Sunday, 8 December 2019

ಆಗಮನ ಕಾಲದ ಎರಡನೆಯ ಗುರುವಾರ

ಡಿಸೆಂಬರ್ 12/ 2019

ಆಗಮನ ಕಾಲದ ಎರಡನೆಯ ವಾರ
ಸಂತ ಗ್ವಾಡಲೂಪೆಯ ಮಾತೆ
ಸಂತ ಜೇನ್ ಫ್ರಾನ್ಸಿಸ್ ದೆ ಶಂತಾಲ್ (ಸನ್ಯಾಸಿನಿ)
ಮೊದಲನೇ ವಾಚನ ಯೆಶಾಯ 41:13-20
ಕೀರ್ತನೆ: 145:1, 9, 10-11, 12-13
ಶುಭಸಂದೇಶ : ಮತ್ತಾಯ 11:11-15

-----------

ಮೊದಲನೇ ವಾಚನ ಯೆಶಾಯ 41:13-20

13 : ನಿನ್ನ ದೇವರಾದ ಸರ್ವೇಶ್ವರ ನಾನೇ ಭಯಪಡಬೇಡ, ನಿನಗೆ ನಾನೇ ನೆರವಾಗುವೆ ಎಂತಲೇ, ನಿನ್ನ ಕೈ ಹಿಡಿದುಕೊಳ್ಳುವೆ.
14 : ಸರ್ವೇಶ್ವರ ಇಂತೆನ್ನುತ್ತಾರೆ: “ಹುಳುವಿನಂತಿರುವ ಯಕೋಬೇ, ಇಸ್ರಯೇಲಿನ ಜನತೆಯೇ, ಭಯಪಡಬೇಡ, ನಾನೇ ನಿನಗೆ ಸಹಾಯಕ ಇಸ್ರಯೇಲಿನ ಪರಮಪಾವನ ಸ್ವಾಮಿಯೇ ನಿನಗೆ ವಿಮೋಚಕ.
15 : ಮಾಡಿರುವೆ ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಕುಂಟೆಯಂತೆ. ನೀನು ಒಕ್ಕುತ್ತಾ ಪುಡಿಪುಡಿ ಮಾಡುವೆ ಬೆಟ್ಟಗಳನೆ ಹೊಟ್ಟು ಧೂಳಾಗಿಸುವೆ ಗುಡ್ಡಗಳನೆ.
16 : ನೀನು ತೂರಲು ಅವುಗಳನ್ನು ಕೊಂಡೊಯ್ವುದು ಗಾಳಿ ಚಂಡಮಾರುತವು ಮಾಡುವುದವುಗಳನ್ನು ಚೆಲ್ಲಾಪಿಲ್ಲಿ. ನೀನಾದರೋ ಆನಂದಿಸುವೆ ಸರ್ವೇಶ್ವರ ಸ್ವಾಮಿಯಲಿ.
17 : ದೀನದರಿದ್ರರು ನೀರಿಗಾಗಿ ಪರದಾಡುವಾಗ ಬಾಯಾರಿ ಅವರ ನಾಲಿಗೆ ಒಣಗಿಹೋದಾಗ ಪ್ರಸನ್ನನಾಗುವೆ ಸರ್ವೇಶ್ವರನಾದ ನಾನೇ. ಇಸ್ರಯೇಲಿನ ದೇವರಾದ ನಾನವರನ್ನು ಕೈಬಿಡುವೆನೆ?
18 : ಹೊರಡಿಸುವೆನು ಬೋಳುಗುಡ್ಡಗಳಲ್ಲಿ ನದಿಗಳನು ತಗ್ಗುತಿಟ್ಟುಗಳಲ್ಲಿ ಒರತೆಗಳನು ಮಾರ್ಪಡಿಸುವೆನು ಕೆರೆಯಾಗಿ ಅರಣ್ಯವನು ಬುಗ್ಗೆಗಳಾಗಿ ಮರುಭೂಮಿಯನು.
19 : ನೆಡುವೆನು ಅಡವಿಯಲಿ ದೇವದಾರು, ಕಸ್ತೂರಿ, ಜಾಲಿ, ಸುಗಂಧ ಓಲೀವ್ ಮರಗಳನು; ತೋಪಾಗಿ ಬೆಳೆಸುವೆನು ಅರಣ್ಯದೊಳು ತುರಾಯಿ, ತಪಸಿ, ತಿಲಕ ವೃಕ್ಷಗಳನು.
20 : ಇದನು ಕಂಡರಿತು ಗ್ರಹಿಸಿಕೊಳ್ಳುವರು ಜನರು ಮನಸಾರೆ, ನುಡಿವರಾಗ, ‘ಇದನ್ನು ಮಾಡಿದ ಹಸ್ತವು ಸರ್ವೇಶ್ವರಸ್ವಾಮಿಯದೇ, ಇದನ್ನು ಸೃಷ್ಟಿಸಿದಾತ ಇಸ್ರಯೇಲಿನ ಪರಮಪಾವನ ಸ್ವಾಮಿಯೇ.’
--------------------
ಕೀರ್ತನೆ: 145:1, 9, 10-11, 12-13
ಪ್ರಭು ದಯಾನಿಧಿ, ಕೃಪಾಸಾಗರನು / ಸಹನಶೀಲನು, ಪ್ರೀತಿಪೂರ್ಣನು
1 : ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ / ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ
9 : ಪ್ರಭುವಿನ ಕರುಣೆ ಎಲ್ಲರ ಮೇಲೆ / ಆತನ ಕೃಪೆಯು ಸೃಷ್ಟಿಯ ಮೇಲೆ
10 : ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು / ಕೊಂಡಾಡುವುದು ನಿನ್ನನು ಭಕ್ತ ಸಮೂಹವು
11 : ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು / ವರ್ಣಿಸುವರವರು ನಿನ್ನ ಶಕ್ತಿ ಸಾಮಥ್ರ್ಯವನು
12 : ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು / ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು
13 : ಶಾಶ್ವತವಾದುದು ನಿನ್ನ ರಾಜ್ಯವು / ಇರುವುದೆಂದಿಗು ನಿನ್ನ ಆಳ್ವಿಕೆಯು
---------------------
ಶುಭಸಂದೇಶ : ಮತ್ತಾಯ 11:11-15
11 : ಮಾನವನಾಗಿ ಜನಿಸಿದ್ದವರಲ್ಲಿ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಾರೂ ಹುಟ್ಟಿಲ್ಲ! ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಆದರೂ ಸ್ವರ್ಗಸಾಮ್ರಾಜ್ಯದಲ್ಲಿ ಕನಿಷ್ಠನಾದವನು ಕೂಡ ಅವನಿಗಿಂತ ಶ್ರೇಷ್ಟನೇ ಸರಿ.
12 : ಯೊವಾನ್ನನು ತನ್ನ ಸಂದೇಶವನ್ನು ಸಾರಿದಂದಿನಿಂದ ಇಂದಿನವರೆಗೆ ಸ್ವರ್ಗಸಾಮ್ರಾಜ್ಯವು ನೂಕುನುಗ್ಗಲಿಗೆ ಗುರಿಯಾಗಿದೆ. ಬಲಪ್ರಯೋಗ ಮಾಡುವವರು ಅದನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
13 : ಯೊವಾನ್ನನ ಕಾಲದ ತನಕ ಧರ್ಮಶಾಸ್ತ್ರ ಹಾಗೂ ಎಲ್ಲ ಪ್ರವಾದಿಗಳು ದೇವರ ಸಾಮ್ರಾಜ್ಯವನ್ನು ಕುರಿತು ಪ್ರವಾದನೆ ಮಾಡಿದರು.
14 : ಅವರ ಹೇಳಿಕೆಯನ್ನು ನಂಬಲು ನಿಮಗಿಷ್ಟವಿದ್ದರೆ, ಇಗೋ, ಬರತಕ್ಕ ಎಲೀಯನು ಈ ಯೊವಾನ್ನನೇ.
15 : ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.
---------------------
ಚಿಂತನೆ
ಪ್ರಧಾನ ದೇವದೂತ ಗಾಬ್ರಿಯೇಲರ ಮೂಲಕ ದೇವರ ಸಂದೇಶವನ್ನು ಪಡೆದ ಮರಿಯಳು ಜುದೇಯ ನಾಡಿನಲ್ಲಿರುವ ಆರು ತಿಂಗಳ ಗರ್ಭಿಣಿ ಎಲಿಜಬೇತಳ ಭೇಟಿಗೆ ತೆರಳುತ್ತಾಳೆ. ಗರ್ಭಿಣಿ ಎಲಿಜಬೇತಳಿಗೆ ಸೇವೆ ಮಾಡಲು ಹೊರಡುತ್ತಾಳೇ ಹೊರತು ತಾನು ದೇವರ ಪುತ್ರನಿಗೆ ಜನ್ಮಕೊಡಲಿದ್ದೇನೆಂದು ಹೇಳಲು ಹೋಗಲಿಲ್ಲ. ಇಲ್ಲಿ ಮರಿಯಳ ದೀನತೆ ಮತ್ತು ಸೇವಾಮನೋಭಾವವನ್ನು ಕಾಣಬಹುದು. ಮರಿಯಳು ಎಲಿಜಬೇತಳಿಗೆ ಕೊಟ್ಟ ಭೇಟಿ ಅಪೂರ್ವವಾದುದು. ಕೇವಲ ಇಬ್ಬರು ಸ್ತ್ರೀಯರ ಸಾಮಾನ್ಯ ಭೇಟಿಯಾಗಿರಲಿಲ್ಲ. ಅದು ಎಂದೂ ಮರೆಯಲಾಗದ ಹಾಗೂ ಅದೃಶ್ಯವಾದ ಪುರುಷರಿಬ್ಬರ ಭೇಟಿಯೂ ಹೌದು, ಯೇಸುಕ್ರಿಸ್ತ ಮತ್ತು ಸ್ನಾನಿಕ ಯೊವಾನ್ನರ ಪವಿತ್ರ ಭೇಟಿಯೂ ಹೌದು. ಮರಿಯಳ ದೀನತೆ ಮತ್ತು ಪರೋಪಕಾರ ನಮಗೆ ಮಾದರಿಯಾಗಲಿ. ಮರಿಯಾಳು ಕ್ರಿಸ್ತನನ್ನು ಹೊತ್ತುಕೊಂಡು ಹೋದಂತೆ ನಾವು ಕೊಡ ನಮ್ಮ ದಿನನಿತ್ಯದ ಚಟುವಟಿಕೆಯಲ್ಲಿ, ನಡೆ ನುಡಿಯಲ್ಲಿ ಕ್ರಿಸ್ತನನ್ನು ಹೊತ್ತು ತಿರುಗೋಣ.

No comments:

Post a Comment