Wednesday, 18 December 2019

ಆಗಮನ ಕಾಲದ ಮೂರನೆಯ ಶುಕ್ರವಾರ

ಡಿಸೆಂಬರ್ 20/ 2019
ಆಗಮನ ಕಾಲದ ಮೂರನೆಯ ಶುಕ್ರವಾರ
ಮೊದಲನೇ ವಾಚನ:  ಯೆಶಾಯ 7:10-14
 ಕೀರ್ತನೆ: 24:1-2, 3-4, 5-6
ಶುಭಸಂದೇಶ : ಲೂಕ 1:26-38
------------------------
ಮೊದಲನೇ ವಾಚನ:  ಯೆಶಾಯ 7:10-14
10 : ಪುನಃ ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ:
11 : “ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು” ಎಂದರು.
12 : ಅದಕ್ಕೆ ಆಹಾಜನು “ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ” ಎಂದನು.
13 : ಆಗ ಯೆಶಾಯನು: “ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ?

14 : ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು.
---------------------
 ಕೀರ್ತನೆ: 24:1-2, 3-4, 5-6
1 : ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ / ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ //
2 : ಕಡಲನು ತಳಪಾಯವನಾಗಿಸಿದವನು ಆತನೆ / ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೆ //
3 : ಪ್ರಭುವಿನ ಶಿಖರವನು ಏರಬಲ್ಲವನಾರು? / ಆ ನಿವಾಸದಲಿ ನಿಲ್ಲಲು ಯೋಗ್ಯನಾರು? //
4 : ಅಂಥವನಿರಬೇಕು ಶುದ್ಧ ಹಸ್ತನು, ಸುಮನಸ್ಕನು / ಅನಾಚಾರಕೆ, ಅಪಮಾಣಿಕತೆಗೆ ಒಲಿಯನವನು //
5 : ಲಭಿಸುವುದಾತನಿಗೆ ಶುಭ ಪ್ರಭುವಿನಿಂದ / ನೀತಿಯ ಸತ್ಫಲ ರಕ್ಷಕ ದೇವನಿಂದ //
6 : ಇಂಥವರೆ ದೇವರ ದರ್ಶನಾಭ್ಯರ್ಥಿಗಳು / ಇಂಥವರೆ ಯಕೋಬ ದೇವನ ಭಕ್ತಾದಿಗಳು //
----------------------
ಶುಭಸಂದೇಶ : ಲೂಕ 1:26-38
26 : ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು.
27 : ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ.
28 : ದೇವದೂತನು ಆಕೆಯ ಬಳಿಗೆ ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು.
29 : ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು.
30 : ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ;
31 : ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ‘ಯೇಸು’ ಎಂಬ ಹೆಸರಿಡಬೇಕು;
32 : ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು.
33 : ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು.
34 : ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು.
35 : ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು.
36 : ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ.
37 : ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದನು.
38 : ಆಗ ಮರಿಯಳು, “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.
----------------------------
ಚಿಂತನೆ
ದೇವರು ಮಾನವನ ಸಂರಕ್ಷಣಾ ಕಾರ್ಯಕ್ಕೆ ಮಾನವನನ್ನೇ ಸಹಭಾಗಿಯಾನ್ನಾಗಿ ಆರಿಸಿಕೊಂಡರು. ಇಡೀ ಮಾನವ ಕುಲಕೋಟಿಯ ರಕ್ಷಣೆಗೋಸ್ಕರ ದೇವರು ತಮ್ಮ ಮಗನನ್ನು ಈ ಧರೆಗೆ ಕಳುಹಿಸಲು ಮರಿಯಳನ್ನು ಆರಿಸಿಕೊಂಡರು. `ಇದೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ'' ಎಂದುತ್ತರಿಸಿದ ಮರಿಯಳ ಒಪ್ಪಿಗೆಯ ನುಡಿಗಳು ಅದ್ಬುತವನ್ನೇ ಎಸಗಿದವು. ದೇವಲೋಕದಲ್ಲಿ ಹರ್ಷವು ತುಂಬಿ ಹರಿಯಿತು. ದೇವಲೋಕದ ನಿಧಿಯೂ ಜಗತ್ತಿನತ್ತ ಜಾರಿತು. ಮರಿಯಳ ಒಪ್ಪಿಗೆ ಏಕೈಕ ಪುತ್ರರಾದ ಕ್ರಿಸ್ತರನ್ನು ಬುವಿಗೆ ತಂದಿತು. ಮರಿಯಳ ತುಟಿಗಳಿಂದ ಒಪ್ಪಿಗೆ ಹೊರಹೊಮುತಿದ್ದಂತೆ ದೇವವಾಕ್ಯ ಆಕೆಯ ಗರ್ಭದಲ್ಲಿ ಮನುಷ್ಯ ರೂಪತಾಳಿತು.
ಸಂತ ಆನ್ಸ್ಲೆಮ್ ಮರಿಯಳನ್ನು ಕುರಿತು ಈ ರೀತಿ ನುಡಿಯತ್ತಾರೆ. `ಓ ಕನ್ನಿಕೆಯೇ, ನಿನಗೆ ಸರಿ ಸಮಾನರು ಯಾರು ಇಲ್ಲ. ದೇವರು ಮಾತ್ರವೇ ನಿಮಗಿಂತಲೂ ಮೇಲಿನವರು, ದೇವರಲ್ಲದ ದೂತ-ಮಾನವರೆಲ್ಲಾ ನಿಮಗಿಂತಲೂ ಕೆಳಗಿನವರು.' ಮರಿಯಳಂತೆ ನಾವು ಕೂಡ ದೇವರ ಚಿತ್ತಕ್ಕೆ ಶಿರಬಾಗೋಣ.

No comments:

Post a Comment