5 : ಆತನು ಬಾಳಲಿ ಆಚಂದ್ರಾರ್ಕನಾಗಿ / ತಲತಲಾಂತರಕು ಭಯಭಕುತಿಯಿಂದಿರಲಿ //
6 : ಹುಲ್ಲುಕೊಯ್ದ ಹೊಲದ ಮೇಲೆ ಸುರಿವ ವೃಷ್ಟಿಯಂತೆ / ಬರಲಿ ಆತ ಒಣನೆಲವ ತೋಯ್ವ ಹದ ಮಳೆಯಂತೆ //
7 : ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ / ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ //
8 : ಸಾಗರದಿಂದ ಸಾಗರದವರೆಗಿರಲಿ ಆತನ ಆಧಿಪತ್ಯ / ಮಹಾ ನದಿಯಿಂದ ಬುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ //
17 : ಶಾಶ್ವತವಾಗಲಿ ಶ್ರೀನಾಮ ಆತನಿಗೆ / ಬೆಳಗಲಿ ಆತನ ಕೀರ್ತಿ ಸೂರ್ಯನಿರುವವರೆಗೆ / ಆತನಾಶೀರ್ವಾದ ಕೋರಲಿ ಸರ್ವರು ತಮಗೆ / ಶುಭವೆನ್ನಲಿ ಸಕಲ ರಾಷ್ಟ್ರಗಳು ಆತನಿಗೆ //
-----------
ಶುಭಸಂದೇಶ : ಮತ್ತಾಯ 1: 1-17
1 : ಅಬ್ರಹಾಮನ ಮನೆತನಕ್ಕೆ ಸೇರಿದ ದಾವೀದ ಕುಲದ ಯೇಸುಕ್ರಿಸ್ತರ ವಂಶಾವಳಿ:
2 : ಅಬ್ರಹಾಮನಿಗೆ ಇಸಾಕನು, ಇಸಾಕನಿಗೆ ಯಕೋಬನು, ಯಕೋಬನಿಗೆ ಯೂದ ಹಾಗೂ ಆತನ ಸಹೋದರರು ಹುಟ್ಟಿದರು.
3 : ಯೂದನಿಗೆ ತಾಮರ ಎಂಬವಳಿಂದ ಪೆರಸ್ ಹಾಗೂ ಜೆರಹನ್ ಹುಟ್ಟಿದರು.
4 : ಪೆರಸನಿಗೆ ಹೆಸ್ರೋನ್, ಹೆಸ್ರೋನನಿಗೆ ರಾಮ್, ರಾಮನಿಗೆ ಅಮ್ಮಿನದಾಬ್, ಅಮ್ಮಿನದಾಬನಿಗೆ ನಹಸ್ಸೋನ್, ನಹಸ್ಸೋನನಿಗೆ ಸಲ್ಮೋನ್,
5 : ಸಲ್ಮೋನನಿಗೆ ರಹಾಬ್ ಎಂಬವಳಿಂದ ಬೋವಜ್, ಬೋವಜನಿಗೆ ರೂತ್ ಎಂಬವಳಿಂದ ಓಬೇದ್, ಓಬೇದನಿಗೆ ಜೆಸ್ಸೆಯ,
6 : ಜೆಸ್ಸೆಯನಿಗೆ ದಾವೀದರಸನು ಹುಟ್ಟಿದರು. ದಾವೀದನಿಗೆ ಊರಿಯನ ಹೆಂಡತಿಯಿಂದ ಸೊಲೊಮೋನ್,
7 : ಸೊಲೊಮೋನನಿಗೆ ರೆಹಬ್ಬಾಮ, ರೆಹಬ್ಬಾಮನಿಗೆ ಅಬೀಯ,ಅಬೀಯನಿಗೆ ಆಸನ್ ಹುಟ್ಟಿದರು
8 : ಆಸನನಿಗೆ ಯೋಸೆಫಾತ್, ಯೋಸೆಫಾತನಿಗೆ ಯೆಹೋರಾಮ್, ಯೆಹೋರಾಮನಿಗೆ ಉಜ್ಜೀಯ ಹುಟ್ಟಿದರು.
9 : ಉಜ್ಜೀಯನಿಗೆ ಯೋತಾಮ್, ಯೋತಾಮನಿಗೆ ಅಹಾಜ್, ಅಹಾಜನಿಗೆ ಹಿಜ್ಕೀಯನು ಹುಟ್ಟಿದರು.
10 : ಹಿಜ್ಕೀಯನಿಗೆ ಮನಸ್ಸೆ, ಮನಸ್ಸೆಗೆ ಆಮೋನ್,
11 : ಆಮೋನನಿಗೆ ಯೋಷೀಯ ಹುಟ್ಟಿದರು. ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು. ಈ ಸಮಯದಲ್ಲೇ ಇಸ್ರಯೇಲರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು.
12 : ಬಾಬಿಲೋನಿಗೆ ಸೆರೆಹೋದ ದಾಸ್ಯದಿನಗಳು ಮುಗಿದ ಮೇಲೆ ಯೆಕೊನ್ಯನಿಗೆ ಸಲಥಿಯೇಲ್ , ಸಲಥಿಯೇಲನಿಗೆ ಜೆರುಬಾಬೆಲ್
13 : ಜೆರುಬಾಬೆಲನಿಗೆ ಅಬೀಹೂದ್, ಅಬಿಹೂದನಿಗೆ ಎಲ್ಯಕೀಮ್, ಎಲ್ಯಕೀಮನಿಗೆ ಅಜೋರ್ ಹುಟ್ಟಿದರು.
14 : ಅಜೋರನಿಗೆ ಸದೋಕ್, ಸದೋಕನಿಗೆ ಅಖೀಮ್, ಅಖೀಮನಿಗೆ ಎಲಿಹೂದ್,
15 : ಎಲಿಹೂದನಿಗೆ ಎಲಿಯಾಜರ್, ಎಲಿಯಾಜರನಿಗೆ ಮತ್ತಾನ್, ಮತ್ತಾನನಿಗೆ ಯಕೋಬ್ ಹುಟ್ಟಿದರು. ಯಕೋಬನಿಗೆ ಮರಿಯಳ ಪತಿಯಾದ ಜೋಸೆಫನು ಹುಟ್ಟಿದನು.
16 : ಈ ಮರಿಯಳಿಂದಲೇ "ಕ್ರಿಸ್ತ" ಎಂದು ಕರೆಯಲಾಗುವ ಯೇಸುಸ್ವಾಮಿ ಹುಟ್ಟಿದ್ದು;
17 : ಹೀಗೆ ಒಟ್ಟು, ಅಬ್ರಹಾಮನಿಂದ ದಾವೀದನವರೆಗೆ ಹದಿನಾಲ್ಕು, ದಾವೀದನಿಂದ ಬಾಬಿಲೋನಿನ ದಾಸ್ಯದಿನಗಳವರೆಗೆ ಹದಿನಾಲ್ಕು, ಬಾಬಿಲೋನಿನ ದಾಸ್ಯ ದಿನಗಳಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು.
---------------
ಚಿಂತನೆ
ಸಾಂಕೇತಿಕ ರೂಪದಲ್ಲಿ ಈ ವಂಶಾವಳಿಯು ಆಳವಾದ ಅರ್ಥವನ್ನು ನೀಡುತ್ತದೆ. ಇದು ದೇವರ ಕೃಪೆಯನ್ನು ಸಾರುತ್ತದೆ. ಯೆಹೂದ್ಯರ ಮತ್ತು ಅನ್ಯಧರ್ಮಗಳ ಮಧ್ಯ ಇದ್ದ ದೊಡ್ಡ ತಡೆಗೋಡೆಯನ್ನು ಯೇಸು ಮುರಿದು ಹಾಕುತ್ತಾರೆ. ಯೇಸುವಿನಲ್ಲಿ ಎಲ್ಲರು ಒಂದೇ. ಗಂಡು ಮತ್ತು ಹೆಣ್ಣು ದೇವರ ಸೃಷ್ಟಿ, ಇಬ್ಬರಿಗೂ ಒಂದೇ ರೀತಿಯ ಗೌರವ ಮತ್ತು ಸನ್ಮಾನ ದೇವರು ಪಾಪಿಗಳನ್ನು ತಮ್ಮ ಯೋಜನೆಗೆ ಆರಿಸಿಕೊಳ್ಳಬಲ್ಲರು ಎಂಬುದು ವಂಶಾವಳಿಯಲ್ಲಿ ಸ್ಪಷ್ಟವಾಗಿದೆ.
ಮತ್ತೊಂದು ಮುಖ್ಯವಾದ ಸಂಗತಿಯೆಂದರೆ ಈ ವಂಶಾವಳಿಯಲ್ಲಿ ಬರುವ ನಾಲ್ಕು ಮಹಿಳೆಯರು. ಜೆರಿಕೊವಿನಲ್ಲಿ ವೇಶ್ಯಯಾಗಿ ಜೀವನ ನಡೆಸುತ್ತಿದ್ದ ರಾಹಾಬಳನ್ನು (ಯೆಹೋಶವ ೨:೧-೭), ಮೋವಬ್ಯ ನಾಡಿಗೆ ಸೇರಿದ್ದ ರೂತಳು (ರೂತಳು ೧:೪), ತನ್ನ ಮಾವನಿಂದಲೇ ಪೆರಚ್ ಮತ್ತು ಜೆರಹ ಎಂಬ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಮರಳನ್ನು (ಆದಿಕಾಂಡ ೩೮) ಮತ್ತು ಅರಸ ದಾವೀದ ವ್ಯಭಿಚಾರ ಮಾಡಿದ ಬತ್ಷೆಬೆಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಮೂಲಕ ಯೇಸು ಪಾಪಿಗಳನ್ನು, ಸನ್ಮಾರ್ಗದಿಂ ದೂರಹೋದವರನ್ನು ಪುಣ್ಯ ಜೀವನದತ್ತ ಕರೆದೊಯ್ಯಲು ಬರುತ್ತಾರೆ ಎಂಬ ಸಂದೇಶ ನೀಡಲಾಗಿದೆ.

No comments:

Post a Comment