Sunday, 8 December 2019

ಆಗಮನ ಕಾಲದ ಎರಡನೆಯ ಬುಧವಾರ

ಡಿಸೆಂಬರ್ 11/ 2019
ಆಗಮನ ಕಾಲದ ಎರಡನೆಯ ವಾರ
ಸಂತ ದಮಾಸಸ್ ಮೊದಲನೆಯವರು (ವಿಶ್ವಗುರು)
ಮೊದಲನೇ ವಾಚನ ಯೆಶಾಯ 40:25-31
 ಕೀರ್ತನೆ103:1-2, 3-4, 8, 10
ಶುಭಸಂದೇಶ : ಮತ್ತಾಯ 11:28 - 30
--------------
ಮೊದಲನೇ ವಾಚನ ಯೆಶಾಯ 40:25-31
25 : “ಇಂತಿರಲು ನನ್ನನ್ನು ಯಾರಿಗೆ ಹೋಲಿಸಬಲ್ಲಿರಿ?” ಯಾರಿಗೆ ನನ್ನನ್ನು ಸರಿಸಮಾನ ಮಾಡಬಲ್ಲಿರಿ?” ಎಂದು ಕೇಳುತ್ತಿಹರು ಪರಮಪಾವನಸ್ವಾಮಿ.
26 : ಕಣ್ಣೆತ್ತಿ, ದಿಟ್ಟಿಸಿನೋಡಿ ಆಕಾಶದತ್ತ ಯಾರು ಆ ತಾರೆಗಳನ್ನು ರಚಿಸಿದಾತ? ಆ ತಾರಾಸಮೂಹವನ್ನು ಕ್ರಮಾನುಸಾರ ನಡೆಸುವಾತ, ಒಂದೊಂದನ್ನೂ ಹೆಸರಿಟ್ಟು ಕರೆಯುವಾತ, ಅವುಗಳಲ್ಲಿ ಒಂದನ್ನೂ ಕಾಣೆಯಾಗಲು ಬಿಡದಾತ, ಅಷ್ಟು ಬಲಾಢ್ಯನು, ಶಕ್ತಿವಂತನು ಆಗ !
27 : ಹೀಗಿರಲು ಎಲೈ ಯಕೋಬ್ಯರೇ, ಇಸ್ರಯೇಲರೇ, ‘ಮರೆಯಾಗಿದೆ ಪ್ರಭುವಿಗೆ ನನ್ನ ಕುಂದುಕೊರತೆ, ನ್ಯಾಯನೀತಿ ದೊರಕದಿದೆ ನನಗೆ ಇದರತ್ತ ದೇವರ ಲಕ್ಷ್ಯ ಬೀಳದಿದೆ’ ಎನ್ನುತ್ತಿರುವಿರಿ ಏಕೆ?
28 : ನೀವು ಕೇಳಿಲ್ಲವೇ? ನಿಮಗೆ ತಿಳಿದಿಲ್ಲವೇ? ಸರ್ವೇಶ್ವರ ಅನಂತ ದೇವರಲ್ಲವೇ? ಭೂದಿಗಂತಗಳನ್ನು ಆತ ಸೃಜಿಸಿದನಲ್ಲವೇ? ದಣಿವೆಂಬುದು ಇಲ್ಲ, ಬಳಲಿಕೆ ಎಂಬುದು ಇಲ್ಲ ಆತನಿಗೆ. ಆತನ ದಕ್ಷಸಾಮಥ್ರ್ಯ ಅಗಮ್ಯ ಪರಿಶೋಧನೆಗೆ.
29 : ದಯಪಾಲಿಸುವನಾತ ಬಲಾಭಿವೃದ್ಧಿಯನ್ನು ಬಳಲಿದವನಿಗೆ ಅನುಗ್ರಹಿಸುವನಾತ ಚೈತನ್ಯವನು ನಿತ್ರಾಣನಿಗೆ.
30 : ಯುವಕರೂ ದಣಿದು ಬಳಲುವರು ತರುಣರೂ ಸೊರಗಿ ಮುಗ್ಗರಿಸುವರು.
31 : ಸರ್ವೇಶ್ವರನನ್ನು ಎದುರು ನೋಡುವವರು ಹೊಸ ಚೇತನವನ್ನು ಹೊಂದುವರು. ರೆಕ್ಕೆ ಚಾಚಿದ ಹದ್ದುಗಳಂತೆ ಹಾರುವರು ಓಡಿದರೂ ದಣಿದರು, ನಡೆದರೂ ಬಳಲರು.
-------------
 ಕೀರ್ತನೆ103:1-2, 3-4, 8, 10
ನನ್ನ ಅಂತರಂಗವೇ, ಭಜಿಸು ಪ್ರಭುವನು
1 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು / ನನ್ನ ಅಂತರಂಗವೇ, ಭಜಿಸು ಆತನನು / ನೆನೆ ಆತನ ಪರಮಪಾವನ ನಾಮವನು //
2 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು / ಮರೆಯದಿರು ಆತನ ಉಪಕಾರಗಳೊಂದನು //
3 : ಮನ್ನಿಸುವನಾತ ನನ್ನ ದೋಷಗಳನು / ವಾಸಿಮಾಡುವನು ನನ್ನ ರೋಗಗಳನು //
4 : ಉಳಿಸುವನು ಪಾತಾಳದ ಕೂಪದಿಂದ ನನ್ನನು / ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು //
8 : ಪ್ರಭು ದಯಾಳು, ಕೃಪಾಪೂರ್ಣನು / ಸಹನಶೀಲನು, ಪ್ರೀತಿಮಯನು //
10 : ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ / ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ //
--------------
ಶುಭಸಂದೇಶ : ಮತ್ತಾಯ 11:28 - 30
28 : "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ.
29 : ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು.
30 ನನ್ನ ನೊಗ ಹಗುರ, ನನ್ನ ಹೊರೆ ಸುಗಮ," ಎಂದರು.
------------
ಚಿಂತನೆ
ಯೆಹೊದ್ಯರ ಧಾರ್ಮಿಕ ನಿಯಮ, ಆಚಾರ, ಸಂಪ್ರದಾಯಗಳಿಂದ ತತ್ತರಿಸಿ ಹೋಗಿದ್ದ ಜನರನ್ನು ಯೇಸು ತಮ್ಮ ಬಳಿಗೆ ಆಹ್ವಾನಿಸುತ್ತಾರೆ. ದೇವರು ಮೋಶೆಯ ಮೂಲಕ ನೀಡಿದ ೧೦ ಆಜ್ಞೆಗಳಿಗೆ ಯೆಹೊದ್ಯ, ಧಾರ್ಮಿಕ ಅನೇಕ ಉಪಕಟ್ಟಳೆಗಳನ್ನು ಸೇರಿಸಿದ್ದರು. ಯೇಸುವಿನ ಕಾಲದಲ್ಲಿ ಸುಮಾರು ೬೧೫ ಕಟ್ಟಳೆಗಳಿಂದ ಸಾಮಾನ್ಯ ಜನರು ನಲುಗಿ ಹೋಗಿದ್ದರು. ಇವರ ಯಾತನೆಯನ್ನು ಕಂಡ ಯೇಸು ಯಾವುದೇ ನೀತಿ ನಿಯಮಗಳ ಕಟ್ಟು ಹಾಕದೆ ಎಲ್ಲರಿಗೂ ಸುಲಭವಾದ ಹಾಗೂ ಹಗುರವಾದ ಪ್ರೀತಿಯ ಸೇವೆಗೆ ಯೇಸು ಕರೆ ನೀಡುತ್ತಾರೆ. ಯೇಸು ಶಿಷ್ಯರಿಗೆ ತಮ್ಮಿಂದ ದೀನತೆ ಹಾಗೂ ನಮ್ರತೆಯ ಗುಣವನ್ನು ಕಲಿಯಲು ಆಹ್ವಾನವನ್ನು ನೀಡುತ್ತಾರೆ.

No comments:

Post a Comment