Sunday, 2 February 2020

ಸಾಧಾರಣ ಕಾಲದ ನಾಲ್ಕನೆಯ ಮಂಗಳವಾರ

04 ಫೆಬ್ರವರಿ  2020
ಮಂಗಳವಾರ /ಹಸಿರು/ಸಾಧಾರಣ ಕಾಲದ ನಾಲ್ಕನೆಯ ಮಂಗಳವಾರ 
ಹಬ್ಬ -  ಸಂತ ಜಾನ್ ದಿ ಬ್ರಿಟ್ಟೊ ಯಾ ಮತ್ತು ರ.ಸಾ (ಸ್ಮರಣೆ) 
1ನೇ  ವಾಚನ  -  ೨ ಸಮುವೇಲ 18:9-10, 14, 24-25, 30-19:3 
ಕೀರ್ತನೆ  - 86:1-2, 3-4, 5-6         
ಶುಭಸಂದೇಶ  -  ಮಾರ್ಕ 5:21-43
-------------------
1ನೇ  ವಾಚನ  -   ೨ ಸಮುವೇಲ 18:9-10, 14, 24-25, 30-19:3 
9 : ಅಬ್ಷಾಲೋಮನು ದಾವೀದನ ಸೇವಕರ ಕೈಗೆ ಸಿಕ್ಕಿದನು. ಅದು ಹೇಗೆಂದರೆ, ಅವನು ಹತ್ತಿದ್ದ ಹೇಸರಗತ್ತೆ ಒಂದು ದೊಡ್ಡ ಓಕ್‍ಮರದ ಕೆಳಗೆ ಹಾದುಹೋಗುವಾಗ ಅವನ ತಲೆ ನಿಬಿಡವಾದ ಅದರ ಕೊಂಬೆಗಳಲ್ಲಿ ಸಿಕ್ಕಿಕೊಂಡಿತು; ಆ ಹೇಸರಗತ್ತೆ ಅವನ ಕೆಳಗಿನಿಂದ ಓಡಿಹೋಯಿತು. ಅವನು ಭೂಮಿಗೂ ಆಕಾಶಕ್ಕೂ ಮಧ್ಯೆ ನೇತಾಡಬೇಕಾಯಿತು.

10 : ಇದನ್ನು ನೋಡಿದ ಒಬ್ಬ ವ್ಯಕ್ತಿ ಯೋವಾಬನಿಗೆ, “ನೋಡಿ, ಆ ಓಕ್‍ಮರದಲ್ಲಿ ಅಬ್ಷಾಲೋಮನು ನೇತಾಡುತ್ತಿರುವುದನ್ನು ಕಂಡೆ,” ಎಂದು ಹೇಳಿದನು.
14 : ಆಗ ಯೋವಾಬನು, “ಇಲ್ಲಿ ನಿಂತು ನಿನ್ನೊಡನೆ ಸಮಯ ಕಳೆಯಲಾರೆ,” ಎಂದು ಹೇಳಿ ಕೂಡಲೆ ಕೈಯಲ್ಲಿ ಮೂರು ಈಟಿಗಳನ್ನು ತೆಗೆದುಕೊಂಡು ಹೋಗಿ ಅಬ್ಷಾಲೋಮನ ಎದೆಗೆ ತಿವಿದನು.
24 : ದಾವೀದನು ಎರಡು ಬಾಗಿಲುಗಳ ಮಧ್ಯೆ ಕುಳಿತುಕೊಂಡಿದ್ದನು. ಅಷ್ಟರಲ್ಲಿ ಕಾವಲುಗಾರನು ಗೋಪುರದ ಮಾಳಿಗೆಯನ್ನು ಹತ್ತಿ ಪಾಗಾರದ ಬಳಿಯಲ್ಲಿ ನಿಂತು ನೋಡಲು ಒಂಟಿಗನಾಗಿ ಬರುವ ಒಬ್ಬ ವ್ಯಕ್ತಿಯನ್ನು ಕಂಡನು.
25 : ಅವನು ಕೂಡಲೆ ದಾವೀದನಿಗೆ ತಿಳಿಸಿದನು. ದಾವೀದನು, “ಅವನು ಒಬ್ಬನಾಗಿ ಇದ್ದರೆ ಸಮಾಚಾರ ತರುವವನಾಗಿರಬಹುದು,” ಎಂದನು. ಆ ವ್ಯಕ್ತಿ ಬರಬರುತ್ತಾ ಸಮೀಪವಾದನು.
30 : ಆಗ ಅರಸನು, “ನೀನು ಇತ್ತ ನಿಲ್ಲು,” ಎಂದು ಆಜ್ಞಾಪಿಸಿದನು; ಅವನು ಅಂತೆಯೇ ನಿಂತನು.
31 : ಅಷ್ಟರಲ್ಲಿ ಆ ಕೂಷ್ಯನೂ ಬಂದು, “ನನ್ನ ಒಡೆಯರಾದ ಅರಸರಿಗೆ ಶುಭವರ್ತಮಾನ ತಂದಿದ್ದೇನೆ; ಸರ್ವೇಶ್ವರಸ್ವಾಮಿ ನಿಮಗೆ ವಿರುದ್ಧ ಬಂಡೆದ್ದವರೆಲ್ಲರಿಗೂ ಮುಯ್ಯಿತೀರಿಸಿದ್ದಾರೆ,” ಎಂದನು.
32 : ಅರಸನು ಅವನನ್ನು, “ಆ ಯುವಕ ಅಬ್ಷಾಲೋಮನು ಸುರಕ್ಷಿತನಾಗಿದ್ದಾನೆಯೋ?” ಎಂದು ಕೇಳಿದನು. ಅವನು, “ನನ್ನ ಒಡೆಯರಾದ ಅರಸರ ಶತ್ರುಗಳಿಗೂ, ಅವರಿಗೆ ಕೇಡು ಮಾಡುವುದಕ್ಕೆ ನಿಂತವರೆಲ್ಲರಿಗೂ ಆ ಯುವಕನಿಗಾದ ಗತಿಯೇ ಆಗಲಿ!” ಎಂದು ಉತ್ತರಕೊಟ್ಟನು.
33 : ಇದನ್ನು ಕೇಳಿದ್ದೇ ಅರಸನ ಎದೆಯೊಡೆಯಿತು. ಅವನು, “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು! ಅಬ್ಷಾಲೋಮನೇ, ನನ್ನ ಮಗನೇ, ಮಗನೇ,” ಎಂದು ಕೂಗಿ ಗೋಳಿಡುತ್ತಾ ಹೆಬ್ಬಾಗಿಲಿನ ಮೇಲಿದ್ದ ಕೋಣೆಗೆ ಹೋದನು.
3 : ಜನರು ಆ ದಿನದ ಯುದ್ಧದಲ್ಲಿ ಸೋತು ಓಡಿಬಂದಿರುವವರೋ ಎಂಬಂತೆ, ನಾಚಿಕೆಯಿಂದ ಕಳ್ಳತನವಾಗಿ ಊರನ್ನು ಹೊಕ್ಕರು.
-----------------------
ಕೀರ್ತನೆ  - 86:1-2, 3-4, 5-6  
1 : ಹೇ ಪ್ರಭು, ನೀಡೆನಗೆ ಸದುತ್ತರವನು / ಕಿವಿಗೊಡು, ದೀನನು, ದಲಿತನು ನಾನು //
2 : ಕಾಪಾಡು ಪ್ರಭು, ನಾ ನಿನ್ನ ಭಕ್ತನು / ಉದ್ಧರಿಸು ನಿನ್ನ ನಂಬಿದ ದಾಸನನು //
3 : ನೀನೆನಗೆ ದೇವನು, ಕರುಣಿಸೆನ್ನನು / ದಿನವೆಲ್ಲ ಪ್ರಭು, ನಿನಗೆ ಮೊರೆಯಿಡುವೆನು //
4 : ನಿನ್ನ ದಾಸನಿಗೆ ನೀಡು ಮನದಾನಂದವನು / ನಿನಗೆ ಅಭಿಮುಖವಾಗಿಸಿರುವೆ ಎನ್ನಾತ್ಮವನು //
5 : ಪ್ರಭು, ನೀನು ದಯಾವಂತನು, ಕ್ಷಮಿಸುವವನು / ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು //

6 : ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ / ನನ್ನ ವಿಜ್ಞಾಪನೆಗಳ ಕೋರಿಕೆಗೆ //
------------------------
ಶುಭಸಂದೇಶ  -  ಮಾರ್ಕ 5:21-43
21 : ಯೇಸುಸ್ವಾಮಿ ದೋಣಿಯನ್ನೇರಿ ಸರೋವರದ ಈಚೆದಡಕ್ಕೆ ಮರಳಿದರು. ತೀರವನ್ನು ಸೇರಿದೊಡನೆ ಜನರು ದೊಡ್ಡಗುಂಪಾಗಿ ಅವರ ಸುತ್ತಲೂ ನೆರೆದರು.
22 : ಪ್ರಾರ್ಥನಾಮಂದಿರದ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನ ಹೆಸರು ಯಾ¬ೂರ.
23 : ಅವನು ಯೇಸುವನ್ನು ನೋಡಿದೊಡನೆ ಅವರ ಪಾದಕ್ಕೆರಗಿ, “ನನ್ನ ಪುಟ್ಟ ಮಗಳು ಮರಣಾವಸ್ಥೆಯಲ್ಲಿದ್ದಾಳೆ; ತಾವು ಬಂದು ತಮ್ಮ ಹಸ್ತವನ್ನು ಅವಳ ಮೇಲಿಟ್ಟು, ಅವಳು ಗುಣಹೊಂದಿ ಬದುಕುವಂತೆ ಅನುಗ್ರಹಿಸಬೇಕು,” ಎಂದು ಬಹಳವಾಗಿ ವಿನಂತಿಸಿದನು.
24 : ಯೇಸು ಅವನ ಜೊತೆಯಲ್ಲಿ ಹೊರಟರು. ದೊಡ್ಡ ಜನಸ್ತೋಮವು ಯೇಸುವನ್ನು ಮುತ್ತಿಕೊಂಡು ಅವರ ಜೊತೆಯಲ್ಲೇ ಹೊರಟಿತು.
25 : ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿದ್ದಳು.
26 : ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯ ಮಾಡಿದ್ದರೂ ಅವಳ ರೋಗ ಮಾತ್ರ ಉಲ್ಬಣ ಆಗುತ್ತಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ.
27 : ಯೇಸುವಿನ ವಿಷಯವಾಗಿ ಜನರು ಹೇಳುತ್ತಿದ್ದುದನ್ನು ಆಕೆ ಕೇಳಿ, ಜನರ ಗುಂಪಿನಲ್ಲಿ ಸೇರಿ, ಯೇಸುವನ್ನು ಹಿಂಬಾಲಿಸಿದಳು.
28 : “ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು” ಎಂದುಕೊಂಡು ಯೇಸುವಿನ ಉಡುಪನ್ನು ಮುಟ್ಟಿದಳು.
29 : ಅದನ್ನು ಮುಟ್ಟಿದಾಕ್ಷಣ ಅವಳ ರಕ್ತಸ್ರಾವ ನಿಂತುಹೋಯಿತು. ಕಾಡುತ್ತಿದ್ದ ವ್ಯಾಧಿಯಿಂದ ತಾನು ಗುಣಹೊಂದಿದ್ದೇನೆಂದು ಆಕೆಗೆ ಅರಿವಾಯಿತು.
30 : ಇತ್ತ ಯೇಸು, ರೋಗವನ್ನು ಗುಣಪಡಿಸುವ ಶಕ್ತಿ ತಮ್ಮಿಂದ ಹೊರಹೊಮ್ಮಿದ್ದನ್ನು ತಕ್ಷಣ ತಿಳಿದು, ಸುತ್ತಲಿದ್ದ ಜನರತ್ತ ತಮ್ಮ ದೃಷ್ಟಿಯನ್ನು ಹರಿಸಿ, “ನನ್ನ ಉಡುಪನ್ನು ಮುಟ್ಟಿದವರಾರು?” ಎಂದು ಪ್ರಶ್ನಿಸಿದರು.
31 : ಅದಕ್ಕೆ ಶಿಷ್ಯರು, “ತಮ್ಮ ಸುತ್ತಲೂ ಜನರು ಮುತ್ತಿಕೊಂಡಿರುವುದು ತಮಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು?’ ಎಂದು ಕೇಳುತ್ತೀರಲ್ಲಾ” ಎಂದರು.
32 : ಆದರೆ ಯೇಸು ತಮ್ಮನ್ನು ಮುಟ್ಟಿದವರು ಯಾರೆಂದು ಗುರುತಿಸಲು ಸುತ್ತಲೂ ನೋಡುತ್ತಿದ್ದರು.
33 : ತನ್ನಲ್ಲಿ ಸಂಭವಿಸಿದ್ದನ್ನು ಅರಿತಿದ್ದ ಆ ಮಹಿಳೆ ಭಯದಿಂದ ನಡುಗುತ್ತಾ ಮುಂದೆ ಬಂದು ಯೇಸುವಿನ ಪಾದಕ್ಕೆ ಎರಗಿ, ಅವರಿಗೆ ನಡೆದ ಸಂಗತಿಯನ್ನು ತಿಳಿಸಿದಳು.
34 : ಯೇಸು ಆಕೆಗೆ, “ಮಗಳೇ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ; ಸಮಾಧಾನದಿಂದ ಹೋಗು, ವ್ಯಾಧಿಮುಕ್ತಳಾಗಿ ಆರೋಗ್ಯದಿಂದಿರು,” ಎಂದು ಅನುಗ್ರಹಿಸಿದರು.
35 : ಯೇಸುಸ್ವಾಮಿ ಇನ್ನೂ ಮಾತನಾಡುತ್ತ ಇರುವಾಗಲೇ ಯಾಯಿರನ ಮನೆಯಿಂದ ಕೆಲವರು ಬಂದು ಅವನಿಗೆ, “ನಿಮ್ಮ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುತ್ತೀರಿ?” ಎಂದರು.
36 : ಅವರು ಹೇಳಿದ ಮಾತುಗಳನ್ನು ಯೇಸು ಕೇಳಿಯೂ ಅವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಯಾಯಿರನಿಗೆ, “ಭಯಪಡಬೇಡ, ನಿನ್ನಲ್ಲಿ ವಿಶ್ವಾಸ ಒಂದಿದ್ದರೆ ಸಾಕು,” ಎಂದರು.
37 : ಅನಂತರ ಪೇತ್ರ, ಯಕೋಬ ಹಾಗೂ ಅವನ ಸೋದರ ಯೊವಾನ್ನ, ಇವರನ್ನು ಮಾತ್ರ ತಮ್ಮ ಜೊತೆಯಲ್ಲಿ ಕರೆದುಕೊಂಡು ಯಾಯಿರನ ಮನೆಯನ್ನು ತಲುಪಿದರು.
38 : ಅಲ್ಲಿ ಜನರ ಗೋಳಾಟ, ಗೊಂದಲದ ದೃಶ್ಯ ಅವರ ಕಣ್ಣಿಗೆ ಬಿತ್ತು.
39 : ಯೇಸು ಮನೆಯೊಳಕ್ಕೆ ಹೋಗಿ, “ಏತಕ್ಕೆ ಇಷ್ಟೆಲ್ಲಾ ಗಲಭೆ, ಗೋಳಾಟ? ಬಾಲಕಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು.
40 : ಇದನ್ನು ಕೇಳಿದ ಜನರು, ಯೇಸುವನ್ನು ಪರಿಹಾಸ್ಯ ಮಾಡಿದರು. ಆದರೆ ಯೇಸು ಎಲ್ಲರನ್ನೂ ಹೊರಗೆ ಕಳುಹಿಸಿ ಬಾಲಕಿಯ ತಂದೆತಾಯಿಯನ್ನು ಮತ್ತು ತಮ್ಮೊಂದಿಗಿದ್ದ ಮೂವರು ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಬಾಲಕಿಯನ್ನು ಮಲಗಿಸಿದ್ದ ಕೊಠಡಿಯನ್ನು ಪ್ರವೇಶಿಸಿದರು.
41 : ಆಕೆಯ ಕೈಯನ್ನು ಹಿಡಿದು, “ತಲಿಥಾಕೂಮ್” ಎಂದರು. (‘ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು’ ಎಂಬುದು ಆ ಮಾತಿನ ಅರ್ಥ)
42 : ಅವಳು ತಟ್ಟನೆ ಎದ್ದು ನಡೆದಾಡತೊಡಗಿದಳು. ಅಲ್ಲಿದ್ದವರೆಲ್ಲರೂ ಆಶ್ಚರ್ಯ ಭರಿತರಾದರು. ಅವಳಿಗೆ ಹನ್ನೆರಡು ವರ್ಷ ವಯಸ್ಸು ಆಗಿತ್ತು.

43 : ಈ ವಿಷಯವನ್ನು ಬೇರೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಬಾಲಕಿಗೆ ತಿನ್ನಲು ಏನಾದರೂ ಕೊಡುವಂತೆ ತಿಳಿಸಿದರು. 
---------------------
“ಸಾವೆಂಬುವುದು ಕೊನೆಯಲ್ಲ ಅದು ಜೀವನದ ರೂಪಾಂತರವಷ್ಟೆ”

ಅಬ್ಷಾಲೋಮನು ಅಧಿಕಾರದಾಸೆಗೆ ತನ್ನ ತಂದೆಯ ವಿರುದ್ಧವೇ ಒಳಸಂಚು ರೂಪಿಸಿ ಸಾವಿಗೀಡಾಗುತ್ತಾನೆ. ಈ ಸಂದರ್ಭದಲ್ಲಿ ದಾವೀದನ ರಾಜ್ಯದಲ್ಲಿ ಅಶಾಂತಿ, ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮೂಲ ಕಾರಣ, ದಾವೀದನು ತನ್ನ ಮುಪ್ಪಿನಲ್ಲೂ ಅಧಿಕಾರ ಹಸ್ತಾಂತರ ಮಾಡದಿದ್ದದ್ದು. ಹೌದು ಅಧಿಕಾರ ಮನುಷ್ಯನ ಭ್ರಷ್ಟಗೊಳ್ಳುವುದಿಲ್ಲ. ಅಧಿಕಾರ ಕಳೆದುಕೊಳ್ಳುವ ಭಯ/ಭೀತಿ ಅವನನ್ನು ಭ್ರಷ್ಟನಾಗಿಸುತ್ತದೆ. ಸಮಯ ಕೂಡಿ ಬಂದಾಗ ಅಧಿಕಾರವನ್ನು ಹಸ್ತಾಂತರ ಮಾಡಿಕೊಡುವ ಮನೋಸ್ಥೈರ್ಯ ನಮ್ಮ ನಾಯಕರಲ್ಲಿ ಬರಲೆಂದು ಪ್ರಾರ್ಥಿಸೋಣ. ಶುಭಸಂದೇಶದ ವಾಚನ ಮತ್ತೊಮ್ಮೆ ಯೇಸು ಸಾವು ನೋವುಗಳ ನಿವಾರಕನೆಂದು ತಿಳಿಸುತ್ತದೆ. ಸಾವು, ನೋವುಗಳಿಂದ ಮುಕ್ತಿಬೇಕಾದರೆ ನಮ್ಮಲ್ಲಿ ಇರಬೇಕಾದುದ್ದು ಒಂದೇ ಒಂದು: ಅದು ಯೇಸುವಿನಲ್ಲಿ ನಮ್ಮ ದೃಢ ವಿಶ್ವಾಸ. ಇನ್ನೊಂದು ಕಡೆ, ಸಾವಿನ ಬಗೆಗಿನ ನಮ್ಮ ದೃಷ್ಟಿಯನ್ನು ಪರೀಕ್ಷಿಸಿಕೊಳ್ಳಬೇಕು. ನಮಗೆ ಸಾವೆಂಬುವುದು ಬದುಕಿನ ಕೊನೆಯಾದರೆ, ಯೇಸುವಿಗೆ “ನಿದ್ದೆ” ಮಾತ್ರ. ಪುನರುತ್ಥಾನ ಜೀವವು ಆಗಿರುವ ಯೇಸುವಿಗೆ ಸಾವೆಂಬುವುದು ಕೊನೆಯಲ್ಲ ಅದು ಜೀವನದ ರೂಪಾಂತರವಷ್ಟೆ, ಅದು ಭಯಾನಕವಾದುದಲ್ಲ, ದೇವರನ್ನು ಕೂಡಿಕೊಳ್ಳುವ ದಾರಿ ಅಥವಾ ದೇವರೊಂದಿಗೆ ಇರುವ ವಿಭಿನ್ನ ಸ್ಥಿತಿ.

ಚಿಂತನೆ

ಸಂತ ಜಾನ್ ದೆ ಬ್ರಿಟ್ಟೋ

ಜಾನ್ ದೆ ಬ್ರಿಟ್ಟೋ ಶ್ರೀಮಂತ ಮನೆತನದ ಹುಡುಗ. ಚಿಕ್ಕ ವಯಸ್ಸಿನಿಂದಲೂ ಸಂತ ಫ್ರಾನ್ಸಿಸ್ ಕ್ಸೇವಿಯರ್‌ರವರ ಆದರ್ಶವನ್ನು ಪಾಲಿಸಿ ಬೆಳೆದವ. 15ನೇ ವಯಸ್ಸಿನಲ್ಲಿ ಯೇಸುಸಭೆಗೆ ಸೇರ್ಪಡೆಯಾಗಿ ಗುರುದೀಕ್ಷೆ ಸ್ವೀಕರಿಸುತ್ತಾರೆ. 1673ರಲ್ಲಿ ಹದಿನಾರು ಜನ ಯೇಸುಸಭೆ ಗುರುಗಳೊಂದಿಗೆ ಗೋವಾ ಕಡೆ ಪ್ರಯಾಣ ಹೊರಡುತ್ತಾರೆ ಹಾಗೂ ಅನೇಕ ವರ್ಷ ದಕ್ಷಿಣ ಭಾರತದಲ್ಲಿ ಶುಭಸಂದೇಶ ಪ್ರಚಾರ ಮಾಡುತ್ತಾರೆ. ದಕ್ಷಿಣ ಭಾರತದ ಮಧುರೈ ಮಿಷನ್‌ನ ಮೇಲ್ವಿಚಾರಕರಾಗಿ ಬಂದ ಜಾನ್ ದೆ ಬ್ರಿಟ್ಟೋ ಹಲವು ಹಿಂಸೆ ಬಾಧೆಗಳನ್ನು ಅನುಭವಿಸುತ್ತಾರೆ ಮತ್ತು ತಮ್ಮ ತ್ಯಾಗ, ಪರಿಶ್ರಮ, ಶ್ರದ್ಧೆಯಿಂದ ದಕ್ಷಿಣ ಭಾರತದಲ್ಲಿ ಹಲವರು ಕ್ರೈಸ್ತ ಧರ್ಮ ಸ್ವೀಕರಿಸುವಂತೆ ಮಾಡುತ್ತಾರೆ. 1693ರ ಫೆಬ್ರವರಿ 4ರಂದು ಜಾನ್‌ರವರು ರಕ್ತಸಾಕ್ಷಿಯಾಗುತ್ತಾರೆ. ಸಾವಿನ ಬಲಿಪೂಜೆಯಲ್ಲಿ ಅವರ ತಾಯಿ ಶೋಕತಪ್ತರಾಗಿ ಸರಳ ಉಡುಗೆಯನ್ನು ಉಡದೆ, ಹಬ್ಬದ ಸಂಭ್ರಮ ಸೂಚಿಸುವ ಅಲಂಕಾರದಲ್ಲಿ ಭಾಗವಹಿಸುತ್ತಾರೆ. 1947ರಲ್ಲಿ ಜಗದ್ಗುರು 12ನೇ ಭಕ್ತಿನಾಥರು ಅವರನ್ನು ಸಂತರೆಂದು ಘೋಷಿಸುತ್ತಾರೆ. ಭಾರತವನ್ನು ಪ್ರೀತಿಸಿ, ಇಲ್ಲಿ ಕ್ರಿಸ್ತನ ಸುವಾರ್ತೆ ಸಾರಿದ ಜಾನ್‌ ರವರಿಗೆ ಭಾರತದ ಕ್ರೈಸ್ತರು ಸದಾ ಚಿರಋಣಿಯಾಗಿರಬೇಕು.


ಇಂದಿನ ಸಂತರು

ಸಂತ ಜಾನ್ ದೆ ಬ್ರಿಟ್ಟೋ (ಕ್ರಿಸ್ತಶಕ 1647-1693)
ಪೋರ್ಚುಗಲ್‌ನ ಈ ಮಹಾಸಂತರು ಲಿಸ್ಬನ್ನಲ್ಲಿ ಜನಿಸಿದರು. ತಮ್ಮ ತಾಯಿಯ ಹರಕೆಯಂತೆ 15ನೇ ವಯಸ್ಸಿಗೆ ಇವರು ಯೇಸುಸಭೆಯನ್ನು ಸೇರಿ ಗುರುದೀಕ್ಷೆಯನ್ನು ಸ್ವೀಕರಿಸಿದರು. ದಕ್ಷಿಣ ಭಾರತದ ಮಧುರೈ ಮಿಷನ್ನಿನ ಮೇಲ್ವಿಚಾರಕರಾಗಿ ಬಂದ ಇವರು ಹಲವು ಹಿಂಸೆ ಬಾಧೆಗಳನ್ನು ಅನುಭವಿಸಿ ಅನೇಕರಿಗೆ ದೀಕ್ಷಾಸ್ನಾನವನ್ನು ನೀಡಿದರು. ಇವರ ನೇರವಾದ ಬೋಧನೆಯಿಂದ ಕುಪಿತಗೊಂಡ ಅರಸನೊಬ್ಬನಿಂದ ಶಿರಚ್ಛೇದನವಾಗುತ್ತದೆ. ’ನನ್ನನ್ನು ಹಿಂಬಾಲಿಸಲು ಇಚ್ಚಿಸುವವನು ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸಲಿ’ ಎಂಬ ಪ್ರಭುಯೇಸುವಿನ ಆದೇಶಕ್ಕೆ ಅನುಸಾರವಾಗಿ, ಶುಭಸಂದೇಶ ಪ್ರಸಾರ ಕಾರ್ಯದಲ್ಲಿ ತಮ್ಮನ್ನೇ ಸಕ್ರಿಯವಾಗಿ ತೊಡಗಿಸಿಕೊಂಡ ಸಂತ ಜಾನ್ ದೆ ಬ್ರಿಟ್ಟೋ ಅದೇ ಶುಭಸಂದೇಶದ ನಿಮಿತ್ತ ಬಂದಂತಹ ಕಷ್ಟಗಳನ್ನು ’ಪ್ರಭುಯೇಸು ತನ್ನ ಜೊತೆಗಿದ್ದಾರೆ’ ಎಂಬ ಅಚಲ ವಿಶ್ವಾಸ ಹಾಗೂ ಧೈರ್ಯದಿಂದ ಎದುರಿಸುತ್ತಾರೆ. ಅವರಿಗೆ ಆ ಧೈರ್ಯ ಬಂದಿದ್ದೇ ಅವರು ಕ್ರೈಸ್ತ ಮೌಲ್ಯಗಳಿಗೆ ತೋರಿದ ಬದ್ಧತೆಯಿಂದ. ಕ್ರಿಸ್ತರ ಮೇಲೆ ನಮಗಿರುವ ಪ್ರೀತಿ ನಮ್ಮ ಸತ್ಕಾರ್ಯಗಳ ಮುಖಾಂತರ ಅನಾವರಣಗೊಂಡರೆ ಕ್ರೈಸ್ತ ಬದುಕು ಸುಂದರ ಹಾಗೂ ಸಾರ್ಥಕ.


ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment