Saturday, 25 January 2020

ಸಾಧಾರಣ ಕಾಲದ ಮೂರನೆಯ ಭಾನುವಾರ

26 ಜನವರಿ 2020
ಭಾನುವಾರ/ಹಸಿರು/ಸಾಧಾರಣ ಕಾಲದ ಮೂರನೆಯ ಭಾನುವಾರ   
1ನೇ  ವಾಚನ  -  ಯೆಶಾಯ  8:23-9:3    
ಕೀರ್ತನೆ  -  27:1, 4, 13-14        
2ನೇ ವಾಚನ - 1 ಕೊರಿಂಥ 1:10-13,17  
ಶುಭಸಂದೇಶ  -  ಮತ್ತಾಯ 4:12-13
--------------------------
1ನೇ  ವಾಚನ  -  ಯೆಶಾಯ  8:23-9:3  
1 : ಆದರೂ ಕಷ್ಟ ಸಂಕಷ್ಟಗಳನ್ನು ಅನುಭವಿಸಿದ ಆ ನಾಡಿಗೆ ಇನ್ನು ಮುಂದೆ ಕತ್ತಲಿರುವುದಿಲ್ಲ. ಒಮ್ಮೆ ಜೆಬುಲೋನ್ ಮತ್ತು ನಪ್ತಾಲಿಯ ಗೋತ್ರಗಳಿಗೆ ಬೀಡಾಗಿದ್ದ ಆ ಪ್ರಾಂತ್ಯವು ಅವಮಾನಕ್ಕೆ ಗುರಿಯಾಗಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಘನತೆಗೌರವ ಬರುವುದು: ಸಮುದ್ರದ ಹಾದಿಯಿಂದ ಹಿಡಿದು ಜೋರ್ಡನಿನ ಆಚೆಯಲ್ಲಿ ಇರುವ ಪ್ರಾಂತ್ಯದವರೆಗೆ ಮಾತ್ರವಲ್ಲ, ಅನ್ಯಜನರು ಇರುವ ಗಲಿಲೇಯ ಪ್ರಾಂತ್ಯದವರೆಗೂ ಘನತೆಗೌರವ ಬಂದೊದಗುವುದು.
2 : ಕಾಣಿಸಿತೊಂದು ಮಹಾಜ್ಯೋತಿ ಕತ್ತಲಲಿ ಸಂಚರಿಸುತ್ತಿದ್ದ ಜನರಿಗೆ ಪ್ರಜ್ವಲಿಸಿತಾ ಜ್ಯೋತಿ ಕಗ್ಗತ್ತಲಲಿ ಬಾಳುತ್ತಿದ್ದಾ ನಡಿಗರಿಗೆ.
3 : ವೃದ್ಧಿಗೊಳಿಸಿರುವೆ ನೀನು ಆ ದೇಶವನು ಅಧಿಕರಿಸಿರುವೆ ಅದರ ತೋಷವನು ಸುಗ್ಗಿಕಾಲದಲಿ ಹಿಗ್ಗುವವರಂತೆ ಕೊಳ್ಳೆ ಹಂಚಿಕೊಳ್ಳುವವರಂತೆ ಹರ್ಷಿಸುವರವರು ನಿನ್ನ ಮುಂದೆ.
22 : ಆಕಾಶವನ್ನು ದಿಟ್ಟಿಸಿ ನೋಡಿದರೂ ಭೂಮಿಯನ್ನು ದುರುಗುಟ್ಟಿ ನೋಡಿದರೂ ಅವರಿಗೆ ಕಾಣುವುದು ಕಷ್ಟ ಸಂಕಟಗಳ ಕತ್ತಲೆ, ಭಯಂಕರವಾದ ಕಾಳಗತ್ತಲೆಯಲ್ಲದೆ ಮತ್ತೇನೂ ಅಲ್ಲ. ಅಂಥ ಕರಾಳ ಕತ್ತಲೆಯೊಳಗೆ ಅವರನ್ನು ದೂಡಲಾಗುವುದು.
-----------------
ಕೀರ್ತನೆ  -  27:1, 4, 13-14        
1 : ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ / ನಾನಾರಿಗೂ ಅಳುಕೆನು // ನನ್ನ ಬಾಳಿಗಾಧಾರ ಪ್ರಭುವೆ / ನಾನಾರಿಗೂ ಅಂಜೆನು //
4 : ನಾನೊಂದನು ಕೋರಿದೆ ಪ್ರಭುವಿನಿಂದ / ನಾನದನ್ನೇ ನಿರೀಕ್ಷಿಸಿದೆ ಆತನಿಂದ : / ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ / ನಾ ತಲ್ಲೀನನಾಗಬೇಕು ಅಲ್ಲಾತನ- ಪ್ರಸನ್ನತೆಯಲಿ //
13 : ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು / ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು //
14 : ಪ್ರಭುವನು ಎದುರುನೋಡುತ್ತಿರು ಮನವೇ / ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ //
-----------
2ನೇ ವಾಚನ - 1 ಕೊರಿಂಥ 1:10-13,17
10 : ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ: ವಾದವಿವಾದವಿಲ್ಲದೆ, ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ.
11 : ಸಹೋದರರೇ, ನೀವು ಜಗಳವಾಡುತ್ತಿದ್ದೀರಿ ಎಂಬುದು ಖ್ಲೋಯೇಯನ ಮನೆಯವರಿಂದ ತಿಳಿದುಬಂದಿದೆ.
12 : ನಿಮ್ಮ ಪೈಕಿ, ತಾನು ಪೌಲನ ಕಡೆಯವನು ಎಂದು ಒಬ್ಬ, ತಾನು ಅಪೊಲೋಸನ ಕಡೆಯವನು ಎಂದು ಇನ್ನೊಬ್ಬ, ತಾನು ಕೇಫನ ಕಡೆಯವನು ಎಂದು ಮತ್ತೊಬ್ಬ, ತಾನು ಕ್ರಿಸ್ತನ ಕಡೆಯವನು ಎಂದು ಮಗದೊಬ್ಬ. ಹೀಗೆ ಒಬ್ಬೊಬ್ಬರು ಒಂದೊಂದು ತೆರನಾಗಿ ಹೇಳಿಕೊಳ್ಳುತ್ತಾರಂತೆ.
13 : ಕ್ರಿಸ್ತಯೇಸು ಭಾಗಭಾಗವಾಗಿ ವಿಂಗಡಿಸಿ ಹೋಗಿದ್ದಾರೆಯೇ? ನಿಮಗೋಸ್ಕರ ಶಿಲುಬೆಯ ಮೇಲೆ ಮಡಿದವನು ಪೌಲನೇ? ನೀವು ದೀಕ್ಷಾಸ್ನಾನ ಪಡೆದದ್ದು ಪೌಲನ ಹೆಸರಿನಲ್ಲೇ?
17 : ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ, ಶುಭಸಂದೇಶವನ್ನು ಸಾರುವುದಕ್ಕೆ. ಅದೂ ವಾಕ್‍ಚಾತುರ್ಯದಿಂದಲ್ಲ. ಹಾಗೆ ಸಾರಿದ್ದೇ ಆದರೆ, ಕ್ರಿಸ್ತಯೇಸುವಿನ ಶಿಲುಬೆಯೇ ನಿರರ್ಥಕವಾದೀತು.
-----------------
ಶುಭಸಂದೇಶ  -  ಮತ್ತಾಯ 4:12-13
12 : ಯೊವಾನ್ನನು ಬಂಧಿತನಾದನೆಂದು ಯೇಸುಸ್ವಾಮಿ ಕೇಳಿ, ಆ ಪ್ರಾಂತ್ಯವನ್ನು ಬಿಟ್ಟು ಗಲಿಲೇಯಕ್ಕೆ ಹೊರಟುಹೋದರು.
13 : ನಜರೇತ್ ಊರಿನಲ್ಲಿ ತಂಗದೆ ಗಲಿಲೇಯ ಸರೋವರದ ಸವಿೂಪದಲ್ಲಿರುವ ಕಫೆರ್ನವುಮ್ ಎಂಬ ಊರಿನಲ್ಲಿ ವಾಸಮಾಡಿದರು.
14 : ಇದು ಜೆಬುಲೋನ್ ಹಾಗೂ ನೆಫ್ತಲೀಮ್ ನಾಡುಗಳ ಸರಹದ್ದಿನಲ್ಲಿದೆ.
15 : ಹೀಗೆ: "ಜೆಬುಲೋನ್ ನಾಡೇ, ನೆಫ್ತಲೀಮ್ ನಾಡೇ, ಸರೋವರದ ಹತ್ತಿರವಿರುವ ಹಾದಿಬೀದಿಯೇ, ಜೋರ್ಡನಿನ ಹೊರವಲಯವೇ,
16 : ಕಾರ್ಗತ್ತಲಲ್ಲಿ ವಾಸಿಸುವವರಿಗೆ ದಿವ್ಯ ಜ್ಯೋತಿಯೊಂದು ಕಾಣಿಸಿತು. ಮರಣಛಾಯೆ ಕವಿದ ನಾಡಿಗರಿಗೆ ಅರುಣೋದಯವಾಯಿತು,"ಎಂದು ನುಡಿದ ಪ್ರವಾದಿ ಯೆಶಾಯನ ವಚನಗಳು ಈಡೇರಿದವು.
17 : ಅಂದಿನಿಂದ ಯೇಸು, "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯ ಸಮೀಪಿಸಿತು," ಎಂಬ ಸಂದೇಶವನ್ನು ಬೋಧಿಸತೊಡಗಿದರು.
18 : ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದರು. ಆಗ ಇಬ್ಬರು ಸಹೋದರರನ್ನು ಕಂಡರು. ಇವರೇ ‘ಪೇತ್ರ’ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು.
19 : "ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು," ಎಂದು ಹೇಳಿ ಯೇಸು ಅವರನ್ನು ಕರೆದರು.
20 : ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
21 : ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಎಂಬ ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಇವರನ್ನೂ ಕರೆದರು.
22 : ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
23 : ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಉಪದೇಶ ಮಾಡುತ್ತಿದ್ದರು. ದೈವರಾಜ್ಯದ ಸಂದೇಶವನ್ನು ಪ್ರಬೋಧಿಸುತ್ತಿದ್ದರು. ಜನರ ಎಲ್ಲಾ ತರಹದ ರೋಗರುಜಿನಗಳನ್ನೂ ಬೇನೆ ಬವಣೆಗಳನ್ನೂ ಗುಣಪಡಿಸುತ್ತಿದ್ದರು.
-------------------
ಚಿಂತನೆ
ಕಷ್ಟಸಂಕಷ್ಟಗಳನ್ನು ಅನುಭವಿಸಿದ ನಾಡಿಗೆ ಇನ್ನು ಮುಂದೆ ಕತ್ತಲಿರುವುದಿಲ್ಲ. ನಾಡಿಗೆ ಮಹಾಜ್ಯೋತಿ ಕಾಣಿಸಿಕೊಳ್ಳುವುದು ಎಂದು ಯೆಶಾಯ ಪ್ರವಾದಿ ಇಂದಿನ ಮೊದಲನೆಯ ವಾಚನದಲ್ಲಿ ತಿಳಿ ಹೇಳುತ್ತಾನೆ. ಪ್ರವಾದನೆಯು ಕ್ರಿಸ್ತನ ಮೂಲಕ ನೆರೆವೇರಿತ್ತು ಎಂದು ಮತ್ತಾಯ ತನ್ನ ಶುಭಸಂದೇಶದಲ್ಲಿ ತಿಳಿಸುತ್ತಾನೆ. ಎರಡನೆಯ ವಾಚನದಲ್ಲಿ ಸಂತ ಪೌಲನ್ನು ಕೊರಿಂಥಿಯರಲ್ಲಿದ್ದ ಗುಂಪುಗಾರಿಕೆಯನ್ನು ಖಂಡಿಸಿ “ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ: ವಾದವಿವಾದವಿಲ್ಲದೆ, ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ" ಎಂದು ಕೇಳಿಕೊಳ್ಳುತ್ತಾ, ಕ್ರಿಸ್ತನೇ ನಮ್ಮ ಮೂಲ, ನಾವೆಲ್ಲ ಕ್ರಿಸ್ತನಿಗೆ ಸೇರಿದವರು ಎಂದು ಸಾರುತ್ತಾನೆ.
ಕ್ರಿಸ್ತನ ದೇಹವಾದ ನಮ್ಮ ಧರ್ಮಸಭೆ ಇಂದು ಅನೇಕ ಪಂಗಡಗಳಾಗಿಬಿಟ್ಟಿವೆ. ನಮ್ಮಲ್ಲಿ ಐಕ್ಯತೆ ಎಂಬುವುದಿಲ್ಲ. ಆದ್ದರಿಂದ ನಾವು ಪಶ್ಚಾತ್ತಾಪ ಪಟ್ಟು, ನಮ್ಮ ಸೇವಾಕಾರ್ಯಗಳಿಂದ, ಬೋಧನೆಗಳಿಂದ ಈ ಲೋಕದಲ್ಲಿ ಕ್ರಿಸ್ತನ ಜ್ಯೋತಿಗಳಾಗಿ ಅಂದರೆ ಕ್ರಿಸ್ತನ ಶಿಷ್ಯರಾಗಿ ಐಕ್ಯತೆಯಿಂದ ಬಾಳಲು ಆ ದೇವರು ನಮಗೆ ದಯೆತೋರಲೆಂದು ಪ್ರಾರ್ಥಿಸೋಣ.
ಗಣರಾಜ್ಯೋತ್ಸವನ್ನು ಆಚರಿಸುತ್ತಿರುವ ನಾವು ನಮ್ಮ ಸಂವಿಧಾನದ ಪೀಠಿಕೆಯನ್ನು ಮೌನದಿಂದ ಓದುತ್ತಾ, ಧ್ಯಾನಿಸಿಸೋಣ

ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ (೧೯೭೬ರಲ್ಲಿ ಇಂದಿರಾಗಾಂಧಿಯವರಿಂದ ಸೇರಿಸಲ್ಪಟ್ಟದ್ದುಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಕೆಳಗಿನ ಹಕ್ಕುಗಳಾದ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;
ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;
ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ; ಗಳನ್ನು ದೊರಕಿಸಿ,
ವೈಯುಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪ್ರೋತ್ನಾಹಿಸಲು ನಿರ್ಧರಿಸಿ;
ನಮ್ಮ ಸಂವಿಧಾನ ರಚನಾಸಭೆಯಲ್ಲಿ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗೆ ವಿಧಿಸಿಕೊಳ್ಳುತ್ತೇವೆ.
ಪೀಠಿಕೆಯಲ್ಲಿರುವ ಕೆಲವು ವಾಕ್ಯಗಳು, ಭಾರತದ ಸಂವಿಧಾನವು ರಚಿತವಾಗಿರುವ ಕೆಲವು ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಸೂಚಿಗಳನ್ನು ಎತ್ತಿ ತೋರಿಸುತ್ತದೆ. ಈ ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ ಮತ್ತು ನ್ಯಾಯಾಧೀಶರು ಸಂವಿಧಾನವನ್ನು ಇದೇ ದಾರಿಯಲ್ಲಿ ವ್ಯಾಖ್ಯಾನಿಸಿ ಮುನ್ನಡೆಸುತ್ತಾರೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತಪಡಿಸಿರುವ ಹಾಗು ತಿದ್ದುಪಡಿ ಮಾಡಲು ಸಾದ್ಯವಿಲ್ಲದ ಆಶಯಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಪೀಠಿಕೆಯು ಸಂವಿಧಾನದ ಒಂದು ಭಾಗವಾದರೂ ಅದನ್ನು ಅಥವಾ ಅದರ ಯಾವುದೇ ಅಂಶವನ್ನು ಕಾನೂನಿಗನುಸಾರವಾಗಿ ಜಾರಿ(ಹೇರು) ಮಾಡುವಂತಿಲ್ಲ. 
ಪೀಠಿಕೆಯ ಮೊದಲ ಪದಗಳು - "ನಾವು, ಜನಗಳು " - ಭಾರತಲ್ಲಿ ಅಧಿಕಾರ ಜನಗಳ ಕೈನಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಪೀಠಿಕೆಯು, ಭಾರತದ ಪ್ರತಿಯೂಬ್ಬ ನಾಗರೀಕ ಹಾಗು ಸರ್ಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹು ಮುಖ್ಯ ರಾಷ್ಟ್ರೀಯ ಧ್ಯೇಯಗಳನ್ನು ಬಿಡಿಸಿ ಹೇಳುತ್ತದೆ. ಅವುಗಳೆಂದರೆ ಸಮಾಜವಾದ, ಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ. ಕೊನೆಯದಾಗಿ ಅದರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನಾಂಕ - ನವೆಂಬರ್ ೨೬ ೧೯೪೯ ಎಂದು ಹೇಳುತ್ತದೆ. 
ಸಂವಿಧಾನದ ಆಶಯಗಳಂತೆ ನಮ್ಮ ದೇಶವು ವಿಕಾಸಗೊಳ್ಳಲಿ ಎಂದು ನಮ್ಮ ದೇಶಕ್ಕಾಗಿ ಪ್ರಾರ್ಥಿಸೋಣ.

ಭಾರತದ ಗಣರಾಜ್ಯೋತ್ಸವ
ಇ೦ದು ನಾವು ನಮ್ಮ ದೇಶದ ಸಾರ್ವಭೌಮ ಗಣರಾಜ್ಯೋತ್ಸವವನ್ನು ಆಡ೦ಬರದಿ೦ದ ಆಚರಿಸುತ್ತೇವೆ. 26 ಜನವರಿ 1950 ರ ಸ್ಮರಣೆ, ನಮ್ಮ ದೇಶದ ಪ್ರಜೆಗಳ ಸ೦ವಿಧಾನದ ಮೂಲ ಹಕ್ಕು, ಕಾರ್ಯ-ಕರ್ತವ್ಯ, ನ್ಯಾಯ, ಸ್ವಾತ೦ತ್ರ್ಯ, ಸಮಾನತೆ, ಸಹೋದರತ್ವ ಮತ್ತು ಸಹಬಾಳ್ವೆಯ ಬುನಾದಿ. ಈ ದಿನಗಳಲ್ಲಿ ನಾವು ಸೌಹಾರ್ದತೆಯ ಸಪ್ತಾಹದ ನವದಿನಗಳಲ್ಲಿದ್ದೇವೆ. ಈ ಸ೦ಧರ್ಭದಲ್ಲಿ ನಮ್ಮ ಗಣರಾಜ್ಯೋತ್ಸವದ ಆಚರಣೆ ಆರ್ಥಗರ್ಭಿತವಾಗಿ, ದೇಶದ ಜನ-ಪ್ರಜೆಗಳ, ಸರ್ವ ಹಕ್ಕು-ಅಧಿಕಾರದೊ೦ದಿಗೆ ಕಾರ್ಯ-ಕರ್ತವ್ಯವನ್ನು, ನಮ್ಮ ಸ೦ವಿಧಾನ ಎತ್ತಿ ತೋರಿಸುವ ಹಬ್ಬವೂ ಹೌದು.
ಗಣರಾಜ್ಯೋತ್ಸವದ ಸ೦ಭ್ರಮದಲ್ಲಿ ನಮ್ಮೆಲ್ಲರ ವಿಭಿನ್ನತೆಯಲ್ಲಿ ಏಕತೆಯನ್ನು ದೇಶದ ಎಲ್ಲ ಪ್ರಜೆಗಳು ನಮ್ಮ ಸಾರ್ವಭೌಮತೆಯಲ್ಲಿ ವ್ಯಕ್ತಪಡಿಸುವ ದಿನ, ಈ ಪ್ರಪ೦ಚದ ಎಲ್ಲಾ ದೇಶಗಳ ಸ್ವತ೦ತ್ರ ಜೀವಿಗಳ೦ತೆ, ನಾವು ಸಹ ನಮ್ಮ ಪ್ರಜಾಪ್ರಭುತ್ವವನ್ನುಸಾರಿ ಹೇಳುವ ದಿನ. ಇದನ್ನು ನಮ್ಮ ಸ೦ವಿಧಾನ ನಮ್ಮ ಸುಭದ್ರತೆಯನ್ನು, ಜೀವನ ರಕ್ಷಣೆಯನ್ನು – ಗೊತ್ತುಪಡಿಸುವ ಸಾಧನವಾಗಿದೆ.
ಈ ನಿಟ್ಟಿನಲ್ಲಿ ಭಾರತದ ಪ್ರತಿಪ್ರಜೆಗಳಾದ ನಾವು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯಿ೦ದ ನಮ್ಮ ಸ೦ವಿಧಾನವನ್ನು ಗೌರವಿಸಿ, ಅದನ್ನು ಪ್ರಶ೦ಶಿಸುತ್ತಾ, ನಮ್ಮ ಸ೦ಸ್ಕ್ರತಿ, ಭಾಷೆ, ಆಚಾರ-ವಿಚಾರಗಳನ್ನು ಕಾಪಾಡಿ-ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಮ್ಮ ದೇಶದ ಎಲ್ಲಾ ಧರ್ಮ, ಭಾಷೆ, ಸ೦ಸ್ಕ್ರತಿ, ಸ೦ಪ್ರದಾಯಗಳೊ೦ದಿಗೆ ಎಲ್ಲಾ ಮೌಲ್ಯಗಳನ್ನು ಗೌರವಿಸುವ ದಿನ. ಇದರೊ೦ದಿಗೆ ನಮ್ಮೆಲ್ಲರ ಉದ್ದಾರ, ಬೆಳೆವಣೆಗೆ ಹಾಗೂ ಏಳ್ಗೆ ಯಿ೦ದ ನಮ್ಮ ದೇಶವನ್ನು ಕಟ್ಟಲು ಸಾಧ್ಯ. ಎಲ್ಲಾ ಅಡ್ಡಿ-ಆತ೦ಕಗಳನ್ನು ಧೈರ್ಯದಿ೦ದ ಜಯಿಸಿ ನಮ್ಮ ದೇಶವನ್ನು ಅಭಿವೃದ್ಧಿಯೆಡೆಗೆ ಕೊ೦ಡೊಯುವ ನೀತಿ-ರೀತಿಯನ್ನು, ಸತ್ಯ, ನ್ಯಾಯ-ನೀತಿಯಿ೦ದಲೇ ಶಾ೦ತಿಯನ್ನು ಸ್ಥಾಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಐಕ್ಯತೆ, ಒಗ್ಗಟ್ಟು ಬಹಳ ಪ್ರಮುಖವಾದುದು. ಒಗ್ಗಟ್ಟಿನಲ್ಲಿ ಬಲವಿದೆ ಎ೦ದು, ನಮ್ಮ ಸ್ವಾರ್ಥ ತೊರೆದು, ದೇಶಾಭಿವೃದ್ಧಿ, ಜನಾಭಿವೃದ್ಧಿ ಎ೦ದು ಎಲ್ಲರು ಒ೦ದೇ ಗುರಿ ಇಟ್ಟು, ಶ್ರಮಿಸುವ ಛಲ ನಮ್ಮದು ಎ೦ದು ಪಣತೊಡೋಣ. ನಾವೆಲ್ಲರೂ ಸ್ವಾರ್ಥತೆ ಬಿಟ್ಟು ಸ್ನೇಹದಿ೦ದ ದೇಶಕ್ಕಾಗಿ ದುಡಿಯುವ ಅಗತ್ಯತೆ ಇದೆ. ರಾಜಕೀಯ, ಸಾಮಾಜಿಕ, ಧಾರ್ಮಿಕ ದಬ್ಬಾಳಿಕೆ, ಶೋಷಣೆಯನ್ನು ಹೋಗಲಾಡಿಸಲು ಪಣತೊಡಬೇಕು. ಸತ್ಯ-ನ್ಯಾಯ-ನೀತಿ ಪರ ಸ೦ಘ-ಸ೦ಸ್ಥೆಗಳನ್ನು ಪೋಷಿಸಬೇಕು.
ನಮ್ಮ ಸ೦ವಿಧಾನವನ್ನು ಗೌರವಿಸಿ. ಪಾಲಿಸುವ ಮೇಧಾವಿಗಳನ್ನು ನಾವು ಬೆಳೆಸಬೇಕು. ಅವರ ಸಹಕಾರ, ಸಹಾಯ-ಸಲಹೆಯಲ್ಲಿ ನಮ್ಮ ಸಮಾಜ ರೂಪುಗೊಳ್ಳ ಬೇಕಾಗಿದೆ.

ಇಂದಿನ ಸಂತರು

ಸ೦ತ ತಿಮೊಥಿ-ಧರ್ಮಾಧ್ಯಕ್ಷರು(ಕ್ರಿಸ್ತಶಕ 17-87)

ಸ೦ತ ತಿಮೊಥಿ (17-97) ಸ೦ತ ಪೌಲನ ‘ವಿಶ್ವಾಸಿ ಆಪ್ತ ಪುತ್ರ’ (1 ತಿಮೊಥಿ 1:1). ತಿಮೊಥಿಯು ಅನಾತೊಲಿಯ(ಈಗಿನ ಟರ್ಕಿ)ದ ಲೈಸೇನಿಯ ಬಳಿಯ ಲೈಸ್ಟ್ರಾದಲ್ಲಿ ಗ್ರೀಕ್ ತ೦ದೆ ಹಾಗೂ ಯೆಹೂದ ತಾಯಿಗೆ ಜನಿಸುತ್ತಾರೆ. ಇವರ ತಂದೆಯ ಹೆಸರು ತಿಳಿದು ಬರುವುದಿಲ್ಲವಾದರು  ಕೆಲವು ಆಧಾರಗಳಿಂದ ಅವರ ತಾಯಿಯ ಹೆಸರು 'ಯುನಿಸ್‌' ಎಂಬುದು ತಿಳಿಯುತ್ತದೆ. ಕ್ರಿಸ್ತಶಕ 47ರಲ್ಲಿ ಸ೦ತ ಪೌಲನ ಪರಿಚಯವಾಗಿ ಆತನ ಸ೦ಗಡ ಧರ್ಮಪ್ರಸಾರ ಕಾರ್ಯದಲ್ಲಿ ತೊಡಗುತ್ತಾರೆ. ಇಬ್ಬರೂ ಕೂಡಿ ಕೊರಿ೦ಥ ಕ್ರೈಸ್ತ ಸಮುದಾಯವನ್ನು ಸ್ಥಾಪಿಸುತ್ತಾರೆ. ಅ೦ತೆಯೇ ಪೌಲ ತಿಮೊಥಿಯನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸುತ್ತಾನೆ. ತಿಮೊಥಿಗೆ ಪೌಲನು ಬರೆದ ಎರಡು ಪತ್ರಗಳು ಆತನ ಆಡಳಿತ, ಧರ್ಮಕಾರ್ಯವನ್ನು ಕುರಿತು ನೀಡಿದ ಸಲಹೆ, ಸೂಚನೆ ಹಾಗೂ ಪ್ರೋತ್ಸಾಹದೊ೦ದಿಗೆ ಪ್ರೇರಣೆ ಯನ್ನೂ ನೀಡುವಂತಹ ಪತ್ರಗಳಾಗಿದ್ದವು. ಪೌಲ ತನ್ನ ಪತ್ರಗಳನ್ನು ತಿಮೊಥಿಯ ಪ್ರೇರೆಪಣೆಗೆ ಮಾತ್ರವಲ್ಲದೆ, ಆತನ ಧರ್ಮಪ್ರಸಾರಕಾರ್ಯದಲ್ಲಿ ಮಾರ್ಗದರ್ಶನವನ್ನು ನೀಡುವುದಕ್ಕೂ  ಆತನ ವೈಯಕ್ತಿಕ ಜೀವನದ ಬಗ್ಗೆ ಸಲಹೆಗಳನ್ನು ನೀಡಿ ಆತನನ್ನು ಒಬ್ಬ ಆದರ್ಶ ಮಾದರಿ ಮೇಷಪಾಲಕನಾಗಿಸುವತ್ತಲೂ, ಕ್ರಿಸ್ತನ೦ತೆ ಜೀವಿಸಿ ತನ್ನ ಸೇವಾ ಜೀವನವನ್ನು ಮುನ್ನಡೆಸುವ ಸಲುವಾಗಿಯೂ ಬರೆದಿದ್ದನು. 
ತಿಮೊಥಿಯ ಜೀವನ ಈ ಪತ್ರಗಳಿ೦ದ ಪಾವಿತ್ರತೆಯಲ್ಲಿಯೂ, ಸ೦ತ ಪೌಲನು ನೀಡಿದ ಪ್ರೋತ್ಸಃದಿಂದ ಹುರುಪಿನಲ್ಲಿ ಧರ್ಮಪ್ರಸಾರಕಾರ್ಯದಲ್ಲಿ ಸೇವೆ ಸಲ್ಲಿಸಲು ಒತ್ತು ನೀಡುತ್ತಿದ್ದವು. ಸಾ೦ಪ್ರದಾಯಕವಾಗಿ ತಿಮೊಥಿಯು ಯೆಫೆಸದ ಪ್ರಥಮ ಧರ್ಮಾಧ್ಯಕ್ಷನಾಗಿ ಆರಿಸಲ್ಪಡುತ್ತಾನೆ. ತನ್ನ ಸ್ವಭಾವದಲ್ಲಿ – ಮ್ರದುವೂ, ಸಾಧುವೂ, ವಿನಯ ಶೀಲನೂ, ನಮ್ರನೂ. ಆಗಿದ್ದ ತಿಮೋಥಿಯು ತನ್ನ ತಾರುಣ್ಯದಲ್ಲೇ ಧರ್ಮಕಾರ್ಯದಲ್ಲಿ ನಿಸ್ವಾರ್ಥತೆಯಿಂದ ದುಡುದಿದ್ದಾನೆ. ಸ೦ತ ಜಾನ್ ದಮಾಸೀನ್ ತಿಳಿಸುವ೦ತೆ ತಿಮೊಥಿ ಎಫೆಸೆದ ಧರ್ಮಾಧ್ಯಕ್ಷನಾಗಿ ಮಾತೆ ಮರಿಯಮ್ಮನವರ ಸ್ವರ್ಗರೋಹಣಕ್ಕೆ ಸಾಕ್ಷಿಯಾಗಿದ್ದಾನೆ.
ಸ೦ತ ಯೋವಾನ್ನನು ತಿಮೊಥಿಯನ್ನು ಕುರಿತು, ‘ಯೆಫೆಸೆ ಧರ್ಮಸಭೆಯ ದೇವದೂತ’ ಎ೦ದು ವರ್ಣಿಸಿದ್ದಾನೆ. 
ತಿಮೋಥಿಯನ್ನು ಒಮ್ಮೆಯಾದರೂ ಬಂಧನದಲ್ಲಿ ಇರಿಸಿರುವ ಸಾಧ್ಯತೆಯಿದೆ. ಈ ಬಗ್ಗೆ ಹಿಬ್ರೀಯರಿಗೆ ಬರೆದ ಪತ್ರದ ಕೊನೆಯ ಸಾಲುಗಳು ತಿಳಿಸುತ್ತದೆ.
ತಿಮೊಥಿಯ ಅ೦ತ್ಯಕಾಲದ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ, ಕ್ರಿ.ಶ. ೯೭ರಲ್ಲಿ ಎಫೆಸದಲ್ಲಿ 'ಡಯಾನ' ಎಂಬ ಗ್ರೀಕ್‌ ದೇವತೆಯನ್ನು ಗೌರವಿಸಲು ನಡೆಸಿದ ಅನ್ಯಧರ್ಮೀಯರ ಮೆರವಣಿಗೆಯನ್ನು ತಡೆಯಲು ಯತ್ನಿಸಿದ ತಿಮೋಥಿಯನ್ನು ಅವರು ಕಲ್ಲೆಸೆದು ಕೊ೦ದರು ಎನ್ನಲಾಗುತ್ತಿದೆ.  ತಿಮೊಥಿಯ ಪಾರ್ಥಿವ ಶರೀರವನ್ನು ಇಟಲಿಯ 'ಟೆರ್ಮೊಲಿ ಕೆಥಡ್ರಲ್‌'ನಲ್ಲಿ ಇಡಲಾಗಿದೆ. 
ತಿಮೋಥಿಯು ಉದರ ಕಾಯಿಲೆಗಳನ್ನು ಗುಣಪಡಿಸುವ ಮಹಾಸ೦ತ.. 

ತೀತ ಧರ್ಮಾಧ್ಯಕ್ಷ- ಧರ್ಮಾಧ್ಯಕ್ಷರು(ಕ್ರಿಸ್ತಶಕ 2-96) 

ತೀತ, ಸ೦ತ ಪೌಲನ ಮತ್ತೊಬ್ಬ ಶಿಷ್ಯ (ತೀತ1:4), ಆತನ ಸ್ವ೦ತ ಸ್ಥಳ ಅ೦ತಿಯೊಕ್, ಈತ ಗ್ರೀಕನಾದರೂ ಪ್ರಭುವಿನ ಪರಮ ವಿಶ್ವಾಸಿ ಮತ್ತು ಭಕ್ತ. ಆತನ ಪ್ರೀತಿ ವಿಶ್ವಾಸಕ್ಕಾಗಿ, ಜೆರುಸಲೇಮಿಗೆ ಆಗಮಿಸಿ, ಪ್ರಭುವಿನ ಆಧ್ಭುತ ಕಾರ್ಯಗಳ ಕುರಿತಾದ ವರದಿಗಳನ್ನು ಸ೦ಗ್ರಹಿಸುವ ಕಾರ್ಯ ನಿರ್ವಹಿಸಿದ್ದವನು. ಜೆರುಸಲೇಮಿನಲ್ಲಿ 72 ಮಂದಿ ಪ್ರಭುವಿನ ಶಿಷ್ಯರಾಗುತ್ತಾರೆ. ಅವರಲ್ಲಿ ತೀತನೂ ಒಬ್ಬನಾಗಿರುತ್ತಾನೆ. ಸ೦ತ ಪೌಲನ ಧರ್ಮಪ್ರಸಾರ ಕಾರ್ಯದಲ್ಲಿ ತೀತ ಆತನ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾನೆ., ಕ್ರಿಸ್ತಶಕ 51ರಲ್ಲಿ ಜೆರುಸಲೇಮಿನಲ್ಲಿ ನಡೆದ ಶ್ರ೦ಗ ಸಭೆಯಲ್ಲಿ ತೀತನು ಪೌಲನೊ೦ದಿಗೆ, ಸಭೆಯಲ್ಲಿ ಸಕ್ರಿಯನಾಗಿ ಭಾಗವಹಿಸುತ್ತಾನೆ, ಮೋಶೆಯ ಕಟ್ಟಳೆಗಳ ಅನುಷ್ಠಾನಗೊಳಿಸುವ ಕಾರ್ಯದಲ್ಲಿ ಪೌಲನಿಗೆ ಸಹಾಯಕನಾಗಿದ್ದ, ತೀತ ತದನ೦ತರ ಕೋರಿ೦ಥದಲ್ಲಿ ಬಡಬಗ್ಗರ ಏಳಿಗೆಗಾಗಿ ಅವರ ಉದ್ಧಾರಕ್ಕಾಗಿ ಕೆಲಸ ಪ್ರಾರ೦ಭಿಸುತ್ತಾನೆ. 
ಕ್ರಿಸ್ತಶಕ 64ರಲ್ಲಿ ಸ೦ತಪೌಲ ತೀತನನ್ನು ಪ್ರಮುಖ ಧರ್ಮಪ್ರಚಾರಕ ಎ೦ದು ನೇಮಿಸಿ, ಕ್ರೇಟ್ ಮಹಾದ್ವೀಪಕ್ಕೆ ಕಳುಹಿಸುತ್ತಾನೆ. ಅ೦ತೆಯೇ ಸ೦ತ ಪೌಲನು ತೀತನನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಅಲ್ಲಿಯ ಕ್ರೈಸ್ತ ಧರ್ಮ ಸಮುದಾಯದ ಆಡಳಿತ, ಪಾಲಕರ, ನೀತಿ, ನಿಯಮ ಜೀವನದ ಶೈಲಿಯ ಬಗ್ಗೆ ಬರೆಯುತ್ತಾನೆ. ಕ್ರಿಸ್ತಶಕ 65ರಲ್ಲಿ ತೀತನನ್ನು ದಾಲ್ಮೇಶಿಯಕ್ಕೆ ಶುಭಸಂದೇಶವನ್ನು ಪ್ರಕಟಿಸಲು ಪೌಲ ನೇಮಿಸುತ್ತಾನೆ. 
ತನ್ನ 94 ನೇ ವರ್ಷದಲ್ಲಿ ಕ್ರೇಟ್‌ ದ್ವೀಪಕ್ಕೆ ಮತ್ತೆ ಆಗಮಿಸುವ ತೀತನು, ಅಲ್ಲಿಯೇ ಶಾ೦ತಮಯವಾಗಿ ತನ್ನ ಕೊನೆ ಉಸಿರನ್ನೆಳೆಯುತ್ತಾನೆ. ಆತನ ಪಾರ್ಥಿವ ಶರೀರವನ್ನು ಕ್ರೇಟ್‌ ದ್ವೀಪದ ಗೋರ್ತಿನ ಎಂಬ ಊರಿನ ಪ್ರಧಾನಾಲಯದಲ್ಲಿ ಭೂ ಸ್ಥಾಪನೆ ಮಾಡಲಾಗುತ್ತದೆ. 823ರಲ್ಲಿ ಅನ್ಯ ಮತದವರು ಆ ಮಹಾ ದೇವಾಲಯವನ್ನು ದ್ವ೦ಸ ಮಾಡುತ್ತಾರೆ. ಬಳಿಕ ತೀತರ ಪುಣ್ಯ ಶರೀರವನ್ನು ಅಲ್ಲಿ೦ದ ವೆನಿಸ್ಸಿನಲ್ಲಿರುವ ಸ೦ತ ಮಾರ್ಕನ ಬಸ್ಸಿಲಿಕಾಗೆ ವರ್ಗಾವಣೆ ಮಾಡಲಾಗುತ್ತದೆ. ಅಂದಿನಿಂದ ಇ೦ದಿನವರೆಗೂ ತೀತನ ಸ್ಮರಣೆ ಅಲ್ಲಿ ನಿರಂತರವಾಗಿ ನಡೆಯುವ ಸ೦ಪ್ರದಾಯವಿದೆ. 

ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ


ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ



No comments:

Post a Comment