Tuesday, 24 December 2019

ಪವಿತ್ರ ಕುಟುಂಬದ ಹಬ್ಬ

ಡಿಸೆಂಬರ್ 29/ 2019
ಪವಿತ್ರ ಕುಟುಂಬದ ಹಬ್ಬ
ಸಂತ ಥೋಮಸ್ ಬೆಕೆಟ್
ಮೊದಲನೇ ವಾಚನ: ಸಿರಾಖ 3:2-6, 12-14
ಎರಡನೇಯ ವಾಚನ : ಕೊಲೊಸ್ಸೆಯರಿಗೆ 3:12-21
ಕೀರ್ತನೆ: 128:1-2, 3, 4-5
ಶುಭಸಂದೇಶ : ಮತ್ತಾಯ 2:13-15, 19-23
-------------------
ಮೊದಲನೇ ವಾಚನ: ಸಿರಾಖ 3:2-6, 12-14
2 : ಸರ್ವೇಶ್ವರ, ಮಕ್ಕಳಿಗಿಂತ ಮಿಗಿಲಾಗಿ ತಂದೆಗೆ ಗೌರವ ನೀಡಿದ್ದಾರೆ ಗಂಡುಮಕ್ಕಳ ಮೇಲೆ ತಾಯಿಗೆ ಅಧಿಕಾರವನ್ನು ಅನುಗ್ರಹಿಸಿದ್ದಾರೆ.
3 : ತಂದೆಯನ್ನು ಸನ್ಮಾನಿಸುವವನು ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿದವನಂತೆ;
4 : ತಾಯಿಯನ್ನು ಗೌರವಿಸುವವನು, ನಿಧಿ ಶೇಖರಿಸಿಟ್ಟುಕೊಂಡವನಂತೆ.
5 : ತಂದೆಯನ್ನು ಗೌರವಿಸುವವನಿಗೆ ತನ್ನ ಸ್ವಂತ ಮಕ್ಕಳಿಂದ ಆಗುವುದು ಸಂತೋಷ ಅವನು ಪ್ರಾರ್ಥನೆ ಮಾಡುವಾಗಲೆಲ್ಲ ದೊರಕುವುದವನಿಗೆ ಪ್ರತ್ಯುತ್ತರ.
6 : ತಂದೆಯನು ಗೌರವಿಸುವವನು ಬದುಕುವನು ಬಹುಕಾಲ ಸರ್ವೇಶ್ವರನಿಗೆ ವಿಧೇಯನಾಗಿರುವವನು ತಾಯಿಗೆ ಬರಮಾಡುವನು ಸಮಾಧಾನ.
12 : ಮಗನೇ, ನಿನ್ನ ಮುಪ್ಪಿನ ತಂದೆಗೆ ಸಹಾಯಕನಾಗಿರು ಅವನು ಬದುಕುವವರೆಗೆ ಅವನ ಮನಸ್ಸನು ನೋಯಿಸದಿರು.
13 : ತಾಳ್ಮೆಯಿಂದಿರು ಅವನ ಬುದ್ಧಿ ಮಂಕಾದಾಗ ಅವನನ್ನು ಹೀನೈಸಬೇಡ ನೀನು ಬಲವಂತನಾಗಿರುವಾಗ.
14 : ತಂದೆಗೆ ಮಾಡಿದ ಉಪಶಮನ ಅಳಿದು ಹೋಗದು ಬದಲಿಗೆ, ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಪರಿಣಮಿಸುವುದು.
--------------------
ಕೀರ್ತನೆ: 128:1-2, 3, 4-5
 ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು / ಧನ್ಯನು, ಆತನ ಮಾರ್ಗಗಳಲೇ ನಡೆಯುವವನು
1 : ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು / ಧನ್ಯನು, ಆತನ ಮಾರ್ಗಗಳಲೇ ನಡೆಯುವವನು
2 : ನಿನ್ನ ಕೈಕೆಸರಾದರೆ ಬಾಯಿ ಮೊಸರಾಗುವುದು / ಧನ್ಯನಾಗುವೆ ನೀನು; ನಿನಗೆ ಶುಭವಾಗುವುದು
3 : ಇರುವಳು ನಿನ್ನ ಪತ್ನಿ ಮನೆಯಲ್ಲಿ ಫಲಭರಿತ ದ್ರಾಕ್ಷಾಲತೆಯಂತೆ / ಕೂರುವರು ನಿನ್ನ ಮಕ್ಕಳು ಊಟದ ಪಂಕ್ತಿಯಲಿ ಓಲಿವ್ ಸಸಿಗಳಂತೆ
4 : ಹೊಂದುವನು ಅಂತಹ ಆಶೀರ್ವಾದವನು / ಪ್ರಭುವಿನಲಿ ಭಯಭಕ್ತಿಯುಳ್ಳವನು
5 : ಸಿಯೋನಿನಲ್ಲಿರುವ ಪ್ರಭು ನಿನ್ನನು ಆಶೀರ್ವದಿಸಲಿ / ಜೆರುಸಲೇಮಿನ ಏಳ್ಗೆಯನು ಕಾಣು ಇಡೀ ಜೀವಮಾನದಲಿ
6 : ಮಕ್ಕಳ ಮಕ್ಕಳನು ನೀನು ಕಾಣುವಂತಾಗಲಿ / ಇಸ್ರಯೇಲಿನ ಮಕ್ಕಳಿಗೆ ಸುಖಶಾಂತಿ ಲಭಿಸಲಿ //
-----------------------
ಎರಡನೇಯ ವಾಚನ : ಕೊಲೊಸ್ಸೆಯರಿಗೆ 3:12-21
12 : ನೀವು ದೇವರಿಂದ ಆಯ್ಕೆಯಾದವರು. ದೇವರಿಗೆ ಪ್ರಿಯವಾದವರು. ದೇವರ ಸ್ವಂತ ಜನರು. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳೇ ನಿಮ್ಮ ಆಭರಣಗಳಾಗಿರಲಿ.
13 : ಒಬ್ಬರನ್ನೊಬ್ಬರು ಸೈರಿಸಿಕೊಳ್ಳಿ. ಒಬ್ಬನ ಮೇಲೆ ತಪ್ಪು ಹೊರಿಸಲು ಕಾರಣವಿದ್ದರೂ ಕ್ಷಮಿಸಿಬಿಡಿ. ಪ್ರಭು ಯೇಸು ನಿಮ್ಮನ್ನು ಕ್ಷಮಿಸಿದಂತೆ ನೀವೂ ಇತರರನ್ನು ಕ್ಷಮಿಸಿರಿ.
14 : ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯೇ ಸಮಸ್ತವನ್ನು ಸಂಪೂರ್ಣಗೊಳಿಸುವ ಬಂಧನ.
15 : ನಿಮ್ಮ ಹೃನ್ಮನಗಳು ಕ್ರಿಸ್ತಯೇಸುವಿನ ಶಾಂತಿ ಸಮಾಧಾನದಿಂದ ತುಂಬಿರಲಿ. ನೀವು ಒಂದೇ ಶರೀರವಾಗಿ ಬಾಳಲು ಕರೆಯಲ್ಪಟ್ಟಿದ್ದೀರಿ; ಕೃತಜ್ಞತೆ ಉಳ್ಳವರಾಗಿ ಜೀವಿಸಿರಿ.
16 : ಕ್ರಿಸ್ತಯೇಸುವಿನ ವಾಕ್ಯ ನಿಮ್ಮಲ್ಲಿ ನೆಲೆಸಿ ಸಮೃದ್ಧಿಯಾಗಿ ಬೆಳೆಯಲಿ. ಜ್ಞಾನಸಂಪನ್ನರಾಗಿ ಒಬ್ಬರಿಗೊಬ್ಬರು ಉಪದೇಶಮಾಡಿರಿ ಹಾಗೂ ಬುದ್ಧಿಹೇಳಿಕೊಳ್ಳಿರಿ. ಕೃತಜ್ಞತೆಯುಳ್ಳವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಭಕ್ತಿಗೀತೆಗಳಿಂದಲೂ ಹೃದಯಾಂತರಾಳದಿಂದ ದೇವರಿಗೆ ಹಾಡಿರಿ.
17 : ನುಡಿಯಲ್ಲಾಗಲೀ ನಡೆಯಲ್ಲಾಗಲೀ ನೀವು ಏನು ಮಾಡಿದರೂ ಯೇಸುಸ್ವಾಮಿಯ ಹೆಸರಿನಲ್ಲಿಯೇ ಮಾಡಿರಿ. ಅವರ ಮುಖಾಂತರವೇ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.
18 : ಮಹಿಳೆಯರೇ, ನಿಮ್ಮ ನಿಮ್ಮ ಪತಿಯರಿಗೆ ಪ್ರಭು ಮೆಚ್ಚುವಂತೆ ತಗ್ಗಿ ನಡೆದುಕೊಳ್ಳಿರಿ.
19 : ಪುರುಷರೇ, ನಿಮ್ಮ ನಿಮ್ಮ ಪತ್ನಿಯರನ್ನು ಪ್ರೀತಿಸಿರಿ. ಅವರೊಡನೆ ಕಠಿಣವಾಗಿ ವರ್ತಿಸದಿರಿ
20 : ಮಕ್ಕಳೇ, ಎಲ್ಲದರಲ್ಲೂ ನಿಮ್ಮ ತಂದೆತಾಯಿಗಳ ಮಾತು ಕೇಳಿರಿ. ಹೀಗೆ ಮಾಡಿದರೆ ಪ್ರಭುವಿಗೆ ಮೆಚ್ಚುಗೆಯಾಗುತ್ತದೆ.
21 : ತಾಯಿತಂದೆಯರೇ, ನಿಮ್ಮ ಮಕ್ಕಳನ್ನು ಕೆರಳಿಸಿ ಮನಕುಗ್ಗಿಸದಿರಿ.
-----------------------
ಶುಭಸಂದೇಶ : ಮತ್ತಾಯ 2:13-15, 19-23
13 : ಜ್ಯೋತಿಷಿಗಳು ಹೊರಟು ಹೋದಮೇಲೆ ದೇವದೂತನು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, "ಏಳು, ಹೆರೋದನು ಮಗುವನ್ನು ಕೊಂದುಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಓಡಿಹೋಗು. ನಾನು ಪುನಃ ಹೇಳುವ ತನಕ ಅಲ್ಲೇ ಇರು," ಎಂದನು.
14 : ಅದರಂತೆ ಜೋಸೆಫನು ಕೂಡಲೇ ಎದ್ದು ಮಗುವನ್ನೂ ತಾಯಿಯನ್ನೂ ರಾತ್ರೋರಾತ್ರಿಯಲ್ಲೇ ಕರೆದುಕೊಂಡು ಈಜಿಪ್ಟಿಗೆ ತೆರಳಿದನು.
15 : ಹೆರೋದನು ಸಾಯುವ ತನಕ ಅಲ್ಲೇ ಇದ್ದನು. ಈ ಪ್ರಕಾರ, "ಈಜಿಪ್ಟ್ ದೇಶದಿಂದ ನನ್ನ ಕುಮಾರನನ್ನು ಕರೆದನು" ಎಂದು ಪ್ರವಾದಿಯ ಮುಖಾಂತರ ಸರ್ವೇಶ್ವರನು ಹೇಳಿದ್ದ ಪ್ರವಚನ ಈಡೇರಿತು.
19 : ಹೆರೋದನು ಸತ್ತುಹೋದನು. ಆಗ ಈಜಿಪ್ಟಿನಲ್ಲಿದ್ದ ಜೋಸೆಫನಿಗೆ ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು,
20 : “ಏಳು, ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಇಸ್ರಯೇಲ್ ದೇಶಕ್ಕೆ ಹಿಂದಿರುಗು; ಮಗುವನ್ನು ಕೊಲ್ಲಬೇಕೆಂದಿದ್ದವರು ಸತ್ತುಹೋದರು," ಎಂದು ತಿಳಿಸಿದನು.
21 : ಜೋಸೆಫನು ಎದ್ದು ತಾಯಿಯನ್ನೂ ಮಗುವನ್ನೂ ಕರೆದುಕೊಂಡು ಇಸ್ರಯೇಲ್ ದೇಶಕ್ಕೆ ಬಂದನು.
22 : ಆದರೆ ಹೆರೋದನ ಮಗ ಅರ್ಖೆಲಾಯನು ತಂದೆಯ ಬದಲಿಗೆ ಜುದೇಯ ಪ್ರಾಂತ್ಯವನ್ನು ಆಳುತ್ತಿದ್ದಾನೆಂದು ಕೇಳಿ ಜೋಸೆಫನು ಅಲ್ಲಿಗೆ ಹೋಗಲು ಅಂಜಿದನು. ಕನಸಿನಲ್ಲಿ ತಾನು ಪಡೆದ ಆದೇಶದ ಪ್ರಕಾರ ಗಲಿಲೇಯ ಪ್ರಾಂತ್ಯಕ್ಕೆ ತೆರಳಿದನು.
23 : ಅಲ್ಲಿರುವ ನಜರೇತ್ ಊರನ್ನು ಸೇರಿ ವಾಸಮಾಡಿದನು. ಹೀಗೆ, "ಆತನನ್ನು ನಜರೇತಿನವನೆಂದು ಕರೆಯುವರು" ಎಂಬ ಪ್ರವಚನ ನೆರವೇರಿತು.
--------------------
ಚಿಂತನೆ
ಪವಿತ್ರ ಕುಟುಂಬದ ಹಬ್ಬ.
ಪರಸ್ಪರರ ಪ್ರೀತಿ ವಿಶ್ವಾಸಗಳ ಮೇಲೆ ಸ್ಥಾಪನೆಗೊಂಡ ಒಂದು ಸಾಮಾಜಿಕ ವ್ಯವಸ್ಥೆ ಕುಟುಂಬ. ತನ್ನ ಕುಟುಂಬದಲ್ಲಿ ಸರಿಯಾಗಿ ಇಲ್ಲದಿರುವ ಮನುಷ್ಯನು, ಕುಟುಂಬದ ಹೊರಗೆ ಸಮಾಜದಲ್ಲಿ ಸರಿಯಾಗಿ ಇರುವುದು ಸಾಧ್ಯವೇ ಇಲ್ಲ. ಮಾಳಿಗೆ ಇಲ್ಲದಿರುವ ಮನೆ ಇರಬಹುದು. ಆದರೆ ಪ್ರೀತಿ, ಜವಾಬ್ದಾರಿ ಇಲ್ಲದರಿವ ಮನೆಯನ್ನು ಊಹಿಸಿಕೊಳ್ಳುವುದಕ್ಕೂ ಸಾದ್ಯವಿಲ್ಲ, ಇಂದು ನಮ್ಮ ಕುಟುಂಬಗಳ ಕುರಿತು, ಆತ್ಮಶೋಧನೆ ಮಾಡಿಕೊಳ್ಳುವ ದಿನವಿದು. ಒಳ್ಳೆಯ ಕುಟುಂಬವೆಂದರೆ ಮಕ್ಕಳಿಂದ ತಂದೆ-ತಾಯಿಯರಿಗೆ ಸಿಗುವ ಗೌರವ, ತಂದೆ-ತಾಯಿಯರಿಂದ ಮಕ್ಕಳ ವ್ಯಕ್ತಿತ್ವ ರೂಪಿಸಲ್ಪಡುವುದು. ನಮ್ಮ ಕುಟುಂಬಗಳಿಗೆ ಆದರ್ಶ ಬೆತ್ಲೆಹೇಮಿನ ಆ ಪವಿತ್ರ ಕುಟುಂಬ. ಆ ಪವಿತ್ರ ಕುಟುಂಬದಲ್ಲಿದ್ದ ಪಾವಿತ್ರ್ಯತೆ ಮತ್ತು ಸದ್ಗುಣಗಳು ನಮ್ಮ ಕುಟುಂಬದಲ್ಲೂ ಮೋಡಬೇಕು. ಆ ಕುಟುಂಬದಲ್ಲಿ ಬಡತನವಿತ್ತು. ಕಷ್ಟ, ತೊಂದರೆಗಳಿದ್ದವು ಆದರೂ ಅವರಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸ ಮನೆಮಾಡಿತ್ತು. ಎಲ್ಲಕ್ಕಿಂತ ಮಿಗಿಲಾಗಿ ದೇವರ ಆಶೀರ್ವಾದ ಅವರ ಮೇಲಿತ್ತು.
ಒಂದು ಕುಟುಂಬದ ವೈಸಿಷ್ಟ್ಯತೆಯೆಂದರೆ ಯಾವುದೇ ಸಂಸ್ಥೆ ಅಥವಾ ಘಟಕಗಳಲ್ಲಿ ಇಲ್ಲದ ಪ್ರೀತಿ ಇಲ್ಲಿದೆ. ಇಲ್ಲಿ ಯಾವುದೇ ನಿರೀಕ್ಷೆಗಳಿಲ್ಲದ ಸೇವೆ ಮತ್ತು ತ್ಯಾಗವಿದೆ. ಒಂದು ಮಗುವಿನ ವ್ಯಕ್ತಿತ್ವ ರೂಪಗೊಳ್ಳುವುದು. ಕುಟುಂಬದಲ್ಲಿ, ಆದರೆ ಇತ್ತೀಚಿಗೆ ಕುಟುಂಬದಲ್ಲಿ ಭದ್ರತೆ, ಅನ್ಯೋನತೆ ಕಳಚುತ್ತದೆ. ತಂದೆ ತಾಯಿಯರು ವೃದ್ದಾಶ್ರಮ ಸೇರುತ್ತಿದ್ದಾರೆ. ಪ್ರೀತಿ, ಕ್ಷಮೆ, ಹೊಂದಾಣಿಕೆ, ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ. ಈ ಕಾರಣಗಳಿಂದ ಇಂದು ಅನೇಕ ಕುಟುಂಬಗಳು ಭಾಗವಾಗಿವೆ. ಪವಿತ್ರ ಕುಟುಂಬದ ಹಬ್ಬವನ್ನು ಆಚರಿಸುತ್ತಿರುವ ನಾವು ಸಂತ ಜೋಸೆಪ್, ಮಾತೆ ಮರಿಯ ಮತ್ತು ಯೇಸುವಿನಿಂದ ಕಲಿಯಬೇಕಾದ್ದು. ಸಹಿಸಿಕೊಳ್ಳುವ ಮನಸ್ಸು, ಕ್ಷಮಿಸುವ ಹೃದಯ, ಹೊಂದಾಣಿಕೆಯ ಮನೋಭಾವ, ಸ್ವಾರ್ಥದ ತ್ಯಾಗ, ಸಮರ್ಪಣಾ ಪ್ರೀತಿ ಮತ್ತು ದೇವರ ಅನುಗ್ರಹಕ್ಕಾಗಿ ಪ್ರಾರ್ಥನೆ.
-------------------------

No comments:

Post a Comment