Sunday, 19 January 2020

ಸಾಧಾರಣ ಕಾಲದ ಎರಡನೇ ವಾರ - ಮಂಗಳವಾರ

ಸಾಧಾರಣ ಕಾಲದ ಎರಡನೇ ವಾರ - ಮಂಗಳವಾರ
ಪವಿತ್ರಗ್ರಂಥ ವಾಚನ: 1 ಸಮುವೇಲ 16:1-13
ಕೀರ್ತನೆ : 89:20, 21-22, 27-28
ಶುಭಸಂದೇಶ: ಮಾರ್ಕ 2:23-28
-------------------
ಪವಿತ್ರಗ್ರಂಥ ವಾಚನ: 1 ಸಮುವೇಲ 16:1-13
1 : ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನಾನು ಸೌಲನನ್ನು ಇಸ್ರಯೇಲರ ಅರಸನಾಗಿರುವುದಕ್ಕೆ ಅಯೋಗ್ಯನೆಂದು ತಳ್ಳಿಬಿಟ್ಟೆನಲ್ಲವೆ? ನೀನು ಅವನಿಗಾಗಿ ಎಷ್ಟರವರೆಗೆ ದುಃಖಿಸುತ್ತಿರುವೆ? ಕೊಂಬನ್ನು ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೆತ್ಲೆಹೇಮಿನವನಾದ ಜೆಸ್ಸೆಯನ ಬಳಿಗೆ ಕಳುಹಿಸುತ್ತೇನೆ. ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ,” ಎಂದು ಹೇಳಿದರು.
2 : ಅದಕ್ಕೆ ಸಮುವೇಲನು, “ನಾನು ಹೋಗುವುದು ಹೇಗೆ? ಇದು ಸೌಲನಿಗೆ ಗೊತ್ತಾದರೆ ಅವನು ನನ್ನನ್ನು ಕೊಂದುಹಾಕುವನಲ್ಲವೇ?” ಎಂದನು. ಆಗ ಸರ್ವೇಶ್ವರ, “ನೀನು ಒಂದು ಕಡಸನ್ನು ತೆಗೆದುಕೊಂಡು ಹೋಗು. ಸರ್ವೇಶ್ವರನಿಗೆ ಬಲಿಯರ್ಪಣೆ ಮಾಡಲು ಬಂದಿದ್ದೇನೆ ಎಂದು ಹೇಳಿ ಜೆಸ್ಸೆಯನನ್ನು ಅದಕ್ಕೆ ಆಮಂತ್ರಿಸು.
3 : ಆಮೇಲೆ ನೀನು ಮಾಡಬೇಕಾದುದನ್ನು ನಾನೇ ತಿಳಿಸುತ್ತೇನೆ; ನಾನು ಯಾರನ್ನು ತೋರಿಸುತ್ತೇನೋ ಅವನನ್ನೇ ನೀನು ಅಭಿಷೇಕಿಸಬೇಕು,” ಎಂದರು.
4 : ಸರ್ವೇಶ್ವರ ಹೇಳಿದಂತೆಯೇ ಸಮುವೇಲನು ಬೆತ್ಲೆಹೇಮಿಗೆ ಹೋದನು. ಊರಿನ ಹಿರಿಯರು ನಡುನಡುಗುತ್ತಾ ಬಂದು, ಅವನನ್ನು ಎದುರುಗೊಂಡು, “ನಿನ್ನ ಆಗಮನ ನಮಗೆ ಶುಭಕರವಾಗಿದೆಯೇ?” ಎಂದು ಕೇಳಿದರು. ಅವನು,
5 : “ಹೌದು ಶುಭಕರವಾಗಿದೆ; ಸರ್ವೇಶ್ವರನಿಗೆ ಬಲಿಯನ್ನರ್ಪಿಸುವುದಕ್ಕೆ ಬಂದಿದ್ದೇನೆ. ನೀವು ಶುದ್ಧರಾಗಿ ನನ್ನ ಜೊತೆಯಲ್ಲಿ ಬಲಿಯರ್ಪಣೆಗೆ ಬನ್ನಿ,” ಎಂದು ಹೇಳಿ ಜೆಸ್ಸೆಯನನ್ನೂ ಅವನ ಮಕಳನ್ನೂ ಶುದ್ಧೀಕರಿಸಿ ಅವರನ್ನೂ ಬಲಿಯರ್ಪಣೆಗೆ ಆಮಂತ್ರಿಸಿದನು. ಅವರು ಬಂದರು.
6 : ಸಮುವೇಲನು ಎಲೀಯಾಬನನ್ನು ನೋಡಿ ತನ್ನಷ್ಟಕ್ಕೆ, “ನಿಶ್ಚಯವಾಗಿ ಸರ್ವೇಶ್ವರ ಅಭಿಷೇಕಕ್ಕೆ ಆರಿಸಿಕೊಂಡವನು ನನ್ನ ಮುಂದೆಯೇ ಇದ್ದಾನೆ,” ಎಂದುಕೊಂಡನು.
7 : ಆದರೆ ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನೀನು ಅವನ ಚೆಲುವಿಕೆಯನ್ನಾಗಲಿ ಎತ್ತರವನ್ನಾಗಲಿ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಸರ್ವೇಶ್ವರ ಮನುಷ್ಯರಂತೆ ಬಹಿರಂಗದ ತೋರಿಕೆಯನ್ನು ನೋಡುವುದಿಲ್ಲ; ಅಂತರಂಗವನ್ನೇ ವೀಕ್ಷಿಸುತ್ತಾನೆ,” ಎಂದರು.
8 : ಜೆಸ್ಸೆಯನು ಅಬೀನಾದಾಬನನ್ನು ಸಮುವೇಲನ ಬಳಿಗೆ ಬರಮಾಡಲು ಸಮುವೇಲನು, “ಸರ್ವೇಶ್ವರ ಇವನನ್ನೂ ಆರಿಸಿಕೊಳ್ಳಲಿಲ್ಲ,” ಎಂದು ಹೇಳಿದನು.
9 : ತರುವಾಯ ಜೆಸ್ಸೆಯನು ಶಮ್ಮ ಎಂಬವನನ್ನು ಬರಮಾಡಲು ಸಮುವೇಲನು, “ಸರ್ವೇಶ್ವರ ಇವನನ್ನೂ ಆರಿಸಿಕೊಳ್ಳಲಿಲ್ಲ,” ಎಂದು ಹೇಳಿದನು.
10 : ಹೀಗೆ ಜೆಸ್ಸೆಯನು ತನ್ನ ಮಕ್ಕಳಲ್ಲಿ ಏಳು ಮಂದಿಯನ್ನೂ ಅವನ ಬಳಿಗೆ ಬರಮಾಡಿದರೂ ಅವನು, “ಸರ್ವೇಶ್ವರ ಇವರನ್ನು ಆರಿಸಿಕೊಳ್ಳಲಿಲ್ಲ,” ಎಂದು ನುಡಿದನು.
11 : ಅನಂತರ ಸಮುವೇಲನು ಜೆಸ್ಸೆಯನನ್ನು, “ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ?” ಎಂದು ಕೇಳಿದನು. ಅವನು, “ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿದ್ದಾನೆ; ಅವನು ಕುರಿಮೇಯಿಸುವುದಕ್ಕೆ ಹೋಗಿದ್ದಾನೆ,” ಎಂದು ಉತ್ತರಕೊಟ್ಟನು. ಆಗ ಸಮುವೇಲನು, “ಅವನನ್ನು ಇಲ್ಲಿಗೆ ಬರಮಾಡು; ಅವನು ಬರುವವರೆಗೂ ನಾವು ಊಟಕ್ಕೆ ಕುಳಿತುಕೊಳ್ಳಬಾರದು,” ಎಂದು ಹೇಳಿದನು. ಜೆಸ್ಸೆಯನು ಅವನನ್ನು ಕರೆದುತರಿಸಿದನು.
12 : ಅವನು ಕೆಂಬಣ್ಣದವನು, ಸುಂದರನೇತ್ರನು, ಹಾಗು ನೋಟಕ್ಕೆ ರಮಣೀಯನು. ಸರ್ವೇಶ್ವರ ಸಮುವೇಲನಿಗೆ, “ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ,” ಎಂದು ಆಜ್ಞಾಪಿಸಿದರು.
13 : ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕಿಸಿದನು. ಕೂಡಲೆ ಸರ್ವೇಶ್ವರನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಾಕ್ಕೆ ಹೊರಟು ಹೋದನು.
---
 ಕೀರ್ತನೆ : 89:20, 21-22, 27-28
ನನ್ನ ದಾಸ ದಾವೀದನನು ಗುರುತಿಸಿರುವೆ
20 : “ನನ್ನ ದಾಸ ದಾವೀದನನು ಗುರುತಿಸಿರುವೆ / ಪವಿತ್ರ ತೈಲದಿಂದವನನು ಅಭಿಷೇಕಿಸಿರುವೆ //
21 : ನನ್ನ ಕೈಯ ಆಸರೆ ಅವನಿಗಿದೆ ಸತತ / ನನ್ನ ಭುಜಬಲವು ಅವನಿಗೆ ಶಕ್ತಿಯುತ //
22 : ಸಿಗನು ಶತ್ರುವಿನ ಕುತಂತ್ರಕೆ / ಕುಗ್ಗನು ಕೆಡುಕರಾ ದರ್ಪಕೆ //
27 : ಮಾಡುವೆನವನನು ಜೇಷ್ಠ ಪುತ್ರನನ್ನಾಗಿ / ಭೂರಾಜರುಗಳೊಳು ಅತ್ಯುನ್ನತನನ್ನಾಗಿ //
28 : ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ / ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ //
29 : ಉಳಿಸುವೆನು ಅವನ ಸಂತಾನವನು ನಿರಂತರವಾಗಿ / ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ //
----
ಶುಭಸಂದೇಶಮಾರ್ಕ 2:23-28
23 : ಅದೊಂದು ಸಬ್ಬತ್ ದಿನ. ಯೇಸುಸ್ವಾಮಿ ಗೋದಿಯ ಹೊಲಗಳಲ್ಲಿ ಹಾದು ಹೋಗುತ್ತಿದ್ದರು. ಜೊತೆಯಲ್ಲಿದ್ದ ಅವರ ಶಿಷ್ಯರು ತೆನೆಗಳನ್ನು ಕೀಳಲಾರಂಭಿಸಿದರು.
24 : ಇದನ್ನು ಕಂಡ ಫರಿಸಾಯರು, “ನೋಡು, ಸಬ್ಬತ್ದಿನದಲ್ಲಿ ನಿಷಿದ್ಧವಾದುದನ್ನು ನಿನ್ನ ಶಿಷ್ಯರು ಮಾಡುತ್ತಿದ್ದಾರೆ, ಇದು ಸರಿಯೇ?” ಎಂದು ಯೇಸುವನ್ನು ಪ್ರಶ್ನಿಸಿದರು.
25 : ಅದಕ್ಕೆ ಯೇಸು, “ಹಿಂದೆ, ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದು, ಉಣ್ಣಲು ಏನೂ ಇಲ್ಲದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೇ?
26 : ಪ್ರಧಾನಯಾಜಕ ಅಬಿಯಾತರನ ಕಾಲದಲ್ಲಿ ಅವನು ದೇವಮಂದಿರದೊಳಕ್ಕೆ ಹೋಗಿ, ಯಾಜಕನ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿಂದ; ಅಲ್ಲದೆ, ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲವೇ?” ಎಂದು ಅವರನ್ನು ಕೇಳಿದರು.
27 : ಬಳಿಕ ಯೇಸು ಅವರಿಗೆ, “ಸಬ್ಬತ್ ದಿನ ಇರುವುದು ಮನುಷ್ಯನಿಗಾಗಿ ಹೊರತು ಮನುಷ್ಯ ಇರುವುದು ಸಬ್ಬತ್ತಿಗಾಗಿ ಅಲ್ಲ.
28 ಆದುದರಿಂದ ನರಪುತ್ರನು ಸಬ್ಬತ್ತಿಗೂ ಒಡೆಯ,” ಎಂದರು.
------------------
ಚಿಂತನೆ:
ಮಾನವನಿಗೆ ಅಲ್ಪವೆನಿಸಿದ್ದು ದೇವರ ದೃಷ್ಟಿಯಲ್ಲಿ ಮಹತ್ತಾಗಿರುತ್ತದೆ "

 ಮಾನವನಿಗೆ ಅಲ್ಪವೆನಿಸಿದ್ದು ದೇವರ ದೃಷ್ಟಿಯಲ್ಲಿ ಮಹತ್ತಾಗಿರುತ್ತದೆ ಎಂಬುದನ್ನು ದಾವಿದನ ಅಭಿಷೇಕದ ಸಂದರ್ಭದಲ್ಲಿ ಮನಗಾಣುತ್ತೇವೆ. ಯಾವುದಕ್ಕೆ ಬೆಲೆ ಕೊಡಬೇಕು ಯಾವುದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು ಎಂಬುದರ ಬಗ್ಗೆ ಯೇಸು ಸೂಚ್ಯವಾಗಿ ತಿಳಿಯಪಡಿಸುತ್ತಾರೆ. ಸಬ್ಬತ್ ಎಂದರೆ ದೇವರನ್ನು ಕೃತಜ್ಞತೆಯಿಂದ ಸ್ಮರಿಸಿ ಧ್ಯಾನಿಸುವ ದಿನ. ಆದರೆ ಕಾಲಘಟ್ಟ ಉರುಳಿದಂತೆ ಅದು ಕಂದಾಚಾರವಾಗಿ ಬದಲಾಗಿತ್ತು. ದಿನ ಏನೂ ಕೆಲಸ ಮಾಡಬಾರದು ಎಂದು ಧರ್ಮಶಾಸ್ತ್ರಿಗಳು ಕಟ್ಟಳೆ ರೂಪಿಸಿದ್ದರು. ಜನಸಾಮಾನ್ಯರೂ ಕಟ್ಟಳೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ ಇತರರಿಗೂ ನೆನಪಿಸುತ್ತಾ ಅದನ್ನೊಂದು ಕಾಠಿಣ್ಯದ ತುದಿಗೆ ಒಯ್ದಿದ್ದರು. ಅದನ್ನು ತಿಳಿಹೇಳಲೆಂದೇ ಯೇಸು ಸಬ್ಬತ್ ದಿನದಂದು ಎಂದಿಗಿಂತ ಸಂಭ್ರಮದಿಂದ ಶಿಷ್ಯರೊಂದಿಗೆ ಹೊಲದ ಬದುವಿನ ಮೇಲೆ ನಡೆಯುತ್ತಾ ದೇವರ ಕೊಡುಗೆಯಾದ ಹಣ್ಣಾದ ತೆನೆಗಳನ್ನು ಅಂಗೈ ಮೇಲೆ ಹೊಸಕುತ್ತಾ ತಿನ್ನುತ್ತಾ ಸಾಗುತ್ತಾರೆ. ಹೀಗೆ ಸಬ್ಬತ್ ದಿನದ ಆಚರಣೆ ಕುರಿತು ಯೇಸು ಹೊಸ ವ್ಯಾಖ್ಯಾನ ಬರೆಯುತ್ತಾರೆ. ಮನುಷ್ಯನ ಒಳಿತಿಗಾಗಿಯೇ ರೂಪುಗೊಳ್ಳುವ ನಿಯಮವೊಂದು ಕಾಲಾಂತರದಲ್ಲಿ ಮನುಷ್ಯ ಗೌರವಕ್ಕೆ ಧಕ್ಕೆ ತರುವುದು ತರವೇ?
-------------
ಸಂತ ಆಗ್ನೇಸ್
ಸಂತ ಆಗ್ನೇಸ್ ಜನಿಸಿದ್ದು ರೋಮ್‍ನಲ್ಲಿ. ಆಗ್ನೇಸ್ ಅಪರೂಪದ ಸುಂದರಿ. ಆಕೆಯ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಅನೇಕರು ಅವಳನ್ನು ಮದುವೆಯಾಗಲು ಬಯಸಿದ್ದರು. ಆದರೆ ಕ್ರಿಸ್ತನ ಮೇಲಿನ ಪ್ರೀತಿಯಿಂದ ಎಲ್ಲರನ್ನು ತಿರಸ್ಕರಿಸಿದಳು. ರೋಮ್‍ನ ರಾಜ್ಯಪಾಲನ ಮಗ ಪ್ರೊಕಾಸ್ ಆಗ್ನೇಸ್ ಸೌಂದರ್ಯಕ್ಕೆ ಮಾರುಹೋಗಿದ್ದ ಮತ್ತು ಮದುವೆಯಾಗುವಂತೆ ಯಾಚಿಸಿದ. ಆದರೆ ಆಗ್ನೇಸ್ ದೃಢ ಚಿತ್ತದಿಂದ ತಿರಸ್ಕರಿಸುತ್ತಾಳೆ. ಇದರಿಂದ ಪ್ರೊಕಾಸ್ ಕುಪಿತಗೊಂಡು ಅವಳನ್ನು ಮರಣದಂಡನೆಗೆ ಗುರಿಪಡಿಸುತ್ತಾನೆ.
ಸಂತ ಆಗ್ನೇಸ್ ಪ್ರತಿಯೊಬ್ಬ ಯುವಕ ಯುವತಿಯರಿಗೂ ಆದರ್ಶವಾಗಿದ್ದಾರೆ. ತನ್ನ ಯೌವನಾವಸ್ಥೆಯಲ್ಲಿ ಕ್ರಿಸ್ತನಿಗೆ ಸಾಕ್ಷಿಯಾಗಿ ಜೀವಿಸಿದಳಾಕೆ. ತಾರುಣ್ಯದಲ್ಲಿ ಕ್ಷಣಿಕ ಸುಖಕ್ಕಾಗಿ ದಾರಿತಪ್ಪುವ ಎಲ್ಲಾ ಯುವಕ-ಯುವತಿಯರು ಆಗ್ನೇಸ್‍ಳಿಂದ ದೈವ ಪ್ರೀತಿ, ನಿಷ್ಠೆಯನ್ನು ಕಲಿಯಬೇಕಾಗಿದೆ.
----------------
© 'ದನಿಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment