ಸೋಮವಾರ/ ಹಸಿರು/ಸಾಧಾರಣ ಕಾಲದ ಮೊದಲನೇ ವಾರ
1ನೇ ವಾಚನ - 1ಸಮುವೇಲ 1:1-8
ಕೀರ್ತನೆ - 116:12-13, 14-17, 18-19
ಶುಭಸಂದೇಶ - ಮಾರ್ಕ 1: 14-20
---------------------
1ನೇ ವಾಚನ - ೧ ಸಮುವೇಲ 1:1-8
1 : ಎಫ್ರಯಿಮ್ ಬೆಟ್ಟದ ಪ್ರದೇಶದಲ್ಲಿ ರಾಮಾ ಒಂದು ಊರು. ಆ ಊರಲ್ಲಿ ‘ಎಲ್ಕಾನ’ ಎಂಬ ಒಬ್ಬ ಮನುಷ್ಯನಿದ್ದ. ಇವನು ಯೆರೋಹಾಮನ ಮಗ, ಎಲೀಹುವಿನ ಮೊಮ್ಮಗ ಹಾಗು ತೋಹುವಿನ ಮರಿಮಗ. ಈ ತೋಹು ಎಂಬುವನು ಎಫ್ರಯಿಮ್ಯನಾದ ಚೂಫನ ಮಗ.
2 : ಎಲ್ಕಾನನಿಗೆ ಇಬ್ಬರು ಹೆಂಡತಿಯರು. ಒಬ್ಬಳು ಹನ್ನ, ಇನ್ನೊಬ್ಬಳು ಪೆನಿನ್ನ. ಪೆನಿನ್ನಗೆ ಮಕ್ಕಳು ಇದ್ದರು; ಆದರೆ ಹನ್ನಳಿಗೆ ಇರಲಿಲ್ಲ.
3 : ಎಲ್ಕಾನನು ಪ್ರತಿ ವರ್ಷ ರಾಮಾದಿಂದ ಶಿಲೋವಿಗೆ ಹೋಗಿ ಸೇನಾಧೀಶ್ವರರಾದ ಸರ್ವೇಶ್ವರಸ್ವಾಮಿಗೆ ಬಲಿದಾನವನ್ನು ಸಮರ್ಪಿಸಿ ಆರಾಧಿಸುತ್ತಿದ್ದನು. ಅಲ್ಲಿ ಏಲಿಯನ ಮಕ್ಕಳಾದ ಹೊಫ್ನಿ, ಫೀನೆಹಾಸ ಎಂಬವರು ಸರ್ವೇಶ್ವರನ ಯಾಜಕರಾಗಿದ್ದರು.
4 : ಎಲ್ಕಾನನು ಬಲಿಯರ್ಪಿಸಿದಾಗಲೆಲ್ಲಾ ತನ್ನ ಹೆಂಡತಿಯಾದ ಪೆನಿನ್ನಳಿಗೂ ಆಕೆಯ ಎಲ್ಲ ಗಂಡು-ಹೆಣ್ಣು ಮಕ್ಕಳಿಗೂ ಬಲಿಭೋಜನದ ಒಂದೊಂದು ಭಾಗವನ್ನು ಕೊಡುತ್ತಿದ್ದನು.
5 : ಅವನು ಹನ್ನಳನ್ನು ಬಹಳವಾಗಿ ಪ್ರೀತಿಸುತ್ತಿದ್ದರೂ ಒಂದು ಭಾಗವನ್ನು ಮಾತ್ರ ಆಕೆಗೆ ಕೊಡುತ್ತಾ ಇದ್ದನು. ಏಕೆಂದರೆ ಸರ್ವೇಶ್ವರ ಆಕೆಗೆ ಮಕ್ಕಳನ್ನು ಕೊಟ್ಟಿರಲಿಲ್ಲ.
6 : ಇದಲ್ಲದೆ, “ಸರ್ವೇಶ್ವರ ನಿನ್ನನ್ನು ಬಂಜೆಯಾಗಿ ಮಾಡಿದ್ದಾರೆ,” ಎಂಬ ಚುಚ್ಚು ಮಾತುಗಳಿಂದ ನೋಯಿಸುತ್ತಿದ್ದಳು ಅವಳ ಸವತಿಯಾದ ಪೆನಿನ್ನಳು.
7 : ವರ್ಷ ವರ್ಷವೂ ಇದು ಹಾಗೆಯೆ ನಡೆಯುತ್ತಿತ್ತು: “ಸರ್ವೇಶ್ವರನ ಮಂದಿರಕ್ಕೆ ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕುತ್ತಿದ್ದಳು. ಇದರಿಂದಾಗಿ ಒಮ್ಮೆ ಹನ್ನಳು ಊಟ ಮಾಡಲೊಲ್ಲದೆ ಅಳುತ್ತಾ ಇದ್ದಳು.
8 : ಆಗ ಆಕೆಯ ಗಂಡ ಎಲ್ಕಾನನು ಆಕೆಗೆ, “ಹನ್ನಾ, ಏಕೆ ಅಳುತ್ತಿರುವೆ? ಊಟಮಾಡದಿರುವುದಕ್ಕೆ ಕಾರಣ ಏನು? ವ್ಯಸನಪಡುವುದು ಏಕೆ? ಹತ್ತು ಮಕ್ಕಳಿಗಿಂತಲು ನಾನು ನಿನಗೆ ಹೆಚ್ಚಲ್ಲವೆ?” ಎಂದನು.
-------------------------------------------------------
ಕೀರ್ತನೆ - 116:12-13, 14-17, 18-19
ಪ್ರಭುವೇ ಅರ್ಪೀಸುವೆ ನಾ ನಿನಗೆ ಕೃತಜ್ಞತಾಬಲಿಗಳನ್ನು
12 : ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ / ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ? //
13 : ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
14 : ಆತನಿಗೆ ನಾ ಹೊತ್ತ ಹರಕೆಗಳನು / ಆತನ ಸಭೆಮುಂದೆಯೆ ತೀರಿಸುವೆನು //
15 : ಪ್ರಭು ಅಲ್ಪವೆಂದೆಣಿಸನು / ತನ್ನ ಭಕ್ತರ ಮರಣವನು //
16 : ಹೇ ಪ್ರಭು, ಕರುಣಿಸು, ನಾ ನಿನ್ನ ಕಿಂಕರನು / ನಿನ್ನ ದಾಸಿಯ ಮಗನು, ನಿನ್ನ ಸೇವಕನು / ಬಿಡಿಸಿರುವೆ ನೀನು ನನ್ನ ಬಂಧನಗಳನು //
17 : ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
18 : ಹೇ ಜೆರುಸಲೇಮೇ, ನಿನ್ನ ಮಧ್ಯದೊಳು / ಆತನಿರುವ ಮಂದಿರದ ಅಂಗಳದೊಳು /
19 : ತೀರಿಸುವೆನು ಆತನ ಸಭೆಯ ಸಮ್ಮುಖದೊಳು / ಅರ್ಪಿಸುವೆನು ನಾ ಹೊತ್ತ ಆ ಹರಕೆಗಳನು //
-----------------------------------------------------
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
14ಯೊವಾನ್ನನು ಬಂಧಿತನಾದ ಬಳಿಕ ಯೇಸುಸ್ವಾಮಿ ಗಲಿಲೇಯಕ್ಕೆ ಹೋಗಿ ದೇವರ ಶುಭಸಂದೇಶವನ್ನು ಸಾರಿದರು: 15ಕಾಲವು ಪರಿಪಕ್ವವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ; ಪಶ್ಚಾತ್ತಾಪಪಟ್ಟು ಪಾಪಜೀವನಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ, ಶುಭಸಂದೇಶದಲ್ಲಿ ವಿಶ್ವಾಸವಿಡಿ, ಎಂದು ಘೋಷಿಸಿದರು. ್
16ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಸಿಮೋನನನ್ನೂ ಆತನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾದ ಇವರು ಸರೋವರದಲ್ಲಿ ಬಲೆಬೀಸುತ್ತಾ ಇದ್ದರು. 17ಯೇಸು ಅವರಿಗೆ, ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು, ಎಂದು ಕರೆದರು. 18ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. 19ಇನ್ನೂ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಾಗ, ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನರನ್ನು ಯೇಸು ಕಂಡರು. 20ಅವರು ದೋಣಿಯಲ್ಲಿ ಕುಳಿತು ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಕೂಡಲೇ, ಯೇಸು ಅವರನ್ನು ಕರೆದರು. ಅವರೂ ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲೇ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
16ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಸಿಮೋನನನ್ನೂ ಆತನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾದ ಇವರು ಸರೋವರದಲ್ಲಿ ಬಲೆಬೀಸುತ್ತಾ ಇದ್ದರು. 17ಯೇಸು ಅವರಿಗೆ, ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು, ಎಂದು ಕರೆದರು. 18ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. 19ಇನ್ನೂ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಾಗ, ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನರನ್ನು ಯೇಸು ಕಂಡರು. 20ಅವರು ದೋಣಿಯಲ್ಲಿ ಕುಳಿತು ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಕೂಡಲೇ, ಯೇಸು ಅವರನ್ನು ಕರೆದರು. ಅವರೂ ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲೇ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
ಚಿಂತನೆ
ಪ್ರೀತಿ ಮತ್ತು ನ್ಯಾಯ
ಕ್ರಿಸ್ತ ತಮ್ಮ ಬಹಿರಂಗ ಜೀವನವನ್ನು ಪ್ರಾರಂಭಿಸುವ ಮುನ್ನ ಮೂವತ್ತು ವರ್ಷಗಳ ಕಾಲ ಈ ಸಮಾಜವನ್ನು ಅಧ್ಯಯನ ಮಾಡಿದರು. ನಲ್ವತ್ತು ದಿನಗಳ ನಿರಂತರ ಪ್ರಾರ್ಥನೆ ಮತ್ತು ಉಪವಾಸದ ನಂತರ ಜನರನ್ನು ಉದ್ದೇಶಿಸಿ ಕ್ರಿಸ್ತ ನೀಡಿದ ಮೊದಲ ಸಂದೇಶ, ``ಕಾಲವು ಪರಿಪಕ್ವವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ, ಪಶ್ಚಾತ್ತಾಪಪಟ್ಟು ಪಾಪ ಜೀವನಕ್ಕೆ ಮಿಮುಖರಾಗಿ, ದೇವರಿಗೆ ಅಭಿಮುಖರಾಗಿರಿ.''
ಕ್ರಿಸ್ತ ಬಂದದ್ದು ದೇವರ ಸಾಮ್ರಾಜ್ಯವನ್ನು ಸ್ಥಾಪಿಸಲು. ಪ್ರೀತಿ ಮತ್ತು ನ್ಯಾಯ ದೇವರ ಸಾಮ್ರಾಜ್ಯದ ಎರಡು ಮುಖಗಳು. ಎಲ್ಲಿ ಪ್ರೀತಿ ಮತ್ತು ನ್ಯಾಯ ನೆಲೆಸಿದೆಯೋ ಅಲ್ಲಿ ದೇವರ ಸಾಮ್ರಾಜ್ಯವಿದೆ. ಪರರನ್ನು ಪ್ರೀತಿಸುತ್ತಾ, ನ್ಯಾಯಕ್ಕಾಗಿ ದುಡಿಯುತ್ತಾ ದೇವರ ಸಾಮ್ರಾಜ್ಯವನ್ನು ಸ್ಥಾಪಿಸುವ ಜವಾಬ್ದಾರಿ ನಮ್ಮದಾಗಿದೆ.
ಇಂದಿನ ಸಂತರು
ಸಂತ ಹಿಲರಿ(ಕಾಲ:ಸು. 310-ಸು. 367)
ಸಂತ ಹಿಲರಿಯವರು, ಫ್ರಾನ್ಸ್‌ನ ಪೊಯ್ಟಿಯರ್ಸ್‌ನಲ್ಲಿ ಧರ್ಮಾಧ್ಯಕ್ಷರಾಗಿದ್ದವರು. ಇವರನ್ನು “ಏರಿಯನ್ನರ ಸುತ್ತಿಗೆ” ಎಂದು ಕರೆಯುತ್ತಿದ್ದರು. ಇವರ ಪುಣ್ಯದಿನವನ್ನು ಜನವರಿ 13 ರಂದು ಆಚರಿಸಲಾಗುತ್ತದೆ.ಳ
ಸಂತ ಹಿಲರಿಯವರ ತಂದೆ, ತಾಯಿಗಳಿಬ್ಬರೂ ಕ್ರೈಸ್ತರಲ್ಲದಿದ್ದರೂ, ಸಮಾಜದಲ್ಲಿ ಉತ್ತಮ ಸ್ಥಾನ ಹೊಂದಿದ್ದವರು. ಹಾಗಾಗಿ, ಹಿಲರಿಯವರಿಗೆ ಗ್ರೀಕ್ ವಿದ್ಯಾಭ್ಯಾಸ ಮಾಡಲು ಅವಕಾಶ ಚೆನ್ನಾಗಿ ಒದಗಿ ಬಂರುತ್ತದೆ. ನಂತರ, ಇವರು ನವಪ್ಲೇಟೋನಿಸ್ಮ್ ತೊರೆದು, ಹಳೆ ಹಾಗೂ ಹೊಸ ಒಡಂಬಡಿಕೆಗಳನ್ನು ಅಧ್ಯಯನ ಮಾಡಿ, ತಮ್ಮ ಪತ್ನಿ ಮತ್ತು ಪುತ್ರಿಯೊಡನೆ ಕ್ರೈಸ್ತರಾಗುತ್ತಾರೆ. (ಅವರ ಮಗಳು, ಆಬ್ರಾ ಸಹ ಮುಂದೆ ಸಂತಳ ಪಟ್ಟಕ್ಕೇರುತ್ತಾರೆ)
ಪೊಯ್ಟಿಯರ್ಸ್‌ನ ಕ್ರೈಸ್ತರು ಹಿಲರಿಯವರನ್ನು ತುಂಬಾ ಗೌರವಿಸಿ, ಅವರನ್ನು ತಮ್ಮ ಧರ್ಮಾಧ್ಯಕ್ಷರನ್ನಾಗಿ ಸ್ವೀಕರಿಸುತ್ತಾರೆ. ಆಗ ಚಾಲ್ತಿಯಲ್ಲಿದ್ದ ಏರಿಯನ್ನರ ಪಾಖಂಡ ತತ್ವಗಳನ್ನು ಹಿಲರಿಯವರು ಕಟುವಾಗಿ ವಿರೋಧಿಸಿ, ಏರಿಯನ್ನರು ಧರ್ಮವಿರೋಧಿಗಳೆಂದು ಸಾರಿ, ಅವರನ್ನು ಬಹಿಷ್ಕರಿಸುತ್ತಾರೆ.
ಇದೇ ಸಮಯದಲ್ಲಿ ಏರಿಯನ್ನರು ತಮ್ಮ ವಿರೋಧಿಗಳ ಮೇಲೆ ಜರುಗಿಸುತ್ತಿದ್ದ ಹಿಂಸಾಚಾರಗಳ ಬಗ್ಗೆ ಹಿಲರಿಯವರು ಪ್ರತಿಭಟಿಸಿ, ಆಗಿನ ಚಕ್ರವರ್ತಿ ದ್ವಿತೀಯ ಕಾನ್‌ಸ್ಟಾಂಟಿನ್‌ರವರಿಗೆ ಪತ್ರ ಬರೆಯುತ್ತಾರೆ. ಮೊದಮೊದಲು, ಇವರಿಗೆ ಯಶಸ್ಸು ದಕ್ಕದೆ ಇದ್ದರೂ, 356ರಲ್ಲಿ ಚಕ್ರವರ್ತಿಯು ಒಂದು ಸಭೆಯನ್ನು ಕರೆದು, ಈ ವಿವಾದವನ್ನು ಬಗೆಹರಿಸಲು ತೊಡಗುತ್ತಾರೆ. ಆದರೆ ನಂತರದ ತೀರ್ಪು, ಹಿಲರಿಯವರಿಗೆ ವಿರೋಧವಾಗಿ ಪರಿಣಮಿಸಿ, ಅವರನ್ನು ಫ್ರಿಜಿಯಾಗೆ ಗಡಿಪಾರು ಮಾಡಲಾಗುತ್ತದೆ. ಇದಕ್ಕೆ ಕಾರಣಗಳೇನು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ನಾಲ್ಕು ವರ್ಷಗಳ ಕಾಲ ತನ್ನ ದೇಶದಿಂದ ದೂರವಿದ್ದ ಹಿಲರಿಯವರು, ಅಲ್ಲಿಯೂ ಒಳ್ಳೇ ಯಾಜಕರೆನಿಸಿಕೊಂಡು ಎರಡು ಬಹುಮುಖ್ಯ ಹೊತ್ತಗೆಗಳನ್ನು ಹೊರತರುತ್ತಾರೆ. ಅವರು ಏರಿಯನ್ನರನ್ನು ಸಾಕಷ್ಟು ಖಂಡನೆ ಮಾಡಿಲ್ಲವೆಂಬ ದೂರೇನೋ ಇತ್ತು ಪರಮತ್ರಿತ್ವದಲ್ಲಿ ಹಿಲರಿಯವರಿಗೆ ಅಪಾರ ನಂಬಿಕೆಯಿತ್ತು. ಏರಿಯನ್ನರು ಪ್ರತಿಪಾದಿಸುತ್ತಿದ್ದ, “ಕ್ರಿಸ್ತನು ದೇವರ ಮಗನಲ್ಲ. ಅವರೂ ಸೃಷ್ಟಿಸಲ್ಪಟ್ಟವರೆ” ಎಂಬ ತರ್ಕವನ್ನು ಹೊಂದಿದ್ದವರೆಲ್ಲರೂ ಕ್ರಿಸ್ತವಿರೋಧಿಗಳೆಂದು ಹಿಲರಿಯವರು ಖಂಡಿಸುತ್ತಿದ್ದರು. ವಾಟ್ಸನ್ ಎಂಬುವವರು ಹಿಲರಿಯವರನ್ನು ಸಮರ್ಥಿಸುತ್ತಾರಾದರೂ, "ಅನೇಕ ಕ್ರಿಸ್ತವಿರೋಧಿಗಳಿದ್ದಾರೆ. ಅವರು, ಭಕ್ತಿಯ ಹೊದಿಕೆ ಹೊದ್ದು ಸುವಾರ್ತೆಯನ್ನು ತಪ್ಪಾಗಿ ಬೋಧಿಸಿ, ಇತರರ ಮನಸ್ಸುಗಳನ್ನು ಕೆಡಿಸುತ್ತಿದ್ದಾರೆ. ನಂಬಿಕೆಯನ್ನು ಹಿಂಸಾಚಾರದ ಮೂಲಕ ಹೇರಲು ಪ್ರಯತ್ನಿಸುತ್ತಿದ್ದಾರೆ. ಲೋಕವು, ಅವರನ್ನು ಪ್ರೀತಿಸುತ್ತಿದೆ. ಲೋಕವು ಇವರನ್ನು ದ್ವೇಷಿಸಿದ್ದರೆ, ಅವರು, ಕ್ರಿಸ್ತನಿಗೆ ಸೇರಿದವರೆಂದು ಸಾಕ್ಷಿಯಾಗುತ್ತಿತ್ತು” ಎಂದು ಅವರು ಹೇಳಿದ್ದಾರೆ.
ಗಡಿಪಾರಿನ ಅವಧಿಯಲ್ಲಿ ಧರ್ಮಾಧಿಕಾರಿಗಳ ಸಮಾಲೋಚನಾ ಸಭೆ(ಸಿನಾಡ್)ಗೆ ಹಿಲರಿಯವರು ಹಾಜರಾಗಿದ್ದರೂ ಚಕ್ರವರ್ತಿಯರೊಡನೆ ಮಾತನಾಡಲು, ಹಾಗೂ ಸಭೆಯಲ್ಲಿ ಮಾತನಾಡಲು ಅವರಿಗೆ ಅನುಮತಿ ದೊರಕುವುದಿಲ್ಲ.
ಮುಂದೆ, ಜೂಲಿಯನ್ನರು ಚಕ್ರವರ್ತಿಯಾದಾಗ, ಅವರು, ಹಿಲರಿಯವರನ್ನು ಮೊದಲಿದ್ದ ಧರ್ಮಕ್ಷೇತ್ರಕ್ಕೆ ಕಳುಹಿಸುತ್ತಾರೆ. ಅಲ್ಲಿನ ಯಾಜಕರಿಗೆ, ಅವರ ಪಾಪನಿವೇದನಾಕ್ರಮವು, ಏರಿಯನ್ನರ ಸಂಪ್ರದಾಯವನ್ನೇ ಎತ್ತಿ ತೋರಿಸುತ್ತಿದೆ ಎಂದು ಹಿಲರಿ ತಿಳಿಸುತ್ತಾರೆ. ಆಗಿದ್ದ ವಿಶ್ವಾಸಸೂತ್ರವನ್ನೂ ಖಂಡಿಸುತ್ತಾರೆ.
ಮುಂದೆ ಹಿಲರಿಯವರ ಪ್ರೋತ್ಸಾಹದಿಂದ ಮಾರ್ಟಿನ್‌ರವರು, ಒಂದು ಸನ್ಯಾಸಿಮಠವನ್ನು ಸ್ಥಾಪಿಸುತ್ತಾರೆ. ಚಕ್ರವರ್ತಿ ವ್ಯಾಲಂಟಿಯನ್‌ರಿಗೆ ಅತಿ ಸಮೀಪರಾಗಿದ್ದ ಮಿಲಾನ್ ಧರ್ಮಾಧ್ಯಕ್ಷರನ್ನು ಕಪಟಿಗಳೆಂದು ಹೇಳಿ, ಅವರ ಮೇಲೆ ದೋಷಾರೋಪಣೆಯನ್ನು ಹಿಲರಿಯವರು ಮಾಡುತ್ತಾರೆ. ಆಗ, ಚಕ್ರವರ್ತಿಯು ಅವರನ್ನು ಕರೆಸಿ, ಹಿಲರಿಯವರಲ್ಲಿ ತಕ್ಕ ಆಧಾರಗಳನ್ನು ಕೇಳುತ್ತಾರೆ. ಹಿಲರಿಯವರು ಅದಕ್ಕೆ ಸಮರ್ಪಕವಾದ ಉತ್ತರ ನೀಡುತ್ತಾರೆ.
ಇವರು ಹೊರತಂದ ಪುಸ್ತಕಗಳಲ್ಲಿ ಸ್ವತಂತ್ರ ಚಿಂತನೆ ಸಾಕಷ್ಟಿದೆ. ಮತ್ತಾಯರ ಸುವಾರ್ತೆಯ ಹಾಗೂ ದಾವೀದನ ಕೀರ್ತನೆಗಳ ವ್ಯಾಖ್ಯಾನವನ್ನು ಲ್ಯಾಟಿನ್ ಭಾಷೆಯಲ್ಲಿ ಇವರು ಬರೆದಿದ್ದಾರೆ. ಅನೇಕ ಕ್ರೈಸ್ತ ಕೀರ್ತನೆಗಳು, ಇವರ ಲೇಖನಿಯಿಂದ ಹೊಮ್ಮಿಬಂದಿವೆ. ಇವರು, “4ನೇ ಶತಮಾನದ ಲ್ಯಾಟಿನ್ ಭಾಷೆಯ ಪ್ರಮುಖ ಕ್ರೈಸ್ತಸಾಹಿತಿ’’ ಎಂದು ಹೆಸರಾಗಿದ್ದಾರೆ. ಒಂಬತ್ತನೆಯ ಪೋಪ್ ಪಯಸ್‌ರವರು ಸಂತ ಹಿಲರಿಯವರ ಪ್ರೌಢಿಮೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಾರೆ.
ಸಂತ ಹಿಲರಿಯವರನ್ನು, “ನ್ಯಾಯವಾದಿಗಳ ಪೋಷಕ ಸಂತರು” ಎಂದು ಭಾವಿಸಲಾಗಿದೆ. ಇವರ ಚಿಹ್ನೆ – ಮೂರು ಪುಸ್ತಕಗಳು ಮತ್ತು ಒಂದು ಗರಿಯ ಲೇಖನಿ.
ಭಕ್ತರು, ಹಿಲರಿಯವರಲ್ಲಿ ಮಾಡುವ ಪ್ರಾರ್ಥನೆ ಹೀಗಿದೆ;
"ಪೊಯ್ಟಿಯರ್ಸ್‌ನ ಸಂತ ಹಿಲರಿಯವರೆ, ಗಡಿಪಾರಾದರೂ ಕುಗ್ಗದೆ, ಆ ಸಮಯದಲ್ಲಿ, ಅಧ್ಯಯನ, ಬರಹಗಳನ್ನು ಮಾಡಿದಿರಿ! ನಮ್ಮ ಸ್ವಂತ ಜೀವಿತದಲ್ಲಿಯೂ ದುಃಖ, ಸಂಕಟಗಳಿಂದ ಒಳ್ಳೆಯದನ್ನು ಪಡೆದು, ವಿಪತ್ತುಗಳನ್ನು ಅವಕಾಶಗಳೆಂದು ಭಾವಿಸಲು, ನಮ್ಮ ನಂಬಿಕೆಯನ್ನು ಹಂಚಿಕೊಳ್ಳಲು ಸಹಾಯಮಾಡಿ. ಆಮೆನ್”
No comments:
Post a Comment