Sunday, 8 December 2019

ಆಗಮನ ಕಾಲದ ಎರಡನೆಯ ಶನಿವಾರ

ಡಿಸೆಂಬರ್ 14/  2019
ಆಗಮನ ಕಾಲದ ಎರಡನೆಯ ವಾರ
ಸ್ಮರಣೆ : ಶಿಲುಬೆಯ ಸಂತ ಜಾನ್ (ಯಾಜಕ ಮತ್ತು ಧರ್ಮಸಭೆಯ ಪಂಡಿತ)
ಮೊದಲನೇ ವಾಚನ ಸಿರಾಖ 48:1-4, 9-11
 ಕೀರ್ತನೆ: 80:2-3, 15-16, 18-19
ಶುಭಸಂದೇಶ : ಮತ್ತಾಯ 17:10-13
--------------------
ಮೊದಲನೇ ವಾಚನ ಸಿರಾಖ 48:1-4, 9-11
1 : ಎಲೀಯನು ಆಮೇಲೆ ಪ್ರವಾದಿ ಎಲೀಯನೆದ್ದನು ಬೆಂಕಿಯಂತೆ ಉರಿಯಿತವನ ನುಡಿ ಪಂಜಿನಂತೆ.
2 : ಕ್ಷಾಮವನ್ನು ಬರಮಾಡಿದನಿವನು ಜನರ ಮೇಲೆ ಅವರನ್ನು ಕುಂದಿಸಿದನು ತನ್ನ ರೋಷದಿಂದಲೆ.
3 : ಆಕಾಶವನ್ನೇ ಮುಚ್ಚಿಬಿಟ್ಟನು ಸರ್ವೇಶ್ವರನ ಹೆಸರಿನಲ್ಲಿ ಬೆಂಕಿಯಿಳಿಯುವಂತೆ ಮಾಡಿದನು ಮೂರುಸಾರಿ.
4 : ಎಲೈ ಎಲೀಯನೇ, ಮಹತ್ಕಾರ್ಯಗಳಲ್ಲಿ ನೀನು ಎಷ್ಟು ಘನವಂತನಾಗಿದ್ದೆ ! ನಿನ್ನಂತೆ ಹೆಚ್ಚಳಪಡುವವರು ಯಾರಿದ್ದಾರೆ?
9 : ನೀ ಒಯ್ಯಲ್ಪಟ್ಟೆ ಬೆಂಕಿಯ ಬಿರುಗಾಳಿಯಲ್ಲಿ ಅಗ್ನಿಮಯ ಕುದುರೆಗಳೆಳೆದ ರಥದಲ್ಲಿ.
10 : ಕೋಪ ರೌದ್ರಕ್ಕೇರುವುದಕ್ಕೆ ಮುಂಚೆ ಅದನ್ನು ಶಾಂತಪಡಿಸುವುದಕ್ಕಾಗಿ ತಂದೆಯ ಹೃದಯವನ್ನು ಮಗನ ಕಡೆಗೆ ತಿರುಗಿಸುವುದಕ್ಕಾಗಿ ಇಸ್ರಯೇಲಿನ ಕುಲಗಳನ್ನು ಯಥಾಸ್ಥಿತಿಗೆ ತರುವುದಕ್ಕಾಗಿ ತಕ್ಕಕಾಲದಲ್ಲಿ ಗದರಿಸುವಾತ ನೀನೆಂದು ಬರೆದಿದೆ ನಿನ್ನ ವಿಷಯವಾಗಿ.
11 : ನಿನ್ನನು ನೋಡುವವರು ಧನ್ಯರು ಪ್ರೀತಿಯಿಂದ ನಿಧನರಾದವರು ಧನ್ಯರು ! ಕಾರಣ, ನಾವು ಸಹ ನಿಜವಾಗಿ ಜೀವಿಸುವೆವು.
------------
 ಕೀರ್ತನೆ: 80:2-3, 15-16, 18-19
ಸರ್ವಶಕ್ತನಾದ ದೇವನೆ, ಉದ್ಧರಿಸು ನಮ್ಮನು / ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು //
1 : ಕಿವಿಗೊಟ್ಟು ಆಲಿಸೋ, ಇಸ್ರಯೇಲರ ಮೇಷಪಾಲನೇ / ಜೋಸೆಫನ ವಂಶಜರನು ಕುರಿಹಿಂಡಂತೆ ಕರೆತಂದವನೇ / ವಿರಾಜಿಸು, ಕೆರೂಬಿಯರ ಮಧ್ಯೆ ಆಸೀನನಾದವನೇ //
2 : ಶೋಭಿಸು ಎಫ್ರಯಿಮ್, ಬೆನ್ಯಮಿನ್, ಮನಸ್ಸೆ ಕುಲಗಳ ಮುಂದೆ / ತೋರ್ಪಡಿಸು ನಿನ್ನ ಶೌರ್ಯವನು, ಬಂದು ಜಯಪ್ರದನಾಗು ನಮಗೆ //
3 : ಎಲೈ ದೇವನೇ, ಪುನರುದ್ಧಾರ ಮಾಡೆಮ್ಮನು / ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು //
15 : ಕಾಪಾಡು ನಿನ್ನ ಬಲಗೈ ನೆಟ್ಟು ಸಾಕಿದ ಸಸಿಯನು / ಕಾದಿರಿಸು ನಿನಗೆಂದೇ ನೀ ಬೆಳೆಸಿದಾ ಬಳ್ಳಿಯನು //
16 : ಅದನು ಬೆರಣಿಯಂತೆ ಸುಟ್ಟುಹಾಕಿದವರಾದರೋ / ನಿನ್ನ ಕೋಪದೃಷ್ಟಿಯಿಂದಲೆ ನಾಶವಾಗುವರು //
18 : ಆಗ ಬಿಟ್ಟಗಲುವುದಿಲ್ಲ ನಾವೆಂದೆಂದಿಗು ನಿನ್ನನು / ಪುನರ್ಜೀವಗೊಳಿಸು, ಮಾಳ್ಪೆವು ನಿನ್ನ ನಾಮಸ್ಮರಣೆಯನು //
19 : ಸರ್ವಶಕ್ತನಾದ ದೇವನೆ, ಉದ್ಧರಿಸು ನಮ್ಮನು / ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು //
--------------
ಶುಭಸಂದೇಶ : ಮತ್ತಾಯ 17:10-13
10 : ಶಿಷ್ಯರು, "ಎಲೀಯನೇ ಮೊದಲು ಬರಬೇಕಾಗಿದೆ ಎಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ, ಅದು ಹೇಗೆ?" ಎಂದು ಯೇಸುವನ್ನು ಕೇಳಿದರು.
11 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಎಲೀಯನು ಬಂದು ಎಲ್ಲವನ್ನೂ ಸಜ್ಜುಗೊಳಿಸುವನು ಎಂಬುದು ನಿಜ.
12 : ಆದರೆ ನಾನು ನಿಮಗೆ ಹೇಳುತ್ತೇನೆ; ಎಲೀಯನು ಈಗಾಗಲೇ ಬಂದಾಗಿದೆ; ಜನರು ಆತನನ್ನು ಗುರುತಿಸದೇ ತಮಗೆ ಇಷ್ಟಬಂದ ಹಾಗೆ ಹಿಂಸಿಸಿದ್ದೂ ಆಗಿದೆ. ಅಂತೆಯೇ ನರಪುತ್ರನೂ ಅವರ ಕೈಯಿಂದ ಯಾತನೆಯನ್ನು ಅನುಭವಿಸುವನು," ಎಂದರು.
13 : ಅವರು ಹೇಳುತ್ತಿರುವುದು ಸ್ನಾನಿಕ ಯೊವಾನ್ನನನ್ನು ಕುರಿತೇ ಎಂದು ಪ್ರೇಷಿತರು ಆಗ ಅರ್ಥಮಾಡಿಕೊಂಡರು.
------------
ಚಿಂತನೆ
ಯಾರಾದರೂ ನನ್ನನ್ನು ಹಿಂಬಾಲಿಸಲು ಇಚ್ಚಿಸಿದರೆ, ನನ್ನ ಶಿಲುಬೆ ಹೊತ್ತು ಬರಲಿ (ಮಾರ್ಕ ೮:೩೪) ಎಂಬ ಕ್ರಿಸ್ತನ ಮಾತುಗಳನ್ನು ಅಕ್ಷರಶಃ ಪಾಲಿಸಿದರು ಶಿಲುಬೆಯ ಸಂತ ಜಾನ್. ಲೌಕಿಕ ಸುಖಭೋಗಗಳಷ್ಟೇ, ಧಾರ್ಮಿಕ ಸುಖಭೋಗಗಳೂ ಅಪಾಯಕಾರಿ ಎಂಬ ನಂಬಿಕೆ ತಳೆದವರು ಶಿಲುಬೆಯ ಸಂತ ಜಾನ್. ನಿನಗೆ ಇನ್ನೇನು ಬೇಕು ಆತ್ಮವೇ? ನಿನ್ನೋಳಗೆ ಶ್ರೀಮಂತಿಗೆ, ಸಂತಸ, ತೃಪ್ತಿ, ಸಾಮ್ರಾಜ್ಯ ಎಲ್ಲವೂ ಇರುವಾಗ ನಿನ್ನ ಹೂರಗೆ ಇನ್ನೇನನ್ನು ನೀನು ಬಯಸುವೆ? ಏನಾದರೂ ಬಯಸುವಿಯಾದರೆ ಯೇಸುವನ್ನು ಬಯಸು. ಆತನನ್ನು ನಿನ್ನಿಂದ ಹೊರಗೆ ಹುಡುಕಬೇಡ, ನಿನ್ನೂಳಗೆ ಹುಡುಕು. ಇದು ಶಿಲುಬೆಯ ಸಂತ ಜಾನರ ಅನುಭಾವಿಕ ಅನುಭವ.
ದೈವ ಶಾಸ್ತ್ರದ ಪಂಡಿತ ಸಂತ ಜಾನರು ಅನೇಕ ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ಮುಖ್ಯವಾದವುಗಳು ' ಅಸೆಂಟ್ ಆಫ್ ಮೌಂತ್ ಕಾರ್ಮೆಲ್, ಡಾರ್ಕ್ ನೈಟ್ ಆಫ್ ದ ಸೋಲ್, ದ ಲಿವಿಂಗ್ ಫ್ಲೇಮ್ ಆಫ್ ಲವ್. ೧೭೨೬ ರಲ್ಲಿ ಹದಿಮೂರನೇ ಬೆನೆದಿಕ್ಟ ಅವರನ್ನು ಸಂತರೆಂದೂ, ಧರ್ಮ ಸಭೆಯ ಪಂಡಿತರೆಂದು ಘೋಷಿಸುತ್ತಾರೆ.

No comments:

Post a Comment