Monday, 27 January 2020

ಸಾಧಾರಣಾ ಕಾಲದ ಮೂರನೆಯ ಶುಕ್ರವಾರ

31 ಜನವರಿ 2020 / ಶುಕ್ರವಾರ
1ನೇ  ವಾಚನ  -  2 ಸಾಮುವೇಲ 11:1-4, 5-10, 13-17
ಕೀರ್ತನೆ  -  51:3-4, 5-6, 6-7, 10-11
ಶುಭಸಂದೇಶ: ಮಾರ್ಕ: 4:26-34
------------------------
1ನೇ  ವಾಚನ  -  2 ಸಾಮುವೇಲ 11:1-4, 5-10, 13-17
1 : ರಾಜರು ಸಾಮಾನ್ಯವಾಗಿ ಯುದ್ಧಕ್ಕೆ ಹೊರಡುವ ವಸಂತಕಾಲ ಅದು. ದಾವೀದನು ಯೋವಾಬನನ್ನು, ತನ್ನ ಸೇವಕರನ್ನು ಹಾಗು ಎಲ್ಲ ಇಸ್ರಯೇಲರನ್ನು ಯುದ್ಧಕ್ಕೆ ಕಳುಹಿಸಿದನು. ಇವರು ಹೋಗಿ ಅಮ್ಮೋನಿಯರ ಪ್ರಾಂತ್ಯಗಳನ್ನು ಹಾಳುಮಾಡಿ ರಬ್ಬಕ್ಕೆ ಮುತ್ತಿಗೆ ಹಾಕಿದರು. ದಾವೀದನು ಜೆರುಸಲೇಮಿನಲ್ಲೇ ಇದ್ದನು.
2 : ಒಂದು ದಿನ ಸಂಜೆ ಹೊತ್ತಿನಲ್ಲಿ ದಾವೀದನು ಮಂಚದಿಂದೆದ್ದು ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಆಗ ಅಲ್ಲಿಂದ ಬಹು ಸುಂದರಿಯಾದ ಒಬ್ಬ ಸ್ತ್ರೀ ಸ್ನಾನಮಾಡುವುದನ್ನು ಕಂಡನು.
3 : ಕೂಡಲೆ ದಾವೀದನು ಒಬ್ಬನನ್ನು ಕರೆದು ಆ ಸ್ತ್ರೀ ಯಾರೆಂದು ಕೇಳಿದನು. ಅವನು, “ಆಕೆ ಎಲೀಯಾಮನ ಮಗಳೂ ಹಿತ್ತಿಯನಾದ ಊರೀಯನ ಹೆಂಡತಿಯೂ ಆದ ಬತ್ಷೆಬೆ,” ಎಂದು ಉತ್ತರಕೊಟ್ಟನು.
4 : ಆಕೆ ಆಗ ತಾನೆ ಋತುಸ್ನಾನ ಮಾಡಿಕೊಂಡಿದ್ದಳು. ಆಕೆಯನ್ನು ಕರೆದುತರುವಂತೆ ದಾವೀದನು ದೂತರನ್ನು ಕಳುಹಿಸಿದನು. ಆಕೆ ಬಂದಳು. ದಾವೀದನು ಆಕೆಯನ್ನು ಕೂಡಿದನು. ಅನಂತರ ಆಕೆ ತನ್ನ ಮನೆಗೆ ಹೋದಳು.
5 : ಮುಂದೆ, ತಾನು ಗರ್ಭಧರಿಸಿದ್ದು ಗೊತ್ತಾದಾಗ ಆಕೆ ದಾವೀದನಿಗೆ ಸಮಾಚಾರ ಕಳುಹಿಸಿದಳು.
6 : ಒಡನೆ ದಾವೀದನು ದೂತರ ಮುಖಾಂತರ ಯೋವಾಬನಿಗೆ, “ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು,” ಎಂದು ಆಜ್ಞಾಪಿಸಿದನು. ಅವನು ಅಂತೆಯೇ ಮಾಡಿದನು.
7 : ಊರೀಯನು ಬಂದಾಗ ದಾವೀದನು, “ಯೋವಾಬನೂ ಸೈನ್ಯದವರೂ ಹೇಗಿರುತ್ತಾರೆ? ಯುದ್ಧವು ಹೇಗೆ ನಡೆಯುತ್ತಿದೆ?” ಎಂದು ವಿಚಾರಿಸಿದನು.
8 : ಅನಂತರ ಅವನಿಗೆ, “ನೀನು ಮನೆಗೆ ಹೋಗಿ ಕೈಕಾಲು ತೊಳೆದುಕೋ,” ಎಂದು ಹೇಳಿದನು. ಊರೀಯನು ಅರಮನೆಯಿಂದ ಹೊರಟಕೂಡಲೆ ಅವನ ಹಿಂದೆಯೇ ಅರಸನ ಭೋಜನ ಪದಾರ್ಥಗಳೂ ಹೋದವು.
9 : ಆದರೆ ಊರೀಯನು ತನ್ನ ಮನೆಗೆ ಹೋಗದೆ ಅರಸನ ಸೇವಕರೊಡನೆ ಅರಮನೆಯ ಬಾಗಿಲಲ್ಲೇ ಮಲಗಿಕೊಂಡನು.
10 : ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಆಗ ದಾವೀದನು ಊರೀಯನಿಗೆ, “ನೀನು ದೀರ್ಘಪ್ರಯಾಣಮಾಡಿ
13 : ಮರುದಿನ ದಾವೀದನು ಅವನನ್ನು ಅನ್ನಪಾನ ತೆಗೆದುಕೊಳ್ಳಬೇಕೆಂದು ತನ್ನ ಮನೆಗೆ ಕರೆದು ಕೊಂಡುಹೋಗಿ ಕುಡಿಸಿ ಮತ್ತನನ್ನಾಗಿ ಮಾಡಿದನು. ಆದರೆ ಆ ರಾತ್ರಿಯೂ ಅವನು ಹೋಗಿ ತನ್ನ ಯಜಮಾನನ ಸೇವಕರ ಹತ್ತಿರ ಹಾಸಿಗೆಹಾಸಿ ಮಲಗಿಕೊಂಡನೇ ಹೊರತು ತನ್ನ ಮನೆಗೆ ಹೋಗಲಿಲ್ಲ.
14 : ಮರುದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದು ಅದನ್ನು ಊರೀಯನ ಕೈಯಲ್ಲಿ ಕೊಟ್ಟುಕಳುಹಿಸಿದನು.
15 : ದರಲ್ಲಿ ಹೀಗೆ ಬರೆಯಲಾಗಿತ್ತು: “ಊರೀಯನು ಗಾಯಗೊಂಡು ಸಾಯುವಂತೆ ಅವನನ್ನು ಘೋರ ಯುದ್ಧ ನಡೆಯುತ್ತಿರುವ ಕಡೆ, ಮುಂಭಾಗದಲ್ಲೇ ನಿಲ್ಲಿಸಿ, ನೀವು ಹಿಂದಕ್ಕೆ ಸರಿದುಕೊಳ್ಳಿ.”
16 : ಯೋವಾಬನು ಪಟ್ಟಣಕ್ಕೆ ಮುತ್ತಿಗೆ ಹಾಕುವಾಗ ಶತ್ರುಸೈನಿಕರು ಎಲ್ಲಿ ಪ್ರಬಲರಾಗಿರುತ್ತಾರೆಂದು ಗೊತ್ತುಮಾಡಿಕೊಂಡು ಊರೀಯನನ್ನು ಅಲ್ಲಿಗೆ ಕಳುಹಿಸಿದನು.
17 : ಆ ಊರಿನ ಜನರು ಹೊರಗೆ ಬಂದು ಯೋವಾಬನ ಸೈನ್ಯದೊಡನೆ ಹೋರಾಡಿದರು. ದಾವೀದನ ಸೇವಕರಲ್ಲಿ ಕೆಲವರು ಸತ್ತರು; ಹಿತ್ತಿಯನಾದ ಊರೀಯನೂ ಮಡಿದನು.
------------------
ಕೀರ್ತನೆ  -  51:3-4, 5-6, 6-7, 10-11
 ಕೃಪಾಳು, ದೇವಾ, ಕರುಣಿಸೆನ್ನನು
3 : ಒಪ್ಪಿಕೊಂಡೆನಿದೋ, ನಾನೇ ಅಪರಾಧಿ / ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ //
4 : ಹೌದು ದೇವಾ, ನಿನಗೆ ದ್ರೋಹವೆಸಗಿದೆ / ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ // ನಿನ್ನ ನಿರ್ಣಯವು ನ್ಯಾಯಯುತ / ನೀ ನೀಡುವ ತೀರ್ಪು ನಿರ್ಲಿಪ್ತ //
5 : ನಾ ಜನಿಸಿದೆ ಪಾಪಪಂಕದಲೆ / ದ್ರೋಹಿ ನಾ ಮಾತೃಗರ್ಭದಿಂದಲೆ //
6 : ಅಂತರಂಗ ಶುದ್ಧಿಯನು ನೀ ಬಯಸುತಿ / ಅಂತರ್ಯ ಜ್ಞಾನವನು ಉದಯಗೊಳಿಸುತಿ //
7 : ಹಿಸ್ಸೋಪಿನಿಂದ ನೀ ಚಿಮುಕಿಸೆ, ನಾ ಶುದ್ಧನಾಗುವೆ / ನೀ ತೊಳೆದೆಯಾದರೆ, ಹಿಮಕ್ಕಿಂತ ನಾ ಬೆಳ್ಳಗಾಗುವೆ //
8 : ಹರ್ಷಾನಂದವನು ಮೊಳಗಿಸೆನ್ನೊಳು / ಪುಳಕಗೊಳ್ಳುವುವು ನೀ ಮುರಿದೆಲುಬುಗಳು //
10 : ಶುದ್ಧ ಹೃದಯವನು ದೇವಾ, ನಿರ್ಮಿಸು / ಅಂತರಂಗವನು ಚೇತನಗೊಳಿಸು //
11 : ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ / ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ //
--------------------
ಶುಭಸಂದೇಶ: ಮಾರ್ಕ: 4:26-34
26 : ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: “ದೇವರ ಸಾಮ್ರಾಜ್ಯವು ರೈತನೊಬ್ಬನು ತನ್ನ ಹೊಲದಲ್ಲಿ ಮಾಡಿದ ಬಿತ್ತನೆಗೆ ಹೋಲಿಕೆಯಾಗಿದೆ.
27 : ಬಿತ್ತನೆಯಾದ ಬಳಿಕ ಅವನು ರಾತ್ರಿಯಲ್ಲಿ ಮಲಗಿರಲಿ, ಹಗಲಲ್ಲಿ ಎದ್ದಿರಲಿ, ಅವನಿಗೆ ಹೇಗೆಂದು ತಿಳಿಯದೆಯೇ ಆ ಬೀಜವು ಮೊಳೆತು ಬೆಳೆಯುತ್ತಿರುತ್ತದೆ.
28 : ಭೂಮಿ ಮೊದಲು ಸಸಿಯನ್ನೂ ಅನಂತರ ಹೊಡೆಯನ್ನೂ ತರುವಾಯ ತೆನೆತುಂಬ ಕಾಳನ್ನೂ ತನ್ನಷ್ಟಕ್ಕೆ ತಾನೇ ಉತ್ಪತ್ತಿಮಾಡುತ್ತದೆ.
29 : ಬೆಳೆಯು ಮಾಗಿದಾಗ, ಸುಗ್ಗಿಯು ಬಂತೆಂದು ವ್ಯವಸಾಯಗಾರನು ಕುಡುಗೋಲನ್ನು ಬಳಸುತ್ತಾನೆ,” ಎಂದರು. ಸಾಸಿವೆ ಕಾಳಿನ ಸಾಮತಿ (ಮತ್ತಾ. 13.31-32; ಲೂಕ 13.18-19)
30 : ಯೇಸುಸ್ವಾಮಿ ತಮ್ಮ ಉಪದೇಶವನ್ನು ಮುಂದುವರಿಸಿ, “ದೇವರ ಸಾಮ್ರಾಜ್ಯವನ್ನು ಇನ್ನು ಯಾವುದಕ್ಕೆ ಹೋಲಿಸೋಣ? ಅದಕ್ಕಾಗಿ ಯಾವ ಸಾಮತಿಯನ್ನು ಉಪಯೋಗಿಸೋಣ?
31 : ಭೂಮಿಯಲ್ಲಿರುವ ಕಾಳುಗಳಲ್ಲಿ ಅತಿ ಚಿಕ್ಕದಾಗಿರುವ ಸಾಸಿವೆಕಾಳಿಗೂ ಅದನ್ನು ಹೋಲಿಸಬಹುದು.
32 : ಸಾಸಿವೆಕಾಳು ಚಿಕ್ಕದಾಗಿದ್ದರೂ ಬಿತ್ತನೆಯ ತರುವಾಯ ಮೊಳೆತು ಎಲ್ಲಾ ಕಾಯಿಪಲ್ಯದ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆಯುತ್ತದೆ. ಹಕ್ಕಿಗಳು ಕೂಡ ಬಂದು ಅದರ ನೆರಳಿನಲ್ಲಿ ಗೂಡುಕಟ್ಟಿ ವಾಸಿಸುವಷ್ಟು ದೊಡ್ಡದಾದ ರೆಂಬೆಗಳನ್ನು ಅದು ತಳೆಯುತ್ತದೆ,” ಎಂದರು. ಸಾಮತಿಗಳ ಪ್ರಯೋಗವೇಕೆ? (ಮತ್ತಾ. 13.34)
33 : ಯೇಸುಸ್ವಾಮಿ ಈ ಬಗೆಯ ಸಾಮತಿಗಳನ್ನು ಉಪಯೋಗಿಸಿ ಜನರಿಗೆ ದೇವರ ಸಂದೇಶವನ್ನು ಅವರವರ ತಿಳುವಳಿಕೆಗೆ ತಕ್ಕಂತೆ ಉಪದೇಶಿಸುತ್ತಿದ್ದರು. ಸಾಮತಿಗಳನ್ನು ಉಪಯೋಗಿಸದೆ ಅವರು ಬೋಧಿಸುತ್ತಿರಲಿಲ್ಲ.
34 : ಆದರೆ ತಮ್ಮ ಆಪ್ತ ಶಿಷ್ಯರೊಡನೆ ಪ್ರತ್ಯೇಕವಾಗಿದ್ದಾಗ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.
------------------------
ಚಿಂತನೆ
ದೇವರ ಸಾಮ್ರಾಜ್ಯ
ಯೇಸು ಸ್ವಾಮಿಯು ಸಾಮತಿಯ ಮೂಲಕ ಸ್ವರ್ಗ ಸಾಮ್ರಾಜ್ಯದ ಬಗ್ಗೆ ವಿವರಿಸುತ್ತಾರೆ. ಇಂದಿನ ಶುಭಸಂದೇಶದಲ್ಲಿ ಸ್ವರ್ಗ ಸಾಮ್ರಾಜ್ಯವನ್ನು ಸಾಸಿವೆ ಕಾಳಿಗೆ ಹೋಲಿಸುತ್ತಾರೆ. ಪ್ಯಾಲೆಸ್ಟಿನ್ ನಾಡಿನಲ್ಲಿ ಸಾಸಿವೆಗಿಡವು ಸುಮಾರು ಹತ್ತು ಮೀಟರ್ ಎತ್ತರವಾಗಿ ಬೆಳೆಯುತ್ತದೆ. ಹಾಗಾಗಿ ಚಿಕ್ಕ ಪಕ್ಷಿಗಳು ಅದರಲ್ಲಿ ವಾಸಿಸುತ್ತವೆ. `ಆಕಾಶದ ಹಕ್ಕಿಗಳು ಅದರಲ್ಲಿ ವಾಸಿಸುತ್ತವೆ' ಎಂಬ ವಚನವು ದಾನಿಯೇಲ್ ಪ್ರವಾದಿಯ 4:20-21 ಈ ವಚನಗಳನ್ನು ನೆನಪಿಸುತ್ತದೆ. ನೆಬೂಕದ್ನೆಚರನ ಸಾಮ್ರಾಜ್ಯವನ್ನು ಅತಿ ದೊಡ್ಡ ಮರಕ್ಕೂ ಮತ್ತು ಆತನಿಗೆ ಕಪ್ಪ ಕಾಣಿಕೆ ಅರ್ಪಿಸುತ್ತಿದ್ದ ರಾಜರುಗಳನ್ನು ಮರದಲ್ಲಿ ಗೂಡು ಕಟ್ಟಿ ವಾಸಮಾಡುತ್ತಿದ್ದ ಹಕ್ಕಿಗಳಿಗೂ ಹೋಲಿಸಲಾಗಿದೆ. ದೇವರ ಸಾಮ್ರಾಜ್ಯ ಕೇವಲ ಒಂದು ಜನಾಂಗಕ್ಕೆ - ಧರ್ಮಕ್ಕೆ ಸೀಮಿತವಾಗಿಲ್ಲ. ದೇವರ ಸಾಮ್ರಾಜ್ಯ ಮಾನವನ ಊಹೆಗಿಂತ, ಅನಿಸಿಕೆಗಿಂತ ಭಿನ್ನವಾದದ್ದು. ಹನ್ನೆರಡು ಶಿಷ್ಯರೊಂದಿಗೆ ಕ್ರಿಸ್ತ ಸ್ಥಾಪಿಸಿದ ಸಾಮ್ರಾಜ್ಯ ಇಂದು ಜಗತ್ತಿನಾದ್ಯಂತ ಹಬ್ಬಿಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
----------------
ಇಂದಿನ ಸಂತರು
ಸ೦ತ ಜಾನ್ ಬಾಸ್ಕೊ, ಯಾಜಕ (1815 -1888)

ಇವರನ್ನು ಗಿಯೊವಾನ್ನಿ ಮೆಲ್ಕಾಯರ್‌ ಬಾಸ್ಕೊ ಮತ್ತು ಡೋನ್‌ ಬಾಸ್ಕೊ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. 1815ರ ಆಗಸ್ಟ್‌ ೧೬ರಂದು ಇವರು ಇಟಲಿಯ ಬೆಕ್ಕಿ ಎಂಬಲ್ಲಿ ಜನನ ತಾಳುತ್ತಾರೆ. ಎರಡು ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಳ್ಳುವ ಇವರ ಮತ್ತು ಇವರಿಬ್ಬರ ಸಹೋದರರ ಪಾಲನೆ ಪೋಷಣೆಯ ಹೊಣೆಯು ಏಕಾಂಗಿ ತಾಯಿ 'ಮಾರ್ಗರಿತಾ ಒಕಿಯಾನ' ಮೇಲೆ ಬೀಳುತ್ತದೆ. ಕಡು ಬಡತನದಲ್ಲಿಯೂ ಇತರರಿಗೆ ಸಹಾಯ ಮಾಡುವಲ್ಲಿ ಮಾರ್ಗರಿತಾ ಹಿಂದೆ ಬೀಳುತ್ತಿರಲಿಲ್ಲ.

ಜಾನ್‌ಬಾಸ್ಕೊ ಬಾಲ್ಯದಿ೦ದಲೇ ಪ್ರಭು ಯೇಸುವಿನ ಹಾಗೂ ಮೇರಿಮಾತೆಯ ಪ್ರೇರಣೆಯಲ್ಲಿ ಬೆಳೆಯುತ್ತಾರೆ. ಸಣ್ಣ ಪ್ರಾಯದಲ್ಲೇ ಧರ್ಮನಿಷ್ಠೆಯನ್ನು ಬೆಳೆಸಿಕೊಂಡ ಇವರು ತನ್ನ ತಾಯಿಗೆ ಸಹಾಯಕರಾಗಿ ಕುರಿಸಾಕಣೆಗೆ ತಮ್ಮ ಕೈಯನ್ನೂ ಜೋಡಿಸುತ್ತಿದ್ದರು.  ಜಾನ್ ಬಾಸ್ಕೊ ಯಾವಾಗಲೂ ಯುವ ಪೀಳಿಗೆಯ ಪೋಷಣೆ ಹಾಗೂ ಆರೈಕೆಯ ಕನಸ್ಸು ಕಾಣುತ್ತಾ ಅವರನ್ನು ಸನ್ಮಾರ್ಗದಲ್ಲಿ ಬಾಳಲು ವಿಶೇಷ ತರಬೇತಿಯನ್ನು ನೀಡಲು ಬಯಸುತ್ತಿದ್ದರು. ದೇವರ ಪ್ರೀತಿ, ಕರುಣೆ ಹಾಗೂ ದೀನತೆಯಲ್ಲಿ ಯುವಜನರನ್ನು ಪ್ರೋತ್ಸಾಹಿಸಲು ಕ೦ಡ ಅವರ ಕನಸು ನನಸಾಗಿದ್ದು, ಅವರ ಯಾಜಕ ದೀಕ್ಷೆಯ ಬಳಿಕವೇ. ಯುವ ಪೀಳಿಗೆಯ ಸೇವೆಯನ್ನು ಟೂರಿನ್‌ನಲ್ಲಿ ಪ್ರಾರ೦ಭಿಸಿದ ಜಾನ್, ಯುವ ಜನರ ಆಸೆ ಆಕಾ೦ಕ್ಷೆ, ಆಟ-ನಾಟಕ, ಸ೦ಗೀತ, ಕತೆ, ಕವಿತೆ, ಪ್ರವಾಸ-ಮನೋರ೦ಜನೆಗಳ ಮೂಲಕ ಅವರನ್ನು ದೇವರ ಪ್ರೀತಿಯೆಡೆಗೆ ಸೆಳೆಯುತ್ತಿದ್ದರು. ಅದರ೦ತೆ ಯುವ ಜನರಿಗೆ ಸಾ೦ಧರ್ಭಿಕವಾಗಿ ಧರ್ಮೋಪದೇಶ, ಜಪಸರ, ಪ್ರಾರ್ಥನೆ, ದೈನ೦ದಿನದ ಶುಭಸ೦ದೇಶದ ಪದಗಳನ್ನು ತಪ್ಪದೆ ಮನವರಿಕೆ ಮಾಡಿಕೊಡುತ್ತಿದ್ದರು.
ಜಾನ್‌ರವರ ಈ ಸೇವೆಯ ಅನುಭವ ಪಡೆಯುತ್ತಿದ್ದ ಯುವ ಜನರು ದಿನದಿ೦ದ ದಿನಕ್ಕೆ ಹೆಚ್ಚಾಗುತ್ತಿದ್ದ೦ತೆ ಹಲವಾರು ಅಡ್ಡಿ ಆತ೦ಕಗಳು ಎದುರಾಗತೊಡಗಿದವು. ಅವರಿಗೆ ತಂಗಲು ವಾಸಸ್ಥಾನ ಮತ್ತುಊಟ-ಉಪಚಾರದ ಕೊರತೆ ಕಾಡತೊಡಗಿತು. 1845ರಲ್ಲಿ ಸುಮಾರು 800 ಯುವಜನರನ್ನು ಸಲಹುವ ದೊಡ್ಡ ಕಾರ್ಯವೇ ಅವರ ಮೇಲಿತ್ತು. ಕಾಲಕ್ರಮೇಣ ಹಲವರು ಇವರ ನೆರವಿಗೆ ಬರುತ್ತಾರೆ. ಅವರ ಸಹಾಯ ಹಸ್ತದಿಂದ ಒ೦ದು ಹಿರಿಯ ಶಾಲೆಯ ಸ್ಥಾಪನೆಗೆ ಇವರು ಮುಂದಾಗುತ್ತಾರೆ, ಸೆಲೆಷಿಯನ್ ಸ೦ಸ್ಥೆಯೆನ್ನುವ ಇದನ್ನು ಟೂರಿನ್‌ನಲ್ಲಿ ಸ್ಥಾಪಿಸಿ ಇದರ ಸಮಸ್ತ ಕಾರ್ಯಗಳನ್ನೂ “ಸಹಾಯಮಾತೆ” ಹಾಗೂ ಸ೦ತ ಫ್ರಾನ್ಸಿಸ್ ದೆ ಸೇಲಸ್‌ರವರ ಮೇಲೆ ಭರವಸೆ ಇರಿಸಿ ಅವರ ಹೊಣೆಗಾರಿಕೆಗೆ ಬಿಟ್ಟು ಇವರು ತಮ್ಮ ಸೇವಾಕಾರ್ಯದಲ್ಲಿ  ಮು೦ದುವರಿಯುತ್ತಾರೆ. ಯುವಜನರಿಗೆ ತ೦ಗಲು ತ೦ಗುದಾಣ, ವಸತಿ ಕೇಂದ್ರಗಳನ್ನು ತೆರೆಯುತ್ತಾರೆ, ಮಕ್ಕಳಿಗೆ ಓದು-ಬರಹ, ಧರ್ಮ, ಸಣ್ಣ-ಪುಟ್ಟ ವ್ಯಾಪಾರಗಳ ಬಗ್ಗೆಯೂ ತರಬೇತಿ, ತಯಾರಿ ಮಾಡುವುದರ ಮೂಲಕ ಒ೦ದು ಶಿಕ್ಷಣದ ನವೀನ ಶೈಲಿಯ ಯೋಜನೆಯನ್ನು ಹಾಕುವುದರ ಮೂಲಕ ಹೊಸ ರೂಪ ನೀಡುತ್ತಾರೆ. ಮಕ್ಕಳ ಎಲ್ಲಾ ಆಸೆ-ಅಭಿಲಾಷೆಗಳನ್ನು ಅರ್ಥೈಸಿಕೊ೦ಡು, ಅವರ ಹೃದಯವನ್ನು ಕ೦ಡು ಹಿಡಿಯುವ ಶಕ್ತಿ ಹೊಂದಿದ್ದ ಜಾನ್‌ ಬಾಸ್ಕೊರವರು ಪಾಪ ವಿಜ್ಞಾಪನೆ, ದೈನ೦ದಿನ ದಿವ್ಯ ಬಲಿಪೂಜೆ ಇತ್ಯಾದಿಗಳಿಂದೊಡಗೂಡಿದ ಮಕ್ಕಳ ಸರ್ವತೋಮಖ ಅಭಿವೃದ್ಧಿಯ ಕಡೆ ಯೋಜನೆಗಳನ್ನು ಹಾಕುತ್ತಾರೆ. ಎಲ್ಲಾ ಯುವ ಜನರು ಜಾನ್‌ರವರನ್ನು ಒಬ್ಬ ತ೦ದೆ-ಸ೦ತ- ಪವಿತ್ರ ಮನುಷ್ಯನೆ೦ದು ಪ್ರೀತಿಸುತ್ತಿದ್ದರು. ಕೊನೆಯದಾಗಿ, ಬಾಲಾಪರಾಧಿಗಳ ಸೇವೆ, ಕಾರಾಗೃಹದ ಭೇಟಿಯ ಮುಖಾ೦ತರ ಅವರ ಮನಃಪರಿವರ್ತನೆ, ಅವರ ಕಲ್ಯಾಣ, ಜೀವನೋದ್ಧಾರ ಎ೦ದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಹೆಣ್ಣು ಮಕ್ಕಳ ಆರೈಕೆಗಾಗಿ, ಸ೦ತ ಮೇರಿ ಮಜಲ್ಲೊರ ಸಹಕಾರದಿ೦ದ 1872ರಲ್ಲಿ ‘ಕ್ರೈಸ್ತ ಸಹಾಯಮಾತೆ ಪುತ್ರಿಯರು’ ಎ೦ಬ ಸಭೆಯನ್ನು ಇವರು ಸ್ಥಾಪಿಸುತ್ತಾರೆ.
ಹೀಗೆ ಯುವ ಜನಾಂಗಕ್ಕಾಗಿಯೂ ಮಕ್ಕಳಿಗಾಗಿಯೂ ನಿರಂತರ ದುಡಿದು ಹಣ್ಣಾದ ಇವರು ಜನವರಿ 31, 1888ರಲ್ಲಿ ನಿಧನರಾಗುತ್ತಾರೆ. ಏಪ್ರಿಲ್ 1, 1934ರಲ್ಲಿ 11 ನೇ ಭಕ್ತಿನಾಥರು ಇವರನ್ನು ಸ೦ತ ಪಟ್ಟಕ್ಕೇರಿಸುತ್ತಾರೆ. ಇವರು ಶಿಶಿಕ್ಷುಗಳ, ಪ್ರಕಾಶಕರ ಮತ್ತು ಸಂಪಾದಕರ, ಶಾಲಾಮಕ್ಕಳ ಹಾಗೂ ಜಾದೂಗಾರರ ಪಾಲಕ ಪೋಷಕರು. ಜನವರಿ ೩೧ರಂದು ಇವರ ಹಬ್ಬವನ್ನು ಆಚರಿಸಲಾಗುತ್ತದೆ.

ಚಿತ್ರ: ಗೂಗಲ್‌ ಕೃಪೆ
© 'ದನಿ' ಮಾಧ್ಯಮ ಮನೆ


No comments:

Post a Comment