ಡಿಸೆಂಬರ್ 16/ 2019
ಆಗಮನ ಕಾಲದ ಮೂರನೆಯ ಸೋಮವಾರ
ಮೊದಲನೇ ವಾಚನ: ಸಂಖ್ಯಾಕಾಂಡ 24:2-7, 15-17
ಕೀರ್ತನೆ: 25:4-5, 6-7, 8-9
ಶುಭಸಂದೇಶ : ಮತ್ತಾಯ 21:23-27
------------
ಮೊದಲನೇ ವಾಚನ: ಸಂಖ್ಯಾಕಾಂಡ 24:2-7, 15-17
2 : ಕುಲಗಳ ಅನುಸಾರ ಡೇರೆಗಳನ್ನು ಹಾಕಿಕೊಂಡಿದ್ದ ಇಸ್ರಯೇಲರು ಅವನಿಗೆ ಕಾಣಿಸಿದರು.
3 : ಆಗ ಅವನು ದೇವಾತ್ಮ ಪ್ರೇರಿತನಾಗಿ ಪದ್ಯರೂಪದಲ್ಲಿ ಇಂತೆಂದು ಭವಿಷ್ಯ ನುಡಿದನು: “ಇದು ಬೆಯೋರನ ಮಗ ಬಿಳಾಮನ ಭವಿಷ್ಯವಾಣಿ: ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ.
4 : ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದಾ ವ್ಯಕ್ತಿಯ ವಾಣಿ.
5 : ಯಕೋಬ್ಯರೇ, ನಿಮ್ಮ ಡೇರೆಗಳೆಷ್ಟು ರಮ್ಯ ! ಇಸ್ರಯೇಲರೇ, ನಿಮ್ಮ ನಿವಾಸಗಳೆಷ್ಟು ಸುಂದರ !
6 : ಅವಿವೆ ಉದ್ದುದ್ದ ಚಾಚಿಕೊಂಡಿರುವ ಕಣಿವೆಗಳಂತೆ ನದಿಯ ಬಳಿಯಿರುವ ತೋಟಗಳಂತೆ ಸರ್ವೇಶ್ವರ ನೆಟ್ಟ ಅಗರುಮರಗಳಂತೆ. ನೀರ ಬದಿಯ ದೇವದಾರು ವೃಕ್ಷಗಳಂತೆ.
7 : ನೀರು ಹರಿಯುತ್ತಲೇ ಇದೆ ಅವರ ಕಪಿಲೆಗಳಿಂದ ಅವರ ಬಿತ್ತನೆಗೆ ನೀರಿನ ಕೊರತೆಯೆಂಬುದಿಲ್ಲ. ಅಗಾಗ್‍ರಾಜನಿಗಿಂತ ಶ್ರೇಷ್ಠ ಅವರ ಅರಸ ಅಭಿವೃದ್ಧಿಯಾಗುತ್ತಿದೆ ಅವರ ರಾಜ್ಯ.
15 : ಪದ್ಯರೂಪವಾಗಿ ಹೀಗೆಂದನು: “ಬೆಯೋರನ ಮಗ ಬಿಳಾಮನು ನುಡಿದ ಭವಷ್ಯವಾಣಿ:
16 : ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ ಪರಾತ್ಪರನ ಜ್ಞಾನವನ್ನು ಪಡೆದವನ ವಾಣಿ ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದವನ ಭವಿಷ್ಯವಾಣಿ:
17 : ಒಬ್ಬಾತನನ್ನು ನೋಡುತ್ತಿದ್ದೇನೆ; ಆತ ಈಗಿನವನಲ್ಲ. ಆತ ಕಾಣಿಸುತ್ತಾನೆ, ಆದರೆ ಸಮೀಪದಲ್ಲಿಲ್ಲ. ನಕ್ಷತ್ರಪ್ರಾಯನೊಬ್ಬನು ಉದಯಿಸಿದ್ದಾನೆ ಯಕೋಬವಂಶದಲ್ಲಿ ರಾಜದಂಡ ಹಿಡಿದವನು ಕಂಡು ಬಂದಿದ್ದಾನೆ ಇಸ್ರಯೇಲರಲ್ಲಿ. ಆತ ಸೀಳಿಹಾಕಿದ್ದಾನೆ ಮೊವಾಬ್ಯರ ತಲೆಯನ್ನು; ಕೆಡವಿಬಿಟ್ಟಿದ್ದಾನೆ ಯುದ್ಧವೀರರೆಲ್ಲರನ್ನು.
---------------
ಕೀರ್ತನೆ: 25:4-5, 6-7, 8-9
4 : ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು / ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು //
5 : ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ / ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ //
6 : ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು / ಆದಿಯಿಂದ ನೀ ತೋರಿದಚಲ ಪ್ರೀತಿಯನು //
7 : ಯೌವನದೆನ್ನ ಪಾಪ ಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ / ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ //
8 : ತ್ಯಸ್ವರೂಪನು, ದಯಾವಂತನು ಪ್ರಭು / ದಾರಿತಪ್ಪಿದವರಿಗೆ ಬೋಧಕನು ವಿಭು //
9 : ದೀನರನು ನಡೆಸುವನು ತನ್ನ ವಿಧಿಗನುಸಾರ / ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ //
--------------
ಶುಭಸಂದೇಶ : ಮತ್ತಾಯ 21:23-27
23 : ತರುವಾಯ ಯೇಸುಸ್ವಾಮಿ ಮಹಾ ದೇವಾಲಯದ ಒಳಕ್ಕೆ ಹೋಗಿ ಅಲ್ಲಿ ಬೋಧನೆ ಮಾಡತೊಡಗಿದರು. ಮುಖ್ಯ ಯಾಜಕರೂ ಪ್ರಜಾಪ್ರಮುಖರೂ ಅವರ ಬಳಿಗೆ ಬಂದು, “ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರಾರು?” ಎಂದು ಪ್ರಶ್ನಿಸಿದರು.
24 : ಅದಕ್ಕೆ ಯೇಸು, “ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ; ಅದಕ್ಕೆ ನೀವು ಉತ್ತರಕೊಟ್ಟರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ.
25 : ‘ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ, ಮನುಷ್ಯರಿಂದಲೋ?’ ” ಎಂದು ಕೇಳಿದರು.
26 : ಅದಕ್ಕೆ ಅವರು ತಮ್ಮತಮ್ಮೊಳಗೇ ಹೀಗೆಂದು ತರ್ಕ ಮಾಡಲಾರಂಭಿಸಿದರು: “ದೇವರಿಂದ ಬಂತು ಎಂದು ಉತ್ತರಿಸಿದರೆ, ‘ಹಾಗಾದರೆ ನೀವೇಕೆ ಆತನನ್ನು ನಂಬಲಿಲ್ಲ?’ ಎಂದು ಕೇಳುವನು. ‘ಮನುಷ್ಯರಿಂದ ಬಂತು’ ಎಂದು ಹೇಳಿದೆವಾದರೆ ಜನಸಮೂಹಕ್ಕೆ ನಾವು ಭಯಪಡಬೇಕಾಗಿದೆ. ಏಕೆಂದರೆ ಯೊವಾನ್ನನು ಒಬ್ಬ ಪ್ರವಾದಿಯೆಂದು ಸರ್ವರೂ ಸನ್ಮಾನಿಸುತ್ತಾರೆ” ಎಂದುಕೊಂಡರು.
27 : ಬಳಿಕ ಬಂದು, “ನಮಗೆ ಗೊತ್ತಿಲ್ಲ,” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು, “ಹಾಗಾದರೆ, ನಾನು ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.
-----------
ಚಿಂತನೆ
ಯೇಸುವಿನ ಬಹಿರಂಗ ಜೀವನ, ದೇವಾಲಯದ ಶುದ್ದತೆ, ಕುರುಡು ಕುಂಟರನ್ನು ಸ್ವಸ್ಥಪಡಿಸುವಿಕೆಯನ್ನು ಯೆಹೂದ್ಯ ಅಧಿಕಾರಿಗಳು ಪ್ರಶ್ನಿಸುತ್ತಾರೆ. ಧಾರ್ಮಿಕ ಆಚರಣೆಗಳಲ್ಲಿ. ಸಾಮಾನ್ಯ ಜನರಿಗೆ ಯಾವುದೇ ಪಾಲಿರಲಿಲ್ಲ. ಅವರ ಪ್ರಕಾರ ಯೇಸು ಯಾಜಕನಾಗಲಿ ಅಥವಾ ಅಭಿಷೇಕಿಸಲ್ಪಡದ ವ್ಯಕ್ತಿ. ಹಾಗಾಗಿ ಯೇಸುವಿಗೆ ಯಾವುದೇ ಅಧಿಕಾರವಿಲ್ಲ ಎಂಬುದು ಯೆಹೊದ್ಯ ಪಂಡಿತರವಾದವಾಗಿತ್ತು. ಆದರೆ ಯೇಸು ಪಿತನಿಂದ ಬಂದವರು. ಪವಿತ್ರಾತ್ಮರಿಂದ ಅಭಿಷೇಕಿಸಲ್ಪಟ್ಟ ಪ್ರಧಾನ ಯಾಜಕ ಎಂಬುದನ್ನು ಅರಿಯಲು ವಿಫಲರಾದರು. ಯೇಸು ಅಧಿಕಾರಪಡೆದದ್ದು ತಮ್ಮ ತಂದೆಯಿಂದ ಯೇಸುವನ್ನು ಸಂಕಷ್ಟಕ್ಕೆ ಸಿಲುಕಿಸಲು ಪ್ರಯತ್ನಿಸಿದ ಮುಖ್ಯ ಯಾಜಕರು ತಾವೇ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಯೇಸುವಿನಲ್ಲಿದ್ದ ಸಮಯ ಪ್ರಜ್ಞೆ, ವಿವೇಚನೆ ನಮ್ಮಲ್ಲೂ ಮೂಡಿದರೆ ಇತರರ ಕುಯುಕ್ತಿಯಿಂದ ಪಾರಾಗಬಹುದು.
-------------
No comments:
Post a Comment