Tuesday, 24 December 2019

ಕ್ರಿಸ್ತಜಯಂತಿಯ ಮೂರನೆಯ ದಿನ

ಡಿಸೆಂಬರ್ 27/ 2019
ಕ್ರಿಸ್ತಜಯಂತಿಯ ಮೂರನೆಯ ದಿನ ಶುಕ್ರವಾರ
ಸಂತ ಯೊವಾನ್ನರ ಹಬ್ಬ (ಪ್ರೇಷಿತ, ಶುಭಸಂದೇಶಕರ್ತ)
ಮೊದಲನೇ ವಾಚನ: ಯೊವಾನ್ನ 1:1-4
ಕೀರ್ತನೆ: 97:1-2, 5-6, 11-12
ಶುಭಸಂದೇಶ : ಯೊವಾನ್ನ 20:2-8

------------------------
ಮೊದಲನೇ ವಾಚನ: ಯೊವಾನ್ನ 1:1-4
1 : ನಿಮಗೆ ನಾವು ಪ್ರಚುರಪಡಿಸುವ ಸಜೀವವಾಣಿ ಆದಿಯಿಂದ ಇರುವಂಥಾದ್ದು. ಇದನ್ನು ಕಣ್ಣಾರೆ ಕಂಡಿದ್ದೇವೆ, ಕಿವಿಯಾರೆ ಕೇಳಿದ್ದೇವೆ, ಮನಸ್ಸಾರೆ ಗ್ರಹಿಸಿದ್ದೇವೆ ಮತ್ತು ಕೈಯಾರೆ ಮುಟ್ಟಿದ್ದೇವೆ.
2 : ಆ ಜೀವ ಪ್ರತ್ಯಕ್ಷವಾಯಿತು. ಅದನ್ನು ನಾವು ನೋಡಿದ್ದೇವೆ, ಆ ಬಗ್ಗೆ ಸಾಕ್ಷಿ ಹೇಳುತ್ತೇವೆ. ಪಿತನ ಬಳಿಯಿದ್ದು ನಮಗೆ ಪ್ರತ್ಯಕ್ಷವಾದಂಥ ನಿತ್ಯಜೀವವನ್ನು ನಿಮಗೆ ಸಾರುತ್ತೇವೆ.
3 : ಪಿತನೊಡನೆಯೂ ಅವರ ಪುತ್ರ ಕ್ರಿಸ್ತಯೇಸುವಿನೊಡನೆಯೂ ನಮಗಿರುವಂಥ ಅನ್ಯೋನ್ಯತೆಯಲ್ಲಿ ನೀವು ಸಹ ಭಾಗಿಗಳಾಗುವಂತೆ ನಾವು ಕಂಡುಕೇಳಿದ್ದನ್ನು ನಿಮಗೆ ಪ್ರಚುರಪಡಿಸುತ್ತೇವೆ.
4 : ನಮ್ಮೆಲ್ಲರ ಆನಂದವು ಪರಿಪೂರ್ಣವಾಗುವಂತೆ ಇದನ್ನು ಬರೆಯುತ್ತಿದ್ದೇವೆ.
---------------------
ಕೀರ್ತನೆ: 97:1-2, 5-6, 11-12
ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ
1 : ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ / ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ / ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ //
2 : ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು / ನ್ಯಾಯ-ನೀತಿ ಆತನ ಗದ್ದುಗೆಯಸ್ತಿವಾರಗಳು //
5 : ಸಾರ್ವಭೌಮನಾದ ಪ್ರಭುವಿನ ಮುಂದೆ / ಕರಗುತ್ತವೆ ಬೆಟ್ಟಗುಡ್ಡಗಳು ಮೇಣದಂತೆ //
6 : ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು / ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು //
11 : ಉದಯವಾಗುವುದು ಜ್ಯೋತಿ ಸಜ್ಜನರಿಗೆ / ಆನಂದವಿದೆ ಯಥಾರ್ಥ ಹೃದಯಿಗಳಿಗೆ //
12 : ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ / ಆತನ ಶ್ರೀನಾಮವನು ಕೊಂಡಾಡಿರಿ //
---------------------------
ಶುಭಸಂದೇಶ : ಯೊವಾನ್ನ 20:2-8
2 : ಆಗ ಆಕೆ ಸಿಮೋನ ಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿ ಬಂದು, “ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ,” ಎಂದು ಹೇಳಿದಳು.
3 : ಇದನ್ನು ಕೇಳಿ ಪೇತ್ರನೂ ಇನ್ನೊಬ್ಬ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು.
4 : ಇಬ್ಬರೂ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಸಮಾಧಿಯನ್ನು ಮೊದಲು ತಲುಪಿದನು.
5 : ಅವನು ಬಗ್ಗಿ ನೋಡಿದಾಗ ಅಲ್ಲಿ ನಾರುಬಟ್ಟೆಗಳು ಬಿದ್ದಿರುವುದು ಕಾಣಿಸಿತು. ಆದರೆ ಅವನು ಒಳಗೆ ನುಗ್ಗಲಿಲ್ಲ.
6 : ಅವನ ಹಿಂದೆಯೇ ಸಿಮೋನ ಪೇತ್ರನು ಬಂದು ನೆಟ್ಟಗೆ ಸಮಾಧಿಯೊಳಗೆ ನುಗ್ಗಿದನು; ಅಲ್ಲಿ ನಾರುಮಡಿಗಳು ಬಿದ್ದಿರುವುದನ್ನು ಕಂಡನು.
7 : ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆ, ಆ ನಾರುಮಡಿಗಳೊಡನೆ ಇರದೆ, ಅದನ್ನು ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕಂಡನು.
8 : ಸಮಾಧಿಯನ್ನು ಮೊದಲು ತಲುಪಿದ್ದ ಇನ್ನೊಬ್ಬ ಶಿಷ್ಯನೂ ಆಮೇಲೆ ಒಳಗೆ ನುಗ್ಗಿ ನೋಡಿದನು; ನೋಡಿ ನಂಬಿದನು.
----------------------------
ಚಿಂತನೆ
ಯೊವಾನ್ನ ಮತ್ತು ಯಕೋಬ `ಸಿಡಿಲ ಮರಿಗಳು' ಎಂಬ ಹೆಸರೂ ಪಡೆದರೂ ಮೂಲತಃವಾಗಿ ಶ್ರೀಮಂತ ಮೀನುಗಾರರ ಕುಟುಂಬದಿಂದ ಬಂದವರು. ಯೇಸುವನ್ನು ಬೇಟಿಯಾಗುವ ಮುನ್ನ ಸ್ನಾನಿಕ ಯೊವಾನ್ನನ ಶಿಷ್ಯರಾಗಿದ್ದ ಇವರಿಬ್ಬರೂ ಯೇಸು ಕರೆದಾಗ ತಂದೆ ಜೆಬೆದಾಯನನ್ನು, ಮೀನಿನ ಬಲೆಗಳನ್ನು ಬಿಟ್ಟು ಹಿಂಬಾಲಿಸಿದರು. ಯೇಸುವಿನ ಯಾತನೆ ಮರಣದ ಸಂದರ್ಭದಲ್ಲಿ ಎರಡು ಕಡೆ ಯೊವಾನ್ನ ಸಾಕ್ಷಿಯಾಗಿ ನಿಲ್ಲುತ್ತಾನೆ. ಪ್ರಧಾನ ಯಾಜಕನಿಗೆ ಪರಿಚಿತನಾಗಿದ್ದರಿಂದ ಕಾಯಿಫಾಸನ ಅರಮನೆಯಲ್ಲಿ ಯೇಸುವಿನ ವಿಚಾರಣೆಯ ವೇಳೆ ಯೊವಾನ್ನ ನಿಂತಿದ್ದ. ನಂತರ ಶಿಲುಬೆಯ ಬುಡದಲ್ಲಿ ಕೆಲವು ಮಹಿಳೆಯರ ಜೊತೆ ನಿಂತ ಒಬ್ಬನೇ ಒಬ್ಬ ಪ್ರೇಷಿತ ಯೊವಾನ್ನ. ಬಹುಶಃ ಈ ಕಾರಣಕ್ಕಾಗಿ ಯೇಸು ತನ್ನ ತಾಯಿಯನ್ನು ಆತನ ಆಶ್ರಯಕ್ಕೆ ಒಪ್ಪಿಸಿಬಿಟ್ಟರು. ಕ್ರಿಸ್ತನ ದೇವತ್ವದ ಬಗ್ಗೆ ಆದಿ ಧರ್ಮಸಭೆಯಲ್ಲಿ ಚರ್ಚೆಯಾಗುತ್ತಿದ್ದ ವೇಳೆ ಆ ದೈವತ್ವ ಮಾನವ ರೂಪವಾದ ಬಗ್ಗೆ ತನ್ನ ಶುಭಸಂದೇಶದಲ್ಲಿ ಒತ್ತಿ ಹೇಳುತ್ತಾನೆ. ತನ್ನ ಪತ್ರಗಳ ಮೂಲಕ ಪ್ರೀತಿಯ ಮಹತ್ವವನ್ನು ಎತ್ತಿ ಹಿಡಿಯುತ್ತಾನೆ.

No comments:

Post a Comment