Sunday, 8 December 2019

ಆಗಮನ ಕಾಲದ ಎರಡನೆಯ ಮಂಗಳವಾರ

ಡಿಸೆಂಬರ್ 10/  2019
ಆಗಮನ ಕಾಲದ ಎರಡನೆಯ ವಾರ
ಮೊದಲನೇ ವಾಚನ ಯೆಶಾಯ 40:1-11
 ಕೀರ್ತನೆ: 96:1-2,3,10,11-12,13
ಶುಭಸಂದೇಶ : ಮತ್ತಾಯ 18:12-14
-------------------
ಮೊದಲನೇ ವಾಚನ ಯೆಶಾಯ 40:1-10
1 : ನಿಮ್ಮ ದೇವರು ಇಂತೆನ್ನುತ್ತಾರೆ: “ಸಂತೈಸಿ, ನನ್ನ ಜನರನ್ನು ಸಂತೈಸಿರಿ.
2 : ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ; ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕೆ ಸರ್ವೇಶ್ವರಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ”
3 : ಇಗೋ, ಈ ವಾಣಿಯನ್ನು ಕೇಳಿ: “ಸರ್ವೇಶ್ವರಸ್ವಾಮಿಗೆ ಮಾರ್ಗವನ್ನು ಸಿದ್ಧಮಾಡಿ ಅರಣ್ಯದಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗಮಾಡಿ ಅಡವಿಯಲಿ.
4 : ತುಂಬಬೇಕು ಎಲ್ಲ ಹಳ್ಳಕೊಳ್ಳಗಳನು ಮಟ್ಟಮಾಡಬೇಕು ಎಲ್ಲ ಬೆಟ್ಟ ಗುಡ್ಡಗಳನು. ನೆಲಸಮಮಾಡಬೇಕು ದಿಬ್ಬದಿಣ್ಣೆಗಳನು ಸಮತಲಗೊಳಿಸಬೇಕು ತಗ್ಗು ಮುಗ್ಗಾದ ಸ್ಥಳಗಳನು.
5 : ಗೋಚರವಾಗುವುದಾಗ ಸರ್ವೇಶ್ವರ ಸ್ವಾಮಿಯ ಮಹಿಮೆಯು, ಮಾನವರೆಲ್ಲರೂ ಅದನ್ನು ಕಾಣುವರು ಒಟ್ಟಿಗೆ, ಸರ್ವೇಶ್ವರಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ.”
6 : ಆ ವಾಣಿ ಮತ್ತೆ ಕೇಳಿಸಿತು: ‘ಗಟ್ಟಿಯಾಗಿ ಕೂಗು’ ಎಂದಿತು ನಾನೇನೆಂದು ಕೂಗಲಿ ಎನ್ನಲು ಈ ಪರಿಯಾಗಿ ಉತ್ತರಿಸಿತು: “ನರಮಾನವರೆಲ್ಲ ಬರೀ ಹುಲ್ಲಿನಂತೆ ಅವರ ಸೊಬಗೆಲ್ಲಾ ಬಯಲಿನ ಕುಸುಮದಂತೆ.
7 : ಪ್ರಭುವಿನ ಶ್ವಾಸ ಬೀಸಲು ಒಣಗಿ ಹೋಗುವುದಾ ಹುಲ್ಲು ಬಾಡಿ ಹೋಗುವುದಾ ಹೂವು ಮಾನವರೆಲ್ಲ ಹುಲ್ಲೇ ಹುಲ್ಲು.
8 : ಒಣಗಿ ಹೋಗುವುದಾ ಹುಲ್ಲು, ಬಾಡಿಹೋಗುವುದಾ ಹೂವು, ನಮ್ಮ ದೇವರ ನುಡಿಯಾದರೋ ಇರುವುದು ಚಿರಕಾಲವು.”
9 : ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ, ಧ್ವನಿಯೇರಿಸು, ಶುಭವಾರ್ತೆ ಸಾರಬಲ್ಲ ಜೆರುಸಲೇಮೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು ‘ಇಗೋ, ನಿಮ್ಮ ದೇವರು’ ಎಂದು ಜೂದ ನಗರಗಳಿಗೆ ಸಾರು.
10 : ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ ಇಗೋ, ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ.
---------------
ಕೀರ್ತನೆ: 96:1-2,3,10,11-12,13
ಇಗೋ ಸರ್ವೇಶ್ವರಸ್ವಾಮಿ ಬರುತಿಹನು ಶೂರನಂತೆ
1 : ಹೊಸಗೀತೆಯನು ಹಾಡಿರಿ ಪ್ರಭುವಿಗೆ / ವಿಶ್ವವೆಲ್ಲವು ಹಾಡಲಿ ಆತನಿಗೆ //
2 : ಪ್ರಭುವಿಗೆ ಹಾಡಿರಿ, ಆತನ ನಾಮವನು ಕೊಂಡಾಡಿರಿ / ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ //
3 : ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ | ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ ||
10 : ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ | ಕದಲದ ಸ್ಥಿರತೆಯನು ಇತ್ತಿಹನು ಧರೆಗೆ | ನ್ಯಾಯವಾದ ತೀರ್ಪು ಕೊಡುವನು ಜನಾಂಗಕೆ ||
11 : ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು | ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು ||
12 : ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು | ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು ||
13 : ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವನು ಖರೆಯಾಗಿ | ಜಗಕು, ಜನತೆಗು ತೀರ್ಪಿಸುವನು ನೀತಿನಿಯಮಾನುಸಾರವಾಗಿ ||
---------------------
ಶುಭಸಂದೇಶ : ಮತ್ತಾಯ 18:12-14
12 : “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ, ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ. ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ?
13 : ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಈ ತೊಂಭತ್ತೊಂಭತ್ತು ಕುರಿಗಳಿಗಿಂತ ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
14 : ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದುಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ.
--------------------
ಚಿಂತನೆ
ನಾನೇ ಉತ್ತಮ ಕುರಿಗಾಹಿ, ಉತ್ತಮ ಕುರಿಗಾಹಿಯು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಕೊಡುತ್ತಾನೆ ಎಂದ ಯೇಸು ಈ ಕುರಿಗಾಹಿಯನ್ನು ದೇವರಿಗೆ, ಕಳೆದುಹೋದ ಕುರಿಯನ್ನು ಪಾಪಿಗಳಿಗೆ ಹೋಲಿಸುತ್ತಾರೆ. ಹೇಗೆ ಕುರಿಗಾಹಿಯು ಕಳೆದುಹೋದ ಕುರಿಯನ್ನು ಹುಡುಕಿಕೊಂಡು ಹೋಗುತ್ತಾನೋ ಅದೇ ರೀತಿ ಪ್ರೀತಿಮಯ ದೇವರು ಪಾಪಿಗಳನ್ನು ಹುಡುಕಿಕೊಂಡು ಬರುತ್ತಾರೆ.
ಈ ಸಾಮತಿಯ ಮುಖ್ಯ ಉದ್ದೇಶ ಯೆಹೊದ್ಯ ಧಾರ್ಮಿಕ ನಾಯಕರನ್ನು ಖಂಡಿಸಿ, ಪಾಪಿಗಳಿಗೆ ದೇವರ ನಿಲುವನ್ನು ಸ್ಪಷ್ಟಪಡಿಸುವುದು. ಯೆಹೊದ್ಯರ ನಿಯಮ ಆಚಾರ, ಕಾನೂನುಗಳನ್ನು ಮುರಿದರೆ ಒಬ್ಬ ವ್ಯಕ್ತಿ ಪಾಪಿಯಾಗುತ್ತಿದ್ದ. ಅಂತಹ ವ್ಯಕ್ತಿಗಳನ್ನು ಪಾಪಿಗಳು, ಬಹಿಷ್ಕೃತರು ಎಂದು ದೂರವಿಟ್ಟಿದ್ದರು. ಆದರೆ ಯೇಸು ಅಂತವರೊಂದಿಗೆ ಬೆರೆತು ತಾನು ಬಂದದ್ದು ಪಾಪಿಗಳನ್ನು ಹುಡುಕಿಕೊಂಡು ಎಂಬುದನ್ನು ಸ್ಪಷ್ಟಪಡಿಸುತ್ತಾರೆ.


No comments:

Post a Comment