Monday, 17 February 2020

ಸಾಧಾರಣ ಕಾಲದ ಆರನೇ ಗುರುವಾರ

20 ಫೆಬ್ರವರಿ 2೦20
ಗುರುವಾರ / ಹಸಿರು / ಸಾಧಾರಣ ಕಾಲದ ಆರನೇ ವಾರ 
1ನೇ ವಾಚನ - ಯಕೋಬ 2:1-9
ಕೀರ್ತನೆ - 34:2-3,4-5,5-6
ಶುಭಸಂದೇಶ - ಮಾರ್ಕ8: 27-33 
-------------------
1ನೇ ವಾಚನ - ಯಕೋಬ 2:1-9
1 : ನನ್ನ ಸಹೋದರರೇ, ಮಹಿಮಾನ್ವಿತ ಪ್ರಭು ಯೇಸುಕ್ರಿಸ್ತರಲ್ಲಿ ವಿಶ್ವಾಸವಿಟ್ಟಿರುವ ನೀವು ಪಕ್ಷಪಾತ ಮಾಡಲೇಬಾರದು.
2 : ಉದಾಹರಣೆಗೆ: ಇಬ್ಬರು ನಿಮ್ಮ ಪ್ರಾರ್ಥನಾಲಯಕ್ಕೆ ಬಂದರೆಂದು ಇಟ್ಟುಕೊಳ್ಳಿ. ಅವರಲ್ಲಿ ಒಬ್ಬನು ಚಿನ್ನದುಂಗುರವನ್ನು ತೊಟ್ಟು, ಸೊಗಸಾದ ಉಡುಪನ್ನು ಧರಿಸಿದವನು. ಮತ್ತೊಬ್ಬನು ಹರಕು ಬಟ್ಟೆಯನ್ನು ಉಟ್ಟ ಬಡವನು.
3 : ಆಗ, ನೀವು ಸೊಗಸಾದ ಉಡುಪನ್ನು ಧರಿಸಿದವನಿಗೆ ಗೌರವದಿಂದ, “ಬನ್ನಿ ಸ್ವಾವಿೂ ಬನ್ನಿ, ದಯವಿಟ್ಟು ಈ ಪೀಠವನ್ನು ಅಲಂಕರಿಸಿ,” ಎನ್ನುತ್ತೀರಿ. ಬಡವನಿಗೆ “ನೀನು ಅಲ್ಲಿಯೇ ನಿಂತುಕೋ, ಇಲ್ಲವೇ ಕೆಳಗೆ, ನನ್ನ ಕಾಲ ಬಳಿ ಕುಳಿತುಕೋ,” ಎನ್ನುತ್ತೀರಿ. ಹೀಗಿರಲು
4 : ನೀವು ನಿಮ್ಮಲ್ಲೇ ಭೇದಭಾವ ಮಾಡುತ್ತೀರಿ; ಅಲ್ಲದೆ ನೀವು ಮಾಡುವ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ.
5 : ನನ್ನ ಪ್ರಿಯ ಸಹೋದರರೇ, ಪ್ರಪಂಚದ ದೃಷ್ಟಿಗೆ ಬಡವರಾಗಿ ಕಾಣುವವರನ್ನು ವಿಶ್ವಾಸದಲ್ಲಿ ಸಿರಿವಂತರನ್ನಾಗಿಸಲು ದೇವರು ಆರಿಸಿಕೊಳ್ಳಲಿಲ್ಲವೇ? ತಮ್ಮನ್ನು ಪ್ರೀತಿಸುವವರು ಸ್ವರ್ಗಸಾಮ್ರಾಜ್ಯಕ್ಕೆ ಬಾಧ್ಯಸ್ಥರೆಂದು ದೇವರೇ ವಾಗ್ದಾನ ಮಾಡಿಲ್ಲವೇ?
6 : ಹೀಗಿದ್ದರೂ ನೀವು ಬಡವನನ್ನು ಅವಮಾನಕ್ಕೆ ಈಡುಮಾಡಿದಿರಿ. ನಿಮ್ಮನ್ನು ತುಳಿದು ಹಿಂಸಿಸುವವರು ಮತ್ತು ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯುವವರು ಸಿರಿವಂತರೇ ಅಲ್ಲವೇ?
7 : ನೀವು ಯಾರಿಗೆ ಶರಣರಾಗಿದ್ದೀರೋ ಅವರ ಶ್ರೇಷ್ಠ ನಾಮವನ್ನು ದೂಷಿಸುವವರೂ ಸಿರಿವಂತರೇ ಅಲ್ಲವೇ?
8 : ‘ನಿನ್ನನ್ನು ನೀನು ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನು ಪ್ರೀತಿಸು’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಈ ರಾಜಾಜ್ಞೆಯನ್ನು ಕೈಗೊಂಡು ನಡೆಯುತ್ತಿದ್ದರೆ ಅದು ಒಳ್ಳೆಯದು.
9 : ಅದನ್ನು ಬಿಟ್ಟು ಪಕ್ಷಪಾತ ಮಾಡಿದರೆ ನೀವು ಪಾಪ ಮಾಡುತ್ತೀರಿ ಮತ್ತು ಧರ್ಮಶಾಸ್ತ್ರ ನಿಮ್ಮನ್ನು ಅಪರಾಧಿಗಳೆಂದು ನಿರ್ಣಯಿಸುತ್ತದೆ.
-------------------
ಕೀರ್ತನೆ - 34:2-3,4-5,5-6
1 : ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು / ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು //
2 : ಪ್ರಭುವಿನಲ್ಲಿದೆ ನನ್ನ ಮನದಭಿಮಾನ / ದೀನರಿದನು ಕೇಳಿ, ಪಡೆಯಲಿ ಸುಮ್ಮಾನ //
3 : ಬನ್ನಿ, ಕೊಂಡಾಡುವ ಪ್ರಭು ದೇವನನು / ಘನಪಡಿಸೋಣ ಅವನ ಶ್ರೀನಾಮವನು //
4 : ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು / ಭಯಭೀತಿಯಿಂದೆನ್ನನು ಮುಕ್ತ ನಾಗಿಸಿಹನು //
5 : ಆತನತ್ತ ತಿರುಗಿದ ಮುಖ ಅರಳುವುದು / ಲಜ್ಜೆಯಿಂದೆಂದಿಗು ಕುಂದಿಹೋಗದು //
6 : ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು / ಸರ್ವಾಪತ್ತಿನಿಂದವನು ಮುಕ್ತಗೊಂಡನು //
7 : ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು / ಕಾಯುವನು ಪ್ರಭುವಿನ ದೂತನೆ ಬಂದಿಳಿದು //
--------------------
ಶುಭಸಂದೇಶ - ಮಾರ್ಕ8: 27-33 
27 : ಯೇಸುಸ್ವಾಮಿ ತಮ್ಮ ಶಿಷ್ಯರ ಸಂಗಡ ಫಿಲಿಪ್ಪನ ಸೆಜರೇಯ ಎಂಬ ಪಟ್ಟಣದ ಪಕ್ಕದಲ್ಲಿರುವ ಹಳ್ಳಿಗಳಿಗೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ, “ಜನರು ನನ್ನನ್ನು ಯಾರೆಂದು ಹೇಳುತ್ತಾರೆ?” ಎಂದು ಶಿಷ್ಯರನ್ನು ಕೇಳಿದರು.
28 : ಅದಕ್ಕೆ ಶಿಷ್ಯರು, “ಕೆಲವರು ತಮ್ಮನ್ನು ‘ಸ್ನಾನಿಕ ಯೊವಾನ್ನ’ ಎನ್ನುತ್ತಾರೆ. ಇನ್ನು ಕೆಲವರು ‘ಎಲೀಯನು,’ ಮತ್ತೆ ಕೆಲವರು ಪ್ರವಾದಿಗಳಲ್ಲಿ ತಾವೂ ಒಬ್ಬರು ಎನ್ನುತ್ತಾರೆ,” ಎಂದರು.
29 : ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ” ಎಂದು ಉತ್ತರವಿತ್ತನು.
30 : ಆಗ ಯೇಸು, “ಈ ವಿಷಯವನ್ನು ಯಾರಿಗೂ ತಿಳಿಸಬೇಡಿ,” ಎಂದು ತಮ್ಮ ಶಿಷ್ಯರಿಗೆ ಕಟ್ಟಪ್ಪಣೆ ಮಾಡಿದರು. ಯೇಸುವಿನ ಮರಣ ಮತ್ತು ಪುನರುತ್ಥಾನದ ಪ್ರಕಟಣೆ (ಮತ್ತಾ. 16.21-28; ಲೂಕ 9.22-27)
31 : ಈ ಘಟನೆಯ ಬಳಿಕ ಯೇಸುಸ್ವಾಮಿ, “ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾಪ್ರಮುಖರಿಂದಲೂ ಪ್ರಧಾನ ಯಾಜಕರಿಂದಲೂ ಧರ್ಮಶಾಸ್ತ್ರಿ ಗಳಿಂದಲೂ ಆತನು ತಿರಸ್ಕøತನಾಗಿ ಕೊಲ್ಲಲ್ಪಡುವನು; ಆದರೆ ಮೂರನೇ ದಿನ ಪುನರುತ್ಥಾನ ಹೊಂದುವನು,” ಎಂದು ತಮ್ಮ ಶಿಷ್ಯರಿಗೆ ಮುಚ್ಚು ಮರೆಯಿಲ್ಲದೆ ಬೋಧಿಸಲಾರಂಭಿಸಿದರು.
32 : ಇದನ್ನು ಕೇಳಲಾಗದೇ ಪೇತ್ರನು ಅವರನ್ನು ಪ್ರತ್ಯೇಕವಾಗಿ ಕರೆದು, “ತಾವು ಹೀಗೆಲ್ಲಾ ಹೇಳಬಾರದು,” ಎಂದು ಪ್ರತಿಭಟಿಸಿದನು.
33 : ಆಗ ಯೇಸು ಹಿಂದಕ್ಕೆ ತಿರುಗಿ, ತಮ್ಮ ಶಿಷ್ಯರನ್ನು ನೋಡಿ, ಪೇತ್ರನನ್ನು ಗದರಿಸುತ್ತಾ, “ಸೈತಾನನೇ, ತೊಲಗು ಇಲ್ಲಿಂದ; ನಿನ್ನ ಈ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ,” ಎಂದರು
-----------------------
ಚಿಂತನೆ
ಕ್ರಿಸ್ತನ ಯಾತನೆ ಮತ್ತು ಮರಣದ ಮುನ್ಸೂಚನೆ
ಫಿಲಿಪ್ಪಿನ ಸೆಜೆರೇಯ ಪ್ರಾಂತ್ಯವು ಗಲಿಲೇಯದಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ. ಈ ಪಟ್ಟಣವನ್ನು ಮೊದಲು ಪಾನಿಯಸ್ ಎಂದು ಕರೆಯಲಾಗುತ್ತಿತ್ತು. ಈ ಪಟ್ಟಣದಲ್ಲಿ `ಪಾನ್' ಗುಡಿಯನ್ನು ನಿರ್ಮಿಸಲಾಗಿತ್ತು. ಫಿಲಿಪ್ಪನು ಸಾಮಂತ ರಾಜನಾಗಿದ್ದಾಗ, ಪಾಳು ಬೀಳುತ್ತಿದ್ದ ಈ ನಗರವನ್ನು ದುರಸ್ತಿಪಡಿಸಿ ರೋಮನ್ ಚಕ್ರವರ್ತಿಯ ಸೆಜರಿಯನ ಸವಿನೆನಪಿಗೆ `ಸೆಜರೇಯ' ಎಂದು ಹೆಸರಿಡುತ್ತಾನೆ. ಸೀಜರ್ಗೆ ಕೃತಜ್ಞತೆ ತೋರಿಸುವ ಸಲುವಾಗಿ ಸುಂದರ ದೇವಾಲಯವನ್ನು ಕಟ್ಟಿಸುತ್ತಾನೆ. ಹಾಗಾಗಿ ಅದು ಅನ್ಯ ದೇವರನ್ನು ಪೂಜಿಸುತ್ತಿದ್ದ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಇಂದಿನ ಶುಭಸಂದೇಶವನ್ನು ಅರ್ಥಮಾಡಿಕೊಳ್ಳಬೇಕಿದೆ. ಮೊದಲ ಬಾರಿಗೆ ಕ್ರಿಸ್ತ ಇಂದಿನ ಶುಭಸಂದೇಶದಲ್ಲಿ ತಮ್ಮ ಯಾತನೆ ಮತ್ತು ಮರಣವನ್ನು ಮುಂತಿಳಿಸುತ್ತಾರೆ. ಅನ್ಯ ದೇವರನ್ನು ಆರಾಧಿಸುತ್ತಿದ್ದ ಫಿಲಿಪ್ಪನ ಸೆಜೆರೇಯದಲ್ಲಿ ``ಅಭಿಷಿಕ್ತರಾದ ಲೋಕೋದ್ಧಾರಕ ತಾವೇ'' ಎಂದು ಪ್ರಕಟಿಸುತ್ತಾರೆ.
------------
© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment