ಸೋಮವಾರ/ಸಾಧಾರಣ ಕಾಲದ ಎರಡನೆಯ ವಾರ
18 : ಯೊವಾನ್ನನ ಶಿಷ್ಯರು ಮತ್ತು ಫರಿಸಾಯರು ಉಪವಾಸವ್ರತವನ್ನು ಕೈಗೊಂಡಿದ್ದ ಒಂದು ಸಂದರ್ಭದಲ್ಲಿ, ಕೆಲವು ಜನರು ಯೇಸುಸ್ವಾಮಿಯ ಬಳಿಗೆ ಬಂದರು. ಅವರು, “ಯೊವಾನ್ನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸವ್ರತವನ್ನು ಕೈಗೊಳ್ಳುತ್ತಾರೆ, ಆದರೆ ನಿನ್ನ ಶಿಷ್ಯರೇಕೆ ಹಾಗೆ ಮಾಡುವುದಿಲ್ಲ?” ಎಂದು ಕೇಳಿದರು.
1ನೇ ವಾಚನ - ಸಮುವೇಲ 15:16-23
ಕೀರ್ತನೆ - 50 : 8-9, 16-17, 21,23
ಶುಭಸಂದೇಶ - ಮಾರ್ಕ 2:18-22
ಕೀರ್ತನೆ - 50 : 8-9, 16-17, 21,23
ಶುಭಸಂದೇಶ - ಮಾರ್ಕ 2:18-22
--------------------
1ನೇ ವಾಚನ - ಸಮುವೇಲ 15:16-23
16 : ಆಗ ಸಮುವೇಲನು, “ಅದಿರಲಿ; ಸರ್ವೇಶ್ವರ ಕಳೆದ ರಾತ್ರಿ ನನಗೆ ಹೇಳಿದ್ದನ್ನು ತಿಳಿಸುತ್ತೇನೆ ಕೇಳು,” ಎಂದನು. ಅವನು, “ಹೇಳು” ಎನ್ನಲು ಸಮುವೇಲನು,
17 : “ನೀನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ಸರ್ವೇಶ್ವರ ನಿನಗೆ ಇಸ್ರಯೇಲರಲ್ಲಿ ರಾಜಾಭಿಷೇಕ ಮಾಡಿದ್ದರಿಂದ ನೀನು ಎಲ್ಲಾ ಕುಲಗಳಿಗೆ ಶಿರಸ್ಸಾದೆ.
18 : ಅವರು ನಿನಗೆ, ‘ಹೊರಟು ಹೋಗಿ ದುಷ್ಟರಾದ ಅಮಾಲೇಕ್ಯರೊಡನೆ ಯುದ್ಧಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಮಾಡು’ ಎಂದು ಹೇಳಿದರು.
19 : ಆದರೆ ನೀನು ಸರ್ವೇಶ್ವರನ ಮಾತನ್ನು ಕೇಳದೆ, ಕೊಳ್ಳೆಗಾಗಿ ಮನಸೋತು, ಅವರಿಗೆ ದ್ರೋಹಮಾಡಿದ್ದೇಕೆ?” ಎಂದನು.
20 : ಆಗ ಸೌಲನು ಸಮುವೇಲನಿಗೆ, “ಏನು? ನಾನು ಸರ್ವೇಶ್ವರನ ಮಾತನ್ನು ಕೇಳಲಿಲ್ಲವೇ? ಅವರು ಕಳುಹಿಸಿದಲ್ಲಿಗೆ ಹೋಗಿ ಅಮಾಲೇಕ್ಯರನ್ನೆಲ್ಲ ಸಂಹರಿಸಿ ಅವರ ಅರಸನಾದ ಅಗಾಗನನ್ನು ಹಿಡಿದುತಂದೆ.
21 : ಆದರೆ ಜನರು ಸಂಪೂರ್ಣವಾಗಿ ಸಂಹರಿಸಬೇಕಾದ ಕೊಳ್ಳೆಯಲ್ಲಿ ಉತ್ತಮವಾದ ಕುರಿದನಗಳನ್ನು ನಿಮ್ಮ ದೇವರಾದ ಸರ್ವೇಶ್ವರನಿಗೆ ಗಿಲ್ಗಾಲಿನಲ್ಲಿ ಬಲಿಯರ್ಪಣೆ ಮಾಡುವುದಕ್ಕಾಗಿ ಉಳಿಸಿ ತಂದರು,” ಎಂದು ಉತ್ತರಕೊಟ್ಟನು.
22 : ಅದಕ್ಕೆ ಸಮುವೇಲನು ಇಂತೆಂದನು: “ವಿಧೇಯತೆಯನ್ನು ಮೆಚ್ಚುವಷ್ಟು ಬಲಿ ಹೋಮಗಳನ್ನು ಮೆಚ್ಚು ತ್ತಾರೆಯೇ ಸರ್ವೇಶ್ವರಾ? ಇಲ್ಲ. ಬಲಿಯರ್ಪಣೆಗಿಂತ ಆಜ್ಞಾಪಾಲನೆ ಶ್ರೇಷ್ಠ; ಟಗರುಗಳ ಕೊಬ್ಬಿಗಿಂತ ವಿಧೇಯತೆ ವಿಶಿಷ್ಟ.
23 : ತಂತ್ರಮಂತ್ರಗಳಷ್ಟೇ ಕೆಟ್ಟದು ಪ್ರತಿಭಟನೆ ಕಳ್ಳಭಕ್ತಿಗೂ ವಿಗ್ರಹಾರಾಧನೆಗೂ ಸಮಾನ ಹಟಮಾರಿತನ ನೀ ತಳ್ಳಿಬಿಟ್ಟೆ ಸರ್ವೇಶ್ವರನ ಆದೇಶವನ್ನು; ತಳ್ಳಿಬಿಟ್ಟರವರು ನಿನ್ನ ಅರಸುತನವನ್ನು” ಎಂದು ನುಡಿದನು.
-----------------------------
ಕೀರ್ತನೆ - 50 : 8-9, 16-17, 21,23
8 : ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ / ನಿನ್ನ ಮುಂದಿವೆ ಸತತ ನಿನ್ನ ದಹನ ಬಲಿಗಳೆಲ್ಲ //
9 : ನಾ ಕೋರುವುದು ನಿನ್ನ ಮನೆಯ ಹೋರಿಗಳನಲ್ಲ / ನಾ ಬಯಸುವುದು ನಿನ್ನ ಮಂದೆಯ ಹೋತಗಳನಲ್ಲ //
16 : ದುರ್ಜನರಿಗೆ ದೇವ ಹೇಳುವನು ಇಂತೆಂದು / “ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು?/ ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?”//
17 : ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ / ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ //
21 : ನೀವಿದನ್ನೆಲ್ಲ ಮಾಡಿದರೂ ನಾ ಮೌನಿಯೆನ್ನುವಿರಾ?/ ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ?// ನಿಮ್ಮ ದುಷ್ಟತನವನು ಕಣ್ಮುಂದೆಯಿಡುವೆನು/ ನೀವು ಅಪರಾಧಿಗಳೆಂದು ಸ್ಥಾಪಿಸದೆ ಬಿಡೆನು //
23 : ಧನ್ಯವಾದದ ಬಲಿಯನರ್ಪಿಸುವವನೇ ನನಗೆ ಸನ್ಮಾನಿತನು ಸನ್ಮಾರ್ಗ ಹಿಡಿವವನಿಗೆ ತೋರುವೆ ಪರಮ ಜೀವೋದ್ಧಾರವನು //
----------------
ಶುಭಸಂದೇಶ - ಮಾರ್ಕ 2:18-22
19 : ಅದಕ್ಕೆ ಯೇಸು, “ಮದುವಣಿಗನು ಜೊತೆಯಲ್ಲಿ ಇರುವಾಗ ಅವನ ಆಪ್ತರು ಉಪವಾಸ ಮಾಡುವುದುಂಟೆ? ಖಂಡಿತವಾಗಿಯೂ ಇಲ್ಲ. ಅವನು ತಮ್ಮ ಜೊತೆಯಲ್ಲಿರುವಷ್ಟು ಕಾಲ ಅವರು ಉಪವಾಸ ಮಾಡಲಾಗದು.
20 : ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲ ಬರುವುದು. ಆಗ ಅವರು ಉಪವಾಸ ಮಾಡುವರು.
21 : “ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಹಾಕಿದಲ್ಲಿ, ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ.
22 : ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ಯಾರೂ ತುಂಬಿಡುವುದಿಲ್ಲ. ತುಂಬಿಟ್ಟರೆ ಅದರಿಂದ ಬುದ್ದಲಿಗಳು ಬಿರಿಯುತ್ತವೆ. ಮದ್ಯವು ಮತ್ತು ಬುದ್ದಲಿಗಳು ಎರಡೂ ನಷ್ಟವಾಗುತ್ತವೆ. ಆದುದರಿಂದ ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು,” ಎಂದರು.
-----------------
ಚಿಂತನೆ
“ ತನ್ನಲ್ಲಿರುವುದನ್ನು ಇಲ್ಲದವನೊಂದಿಗೆ ಹಂಚಿಕೊಂಡು ಆ ಉಪವಾಸವನ್ನು ಸಂಭ್ರಮಿಸಬೇಕೆನ್ನುತ್ತದೆ ಯೇಸುವಾಣಿ "
ಯೇಸುಕ್ರಿಸ್ತರ ಕಾಲದಲ್ಲಿ ಸಮಾಜದ ಪುರೋಹಿತ ವರ್ಗವಾಗಿದ್ದ ಫರಿಸಾಯರು ಒಣಡಂಭಾಚಾರಕ್ಕೆ ಆದ್ಯತೆಯಿತ್ತಿದ್ದರು. ಉಪವಾಸವೆಂಬುದು ಅವರ ಪ್ರಕಾರ ಢಾಣಾಡಂಗುರ ಹೊಡೆದು ಕಹಳೆಯೂದಿ ಪ್ರಚಾರ ಗಿಟ್ಟಿಸುವ ಆಚರಣೆಯಾಗಿದ್ದಿತು.
ಮತ್ತೂ ಕೆಲವರು ತಾವು ಪ್ರಫುಲ್ಲರಾಗದೆ ಸಪ್ಪೆಮುಖ ಮಾಡಿಕೊಂಡು ಉಪವಾಸದಲ್ಲಿ ತಾವು ನಿಷ್ಠರೆಂಬುದನ್ನು ತೋರಿಸಿಕೊಳ್ಳಲು ಯತ್ನಿಸುತ್ತಿದ್ದರು.
ಆದರೆ ಯೇಸುಕ್ರಿಸ್ತರ ಪ್ರಕಾರ ಉಪವಾಸ ಎಂಬ ಪದದ ವ್ಯಾಖ್ಯೆ ವಿಭಿನ್ನವಾಗಿತ್ತು. ಅದು ಕೇವಲ ಊಟದ ಉಪವಾಸವಾಗಿರಲಿಲ್ಲ. ಆ ಉಪವಾಸದ ಆಳ ಅಗಲ ವಿಸ್ತಾರ ವ್ಯಾಪ್ತಿಗಳು ಪದಕೋಶದ ಅರ್ಥವನ್ನು ಮೀರಿತ್ತು.
ಕ್ರಿಸ್ತಧರ್ಮವನ್ನು ಪರಿಪಾಲನೆ ಮಾಡುವವನು ತನ್ನಲ್ಲಿರುವುದನ್ನು ಇಲ್ಲದವನೊಂದಿಗೆ ಹಂಚಿಕೊಂಡು ಆ ಉಪವಾಸವನ್ನು ಸಂಭ್ರಮಿಸಬೇಕೆನ್ನುತ್ತದೆ ಯೇಸುವಾಣಿ. ಆ ಬೋಧನೆಗಳು ಸರ್ವ ಕಾಲದೇಶಗಳಿಗೂ ಅನ್ವಯವೆನಿಸುತ್ತಿವೆ.
ಇಂದಿನ ಸಂತರು
1.ಸಂತ ಫಾಬಿಯಾನ್
ಅದು ಕ್ರಿಸ್ತಶಕ 236ನೇ ವರ್ಷ. ಜಗದ್ಗುರು ಪೋಪ್ ಅಂಟೆರೋಸ್ ಅವರು ತೀರಿಕೊಂಡು ಹಲವು ದಿನಗಳಾಗಿದ್ದವು. ನೂತನ ಜಗದ್ಗುರು ಪೋಪ್ ಅವರ ಆಯ್ಕೆಯ ಪ್ರಕ್ರಿಯೇ ಆರಂಭವಾಗಿತ್ತು. ಆಸಕ್ತ ಯಾಜಕರು ಮತ್ತು ರೋಮಿನ ಜನತೆ ನೂತನ ಜಗದ್ಗುರುಗಳು ಯಾರಾಗಬಹುದು ಎಂದು ತಿಳಿಯಲು ರೋಮಿನಲ್ಲಿ ನೆರೆದಿದ್ದರು. ಅವರೊಂದಿಗೆ ದೂರದ ಊರುಗಳಿಂದ ಬಂದ ಭಕ್ತಜನಾಂಗವೂ ಇತ್ತು. ಆ ದಿನ ಜಗದ್ಗುರುಗಳ ಆಯ್ಕೆಯು ಅಂತಿಮಗೊಳ್ಳಬೇಕಿತ್ತು. ಎಲ್ಲರೂ ತುದಿಗಾಲಲ್ಲಿ ಸುದ್ದಿಯ ನಿರೀಕ್ಷಣೆಯಲ್ಲಿದ್ದರು. ಅದು ಕೇವಲ ಕುತೂಹಲವಷ್ಟೇ ಅಲ್ಲ, ಅಗಲಿದ ಜಗದ್ಗುರುಗಳಿಗೆ ಶೃದ್ಧಾಂಜಲಿ ಸಲ್ಲಿಸುವ ಕ್ರಮವಾಗಿಯೂ ಆಸಕ್ತ ಭಕ್ತಾದಿಗಳು ರೋಮಿನಲ್ಲಿ ನೆರೆದಿದ್ದರು. ಒಬ್ಬ ಉತ್ತಮ ವಾಗ್ಮಿ ಯಾಜಕ ಜಗದ್ಗುರು ಆಗಬಹುದೆ? ಕ್ರೈಸ್ತರನ್ನು ಮುನ್ನಡೆಸುವ ಧೈರ್ಯದ ವ್ಯಕ್ತಿ ಜಗದ್ಗುರು ಆದರೆ ಒಳ್ಳೆಯದು. ಅಲ್ಲಲ್ಲ, ಒಬ್ಬ ಪ್ರಭಾವಶಾಲಿ ಜಗದ್ಗುರು ಆದರೆ ಅನುಕೂಲ - ಈ ಬಗೆಯ ವಿವಿಧ ಚಿಂತನೆಗಳಲ್ಲಿ ಜನ ಮುಳುಗಿದ್ದರು.
ಈ ಬಗೆಯ ಚಿಂತನೆ ನಡೆಯುತ್ತಿರುವ ಸಂದರ್ಭದಲ್ಲೇ, ನೂತನ ಜಗದ್ಗುರುಗಳ ಆಯ್ಕೆಗಾಗಿ ನೆರೆದಿದ್ದ ಯಾಜಕರಿದ್ದ ಭವನದ ಛಾವಣಿಯಿಂದ ಪಾರಿವಾಳವೊಂದು ಇಳಿದು ಬಂದಿತು. ಅದು ನೇರವಾಗಿ ಹೊರಗೆ ನೆರೆದಿದ್ದ ಸಾಮಾನ್ಯ ಜನರಲ್ಲಿ ಸಾಮಾನ್ಯನಾಗಿದ್ದ, ಅದುವರೆಗೂ ಒಬ್ಬರಿಗೂ ತಿಳಿಯದಿದ್ದ ವ್ಯಕ್ತಿ ಫಾಬಿಯಾನ್ ಅವರ ತಲೆಯ ಮೇಲೆ ಕುಳಿತುಕೊಂಡಿತು. ಅದು ಹೇಗಿತ್ತೆಂದರೆ, ಜ್ಞಾನಸ್ನಾನ ಕೊಡುತ್ತಿದ್ದ ಸ್ನಾನಿಕ ಯೋವಾನ್ನನು ಪ್ರಭು ಯೇಸುಸ್ವಾಮಿಗೆ ಜ್ಞಾನಸ್ನಾನ ಮಾಡಿಸಿದಾಗ ಅವರ ತಲೆಯ ಮೇಲೆ ಪವಿತ್ರಾತ್ಮರು ಪಾರಿವಾಳದ ರೂಪದಲ್ಲಿ ಬಂದಿಳಿದಿದ್ದನ್ನು ಹೋಲುವ ಪರಿಯಲ್ಲಿತ್ತು. ಅಲ್ಲಿ ಪವಿತ್ರಾತ್ಮರ ಉಪಸ್ಥಿತಿ ಇದ್ದಂತೆ ಅನ್ನಿಸುತ್ತಿತ್ತು. ಯಾಜಕ ಬಳಗ ಮತ್ತು ನೆರೆದವರು ನೂತನ ಜಗದ್ಗುರು ಪಟ್ಟಕ್ಕೆ ಇದುವರೆಗೂ ಯಾರಿಗೂ ತಿಳಿಯದಿದ್ದ ಅನಾಮಿಕ ವ್ಯಕ್ತಿ ಫಾಬಿಯಾನ್ ಅವರೇ ಯೋಗ್ಯರೆಂದು ಬಗೆದರು. ಅವರ ಹೆಸರನ್ನು ಅಂತಿಮಗೊಳಿಸಲಾಯಿತು.
ಪಾರಿವಾಳವು ಶಾಂತಿಯ ಪ್ರತೀಕವೂ ಹೌದು. ಒಂದು ಬಗೆಯಲ್ಲಿ ಪಾರಿವಾಳದ ಹಾಜರಾತಿ, ಜಗದ್ಗುರು ಫಾಬಿಯಾನ್ ಅವರ ಕಾಲದ ಶಾಂತಿಯ ಆಡಳಿತದ ಪ್ರವಾದನೆಯಂತಿತ್ತು. ಫಾಬಿಯಾನ್ ಅವರ ಅಧಿಕಾರ ವಹಿಸಿಕೊಳ್ಳುವ ಸಮಯದಲ್ಲಿ ಕ್ರೈಸ್ತರು ಅನುಭವಿಸುತ್ತಿದ್ದ ಕಷ್ಟಕೋಟಲೆಗಳಿಗೆ ಮುಕ್ತಿ ಸಿಕ್ಕಿತ್ತು. ಚಕ್ರವರ್ತಿ ಫಿಲಿಪ್ ಕ್ರೈಸ್ತರೊಂದಿಗೆ ಸ್ನೇಹಭಾವ ಹೊಂದಿದ್ದರು. ಕ್ರೈಸ್ತರ ಮೇಲಿನ ಕ್ರಮ ಜರುಗಿಸುವುದು ನಿಂತಿತ್ತು, ಜೊತೆಗೆ ಅವನ್ನು ಆದರದಿಂದ ಕಾಣುವ ಪರಿಪಾಠ ಆರಂಭವಾಗಿತ್ತು. ಈ ಶಾಂತಿ ಕಾಲದ ಸಮಯದಲ್ಲಿ ಜಗದ್ಗುರು ಫಾಬಿಯಾನ್ ಅವರು, ರೋಮಿನಲ್ಲಿ ಧರ್ಮಸಭೆ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಕಾರಣಕರ್ತರಾದರು. ರೋಮ ಪಟ್ಟಣಕ್ಕೆ, ಏಳು ಜನ ಡೀಕನರ ನೇಮಕ ಮಾಡಿದ ಅವರು, ಅಲ್ಲಿನ ಕ್ರೈಸ್ತ ಹುತಾತ್ಮರ ರಕ್ತಸಾಕ್ಷಿಗಳ ವಿವರಗಳ ಕಲೆ ಹಾಕಲು ಒತ್ತಾಸೆಯಾಗಿ ನಿಂತರು.
ಆದರೆ, ಕಾಲ ನಿಂತ ನೀರಲ್ಲ. ಚಕ್ರವರ್ತಿ ಫಿಲಿಪ್ ತೀರಿಕೊಂಡ ನಂತರ ಶಾಂತಿಯು ಕದಡಿಹೋಯಿತು. ಡೇಸಿಯಸ್ ಚಕ್ರವರ್ತಿ ಪಟ್ಟಕ್ಕೆ ಏರುತ್ತಿದ್ದಂತೆಯೇ ಮತ್ತೆ ಅಶಾಂತಿ ತಾಂಡವವಾಡತೊಡಗಿತು. ಕ್ರೈಸ್ತರ ಮೇಲಿನ ದೌರ್ಜನ್ಯಗಳು ಹೆಚ್ಚತೊಡಗಿದವು. ಜಗದ್ಗುರು ಫಾಬಿಯಾನ್ ಅವರು, ಕ್ರಿಸ್ತಶಕ 250ರ ಸುಮಾರಿನಲ್ಲಿ ರಕ್ತಸಾಕ್ಷಿಯಾಗಿ ಅಸುನೀಗಬೇಕಾಯಿತು. ಡೇಸಿಯಸ್ ಅವರ ಆಡಳಿತದಲ್ಲಿ, ಫಾಬಿಯಾನ್ ಅವರೇ ಕ್ರೈಸ್ತರ ಮೇಲಿನ ದೌರ್ಜನ್ಯದ ಮೊದಲ ಬಲಿಯಾಗುತ್ತಾರೆ.
2. ಸಂತ ಸಬಸ್ತಿಯಾನ್
ಸಂತ ಸೆಬಸ್ತಿಯಾನರ ತಂದೆ ತಾಯಿ, ಬಾಲ್ಯದ ಬಗ್ಗೆ ಯಾವ ಮಾಹಿತಿಯೂ ಲಭಿಸುವುದಿಲ್ಲ. ಆದರೆ, ಅವರು ದಕ್ಷಿಣ ಫ್ರಾನ್ಸ್ ನ ಮೂಲದವರು ಎಂಬುದು ತಿಳಿದು ಬರುತ್ತದೆ. ಅವರು ಮಿಲಾನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ನಂತರ ಕ್ರಿಸ್ತಶಕ 283ರಲ್ಲಿ ರೋಮನ್ ಸೇನೆಯ ಸೇವೆಗೆ ಸೇರಿದರು ಎಂದು ಹೇಳಲಾಗುತ್ತದೆ. ಅವರು ಸೇನೆಯಲ್ಲಿದ್ದಾಗ, ರೋಮನ್ ಅರಸರ ದೌರ್ಜನ್ಯಕ್ಕೆ ತುತ್ತಾದವರ ನೆರವಿಗೆ ಬರುತ್ತಿದ್ದರು ಹಾಗೂ ನೂರಾರು ಜನ ಪ್ರಮುಖರಿಗೆ ಕ್ರೈಸ್ತ ಧರ್ಮದತ್ತ ಒಲವು ಮೂಡುವಂತೆ ಮಾಡಿದ್ದರು.
ಒಂದು ಬಾರಿ ರೋಮನ್ ದೈವಗಳ ಆರಾಧನೆ ಒಪ್ಪದ ಕ್ರೈಸ್ತರಾದ ಮಾರ್ಕಸ್ ಮತ್ತು ಮರ್ಸೇಲಿಯನ್ ಸಹೋದರರನ್ನು ರೋಮನ್ ಸೈನಿಕರು ಜೈಲಿಗೆ ತಳ್ಳಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ಬಂದ ಅವರ ಪಾಲಕರು ಅವರನ್ನು ಕ್ರೈಸ್ತ ಧರ್ಮ ಬಿಟ್ಟುಬಿಡುವಂತೆ ಒತ್ತಡ ಹೇರುವುದನ್ನು ಗಮನಿಸಿದ ಸೆಬಸ್ತಿಯಾನ್, ಆ ಪಾಲಕರೇ ಕ್ರೈಸ್ತ ಧರ್ಮವನ್ನು ಒಪ್ಪವಂತೆ ಮನವೊಲಿಸಿತ್ತಾರೆ. ಅದನ್ನು ತಿಳಿದ ಕ್ರೈಸ್ತ ಮತವನ್ನು ಮತ್ತುಕ್ರೈಸ್ತರನ್ನು ದ್ವೇಷಿಸುತ್ತಿದ್ದ ಚಕ್ರವರ್ತಿ ಡಯಕ್ಲೇಷಿಯನ್, ಕೆಂಡಾಮಂಡಲನಾಗಿ, ಸೆಬಸ್ತಿಯಾನರನ್ನು ಕಂಬಕ್ಕೆ ಬಿಗಿದು ಬಾಣಗಳಿಂದ ಹೊಡೆದು ಸಾಯಿಸುವಂತೆ ಶಿಕ್ಷೆ ವಿಧಿಸುತ್ತಾನೆ. ಅವರ ಮೇಲೆ ಬಾಣಗಳ ಸುರಿಮಳೆಗೈದ ಬಿಲ್ವಿದ್ಯೆ ಪಾರಂಗತರು, ತಮ್ಮ ಬಾಣಗಳ ಏಟಿನಂತೆ ಸೆಬಾಸ್ತಿಯನ್ ಸತ್ತೆಹೋದನೆಂದು ಬಗೆಯುತ್ತಾರೆ. ಆದರೆ ರೋಮ ಪಟ್ಟಣದ ನಿವಾಸಿ ಐರಿನ್ ಎಂಬ ವಿಧವೆ, ಅವರನ್ನು ಆರೈಕೆ ಮಾಡಿ ಬದುಕಿಸುತ್ತಾಳೆ. ಕ್ರೈಸ್ತಳಾದ ಆಕೆಯ ಗಂಡ ರೋಮನ್ ದೈವಗಳರಾಧನೆಯನ್ನು ನಿರಾಕರಿಸಿದ್ದಕ್ಕೆ ಆಕೆಯ ಗಂಡನನ್ನೂ ಸಾಯಿಸಲಾಗಿರುತ್ತದೆ.
ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿದ ನಂತರ ಚಕ್ರವರ್ತಿಯ ಮುಂದೆ ಆತ ಮತ್ತೆ ಎದುರಾದಾಗ, ವಿಚಲಿತಗೊಳ್ಳುವ ಚಕ್ರವರ್ತಿ, ಈ ಬಾರಿ ಆತ ಖಂಡಿತ ಸಾಯಲೇಬೇಕು ಎಂದು ನಿರ್ಧರಿಸಿ ಆತನು ಸಾಯುವವರೆಗೂ ಬಾರುಕೋಲಿನಿಂದ ಹೊಡಿಯಿರೆಂದು ತನ್ನ ಸೈನಿಕರಿಗೆ ಆದೇಶ ನೀಡುತ್ತಾನೆ. ಅದರಂತೆಯೇ ಕೋಲಿನಿಂದ ಹೊಡೆದು ಸಾಯಿಸಿದ ನಂತರ ಸೆಬಸ್ತಿಯಾನ್ ಅವರ ಶವವನ್ನು ಸೈನಿಕರು ಚರಂಡಿಗೆ ಎಸೆಯುತ್ತಾರೆ. ಕ್ರೈಸ್ತ ಶೃದ್ಧಾಳುಗಳು ಅವನ ಶವವನ್ನು ಚರಂಡಿಯಿಂದ ಎತ್ತಿ ಒಂದು ಗುಹಾ ಸಮಾಧಿಯಲ್ಲಿ ಸಮಾಧಿ ಮಾಡುತ್ತಾರೆ.
ಜನವರಿ 21 ಸಂತ ಸೆಬಸ್ತಿಯಾನ್ ಅವರ ಹಬ್ಬದ ದಿನ. ಈ ಸಂತರ ದೈಹಿಕ ಸಾಮರ್ಥ್ಯವನ್ನು ಪರಿಗಣಿಸಿ, ಕ್ರೀಡಾಪಟುಗಳ ಪಾಲಕ ಸಂತರನ್ನಾಗಿಸಿದ್ದಾರೆ. ರೋಮನ್ ದೈವ ಅಪೋಲೊ ಅವರ ಬಾಣಗಳು ಚುಚ್ಚಿದಾಗ ಸಹಜವಾಗಿ ಅಸ್ವಸ್ಥತೆ ಉಂಟಾಗುತ್ತದೆ ಎಂಬ ನಂಬುಗೆಯಿದೆ. ಅಗಣಿತ ಸಂಖ್ಯೆಯ ಬಾಣಗಳು ಮೈಮೇಲೆ ಮೂಡಿಸಿದ ಗಾಯ ಪ್ಲೇಗ್ ಮಾರಿಯ ಗಾಯಗಳನ್ನು ಹೋಲುತ್ತಿದ್ದ ಹಿನ್ನೆಲೆಯಲ್ಲಿ ಕ್ರೈಸ್ತರು, ಈ ಸಂತರನ್ನು ಈ ರೋಗದಿಂದ ರಕ್ಷಿಸುವ ಸಂತರು ಎಂದು ಗುರುತಿಸುತ್ತಾರೆ. ರೋಮ್ ಪಟ್ಟಣದಲ್ಲಿ ಕ್ರಿಸ್ತಶಕ 680ರಲ್ಲಿ ಮತ್ತು ಮುಂದೆ1575ರಲ್ಲಿ ಮಿಲಾನ್ ಮತ್ತು 1599ರಲ್ಲಿ ಪ್ಲೇಗ್ ರೋಗ ಕಾಣಿಸಿಕೊಂಡ ಸಂದರ್ಭದಲ್ಲಿ ಈ ಸಂತರನ್ನು ಪ್ರಾರ್ಥಿಸಿದಾಗ, ಈ ರೋಗ ಕಣ್ಮರೆಯಾಯಿತು ಎಂದು ನಂಬಲಾಗುತ್ತದೆ. ಪ್ಲೇಗ್ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡದಂತೆ ಸಂತ ಸೆಬಸ್ತಿಯಾನ್‌ರು ರಕ್ಷಿಸುತ್ತಾರೆ. ಅವರನ್ನು ಬಿಲ್ಲುಗಾರರ, ಕ್ರೀಡಾಪಟುಗಳ ಮತ್ತು ಸೈನಿಕರ ಪಾಲಕ ಸಂತರೆಂದು ಗುರುತಿಸಲಾಗುತ್ತದೆ.

ಚಿತ್ರ: ಗೂಗಲ್ ಕೃಪೆ

No comments:
Post a Comment