Monday, 20 January 2020

ಸಾಧಾರಣ ಕಾಲದ ಎರಡನೆಯ ಗುರುವಾರ

ಸಾಧಾರಣ ಕಾಲದ ಎರಡನೆಯ ಗುರುವಾರ
ಪವಿತ್ರಗ್ರಂಥ ವಾಚನ: 1 ಸಮುವೇಲ  18:6-9; 19:1-7
ಕೀರ್ತನೆ : 56:2-3, 9-10, 10-12, 13-14
ಶುಭಸಂದೇಶಮಾರ್ಕ 3:7-12
----------------
ಪವಿತ್ರಗ್ರಂಥ ವಾಚನ: 1 ಸಮುವೇಲ  18:6-9; 19:1-7
6 : ದಾವೀದನು ಫಿಲಿಷ್ಟಿಯರನ್ನು ಸಂಹರಿಸಿ ಸರ್ವಸೈನಿಕರೊಡನೆ ಹಿಂದಿರುಗಿ ಬರುವಾಗ ಇಸ್ರಯೇಲರ ಎಲ್ಲ ಪಟ್ಟಣಗಳಿಂದ ಮಹಿಳೆಯರು ಹೊರಗೆ ಬಂದು, ತಾಳ ತಮ್ಮಟೆಗಳನ್ನು ಹಿಡಿದು, ಸಂತೋಷದಿಂದ ಹಾಡುತ್ತಾ ಕುಣಿಯುತ್ತಾ, ಅರಸ ಸೌಲನನ್ನು ಎದುರುಗೊಂಡರು.
7 : ಅವರು: “ಸೌಲ ಕೊಂದನು ಸಾವಿರಗಟ್ಟಳೆ ದಾವೀದನೋ ಕೊಂದನು ಹತ್ತು ಸಾವಿರಗಟ್ಟಳೆ,” ಎಂದು ಪರಸ್ಪರ ಹಾಡಿದರು.
8 : ಈ ಮಾತುಗಳು ಸೌಲನಿಗೆ ಹಿಡಿಸಲಿಲ್ಲ. ಅವನು ಕೋಪದಿಂದ, “ದಾವೀದನು ಹತ್ತು ಸಾವಿರಗಟ್ಟಳೆ ಕೊಂದನೆಂದೂ ನಾನು ಸಾವಿರಗಟ್ಟಳೆ ಮಾತ್ರ ಕೊಂದೆನೆಂದು ಹಾಡುತ್ತಾರಲ್ಲಾ! ಹಾಗಾದರೆ ಅವನನ್ನು ರಾಜನನ್ನಾಗಿ ಮಾಡುವುದೊಂದೇ ಕಡಿಮೆ!” ಎಂದುಕೊಂಡನು.
9 : ಅಂದಿನಿಂದ ಸೌಲನು ದಾವೀದನ ಮೇಲೆ ಕಣ್ಣಿಟ್ಟನು.
1 : ದಾವೀದನನ್ನು ಕೊಲ್ಲಬೇಕೆಂದು ಸೌಲನು ತನ್ನ ಮಗ ಯೋನಾತಾನನಿಗೂ ಎಲ್ಲಾ ಪರಿವಾರದವರಿಗೂ ಆಜ್ಞಾಪಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು.
2 : ಆದುದರಿಂದ ಅವನು ದಾವೀದನಿಗೆ, “ನನ್ನ ತಂದೆ ಸೌಲನು ನಿನ್ನನ್ನು ಕೊಲ್ಲಬೇಕೆಂದಿರುತ್ತಾರೆ. ನೀನು ಜಾಗರೂಕತೆಯಿಂದಿರು; ನಾಳೆ ಬೆಳಿಗ್ಗೆ ಒಂದು ಗುಟ್ಟಾದ ಸ್ಥಳದಲ್ಲಿ ಅಡಗಿಕೊಂಡಿರು.
3 : ನನ್ನ ತಂದೆಯ ಬಳಿಯಲ್ಲಿದ್ದು ನಿನ್ನ ಬಗ್ಗೆ ಅವರೊಡನೆ ಮಾತಾಡಿ ಗೊತ್ತಾದ ವಿಷಯವನ್ನು ನೀನು ಅವಿತುಕೊಂಡಿರುವ ಸ್ಥಳಕ್ಕೆ ಬಂದು ತಿಳಿಸುವೆನು,” ಎಂದು ಹೇಳಿದನು.
4 : ತರುವಾಯ ಅವನು ತನ್ನ ತಂದೆಯ ಮುಂದೆ ದಾವೀದನನ್ನು ಹೊಗಳಿದನು. “ಒಡೆಯರಾದ ತಾವು ತಮ್ಮ ಸೇವಕ ದಾವೀದನಿಗೆ ಅನ್ಯಾಯ ಮಾಡಬಾರದು; ಅವನು ನಿಮಗೆ ದ್ರೋಹ ಮಾಡಲಿಲ್ಲ; ಅವನು ಮಾಡಿದ್ದೆಲ್ಲವು ನಿಮ್ಮ ಹಿತಕ್ಕಾಗಿಯೇ.
5 : ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಆ ಫಿಲಿಷ್ಟಿಯನನ್ನು ಕೊಂದನು; ಸರ್ವೇಶ್ವರ ಇಸ್ರಯೇಲರಿಗೆ ಮಹಾ ಜಯವನ್ನುಂಟುಮಾಡಿದರು. ನೀವೂ ಅದನ್ನು ನೋಡಿ ಸಂತೋಷಪಟ್ಟಿರಿ; ದಾವೀದನನ್ನು ನಿಷ್ಕಾರಣವಾಗಿ ಕೊಂದು ನಿರ್ದೋಷಿಯ ರಕ್ತವನ್ನು ಸುರಿಸಿದ ಅಪರಾಧಕ್ಕೆ ನೀವೇಕೆ ಗುರಿ ಆಗುತ್ತೀರಿ?” ಎಂದನು. 6
6 : ಸೌಲನು ಯೋನಾತಾನನ ಮಾತುಗಳನ್ನು ಆಲಿಸಿದನು. “ಸರ್ವೇಶ್ವರನಾಣೆ, ಅವನನ್ನು ಕೊಲ್ಲುವುದಿಲ್ಲ,” ಎಂದು ಪ್ರಮಾಣಮಾಡಿದನು.
7 : ಆಗ ಯೋನಾತಾನನು ದಾವೀದನನ್ನು ಕರೆದು ಅವನಿಗೆ ಈ ಮಾತುಗಳನ್ನು ತಿಳಿಸಿ ಸೌಲನ ಬಳಿಗೆ ಕರೆದುತಂದನು. ದಾವೀದನು ಮುಂಚಿನಂತೆ ಸೌಲನ ಸನ್ನಿಧಿಯಲ್ಲೇ ಇರುವಂತೆ ಏರ್ಪಾಡಾಯಿತು.
-----------------------
ಕೀರ್ತನೆ : 56:2-3, 9-10, 10-12, 13-14
ದೇವರಲ್ಲೇ ನಿರ್ಭೀತ ನಂಬಿಕೆ ನನಗೆ
2 : ವಿರೋಧಿಗಳು ದಿನವಿಡೀ ಬೆನ್ನಟ್ಟಿ ಬರುತಿಹರು / ಸೊಕ್ಕಿನಿಂದ ನನಗೆದುರಾಗಿ ನಿಂತಿರುವರು ಹಲವರು //
3 : ಹೆದರಿಕೆ ಉಂಟಾದಾಗ / ನೀನೆ ನನಗೆ ಆಶ್ರಯ //
9 : ನಾ ಮೊರೆಯಿಟ್ಟಾಗ ಶತ್ರುಗಳು ಪರಾರಿ ಹಿಂದಕೆ / ದೇವನಿರುವುದು ನನ್ನ ಕಡೆ, ಇದು ಗೊತ್ತಿದೆ ನನಗೆ //
10 : ನಾ ಹೆಮ್ಮೆಪಡುವುದು ದೇವನಲಿ, ಆತನ ವಾಗ್ದಾನದಲಿ / ನಾ ಹೆಮ್ಮೆಪಡುವುದು ಪ್ರಭುವಿನಲಿ, ಆತನ ವಾಗ್ದಾನದಲಿ //
11 : ದೇವರಲ್ಲೇ ನಿರ್ಭೀತ ನಂಬಿಕೆ ನನಗೆ / ನರಮಾನವರು ಏನು ಮಾಡಿಯಾರೆನಗೆ //
12 : ನಿನ್ನ ಮುಂದೆ ಜೀವನ್ ಜ್ಯೋತಿಯಲಿ ನಾ ನಡೆಯಮಾಡಿರುವೆ / ಮೃತ್ಯುವಿನಿಂದೆನ್ನ ಪ್ರಾಣವನು ನೀ ಮುಕ್ತಗೊಳಿಸಿರುವೆ / ಜಾರಿ ಬೀಳದಂತೆನ್ನ ಪಾದಗಳನು ಕಾದಿರಿಸಿರುವೆ //
13 : ಎಂದೇ ನಿನಗೆ ಹೊತ್ತ ಹರಕೆಗಳನು ಸಲ್ಲಿಸುವೆ / ಕೃತಜ್ಞತಾಬಲಿಗಳನು ದೇವಾ, ನಿನಗರ್ಪಿಸುವೆ //
--------------------
ಶುಭಸಂದೇಶಮಾರ್ಕ 3:7-12
7 : ಯೇಸುಸ್ವಾಮಿ ತಮ್ಮ ಶಿಷ್ಯರ ಜೊತೆಯಲ್ಲಿ ಗಲಿಲೇಯ ಸರೋವರದ ತೀರಕ್ಕೆ ಹೊರಟು ಹೋದರು. ಸಾವಿರಾರು ಜನರು ಅವರನ್ನು ಹಿಂಬಾಲಿಸಿದರು.
8 : ಈ ಜನರು ಯೇಸು ಮಾಡುತ್ತಿದ್ದ ಮಹತ್ಕಾರ್ಯಗಳ ಸಮಾಚಾರವನ್ನು ಕೇಳಿ, ಗಲಿಲೇಯ ಪ್ರಾಂತ್ಯದಿಂದ, ಜುದೇಯ ಪ್ರಾಂತ್ಯದಿಂದ, ಜೆರುಸಲೇಮ್ ನಗರದಿಂದ, ಇದುಮೇಯ ಪ್ರಾಂತ್ಯದಿಂದ, ಜೋರ್ಡನ್ ನದಿಯ ಪೂರ್ವ ಪ್ರದೇಶ ಹಾಗೂ ಟೈರ್-ಸಿದೋನ್ ಪಟ್ಟಣಗಳ ಸುತ್ತಮುತ್ತಲಿಂದ ಬಂದಿದ್ದರು.
9 : ಜನಸಂದಣಿ ಅಧಿಕವಾಗುತ್ತಿದ್ದುದರಿಂದ ಅವರು ತಮ್ಮ ಮೈಮೇಲೆ ಬಿದ್ದಾರೆಂದು ಯೇಸು, ತಮಗೆ ಒಂದು ದೋಣಿಯನ್ನು ಸಿದ್ಧವಾಗಿಡಲು ಶಿಷ್ಯರಿಗೆ ಹೇಳಿದರು.
10 : ಯೇಸು ಅನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಅವರನ್ನು ಮುಟ್ಟಬೇಕೆಂದು ಮುನ್ನುಗ್ಗಿ ಮೇಲೆ ಮೇಲೆ ಬೀಳುತ್ತಿದ್ದರು.
11 : ದೆವ್ವಗಳು ಸಹ ಅವರನ್ನು ಕಂಡಾಗಲೆಲ್ಲಾ ಅವರ ಪಾದಕ್ಕೆರಗಿ, “ನೀವು ದೇವರ ಪುತ್ರ,” ಎಂದು ಕಿರುಚುತ್ತಿದ್ದವು.
12 : ಆದರೆ ಯೇಸು, ತಾವು ಯಾರೆಂಬುದನ್ನು ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡುತ್ತಿದ್ದರು.
------------------------
ಚಿಂತನೆ
ದುರ್ಬುದ್ದಿಗಳನ್ನು ತಿದ್ದಲು ಯೇಸುವಿನ ಸಹಾಯ ಬೇಡೋಣ"

ಯೇಸು ಕೇಡುಗಳ ನಿವಾರಕ, ಪೀಡೆಗಳ ಪರಿಹಾರಕ. ಅವನನ್ನು ಮುಟ್ಟಿ ಪಾವನರಾಗಬೇಕೆಂದು ಜನಜಂಗುಳಿ ಒತ್ತರಿಸಿ ಬರುತ್ತಿತ್ತು. ಕೇಡುಗಳೆಂಬುದು ಹೊರಗಿನಿಂದ ಬರುವ ದುಷ್ಟಶಕ್ತಿಗಳಲ್ಲ, ವಿಕ್ಷಿಪ್ತ ಮನಸುಗಳಲ್ಲಿ ರೂಪುಗೊಳ್ಳುವ ಕೆಟ್ಟ ಆಲೋಚನೆಗಳು. ಅಂಥ ಕುಬುದ್ದಿ ಕುಯುಕ್ತಿ ಕೌಟಿಲ್ಯ ಅಸೂಯೆ ಮತ್ಸರಗಳೆಂಬ ಕಹಿಭಾವನೆಗಳು ಯೇಸುವೆಂಬ ನಾಮಸ್ಪರ್ಶದಿಂದ ತೊಳೆದುಹೋಗುತ್ತವೆ. ಸೌಲ ಮಹಾರಾಜನು ದಾವೀದನ ಮೇಲಿನ ಹೊಟ್ಟೆಕಿಚ್ಚಿನಿಂದ ಅವನನ್ನು ನಿವಾರಿಸಲು ಯತ್ನಿಸುತ್ತಾನೆ, ಆದರೆ ಅವನ ಮಗ ಜೋನಾತನ ಸೌಲನಿಗೆ ದಾವೀದನಿಂದಾದ ಒಳಿತುಗಳ ನೆನಪು ಮಾಡಿ ಮನಪರಿವರ್ತಿಸುತ್ತಾನೆ. ನಾವೂ ಸಹ ಸೌಲನ ಮಗ ಜೊನಾತನನಂತೆ ದುರ್ಬುದ್ದಿಗಳನ್ನು ತಿದ್ದಲು ಯೇಸುವಿನ ಸಹಾಯ ಪಡೆದು ಮುಂದುವರಿಯಲು ಇಂದಿನ ವಾಚನಗಳು ಪ್ರೇರೇಪಿಸುತ್ತವೆ.
-----------------
© 'ದನಿಮಾಧ್ಯಮ ಮನೆ
ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment