Friday, 31 January 2020

ಸಾಧಾರಣ ಕಾಲದ ನಾಲ್ಕನೆಯ ಭಾನುವಾರ

02 ಫೆಬ್ರವರಿ  2020
ಭಾನುವಾರ/ಹಸಿರು/ಸಾಧಾರಣ ಕಾಲದ ನಾಲ್ಕನೆಯ ಭಾನುವಾರ   
ಹಬ್ಬ: ಕಂದ ಯೇಸುವಿನ ಸಮರ್ಪಣೆ
1ನೇ  ವಾಚನ  -  ಮಲಾಕಿ 3:1- 4   
ಕೀರ್ತನೆ  -   24:7, 8, 9, 10      
2ನೇ ವಾಚನ  ಹಿಬ್ರಯರಿಗೆ - 2:14-18  
ಶುಭಸಂದೇಶ  -  ಲೂಕ 2:22-40
-------------------
1ನೇ  ವಾಚನ  -  ಮಲಾಕಿ 3:1- 4  
1 : ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ನಾನು ನನ್ನ ದೂತನನ್ನು ಮುಂದಾಗಿ ಕಳುಹಿಸುತ್ತೇನೆ. ನಾನು ಬರಲು ಮಾರ್ಗವನ್ನು ಆತನು ಸಿದ್ಧಗೊಳಿಸುವನು. ನೀವು ಎದುರು ನೋಡುತ್ತಿರುವ ಸರ್ವೇಶ್ವರ ಇದ್ದಕ್ಕಿದ್ದಂತೆ ತಮ್ಮ ಆಲಯಕ್ಕೆ ಬರುವರು. ಇಗೋ, ನಿಮಗೆ ಪ್ರಿಯನಾದ ದೂತನು ಬರುವನು. ನನ್ನ ಒಡಂಬಡಿಕೆಯನ್ನು ನಿಮಗೆ ಪ್ರಕಟಿಸುವನು.”
2 : “ಆದರೆ ಆತನು ಬರುವಾಗ ಆತನನ್ನು ಎದುರುಗೊಳ್ಳಬಲ್ಲವನು ಯಾರು? ಆತನ ದರ್ಶನವನ್ನು ಪಡೆದು ಬದುಕಬಲ್ಲವನು ಯಾರು?
3 : ಆತನು ಅಕ್ಕಸಾಲಿಗನ ಕುಲುಮೆಯ ಬೆಂಕಿಗೂ ಅಗಸನ ಚೌಳಿಗೂ ಸಮಾನನು. ಬೆಳ್ಳಿಯನ್ನು ಶುದ್ಧೀಕರಿಸುವ ಅಕ್ಕಸಾಲಿಗನಂತೆ ಲೇವಿಯ ವಂಶದವರನ್ನು ಶುದ್ಧಗೊಳಿಸುವನು; ಬೆಳ್ಳಿಬಂಗಾರದಂತೆ ಶುದ್ಧೀಕರಿಸುವನು. ಆಗ ಅವರು ಯೋಗ್ಯವಾದ ಕಾಣಿಕೆಗಳನ್ನು ಸರ್ವೇಶ್ವರಸ್ವಾಮಿಗೆ ತಂದೊಪ್ಪಿಸುವರು.

4 : ಪೂರ್ವದಿನಗಳಲ್ಲಿ, ಪುರಾತನ ಕಾಲದಲ್ಲಿ ಇದ್ದಂತೆ ಜೂದಾ ಮತ್ತು ಜೆರುಸಲೇಮಿನ ಜನರ ಕಾಣಿಕೆಗಳು ಆ ಸ್ವಾಮಿಗೆ ಮೆಚ್ಚುಗೆಯಾಗಿರುವುವು.”
-------------------
ಕೀರ್ತನೆ  -   24:7, 8, 9, 10  
7 : ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು / ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು //
8 : ಯಾರಿವನು ಮಹಿಮಾವಂತ ರಾಜಾಧಿರಾಜನು? / ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು!//
9 : ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು / ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು //

10 : ಯಾರಿವನು ಮಹಿಮಾವಂತ ರಾಜಾಧಿರಾಜನು? / ಇವನೇ ಸೇನಾಧೀಶ್ವರನು, ಮಹಿಮಾರಾಜನು //
---------------------
2ನೇ ವಾಚನ  ಹಿಬ್ರಯರಿಗೆ - 2:14-18  
14 : ಇದಲ್ಲದೆ, ಮಕ್ಕಳು ರಕ್ತಮಾಂಸಧಾರಿಗಳಾಗಿರುವುದರಿಂದ ಯೇಸುವು ಅವರಂತೆ ರಕ್ತಮಾಂಸಧಾರಿಯಾದರು.
15 : ಹೀಗೆ ಮರಣಾಧಿಕಾರಿಯಾಗಿದ್ದ ಸೈತಾನನನ್ನು ತಮ್ಮ ಮರಣದಿಂದಲೇ ಸೋಲಿಸಲು ಮತ್ತು ಮರಣಭಯದ ನಿಮಿತ್ತ ತಮ್ಮ ಜೀವನದುದ್ದಕ್ಕೂ ದಾಸ್ಯದಲ್ಲಿದ್ದವರನ್ನು ಬಿಡುಗಡೆ ಮಾಡಲು ಅವರು ಮನುಷ್ಯರಾದರು.
16 : ಅವರು ಉದ್ಧಾರ ಮಾಡಬಂದುದು ಖಂಡಿತವಾಗಿ ದೇವದೂತರನ್ನಲ್ಲ, ಅಬ್ರಹಾಮನ ಸಂತತಿಯನ್ನು.
17 : ಆದಕಾರಣ, ಎಲ್ಲದರಲ್ಲೂ ತಮ್ಮ ಸಹೋದರರಿಗೆ ಸಮಾನರಾಗಬೇಕಾಗಿತ್ತು; ಜನರ ಪಾಪನಿವಾರಣೆಗಾಗಿ ದೇವರ ಕಾರ್ಯಗಳನ್ನು ನಿರ್ವಹಿಸುವ ದಯಾಮಯನೂ ನಂಬಿಕಸ್ಥನೂ ಆದ ಪ್ರಧಾನ ಯಾಜಕನಾಗಬೇಕಾಗಿತ್ತು.

18 : ಸ್ವತಃ ತಾವೇ ಶೋಧನೆಗೊಳಗಾಗಿ ಯಾತನೆಯನ್ನು ಅನುಭವಿಸಿದ್ದರಿಂದ ಶೋಧನೆಗೊಳಗಾಗುವವರಿಗೆ ನೆರವಾಗಲು ಯೇಸು ಸಮರ್ಥರಾದರು.
------------------
ಶುಭಸಂದೇಶ  -  ಲೂಕ 2:22-40
22 : ಮೋಶೆಯ ನಿಯಮದ ಪ್ರಕಾರ ಸೂತಕ ದಿನಗಳು ಮುಗಿದು ಶುದ್ಧೀಕರಣ ದಿನ ಬಂದಾಗ, ತಂದೆತಾಯಿಗಳು ಆ ಮಗುವನ್ನು ಎತ್ತಿಕೊಂಡು ಜೆರುಸಲೇಮಿಗೆ ಹೋದರು.
23 : ಏಕೆಂದರೆ, ‘ಮೊದಲು ಜನಿಸಿದ ಪ್ರತಿಯೊಂದು ಗಂಡು ಮಗುವನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕಾಗಿತ್ತು.
24 : ಅಲ್ಲದೆ, ಧರ್ಮಶಾಸ್ತ್ರದಲ್ಲೇ ಉಲ್ಲೇಖಿಸಿರುವಂತೆ ಒಂದು ಜೋಡಿ ಬೆಳವಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ, ಬಲಿಯನ್ನಾಗಿ ಅರ್ಪಿಸಬೇಕಾಗಿತ್ತು.
25 : ಆಗ ಜೆರುಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬನು ವಾಸವಾಗಿದ್ದನು. ಸತ್ಪುರುಷನೂ ದೈವಭಕ್ತನೂ ಆದ ಇವನು, ಇಸ್ರಯೇಲ್ ಜನತೆಯ ಉದ್ಧಾರಕ ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು. ಪವಿತ್ರಾತ್ಮ ಇವನಲ್ಲಿ ನೆಲೆಸಿದ್ದರು.
26 : ಸರ್ವೇಶ್ವರ ಕಳುಹಿಸಲಿರುವ ಅಭಿಷಿಕ್ತನಾದ ಲೋಕೋದ್ಧಾರಕನ ದರ್ಶನವಾಗುವವರೆಗೆ ತನಗೆ ಸಾವಿಲ್ಲವೆಂದು ಪವಿತ್ರಾತ್ಮರಿಂದಲೇ ಆಶ್ವಾಸನೆ ಪಡೆದಿದ್ದನು.
27 : ಆ ಪವಿತ್ರಾತ್ಮರಿಂದ ಪ್ರೇರಿತನಾಗಿ ಅವನು ಮಹಾದೇವಾಲಯಕ್ಕೆ ಬಂದನು. ಧರ್ಮಶಾಸ್ತ್ರದ ವಿಧಿಯನ್ನು ಪೂರೈಸಲು ಬಾಲಯೇಸುವನ್ನು ತಂದೆತಾಯಿಗಳು ದೇವಾಲಯಕ್ಕೆ ತಂದಾಗ,
28 : ಸಿಮೆಯೋನನು ಆ ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರನ್ನು ಹೀಗೆಂದು ಸ್ತುತಿಸಿದನು:
29 : “ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು; ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನು.
30 : ನೀನಿತ್ತ ಉದ್ದಾರಕನನು ನಾ ಕಂಡೆ ಕಣ್ಣಾರೆ
31 : ಜನರೆಲ್ಲರ ಸಮ್ಮುಖದಲ್ಲಿ ನೀನೀತನನು ಪ್ರತ್ಯಕ್ಷ ಮಾಡಿರುವೆ.
32 : ಈತ ಅನ್ಯ ಜನರನ್ನು ಬೆಳಗಿಸುವ ಜ್ಯೋತಿ; ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ.”
33 : ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳನ್ನು ಕೇಳಿ ತಂದೆ ತಾಯಿಗಳು ಆಶ್ಚರ್ಯಪಟ್ಟರು.
34 : ಅವರನ್ನು ಸಿಮೆಯೋನನು ಆಶೀರ್ವದಿಸಿದನು. ತಾಯಿ ಮರಿಯಳಿಗೆ, “ಇಗೋ, ಈ ಮಗು ಇಸ್ರಯೇಲರಲ್ಲಿ ಅನೇಕರ ಉನ್ನತಿಗೂ ಅನೇಕರ ಅವನತಿಗೂ ಕಾರಣನಾಗುವನು. ಅನೇಕರು ಪ್ರತಿಭಟಿಸುವ ದೈವಸಂಕೇತವಾಗುವನು. ಇದರಿಂದ ಅನೇಕರ ಹೃದಯದಾಳದ ಭಾವನೆಗಳು ಬಯಲಾಗುವುವು.
35 : (ನಿನ್ನ ವಿಷಯದಲ್ಲಿ ಹೇಳುವುದಾದರೆ, ದುಃಖವೆಂಬ ಅಲಗೊಂದು ನಿನ್ನ ಅಂತರಂಗವನ್ನು ಸೀಳುವುದು,)” ಎಂದು ಹೇಳಿದನು.
36 : ಇದಲ್ಲದೆ ಅಲ್ಲಿ ಅಶೇರನ ವಂಶಕ್ಕೆ ಸೇರಿದ ಘನುವೇಲನ ಮಗಳಾದ ಅನ್ನಳೆಂಬ ಪ್ರವಾದಿನಿಯಿದ್ದಳು. ಅವಳು ಮುದಿಪ್ರಾಯದವಳು, ಮದುವೆಯಾಗಿ ಏಳು ವರ್ಷ ಮಾತ್ರ ಗಂಡನೊಡನೆ ಬಾಳಿ ವಿಧವೆಯಾದವಳು.
37 : ಅವಳಿಗೆ ಸುಮಾರು ಎಂಭತ್ತನಾಲ್ಕು ವರ್ಷ ವಯಸ್ಸು. ಮಹಾ ದೇವಾಲಯವನ್ನು ಬಿಟ್ಟು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ; ಹಗಲಿರುಳು ಉಪವಾಸ ಪ್ರಾರ್ಥನೆಗಳಿಂದ ದೇವಾರಾಧನೆಯಲ್ಲಿ ನಿರತಳಾಗಿದ್ದಳು.
38 : ಅವಳು ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿ, ಜೆರುಸಲೇಮಿನ ವಿಮೋಚನೆಯನ್ನು ಎದುರು ನೋಡುತ್ತಿದ್ದ ಅಲ್ಲಿಯವರಿಗೆಲ್ಲಾ ಆ ಶಿಶುವಿನ ವಿಷಯವಾಗಿ ಹೇಳತೊಡಗಿದಳು. ಮರಳಿ ನಜರೇತಿಗೆ
39 : ಸರ್ವೇಶ್ವರನ ಧರ್ಮಶಾಸ್ತ್ರಕ್ಕನುಸಾರ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಜೋಸೆಫ್ ಮತ್ತು ಮರಿಯಳು ಗಲಿಲೇಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಗ್ರಾಮವಾದ ನಜರೇತಿಗೆ ಹಿಂದಿರುಗಿದರು.

40 : ಬಾಲಕ ಯೇಸು ಬೆಳೆದಂತೆ ಶಕ್ತರೂ ಜ್ಞಾನ ಸಂಪೂರ್ಣರೂ ಆದರು. (ಇದಲ್ಲದೆ) ದೈವಾನುಗ್ರಹ ಅವರ ಮೇಲಿತ್ತು.
-------------------
ಚಿಂತನೆ
ಕಂದ ಯೇಸುವಿನ ಸಮರ್ಪಣೆ
ಪವಿತ್ರ ಧರ್ಮಸಭೆಯ ಮಕ್ಕಳಾದ ನಮಗೆ ಇಂದು ವಿಶೇಷವಾದ ದಿನ. ಇಂದು ನಾವು ಅಂದು ಮಾತೆ ಮರಿಯ ಮತ್ತು ಜೋಸೆಫರು ಪ್ರಭು ಯೇಸುವನ್ನು ಜೆರುಸಲೇಮಿನ ದೇವಾಲಯದಲ್ಲಿ ಯಹೂದ್ಯರ ಧಾರ್ಮಿಕ ವಿಧಿನಿಯಮಗಳಂತೆ ದೇವರಿಗೆ ಸಮರ್ಪಿಸಿದ ಆ ಪವಿತ್ರ ಘಟನೆಯನ್ನು ಸ್ಮರಿಸಿ ಸಂಬ್ರಮಿಸುತಿದ್ದೇವೆ. ಯಹೂದ್ಯರ ಧಾರ್ಮಿಕ ಕೇಂದ್ರವಾಗಿದ್ದ ಆ ದೇವಾಲಯದಲ್ಲಿ ಕುರಿಗಳನ್ನು ಮಾನವರ ಪಾಪ ಕ್ಷಮೆಗಾಗಿ ಬಲಿಯಾಗಿ ಅರ್ಪಿಸುತ್ತಿದ್ದರು. ಆ ದೇವಾಲಯಕ್ಕೆ ಪ್ರಭು ಪ್ರಥಮಬಾರಿಗೆ ಆಗಮಿಸುತ್ತಾರೆ. ಮುಂದೆ ಸರ್ವರ ರಕ್ಷಣೆಗೆ ಬಲಿಯಾಗಲಿರುವ ನೈಜ ಕುರಿಮರಿ ಅವರೇ ಎಂಬ ಸತ್ಯವನ್ನು ಆಲ್ಲಿಯ ಧಾರ್ಮಿಕ ಮುಖಂಡರಿಗಾಗಲಿ ಹಾಗೂ ಧರ್ಮಪಂಡಿತರಿರಾಗಲಿ ಗ್ರಹಿಸಲಿಲ್ಲ ಅವರ ಸ್ವಾರ್ಥ ಅವರ ಕಣ್ಣುಗಳನ್ನು ಮುಚ್ಚಿಹಾಕಿತ್ತು. ದೈವ ಭಯ ಅವರಿಗಿರಲಿಲ್ಲ.

ಆದರೆ ಅಲ್ಲಿ ವಾಸವಾಗಿದ್ದ ಸತ್ಪುರುಷನೂ ಹಾಗೂ ದೈವಭಕ್ತನು ಆಗಿದ್ದ ಸಿಮಯೋನ ರಕ್ಷಕನ ಬರುವಿಕೆಗಾಗಿ ತುಡಿಯುತ್ತಿದ್ದ. ಆಗ ಅಲ್ಲಿಗೆ ಬಂದ ಆ ಪುಟ್ಟ ಕಂದನನ್ನು ತನ್ನ ಕರಗಳಲ್ಲಿ ಎತ್ತಿಕೊಂಡು "ಅಭಿಷಿಕ್ತನಾದ ಲೋಕೋದ್ಧಾರಕ ಈತನೇ" ಎಂದು ಹರ್ಷಗೊಳ್ಳುತ್ತಾನೆ ಹಾಗೂ ಸಂತೃಪ್ತನಾಗುತ್ತಾನೆ. ಧಾರ್ಮಿಕ ಮುಖಂಡರಾಗಲಿ, ಧರ್ಮಶಾಸ್ತ್ರಿಗಳಾಗಲಿ ಆ ಮಗುವನ್ನು ರಕ್ಷಕರೆಂದು ಗುರುತಿಸಲಿಲ್ಲ. ಕಾರಣ ಅವರು ಲೌಕಿಕ ಸುಖಭೋಗಗಳಲ್ಲಿ ಮೈಮರೆತ್ತಿದ್ದರು. ಆದರೆ ಸತ್ಪುರುಷನಾಗಿದ್ದ ಸಿಮಯೋನ ತನ್ನ ಇಳಿ ವಯಸ್ಸಿನಲ್ಲಿಯೂ ಅಭಿಷಿಕ್ತನಾದ ಲೋಕೋದ್ಧಾರಕನ ಬರುವಿಕೆಗಾಗಿ ನಿರೀಕ್ಷೆಯಿಂದ ದೃತಿಗೆಡದೆ ಕಾಯುತ್ತಿದ್ದ. ಅವನ ನಂಬಿಕೆ ಹುಸಿಯಾಗಲಿಲ್ಲ.
ಸಿಮಯೋನನು ರಕ್ಷಕರನ್ನು ತನ್ನ ಕರಗಳಲ್ಲಿಡಿದು "ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನ್ನು ನಿನಿತ್ತ ಉದ್ಧಾರಕನನು ನಾಕಂಡೆ ಕಣ್ಣಾರೆ ಜನರೆಲ್ಲರ ಸಮ್ಮುಖದಲ್ಲಿ ನೀನೀತನನು ಪ್ರತ್ಯಕ್ಷಮಾಡಿರುವೆ. ಈತ ಅನ್ಯ ಜನರನ್ನು ಬೇಳಗಿಸುವ ಜ್ಯೋತಿ ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ" (ಲೂಕ 2:29-32) ಎಂದು ಉದ್ಗರಿಸಿದನು.

ನಮ್ಮ ನಡುವೆಯೆ ಲೋಕೋದ್ಧಾರಕ (ಇಮ್ಮಾನುವೇಲ್) ಪ್ರಭು ಯೇಸು ಇದ್ದಾರೆ. ಅವರನ್ನು ಗುರುತಿಸಿ ಅಂಗೀಕರಿಸಿದರೆ ನಮ್ಮ ಉದ್ಧಾರ ಖಂಡಿತ. ನಾವು ಇಸ್ರಯೇಲಿನ ಧಾರ್ಮಿಕ ಮುಖಂಡರು ಹಾಗು ಧರ್ಮಶಾಸ್ತ್ರಿಗಳಂತೆ ಪ್ರಭುವನ್ನು ಮರೆತು ಈ ಲೋಕದ ಆಶಾಪಾಶಗಳಿಗೆ ಬಲಿಯಾದರೆ ನಮ್ಮ ಬಾಳು ನಿಶ್ಪಲವಾದೀತು. ಹಬ್ಬ ಸಂಬ್ರಮವಾದರೆ ಸಾಲದು ಆ ಸಂಬ್ರಮಕ್ಕೆ ಕಾರನರಾದ "ರಕ್ಷಕ" ನಮ್ಮ ಮನದಾಳದಲ್ಲಿ ನಿರಂತರವೂ ಇರಬೇಕಾದರೆ ಆ ಉದ್ಧಾರಕ ರಕ್ಷಕನನ್ನು ಗುರುತಿಸಿ ಅಂಗೀಕರಿಸಬೇಕು ಆಗ ನಮ್ಮ ಬದುಕು ಉದ್ಧಾರವಾದೀತು.
--------------
“ದೇವರಿಗೆ ಏನೇ ಅರ್ಪಿಸಿದರೂ ಹೃತ್ಪೂರ್ವಕ ಪ್ರೀತಿಯಿಂದ ಅರ್ಪಿಸಬೇಕು ”

ಯೆಹೂದ್ಯರ ವಾಡಿಕೆಯಂತೆ ಜೋಸೆಫ್ ಮತ್ತು ಮರಿಯಳು ತಮ್ಮ ಚೊಚ್ಚಲ ಮಗನನ್ನು ದೇವಾಲಯದಲ್ಲಿ ಕಾಣಿಕೆಯಾಗಿ ಸಮರ್ಪಿಸುವ ಸಂಭ್ರಮವನ್ನು ಇಂದು ಆಚರಿಸುತ್ತಿದ್ದೇವೆ. ಅರ್ಪಣೆಯೆಂದರೆ ಮನುಷ್ಯ ತನ್ನ ಪೂಜ್ಯಭಾವವನ್ನು ಅಭಿವ್ಯಕ್ತಿಸಲು ತಾನು ಗೌರವಿಸುವ ವ್ಯಕ್ತಿಗೆ ಮಾಡುವ ಸೇವೆ. ತಮ್ಮ ಪೂಜ್ಯ ಭಾವನೆಯನ್ನು ಅಭಿವ್ಯಕ್ತಗೊಳಿಸಲು ಭಕ್ಷ್ಯ ಭೋಜ್ಯಗಳನ್ನೂ ಫಲಗಳನ್ನೂ ಅರ್ಪಿಸುತ್ತೇವೆ. ನಾವು ದೇವರಿಗೆ ಏನೇ ಅರ್ಪಿಸಿದರೂ ಹೃತ್ಪೂರ್ವಕವಾದ ಪ್ರೀತಿಯಿಂದ ಅರ್ಪಿಸಬೇಕು. ಭಕ್ತ ತನ್ನೆಲ್ಲವನ್ನೂ ದೇವರಿಗೆ ಅರ್ಪಿಸುವುದನ್ನು ಪರಮಭಕ್ತಿ ಎನ್ನುತ್ತಾರೆ. ನನಗೆ ಬೇರೆ ದಿಕ್ಕಿಲ್ಲ, ಎಲ್ಲವೂ ನೀನೇ, ಶರಣಾಗತಿಯೇ ನನ್ನ ಜೀವನದ ಗತಿ ಎಂಬ ಸಾತ್ವಿಕ ಭಕ್ತಿಯಿಂದ ಮಾಡುವಂತಹ ಅರ್ಪಣೆಗೆ ದೇವರು ನಮ್ಮನ್ನು ಸಿದ್ಧಪಡಿಸಲೆಂದು ಪ್ರಾರ್ಥಿಸೋಣ.
----------------------


© 'ದನಿಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment