Wednesday, 18 December 2019

ಆಗಮನ ಕಾಲದ ಮೂರನೆಯ ಶನಿವಾರ

ಡಿಸೆಂಬರ್ 21/  2019
ಆಗಮನ ಕಾಲದ ಮೂರನೆಯ ಶನಿವಾರ
ಮೊದಲನೇ ವಾಚನ:  ಪರಮ ಗೀತೆ  2:8-14
 ಕೀರ್ತನೆ: 33:2-3, 11-12, 20-21
ಶುಭಸಂದೇಶ : ಲೂಕ 1: 39-45
----------
ಮೊದಲನೇ ವಾಚನ:  ಪರಮ ಗೀತೆ  2:8-14
8 : ಅಗೋ, ನನ್ನ ಕಾಂತನ ಸಪ್ಪಳ! ಹಾರಿ ಬರುತಿಹನು ಬೆಟ್ಟಗಳ ಮೇಲೆ ಜಿಗಿದು ಬರುತಿಹನು ಗುಡ್ಡಗಳ ಮೇಲೆ.
9 : ನನ್ನ ಪ್ರಿಯನು ಇಹನು ಜಿಂಕೆಯಂತೆ, ಎಳೆಯ ಹುಲ್ಲೆಯಂತೆ ಇಗೋ, ನಿಂತಿಹನು ಗೋಡೆಯ ಹಿಂಭಾಗದಲೆ, ದೃಷ್ಟಿಸಿ ನೋಡುತಿಹನು ಕಿಟಕಿಗಳಲಿ ಇಣುಕು ಹಾಕುತಿಹನು ಜಾಲಾಂತರಗಳಲಿ.
10 : ನನ್ನ ನಲ್ಲನು ನನ್ನೊಡನೆ ಮಾತಾಡಿ ಹೀಗೆಂದನು: ನಲ್ಲ : ‘ಎದ್ದು ಬಾ, ಪ್ರಿಯತಮೆ, ಬಾ ನನ್ನೊಂದಿಗೆ, ಸುಂದರಿಯೇ,
11 : ಇಗೋ, ಚಳಿಗಾಲ ಕಳೆಯಿತು ಮಳೆಗಾಲ ಮುಗಿಯಿತು.
12 : ಧರೆಯಲ್ಲೆಲ್ಲ ಹೂಗಳು ಅರಳಿವೆ ನಲಿದು ಹಾಡುವ ಕಾಲ ಬಂದಿದೆ ಬೆಳವಕ್ಕಿಯ ಕೂಗು ನಾಡಿನಲ್ಲಿ ಕೇಳಿಸುತ್ತಿದೆ.
13 : ಅಂಜೂರದ ಕಾಯಿಗಳು ಹಣ್ಣಾಗಿವೆ ದ್ರಾಕ್ಷಾಬಳ್ಳಿಗಳು ಹೂಬಿಟ್ಟಿವೆ. ಅದರ ಪರಿಮಳ ಹರಡುತ್ತಿದೆ.’ ನಲ್ಲ : ಎದ್ದು ಬಾ, ನನ್ನ ಪ್ರೇಯಸಿಯೇ ಬಾ ನನ್ನೊಂದಿಗೆ, ಸುಂದರಿಯೇ.

14 : ಬಂಡೆಯ ಬಿರುಕುಗಳಲ್ಲಿ ಸಂದುಗಳ ಮರೆಯಲ್ಲಿ ತಂಗಿರುವ ಪಾರಿವಾಳವೇ ಬಾ. ನಿನ್ನ ರೂಪವನು ನನಗೆ ಕಾಣಿಸು ನಿನ್ನ ದನಿಯನು ನನಗೆ ಕೇಳಿಸು. ನಿನ್ನ ದನಿ ಎನಿತೋ ಇಂಪು! ನಿನ್ನ ರೂಪ ಎನಿತೋ ತಂಪು!
-----------
 ಕೀರ್ತನೆ: 33:2-3, 11-12, 20-21
2 : ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ / ಕೀರ್ತಿಸಿ ದಶತಂತಿ ವೀಣೆಯನು ಬಾರಿಸುತ //
3 : ನೂತನ ಕೀರ್ತನೆಯನು ಆತನಿಗೆ ಹಾಡಿರಿ / ಇಂಪಾಗಿ ಬಾರಿಸಿ, ಸೊಂಪಾಗಿ ಭಜಿಸಿರಿ //
11 : ಪ್ರಭುವಿನ ಯೋಜನೆ ಶಾಶ್ವತ / ಅವನ ಸಂಕಲ್ಪ ಅನವರತ //
12 : ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ / ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ //
20 : ಕಾದಿದೆ ಎನ್ನ ಮನ ಪ್ರಭುವಿಗಾಗಿ / ಆತನಿಹನು ಎನಗೆ ಗುರಾಣಿಯಾಗಿ //
21 : ನೆಮ್ಮದಿಯಿಂದಿದೆ ಎನ್ನ ಮನ ಆತನಲಿ / ನಂಬಿರುವೆವು ಆತನ ಶ್ರೀ ನಾಮದಲಿ //
---------------
ಶುಭಸಂದೇಶ : ಲೂಕ 1: 39-45
39 : ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು.
40 : ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು.
41 : ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ
42 : ಹರ್ಷೋದ್ಗಾರದಿಂದ ಹೀಗೆಂದಳು: “ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ!
43 : ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ!
44 : ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ!
45 : ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು.” 
-------------
ಚಿಂತನೆ
ಮಾತೆ ಮರಿಯ ಮತ್ತು ಎಲಿಜಬೇತಳ ಭೇಟಿ ವಿಶೇಷವಾದದ್ದು. ದೇವದೂತ ಸಾರಿದ ಸತ್ಯವನ್ನು ಹಂಚಿಕೊಳ್ಳುವುದರ ಮೂಲಕ ಎಲ್ಲರಿಗೂ ಅದನ್ನು ಸಾರುವ ಮೊದಲು ಪ್ರವಾದಿನಿಗಳಾಗುತ್ತಾರೆ. ಈ ಬೇಟಿಯಿಂದ ಇಬರಿಬ್ಬರ ವಿಶ್ವಾಸವು ಬಲಗೊಳ್ಳುತ್ತದೆ, ಮರಿಯಳಲ್ಲಿದ್ದ ದೀನತೆ ಮತ್ತು ಪರೋಪಕಾರ ಪ್ರಕಟವಾಗುತ್ತದೆ. ಕ್ರಿಸ್ತನನ್ನು ಉದರದಲ್ಲಿ ಹೊತ್ತು ಮರಿಯಳು ಹೋದಾಗ ಎಲಿಜಬೇತಳ ಉದರದಲ್ಲಿದ್ದ ಯೊವಾನ್ನ ಕುಣಿದು ಕುಪ್ಪಳಿಸುತ್ತಾನೆ. ರಕ್ಷಕನ ಮೊದಲ ಭೇಟಿಗೆ ಮಾತೆ ಮರಿಯಳಂತೆ ಇತರರ ಕಷ್ಟದಲ್ಲಿ ಭಾಗಿಯಾಗಲು ಪ್ರೇರೆಪಿಸಬೇಕು. ಈ ಭೇಟಿ ನಮ್ಮನ್ನು ದೇವರ ವಾಕ್ಯ ನಮ್ಮ ನಡೆ ನುಡಿಯ ಮೂಲಕ ಹೊತ್ತು ತಿರುಗುವಂತೆ ಮಾಡಬೇಕು. ಯೊವಾನ್ನನು ಆನಂದದಿಂದ ಕುಪ್ಪಳಿಸಿದಂತೆ ಬರಲಿರುವ ಕ್ರಿಸ್ತನನ್ನು ಸ್ವೀಕರಿಸಿ, ಅದೇ ಆನಂದದಿಂದ ನಾವು ಕುಪ್ಪಳಿಸಲು ಆಧ್ಯಾತ್ಮಿಕವಾಗಿ ಸಿದ್ದರಾಗಬೇಕು.

No comments:

Post a Comment