Tuesday, 24 December 2019

ಕ್ರಿಸ್ತಜಯಂತಿಯ ನಾಲ್ಕನೆಯ ದಿನ

ಡಿಸೆಂಬರ್ 28/ 2019
ಕ್ರಿಸ್ತಜಯಂತಿಯ ನಾಲ್ಕನೆಯ ದಿನ ಶನಿವಾರ
ಪಾವನ ಶಿಶುಗಳ ಹಬ್ಬ (ರಕ್ತಸಾಕ್ಶಿಗಳು)
ಮೊದಲನೇ ವಾಚನ: 1 ಯೊವಾನ್ನ 1: 5- 2:2
ಕೀರ್ತನೆ: 124:2-3, 4-5, 7-8
ಶುಭಸಂದೇಶ : ಮತ್ತಾಯ 2:13-18

---------------------------
ಮೊದಲನೇ ವಾಚನ: 1 ಯೊವಾನ್ನ 1: 5- 2:2
1 : ನಿಮಗೆ ನಾವು ಪ್ರಚುರಪಡಿಸುವ ಸಜೀವವಾಣಿ ಆದಿಯಿಂದ ಇರುವಂಥಾದ್ದು. ಇದನ್ನು ಕಣ್ಣಾರೆ ಕಂಡಿದ್ದೇವೆ, ಕಿವಿಯಾರೆ ಕೇಳಿದ್ದೇವೆ, ಮನಸ್ಸಾರೆ ಗ್ರಹಿಸಿದ್ದೇವೆ ಮತ್ತು ಕೈಯಾರೆ ಮುಟ್ಟಿದ್ದೇವೆ.
2 : ಆ ಜೀವ ಪ್ರತ್ಯಕ್ಷವಾಯಿತು. ಅದನ್ನು ನಾವು ನೋಡಿದ್ದೇವೆ, ಆ ಬಗ್ಗೆ ಸಾಕ್ಷಿ ಹೇಳುತ್ತೇವೆ. ಪಿತನ ಬಳಿಯಿದ್ದು ನಮಗೆ ಪ್ರತ್ಯಕ್ಷವಾದಂಥ ನಿತ್ಯಜೀವವನ್ನು ನಿಮಗೆ ಸಾರುತ್ತೇವೆ.
3 : ಪಿತನೊಡನೆಯೂ ಅವರ ಪುತ್ರ ಕ್ರಿಸ್ತಯೇಸುವಿನೊಡನೆಯೂ ನಮಗಿರುವಂಥ ಅನ್ಯೋನ್ಯತೆಯಲ್ಲಿ ನೀವು ಸಹ ಭಾಗಿಗಳಾಗುವಂತೆ ನಾವು ಕಂಡುಕೇಳಿದ್ದನ್ನು ನಿಮಗೆ ಪ್ರಚುರಪಡಿಸುತ್ತೇವೆ.
4 : ನಮ್ಮೆಲ್ಲರ ಆನಂದವು ಪರಿಪೂರ್ಣವಾಗುವಂತೆ ಇದನ್ನು ಬರೆಯುತ್ತಿದ್ದೇವೆ.
5 : ದೇವರೇ ಬೆಳಕು. ಅವರಲ್ಲಿ ಕತ್ತಲು ಎಂಬುದೇ ಇಲ್ಲ. ಅವರ ಪುತ್ರನಿಂದಲೇ ನಾವು ಕೇಳಿದ ಈ ಸಂದೇಶವನ್ನು ನಿಮಗೆ ಸಾರುತ್ತಿದ್ದೇವೆ.
6 : ನಾವು ಕತ್ತಲಲ್ಲಿ ಬಾಳುತ್ತಾ ದೇವರೊಡನೆ ಅನ್ಯೋನ್ಯವಾಗಿದ್ದೇವೆಂದು ಹೇಳಿದರೆ ನಾವು ಸುಳ್ಳುಗಾರರು, ಸತ್ಯಕ್ಕನುಸಾರ ಬಾಳದವರು.
7 : ಬದಲಿಗೆ, ದೇವರು ಬೆಳಕಿನಲ್ಲಿರುವಂತೆ ನಾವೂ ಬೆಳಕಿನಲ್ಲಿ ನಡೆದರೆ ನಮ್ಮಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ. ಆಗ ದೇವರ ಪುತ್ರನಾದ ಯೇಸುವಿನ ರಕ್ತವು ನಮ್ಮನ್ನು ಎಲ್ಲ ಪಾಪದಿಂದಲೂ ಶುದ್ಧಗೊಳಿಸುತ್ತದೆ.
8 : ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿಕೊಂಡರೆ, ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತೇವೆ ಮತ್ತು ಸತ್ಯವೆಂಬುದೇ ನಮ್ಮಲ್ಲಿ ಇರುವುದಿಲ್ಲ.
9 : ಪ್ರತಿಯಾಗಿ, ನಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಆಗ ನಂಬಿಕಸ್ಥರೂ ನೀತಿವಂತರೂ ಆದ ದೇವರು ನಮ್ಮ ಪಾಪಗಳನ್ನು ಕ್ಷಮಿಸಿ ಎಲ್ಲಾ ಅನೀತಿ-ಅಧರ್ಮಗಳಿಂದ ನಮ್ಮನ್ನು ಶುದ್ಧೀಕರಿಸುತ್ತಾರೆ.
10 : ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ ದೇವರನ್ನು ಸುಳ್ಳುಗಾರರನ್ನಾಗಿಸುತ್ತೇವೆ ಮತ್ತು ಅವರ ವಾಣಿ ನಮ್ಮಲ್ಲಿ ಇರುವುದಿಲ್ಲ.
2 : ಅವರೇ ನಮ್ಮ ಪಾಪಗಳನ್ನು ನಿವಾರಿಸುವ ಪರಿಹಾರ ಬಲಿಯಾಗಿದ್ದಾರೆ. ನಮ್ಮ ಪಾಪಗಳನ್ನು ಮಾತ್ರವಲ್ಲ, ಇಡೀ ಜಗತ್ತಿನ ಪಾಪಗಳನ್ನು ಅವರು ಪರಿಹರಿಸುತ್ತಾರೆ.
-------------------
ಕೀರ್ತನೆ: 124:2-3, 4-5, 7-8
ಬೇಟೆಬಲೆಯಿಂದ ಪಾರಾದ ಪಕ್ಷಿಯಂತಾದೆವು / ಹರಿದುಹೋಯಿತಿದೊ ಬಲೆಯು, ಹಾರಿಹೋದೆವು ನಾವು1 : ಪ್ರಭು ನಮ್ಮ ಪರ ಇಲ್ಲದಿದ್ದರೆ ಏನಾಗುತ್ತಿತ್ತು?/ ಇಸ್ರಯೇಲರೇ ಹೇಳಲಿ ಆ ದುರ್ಗತಿಯನ್ನು ಕುರಿತು
2 : ಪ್ರಭು ನಮ್ಮ ಪರ ಇಲ್ಲದಿದ್ದರೆ ಏನಾಗುತ್ತಿತ್ತು?/ ಜನರೆಮಗೆ ವಿರುದ್ಧ ಎದ್ದಾಗ ಏನಾಗುತ್ತಿತ್ತು?
3 : ಉರಿಗೊಳ್ಳುತಿದ್ದರು ಕಡುಗೋಪದಿಂದ ಖಂಡಿತ / ನುಂಗಿಬಿಡುತ್ತಿದ್ದರು ನಮ್ಮನ್ನು ಜೀವಸಹಿತ
4 : ಕೊಚ್ಚಿಬಿಡುತ್ತಿತ್ತು ನಮ್ಮನ್ನು ಹುಚ್ಚು ಪ್ರವಾಹ / ಬಡಿದುಬಿಡುತ್ತಿತ್ತು ನಮ್ಮನ್ನು ರಭಸದಿಂದ ಪೂರ /
5 : ಮುಳುಗಿಸಿಬಿಡುತ್ತಿತ್ತು ನಮ್ಮನ್ನು ಮಹಾಪ್ರಳಯ
6 : ತುತ್ತಾಗಿಸಲಿಲ್ಲ ನಮ್ಮನ್ನು ಶತ್ರುಗಳ ಬಾಯಿಗೆ / ಕೃತಜ್ಞತಾಪೂರ್ವಕ ಸ್ತೋತ್ರ ಇಗೋ ಪ್ರಭುವಿಗೆ
7 : ಬೇಟೆಬಲೆಯಿಂದ ಪಾರಾದ ಪಕ್ಷಿಯಂತಾದೆವು / ಹರಿದುಹೋಯಿತಿದೊ ಬಲೆಯು, ಹಾರಿಹೋದೆವು ನಾವು
8 : ನಮಗುದ್ಧಾರ ಪ್ರಭುವಿನ ನಾಮದಲಿ / ಭೂಮ್ಯಾಕಾಶವನು ಸೃಜಿಸಿದಾತನಲಿ //
-----------------------
ಶುಭಸಂದೇಶ : ಮತ್ತಾಯ 2:13-18
13 : ಜ್ಯೋತಿಷಿಗಳು ಹೊರಟು ಹೋದಮೇಲೆ ದೇವದೂತನು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, "ಏಳು, ಹೆರೋದನು ಮಗುವನ್ನು ಕೊಂದುಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಓಡಿಹೋಗು. ನಾನು ಪುನಃ ಹೇಳುವ ತನಕ ಅಲ್ಲೇ ಇರು," ಎಂದನು.
14 : ಅದರಂತೆ ಜೋಸೆಫನು ಕೂಡಲೇ ಎದ್ದು ಮಗುವನ್ನೂ ತಾಯಿಯನ್ನೂ ರಾತ್ರೋರಾತ್ರಿಯಲ್ಲೇ ಕರೆದುಕೊಂಡು ಈಜಿಪ್ಟಿಗೆ ತೆರಳಿದನು.
15 : ಹೆರೋದನು ಸಾಯುವ ತನಕ ಅಲ್ಲೇ ಇದ್ದನು. ಈ ಪ್ರಕಾರ, "ಈಜಿಪ್ಟ್ ದೇಶದಿಂದ ನನ್ನ ಕುಮಾರನನ್ನು ಕರೆದನು" ಎಂದು ಪ್ರವಾದಿಯ ಮುಖಾಂತರ ಸರ್ವೇಶ್ವರನು ಹೇಳಿದ್ದ ಪ್ರವಚನ ಈಡೇರಿತು.
16 : ಜ್ಯೋತಿಷಿಗಳಿಂದ ತಾನು ವಂಚಿತನಾದೆ ಎಂದು ಅರಿತ ಹೆರೋದನು ರೋಷಾವೇಶಗೊಂಡನು. ಬೆತ್ಲೆಹೇಮಿಗೂ ಅದರ ಸುತ್ತಮುತ್ತಲಿಗೂ ಆಳುಗಳನ್ನು ಕಳುಹಿಸಿದನು. ತಾನು ಜ್ಯೋತಿಷಿಗಳಿಂದ ತಿಳಿದುಕೊಂಡಿದ್ದ ಕಾಲದ ಆಧಾರದ ಮೇಲೆ ಅಲ್ಲಿದ್ದ, ಎರಡು ವರ್ಷಗಳಿಗೆ ಮೀರದ, ಎಲ್ಲಾ ಗಂಡುಮಕ್ಕಳನ್ನು ಕೊಂದು ಹಾಕಿಸಿದನು.
17 : "ಕೇಳಿಬರುತಿದೆ ರಮಾ ಊರಿನೊಳು ರೋದನ, ಗೋಳಾಟ, ಅಘೋರ ಆಕ್ರಂದನ; ಕಳೆದುಕೊಂಡ ಮಕ್ಕಳಿಗಾಗಿ ಗೋಳಿಡುತಿಹಳು ರಾಖೇಲಳು ಇನ್ನಿಲ್ಲದವುಗಳಿಗಾಗಿ ಉಪಶಮನ ಒಲ್ಲೆನೆನುತಿಹಳು,"
18 : ಪ್ರವಾದಿ ಯೆರೆವಿೂಯನ ಈ ಪ್ರವಚನ ಅಂದು ಸತ್ಯವಾಯಿತು.
------------------
ಚಿಂತನೆ
ಮತ್ತಾಯನ ಶುಭಸಂದೇಶದ ಪ್ರಕಾರ (೨:೧೬) ಕ್ರಿಸ್ತನನ್ನು ಹುಡುಕಿಕೊಂಡು ಬಂದ ಮೂರು ಜ್ಞಾನಿಗಳು `ಅರಸ ಹುಟ್ಟಿದ್ದು ಎಲ್ಲಿ?' ಎಂದು ಹುಡುಕುತ್ತಾ ಹೆರೋದನ ಅರಮನೆ ಮುಟ್ಟುತ್ತಾರೆ. ಮತ್ತೊಬ್ಬ ಅರಸ ಅಥವಾ ಮೆಸ್ಸಾಯ ಹುಟ್ಟಲಿದ್ದಾನೆ ಎಂಬ ಕಲ್ಪನೆಯೇ ಅವನಿಂದ ಅರಗಿಸಿಕೊಳ್ಳಲಾಗದ್ದು. ಜ್ಯೋತಿಷಿಗಳಿಗೆ ಆ ಸ್ಥಳವನ್ನು ತನಗೂ ತೋರಿಸುವಂತೆ ಸೂಚನೆ ನೀಡಿದ್ದರೂ ಜ್ಯೋತಿಷಿಗಳು ಹಾಗೆ ಮಾಡದೆ ಮರೆಯಾಗಿ ಹೋಗಿದ್ದರಿಂದ ಕೋಪೋದ್ರೇಕಗೊಂಡ ಹೆರೋದ ಬೆತ್ಲೆಹೇಮಿನ ಎರಡು ವರ್ಷ ಕೆಳಗಿನ ಎಲ್ಲಾ ಹಸುಗೂಸುಗಳನ್ನು ಕೊಲ್ಲಿಸುತ್ತಾನೆ. ಹೀಗೆ ಕ್ರಿಸ್ತನಿಗಾಗಿ ಪ್ರಾಣತೆತ್ತ ಮೊದಲ ಹುತಾತ್ಮರು ಈ ಮಕ್ಕಳು ಎಂದು ಧರ್ಮಸಭೆ ಇವರನ್ನು ಪ್ರಥಮ ರಕ್ತ ಸಾಕ್ಷಿಗಳು ಎಂದು ಪರಿಗಣಿಸಿ ಪಾವನ ಶಿಶುಗಳ ಹಬ್ಬ ಆಚರಿಸುತ್ತದೆ. ಈ ಮಕ್ಕಳ ಬಗ್ಗೆ ಧರ್ಮಸಭೆ ವಿಶೇಷ ಆಸಕ್ತಿ ವಹಿಸಲು ಕಾರಣವೆಂದರೆ, ಈ ಮಕ್ಕಳು ಕ್ರಿಸ್ತನಿಗಾಗಿಯಷ್ಟೇ ಸಾಯಲಿಲ್ಲ, ಕ್ರಿಸ್ತನ ಬದಲಾಗಿ ಸತ್ತರು. ಈ ಮಕ್ಕಳು ಹರಿಸಿದ ರಕ್ತ ಅವರ ದೀಕ್ಷಾಸ್ನಾನದ ಸಂಕೇತವಾಗಿತ್ತು.

No comments:

Post a Comment