Thursday, 9 January 2020

12 ಜನವರಿ 2020

12 ಜನವರಿ 2020
ಭಾನುವಾರ/ಬಿಳಿ/ ಪ್ರಭುವಿನ ಸ್ನಾನದೀಕ್ಷೆಯ ಮಹೋತ್ಸವ
1ನೇ ವಾಚನ - ಯೆಶಾಯ 42: 1-4, 6-7
ಕೀರ್ತನೆ - 29:1-2, 3-4, 3, 9-10
2ನೇ ವಾಚನ - ಪ್ರೇಷಿತರ ಕಾರ್ಯಕಲಾಪಗಳು 10:34-38
ಶುಭಸಂದೇಶ - ಮತ್ತಾಯ 3:13-17
---------------------
1ನೇ ವಾಚನ - ಯೆಶಾಯ 42: 1-4, 6-7
1 : ಇಗೋ, ನನ್ನ ದಾಸನು ! ನನ್ನ ಆಧಾರ ಪಡೆದವನು ನನ್ನಿಂದ ಆಯ್ಕೆಯಾದವನು ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು ಅನ್ಯರಾಷ್ಟ್ರಗಳಿಗೆ ಸಾರುವನಿವನು ಸದ್ಧರ್ಮವನು.
2 : ಆತ ಕೂಗಾಡುವಂಥವನಲ್ಲ, ಕಿರಿಚಾಡುವಂಥವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ.
3 : ಮುರಿಯುವುದಿಲ್ಲ ಆತ, ಜಜ್ಜಿದ ದಂಟನು ನಂದಿಸುವುದಿಲ್ಲ ಆತ, ಕಳೆಗುಂದಿದ ದೀಪವನು ತಪ್ಪದೆ ಸಿದ್ಧಿಗೆ ತರುವನಾತ ಸದ್ಧರ್ಮವನು.
4 : ಎಡವಿ ಬೀಳನವನು, ಎದೆಗುಂದನವನು ಜಗದೊಳು ಸ್ಥಾಪಿಸುವ ತನಕ ಸದ್ಧರ್ಮವನು, ಎದುರುನೋಡುವುವು ದ್ವೀಪ- ದ್ವೀಪಾಂತರಗಳು ಆತನ ಧರ್ಮಶಾಸ್ತ್ರವನು.
5 : ಆಕಾಶಮಂಡಲವನ್ನುಂಟುಮಾಡಿ ಹರಡಿದ ದೇವರು, ಭೂಮಂಡಲವನ್ನೂ ಅದರಲ್ಲಿ ಬೆಳೆದು ದೆಲ್ಲವನ್ನೂ ವೃದ್ಧಿಗೊಳಿಸುವವನು, ಭೂನಿವಾಸಿಗಳಿಗೆ ಜೀವವನ್ನೂ ಭೂಚರರಿಗೆ ಜೀವಾತ್ಮವನ್ನೂ ಅನುಗ್ರಹಿಸುವಾ ಸರ್ವೇಶ್ವರ ಇಂತೆನ್ನುತಿಹನು:
6 : ಸರ್ವೇಶ್ವರಸ್ವಾಮಿಯಾದ ನಾನು ಕೈ ಹಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನ್ನು ಸದ್ಧರ್ಮ ಸಾಧನೆಗಾಗಿ ಇತ್ತಿರುವೆನು ನಿನ್ನನು ಜನರಿಗೆ ಒಡಂಬಡಿಕೆಯಾಗಿ ನೇಮಿಸಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ.
7 : ಕೊಡುವೆ ನೀನು ಕಣ್ಣನ್ನು ಕುರುಡರಿಗೆ ತರುವೆ ಬಂಧಿಗಳನ್ನು ಸೆರೆಯಿಂದ ಹೊರಗೆ ಕತ್ತಲೆಯ ಕಾರಾಗೃಹದಿಂದ ಅವರನ್ನು ಬೆಳಕಿಗೆ.
--------------------------------
ಕೀರ್ತನೆ - 29:1-2, 3-4, 3, 9-10
ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಷೇಮವನು /
1 : ಸುರಪುತ್ರರೇ, ಪ್ರಭುವಿನ ಸ್ತುತಿ ಮಾಡಿರಿ / ಒಲುಮೆ, ಮಹಿಮೆ, ಅವನದೇ ಎಂದು ಸಾರಿರಿ //
2 : ಸ್ತುತಿಸಿರಿ ಆತನ ಶ್ರೀನಾಮ ಮಹಿಮೆಯನು | ಪೂಜಿಸಿರಿ ಪವಿತ್ರಾಂಬರರಾಗಿ ಆತನನು ||
3 : ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ | ಪ್ರತಿಭಾಸ್ವರೂಪನಾದ ದೇವನಿದೋ, ಗುಡುಗುತ್ತಲೇ | ಆತನಾಡಂಬರ ಧ್ವನಿ ಮೇಘಮಂಡಲದ ಮೇಲೆ ||
4 : ಪ್ರಭುವಿನ ಧ್ವನಿ ಶಕ್ತಿಯುತ | ಆತನ ಶಬ್ದ ವೈಭವಯುತ ||
3 : ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ | ಪ್ರತಿಭಾಸ್ವರೂಪನಾದ ದೇವನಿದೋ, ಗುಡುಗುತ್ತಲೇ | ಆತನಾಡಂಬರ ಧ್ವನಿ ಮೇಘಮಂಡಲದ ಮೇಲೆ ||
9 : ಈಯುವುವು ಜಿಂಕೆಗಳು, ನಗ್ನವಾಗುವುವು ವೃಕ್ಷಗಳು / ಜಯಜಯ ಘೋಷಮಾಡುವರೆಲ್ಲರು ಆತನಾಲಯದೊಳು //
10 : ಜಲಪ್ರಳಯದೊಳು ಪ್ರಭು ಆಸೀನ ನಾಗಿಹನು / ಯುಗಯುಗಾಂತರಕು ಅರಸನಾಗಿ ಆಳುವನು //
11 : ಅನುಗ್ರಹಿಸಲಿ ಪ್ರಭು ತನ್ನ ಜನರಿಗೆ ಶಕ್ತಿಯನು / ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಷೇಮವನು //
--------------------------
2ನೇ ವಾಚನ - ಪ್ರೇಷಿತರ ಕಾರ್ಯಕಲಾಪಗಳು 10:34-38
34 : ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ. ಈ ವಿಷಯ ನನಗೆ ಈಗ ಮನದಟ್ಟಾಗಿದೆ.
35 : ದೇವರಿಗೆ ಭಯಪಟ್ಟು ಸತ್ಪುರುಷನಾಗಿ ಬಾಳುವವನು ಯಾವ ಜನಾಂಗದವನೇ ಆಗಿರಲಿ, ಅವನು ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.
36 : ಸಮಸ್ತ ಮಾನವ ಕೋಟಿಯ ಪ್ರಭುವಾದ ಯೇಸುಕ್ರಿಸ್ತರ ಮುಖಾಂತರ ಶಾಂತಿ ಲಭಿಸುತ್ತದೆ ಎಂಬ ಶುಭಸಂದೇಶವನ್ನು ದೇವರು ಇಸ್ರಯೇಲ್ ಜನಾಂಗಕ್ಕೆ ಸಾರಿದರು. ಈ ವಿಷಯ ನಿಮಗೆ ತಿಳಿದಿದೆ.
37 : ಇತ್ತೀಚೆಗೆ ಜುದೇಯ ನಾಡಿನಾದ್ಯಂತ ನಡೆದ ಘಟನೆಗಳು ನಿಮಗೆ ತಿಳಿದೇ ಇರಬೇಕು.
38 : ಇವು ನಜರೇತಿನ ಯೇಸುವಿಗೆ ಸಂಬಂಧಪಟ್ಟ ವಿಷಯಗಳು. ಸ್ನಾನದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಯೊವಾನ್ನನು ಬೋಧಿಸಿದ ನಂತರ, ಯೇಸು ತಮ್ಮ ಸೇವಾವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರಂಭಿಸಿದರು. ಅವರು ಪವಿತ್ರಾತ್ಮರಿಂದಲೂ ದೈವಶಕ್ತಿಯಿಂದಲೂ ಅಭಿಷಿಕ್ತರಾಗಿದ್ದರು. ದೇವರು ತಮ್ಮೊಡನೆ ಇದ್ದುದರಿಂದ ಅವರು ಎಲ್ಲೆಡೆಯಲ್ಲೂ ಒಳಿತನ್ನು ಮಾಡುತ್ತಾ, ಪಿಶಾಚಿಪೀಡಿತರಾದವರನ್ನು ಸ್ವಸ್ಥಪಡಿಸುತ್ತಾ ಸಂಚರಿಸಿದರು.
------------------------
ಶುಭಸಂದೇಶ - ಮತ್ತಾಯ 3:13-17
13 : ಯೊವಾನ್ನನಿಂದ ಸ್ನಾನದೀಕ್ಷೆ ಪಡೆಯಲು ಯೇಸುಸ್ವಾಮಿ ಗಲಿಲೇಯದಿಂದ ಹೊರಟು ಜೋರ್ಡನ್ ನದಿಯ ಬಳಿಗೆ ಬಂದರು. ಯೊವಾನ್ನನು ಅವರನ್ನು ತಡೆಯಲೆತ್ನಿಸಿದನು.
14 : "ನಾನೇ ನಿಮ್ಮಿಂದ ದೀಕ್ಷಾಸ್ನಾನ ಪಡೆಯಬೇಕಾಗಿರುವಲ್ಲಿ ನೀವು ನನ್ನ ಬಳಿಗೆ ಬರುವುದೇ?" ಎಂದನು.
15 : ಆದರೆ ಯೇಸು, "ಸದ್ಯಕ್ಕೆ ತಡೆಯದಿರು; ನಾವು ದೈವನಿಯಮಕ್ಕೆ ತಲೆಬಾಗುವುದು ಒಳಿತು," ಎಂದರು. ಯೊವಾನ್ನನು ಅದಕ್ಕೆ ಸಮ್ಮತಿಸಿದನು.
16 : ಯೇಸು ದೀಕ್ಷಾಸ್ನಾನ ಪಡೆದು ನೀರಿನಿಂದ ಮೇಲಕ್ಕೆ ಬಂದದ್ದೇ ಆಕಾಶವು ಫಕ್ಕನೆ ತೆರೆಯಿತು; ದೇವರಾತ್ಮ ಪಾರಿವಾಳದ ರೂಪದಲ್ಲಿ ತಮ್ಮ ಮೇಲೆ ಇಳಿದು ಬಂದು ನೆಲಸುವುದನ್ನು ಕಂಡರು.
17 : ಆಗ ಆಕಾಶದಿಂದ, "ಇವನೇ ನನ್ನ ಪುತ್ರ; ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು," ಎಂಬ ದೈವವಾಣಿ ಕೇಳಿಸಿತು.
-----------------------------
ಚಿಂತನೆ
ಕರ್ತರ ಸ್ನಾನದೀಕ್ಷೆಯ ಹಬ್ಬ

ದೀಕ್ಷಾಸ್ನಾನ ಕ್ರೈಸ್ತ ಜೀವನದ ತಳಹದಿ. ದೀಕ್ಷಾಸ್ನಾನದಲ್ಲಿ ನವ ಜನ್ಮ ಪಡೆಯುತ್ತೇವೆ. ಅದು ನಮ್ಮ ಆಧ್ಯಾತ್ಮಿಕ ಜೀವನಕ್ಕೆ ನಾಂದಿಯೂ, ಇತರ ಸಂಸ್ಕಾರಗಳನ್ನು ಸ್ವೀಕರಿಸಲು ದ್ವಾರವು ಆಗಿದೆ. ಈ ಸಂಸ್ಕಾರವು ನಮ್ಮನ್ನು ಕ್ರಿಸ್ತನೊಂದಿಗೆ ಬಂಧಿಸುತ್ತದೆ. ಪರಮತ್ರಿತ್ವ ಕುಟುಂಬದ ಸದಸ್ಯತ್ವಕ್ಕೆ ಅರ್ಹತೆಯನ್ನು ಕಲ್ಪಿಸುತ್ತದೆ. ನಮ್ಮನ್ನು ಧರ್ಮಸಭೆಯ ಸಕ್ರಿಯ ಸದಸ್ಯರನ್ನಾಗಿ ಮಾಡುತ್ತದೆ. ಒಮ್ಮೆ ಸ್ವೀಕರಿಸಿದರೆ ಶಾಶ್ವತ ಮುದ್ರೆಯಾಗಿ ಉಳಿಯುವಂತಹ ಈ ಸಂಸ್ಕಾರವು ಮಾನವನನ್ನು ಜನ್ಮಪಾಪದಿಂದ ವಿಮೋಚನೆ ಮಾಡುತ್ತದೆ.

ಕ್ರಿಸ್ತನಿಗೆ ದೀಕ್ಷಾಸ್ನಾನದ ಅಗತ್ಯವಿತ್ತೆ? ಅದರ ಉದ್ದೇಶವೇನಾಗಿತ್ತು?

ಪ್ರಭು ಕ್ರಿಸ್ತರ ಸ್ನಾನಾದೀಕ್ಷೆಯ ಹಬ್ಬದೊಂದಿಗೆ ಕ್ರಿಸ್ತ ಜಯಂತಿಯ ಕಾಲವು ಮುಕ್ತಾಯಗೊಳ್ಳುತ್ತದೆ. ದೀಕ್ಷಾಸ್ನಾನ ಒಂದು ಮಹತ್ತರ ಘಟನೆ. ಮೊದಲ ಬಾರಿಗೆ ಬಹಿರಂಗವಾಗಿ ಪರಮತ್ರಿತ್ವದ ಮೂರು ವ್ಯಕ್ತಿಗಳನ್ನು ಒಟ್ಟಾಗಿ ಕಾಣುತ್ತೇವೆ. ತಂದೆ ದೇವರು ಯೇಸುವನ್ನು ``ಈತನೇ ನನ್ನ ಮಗ, ನನಗೆ ಪರಮ ಪ್ರಿಯನು'' ಎಂದು ಜಗಕ್ಕೆಲ್ಲಾ ಸಾರಿದ ದಿನ. ದೀಕ್ಷಾಸ್ನಾನದಿಂದ ಕ್ರಿಸ್ತನ ವೈಯಕ್ತಿಕ ಜೀವನ ಮುಕ್ತಾಯವಾಗುತ್ತದೆ ಹಾಗೂ ಬಹಿರಂಗ ಜೀವನದ ಪ್ರಾರಂಭವೂ ಆಗುತ್ತದೆ. ನಮ್ಮ ಪಾಪಗಳ ನಿಮಿತ್ತ, ನಮ್ಮ ಉದ್ದಾರಕ್ಕಾಗಿ, ದೇವರಾಗಿದ್ದವರು ಸಾಮಾನ್ಯ ಮನುಷ್ಯರೊಂದಿಗೆ ಕ್ರಿಸ್ತನಾಗಿ ಗುರುತಿಸಿಕೊಳ್ಳುತ್ತಾರೆ. ಯೇಸುಕ್ರಿಸ್ತರ ದೀಕ್ಷಾಸ್ನಾನದಿಂದ ನಮ್ಮ ದೀಕ್ಷಾಸ್ನಾನಕ್ಕೆ ಒಂದು ಅರ್ಥ ಬರುತ್ತದೆ, ದೃಢತೆ ಲಭ್ಯವಾಗುತ್ತದೆ. ಸಾಮಾನ್ಯ ಯುವಕನಂತಿದ್ದ ಯೇಸುಕ್ರಿಸ್ತರು ದೇವರ ಮಗ ಎಂಬುದಾಗಿ ಸಾರಿದ ದಿನ. ಕ್ರಿಸ್ತ ಜಗಕ್ಕೆ ಬಂದ ಉದ್ದೇಶವೇನು ಎಂಬುದನ್ನು ಸಾರಿದ ದಿನ, ಪವಿತ್ರಾತ್ಮರಿಂದ ಶಕ್ತಿ ಪಡೆದುಕೊಂಡ ದಿನ.
ಕರ್ತರ ದೀಕ್ಷಾಸ್ನಾನ ಹಬ್ಬದಂದು ನಮ್ಮ ದೀಕ್ಷಾಸ್ನಾನದ ವಾಗ್ದಾನಗಳನ್ನು ನವೀಕರಿಸೋಣ. ನಾವು ದೇವರ ಮಕ್ಕಳು, ಕ್ರಿಸ್ತೇಸುವಿನ ಸಹೋದರ ಸಹೋದರಿಯರು, ಧರ್ಮಸಭೆಯ ಪ್ರಜೆಗಳು, ಸ್ವರ್ಗಕ್ಕೆ ಬಾಧ್ಯಸ್ಥರು, ಪವಿತ್ರಾತ್ಮರ ಆಲಯ ಎಂಬುದನ್ನು ಮರೆಯದಿರೋಣ.
© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ


No comments:

Post a Comment