Saturday, 22 February 2020

ವಿಭೂತಿ ಬುಧವಾರ

ಫೆಬ್ರವರಿ 26, 2020 ಬುಧವಾರ [ನೇರಳೆ]
ವಿಭೂತಿ ಬುಧವಾರ
ಮೊದಲ ವಾಚನ: ಯೊವೇಲ 2.12-18
ಕೀರ್ತನೆ 51:1-2, 3-4, 10-11, 12, 15 
ಕೃಪಾಳು ದೇವಾ ಕರುಣಿಸೆಮ್ಮನು, 
ನಿಮ್ಮ ವಿರುದ್ಧ ನಾವು ಪಾಪ ಮಾಡಿದ್ದೇವೆ
ಎರಡನೇ ವಾಚನ: 2 ಕೊರಿಂಥಿಯರಿಗೆ 5.20 - 6.2
ಶುಭಸಂದೇಶ: ಮತ್ತಾಯ 6.1-6, 16-18
-----------------------
ಮೊದಲ ವಾಚನ: ಯೊವೇಲ 2.12-18
12 : ಸರ್ವೇಶ್ವರ ಇಂತೆನ್ನುತ್ತಾರೆ: “ಈಗಲಾದರೂ ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಳ್ಳಿ. ಉಪವಾಸ ಕೈಗೊಂಡು, ಅತ್ತು ಗೋಳಾಡಿ.”
13 : ನಿಮ್ಮ ಉಡುಪುಗಳನ್ನು ಅಲ್ಲ, ಹೃದಯಗಳನ್ನು ಸೀಳಿರಿ: ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಕಡೆಗೆ ತಿರುಗಿಕೊಳ್ಳಿ; ಅವರು ದಯಾವಂತರು, ಕರುಣಾಮೂರ್ತಿ, ಸಹನಶೀಲ, ಪ್ರೀತಿಮಯ. ವಿಧಿಸಬೇಕಾಗಿದ್ದ ದಂಡನೆಗಾಗಿ ಮನನೊಂದುಕೊಳ್ಳುವಂಥವರು.
14 : ಒಂದು ವೇಳೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿ ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಅವರಿಗೆ ಅರ್ಪಿಸಲು ಬೇಕಾದ ನೈವೇದ್ಯಗಳನ್ನು ಧಾರಾಳವಾಗಿ ಅನುಗ್ರಹಿಸಬಹುದು.
15 : ಸಿಯೋನ್ ಶಿಖರದ ಮೇಲೆ ನಿಂತು ಕೊಂಬೂದಿರಿ. ಉಪವಾಸ ದಿನವನ್ನು ಘೋಷಿಸಿರಿ. ಮಹಾಸಭೆಯನ್ನು ಕರೆಯಿರಿ.
16 : ಜನರನ್ನು ಒಟ್ಟುಗೂಡಿಸಿರಿ; ಸಭೆಯನ್ನು ಏರ್ಪಡಿಸಿರಿ; ವೃದ್ಧರನ್ನು, ಮಕ್ಕಳನ್ನು, ಮೊಲೆಗೂಸುಗಳನ್ನು ಕರೆತನ್ನಿರಿ. ವಧೂವರರು ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ.

17 : ಸರ್ವೇಶ್ವರಸ್ವಾಮಿಯ ಪರಿಚಾರಕರಾದ ಯಾಜಕರು ದೇವಾಲಯದ ದ್ವಾರ ಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಶೋಕತಪ್ತರಾಗಿ ಹೀಗೆಂದು ಪ್ರಾರ್ಥಿಸಲಿ: “ಕರುಣೆ ತೋರು, ಹೇ ಸರ್ವೇಶ್ವರಾ, ನಿನ್ನ ಪ್ರಜೆಗೆ ನಿಂದೆಯಾಗದಿರಲಿ ನಿನ್ನ ಸ್ವಂತ ಜನತೆಗೆ ಗುರಿಯಾಗದಿರಲಿ ಅವರು ಅನ್ಯರ ತಾತ್ಸಾರಕೆ ‘ನಿಮ್ಮ ದೇವನೆಲ್ಲಿ?’ ಎಂಬ ಪರಕೀಯರ ಹೀಯಾಳಿಕೆಗೆ”
----------------------
ಕೀರ್ತನೆ 51:3-4, 5-6, 12-13, 14,17
ಕೃಪಾಳು ದೇವಾ ಕರುಣಿಸೆಮ್ಮನು, 
ನಿಮ್ಮ ವಿರುದ್ಧ ನಾವು ಪಾಪ ಮಾಡಿದ್ದೇವೆ
3 : ಒಪ್ಪಿಕೊಂಡೆನಿದೋ, ನಾನೇ ಅಪರಾಧಿ / ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ //
4 : ಹೌದು ದೇವಾ, ನಿನಗೆ ದ್ರೋಹವೆಸಗಿದೆ / ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ // ನಿನ್ನ ನಿರ್ಣಯವು ನ್ಯಾಯಯುತ / ನೀ ನೀಡುವ ತೀರ್ಪು ನಿರ್ಲಿಪ್ತ //
5 : ನಾ ಜನಿಸಿದೆ ಪಾಪಪಂಕದಲೆ / ದ್ರೋಹಿ ನಾ ಮಾತೃಗರ್ಭದಿಂದಲೆ //
6 : ಅಂತರಂಗ ಶುದ್ಧಿಯನು ನೀ ಬಯಸುತಿ / ಅಂತರ್ಯ ಜ್ಞಾನವನು ಉದಯಗೊಳಿಸುತಿ //
12 : ಜೀವೋದ್ಧಾರವನು ಮರಳಿ ಸವಿಯುವಂತೆ ಮಾಡು / ವಿಧೇಯನಾಗಿ ನಡೆವ ಸಿದ್ಧ ಮನಸ್ಸನು ನೀಡು //
13 : ಬೋಧಿಸುವೆನಾಗ ನಿನ್ನ ಮಾರ್ಗವನು ದುರುಳರಿಗೆ / ತಿರುಗಿಕೊಳ್ವರಾಗ ದ್ರೋಹಿಗಳು ನಿನ್ನ ಕಡೆಗೆ //
14 : ತಪ್ಪಿಸೆನ್ನನು ಸ್ವಾಮಿ ದೇವಾ, ರಕ್ತಾಪರಾಧದಿಂದ / ನಿನ್ನ ಸತ್ಯಸಂಧತೆಯನು ಸಾರುವೆ ಮುಕ್ತ ಕಂಠದಿಂದ //
17 : ಮುರಿದ ಮನವೇ ದೇವನೊಲಿವ ಯಜ್ಞವು / ನೊಂದು ಬೆಂದ ಮನವನಾತ ಒಲ್ಲೆಯೆನನು //
----------------------------
ಎರಡನೇ ವಾಚನ: 2 ಕೊರಿಂಥಿಯರಿಗೆ 5.20 - 6.2
20 : ಆದ್ದರಿಂದಲೇ ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ.
21 : ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು.
1 : ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೇನೆಂದರೆ: ದೇವರಿಂದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ
2 : “ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು; ಉದ್ಧಾರ ದಿನದಂದು ನಿನಗೆ ನೆರವಾದೆನು,” ಎಂದಿದ್ದಾರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ. ಇದೇ ಆ ಉದ್ಧಾರದ ಸುದಿನ.
--------------------
ಶುಭಸಂದೇಶ: ಮತ್ತಾಯ 6.1-6, 16-18
1 : "ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು.
2 : ಅಂತೆಯೇ, ನೀನು ದಾನಧರ್ಮ ಮಾಡುವಾಗ ತುತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ.
3 : ಆದರೆ ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ.
4 : ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು."
5 : "ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ.
6 : ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು."
16 : "ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ.
17 : ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳೆದುಕೊ, ತಲೆಬಾಚಿಕೊ.
18 : ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿ ಇರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು."
-------------------------
ಚಿಂತನೆ
ನಿಮ್ಮ ಉಡುಪುಗಳನ್ನಲ್ಲ, ಹೃದಯಗಳನ್ನು ಸೀಳಿರಿ
ತಪಸ್ಸು ಕಾಲದ ಪ್ರಾರಂಭವು ಆಧ್ಯಾತ್ಮಿಕ ಪಯಣದಲ್ಲಿ ಬರುವ ಅತಿ ಮುಖ್ಯವಾದ ಕಾಲಾರಂಭವಾಗಿದೆ. ಮೊದಲನೆಯ ವಾಚನವು ತಿಳಿಯಪಡಿಸಿದಂತೆ ಹೃದಯಗಳನ್ನು ಸೀಳಿ ಅಲ್ಲಿರುವ ಕಲ್ಮಷವನ್ನು ಹೊರಗಡೆ ಸುರಿದು, ನಿರ್ಮಲವಾದ ಹೃದಯವನ್ನು ಧರಿಸಿಕೊಂಡು ಮುನ್ನಡೆದಾಗ ಆಗುವ ಅನುಭವವೇ ತಪಸ್ಸು. 
ವಿಭೂತಿಯು ಪಶ್ಚಾತ್ತಾಪದ ಸಂಕೇತವಾಗಿದೆ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಮರಣವನ್ನಪ್ಪಲೇಬೇಕು. ಹಾಗೆಯೇ ತಪ್ಪು ಮಾಡಿದ ಪ್ರತಿಯೊಬ್ಬ ವ್ಯಕ್ತಿಯೂ ಪಶ್ಚಾತ್ತಾಪವನ್ನು ಪಡಲೇಬೇಕು. ಇದರ ಸಂಕೇತವಾಗಿ ನಾವಿಂದು ನಮ್ಮೆಲ್ಲರ ಹಣೆಗಳ ಮೇಲೆ ವಿಭೂತಿ(ಬೂದಿ)ಯನ್ನು ಹಚ್ಚುತ್ತೇವೆ. ಇದು ಕೇವಲ ಒಂದು ಬಾಹ್ಯ ಸಂಕೇತವಾಗಿರದೆ, ಆತ್ಮಿಕ ಸಂಕೇತವಾಗಬೇಕು. 
ಶುಭಸಂದೇಶದಲ್ಲಿ ಪ್ರಭು ಕ್ರಿಸ್ತರು ಕಲಿಸಿದ ಪ್ರಾರ್ಥನೆಯ ಮಾದರಿಯೂ ಎಲ್ಲರ ಜೀವನಕ್ಕೆ ಅನ್ವಯಿಸುವಂಥದ್ದಾಗಿದೆ. ಹಾಗೆಯೇ ಪ್ರತಿಯೊಬ್ಬರ ಪ್ರಾರ್ಥನೆ ಜೀವನ ಯಾವ ದಿಕ್ಕಿನಲ್ಲಿ, ಯಾವ ರೀತಿಯಾಗಿ ಯಾವ ವಿಧದಲ್ಲಿದೆ ಎಂಬುದನ್ನು ಈ ತಪಸ್ಸು ಕಾಲದಲ್ಲಿ ಅವಲೋಕಿಸಿ ನೋಡುವುದು ಅಗತ್ಯ. 
ತಪಸ್ಸು ಕಾಲವು ಎಲ್ಲಾ ಜನರ ವೈಯಕ್ತಿಕ ಬದುಕಿನ ಹಿನ್ನೋಟವನ್ನು ಅವಲೋಕಿಸಿ ಪಶ್ಚಾತ್ತಾಪ ಬದುಕಿನ ಮುನ್ನೋಟಕ್ಕೆ ವೇದಿಕೆಯಾಗಿ ಮಾರ್ಪಡಿಸಿಕೊಂಡು ಜೀವಿಸುವ ಸಮಯವಾಗಿದೆ. ಈ ಕೃಪಾಶೀರ್ವಾದದ ಕಾಲದಲ್ಲಿ ಕಾಲಹರಣ ಮಾಡದೆ ಪಶ್ಚಾತ್ತಾಪಪಟ್ಟು ಪ್ರಭುವಿನಿಂದ ನಿಜವಾದ ಶಾಂತಿ, ಸಮಾಧಾನ, ಪ್ರೀತಿ, ಅನ್ಯೋನ್ಯತೆಯನ್ನು ಪಡೆದುಕೊಂಡು ಜೀವಿಸಲು ಪ್ರಯತ್ನಿಸೋಣ.
-----------------------
© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ


No comments:

Post a Comment