Monday, 27 January 2020

ಸಾಧಾರಣಾ ಕಾಲದ ಮೂರನೆಯ ಶನಿವಾರ

01 ಫೆಬ್ರವರಿ 2020 / ಶನಿವಾರ

1ನೇ  ವಾಚನ  -  2 ಸಾಮುವೇಲ 12:1-7, 10-17
ಕೀರ್ತನೆ  -  51:12-13, 14-15, 16-17
ಶುಭಸಂದೇಶ: ಮಾರ್ಕ: 4:35-41
--------------------------
1ನೇ  ವಾಚನ  -  2 ಸಾಮುವೇಲ 12:1-7, 10-17
1 : ಸರ್ವೇಶ್ವರಸ್ವಾಮಿ ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದರು. ಅವನು ದಾವೀದನ ಬಳಿಗೆ ಬಂದು ಹೀಗೆಂದು ಹೇಳಿದನು: “ಒಂದು ಊರಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಒಬ್ಬನು ಐಶ್ವರ್ಯವಂತ, ಇನ್ನೊಬ್ಬನು ಬಡವ.
2 : ಐಶ್ವರ್ಯವಂತನಿಗೆ ಬಹಳ ಕುರಿದನಗಳಿದ್ದವು.
3 : ಬಡವನಿಗೆ ಒಂದು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅದೂ ಕೊಂಡು ತಂದದ್ದು. ಅದನ್ನು ಅಕ್ಕರೆಯಿಂದ ಸಾಕುತ್ತಿದ್ದ. ಅದು ದೊಡ್ಡದಾಗುವವರೆಗೆ ಮಗುವಿನಂತೆ ಅವನ ಸಂಗಡ ಹಾಗೂ ಅವನ ಮಕ್ಕಳ ಸಂಗಡವೆ ಬೆಳೆಯುತ್ತಿತ್ತು. ಅವನೊಡನೆ ರೊಟ್ಟಿ ತಿನ್ನುತ್ತಾ ಅವನ ಪಾತ್ರೆಯಲ್ಲೇ ನೀರು ಕುಡಿಯುತ್ತಾ ಇತ್ತು. ಅವನ ಎದೆಯ ಮೇಲೆಯೇ ಒರಗಿಕೊಂಡು ನಿದ್ರೆ ಮಾಡುತ್ತಿತ್ತು.
4 : ಒಂದು ದಿನ ಆ ಐಶ್ವರ್ಯವಂತನ ಮನೆಗೆ ಒಬ್ಬ ಪ್ರಯಾಣಿಕ ಬಂದ. ಆಗ ತನ್ನ ಕುರಿ ದನಗಳಿಂದ ಏನನ್ನೂ ಕೊಲ್ಲಲು ಆ ಐಶ್ವರ್ಯವಂತನಿಗೆ ಮನಸ್ಸಿಲ್ಲದೆ ಹೋಯಿತು. ಆ ಬಡವನ ಕುರಿಮರಿಯನ್ನೇ ಹಿಡಿದುಕೊಂಡು ಅತಿಥಿಗೋಸ್ಕರ ಅಡಿಗೆ ಮಾಡಿಸಿದ.”
5 : ಇದನ್ನು ಕೇಳಿದ್ದೇ ದಾವೀದನು ಆ ವ್ಯಕ್ತಿಯ ಮೇಲೆ ಕಡುಗೋಪಗೊಂಡು ನಾತಾನನಿಗೆ, “ಸರ್ವೇಶ್ವರನಾಣೆ, ಆ ವ್ಯಕ್ತಿ ಸಾಯಲೇಬೇಕು.
6 : ಅವನು ಕರುಣೆಯಿಲ್ಲದೆ ಹೀಗೆ ಮಾಡಿದ್ದರಿಂದ ಆ ಕುರಿಮರಿಗಾಗಿ ನಾಲ್ಕರಷ್ಟು ಹಿಂದಕ್ಕೆ ಕೊಡಲೇಬೇಕು,” ಎಂದನು.
7 : ಆಗ ನಾತಾನನು ದಾವೀದನನ್ನು ದಿಟ್ಟಿಸಿ, “ಆ ಮನುಷ್ಯ ನೀನೇ. ಇಸ್ರಯೇಲರ ದೇವರಾದ ಸರ್ವೇಶ್ವರ ನಿನಗೆ ಹೇಳುವುದು ಇದು: ‘ನಿನ್ನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದವನು ನಾನು; ಸೌಲನ ಕೈಗೆ ಸಿಕ್ಕದಂತೆ ತಪ್ಪಿಸಿದವನೂ ನಾನೇ.
10 : ನೀನು ನನ್ನ ಆಜ್ಞೆಯನ್ನು ತಿರಸ್ಕರಿಸಿದೆ; ಹಾಗು ಹಿತ್ತಿಯನಾದ ಊರೀಯನನ್ನು ಅಮ್ಮೋನಿಯರ ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡೆ. ಆದ್ದರಿಂದ ಕತ್ತಿ ನಿನ್ನ ಮನೆಯನ್ನು ಬಿಟ್ಟು ತೊಲಗುವುದಿಲ್ಲ.
11 : ಸರ್ವೇಶ್ವರನಾದ ನನ್ನ ಮಾತನ್ನು ಕೇಳು: ನಿನ್ನ ಮನೆಯವರಿಂದಲೇ ನಿನಗೆ ಕೇಡು ಉಂಟಾಗುವಂತೆ ಮಾಡುವೆನು. ನಿನ್ನ ಹೆಂಡತಿಯರನ್ನು ನಿನ್ನೆದುರಿನಲ್ಲೇ ಇನ್ನೊಬ್ಬನಿಗೆ ಕೊಡುವೆನು. ಅವನು ಹಗಲಿನಲ್ಲೇ ಅವರ ಕೂಡ ಮಲಗುವನು.
12 : ನೀನು ಅದನ್ನು ಗುಪ್ತವಾಗಿ ಮಾಡಿದೆ. ನಾನು ಹೇಳುವ ಮಾತಾದರೋ ಇಸ್ರಯೇಲರೆಲ್ಲರ ಮುಂದೆ ಬಹಿರಂಗವಾಗಿ ನೆರವೇರುವುದು,’ ಎಂದನು.
13 : ಆಗ ದಾವೀದನು ನಾತಾನನಿಗೆ, “ನಾನು ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿದ್ದೇನೆ,” ಎಂದು ಹೇಳಿದನು. ನಾತಾನನು ಅವನಿಗೆ, “ಸರ್ವೇಶ್ವರ ನಿನ್ನ ಪಾಪವನ್ನು ಕ್ಷಮಿಸಿದ್ದಾರೆ; ನೀನು ಸಾಯುವುದಿಲ್ಲ.
14 : ಆದರೂ ನೀನು ಈ ಕೃತ್ಯದಿಂದ, ಸರ್ವೇಶ್ವರನ ವೈರಿಗಳು ಅವರನ್ನು ಬಹಳವಾಗಿ ನಿಂದಿಸುವುದಕ್ಕೆ ಆಸ್ಪದ ಕೊಟ್ಟೆ. ಆದುದರಿಂದ ನಿನ್ನಿಂದ ಹುಟ್ಟಲಿರುವ ಮಗು ಸತ್ತು ಹೋಗುವುದು,”
15 : ಎಂದು ಹೇಳಿ ಮನೆಗೆ ಹೊರಟು ಹೋದನು.ಊರೀಯನ ಹೆಂಡತಿಯಲ್ಲಿ ದಾವೀದನಿಗೆ ಹುಟ್ಟಿದ ಮಗು ಸರ್ವೇಶ್ವರನ ಶಿಕ್ಷೆಯಿಂದಾಗಿ ಬಹು ಅಸ್ವಸ್ಥವಾಯಿತು.
16 : ಆದುದರಿಂದ ದಾವೀದನು ಮಗುವಿಗಾಗಿ ದೇವರನ್ನು ಪ್ರಾರ್ಥಿಸುತ್ತಾ ಉಪವಾಸ ಮಾಡುತ್ತಾ ಒಳಕೋಣೆಯಲ್ಲಿ ನೆಲದ ಮೇಲೆಯೇ ಬಿದ್ದುಕೊಂಡು ರಾತ್ರಿ ಕಳೆಯುತ್ತಿದ್ದ.
17 : ಆಸ್ಥಾನದ ಅಧಿಕಾರಿಗಳು ಅವನನ್ನು ಎಬ್ಬಿಸುವುದಕ್ಕೆ ಹೋದರು. ಆದರೆ ಅವನು ಏಳಲೂ ಇಲ್ಲ, ಅವರೊಡನೆ ಆಹಾರ ತೆಗೆದುಕೊಳ್ಳಲೂ ಇಲ್ಲ.
-----------------------
ಕೀರ್ತನೆ  -  51:12-13, 14-15, 16-17
12 : ಜೀವೋದ್ಧಾರವನು ಮರಳಿ ಸವಿಯುವಂತೆ ಮಾಡು / ವಿಧೇಯನಾಗಿ ನಡೆವ ಸಿದ್ಧ ಮನಸ್ಸನು ನೀಡು //
13 : ಬೋಧಿಸುವೆನಾಗ ನಿನ್ನ ಮಾರ್ಗವನು ದುರುಳರಿಗೆ / ತಿರುಗಿಕೊಳ್ವರಾಗ ದ್ರೋಹಿಗಳು ನಿನ್ನ ಕಡೆಗೆ //
14 : ತಪ್ಪಿಸೆನ್ನನು ಸ್ವಾಮಿ ದೇವಾ, ರಕ್ತಾಪರಾಧದಿಂದ / ನಿನ್ನ ಸತ್ಯಸಂಧತೆಯನು ಸಾರುವೆ ಮುಕ್ತ ಕಂಠದಿಂದ //
15 : ತೆರೆವಂತೆ ಮಾಡು ಪ್ರಭು ನನ್ನ ತುಟಿಗಳನು / ಸಾರುವುದೆನ್ನ ಬಾಯಿ ನಿನ್ನ ನುಡಿಗಳನು //
16 : ಬಲಿಯರ್ಪಣೆಯಲಿ ನಿನಗೊಲವಿಲ್ಲ | ದಹನ ಬಲಿಯಿತ್ತರು ನಿನಗೆ ಬೇಕಿಲ್ಲ ||
17 : ಮುರಿದ ಮನವೇ ದೇವನೊಲಿವ ಯಜ್ಞವು / ನೊಂದು ಬೆಂದ ಮನವನಾತ ಒಲ್ಲೆಯೆನನು //
18 : ಸಿಯೋನಿಗೆ ದೇವಾ, ಶುಭವನು ಕರುಣಿಸು / ಜೆರುಸಲೇಮ್ ಕೋಟೆಯನು ಮರಳಿ ಎಬ್ಬಿಸು //
19 : ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು / ವೇದಿಕೆ ಮೇಲೆ ಯಜ್ಞಪಶುಗಳನು ಅರ್ಪಿಸುವರು //
--------------------
ಶುಭಸಂದೇಶ: ಮಾರ್ಕ: 4:35-41
35 : ಆ ದಿನ ಸಾಯಂಕಾಲ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ಸರೋವರದ ಆಚೆದಡಕ್ಕೆ ಹೋಗೋಣ,” ಎಂದರು.
36 : ಆಗ ಶಿಷ್ಯರು ಜನರ ಗುಂಪನ್ನು ಬಿಟ್ಟು ದೋಣಿಯಲ್ಲಿ ಕುಳಿತಿದ್ದ ಯೇಸುವನ್ನು ಹಾಗೆಯೇ ತಮ್ಮ ಜೊತೆಯಲ್ಲಿ ಕರೆದುಕೊಂಡು ಹೊರಟರು.
37 : ಆ ದೋಣಿಯ ಸಂಗಡ ಬೇರೆ ದೋಣಿಗಳೂ ಇದ್ದವು. ಸ್ವಲ್ಪ ಮುಂದೆ ಹೋಗುವಷ್ಟರಲ್ಲೇ ದೊಡ್ಡ ಬಿರುಗಾಳಿ ಎದ್ದಿತು. ಅಲೆಗಳು ದೋಣಿಗೆ ಅಪ್ಪಳಿಸತೊಡಗಿದವು. ದೋಣಿಯೊಳಗೆ ನೀರು ನುಗ್ಗಿ ಅದು ತುಂಬಿ ಹೋಗುವುದರಲ್ಲಿತ್ತು.
38 : ಯೇಸುವಾದರೋ ದೋಣಿಯ ಹಿಂಭಾಗದಲ್ಲಿ ದಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದರು. ಶಿಷ್ಯರು ಅವರನ್ನು ಎಬ್ಬಿಸಿ, “ಗುರುವೇ, ನಾವು ಸಾಯುತ್ತಿದ್ದೇವೆ, ತಮಗೆ ಚಿಂತೆಯೇ ಇಲ್ಲವೆ?” ಎಂದರು.
39 : ಆಗ ಯೇಸು ಎಚ್ಚೆತ್ತು,, ಬಿರುಗಾಳಿಯನ್ನು ಗದರಿಸಿದರು. ಸರೋವರಕ್ಕೆ, “ಶಾಂತವಾಗಿರು! ಮೊರೆಯಬೇಡ,” ಎಂದು ಆಜ್ಞಾಪಿಸಿದರು. ತಕ್ಷಣ ಬಿರುಗಾಳಿ ನಿಂತಿತು. ವಾತಾವರಣ ಪ್ರಶಾಂತವಾಯಿತು.
40 : ಅನಂತರ ತಮ್ಮ ಶಿಷ್ಯರಿಗೆ, “ಏಕೆ ಇಷ್ಟು ಭಯ? ಇನ್ನೂ ನಿಮಗೆ ವಿಶ್ವಾಸವಿಲ್ಲವೇ?” ಎಂದರು.
41 : ಶಿಷ್ಯರಾದರೋ ಭಯಭ್ರಾಂತರಾಗಿ “ಗಾಳಿಯೂ ಸರೋವರವೂ ಇವರು ಹೇಳುವಂತೆ ಕೇಳಬೇಕಾದರೆ ಇವರು ಯಾರಿರಬಹುದು?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
-----------------------------
“ಯೇಸುವಿನೊಂದಿಗೆ ನಾವು ಪಯಣಿಸಿದಾಗ ಭಯದಿಂದ ನಾವು ಧರಿಸಿದ ಮುಖವಾಡಗಳು ನಮಗರಿವಿಲ್ಲದೆಯೇ ಕಳಚಿಬೀಳುತ್ತವೆ”
ಮುಖವಾಡಗಳ ಸಂತೆ. ಅಪ್ರಮಾಣಿಕತೆ, ಅನ್ಯಾಯ, ಅನೀತಿ, ಮೋಸ, ವಂಚನೆ, ಕಳ್ಳತನ, ವ್ಯಭಿಚಾರ, ಕ್ರೋದ, ಮದ, ಮೋಹ, ಮತ್ಸರ, ಹಗೆತನ, ದ್ವೇಷ, ಅಸೂಹೆ ಎಲ್ಲಾ ಪಾಪವನ್ನು ಮರೆಮಾಡಿ; ತಾನು ಸಂತನೆಂದು ಹೊರಗಿನ ಪ್ರಪಂಚಕ್ಕೆ ತೋರ್ಪಡಿಸಲು ವಿವಿಧ ಆಕಾರದ, ಬೆಲೆಯ, ಸಮಯ ಸಂದರ್ಭಕ್ಕೆ ತಕ್ಕದಾದ ಬಣ್ಣಬಣ್ಣದ ಮುಖವಾಡಗಳನ್ನು ಬದುಕಿನ ಸಂತೆಯಲ್ಲಿ ಖರೀದಿಸಿ ಅದನ್ನೇ ಧರಿಸಿ ಬದುಕಿದ್ದರೂ ನಾವು ಸತ್ತಂತಿದ್ದೇವೆ. ಪ್ರವಾದಿ ನಾಥಾನನು ದಾವೀದನ ಈ ಕಪಟ ಡಂಬಾಚಾರದ, ನಾಟಕೀಯ ತೋರ್ಪಡಿಕೆಯ ಮುಖವಾಡವನ್ನು ಕಳಚಿ ದೀನತೆಯಿಂದ ದೇವರ ಸನ್ನಿಧಿಗೆ ಆಗಮಿಸಿ ಪಾವನನಾಗಲು ಕರೆನೀಡುತ್ತಾನೆ. ದಾವೀದನು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಿ ಮುಖವಾಡವ ಕಳಚಲು ಶಕ್ತನಾಗುತ್ತಾನೆ. ನಾವೂ ಸಹ ಸಮುದ್ರದಂತಿರುವ ಬದುಕಿನ ನಾವೆಯಲ್ಲಿ ಪಯಣಿಸುವಾಗ ಏಳುವ ಅಲೆಗಳ ಅಬ್ಬರಕ್ಕೆ ಹೆದರಿ, ಮುಖವಾಡಗಳ ಧರಿಸದೆ, “ನನ್ನ ದೋಣಿಯು ನೀರಲ್ಲಿ ಮುಳುಗಲು ನೀನಿರೆ ನಾನೆಂದೂ ಹೆದರೇನು” ಎಂಬ ಧೃಢ ವಿಶ್ವಾಸದಿ ಯೇಸುವನ್ನು ಆಲಂಗಿಸಿ ಪಯಣವನ್ನು ಯೇಸುವಿನೊಂದಿಗೆ ಕ್ರಮಿಸೋಣ. ಯೇಸುವಿನೊಂದಿಗೆ ನಾವು ಪಯಣಿಸಿದಾಗ ಭಯದಿಂದ ನಾವು ಧರಿಸಿದ ಮುಖವಾಡಗಳು ನಮಗರಿವಿಲ್ಲದೆಯೇ ಕಳಚಿಬೀಳುತ್ತವೆ.
-------------------

No comments:

Post a Comment