Saturday, 22 February 2020

ಸಾಧಾರಣ ಕಾಲದ ಏಳನೇ ಸೋಮವಾರ

ಫೆಬ್ರವರಿ 24, 2020 ಸೋಮವಾರ [ಹಸಿರು]
ಮೊದಲ ವಾಚನ: ಯಕೋಬ 3.13-18
ಕೀರ್ತನೆ 19:7, 8, 9, 14. ಶ್ಲೋಕ. 8
ಪ್ರಭುವಿನ ನಿಯಮ ನೀತಿ ಬದ್ಧ; ಮನಸ್ಸಿಗದು ಒಸಗೆ
ಶುಭಸಂದೇಶ: ಮಾರ್ಕ 9.14-29

-------------------------
ಮೊದಲ ವಾಚನ: ಯಕೋಬ 3.13-18
13 : ನಿಮ್ಮಲ್ಲಿ ಯಾರಾದರೂ ಜ್ಞಾನಿಯೂ ವಿವೇಕಿಯೂ ಆದವನು ಇದ್ದಾನೋ? ಅಂಥವನು ಜ್ಞಾನದ ಲಕ್ಷಣವಾಗಿರುವ ವಿನಯಶೀಲತೆಯನ್ನು ತನ್ನ ನಡೆನುಡಿಯಲ್ಲಿ ತೋರ್ಪಡಿಸಲಿ.
14 : ನಿಮ್ಮ ಹೃದಯದಲ್ಲಿ ಮರ್ಮಮತ್ಸರವೂ ಸ್ವಾರ್ಥಾಭಿಲಾಶೆಯೂ ತುಂಬಿರುವಾಗ ಜ್ಞಾನಿಗಳೆಂದು ಕೊಚ್ಚಿಕೊಳ್ಳಬೇಡಿ; ಸತ್ಯಕ್ಕೆ ವಿರುದ್ಧವಾಗಿ ಸುಳ್ಳಾಡಬೇಡಿ.
15 : ಅಂಥ ಜ್ಞಾನ ದೇವರಿಂದ ಬಂದ ಜ್ಞಾನವಲ್ಲ; ಅದು ಪ್ರಾಪಂಚಿಕವಾದುದು. ಪ್ರಾಕೃತವಾದುದು, ಪೈಶಾಚಿಕವಾದುದು.
16 : ಮರ್ಮ ಮತ್ಸರವೂ ಸ್ವಾರ್ಥಾಭಿಲಾಶೆಯೂ ಇರುವ ಕಡೆಗಳಲ್ಲೆಲ್ಲಾ ನಾನಾವಿಧವಾದ ಅಕ್ರಮಗಳೂ ದುಶ್ಚಟಗಳೂ ಇರುತ್ತವೆ.
17 : ದೇವರಿಂದ ಬರುವ ಜ್ಞಾನವಾದರೋ ಮೊಟ್ಟಮೊದಲನೆಯದಾಗಿ ಪವಿತ್ರವಾದುದು. ಅದು ಶಾಂತಿಸಮಾಧಾನ ಉಳ್ಳದ್ದು. ಸಹನೆ ಸಂಯಮವುಳ್ಳದ್ದು, ನ್ಯಾಯ ಸಮ್ಮತವಾದದ್ದು, ದಯೆದಾಕ್ಷಿಣ್ಯಗಳಿಂದಲೂ ಸತ್ಕಾರ್ಯಗಳಿಂದಲೂ ಫಲಭರಿತವಾದದ್ದು. ವಂಚನೆಯಾಗಲಿ, ಚಂಚಲತೆಯಾಗಲಿ ಅದರಲ್ಲಿ ಇರುವುದಿಲ್ಲ.
18 : ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ದೇವರೊಡನೆ ಸತ್ಸಂಬಂಧವೆಂಬ ಫಲವನ್ನು ಕೊಯ್ಯುತ್ತಾರೆ.
---------------------------
ಕೀರ್ತನೆ 19:7, 8, 9, 14. ಶ್ಲೋಕ. 8
ಪ್ರಭುವಿನ ನಿಯಮ ನೀತಿ ಬದ್ಧ; ಮನಸ್ಸಿಗದು ಒಸಗೆ
8 : ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು ಒಸಗೆ / ಪ್ರಭುವಿನ ಕಟ್ಟಳೆ ಪರಿಶುದ್ಧ; ಕಣ್ಣಿಗದು ದೀವಿಗೆ //
9 : ಪ್ರಭುವಿನ ಭೀತಿ ಪವಿತ್ರ; ಅದೆಂದಿಗೂ ಶಾಶ್ವತ / ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ ನ್ಯಾಯಯುತ //
10 : ಅಪೇಕ್ಷಣೀಯವಾದುವವು ಚಿನ್ನ ಅಪರಂಜಿಗಿಂತ / ಅತಿಮಧುರವಾದುವು ಅಪ್ಪಟ ಜೇನುತುಪ್ಪಕ್ಕಿಂತ //
11 : ಜಾಗೃತಗೊಳ್ಳುವನು ನಿನ್ನ ದಾಸನು ಅವುಗಳಿಂದ / ಸಂಭಾವಿತನಾಗುವನು ಅವುಗಳ ಪಾಲನೆಯಿಂದ //
12 : ತನ್ನ ತಪ್ಪನು ತಾನರಿತುಕೊಳ್ಳುವವನಾರಯ್ಯಾ / ಗುಪ್ತವಾದ ಪಾಪಗಳಿಂದೆನ್ನ ಮುಕ್ತಗೊಳಿಸಯ್ಯಾ //
13 : ಕಾಪಾಡೆನ್ನನು, ಬೇಕು ಬೇಕೆಂದು ಪಾಪಮಾಡದಂತೆ / ಕಾದಿಡು, ಅಂಥ ಪಾಪಕೆ ನಾ ದಾಸನಾಗದಂತೆ / ನಿರ್ದೋಷಿಯಾಗುವೆನು, ಆ ದ್ರೋಹಕ್ಕೊಳಗಾಗದಂತೆ //
14 : ನಿನಗೊಪ್ಪಿಗೆಯಾಗಲಿ ನನ್ನ ಬಾಯಮಾತು, ಹೃದಯಧ್ಯಾನ ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯ ಧಾಮ//
-------------------------
ಶುಭಸಂದೇಶ: ಮಾರ್ಕ 9.14-29
14 : ಅವರೆಲ್ಲರೂ ಹಿಂದಿರುಗಿ ಬಂದಾಗ ಉಳಿದ ಶಿಷ್ಯರ ಸುತ್ತಲೂ ಜನರು ದೊಡ್ಡ ಗುಂಪಾಗಿ ನೆರೆದಿರುವುದನ್ನು, ಧರ್ಮಶಾಸ್ತ್ರಿಗಳು ಇವರೊಡನೆ ವಾದಿಸುತ್ತಿರುವುದನ್ನು ಕಂಡರು.
15 : ನೆರೆದಿದ್ದ ಜನರು ಯೇಸುವನ್ನು ಕಂಡೊಡನೆ ಆಶ್ಚರ್ಯಪಟ್ಟು ಓಡಿಬಂದು, ಅವರಿಗೆ ನಮಸ್ಕರಿಸಿದರು.
16 : ಯೇಸುಸ್ವಾಮಿ, “ನಿಮ್ಮ ವಾಗ್ವಾದ ಏನು?” ಎಂದು ಕೇಳಿದರು.
17 : ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕರೇ, ನನ್ನ ಮಗನನ್ನು ತಮ್ಮ ಬಳಿಗೆಂದು ಕರೆತಂದೆ.
18 : ಅವನಿಗೆ ಒಂದು ಮೂಕದೆವ್ವ ಹಿಡಿದಿದೆ. ಅವನ ಮೇಲೆ ಅದು ಬಂದಾಗಲೆಲ್ಲ ಅವನನ್ನು ನೆಲಕ್ಕೆ ಅಪ್ಪಳಿಸುತ್ತದೆ. ಅವನು ನೊರೆಕಾರುತ್ತಾ ಹಲ್ಲು ಕಡಿದುಕೊಳ್ಳುತ್ತಾನೆ. ಆಗ ಅವನ ದೇಹವೆಲ್ಲಾ ಮರಗಟ್ಟಿದಂತಾಗುತ್ತದೆ. ಆ ದೆವ್ವವನ್ನು ಬಿಡಿಸಬೇಕೆಂದು ತಮ್ಮ ಶಿಷ್ಯರನ್ನು ಕೇಳಿಕೊಂಡೆ. ಆದರೆ, ಅದು ಅವರಿಂದಾಗಲಿಲ್ಲ,” ಎಂದನು.
19 : ಇದನ್ನು ಕೇಳಿ ಯೇಸು, “ಅಯ್ಯೋ, ವಿಶ್ವಾಸವಿಲ್ಲದ ಪೀಳಿಗೆಯೇ, ಇನ್ನೆಷ್ಟು ಕಾಲ ನಿಮ್ಮೊಂದಿಗಿರಲಿ! ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ ! ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ” ಎಂದರು.
20 : ಆಗ ಆ ಹುಡುಗನನ್ನು ಯೇಸುವಿನ ಬಳಿಗೆ ಕರೆತಂದರು. ಯೇಸುವನ್ನು ನೋಡಿದಾಕ್ಷಣ ಆ ದೆವ್ವ ಹುಡುಗನನ್ನು ನೆಲಕ್ಕೆ ಅಪ್ಪಳಿಸಿ ಒದ್ದಾಡಿಸಿತು. ಹುಡುಗ ಹೊರಳಾಡುತ್ತಾ ನೊರೆಕಾರಿದನು.
21 : ಯೇಸು, “ಇವನಿಗೆ ಎಷ್ಟು ದಿನದಿಂದ ಹೋಗಾಗುತ್ತಿದೆ?” ಎಂದು ಹುಡುಗನ ತಂದೆಯನ್ನು ವಿಚಾರಿಸಿದರು. ಅದಕ್ಕೆ ಅವನು “ಬಾಲ್ಯದಿಂದಲೇ ಹೀಗಾಗುತ್ತಿದೆ; ಇದಲ್ಲದೆ ದೆವ್ವವು ಇವನನ್ನು ಕೊಲ್ಲಬೇಕೆಂದು ಪದೇ ಪದೇ ಬೆಂಕಿಗೂ ನೀರಿಗೂ ದೂಡಿದೆ;
22 : ತಮ್ಮಿಂದ ಏನಾದರೂ ಸಾಧ್ಯವಾದರೆ, ನಮ್ಮ ಮೇಲೆ ದಯವಿಟ್ಟು ಸಹಾಯಮಾಡಿ,” ಎಂದು ಯೇಸುವನ್ನು ಬೇಡಿಕೊಂಡನು.
23 : ಅದಕ್ಕೆ ಯೇಸು, “ ‘ಸಾಧ್ಯವಾದರೆ’ ಎನ್ನುತ್ತೀಯಲ್ಲಾ? ದೇವರಲ್ಲಿ ವಿಶ್ವಾಸ ಇಡುವವನಿಗೆ ಎಲ್ಲವೂ ಸಾಧ್ಯ!” ಎಂದರು.
24 : ಆಗ ಆ ಬಾಲಕನ ತಂದೆ, “ನಾನು ವಿಶ್ವಾಸಿಸುತ್ತೇನೆ, ನನ್ನ ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ,” ಎಂದು ಯೇಸುವಿಗೆ ಮೊರೆಯಿಟ್ಟನು.
25 : ಜನಸಂದಣಿ ಬೆಳೆಯುತ್ತಿರುವುದನ್ನು ಕಂಡ ಯೇಸು, ಆ ದೆವ್ವವನ್ನು ಗದರಿಸಿ, “ಎಲೈ, ಕಿವುಡು ಮೂಕ ದೆವ್ವವೇ, ಇವನನ್ನು ಬಿಟ್ಟುತೊಲಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಿನಗೆ ಆಜ್ಞಾಪಿಸುತ್ತೇನೆ,” ಎಂದರು.
26 : ದೆವ್ವವು ಚೀರುತ್ತಾ, ಹುಡುಗನನ್ನು ವಿಲವಿಲನೆ ಒದ್ದಾಡಿಸಿ, ಕೊನೆಗೆ ಬಿಟ್ಟುಹೋಯಿತು. ಹುಡುಗನು ಶವದಂತಾದನು. ಅಲ್ಲಿದ್ದವರಲ್ಲಿ ಅನೇಕರು ‘ಹುಡುಗ ಸತ್ತುಹೋದ,’ ಎಂದುಕೊಂಡರು.
27 : ಆದರೆ ಯೇಸು ಅವನ ಕೈಹಿಡಿದು ಎತ್ತಲು ಅವನು ಎದ್ದು ನಿಂತನು.
28 : ಅಂದು ಯೇಸುಸ್ವಾಮಿ ಮನೆಗೆ ಬಂದಾಗ, ಶಿಷ್ಯರು ಪ್ರತ್ಯೇಕವಾಗಿ ಅವರ ಬಳಿಗೆ ಬಂದು, “ಆ ದೆವ್ವವನ್ನು ಹೊರಗಟ್ಟಲು ನಮ್ಮಿಂದೇಕೆ ಆಗಲಿಲ್ಲ?” ಎಂದು ಕೇಳಿದರು.
29 : ಅದಕ್ಕೆ ಯೇಸು, “ಈ ಬಗೆಯ ದೆವ್ವವನ್ನು ಹೊರಗಟ್ಟಲು ಪ್ರಾರ್ಥನೆಯೇ ಹೊರತು ಬೇರೆ ಮಾರ್ಗವಿಲ್ಲ,” ಎಂದರು.
-------------------------
ಚಿಂತನೆ
ಸೈತಾನನ್ನು ಜಯಿಸಲು ಪ್ರಾರ್ಥನೆಯಿಂದ ಸಾಧ್ಯ 

ದೆವ್ವ ಪೀಡಿತ ವ್ಯಕ್ತಿಯನ್ನು ಗುಣಪಡಿಸುವ ಮೂಲಕ ಯೇಸು ಎರಡು ಆಂಶಗಳನ್ನು ನಮಗೆ ತಿಳಿಯಪಡಿಸುತ್ತಾರೆ. ಮೊದಲನೆಯದಾಗಿ, ದೇವರನ್ನು ವಿಶ್ವಾಸಿಸಿದರೆ ಸರ್ವವನ್ನು ಸಾಧಿಸಬಹುದು. ಎರಡನೆಯದಾಗಿ, ಪ್ರಾರ್ಥನೆಯಿಲ್ಲದೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ವಿಶ್ವಾಸದಿಂದ ಪ್ರಾರ್ಥಿಸಿದರೆ ಎಲ್ಲವೂ ಸಾಧ್ಯ. ಇಡೀ ಘಟನೆಯು ಹೇಗೆ ಸೈತಾನನ ಶಕ್ತಿಯು ಒಬ್ಬ ವ್ಯಕ್ತಿಯನ್ನು ಹಿಂಸಿಸಿ, ಪೀಡಿಸುತ್ತದೆ ಮತ್ತು ದೇವರ ಶಕ್ತಿಯು ಹೇಗೆ ಸೈತಾನನ ಮೇಲೆ ಜಯಗಳಿಸುತ್ತದೆ ಎಂಬುದನ್ನು ತೋರ್ಪಡಿಸುತ್ತಿದೆ. ಪ್ರಾರ್ಥನೆಯಿಂದ ಸೈತಾನನ್ನು ಜಯಿಸಲು ಸಾಧ್ಯ ಎಂಬ ಅಂಶವನ್ನು ಯೇಸು ತಮ್ಮ ಶಿಷ್ಯರಿಗೆ ಮನದಟ್ಟು ಮಾಡುತ್ತಾರೆ.
ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment