ಡಿಸೆಂಬರ್ 15/ 2019
ಆಗಮನ ಕಾಲದ ಮೂರನೆಯ ಭಾನುವಾರ
ಮೊದಲನೇ ವಾಚನ: ಯೆಶಾಯ 35:1-6, 10
ಕೀರ್ತನೆ: 146:6-7, 8-9, 9-10
ಎರಡನೇಯ ವಾಚನ: ಯಕೋಬ: 5:7-10
ಶುಭಸಂದೇಶ : ಮತ್ತಾಯ 11:2-11
-------------
ಮೊದಲನೇ ವಾಚನ: ಯೆಶಾಯ 35:1-6, 10
1 : ಆನಂದಿಸಲಿ ಅರಣ್ಯವೂ ಮರುಭೂಮಿಯೂ ಹೂಗಳಂತೆ ಅರಳಿ ಹರ್ಷಿಸಲಿ ಒಣನೆಲವು.
2 : ಉಲ್ಲಾಸಿಸಲಿ ಅದು ಹುಲುಸಾಗಿ ಹೂಬಿಟ್ಟು ಹೌದು, ಸಂತಸ ಸಂಗೀತ ಹಾಡುವಷ್ಟು. ದೊರಕಲಿ ಅದಕ್ಕೆ ಲೆಬನೋನಿನ ಮಹಿಮೆಯು ಕರ್ಮೆಲಿನ ಮತ್ತು ಶಾರೋನಿನ ವೈಭವವು. ಕಾಣುವುವು ಸರ್ವೇಶ್ವರನ ಮಹಿಮೆಯನು ನೋಡುವುವು ಇವೆಲ್ಲ ನಮ್ಮ ದೇವರ ವೈಭವವನು.
3 : ಜೋಲುಬಿದ್ದ ಕೈಗಳನ್ನು ಬಲಗೊಳಿಸಿರಿ ನಡುಗುವ ಕಾಲುಗಳನ್ನು ದೃಢಗೊಳಿಸಿರಿ.
4 : ಚಂಚಲ ಹೃದಯರಿಗೆ ಹೀಗೆಂದು ಹೇಳಿ: “ಭಯಪಡಬೇಡಿ; ಎದೆಗುಂದಬೇಡಿ; ಬರುವನು ಆ ದೇವನು ಮುಯ್ಯಿತೀರಿಸಲು ಬರುವನು ಆ ದೇವನು ಪ್ರತೀಕಾರವೆಸಗಲು ತಾನೇ ಬರುವನು ನಿಮ್ಮನ್ನು ರಕ್ಷಿಸಲು.”
5 : ಕುರುಡರ ಕಣ್ಣು ಕಾಣುವುದಾಗ ಕಿವುಡರ ಕಿವಿ ತೆರೆಯುವುದಾಗ.
6 : ಜಿಗಿಯುವನು ಕುಂಟನು ಜಿಂಕೆಯಂತೆ ಹಾಡುವುದು ಮೂಕನ ನಾಲಿಗೆ ಹರ್ಷಗೀತೆ. ಒರತೆಗಳು ಒಡೆಯುವುವು ಅರಣ್ಯದಲಿ ನದಿಗಳು ಹುಟ್ಟಿಹರಿಯುವುವು ಒಣನೆಲದಲಿ.
10 : ಹಿಂದಿರುಗುವರು ಸರ್ವೇಶ್ವರನಿಂದ ವಿಮೋಚನೆ ಪಡೆದವರು ಜಯಜಯಕಾರದೊಂದಿಗೆ ಸಿಯೋನನು ಸೇರುವರು. ನಿತ್ಯಾನಂದ ಸುಖವಿರುವುದು ಕಿರೀಟಪ್ರದವಾಗಿ ಸಿಗುವುದವರಿಗೆ ಹರ್ಷಾನಂದದ ಸವಿ ತೊಲಗುವುದು ದುಃಖದುಗುಡದ ಕಹಿ.
------------
ಕೀರ್ತನೆ: 146:6-7, 8-9, 9-10
6 : ಭೂಮ್ಯಾಕಾಶ, ಸಾಗರ, ಚರಾಚರಗಳನು ನಿರ್ಮಿಸಿದವ ಆತನೆ / ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೆ
7 : ದೊರಕಿಸುವನು ನ್ಯಾಯ ದಲಿತರಿಗೆ / ಒದಗಿಸುವನು ಆಹಾರ ಹಸಿದವರಿಗೆ / ನೀಡುವನು ಬಿಡುಗಡೆ ಬಂಧಿತರಿಗೆ
8 : ಕಣ್ಣನ್ನೀಯುವನು ಪ್ರಭು ಕುರುಡರಿಗೆ / ಉದ್ಧಾರಕನಾ ಪ್ರಭು ಕುಗ್ಗಿದವರಿಗೆ / ಆತನ ಒಲವಿರುವುದು ಸಾಧು ಸಜ್ಜನರಿಗೆ
9 : ರಕ್ಷಿಸುವನು ಪ್ರಭು ಪರದೇಶಿಗಳನು / ಆದರಿಸುವನು ಅನಾಥರನು, ವಿಧವೆಯರನು / ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು
10 : ಪ್ರಭುವೇ ಅರಸನು ಸದಾಕಾಲಕು / ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು / ಅಲ್ಲೆಲೂಯ! //
---------
ಎರಡನೇಯ ವಾಚನ: ಯಕೋಬ: 5:7-10
7 : ಸಹೋದರರೇ, ಪ್ರಭು ಪುನರಾಗಮಿಸುವವರೆಗೆ ತಾಳ್ಮೆಯಿಂದ ಇರಿ. ರೈತನನ್ನು ಗಮನಿಸಿರಿ: ತನ್ನ ಹೊಲದಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷಿಸುವ ಅವನು ಮುಂಗಾರು ಹಿಂಗಾರು ಮಳೆಗಾಗಿ ತಾಳ್ಮೆಯಿಂದ ಕಾದಿರುತ್ತಾನೆ.
8 : ಹಾಗೆಯೇ, ನೀವೂ ಸಹ ತಾಳ್ಮೆಯಿಂದಿರಿ, ದೃಢಚಿತ್ತರಾಗಿರಿ. ಪ್ರಭುವಿನ ಪುನರಾಗಮನ ಸನ್ನಿಹಿತವಾಗಿದೆ.
9 : ಸಹೋದರರೇ, ದಂಡನಾತೀರ್ಪಿಗೆ ಗುರಿ ಆಗದಂತೆ ಒಬ್ಬರ ಮೇಲೊಬ್ಬರು ಗೊಣಗುಟ್ಟಬೇಡಿ. ಇಗೋ, ನ್ಯಾಯಾಧೀಶನು ಬಾಗಿಲ ಬಳಿಯಲ್ಲೇ ನಿಂತಿದ್ದಾನೆ.
10 : ಸಹೋದರರೇ, ಸಂಕಷ್ಟಗಳನ್ನು ತಾಳ್ಮೆಯಿಂದ ಸಹಿಸಿದ್ದಕ್ಕೆ ನಿದರ್ಶನ ಬೇಕೇ? ಪ್ರಭುವಿನ ಹೆಸರಿನಲ್ಲಿ ಬೋಧಿಸಿದ ಪ್ರವಾದಿಗಳನ್ನು ಸ್ಮರಿಸಿಕೊಳ್ಳಿ.
-------------
ಶುಭಸಂದೇಶ : ಮತ್ತಾಯ 11:2-11
2 : ಸ್ವಾಮಿಯ ಕಾರ್ಯಕಲಾಪಗಳ ಸುದ್ದಿ ಸೆರೆಯಲ್ಲಿದ್ದ ಸ್ನಾನಿಕ ಯೊವಾನ್ನನ ಕಿವಿಗೆ ಬಿದ್ದಿತು. ಆತನು ತನ್ನ ಶಿಷ್ಯರಲ್ಲಿ ಕೆಲವರನ್ನು ಅವರ ಬಳಿಗೆ ಕಳುಹಿಸಿದನು.
3 : ಇವರು ಬಂದು, "ಯೊವಾನ್ನನು ತಿಳಿಯಪಡಿಸಿದ ಪ್ರಕಾರ ಬರಬೇಕಾದವರು ನೀವೋ? ಅಥವಾ ಬೇರೊಬ್ಬನನ್ನು ನಾವು ಎದುರು ನೋಡಬೇಕೋ?" ಎಂದು ಯೇಸುವನ್ನು ಕೇಳಿದರು.
4 : ಅದಕ್ಕೆ ಯೇಸು, "ನೀವು ಕೇಳುವುದನ್ನೂ ಕಾಣುವುದನ್ನೂ ಯೊವಾನ್ನನಿಗೆ ಹೋಗಿ ತಿಳಿಸಿರಿ.
5 : ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಮತ್ತೆ ಜೀವ ಪಡೆಯುತ್ತಾರೆ. ದೀನದಲಿತರಿಗೆ ಶುಭಸಂದೇಶವನ್ನು ಪ್ರಕಟಿಸಲಾಗುತ್ತಿದೆ.
6 : ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳದವನು ಭಾಗ್ಯವಂತನು!" ಎಂದು ಹೇಳಿ ಕಳುಹಿಸಿದರು.
7 : ಯೊವಾನ್ನನಿಂದ ಬಂದಿದ್ದ ಶಿಷ್ಯರು ಹೊರಟುಹೋದಾಗ, ಯೇಸುಸ್ವಾಮಿ ಜನಸಮೂಹಕ್ಕೆ ಯೊವಾನನನ್ನು ಕುರಿತು ಮಾತನಾಡಿದರು: "ಬೆಂಗಾಡಿನಲ್ಲಿ ನೀವು ಏನನ್ನು ನೋಡಲೆಂದು ಹೋದಿರಿ? ಗಾಳಿಗೆ ಓಲಾಡುವ ಜೊಂಡನ್ನೆ?
8 : ಇಲ್ಲವಾದರೆ, ಏಕೆ ಹೋದಿರಿ? ನಯವಾದ ರೇಷ್ಮೆ ಉಡುಪನ್ನು ಧರಿಸಿದ್ದ ವ್ಯಕ್ತಿಯನ್ನು ನೋಡಲು ಹೋದಿರೇನು? ಅಂತಹ ಉಡುಗೆ ತೊಡುಗೆ ಧರಿಸುವವರು ಅರಮನೆಗಳಲ್ಲಿ ಇರುತ್ತಾರಷ್ಟೇ.
9 : ಹಾಗಾದರೆ ಯಾವ ಉದ್ದೇಶದಿಂದ ಹೋದಿರಿ? ಪ್ರವಾದಿಯನ್ನು ನೋಡಲೆಂದೋ? ಹೌದು ಪ್ರವಾದಿಗಿಂತಲೂ ಶ್ರೇಷ್ಠನಾದವನನ್ನು ನೋಡಿದಿರಿ ಎಂಬುದು ನಿಜ.
10 : ‘ಇಗೋ, ನನ್ನ ದೂತನನ್ನು ನಿನಗೆ ಮುಂದಾಗಿ ಕಳುಹಿಸುವೆನು. ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ದಗೊಳಿಸುವನು’ ಎಂದು ಪವಿತ್ರಗ್ರಂಥದಲ್ಲಿ ಉಲ್ಲೇಖಿಸಿರುವುದು ಈ ಯೊವಾನ್ನನನ್ನು ಕುರಿತೇ.
11 : ಮಾನವನಾಗಿ ಜನಿಸಿದ್ದವರಲ್ಲಿ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಾರೂ ಹುಟ್ಟಿಲ್ಲ! ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಆದರೂ ಸ್ವರ್ಗಸಾಮ್ರಾಜ್ಯದಲ್ಲಿ ಕನಿಷ್ಠನಾದವನು ಕೂಡ ಅವನಿಗಿಂತ ಶ್ರೇಷ್ಟನೇ ಸರಿ.
----------
ಚಿಂತನೆ
ಆಗಮನ ಕಾಲದ ಮೊದಲೆರಡು ಭಾನುವಾರಗಳು ಪ್ರಭುವಿನ ಆಗಮನ ಬಗ್ಗೆ ತಿಳಿಸಿದರೆ ಕೊನೆಯ ಎರಡು ಭಾನುವಾರಗಳು ಕ್ರಿಸ್ತನ ಜನನದ ಬಗ್ಗೆ ತಿಳಿಸುತ್ತವೆ. ಆಗಮನ ಕಾಲದ ಮೂರನೇಯ ಭಾನುವಾರವನ್ನು ಲ್ಯಾಟಿನ್ ಭಾಷೆಯಲ್ಲಿ 'ಗೌಡೆತೆ' ಭಾನುವಾರ ಅಂದರೆ ಸಂತೋಷದ, ಸಂಭ್ರಮದ ಭಾನುವಾರ ಎಂಬ ಕರೆಯಲಾಗುತ್ತದೆ. ಕ್ರಿಸ್ತನ ಬರುವಿಕೆ ಸಂತೋಷ, ಸಂಭ್ರಮದ ಸಂಗತಿ ಎಂದು ಈ ಭಾನುವಾರ ನೆನಪಿಸುತ್ತದೆ.
ಯೊವಾನ್ನ ತನ್ನ ಮಾತು ಮತ್ತು ಕೌರ್ಯದಿಂದ ಹೊಸ ಒಡಂಬಡಿಕೆಯ ಒಬ್ಬ ಮೇರು ಪ್ರವಾದಿಯಾಗಿ ನಿಲ್ಲುತ್ತಾನೆ. ಯೋವಾನ್ನ ಎಂದರೆ ಹೀಬ್ರೂ ಭಾಷೆಯಲ್ಲಿ 'ದೇವರು ಕೃಪಾಪೂರ್ಣರು' (God is gracious) ಎಂದರ್ಥ. ಯೋವಾನ್ನ ಪಾಪಕ್ಷಮೆಯ ಬೋಧನೆ, ಧೈರ್ಯ, ದಿಟ್ಟತನ ಮತ್ತು ಸ್ನಾನದೀಕ್ಷೆಯ ಮೂಲಕ ಅನೇಕ ಜನರನ್ನು ತನ್ನೆಡೆ ಸೆಳೆದವನು. ಯೊವಾನ್ನ ದೀನತೆಯ ಪ್ರತೀಕ. ಆತನ ಕಾರ್ಯ ವೈಖರಿ ನೋಡಿದ ಜನ ಆತನನ್ನೇ 'ರಕ್ಷಕ' ಎಂದು ಭಾವಿಸಿದರು. ಆದರೆ ಯೊವಾನ್ನ ದೀನತೆಯಿಂದ ತಾನು ರಕ್ಷಕನ ಪಾದರಕ್ಷೆಯನ್ನು ಬಿಚ್ಚಲೂ ಅರ್ಹನಲ್ಲನೆಂದ. ನ್ಯಾಯ ಮತ್ತು ಸತ್ಯವನ್ನು ಪ್ರತಿಪಾದಿಸಲು ಯೊವಾನ್ನ ಹಿಂಜರಿಯಲಿಲ್ಲ. ಹೆರೋದರಸನ ಅನೈತಿಕತೆಯನ್ನು ಧೈರ್ಯವಾಗಿ ಖಂಡಿಸಿದ. ತನ್ನ ದಿಟ್ಟತೆಗಾಗಿ ಪ್ರಾಣವನ್ನೆ ಅರ್ಪಿಸಿದ. ಕ್ರಿಸ್ತನ ಬರುವಿಕೆಗಾಗಿ ಸಿದ್ದರಾಗುತ್ತಿರುವ ನಮಗೆ ಯೊವಾನ್ನನ ಬದುಕು ಪ್ರೇರಣೆಯಾಗಲಿ. ನಮ್ಮ ಆಲೋಚನೆ, ನಡೆ, ನುಡಿ ಕ್ರಿಸ್ತನಿಗೆ ಸಾಕ್ಷಿಯಾಗಲಿ.
No comments:
Post a Comment