ಫೆಬ್ರವರಿ 29, 2020 ಶನಿವಾರ [ನೇರಳೆ]
ಮೊದಲ ವಾಚನ: ಯೆಶಾಯ 58.9-14
ಕೀರ್ತನೆ 86:1-2, 3-4, 5-6. ಶ್ಲೋಕ.11
ನಿನ್ನ ಸತ್ಯ ಪಥದಲಿ ನಾ ನಡೆವಂತೆ
ಬೋಧಿಸೆನಗೆ ಪ್ರಭೂ, ನಿನ್ನ ಮಾರ್ಗವನು
ಶುಭಸಂದೇಶ: ಲೂಕ 5.27-32
ಮೊದಲ ವಾಚನ: ಯೆಶಾಯ 58.9-14
ಕೀರ್ತನೆ 86:1-2, 3-4, 5-6. ಶ್ಲೋಕ.11
ನಿನ್ನ ಸತ್ಯ ಪಥದಲಿ ನಾ ನಡೆವಂತೆ
ಬೋಧಿಸೆನಗೆ ಪ್ರಭೂ, ನಿನ್ನ ಮಾರ್ಗವನು
ಶುಭಸಂದೇಶ: ಲೂಕ 5.27-32
--------------------
ಮೊದಲ ವಾಚನ: ಯೆಶಾಯ 58.9-14
9 : ಆಗ ನೀವು ಪ್ರಾರ್ಥಿಸಿದರೆ, ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ ‘ಇಗೋ ಆಲಿಸುತ್ತಿದ್ದೇನೆ’ ಎನ್ನುವರು. ನೀವು ದಬ್ಬಾಳಿಕೆ ನಡೆಸುವುದನ್ನೂ ಇತರರನ್ನು ಜರೆಯುವುದನ್ನೂ ಕೇಡನ್ನು ನುಡಿಯುವುದನ್ನೂ ನಿಮ್ಮ ನಡುವೆಯಿಂದ ತೊಲಗಿಸಿದರೆ
10 : ಹಾಗೂ ಹಸಿದವರಿಗೆ ಜೀವನಾಂಶವನ್ನೂ ಬಡವರಿಗೆ ಅಗತ್ಯವಾದುದನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು; ಅಂಧಕಾರ ನೀಗಿ ಮಧ್ಯಾಹ್ನವಾಗುವುದು.
11 : ಸರ್ವೇಶ್ವರಸ್ವಾಮಿ ನಿಮ್ಮನ್ನು ನಿರಂತರವಾಗಿ ಮುನ್ನಡೆಸುವರು; ಮರುಭೂಮಿಯಲ್ಲೂ ನಿಮಗೆ ಮನಃತೃಪ್ತಿಯನ್ನು ನೀಡುವರು; ನಿಮ್ಮ ಎಲುಬುಗಳನ್ನು ಬಲಪಡಿಸುವರು; ನೀರೆರೆದ ತೋಟದಂತೆಯೂ ಬತ್ತಿಹೋಗದ ಬುಗ್ಗೆಯಂತೆಯೂ ನೀವು ಇರುವಿರಿ.
12 : ಪುರಾತನಕಾಲದ ಪಾಳುಬಿದ್ದ ಮನೆಗಳನ್ನು ನಿಮ್ಮವರು ಮರಳಿ ಕಟ್ಟುವರು. ತಲತಲಾಂತರಗಳಿಂದ ಪಾಳುಬಿದ್ದಿರುವ ತಳಹದಿಗಳ ಮೇಲೆ ಕಟ್ಟಡಗಳನ್ನು ನೀವು ನಿರ್ಮಿಸುವಿರಿ. ‘ಬಿದ್ದ ಗೋಡೆಯನ್ನು ಎಬ್ಬಿಸಿದ ರಾಷ್ಟ್ರ, ಹಳೆಯ ದಾರಿಗಳನ್ನು ಸರಾಗಮಾಡಿದ ರಾಷ್ಟ್ರ’ ಎಂಬ ಬಿರುದು ನಿಮಗೆ ಬರುವುದು.” ಸಬ್ಬತ್‍ದಿನದ ಸದಾಚರಣೆ
13 : “ನೀವು ಸಬ್ಬತ್‍ದಿನವನ್ನು ತಾತ್ಸಾರ ಮಾಡದೆ, ಆ ನನ್ನ ಪರಿಶುದ್ಧ ದಿನದಲ್ಲಿ ನಿಮ್ಮ ದೈನಂದಿನ ವ್ಯವಹಾರವನ್ನು ನಡೆಸದೆ, ಸ್ವೇಚ್ಛೆಯಾಗಿ ವರ್ತಿಸದೆ, ಸ್ವಕಾರ್ಯದಲ್ಲೇ ನಿರತರಾಗದೆ, ಹರಟೆಮಾತುಗಳಲ್ಲಿ ಕಾಲಕಳೆಯದೆ, ಸರ್ವೇಶ್ವರಸ್ವಾಮಿಯ ಸಬ್ಬತ್‍ದಿನ ಪರಿಶುದ್ಧವಾದುದು, ಸಂತೋಷಕರವಾದುದು, ಮಾನ್ಯತೆಗೆ ಅರ್ಹವಾದುದು ಎಂದು ಸನ್ಮಾನಿಸಿದ್ದೇ ಆದರೆ
14 : ನೀವು ಸರ್ವೇಶ್ವರಸ್ವಾಮಿಯಾದ ನನ್ನ ಆನಂದದಲ್ಲಿ ಭಾಗಿಗಳಾಗುವಿರಿ; ನಾನು ನಿಮ್ಮನ್ನು ಅನ್ನತಸ್ಥಾನಕ್ಕೆ ಏರಿಸುವೆನು. ನಿಮ್ಮ ಪಿತೃ ಯಕೋಬನ ಸೊತ್ತನ್ನು ನೀವು ನಿರಂತಕವಾಗಿ ಅನುಭವಿಸುವಂತೆ ಮಾಡುವೆನು,” ಇದು ಸರ್ವೇಶ್ವರಸ್ವಾಮಿಯ ನುಡಿ.
------------------------
ಕೀರ್ತನೆ 86:1-2, 3-4, 5-6. ಶ್ಲೋಕ.11
ನಿನ್ನ ಸತ್ಯ ಪಥದಲಿ ನಾ ನಡೆವಂತೆ
ಬೋಧಿಸೆನಗೆ ಪ್ರಭೂ, ನಿನ್ನ ಮಾರ್ಗವನು
ನಿನ್ನ ಸತ್ಯ ಪಥದಲಿ ನಾ ನಡೆವಂತೆ
ಬೋಧಿಸೆನಗೆ ಪ್ರಭೂ, ನಿನ್ನ ಮಾರ್ಗವನು
1 : ಹೇ ಪ್ರಭು, ನೀಡೆನಗೆ ಸದುತ್ತರವನು / ಕಿವಿಗೊಡು, ದೀನನು, ದಲಿತನು ನಾನು //
2 : ಕಾಪಾಡು ಪ್ರಭು, ನಾ ನಿನ್ನ ಭಕ್ತನು / ಉದ್ಧರಿಸು ನಿನ್ನ ನಂಬಿದ ದಾಸನನು //
3 : ನೀನೆನಗೆ ದೇವನು, ಕರುಣಿಸೆನ್ನನು / ದಿನವೆಲ್ಲ ಪ್ರಭು, ನಿನಗೆ ಮೊರೆಯಿಡುವೆನು //
4 : ನಿನ್ನ ದಾಸನಿಗೆ ನೀಡು ಮನದಾನಂದವನು / ನಿನಗೆ ಅಭಿಮುಖವಾಗಿಸಿರುವೆ ಎನ್ನಾತ್ಮವನು //
5 : ಪ್ರಭು, ನೀನು ದಯಾವಂತನು, ಕ್ಷಮಿಸುವವನು / ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು //
6 : ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ / ನನ್ನ ವಿಜ್ಞಾಪನೆಗಳ ಕೋರಿಕೆಗೆ //
------------------
ಶುಭಸಂದೇಶ: ಲೂಕ 5.27-32
27 : ಅನಂತರ ಯೇಸುಸ್ವಾಮಿ ಅಲ್ಲಿಂದ ಹೋಗುತ್ತಿದ್ದಾಗ ಲೇವಿ ಎಂಬ ಸುಂಕದವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. “ನನ್ನನ್ನು ಹಿಂಬಾಲಿಸು,” ಎಂದು ಹೇಳಿ ಯೇಸು ಅವನನ್ನು ಕರೆದರು.
28 : ಲೇವಿಯು ಎದ್ದು ಎಲ್ಲವನ್ನೂ ಪರಿತ್ಯಜಿಸಿ, ಯೇಸುವನ್ನು ಹಿಂಬಾಲಿಸಿದನು.
29 : ತರುವಾಯ ಆ ಲೇವಿ ತನ್ನ ಮನೆಯಲ್ಲಿ ಯೇಸುವಿಗೆ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಬಹುಜನ ಸುಂಕದವರೂ ಇತರರೂ ಯೇಸುವಿನ ಪಂಕ್ತಿಯಲ್ಲೇ ಊಟಕ್ಕೆ ಕುಳಿತಿದ್ದರು.
30 : ಇದನ್ನು ಕಂಡ ಫರಿಸಾಯರು ಮತ್ತು ಅವರ ಪಂಥಕ್ಕೆ ಸೇರಿದ ಧರ್ಮಶಾಸ್ತ್ರಜ್ಞರು ಗೊಣಗಾಡುತ್ತಾ, ಯೇಸುವಿನ ಶಿಷ್ಯರ ಬಳಿಗೆ ಬಂದು, “ನೀವು ಸುಂಕದವರ ಮತ್ತು ಪಾಪಿಷ್ಠರ ಜೊತೆಯಲ್ಲಿ ಏಕೆ ತಿನ್ನುತ್ತೀರಿ, ಕುಡಿಯುತ್ತೀರಿ?” ಎಂದು ಪ್ರಶ್ನಿಸಿದರು.
31 : ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ;
32 : ನಾನು ಬಂದಿರುವುದು ಧರ್ಮಿಷ್ಠರನ್ನು ಕರೆಯುವುದಕ್ಕಲ್ಲ, ‘ಪಶ್ಚತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ, ದೇವರಿಗೆ ಅಭಿಮುಖಿಗಳಾಗಿರಿ’ ಎಂದು ಪಾಪಿಷ್ಠರನ್ನು ಕರೆಯುವುದಕ್ಕೆ,” ಎಂದರು.
-----------------------
ಚಿಂತನೆ
ಯಾರಿಗೆಲ್ಲಾ ಹೊಸ ಸೃಷ್ಟಿಗಳಾಗಲು ಬಯಕೆ ಇದೆಯೋ ಅವರೆಲ್ಲರೂ ತಮ್ಮ ತಮ್ಮ ಪಾಪಗಳನ್ನು ನಿವೇದಿಸಿಕೊಂಡು ಪ್ರಭುವಿನಲ್ಲಿ ಪಶ್ಚಾತ್ತಾಪದಿಂದ ಬೇಡುತ್ತಾರೆ. ಖಂಡಿತವಾಗಿಯೂ ಅವರೆಲ್ಲರೂ ನವ ಸೃಷ್ಟಿಗಳಾಗುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ: - ಇಂದಿನ ಶುಭ ಸಂದೇಶದಲ್ಲಿ ಲೇವಿಯ ಆಯ್ಕೆ. ಯೇಸುವಿನ ಕರೆಯನಂತರ ಆತನ ಇಡೀ ಜೀವನವೇ ಬದಲಾವಣೆಯಾಯಿತು.
ಮತ್ತಾಯನು ತನ್ನ ಹಳೆಯ ವ್ಯವಹಾರಗಳನ್ನು ತ್ಯಜಿಸಿ ಪರಿಪೂರ್ಣವಾಗಿ ಯೇಸುವನ್ನು ಹಿಂಬಾಲಿಸಿದನು. ಅದಕ್ಕೆ ಪ್ರತಿಯಾಗಿ ಆತನನ್ನು ಯೇಸು ತನ್ನ ಶಿಷ್ಯನನ್ನಾಗಿ ಮಾಡಿಕೊಂಡರು. ಯೇಸು ನಮ್ಮನ್ನು ಸಹ ಅದೇ ದೃಷ್ಟಿಕೋನದಿಂದ ನೋಡುತ್ತಾರೆ. ನಾವು ಪಾಪಿಗಳೇ ಆಗಿರಬಹುದು. ಆದರೆ ಅವರ ಕರೆಗೆ ಸ್ಪಂದಿಸಿದಾಗ ನಮ್ಮ ಪಾಪಗಳು ಕಣ್ಮರೆಯಾಗಿ ಯೇಸುವಿನ ಪ್ರಸನ್ನತೆಯು ದಾರಿದೀಪವಾಗಿ ಕತ್ತಲೆಯಿಂದ, ಅಜ್ಞಾನದಿಂದ, ಪಾಪದಿಂದ ಬಿಡುಗಡೆಯಾಗಿ ನಾವೂ ಇತರರಿಗೆ ದಾರಿದೀಪಗಳಾಗಲು ಸಾಧ್ಯ.
-------------------

No comments:
Post a Comment