Sunday, 16 February 2020

ಸಾಧಾರಣ ಕಾಲದ ಆರನೆಯ ಸೋಮವಾರ

ಫೆಬ್ರವರಿ 17, 2020/ ಸೋಮವಾರ
ಪವಿತ್ರ ವಾಚನ: ಯಕೋಬ 1: 1-11 
ಕೀರ್ತನೆ : 119:67,68,71,72,75,76
ಶುಭಸಂದೇಶ: ಮಾರ್ಕ 8 : 11-13 
ದೇವ ಮಾತೆಯ ಸೇವಾಸಭೆಯ ಸಪ್ತ ಸ್ಥಾಪಕರು (ಸನ್ಯಾಸಿಯರು)
--------------------------------
ಪವಿತ್ರ ವಾಚನ: ಯಕೋಬ 1: 1-11 
1 : ಜಗದಾದ್ಯಂತ ಚದರಿರುವ ಇಸ್ರಯೇಲಿನ ಹನ್ನೆರಡು ಕುಲದವರಿಗೆ - ದೇವರ ಹಾಗೂ ಪ್ರಭು ಯೇಸುಕ್ರಿಸ್ತರ ದಾಸನಾದ ಯಕೋಬನ ಶುಭಾಶಯಗಳು.
2 : ನನ್ನ ಪ್ರಿಯ ಸಹೋದರರೇ, ನಿಮಗೆ ವಿವಿಧ ಸಂಕಟ ಶೋಧನೆಗಳು ಬಂದೊದಗಿದಾಗ ಅವುಗಳನ್ನು ಸಂತೋಷದಿಂದ ಸಹಿಸಿಕೊಳ್ಳಿ.
3 : ಇವು ನಿಮ್ಮ ವಿಶ್ವಾಸವನ್ನು ಒರೆಗೆ ಹಚ್ಚಿ ನಿಮ್ಮನ್ನು ದೃಢಪಡಿಸುತ್ತೇವೆ; ನಿಮ್ಮನ್ನು ಸಹನಶೀಲರನ್ನಾಗಿ ಮಾಡುತ್ತವೆ.
4 : ಈ ಸಹನೆ ಸಿದ್ಧಿಗೆ ಬಂದಾಗ ನೀವು ಯಾವ ಕುಂದುಕೊರತೆ ಇಲ್ಲದೆ, ಪರಿಪೂರ್ಣರೂ ಸರ್ವಗುಣ ಸಂಪನ್ನರೂ ಆಗುತ್ತೀರಿ.
5 : ನಿಮ್ಮಲ್ಲಿ ಯಾರಿಗಾದರೂ ಜ್ಞಾನದ ಕೊರತೆಯಿದ್ದರೆ ಅಂಥವನು ದೇವರಲ್ಲಿ ಬೇಡಿಕೊಳ್ಳಲಿ. ಯಾರನ್ನೂ ತಿರಸ್ಕರಿಸದೆ ಎಲ್ಲರಿಗೂ ಯಥೇಚ್ಛವಾಗಿ ನೀಡುವ ದೇವರು, ಅವನಿಗೆ ಜ್ಞಾನವನ್ನು ದಯಪಾಲಿಸುತ್ತಾರೆ.
6 : ಆದರೆ ಬೇಡುವವನು ವಿಶ್ವಾಸದಿಂದ ಬೇಡಲಿ. ಸಂಶಯಕ್ಕೆ ಎಡೆಕೊಡದಿರಲಿ. ಸಂಶಯಕ್ಕೀಡಾಗುವವನ ಪರಿಸ್ಥಿತಿಯಾದರೋ ಬಿರುಗಾಳಿಯ ಬಡಿತಕ್ಕೆ ಸಿಕ್ಕಿದ ಸಮುದ್ರದ ಅಲೆಯಂತೆ ತುಯ್ದಾಡುತ್ತಿರುತ್ತದೆ.
7 : ಅಂಥವನು ಚಂಚಲಚಿತ್ತನು. ಆಚಾರವಿಚಾರಗಳಲ್ಲಿ ಅಸ್ಥಿರ ಮನಸ್ಸುಳ್ಳವನು.
8 : ಆದ್ದರಿಂದ ಅವನು ಪ್ರಭುವಿನಿಂದ ಏನನ್ನಾದರೂ ಪಡೆಯುತ್ತೇನೆಂದು ಭಾವಿಸದಿರಲಿ.
9 : ದೀನದಲಿತನಾದ ಸಹೋದರನು, ದೇವರು ತನ್ನನ್ನು ಉನ್ನತ ಸ್ಥಿತಿಗೆ ಏರಿಸಿದಾಗ ಅನಂದಿಸಲಿ.
10 : ಅಂತೆಯೇ ಧನಿಕನಾದ ಸಹೋದರನು, ದೇವರು ತನ್ನನ್ನು ದೀನಸ್ಥಿತಿಗೆ ಇಳಿಸಿದಾಗ ಆನಂದಿಸಲಿ.
11 : ಏಕೆಂದರೆ, ಧನಿಕರು ಹುಲ್ಲಿನ ಹೂವಿನಂತೆ ಗತಿಸಿ ಹೋಗುತ್ತಾರೆ. ಸೂರ್ಯನ ಸುಡು ಬಿಸಿಲಿಗೆ ಹುಲ್ಲು ಒಣಗಿಹೋಗುತ್ತದೆ, ಅದರ ಹೂವು ಉದುರಿ ಹೋಗುವುದು, ಅದರ ಅಂದ ಚೆಂದವೂ ಹಾಳಾಗಿ ಹೋಗುತ್ತದೆ. ಅಂತೆಯೇ ಧನಿಕನು ತನ್ನ ವ್ಯವಹಾರಗಳಲ್ಲಿಯೇ ಕುಂದಿ ಹೋಗುತ್ತಾನೆ.
--------------------------------
ಕೀರ್ತನೆ : 119:67,68,71,72,75,76
ನಾ ಬದುಕುವಂತೆ ತೋರೆನಗೆ ನಿನ್ನ ದಯ
67 : ಕಷ್ಟಾನುಭವಕೆ ಮುಂಚೆ ದಾರಿತಪ್ಪಿ ನಡೆದೆ / ಆದರೀಗ ನಡೆಯುತ್ತಿರುವೆ ನಿನ್ನ ನುಡಿಯಂತೆ /
68 : ಒಳ್ಳೆಯವ, ಒಳ್ಳೆಯದ ಗೈಕೊಳ್ಳುವ ನೀನು | ಬೋಧಿಸೆನಗೆ ನಿನ್ನಾ ನಿಬಂಧನೆಗಳನು ||
71 : ಕಷ್ಟಾನುಭವವೂ ಆಯಿತೆನಗೆ ಹಿತಕರ / ಅದು ತಂದಿತು ನಿನ್ನ ನಿಬಂಧನೆಗಳೆಚ್ಚರ
72 : ಸಾವಿರಾರು ಚಿನ್ನಬೆಳ್ಳಿ ನಾಣ್ಯಗಳಿಗಿಂತ / ನಿನ್ನ ಬಾಯಿಂದ ಬಂದ ಧರ್ಮಶಾಸ್ತ್ರ ಉಚಿತ //
75 : ನಾ ಬಲ್ಲೆ ಪ್ರಭು, ನಿನ್ನ ವಿಧಿಗಳು ನೀತಿಯುತವೆಂದು / ಕಷ್ಟಕೆ ನನ್ನನು ಗುರಿಪಡಿಸಿರುವುದು ಉಚಿತವೆಂದು
76 : ನಿನ್ನ ದಾಸನಿಗೆ ನೀನು ನುಡಿದ ಪ್ರಕಾರ / ಸಾಂತ್ವನ ನೀಡಲಿ ಎನಗೆ ನಿನ್ನಚಲ ಒಲವರ
------------------------------
ಶುಭಸಂದೇಶ: ಮಾರ್ಕ 8 : 11-13 
11 : ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, ಅವರೊಡನೆ ತರ್ಕಮಾಡಿ, ಅವರನ್ನು ಪರೀಕ್ಷಿಸುವ ಉದ್ದೇಶದಿಂದ: “ನೀನು ದೇವರಿಂದ ಬಂದವನೆಂಬುದನ್ನು ಸೂಚಿಸಲು ಒಂದು ಅದ್ಭುತವನ್ನು ಮಾಡಿತೋರಿಸು,” ಎಂದು ಕೇಳಿದರು.
12 : ಇದನ್ನು ಕೇಳಿ ಯೇಸು, ಮನಸ್ಸಿನಲ್ಲೇ ನೊಂದುಕೊಂಡು, ನಿಟ್ಟುಸಿರಿಟ್ಟು, “ಈ ಪೀಳಿಗೆ ಅದ್ಭುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ? ಇದಕ್ಕೆ ಅಂಥ ಯಾವ ಸಂಕೇತವನ್ನು ಕೊಡಲಾಗದು, ಇದು ಖಂಡಿತ,” ಎಂದರು.
13 : ಅನಂತರ ಯೇಸು ಅವರನ್ನು ಬಿಟ್ಟು, ದೋಣಿಯನ್ನು ಹತ್ತಿ ಸರೋವರದ ಆಚೆದಡಕ್ಕೆ ಹೊರಟುಹೋದರು.
------------------------
ಚಿಂತನೆ
`ವಿಶ್ವಾಸ ಆತ್ಮದ ಶ್ವಾಸ’ ಎನ್ನುವಂತೆ ಜ್ಞಾನಕ್ಕಿಂತ ವಿಶ್ವಾಸವೇ ಶ್ರೇಷ್ಠ ಎಂಬುದನ್ನು ಇಂದಿನ ವಾಚನಗಳು ನಮಗೆ ತಿಳಿಯಪಡಿಸುತ್ತವೆ. ಯಾವುದೇ ಕಾರ್ಯವನ್ನು ಕೈಗೊಂಡಾಗ ಆ ಕಾರ್ಯಕ್ಕೆ ದೇವರ ಕೃಪಾಶೀರ್ವಾದವು ಅತಿ ಮುಖ್ಯವಾಗಿರುತ್ತದೆ. ಕೊರತೆಗಳು ಅನೇಕವಿರಬಹುದು. ಅವುಗಳನ್ನು ನಿವಾರಿಸಿಕೊಳ್ಳಲು ವಿಶ್ವಾಸದಿಂದ ಪ್ರಾರ್ಥಿಸಬೇಕು. ಬೇಡಿಕೆಗಳು ನ್ಯಾಯಯುತವಾಗಿರಬೇಕು. ಬೇಡುವಾಗ ಆಳವಾದ ವಿಶ್ವಾಸವಿರಬೇಕು. ಸಂಶಯದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಬದಲಾಗಿ ಇದ್ದುದನ್ನು ಕಳೆದುಕೊಳ್ಳಬೇಕಾಗುತ್ತದೆ. ಶುಭಸಂದೇಶದಲ್ಲಿ ಫರಿಸಾಯರು ಪವಾಡಗಳನ್ನು ಕೋರಿದರು. ಆದರೆ ಅವರಲ್ಲಿ ವಿಶ್ವಾಸದ ಬದಲು ಪರೀಕ್ಷಿಸುವ ಬಯಕೆ ಮಾತ್ರ ಇತ್ತು. ಅದಕ್ಕಾಗಿ ಯೇಸು ಮನನೊಂದು ಆ ಸ್ಥಳದಿಂದ ಹೋಗಿ ಬಿಡುತ್ತಾರೆ. ನಾವು ಸಹ ಕೆಲವೊಮ್ಮೆ ಈ ಫರಿಸಾಯರ ವರ್ಗಕ್ಕೆ ಸೇರಿದವರಾಗಿರುತ್ತೇವೆ. ಆಲೋಚಿಸಿ ನೋಡೋಣ.
----------------------------
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment