ಡಿಸೆಂಬರ್ 22/ 2019
ಆಗಮನ ಕಾಲದ ನಾಲ್ಕನೆಯ ಭಾನುವಾರ
ಮೊದಲನೇ ವಾಚನ: ಯೆಶಾಯ 7:10-14
ಕೀರ್ತನೆ: 24:1-2, 3-4, 5-6
ಎರಡನೇ ವಾಚನ ರೋಮನರಿಗೆ 1:1-7
ಶುಭಸಂದೇಶ : ಮತ್ತಾಯ 1:18-24
------------------------
ಮೊದಲನೇ ವಾಚನ: ಯೆಶಾಯ 7:10-14
10 : ಪುನಃ ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ:
11 : “ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು” ಎಂದರು.
12 : ಅದಕ್ಕೆ ಆಹಾಜನು “ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ” ಎಂದನು.
13 : ಆಗ ಯೆಶಾಯನು: “ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ?
14 : ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು.
--------------------
ಕೀರ್ತನೆ: 24:1-2, 3-4, 5-6
1 : ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ / ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ //
2 : ಕಡಲನು ತಳಪಾಯವನಾಗಿಸಿದವನು ಆತನೆ / ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೆ //
3 : ಪ್ರಭುವಿನ ಶಿಖರವನು ಏರಬಲ್ಲವನಾರು? / ಆ ನಿವಾಸದಲಿ ನಿಲ್ಲಲು ಯೋಗ್ಯನಾರು? //
4 : ಅಂಥವನಿರಬೇಕು ಶುದ್ಧ ಹಸ್ತನು, ಸುಮನಸ್ಕನು / ಅನಾಚಾರಕೆ, ಅಪಮಾಣಿಕತೆಗೆ ಒಲಿಯನವನು //
5 : ಲಭಿಸುವುದಾತನಿಗೆ ಶುಭ ಪ್ರಭುವಿನಿಂದ / ನೀತಿಯ ಸತ್ಫಲ ರಕ್ಷಕ ದೇವನಿಂದ //
6 : ಇಂಥವರೆ ದೇವರ ದರ್ಶನಾಭ್ಯರ್ಥಿಗಳು / ಇಂಥವರೆ ಯಕೋಬ ದೇವನ ಭಕ್ತಾದಿಗಳು //
----------------------
ಎರಡನೇ ವಾಚನ ರೋಮನರಿಗೆ 1:1-7
1 : ದೇವರಿಗೆ ಅತ್ಯಂತ ಪ್ರಿಯರು ಹಾಗು ದೇವಜನರಾಗಲು ಕರೆಹೊಂದಿದವರು ಆದ ರೋಮ್‍ನಗರ ನಿವಾಸಿಗಳೆಲ್ಲರಿಗೆ: ಕ್ರಿಸ್ತ ಯೇಸುವಿನ ದಾಸನೂ ಪ್ರೇಷಿತನಾಗಲು ಕರೆ ಹೊಂದಿದವನೂ ದೇವರ ಶುಭಸಂದೇಶವನ್ನು ಸಾರಲು ನೇಮಕಗೊಂಡವನೂ ಆದ ಪೌಲನು ಬರೆಯುವ ಪತ್ರ: ನಮ್ಮ ತಂದೆಯಾದ ದೇವರು ಹಾಗು ಪ್ರಭುವಾದ ಯೇಸುಕ್ರಿಸ್ತರು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ.
2 : ದೇವರು ತಮ್ಮ ಶುಭಸಂದೇಶವನ್ನು ನೀಡುವುದಾಗಿ ಪ್ರವಾದಿಗಳ ಮುಖಾಂತರ ಮುಂಚಿತವಾಗಿಯೇ ಪವಿತ್ರಗ್ರಂಥದಲ್ಲಿ ವಾಗ್ದಾನಮಾಡಿದ್ದರು.
3 : ಈ ಸಂದೇಶ ದೇವರ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ಕುರಿತಾದುದು. ಮನುಷ್ಯತ್ವದ ಮಟ್ಟಿಗೆ ಯೇಸು ದಾವೀದನ ವಂಶಜರು;
4 : ದೈವಿಕ ಪರಿಶುದ್ಧತೆಯ ಮಟ್ಟಿಗೆ ಇವರು ದೇವರ ಶಕ್ತಿಯನ್ನು ವ್ಯಕ್ತಪಡಿಸುವ ದೇವರ ಪುತ್ರ. ಸತ್ತು ಪುನರುತ್ಥಾನ ಹೊಂದಿ ಇದನ್ನು ಖಚಿತಪಡಿಸಿದವರು.
5 : ಇವರ ನಾಮ ಮಹಿಮೆಗೋಸ್ಕರವಾಗಿಯೇ ಸರ್ವಜನಾಂಗಗಳೂ ಇವರನ್ನು ವಿಶ್ವಾಸಿಸಿ, ವಿಧೇಯರಾಗಿ ನಡೆಯುವಂತೆ ಮಾಡಲು ಪ್ರೇಷಿತನಾಗುವ ಸೌಭಾಗ್ಯ ನನ್ನದಾಯಿತು. ಆ ಯೇಸುಕ್ರಿಸ್ತರ ಮುಖಾಂತರವೇ ದೇವರು ಈ ಭಾಗ್ಯವನ್ನು ನನಗೆ ಅನುಗ್ರಹಿಸಿದರು.
6 : ಯೇಸುಕ್ರಿಸ್ತರಿಗೆ ಸ್ವಂತದವರಾಗಲು ಕರೆ ಹೊಂದಿರುವ ನೀವು ಕೂಡ ಸರ್ವ ಜನಾಂಗಗಳಲ್ಲಿ ಸೇರಿದ್ದೀರಿ.
7 : ಮೊಟ್ಟ ಮೊದಲನೆಯದಾಗಿ, ನಿಮ್ಮೆಲ್ಲರ ಪರವಾಗಿ ಯೇಸುಕ್ರಿಸ್ತರ ಮುಖಾಂತರ ನಾನು ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
-------------------
ಶುಭಸಂದೇಶ : ಮತ್ತಾಯ 1:18-24
18 : ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ.
19 : ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು.
20 : ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ.
21 : ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು ‘ಯೇಸು’ ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ," ಎಂದನು.
22 : "ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು "ಇಮ್ಮಾನುವೇಲ್" ಎಂದು ಆತನಿಗೆ ಹೆಸರಿಡುವರು" ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು.
23 : “ಇಮ್ಮಾನುವೇಲ್" ಎಂದರೆ "ದೇವರು ನಮ್ಮೊಡನೆ ಇದ್ದಾರೆ" ಎಂದು ಅರ್ಥ.
24 : ಆಗ ಜೋಸೆಫನು ಎಚ್ಚೆತ್ತು ದೇವದೂತನ ಆಜ್ಞೆಯ ಪ್ರಕಾರ ಮರಿಯಳನ್ನು ವಿವಾಹ ಮಾಡಿಕೊಂಡನು.
----------------
ಚಿಂತನೆ
ಇಂದಿನ ಶುಭಸಂದೇಶದಲ್ಲಿ ಜೋಸೆಫರೇ ಕೇಂದ್ರಬಿಂದು. ಯೆಹೂದ್ಯರ ಸಂಪ್ರದಾಯದ ಪ್ರಕಾರ ನಿಶ್ಚಿತಾರ್ಥವು ಕಾನೂನು ರೀತಿಯ ಒಪ್ಪಂದವಾಗಿತ್ತು. ಕಾನೂನಿನ ಪ್ರಕಾರ ನಡೆದ ಮದುವೆ ನಿಶ್ಚಿತಾರ್ಥದ ನಂತರ ಗಂಡು ಮತ್ತು ಹೆಣ್ಣನ್ನು ಪತಿ ಮತ್ತು ಪತ್ನಿ ಎಂದು ಕರೆಯಲಾಗುತ್ತಿತ್ತು.
ಜೋಸೆಫನು ಹಳೆಯ ಒಡಂಬಡಿಕೆಯ ಕಟ್ಟಳೆಗಳ ಆಳ ಮತ್ತು ನಿಜವಾದ ಅರ್ಥವನ್ನು ಅರಿತ್ತಿದ್ದನು. ಧ. ಕಾಂಡ ೨೨:೨೩-೨೫ರ ಪ್ರಕಾರ ಮಹಿಳೆಯು ಅನೈತಿಕ ಸಂಬಂಧದಿಂದ ಗರ್ಭಿಣಿಯಾದರೆ ಆಕೆಯನ್ನು ಕಲ್ಲಿನಿಂದ ಹೊಡೆದು ಕೊಲ್ಲಲಾಗುತ್ತಿತ್ತು. ಜೋಸೆಫನು ಮರಿಯಳನ್ನು ದೂಷಿಸುವ ಅಥವಾ ಶಿಕ್ಷಿಸುವ ಹಕ್ಕನ್ನು ಹೊಂದಿದ್ದರೂ ದೇವದೂತನ ಮಾತಿಗೆ ಶರಣಾಗಿ ದೇವರ ಚಿತ್ತವನ್ನು ಪಾಲಿಸುತ್ತಾನೆ. ಮರಿಯಳು ಗರ್ಭವತಿಯಾಗಿರುವುದನ್ನು ಅರಿತು ಅವಳನ್ನು ಸಂಕಷ್ಟಕ್ಕೆ ದೂಡದೆ ಆಕೆಯ ಸ್ಥಾನಮಾನವನ್ನು ಕಾಪಾಡಿ ತಾನು ನಿಜವಾಗಿಯೂ ನೀತಿವಂತನೂ ಹಾಗೂ ದೇವರಲ್ಲಿ ಭಯಭಕ್ತಿಯುಳ್ಳವನೆಂದು ನಿರೂಪಿಸುತ್ತಾನೆ.
ಜೋಸೆಫನ ಮತ್ತೊಂದು ಗುಣ ನಮ್ಮನ್ನು ಪ್ರೇರೆಪಿಸಬೇಕು. ಜೋಸೆಫನು ನಿಶ್ಯಬ್ದವಾಗಿ ದೇವರ ಸ್ವರವನ್ನು ಆಲಿಸಿ ಅದನ್ನು ಚಾಚುತಪ್ಪದೆ ಪಾಲಿಸಿದ. ಆತನ ಕಿವಿ ದೇವರ ಸ್ವರ ಆಲಿಸಲು ಸದಾ ಸಿದ್ಧವಾಗಿತ್ತು.
No comments:
Post a Comment