Monday, 17 February 2020

ಸಾಧಾರಣ ಕಾಲದ ಏಳನೇ ಭಾನುವಾರ

23 ಫೆಬ್ರವರಿ 2೦20
ಭಾನುವಾರ/  ಹಸಿರು / ಸಾಧಾರಣ ಕಾಲದ ಏಳನೇ ಭಾನುವಾರ 
1ನೇ ವಾಚನ - ಯಾಜಕ ಕಾಂಡ 19:1-2, 17-18
ಕೀರ್ತನೆ - 103, 1-4, 8, 10, 12-13
2ನೇ ವಾಚನ - 1 ಕೊರಿಂಥ 3:16-23
ಶುಭಸಂದೇಶ - ಮತ್ತಾಯ 5:38-48
-----------------
1ನೇ ವಾಚನ - ಯಾಜಕ ಕಾಂಡ 19:1-2, 17-18
1 : ಇಸ್ರಯೇಲ್ ಸಮಾಜದವರಿಗೆ ಹೀಗೆ ಆಜ್ಞಾಪಿಸುವಂತೆ ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು:
2 : “ನಿಮ್ಮ ದೇವರಾದ ಸರ್ವೇಶ್ವರನೆಂಬ ನಾನು ಪರಿಶುದ್ಧನಾಗಿರುವಂತೆ ನೀವು ಕೂಡ ಪರಿಶುದ್ಧರಾಗಿರಬೇಕು.
17 : “ಸಹೋದರನ ಬಗ್ಗೆ ಒಳಗೊಳಗೇ ಹಗೆ ಇಟ್ಟುಕೊಳ್ಳಬೇಡ. ನೆರೆಯವನ ದೋಷಕ್ಕೆ ನೀನು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ಎತ್ತಿ ತೋರಿಸಲೇಬೇಕು.
18 : ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡ, ಅವರಿಗೆ ವಿರುದ್ಧ ಮತ್ಸರ ಇಟ್ಟುಕೊಳ್ಳಬೇಡ, ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು. ನಾನು ಸರ್ವೇಶ್ವರ.
---------------------
ಕೀರ್ತನೆ - 103, 1-4, 8, 10, 12-13
ಪ್ರಭು ದಯಾಳು, ಕೃಪಾಪೂರ್ಣನು
1 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು / ನನ್ನ ಅಂತರಂಗವೇ, ಭಜಿಸು ಆತನನು / ನೆನೆ ಆತನ ಪರಮಪಾವನ ನಾಮವನು //
2 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು / ಮರೆಯದಿರು ಆತನ ಉಪಕಾರಗಳೊಂದನು //
3 : ಮನ್ನಿಸುವನಾತ ನನ್ನ ದೋಷಗಳನು / ವಾಸಿಮಾಡುವನು ನನ್ನ ರೋಗಗಳನು //
4 : ಉಳಿಸುವನು ಪಾತಾಳದ ಕೂಪದಿಂದ ನನ್ನನು / ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು //
8 : ಪ್ರಭು ದಯಾಳು, ಕೃಪಾಪೂರ್ಣನು / ಸಹನಶೀಲನು, ಪ್ರೀತಿಮಯನು //
9 : ಆತನು ಸದಾ ತಪ್ಪು ಹುಡುಕುವವನಲ್ಲ / ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ //
10 : ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ / ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ //
12 : ಪಡುವಣದಿಂದ ಮೂಡಣವೆಷ್ಟೋ ದೂರ / ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ // 13 ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ /
13 : ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ / ಕನಿಕರಿಸುವನಾತ ತನಗೆ ಅಂಜುವವರಿಗೆ //
-------------------------
2ನೇ ವಾಚನ - 1 ಕೊರಿಂಥ 3:16-23
16 : ನೀವು ದೇವರ ಆಲಯವಾಗಿದ್ದೀರಿ. ದೇವರ ಆತ್ಮವು ನಿಮ್ಮಲ್ಲಿ ವಾಸಿಸುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿದೆ.
17 : ಯಾವನಾದರೂ ದೇವಾಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುತ್ತಾರೆ. ದೇವರ ಆಲಯವು ಪವಿತ್ರವಾದುದು. ನೀವೇ ಆ ಆಲಯ.
18 : ಯಾರೂ ತನ್ನನ್ನು ತಾನೇ ವಂಚಿಸಿಕೊಳ್ಳದಿರಲಿ. ನಿಮ್ಮಲ್ಲಿ ಯಾರಾದರೂ ಈ ಲೋಕದ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸುವುದಾದರೆ ಅಂಥವನು ಮೊದಲು ಹುಚ್ಚನಂತಿರಲು ಕಲಿಯಲಿ. ಆಗ ಅವನು ನಿಜವಾಗಿಯೂ ಜಾಣನಾಗುತ್ತಾನೆ.
19 : ಇಹಲೋಕದ ಜಾಣತನವು ದೇವರ ದೃಷ್ಟಿಯಲ್ಲಿ ಹುಚ್ಚುತನವೇ ಸರಿ. “ದೇವರು ಜ್ಞಾನಿಗಳನ್ನು ಅವರ ಜಾಲವುದಲ್ಲಿಯೇ ಸಿಕ್ಕಿಸುವರು” ಎಂದೂ
20 : “ಜ್ಞಾನಿಗಳ ಯೋಜನೆಗಳು ನಿಷ್ಫಲವೆಂಬುದು ಪ್ರಭುವಿಗೆ ತಿಳಿದಿದೆ” ಎಂದೂ ಲಿಖಿತವಾಗಿದೆಯಲ್ಲವೆ?
21 : ಆದ್ದರಿಂದ ಕೇವಲ ನರಮಾನವರನ್ನೇ ನೆಚ್ಚಿಕೊಂಡು ಯಾರೂ ಹೆಚ್ಚಳಪಡದಿರಲಿ.
22 : ವಾಸ್ತವವಾಗಿ ಸಮಸ್ತವೂ ನಿಮ್ಮದೇ. ಪೌಲ, ಅಪೊಲೋಸ್, ಕೇಫ - ಇವರಾಗಲಿ; ಜಗತ್ತು, ಜೀವ, ಮರಣ – ಇವುಗಳಾಗಲಿ, ಅಥವಾ ವರ್ತಮಾನ, ಭವಿಷ್ಯತ್ಕಾಲಗಳಾಗಲಿ, ಇವೆಲ್ಲವೂ ನಿಮ್ಮವೇ.
23 : ಆದರೆ ನೀವು ಕ್ರಿಸ್ತ ಯೇಸುವಿಗೆ ಸೇರಿದವರು; ಕ್ರಿಸ್ತಯೇಸು ದೇವರಿಗೆ ಸೇರಿದವರು.
-------------------------
ಶುಭಸಂದೇಶ - ಮತ್ತಾಯ 5:38-48
38 : "ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು" ಎಂಬುದನ್ನು ನೀವು ಕೇಳಿದ್ದೀರಿ.
39 : ಆದರೆ ನನ್ನ ಬೋಧೆ ಇದು: ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ. ನಿನ್ನ ಬಲಗೆನ್ನೆಗೆ ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು.
40 : ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು.
41 : ಯಾರಾದರೂ ಒಂದು ಕಿಲೊವಿೂಟರ್ ದೂರ ಬಾ ಎಂದು ನಿನ್ನನ್ನು ಒತ್ತಾಯಪಡಿಸಿದರೆ ಅವನೊಡನೆ ಎರಡು ಕಿಲೊವಿೂಟರ್ ಹೋಗು;
42 : ಬೇಡಿಕೊಳ್ಳುವವನಿಗೆ ಕೊಡು. ಸಾಲ ಕೇಳಬಂದವನಿಂದ ಮುಖ ತಿರುಗಿಸಿಕೊಳ್ಳಬೇಡ."
43 : "ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು" ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ.
44 : ನಾನು ಹೇಳುವುದನ್ನು ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ.
45 : ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ.
46 : ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ?
47 : ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ?
48 : ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ."

-----------------------
ಚಿಂತನೆ
 ‘ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು’ ಎಂಬ ತತ್ವ ಅನುಸರಿಸುತ್ತಾ ಹೋದರೆ ಇಡೀ ಮನುಷ್ಯಕುಲದಲ್ಲಿ ಕಣ್ಣಿರುವವರು, ಹಲ್ಲಿರುವವರು ಯಾರೂ ಸಿಗುವುದಿಲ್ಲ’ - ಗಾಂಧೀಜಿ
ದೇವರ ಆಜ್ಞೆಗಳು ಕ್ರಿಸ್ತೀಯ ಜೀವನಕ್ಕೆ ಹೊರೆಯಲ್ಲ ಬದಲಿಗೆ ದೇವರೆಡೆಗೆ ಸಾಗಲು ನಮಗೆ ದೇವರು ನೀಡಿರುವ ಸಾಧನಗಳಾಗಿವೆ. ಕ್ಷಣಿಕ ಸುಖಕ್ಕಾಗಿ ದೇವರು ನೀಡುವ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡು ಆಜ್ಞೆಗಳನ್ನು ಮೀರಿ ನಾವು ದೇವರಿಂದ ಮತ್ತು ದೇವರ ಪ್ರೀತಿಯಿಂದ ದೂರಸರಿದು ಪಾಪಿಗಳಾಗುತಿದ್ದೇವೆ. ಕಳೆದ ವಾರದ ಆರಾಧನಾ ವಿಧಿಯ ವಾಚನಗಳು ದೇವರ ಆಜ್ಞೆಗಳನ್ನು ಪರಿಪಾಲಿಸಿ ದೈವವಾಕ್ಯದ ಪ್ರೇರಣೆಯಲ್ಲಿ ಬಾಳಲು ನಮಗೆ ಕರೆನೀಡಿತ್ತು. ಇಂದಿನ ಆರಾಧನಾ ವಿಧಿಯ ವಾಚನಗಳು ದೈವವಾಕ್ಯದ ಪ್ರೇರಣೆಯಲ್ಲಿ ಬಾಳಿ ಸ್ವರ್ಗದಲ್ಲಿರುವ ನಮ್ಮ ತಂದೆಯಾದ ದೇವರು ಪರಿಪೂರ್ಣರಾಗಿರುವಂತೆ ನಮನ್ನು ಪರಿಪೂರ್ಣರಾಗಲು ಕರೆನೀಡುತ್ತಿವೆ. 
ಒಂದು ಊರಿನಲ್ಲಿ ಅಕ್ಕ ಪಕ್ಕ ಮನೆಗಳಿತ್ತು. ಒಬ್ಬಾತ ದಿನ ಬೆಳಗ್ಗೆ ಎದ್ದು, ಅವನ ಮನೆಯ ಎಲ್ಲಾ ಕಸ ತೆಗೆದುಕೊಂಡು ಪಕ್ಕದ ಮನೆಯ ಕಂಪೌಂಡ್ ಒಳಗೆ ಬಿಸಾಡುತ್ತಾ ಇರುತ್ತಾನೆ. ಆದರೆ ಪಕ್ಕದ ಮನೆಯವನ್ನು ಅದನ್ನು ತಿಳಿದಿದ್ದರು ಕಸದ ಬದಲಿಗೆ ಗುಲಾಬಿ ಹೂವನ್ನು ಬಿಸಾಡುತ್ತಾ ಇರುತ್ತಾನೆ. ಹೀಗೆ ತುಂಬ ದಿನಗಳು ನಡೆಯುತ್ತಿರುವುದನ್ನು ಗಮನಿಸಿ, ಗುಲಾಬಿ ಬಿಸಾಡುತ್ತ ಇದ್ದವನಿಗೆ ಕೇಳುತ್ತಾನೆಸ್; “ಪಕ್ಕದ ಮನೆಯವನು ಕಸ ಬಿಸಾಡುವಾಗ ನೀವು ಗುಲಾಬಿ ಬಿಸಾಡುವುದೇಕೆ? ನಿಮಗೆ ಕೋಪಬರೋದಿಲ್ಲವೇ?” ಅದಕ್ಕೆ ಅ ವ್ಯಕ್ತಿ ಹೀಗೆಂದು ಉತ್ತರಿಸುತ್ತಾನೆ; ‘ಅವನಲ್ಲಿ ಇರುವುದನ್ನು ಆತನು ಬಿಸಾಡುತ್ತಾನೆ ಅದು ಆತನ ಸ್ವಭಾವ, ನನ್ನಲ್ಲಿ ಇರುವುದನ್ನು ನಾನು ಬಿಸಾಡುತ್ತೇನೆ, ಅದು ನನ್ನ ಸ್ವಭಾವ. 
ಬೇರೆಯವರು ಕೆಟ್ಟವರು ಅಂಥ ನಾವು ಕೆಟ್ಟವರಾಗಿರುವುದು ಜೀವನವೇ? ನಾವು ಅವರಂತೆ ಬದುಕದೆ ನಮ್ಮ ಜೀವನವನ್ನು ದೈವಿಗುಣದ ಆದರ್ಶಮಯ ಜೀವನವನ್ನು ನಡೆಸೋಣ. ಹಳೆಒಡಂಬಡಿಕೆಯಲ್ಲಿ ‘ನಿನ್ನ ಪೂರ್ಣ ಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ನಿನ್ನ ದೇವರಾದ ಸರ್ವೇಶ್ವರನನ್ನು ಪ್ರೀತಿಸು’ (ಧರ್ಮೋಪದೇಶಕಾಂಡ 6:5) ಹಾಗೂ ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು’ (ಯಾಜಕಕಾಂಡ 19:18) ಈ ಎರಡು ಹಳೆಯ ಆಜ್ಞೆಗಳಿಗೆ ಯೇಸು ಅವರ ಕೊನೆಯ ಭೋಜನದ ಸಮಯದಲ್ಲಿ ಹೊಸ ರೂಪ ಕೊಡುತ್ತಾ ಹೊಸ ಪ್ರೀತಿಯ ಆಜ್ಞೆಯನ್ನು ನೀಡುತ್ತಾರೆ: ‘ಒಬ್ಬರನ್ನೊಬ್ಬರು ಪ್ರೀತಿಸಿರಿ. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿರಿ’ (ಯೊವಾನ್ನ 13:34). ಆದರೆ ಇಂದಿನ ಶುಭಸಂದೇಶದಲ್ಲಿ ‘ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು’ ಹಾಗೂ ‘ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು’ ಎಂಬ ನಿಯಮ ಪಾಲಿಸಬೇಡಿ. ಬದಲಾಗಿ ಶತ್ರುಗಳನ್ನು ಪ್ರೀತಿಸಿರಿ ಅವರಿಗಾಗಿ ಪ್ರಾರ್ಥಿಸಿ, ಇದರ ಮೂಲಕ ಸ್ವರ್ಗದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗುತ್ತೀರಿ ಎಂದು ಹೇಳಲಾಗಿದೆ.
ಪ್ರೀತಿಸುವವರನ್ನೇ ಪ್ರೀತಿಸಿದರೆ ಗೌರವಿಸುವವರನ್ನೇ ಗೌರವಿಸಿದರೆ ಅದರಲ್ಲೆನು ವಿಶೇಷ? ದ್ವೇಷ, ನಿಮ್ಮ ಹೃದಯವನ್ನು ವಿಷಗೊಳಿಸುತ್ತದೆ, ಪ್ರೀತಿ, ನಿಮ್ಮ ಹೃದಯವನ್ನು ಶುದ್ಧೀಕರಿಸುತ್ತದೆ. ಒಬ್ಬ ವ್ಯಕ್ತಿಯನ್ನು ದ್ವೇಷಿಸಿದರೆ ನಿಮ್ಮ ಶಕ್ತಿಯು ಕುಗ್ಗುತ್ತದೆ. ಆದರೆ ನೀವು ಪ್ರೀತಿಸಿದಾಗ ನೀವು ಬಹಳಷ್ಟು ಗಳಿಸುತ್ತೀರಿ. ಈ ಮೂಲಕ ಇಂದಿನ ಎರಡನೆಯ  ವಾಚ£ದಲ್ಲಿ ಸಂತ ಪೌಲರು ಹೇಳಿದ ಹಾಗೆ ನಮ್ಮ ದೇಹ, ದೇವರ ದೇಗುಲವಾಗುತ್ತದೆ ಮತ್ತು ನಮ್ಮ ಜೀವನದ ನಡೆನುಡಿಗಳ ಮೂಲಕ ಸ್ವರ್ಗದಲ್ಲಿರುವ ನಮ್ಮ ತಂದೆಯಾದ ದೇವರು ಪರಿಪೂರ್ಣರಾಗಿರುವಂತೆ ನಾವು ಸಹ ಪರಿಪೂರ್ಣರಾಗುತ್ತೇವೆ. 
-----------------------------
ಇಂದಿನ ಶುಭಸಂದೇಶದಲ್ಲಿ ಯೇಸು ಶತ್ರುಪ್ರೇಮವನ್ನು ಕುರಿತು ಬೋಧಿಸುತ್ತಿದ್ದಾರೆ. ಜಗತ್ತಿನ ಎಲ್ಲಾ ಧರ್ಮಗಳು ಪ್ರಾರ್ಥಿಸಲು ಕರೆ ನೀಡುತ್ತವೆ, ಆದರೆ ಕ್ರೈಸ್ತ ಧರ್ಮ ಶತ್ರುಗಳಿಗಾಗಿಯೂ ಪ್ರಾರ್ಥಿಸಲು ಬೋಧಿಸುತ್ತದೆ. ಯೇಸುವಿನ ಕಾಲದಲ್ಲಿ ನಿನ್ನ `ಶತ್ರುಗಳನ್ನು ದ್ವೇಷಿಸು’ ಎಂಬ ಘೋಷಣೆ ಯೆಹೂದ್ಯರಲ್ಲಿ ಸಾಮಾನ್ಯವಾಗಿತ್ತು. ಒಬ್ಬ ಯೆಹೂದ್ಯನಿಗೆ ಮತ್ತೊಬ್ಬ ಯೆಹೂದ್ಯನೇ ಆತನ ಸ್ನೇಹಿತ ಹಾಗು ನೆಂಟ. ಹಾಗಾಗಿ ಯೇಹೂದ್ಯರಲ್ಲದ ಅನ್ಯ ಧÀರ್ಮದವರನ್ನು ಅವರು ದ್ವೇಷಿಸುತ್ತಿದ್ದರು. ಇದನ್ನು ಗಮನಿಸಿದ ಯೇಸು ಅವರಿಗೆ ಪ್ರೀತಿಯ ಹಾಗೂ ದೇವರ ಸಾಮ್ರಾಜ್ಯದ ಮೌಲ್ಯಗಳ ಬಗ್ಗೆ ಬೋಧಿಸುತ್ತಿದ್ದಾರೆ. ನಿಮ್ಮ ಶತ್ರುಗಳನ್ನು ಪ್ರೀತಿಸಿರಿ, ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥನೆ ಮಾಡಿರಿ’’ ಎಂಬ ಮಾತನ್ನು ತಮ್ಮ ಜೀವನದಲ್ಲಿ ನಿರೂಪಿಸಿದರು. ಯೇಸು ತಮ್ಮ ಶತ್ರುಗಳ ರೋಗ ಗುಣಪಡಿಸಿದರು (ಲೂಕ 22:51) ಅವರಿಗಾಗಿ ಪ್ರಾರ್ಥಿಸಿದರು (ಲೂಕ 23:34) ಮತ್ತು ಅವರಿಗಾಗಿಯೇ ಪ್ರಾಣ ನೀಡಿದರು (ರೋಮ 5:10).
ಪ್ರೀತಿಗೆ ಮಿತಿ ಇರಬಾರದೆಂದು ಯೇಸುವಿನ ಹೆಬ್ಬಯಕೆ. ನಮ್ಮನ್ನು ದ್ವೇಷಿಸುವವರಿಗೆ, ಶಪಿಸುವವರಿಗೆ ನಮ್ಮ ಜೀವನ ದಿಗ್ಬ್ರಮೆ ಮೂಡಿಸಬೇಕು. ಯೇಸುವಿನ ಹಿಂಬಾಲಕರಿಗೆ ಯಾರು ಶತ್ರುಗಳಲ್ಲ, ಎಲ್ಲರು ಮಿತ್ರರಾಗಿರಬೇಕೆಂದು ಬಯಸುತ್ತಾರೆ. ಅನ್ಯರ ನಡುವೆ ಜೀವಿಸುವಾಗ ನಮ್ಮ ಜೀವನ ಇತರರಿಗೆ ಆದರ್ಶವಾಗಿರಬೇಕು.
---------------------

No comments:

Post a Comment