Monday, 20 January 2020

ಸಾಧಾರಣ ಕಾಲದ ಎರಡನೇ ವಾರ - ಬುಧವಾರ

ಸಾಧಾರಣ ಕಾಲದ ಎರಡನೇ ವಾರ - ಬುಧವಾರ
ಪವಿತ್ರಗ್ರಂಥ ವಾಚನ1 ಸಮುವೇಲ 17:32-333740-51
ಕೀರ್ತನೆ : 89:20, 21-22, 27-28
ಶುಭಸಂದೇಶಮಾರ್ಕ 3:1-6
----------------------
ಪವಿತ್ರಗ್ರಂಥ ವಾಚನ1 ಸಮುವೇಲ 17:32-333740-51
32 : ದಾವೀದನು ಸೌಲನಿಗೆ, “ಆ ಫಿಲಿಷ್ಟಿಯನ ನಿಮಿತ್ತ ಯಾರೂ ಎದೆಗೆಡಬೇಕಾಗಿಲ್ಲ. ತಮ್ಮ ಸೇವಕನಾದ ನಾನೇ ಹೋಗಿ ಅವನೊಡನೆ ಯುದ್ಧ ಮಾಡುತ್ತೇನೆ,” ಎಂದು ಹೇಳಿದನು.
33 : ಅದಕ್ಕೆ ಸೌಲನು, “ಅವನೊಡನೆ ಕಾದಾಡಲು ನಿನ್ನಿಂದ ಆಗದು; ನೀನು ಇನ್ನೂ ಹುಡುಗ. ಅವನಾದರೋ ಚಿಕ್ಕಂದಿನಿಂದಲೆ ಯುದ್ಧವೀರ,” ಎಂದು ಹೇಳಿದನು.
37 : ನನ್ನನ್ನು ಅಂಥ ಕರಡಿ-ಸಿಂಹಗಳ ಉಗುರುಗಳಿಂದ ತಪ್ಪಿಸಿದ ಸರ್ವೇಶ್ವರ ಈ ಫಿಲಿಷ್ಟಿಯನ ಕೈಯಿಂದಲೂ ತಪ್ಪಿಸುವರು,” ಎಂದು ಹೇಳಿದನು. ಅದಕ್ಕೆ ಸೌಲನು, “ಹೋಗು, ಸರ್ವೇಶ್ವರ ನಿನ್ನೊಂದಿಗೆ ಇರಲಿ!” ಎಂದನು.
38 : ಅದು ಮಾತ್ರವಲ್ಲ, ತನ್ನ ಯುದ್ಧವಸ್ತ್ರಗಳನ್ನೂ ಕವಚವನ್ನೂ ಅವನಿಗೆ ತೊಡಿಸಿದನು. ಅವನ ತಲೆಯ ಮೇಲೆ ಕಂಚಿನ ಶಿರಸ್ತ್ರಾಣವನ್ನೂ ಇಟ್ಟನು.
39 : ದಾವೀದನು ಯುದ್ಧವಸ್ತ್ರವನ್ನು ಧರಿಸಿಕೊಂಡು, ಅದರ ಮೇಲೆ ಕತ್ತಿಯನ್ನು ಬಿಗಿದುಕೊಂಡು, ನಡೆದು ನೋಡಲಾರಂಭಿಸಿದನು. ರೂಢಿಯಿಲ್ಲದ ಕಾರಣ ಅವನು ಸೌಲನಿಗೆ, “ನನಗೆ ಅಭ್ಯಾಸವಿಲ್ಲ. ಇವುಗಳನ್ನು ಧರಿಸಿಕೊಂಡು ನಡೆಯಲಾರೆ,” ಎಂದು ಹೇಳಿ ಅವುಗಳನ್ನು ತೆಗೆದಿಟ್ಟನು.
40 : ಕುರಿಕಾಯುವ ತನ್ನ ಕೋಲನ್ನೇ ತೆಗೆದುಕೊಂಡು ಹೊರಟನು. ಒಂದು ಹಳ್ಳಕ್ಕೆ ಹೋಗಿ ಐದು ನುಣುಪು ಕಲ್ಲುಗಳನ್ನು ಆರಿಸಿಕೊಂಡನು. ಕುರುಬರ ಪದ್ಧತಿಯಂತೆ ಅವುಗಳನ್ನು ತನ್ನ ಸೊಂಟಚೀಲದಲ್ಲಿ ಹಾಕಿಕೊಂಡನು. ಕೈಯಲ್ಲಿ ಕವಣೆಯನ್ನು ಹಿಡಿದು, ಆ ಫಿಲಿಷ್ಟಿಯನನ್ನು ಎದುರಿಸಲು ಹೋದನು.
41 : ಇತ್ತ ಫಿಲಿಷ್ಟಿಯನು ದಾವೀದನ ಕಡೆ ಧಾವಿಸಿ ಬಂದನು. ಗುರಾಣಿ ಹೊರುವವನು ಅವನ ಮುಂದೆ ಇದ್ದನು.
42 : ಫಿಲಿಷ್ಟಿಯನು ದಾವೀದನನ್ನು ಸವಿೂಪಿಸಿ ನೋಡಿದನು. ಕೆಂಬಣ್ಣದವನೂ ಸುಂದರನೂ ಆದ ಆ ಯುವಕನನ್ನು ದಿಟ್ಟಿಸಿ ತಾತ್ಸಾರದಿಂದ,
43 : “ನೀನು ಕೋಲುಹಿಡಿದು ನನ್ನ ಬಳಿಗೆ ಬರಲು ನಾನು ನಾಯಿಯೆಂದು ತಿಳಿದುಕೊಂಡೆಯಾ?” ಎಂದು ಹೇಳಿ ಅವನನ್ನು ತನ್ನ ದೇವರ ಹೆಸರಿನಲ್ಲಿ ಶಪಿಸಿದನು.
44 : “ಇಲ್ಲಿ ಬಾ; ನಿನ್ನ ಮಾಂಸವನ್ನು ಆಕಾಶದ ಪಕ್ಷಿಗಳಿಗೆ, ಕಾಡಿನ ಮೃಗಗಳಿಗೆ ಹಂಚಿಕೊಡುತ್ತೇನೆ,” ಎಂದನು.
45 : ಅದಕ್ಕೆ ದಾವೀದನು, “ನೀನು ಈಟಿ, ಕತ್ತಿ, ಭರ್ಜಿಗಳೊಡನೆ ನನ್ನ ಬಳಿಗೆ ಬರುತ್ತಿರುವೆ; ನೀನು ಹೀಯಾಳಿಸಿದ ಸೇನಾಧೀಶ್ವರರು ಹಾಗು ಇಸ್ರಯೇಲ್ ಯೋಧರ ದೇವರು ಆದಂಥ ಸರ್ವೇಶ್ವರನ ನಾಮದೊಡನೆ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ.
46 : ಅವರು ಈ ದಿನ ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವರು. ನಾನು ನಿನ್ನನ್ನು ಕೊಂದು, ನಿನ್ನ ತಲೆಯನ್ನು ಕಡಿದು, ಫಿಲಿಷ್ಟಿಯ ಸೈನ್ಯದ ಶವಗಳನ್ನು ಆಕಾಶದ ಪಕ್ಷಿಗಳಿಗೂ ವನ್ಯ ಮೃಗಗಳಿಗೂ ಹಂಚಿಕೊಡುವೆನು. ಇದರಿಂದ ಇಸ್ರಯೇಲರ ಸಂಗಡ ದೇವರಿದ್ದಾರೆಂಬುದು ಜಗತ್ತಿಗೆಲ್ಲಾ ತಿಳಿದುಬರುವುದು.
47 : ಈಟಿ, ಕತ್ತಿಗಳಿಲ್ಲದೆ ಸರ್ವೇಶ್ವರ ರಕ್ಷಿಸಬಲ್ಲನೆಂಬುದು ಇಲ್ಲಿ ಕೂಡಿರುವವರೆಲ್ಲರಿಗೆ ಗೊತ್ತಾಗುವುದು. ಏಕೆಂದರೆ ಸಮರದ ಪರಿಣಾಮ ಇರುವುದು ಸರ್ವೇಶ್ವರನ ಕೈಯಲ್ಲಿ; ಅವರು ತಪ್ಪದೆ ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವರು,” ಎಂದನು.
48 : ಕೂಡಲೆ ಆ ಫಿಲಿಷ್ಟಿಯನು ದಾವೀದನ ಮೇಲೆ ಎರಗಲು ಮತ್ತೆ ಧಾವಿಸಿದನು. ದಾವೀದನೂ ಫಿಲಿಷ್ಟಿಯರ ಸೈನ್ಯದ ಕಡೆಗೆ ನುಗ್ಗಿ ಆ ಫಿಲಿಷ್ಟಿಯನನ್ನು ಎದುರುಗೊಳ್ಳಲು ಓಡಿದನು.
49 : ಕೈಯನ್ನು ಚೀಲದಲ್ಲಿ ಹಾಕಿ, ಒಂದು ಕಲ್ಲನ್ನು ತೆಗೆದು, ಅವನ ಕಣ್ಣಿಗೆ ಗುರಿಯಿಟ್ಟು, ಕವಣೆಯನ್ನು ಬೀಸಿ ಹೊಡೆದನು. ಆ ಕಲ್ಲು ಅವನ ಹಣೆಯನ್ನು ಹೊಕ್ಕಿತು. ಅವನು ಮುಖಕೆಳಗಾಗಿ ನೆಲಕ್ಕೆ ಉರುಳಿದನು.
50 : ಕೂಡಲೆ ದಾವೀದನು ಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು, ಅವನ ಕತ್ತಿಯನ್ನೇ ಹಿರಿದು, ಅವನ ತಲೆಯನ್ನು ಕಡಿದು ಸಾಯಿಸಿದನು.
51 : ಹೀಗೆ ದಾವೀದನು ಕತ್ತಿಯಿಂದಲ್ಲ, ಬರೀ ಒಂದು ಕವಣೆಕಲ್ಲಿನಿಂದ ಆ ಫಿಲಿಷ್ಟಿಯನನ್ನು ಸೋಲಿಸಿ ಕೊಂದುಹಾಕಿದನು. ತಮ್ಮ ರಣವೀರನು ಸತ್ತು ಹೋದದ್ದನ್ನು ಕಂಡು ಫಿಲಿಷ್ಟಿಯರು ಓಡಿ ಹೋದರು.
-------------
ಕೀರ್ತನೆ : 144:1, 2, 9-10
ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯದುರ್ಗಕ್ಕೆ 
1 : ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯದುರ್ಗಕ್ಕೆ / ಕಲಿಸಿಹನು ಕದನ ಕೈಗೆ, ಕಾಳಗ ನನ್ನ ಬೆರಳಿಗೆ
2 : ಆತನೇ ನನಗೆ ಬಂಡೆ, ಕೋಟೆ, ದುರ್ಗ, ಉದ್ಧಾರಕ / ನನಗೆ ರಕ್ಷಾಕವಚ, ಆಶ್ರಯ, ಶತ್ರು ವಿಧ್ವಂಸಕ
9 : ಹಾಡುವೆ ದೇವಾ, ನಿನಗೆ ನೂತನ ಕೀರ್ತನೆಯನು / ಪಾಡುವೆ ನುಡಿಸುತ್ತಾ ದಶತಂತಿಯ ವೀಣೆಯನು
10 : ನೀನೇ ಅರಸುಗಳಿಗೆ ಜಯಪ್ರದನು / ದಾಸ ದಾವೀದನನು ಬಿಡಿಸಿದವನು
-----------------------
ಶುಭಸಂದೇಶಮಾರ್ಕ 3:1-6
1 : ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಪುನಃ ಹೋದರು. ಅಲ್ಲಿ ಒಬ್ಬ ಬತ್ತಿದ ಕೈಯುಳ್ಳವನು ಇದ್ದನು.
2 : ಅವನನ್ನು ಸಬ್ಬತ್‍ದಿನದಲ್ಲಿ ಗುಣಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪುಹೊರಿಸಬಹುದೆಂಬ ಉದ್ದೇಶದಿಂದ ಕೆಲವರು ಹೊಂಚುಹಾಕುತ್ತಿದ್ದರು.
3 : ಯೇಸು ಬತ್ತಿದ ಕೈಯುಳ್ಳವನಿಗೆ, “ಎದ್ದು ಮುಂದಕ್ಕೆ ಬಾ,” ಎಂದರು. ಬಳಿಕ ಅಲ್ಲಿದ್ದವರನ್ನು ಉದ್ದೇಶಿಸಿ,
4 : “ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ ಹೇಳಿ,” ಎಂದು ಕೇಳಲು ಅವರು ಮಾತೇ ಎತ್ತಲಿಲ್ಲ.
5 : ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ದಿಟ್ಟಿಸಿ, ಅವರ ಹೃದಯ ಕಲ್ಲಾಗಿರುವುದನ್ನು ಕಂಡು, ಮನನೊಂದು, ಬತ್ತಿದ ಕೈಯುಳ್ಳವನಿಗೆ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದನು, ಅದು ಸಂಪೂರ್ಣವಾಗಿ ಸ್ವಸ್ಥವಾಯಿತು.
6 : ಫರಿಸಾಯರು ಅಲ್ಲಿಂದ ಹೊರಗೆ ಹೋದರು. ಕೂಡಲೇ ಹೆರೋದಿಯರೊಡನೆ ಸೇರಿಕೊಂಡು ಯೇಸುವನ್ನು ಕೊಲೆಮಾಡಲು ಒಳಸಂಚು ಹೂಡಿದರು.
---------------------
ಚಿಂತನೆ
“ದೇವರ ಕಲ್ಪನೆಯಲ್ಲಿ ಮಾನವಧರ್ಮವೇ ಶ್ರೇಷ್ಠ"
 ಕುರಿಕಾಯುವ ಪುಟ್ಟ ಹುಡುಗ ನೀನು, ಗೊಲ್ಯಾತನೋ ರಣಭೂಮಿಯಲ್ಲೇ ಬೆಳೆದವನು, ಅವನೊಂದಿಗೆ ಕಾದಾಡಲಾರೆ? ಎಂದ ಸೌಲ. ಆದರೆ ಹೃದಯದಲ್ಲಿ ದೇವರನ್ನೇ ಧರಿಸಿದ್ದ ದಾವೀದ ತನ್ನ ಪುಟ್ಟ ಕರಗಳಿಂದ ದೈತ್ಯ ಗೊಲ್ಯಾತನನ್ನು ಇನ್ನಿಲ್ಲವೆನಿಸಿದ.
ಅಂದು ಸಬ್ಬತ್ ದಿನ. ಕೈಸೇದಿಕೊಂಡಿದ್ದವನೊಬ್ಬ ಪ್ರಾರ್ಥನಾಮಂದಿರಕ್ಕೆ ಬಂದಿದ್ದ. ಯೇಸು ಅವನನ್ನು ಗುಣಪಡಿಸಿದರೆ ಹಣಿದುಬಿಡೋಣವೆಂದು ಧರ್ಮಪಂಡಿತರು ಹೊಂಚಿದ್ದರು. ಯೇಸು ಜೀವವೊಂದು ಉಸಿರಿಗಾಗಿ ವಿಲವಿಲ ಒದ್ದಾಡುವಾಗ ಬದುಕಿಸಲು ಯತ್ನಿಸುತ್ತೀರೋ ಅಥವಾ ಸಬ್ಬತ್ ನೆಪವೊಡ್ಡಿ ಸಾಯಲೆಂದು ಬಿಟ್ಟುಬಿಡುತ್ತೀರೋ? ಎಂದು ಪ್ರಶ್ನಿಸುತ್ತಾರೆ. ದೇವರ ಕಲ್ಪನೆಯಲ್ಲಿ ಮಾನವಧರ್ಮವೇ ಶ್ರೇಷ್ಠ. ಅದನ್ನು ಎತ್ತಿಹಿಡಿಯಲು ರಾಜಮಹಾರಾಜರು, ಅತಿರಥ ಮಹಾರಥರು, ಧರ್ಮಪಂಡಿತರು ವಿಫಲರಾದಲ್ಲಿ ದೇವರು ಹುಲುಮಾನವನಿಂದ ಆ ಕೆಲಸ ಮಾಡಿಸುತ್ತಾರೆಂಬುದು ತಾತ್ಪರ್ಯ.
-----------
ಇಂದಿನ ಶುಭಸಂದೇಶ ಯೇಸುಸ್ವಾಮಿ ಸಬ್ಬತ್ತಿಗೂ ಒಡೆಯ ಎಂಬುದನ್ನು ನಿರೂಪಿಸುತ್ತದೆ. ಫರಿಸಾಯರ ಪ್ರಶ್ನೆಗೆ ಯೇಸು ಹಳೆಯ ಒಡಂಬಡಿಕೆಯ ಘಟನೆಯೊಂದರ ಉದಾಹರಣೆಯನ್ನು ನೀಡುತ್ತಾರೆ. ಯೇಸು ಇಲ್ಲಿ ೧ ಸಮುವೇಲ ೨೧:೨-೭ ವಾಕ್ಯಗಳನ್ನು ಅವರಿಗೆ ನೆನಪಿಸುತ್ತಾರೆ ಹಾಗೂ ``ಸಬ್ಬತ್ ದಿನ ಇರುವುದು ಮನುಷ್ಯನಿಗಾಗಿ ಹೊರತು ಮನುಷ್ಯ ಇರುವುದು ಸಬ್ಬತ್ತಿಗಾಗಿ ಅಲ್ಲ'' ಎಂದು ಸ್ಪಷ್ಟಪಡಿಸುತ್ತಾರೆ. ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳಿಗೆ ಕಾನೂನು, ಕಟ್ಟಳೆಗಳೇ ಮುಖ್ಯವಾಗಿದ್ದವು, ಆದರೆ ಆ ಕಾನೂನು, ಕಟ್ಟಳೆಗಳ ಒಳ ಅರ್ಥ, ಉದ್ದೇಶಗಳನ್ನು ಅವರು ಮರೆತ್ತಿದ್ದರು. ಯೇಸು ಅರ್ಥಶೂನ್ಯ ಕಾನೂನು, ಕಟ್ಟಳೆಗಳನ್ನು ಖಂಡಿಸಿದರು ಮತ್ತು ಧರ್ಮ, ಸಂಪ್ರದಾಯ, ಆಚಾರ ವಿಚಾರಗಳಿರುವುದು ಮಾನವನ ಏಳಿಗೆಗೆ ಮತ್ತು ಸನ್ಮಾರ್ಗಕ್ಕೆ ಎಂಬುದನ್ನು ಸಾರಿ ಹೇಳಿದರು. ಮಾನವೀಯತೆ, ಮನುಷ್ಯತ್ವ ವಿರೋದಿ ಆಚಾರವಿಚಾರ, ಸಂಪ್ರದಾಯ, ಕಟ್ಟಳೆಗಳನ್ನು ಮೀರಿ ಇಂದು ನಾವು ನಡೆಯಬೇಕಿದೆ.
--------------------

© 'ದನಿಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment