Monday, 27 January 2020

ಸಾಧಾರಣಾ ಕಾಲದ ಮೂರನೆಯ ಬುಧವಾರ


29 ಜನವರಿ 2020 / ಬುಧವಾರ
1ನೇ  ವಾಚನ  -  2 ಸಾಮುವೇಲ 7: 4-17
ಕೀರ್ತನೆ  -  89:4-5,27-28,29-30
ಶುಭಸಂದೇಶ: ಮಾರ್ಕ: 4:1-20

--------------------------
1ನೇ  ವಾಚನ  -  2 ಸಾಮುವೇಲ 7: 4-17
4 : ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು:
5 : ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ?
6 : ನಾನು ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದಂದಿನಿಂದ ಇಂದಿನವರೆಗೆ ದೇವಾಲಯದಲ್ಲಿ ವಾಸಮಾಡಲಿಲ್ಲ; ಗುಡಾರದಲ್ಲೇ ವಾಸಿಸುತ್ತಾ ಅವರೊಡನೆ ಸಂಚರಿಸಿದೆ.
7 : ಹೀಗೆ ಇಸ್ರಯೇಲರ ಮಧ್ಯೆ ಸಂಚರಿಸುತ್ತಿದ್ದಾಗ ನನ್ನ ಜನರಾದ ಅವರನ್ನು ಪಾಲಿಸುವುದಕ್ಕೆ ಕುಲನಾಯಕನನ್ನು ನೇಮಿಸಿದೆ. ಅವರಾರಿಂದಲೂ ‘ನೀವೇಕೆ ನನಗೆ ದೇವದಾರು ಮರದಿಂದ ದೇವಾಲಯವನ್ನು ಕಟ್ಟಿಸಲಿಲ್ಲ?’ ಎಂದು ಕೇಳಿದ್ದಿಲ್ಲ!”
8 : “ಇದಲ್ಲದೆ, ನೀನು ನನ್ನ ದಾಸ ದಾವೀದನಿಗೆ ಹೇಳು, ಸರ್ವಶಕ್ತ ಸರ್ವೇಶ್ವರನಾದ ನಾನೇ ಹೀಗೆ ಹೇಳಿದೆಯೆಂದು ತಿಳಿಸು: ‘ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ.
9 : ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು
10 : ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ವಾಸಿಸುವರು.
11 : ಪೂರ್ವಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚಿಗೆ ಇಸ್ರಯೇಲರು ಶೋಷಣೆಗೆ ಗುರಿಯಾದರು. ಆದರೆ ಇನ್ನು ಮೇಲೆ ಆಗದು. ನೀನು ಶತ್ರುಭಯವಿಲ್ಲದೆ ಸುಖದಿಂದಿರುವಂತೆ ಮಾಡುವೆನು. ಅದು ಮಾತ್ರ ಅಲ್ಲ, ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತು ಕೊಡುತ್ತೇನೆ.
12 : ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು.
13 : ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು.
14 : ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು.
15 : ಆದರೆ ನನ್ನ ಕೃಪೆ, ನಿನ್ನ ಕಣ್ಮುಂದೆಯೇ ಸೌಲನನ್ನು ಬಿಟ್ಟು ಹೋದಹಾಗೆ, ಅವನನ್ನು ಬಿಟ್ಟು ಹೋಗುವುದಿಲ್ಲ.
16 : ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು.”
17 : ನಾತಾನನು ತನಗಾದ ದರ್ಶನದ ಈ ಮಾತುಗಳನ್ನೆಲ್ಲ ದಾವೀದನಿಗೆ ಹೇಳಿದನು.
-----------------------------------
ಕೀರ್ತನೆ  -  89:4-5,27-28,29-30
4 : “ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು / ಸ್ಥಿರಪಡಿಸುವೆ ಯುಗಯುಗಕು ನಿನ್ನ ಸಿಂಹಾಸನವನು”//
5 : ಪ್ರಸಿದ್ಧಪಡಿಸುವುದು ಪ್ರಭು, ಗಗನವು ನಿನ್ನ ಮಹತ್ತನು / ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು //
27 : ಮಾಡುವೆನವನನು ಜೇಷ್ಠ ಪುತ್ರನನ್ನಾಗಿ / ಭೂರಾಜರುಗಳೊಳು ಅತ್ಯುನ್ನತನನ್ನಾಗಿ //
28 : ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ / ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ //
29 : ಉಳಿಸುವೆನು ಅವನ ಸಂತಾನವನು ನಿರಂತರವಾಗಿ / ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ //
30 : ಅವನ ಕುವರರು ತೊರೆದರಾದರೆ ನನ್ನ ಧರ್ಮಶಾಸ್ತ್ರವನು / ಉಲ್ಲಂಘಿಸಿ ನಡೆದರಾದರೆ ನನ್ನ ಆಜ್ಞಾವಿಧಿಗಳನು //

-----------------------------------
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
 ಮಾರ್ಕ: 4:1-20

1 : ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ಮತ್ತೆ ಬೋಧಿಸಲಾರಂಭಿಸಿದರು. ಜನರು ಕಿಕ್ಕಿರಿದು ಸುತ್ತಲೂ ನೆರೆದುಬಂದಿದ್ದರು. ಆದುದರಿಂದ ಅವರು ಸರೋವರದಲ್ಲಿದ್ದ ದೋಣಿಯೊಂದನ್ನು ಹತ್ತಿ ಕುಳಿತರು.
2 : ಜನರು ದಡದಲ್ಲೇ ಉಳಿದರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಗಳ ಮೂಲಕ ಬೋಧಿಸುತ್ತಾ ಹೀಗೆಂದರು:
3 : “ಕೇಳಿ, ಒಬ್ಬ ರೈತ ಬಿತ್ತುವುದಕ್ಕೆ ಹೊರಟ.
4 : ಬಿತ್ತನೆಮಾಡುತ್ತಾ ಇದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದುದೇ ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು.
5 : ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲುನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ಬಹಳ ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು;
6 : ಬಿಸಿಲೇರಿದಾಗ ಬಾಡಿದವು; ಆಳವಾಗಿ ಬೇರೂರಲು ಆಗದ ಕಾರಣ ಅವು ಒಣಗಿಹೋದವು.
7 : ಇನ್ನು ಕೆಲವು ಬೀಜಗಳು ಮುಳ್ಳುಪೊದೆಗಳ ನಡುವೆ ಬಿದ್ದವು. ಮುಳ್ಳು ಪೊದೆಗಳು ಸಸ್ಯಗಳ ಸಮೇತ ಅವುಗಳನ್ನು ಅದುಮಿಬಿಟ್ಟವು. ಆದುದರಿಂದ ಅವು ಫಲ ಕೊಡಲಿಲ್ಲ.
8 : ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು ತೆನೆಬಿಟ್ಟವು. ಅವುಗಳಲ್ಲಿ ಕೆಲವು ಮೂವತ್ತರಷ್ಟು, ಕೆಲವು ಅರವತ್ತರಷ್ಟು ಮತ್ತೆ ಕೆಲವು ನೂರರಷ್ಟು ಫಸಲನ್ನು ಕೊಟ್ಟವು.”
9 : ಈ ಸಾಮತಿಯನ್ನು ಹೇಳಿದ ಬಳಿಕ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ,” ಎಂದರು. ಸಾಮತಿಗಳ ಉದ್ದಿಶ್ಯ (ಮತ್ತಾ. 13.10-17; ಲೂಕ 8.9-10)
10 : ಈ ಉಪದೇಶವನ್ನು ಕೇಳಿದವರಲ್ಲಿ ಕೆಲವರು, ಯೇಸುಸ್ವಾಮಿ ಒಬ್ಬರೇ ಇದ್ದಾಗ, ಹನ್ನೆರಡು ಮಂದಿ ಶಿಷ್ಯರೊಡನೆ ಬಂದು, ಅವರು ಹೇಳಿದ ಸಾಮತಿಗಳನ್ನು ವಿವರಿಸಬೇಕೆಂದು ಕೇಳಿಕೊಂಡರು.
11 : ಅದಕ್ಕೆ ಯೇಸು, “ದೇವರ ಸಾಮ್ರಾಜ್ಯದ ರಹಸ್ಯವನ್ನು ನಿಮಗೆ ತಿಳಿಸಲಾಗಿದೆ. ಮಿಕ್ಕವರಿಗಾದರೋ ಅದೆಲ್ಲವೂ ಸಾಮತಿಗಳ ರೂಪದಲ್ಲಿ ಮರೆಯಾಗಿದೆ. ಏಕೆಂದರೆ.
12 : ‘ಕಣ್ಣಾರೆ ನೋಡಿಯೂ ಅವರು ಕಾಣರು; ಕಿವಿಯಾರೆ ಕೇಳಿಯೂ ಅವರು ಗ್ರಹಿಸರು. ಕಂಡು ಗ್ರಹಿಸಿದರೆ ಅವರು ದೇವರತ್ತ ತಿರುಗಿಯಾರು; ಪಾಪಕ್ಷಮೆ ಹೊಂದಿಯಾರು’,” ಎಂದರು. ಬಿತ್ತುವವನ ಸಾಮತಿಯ ವಿವರಣೆ (ಮತ್ತಾ. 13.18-23; ಲೂಕ 8.11-15)
13 : ಅನಂತರ ಯೇಸುಸ್ವಾಮಿ ಅವರಿಗೆ, “ಈ ಸಾಮತಿಯನ್ನು ನೀವು ಅರ್ಥಮಾಡಿಕೊಳ್ಳಲಿಲ್ಲವೇ? ಹಾಗಾದರೆ ಬೇರೆಲ್ಲಾ ಸಾಮತಿಗಳನ್ನು ಹೇಗೆ ಅರ್ಥಮಾಡಿಕೊಳ್ಳುವಿರಿ?
14 : ಈ ಸಾಮತಿಯಲ್ಲಿ, ಬಿತ್ತುವವನು ‘ದೇವರ ಸಂದೇಶ’ ಎಂಬ ಬೀಜವನ್ನು ಬಿತ್ತುತ್ತಾನೆ.
15 : ಕೆಲವರು ದೇವರ ಸಂದೇಶವನ್ನು ಕೇಳುತ್ತಾರೆ; ಸೈತಾನನು ತಕ್ಷಣವೇ ಬಂದು ಆ ಸಂದೇಶವನ್ನು ತೆಗೆದು ಬಿಡುತ್ತಾನೆ. ಕಾಲ್ದಾರಿಯಲ್ಲಿ ಬಿದ್ದ ಬೀಜಕ್ಕೆ ಹೋಲಿಕೆಯಾಗಿರುವವರು ಇವರೇ.
16 : ಇನ್ನೂ ಕೆಲವರು ದೇವರ ಸಂದೇಶವನ್ನು ಕೇಳಿದ ಕೂಡಲೇ ಅದನ್ನು ಸಂತಸದಿಂದ ಸ್ವೀಕರಿಸುತ್ತಾರೆ. ಆದರೆ ಅವರಲ್ಲಿ ಅದು ಆಳವಾಗಿ ಬೇರೂರದ ಕಾರಣ ಕೊಂಚಕಾಲ ಮಾತ್ರ ಉಳಿಯುತ್ತದೆ.
17 : ದೇವರ ಸಂದೇಶದ ನಿಮಿತ್ತ ಕಷ್ಟಕೋಟಲೆಗಳು ಬಂದೊದಗಿದಾಗ ಕೂಡಲೇ ಎಡವಿ ಬೀಳುತ್ತಾರೆ. ಇವರೇ ಕಲ್ಲುನೆಲದ ಮೇಲೆ ಬಿದ್ದ ಬೀಜಕ್ಕೆ ಸಮಾನರಾದವರು.
18 : ಇನ್ನೂ ಕೆಲವರು ದೇವರ ಸಂದೇಶವನ್ನು ಕೇಳುತ್ತಾರೆ. ಆದರೆ ಅವರೊಳಗೆ ಇರುವ ಪ್ರಾಪಂಚಿಕ ಚಿಂತನೆಗಳೂ ಐಶ್ವರ್ಯದ ವ್ಯಾಮೋಹಗಳೂ ಇನ್ನಿತರ ಅಭಿಲಾಷೆಗಳೂ ದೇವರ ಸಂದೇಶವನ್ನು ಅದುಮಿ, ಅದು ಫಲಬಿಡದಂತೆ ಮಾಡುತ್ತವೆ.
19 : ಇವರೇ ಮುಳ್ಳುಪೊದೆಗಳ ನಡುವೆ ಬಿದ್ದ ಬೀಜಕ್ಕೆ ಅನುರೂಪ ಆದವರು.
20 : ಮತ್ತೆ ಕೆಲವರಾದರೋ ದೇವರ ಸಂದೇಶವನ್ನು ಕೇಳಿ ಅದನ್ನು ಸ್ವಾಗತಿಸುತ್ತಾರೆ. ಅಂಥವರಲ್ಲಿ ಕೆಲವರು ಮೂವತ್ತರಷ್ಟು, ಕೆಲವರು ಅರವತ್ತರಷ್ಟು, ಇನ್ನು ಕೆಲವರು ನೂರರಷ್ಟು ಫಲಕೊಡುತ್ತಾರೆ. ಇವರೇ ಹದವಾದ ಭೂಮಿಯಲ್ಲಿ ಬಿದ್ದ ಬೀಜಕ್ಕೆ ಸಮಾನರು,” ಎಂದರು.
-----------------------------------
ಚಿಂತನೆ
ನಿನ್ನ ವಾಕ್ಯವ ಆಲಿಸಿ ಪಾಲಿಸಿ, ನಿನ್ನ ದೈವೀ ಸಾಮ್ರಾಜ್ಯದ ಬನದಲ್ಲಿ ಹೆಮ್ಮರವಾಗಿ ಬೆಳೆಯಲು ವರವ ನೀಡು.
ಪ್ರೀತಿ, ಶಾಂತಿ, ನೀತಿ, ಐಕ್ಯತೆ, ಸಹೋದರತ್ವದ ದೈವೀ ಬೀಜಗಳನ್ನು ನೀ ಬಿತ್ತಿಹೋದೆ ಕ್ರಿಸ್ತ ನನ್ನ ಹೃದಯದಲ್ಲಿ.  ನೀರಿಲ್ಲದೆ ಬೀಜ ಮೊಳಕೆಯೊಡೆಯದೆಂದು ಹಪಹಪಿಸಿ ನಿನ್ನ ರಕ್ತವನ್ನೇ ಹನಿಹನಿಯಾಗಿ ಹರಿಯಬಿಟ್ಟೆ ಕಲ್ವಾರಿ ಗಿರಿಯಿಂದ. ಆದರೆ ನನ್ನ ಹೃದಯದಲ್ಲಿನ  ದ್ವೇಷ ಬಂಜೆಯಾಗಿಸಿತು ಫಲವತ್ತಾಗಿದ್ದ ಮಣ್ಣನ್ನು. ಯಾರಿಗೂ ಕಾಣದ ನನ್ನ ಕ್ರೌರ್ಯದ ಮಾಲಿನ್ಯ, ಪಾಪದ ವಿಷ, ಅನ್ಯಾಯದ ಉಸಿರುಗಟ್ಟುವ ದುರ್ನಾತ, ಅಸೂಯೆಯ ವಿಷದ ಅನಿಲ, ಅಪ್ರಮಾಣಿಕತೆ ಅನೀತಿ ಮೋಸದ ಕ್ರಿಮಿಕೀಟ ನೀ ಬಿತ್ತಿದ ಬೀಜವನ್ನೇ ಕಬಳಿಸಿತು. ಹೃದಯದ ಕಲ್ಲು ಮುಳ್ಳುಗಳ ಮಧ್ಯದಲ್ಲಿ, ಕಾಲ್ತುಳಿತಕ್ಕೆ ಸಿಲುಕಿ ಕೊಳೆತು ಸತ್ತೇಹೋಯಿತು ಎಂದು ಹತಾಶೆಯ ನಿದ್ರೆಗೆ ಜಾರಿದಾಗ, ನಿನ್ನ ಕರುಣೆಯ ಮಮತೆಯ ಪ್ರೀತಿಯ ಸಿಂಚನ ಹನಿಹನಿಯಾಗಿ ನನ್ನ ಹೃದಯದ ಕಲ್ಲು ಮುಳ್ಳುಗಳ ನಡೆವೆ ಹಾದು ಮತ್ತೆ ಅದನ್ನು ಫಲವತ್ತಾಗಿಸಿತು. ನನಗರಿವಿಲ್ಲದೆಯೇ ಸಮಾಧಿಯ ಒಳಗಿಂದ ಪ್ರೀತಿಯ ಮೊಳಕೆಯು ಚಿಗುರೊಡೆದು ನನ್ನ ಚೇತನವನ್ನು ಅನಿಕೇತನವಾಗಿಸಿತು. ಬದುಕಿದ್ದರೂ ಸತ್ತಂತಿದ್ದ ನಾನು ಸತ್ತರೂ ಬದುಕುವೆನೆಂಬ ವಿಶ್ವಾಸದ ಮೊಳಕೆ ಚಿಗುರೊಡೆದಿದೆ. ನಿನ್ನ ವಾಕ್ಯವ ಆಲಿಸಿ ಪಾಲಿಸಿ, ನಿನ್ನ ದೈವೀ ಸಾಮ್ರಾಜ್ಯದ ಬನದಲ್ಲಿ ಹೆಮ್ಮರವಾಗಿ ಬೆಳೆಯಲು ವರವ ನೀಡು.

-----------------------------------

ಬಿತ್ತನೆಯ ಬೀಜ

ಕೆಲವರು ದೇವರ ಸಂದೇಶವನ್ನು ಕೇಳುತ್ತಾರೆ, ಆದರೆ ಅವರೊಳಗೆ ಇರುವ ಪ್ರಾಪಂಚಿಕ ಚಿಂತನೆಗಳು, ಐಶ್ವರ್ಯದ ವ್ಯಾಮೋಹಗಳು, ಅಭಿಲಾಷೆಗಳು ದೇವರ ಸಂದೇಶವನ್ನು ಅದುಮಿ ಫಲ ಬಿಡದಂತೆ ಮಾಡಿ ಬಿಡುತ್ತದೆ. ಒಬ್ಬ ರೈತ ಬಿತ್ತನೆ ಮಾಡುವ ಮುನ್ನ ತನ್ನ ಭೂಮಿಯನ್ನು ಹದಗೊಳಿಸುತ್ತಾನೆ ಮತ್ತು ಅದು ಫಲವತ್ತಾಗಿ ಇರುವಂತೆ ನೋಡಿಕೊಳ್ಳುತ್ತಾನೆ. ಆಗ ಮಾತ್ರ ಆತ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು. ಇಲ್ಲದೆ ಹೋದಲ್ಲಿ ತಾನು ಬಿತ್ತುವ ಬೀಜ ನಿಷ್ಪ್ರಯೋಜಕವಾಗುತ್ತದೆ. ಅದೇ ರೀತಿ ದೇವರ ವಾಕ್ಯ ಮತ್ತು ಸಂಸ್ಕಾರಗಳು ನಮ್ಮಲ್ಲಿ ಫಲದಾಯಕವಾಗಬೇಕಾದರೆ ನಮ್ಮ ಹೃದಯ ಮತ್ತು ಮನಸ್ಸು ನಿರ್ಮಲವಾಗಿರುವಂತೆ ನಾವು ಕಾಪಾಡಿಕೊಳ್ಳಬೇಕು. ಪ್ರಪಂಚದ ಸುಖ ಭೋಗಗಳು ಕೇವಲ ಕ್ಷಣಿಕ ಎಂಬುದನ್ನು ಮನಗಂಡು ಆ ವ್ಯಾಮೋಹಗಳನ್ನು ತ್ಯಜಿಸಿದಾಗ ಮಾತ್ರವೇ ದೇವರ ವಾಕ್ಯ ನಮ್ಮಲ್ಲಿ ನೆಲೆ ನಿಂತು ಉತ್ತಮ ಫಲ ನೀಡುತ್ತದೆ.
© 'ದನಿ' ಮಾಧ್ಯಮ ಮನೆ

No comments:

Post a Comment