Monday, 20 January 2020

ಸಾಧಾರಣಾ ಕಾಲದ ಎರಡನೆಯ ಶನಿವಾರ

ಸಾಧಾರಣಾ ಕಾಲದ ಎರಡನೆಯ ಶನಿವಾರ
ಪವಿತ್ರಗ್ರಂಥ ವಾಚನ: ಪ್ರೇಷಿತರ ಕಾರ್ಯಕಲಾಪಗಳು : 9:1-22
ಕೀರ್ತನೆ 117:1-2
ಶುಭಸಂದೇಶ: ಮಾರ್ಕ 16:15-18
ಹಬ್ಬ: ಪ್ರೇಷಿತ ಸಂತ ಪೌಲನ ಮನಪರಿವರ್ತನೆ
-----------------
ಪವಿತ್ರಗ್ರಂಥ ವಾಚನ: ಪ್ರೇಷಿತರ ಕಾರ್ಯಕಲಾಪಗಳು : 9:1-22
1 : ಇತ್ತ ಸೌಲನು ಯೇಸುಸ್ವಾಮಿಯ ಅನುಯಾಯಿಗಳಿಗೆ ಬೆದರಿಕೆ ಹಾಕುತ್ತಾ ಅವರನ್ನು ಸಂಹರಿಸಬೇಕೆಂದಿದ್ದನು.
2 : ಈ ಹೊಸಮಾರ್ಗವನ್ನು ಅವಲಂಬಿಸುವವರು ಹೆಂಗಸರೇ ಆಗಿರಲಿ, ಗಂಡಸರೇ ಆಗಿರಲಿ, ದಮಸ್ಕಸಿನಲ್ಲಿದ್ದರೆ ಅವರನ್ನು ಬಂಧಿಸಿ ಜೆರುಸಲೇಮಿಗೆ ಎಳೆದು ತರಬೇಕೆಂದಿದ್ದನು. ಇದಕ್ಕೆ ಬೇಕಾದ ಪತ್ರಗಳನ್ನು ಕೇಳುವುದಕ್ಕಾಗಿ ಪ್ರಧಾನ ಯಾಜಕನ ಬಳಿಗೆ ಹೋದನು. ದಮಸ್ಕಸಿನಲ್ಲಿರುವ ಪ್ರಾರ್ಥನಾ ಮಂದಿರದ ಅಧಿಕಾರಿಗಳಿಗೆ ತೋರಿಸಲು ಆ ಪತ್ರಗಳನ್ನು ಪಡೆದನು.
3 : ಅವನು ಅಲ್ಲಿಂದ ಪ್ರಯಾಣ ಮಾಡುತ್ತಾ ದಮಸ್ಕಸ್ ಪಟ್ಟಣವನ್ನು ಸಮೀಪಿಸಿದನು. ಇದ್ದಕ್ಕಿದ್ದಂತೆ ಆಕಾಶದಿಂದ ಬೆಳಕೊಂದು ಮಿಂಚಿ ಅವನ ಸುತ್ತಲೂ ಆವರಿಸಿತು.
4 : ಅವನು ನೆಲಕ್ಕುರುಳಿದನು. “ಸೌಲನೇ, ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ?” ಎಂಬ ವಾಣಿ ಅವನಿಗೆ ಕೇಳಿಸಿತು.
5 : ಆಗ ಅವನು, “ಪ್ರಭೂ, ನೀವಾರು?” ಎಂದನು. “ನೀನು ಹಿಂಸೆಪಡಿಸುತ್ತ ಇರುವ ಯೇಸುವೇ ನಾನು.
6 : ನೀನೆದ್ದು ಪಟ್ಟಣಕ್ಕೆ ಹೋಗು, ಏನು ಮಾಡಬೇಕೆಂದು ನಿನಗೆ ಅಲ್ಲಿ ತಿಳಿಸಲಾಗುವುದು,” ಎಂದು ಆ ವಾಣಿ ಹೇಳಿತು.
7 : ಸೌಲನೊಡನೆ ಪ್ರಯಾಣ ಮಾಡುತ್ತಿದ್ದವರಿಗೆ ಆ ವಾಣಿ ಕೇಳಿಸಿತೇ ಹೊರತು, ಯಾರೂ ಕಾಣಿಸಲಿಲ್ಲ. ಅವರು ಸ್ತಬ್ದರಾದರು.
8 : ಸೌಲನು ಮೇಲಕ್ಕೆದ್ದು ಕಣ್ಣರಳಿಸಿ ನೋಡಿದರೂ ಅವನಿಗೇನೂ ಕಾಣಿಸಲಿಲ್ಲ. ಆದುದರಿಂದ ಸಂಗಡಿಗರು ಅವನ ಕೈಹಿಡಿದು ದಮಸ್ಕಸ್ ಪಟ್ಟಣಕ್ಕೆ ಕರೆದುಕೊಂಡು ಹೋದರು.
9 : ಮೂರು ದಿನಗಳವರೆಗೂ ಅವನಿಗೆ ಕಣ್ಣು ಕಾಣಿಸಲಿಲ್ಲ. ಅಲ್ಲದೆ ಅದುವರೆಗೂ ಅವನು ಅನ್ನಪಾನಗಳನ್ನು ಮುಟ್ಟಲಿಲ್ಲ.
10 : ದಮಸ್ಕಸಿನಲ್ಲಿ ಅನನೀಯ ಎಂಬ ಶಿಷ್ಯನಿದ್ದನು. ಪ್ರಭು ಅವನಿಗೆ ದರ್ಶನವಿತ್ತು, “ಅನನೀಯಾ” ಎಂದು ಕರೆಯಲು ಅವನು, “ಸ್ವಾವಿೂ, ಅಪ್ಪಣೆಯಾಗಲಿ,” ಎಂದನು.
11 : ಪ್ರಭು ಅವನಿಗೆ, “ನೀನೆದ್ದು ‘ನೇರಬೀದಿ’ ಎಂಬ ಹಾದಿಗೆ ಹೋಗು; ತಾರ್ಸದ ಸೌಲ ಎಂಬ ವ್ಯಕ್ತಿಗಾಗಿ ಯೂದನ ಮನೆಯಲ್ಲಿ ವಿಚಾರಿಸು. ಆ ಸೌಲನು ಪ್ರಾರ್ಥನೆಯಲ್ಲಿರುವುದನ್ನು ಕಾಣುವೆ.
12 : ಅಲ್ಲದೆ ಅನನೀಯ ಎಂಬವನು ತನ್ನ ಬಳಿಗೆ ಬಂದು ತಾನು ಮರಳಿ ದೃಷ್ಟಿಯನ್ನು ಪಡೆಯುವಂತೆ ತನ್ನ ಮೇಲೆ ಹಸ್ತನಿಕ್ಷೇಪ ಮಾಡುವುದನ್ನು ದರ್ಶನದಲ್ಲಿ ಕಂಡಿದ್ದಾನೆ,” ಎಂದರು.
13 : ಅನನೀಯ ಪ್ರತ್ಯುತ್ತರವಾಗಿ, “ಪ್ರಭೂ, ಈ ಮನುಷ್ಯ ಜೆರುಸಲೇಮಿನಲ್ಲಿ ತಮ್ಮ ಭಕ್ತರಿಗೆ ಎಷ್ಟು ಕೇಡು ಮಾಡಿದ್ದಾನೆಂಬುದ್ದನ್ನು ಅನೇಕರ ಬಾಯಿಂದ ಕೇಳಿದ್ದೇನೆ.
14 : ಅಷ್ಟು ಮಾತ್ರವಲ್ಲ, ತಮ್ಮ ನಾಮಸ್ಮರಣೆ ಮಾಡುವವರೆಲ್ಲರನ್ನು ಬಂಧಿಸಲು ಮುಖ್ಯಯಾಜಕರಿಂದ ಅಧಿಕಾರವನ್ನು ಪಡೆದು ಇಲ್ಲಿಗೆ ಬಂದಿದ್ದಾನೆ,” ಎಂದನು.
15 : ಪ್ರಭು ಅವನಿಗೆ, “ನೀನು ಹೋಗು, ನನ್ನ ನಾಮವನ್ನು ಅನ್ಯಧರ್ಮದವರಿಗೂ ಅರಸರಿಗೂ ಇಸ್ರಯೇಲಿನ ಜನರಿಗೂ ಪ್ರಕಟಿಸಲು ನಾನು ಆರಿಸಿಕೊಂಡಿರುವ ಸಾಧನ ಅವನು.
16 : ಅವನು ನನ್ನ ನಾಮದ ನಿಮಿತ್ತ ಎಷ್ಟು ಕಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕೆಂಬುದನ್ನು ನಾನೇ ಅವನಿಗೆ ತೋರಿಸುತ್ತೇನೆ,” ಎಂದರು.
17 : ಅಂತೆಯೇ ಅನನೀಯನು ಹೊರಟು ಆ ಮನೆಗೆ ಹೋದನು. ಸೌಲನ ಮೇಲೆ ಹಸ್ತನಿಕ್ಷೇಪಮಾಡಿ, “ಸಹೋದರ ಸೌಲನೇ, ಪ್ರಭು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ. ನೀನು ಬರುವಾಗ ದಾರಿಯಲ್ಲಿ ಕಾಣಿಸಿಕೊಂಡ ಯೇಸುಸ್ವಾಮಿಯೇ, ನೀನು ದೃಷ್ಟಿಯನ್ನು ಮರಳಿ ಪಡೆಯುವಂತೆಯೂ ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ಕಳುಹಿಸಿದ್ದಾರೆ,” ಎಂದನು.
18 : ಆ ಕ್ಷಣವೇ ಸೌಲನ ಕಣ್ಣುಗಳಿಂದ ಪರೆಯೊಂದು ಕಳಚಿಬಿದ್ದಿತು. ಅವನಿಗೆ ಪುನಃ ಕಣ್ಣು ಕಾಣತೊಡಗಿತು. ಎದ್ದು ದೀಕ್ಷಾಸ್ನಾನವನ್ನು ಪಡೆದನು.
19 : ತರುವಾಯ ಊಟಮಾಡಿದ ಮೇಲೆ ಅವನಿಗೆ ತ್ರಾಣ ಬಂದಿತು. ಸೌಲನು ಕೆಲವು ದಿನಗಳವರೆಗೆ ದಮಸ್ಕಸಿನಲ್ಲಿ ಭಕ್ತವಿಶ್ವಾಸಿಗಳೊಡನೆ ಇದ್ದನು.
20 : ಅನಂತರ ಸೌಲನು ತಡಮಾಡದೆ ಯೆಹೂದ್ಯರ ಪ್ರಾರ್ಥನಾಮಂದಿರಗಳಿಗೆ ಹೋಗಿ ಯೇಸುವೇ ‘ದೇವರ ಪುತ್ರ’ ಎಂದು ಬೋಧಿಸಲು ಆರಂಭಿಸಿದನು.
21 : ಅವನ ಬೋಧನೆಯನ್ನು ಕೇಳಿದವರೆಲ್ಲರೂ ಚಕಿತರಾದರು. “ಜೆರುಸಲೇಮಿನಲ್ಲಿ ಯೇಸುವಿನ ನಾಮಸ್ಮರಣೆ ಮಾಡುತ್ತಿದ್ದವರನ್ನು ಬಲಿಹಾಕುತ್ತಿದ್ದವನು ಇವನೇ ಅಲ್ಲವೇ? ಅಂಥವರನ್ನು ಬಂಧಿಸಿ ಮುಖ್ಯಯಾಜಕರ ಬಳಿಗೆ ಎಳೆದೊಯ್ಯುವ ಉದ್ದೇಶದಿಂದಲೇ ಅಲ್ಲವೆ ಇವನು ಇಲ್ಲಿಗೆ ಬಂದಿರುವುದು?” ಎಂದು ಪ್ರಶ್ನಿಸತೊಡಗಿದರು.
22 : ಸೌಲನಾದರೋ ಮತ್ತಷ್ಟು ಸಾಮಥ್ರ್ಯದಿಂದ ಪ್ರಭು ಯೇಸುವೇ ಲೋಕೋದ್ಧಾರಕನೆಂದು ರುಜುವಾತುಪಡಿಸಿ ದಮಸ್ಕಸಿನ ಯೆಹೂದ್ಯರ ಬಾಯಿಮುಚ್ಚಿಸಿದನು.
--------------
ಕೀರ್ತನೆ 117:1-2
ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪಬೋಧಿಸಿರಿ
1 : ಸ್ತುತಿ ಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೇ / ಆತನನು ಹೊಗಳಿ ಹಾಡಿ ಸರ್ವಜನಾಂಗಗಳೇ //
2 : ನಮ್ಮ ಮೇಲೆ ಆತನಿಗಿರುವ ಪ್ರೀತಿ ಅಚಲ / ಆತನ ಸತ್ಯಪರತೆ ಇರುವುದು ಅನಂತ ಕಾಲ //
---------------------
ಶುಭಸಂದೇಶ: ಮಾರ್ಕ 16:15-18
15 : ಬಳಿಕ ಅವರಿಗೆ, ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ.
16 : ವಿಶ್ವಾಸವಿಟ್ಟು ದೀಕ್ಷಾಸ್ನಾನ ಪಡೆಯುವವನು ಜೀವೋದ್ಧಾರ ಹೊಂದುವನು. ವಿಶ್ವಾಸಿಸದೆ ಇರುವವನು ಖಂಡನೆಗೆ ಗುರಿಯಾಗುವನು.
17 : ವಿಶ್ವಾಸಿಸುವುದರಿಂದ ಈ ಅದ್ಭುತ ಕಾರ್ಯಗಳು ಆಗುವುವು. ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಹೊಸ ಭಾಷೆಗಳಲ್ಲಿ ಮಾತಾಡುವರು;
18 : ಕೈಗಳಿಂದ ಸರ್ಪಗಳನ್ನು ಎತ್ತಿದರೂ ವಿಷ ಪದಾರ್ಥಗಳನ್ನೇನಾದರೂ ಕುಡಿದರೂ ಯಾವ ಹಾನಿಯೂ ಅವರಿಗಾಗದು. ಅವರು ರೋಗಿಗಳ ಮೇಲೆ ಕೈ ಇಟ್ಟರೆ ರೋಗಿಗಳು ಗುಣಹೊಂದುವರು,” ಎಂದರು. 
-------------------
ಪ್ರೇಷಿತ ಸಂತ ಪೌಲನ ಮನಪರಿವರ್ತನೆ
ಕ್ರೈಸ್ತ ಧರ್ಮ ಕಂಡ ಅತ್ಯಂತ ಶ್ರೇಷ್ಠ ಧರ್ಮ ಪ್ರಚಾರಕ, ಧಾರ್ಮಿಕ ಮೇಧಾವಿ ಎಂದರೆ ಅದು ಸಂತ ಪೌಲ. ಪೌಲನು ತನ್ನ ಮನಪರಿವರ್ತನೆಯ ಮೊದಲು ಕ್ರೈಸ್ತರನ್ನು ಹಿಂಸಿಸುತ್ತಿದ್ದ (ಪ್ರೇಷಿತರ ಕಾರ್ಯ ಕಲಾಪ 7:60). ಕ್ರೈಸ್ತರನ್ನು ಹಿಂಸಿಸಲು ಆತ ಡಮಸ್ಕೆಸಿಗೆ ಹೋಗುವ ಹಾದಿಯಲ್ಲಿ ಪುನರುತ್ಥಾನರಾದ ಕ್ರಿಸ್ತನ ಅನುಭವ ದರ್ಶನದಿಂದ ಸಂಪೂರ್ಣ ಹೊಸ ಮನುಷ್ಯನಾದ.
ಪೌಲನ ಮತ್ತೊಂದು ಹೆಸರು ಸೌಲ. ಪೌಲ ಎರಡು ಪೌರತ್ವ ಹೊಂದಿದ್ದ ಯೆಹೂದ್ಯ ಪೌರತ್ವ ಮತ್ತು ರೋಮಿನ ಪೌರತ್ವ ಹಾಗಾಗಿ ಅವನಿಗೆ ಎರಡು ಹೆಸರಿತ್ತು. ಸೌಲ ಎಂಬುದು ಆತನ ಯೆಹೂದಿ ಹೆಸರಾದರೆ ಪೌಲ ರೋಮಿನ ಹೆಸರಾಗಿತ್ತು. ಡಮಸ್ಕಸ್ಸಿನ ದಾರಿಯಲ್ಲಿ ಪೌಲನಿಗಾದ ಅನುಭವ ಇಂದು ನಮಗೂ ಆಗಬೇಕು. ಕ್ರೈಸ್ತರನ್ನು ಹಿಂಸಿಸುತ್ತಿದ್ದ ಪೌಲ ಪರಿವರ್ತನೆಯ ನಂತರ ಕ್ರಿಸ್ತನಿಗೆ ಸಾಕ್ಷಿಯಾಗಿ ಜೀವಿಸಿ, ರಕ್ತ ಸಾಕ್ಷಿಯಾದ.
------------------
© 'ದನಿಮಾಧ್ಯಮ ಮನೆ
ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment