Saturday, 29 February 2020

ತಪಸ್ಸು ಕಾಲದ ಮೊದಲನೆಯ ಭಾನುವಾರ

ಮಾರ್ಚ್ 1, 2020 ಭಾನುವಾರ [ನೇರಳೆ]
ಮೊದಲ ವಾಚನ: ಆದಿಕಾಂಡ 2.7-9; 3.1-7
ಕೀರ್ತನೆ 51:1-2, 3-4, 10-11, 12, 17
ಕೃಪಾಳು ದೇವಾ ಕರುಣಿಸೆಮ್ಮನು, ಏಕೆಂದರೆ
ನಿಮ್ಮ ವಿರುದ್ಧ ಪಾಪವನ್ನು ಮಾಡಿದ್ದೇವೆ
ಎರಡನೇ ವಾಚನ: ರೋಮನರಿಗೆ 5.12-19 [ಅಥವಾ]
(ಸಂಕ್ಷಿಪ್ತ) ರೋಮನರಿಗೆನ್ನರಿಗೆ 5.12, 17-19
ಶುಭಸಂದೇಶ: ಮತ್ತಾಯ 4.1-11
---------------------------
ಮೊದಲ ವಾಚನ: ಆದಿಕಾಂಡ 2.7-9; 3.1-7
7 : ಹೀಗಿರಲು, ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು.
8 : ಇದಲ್ಲದೆ, ದೇವರಾದ ಸರ್ವೇಶ್ವರ ಪೂರ್ವ ದಿಕ್ಕಿನಲ್ಲಿರುವ ಏದೆನ್ ಪ್ರದೇಶದಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು.
9 : ನೋಟಕ್ಕೆ ರಮ್ಯವೂ ಊಟಕ್ಕೆ ರುಚಿಕರವೂ ಆದ ನಾನಾ ತರದ ಮರಗಳನ್ನು ದೇವರಾದ ಸರ್ವೇಶ್ವರ ಅಲ್ಲಿ ಬೆಳೆಯ ಮಾಡಿದರು. ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನು ಹಾಗು ಒಳಿತು - ಕೆಡಕುಗಳ ಅರಿವನ್ನು ಮೂಡಿಸುವ ವೃಕ್ಷವನ್ನು ಬೆಳೆಯಿಸಿದರು.
1 : ಸರ್ವೇಶ್ವರನಾದ ದೇವರು ಉಂಟುಮಾಡಿದ ಭೂಜಂತುಗಳಲ್ಲಿ ಅತಿ ಯುಕ್ತಿಉಳ್ಳದ್ದು ಸರ್ಪ. ಅದು ಮಹಿಳೆಯ ಬಳಿಗೆ ಬಂದು, “ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಕೂಡದು ಎಂದು ದೇವರು ಆಜ್ಞೆ ಮಾಡಿರುವುದು ನಿಜವೋ”? ಎಂದು ಕೇಳಿತು.
2 : ಅದಕ್ಕೆ ಆ ಮಹಿಳೆ, “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು;
3 : ಆದರೆ ಅದರ ನಡುವೆಯಿರುವ ಈ ಮರದ ಹಣ್ಣನ್ನು ಮಾತ್ರ ತಿನ್ನಲೂ ಕೂಡದು, ಮುಟ್ಟಲೂ ಕೂಡದು, ‘ತಿಂದರೆ ಸಾಯುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದು ಉತ್ತರ ಕೊಟ್ಟಳು.
4 : ಆಗ ಆ ಸರ್ಪ, “ಆ ಮಾತು ನಿಜವಲ್ಲ, ನೀವು ಸಾಯುವುದು ಸುಳ್ಳು.
5 : ಇದರ ಹಣ್ಣನ್ನು ತಿಂದ ಕೂಡಲೆ ನಿಮ್ಮ ಕಣ್ಣುಗಳು ತೆರೆಯುವುವು. ನೀವು ದೇವರಂತೆ ಆಗಿ ಒಳಿತು- ಕೆಡುಕುಗಳನ್ನರಿತ ಜ್ಞಾನಿಗಳು ಆಗಿಬಿಡುವಿರಿ. ಇದು ದೇವರಿಗೆ ಚೆನ್ನಾಗಿ ಗೊತ್ತುಂಟು,” ಎಂದಿತು.
6 : ಆಗ ಆ ಮಹಿಳೆ, “ಈ ಮರದ ಹಣ್ಣು ಊಟಕ್ಕೆ ಎಷ್ಟು ಚೆನ್ನಾಗಿದೆ, ನೋಟಕ್ಕೆ ಎಷ್ಟು ರಮಣೀಯವಾಗಿದೆ, ಜ್ಞಾನಾರ್ಜನೆಗೆ ಎಷ್ಟು ಆಕರ್ಷಣೀಯವಾಗಿದೆ” ಎಂದು ತಿಳಿದು, ಅದನ್ನು ತೆಗೆದುಕೊಂಡು ತಿಂದಳು; ಸಂಗಡವಿದ್ದ ಗಂಡನಿಗೂ ಕೊಟ್ಟಳು; ಅವನೂ ತಿಂದನು.
7 : ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆ ಆಗಿದ್ದೇವೆಂದು ತಿಳಿದು ಅವರು ಅಂಜೂರದ ಎಲೆಗಳನ್ನು ಹೊಲಿದು ಉಟ್ಟುಕೊಂಡರು.
-----------------------------
ಕೀರ್ತನೆ 51:1-2, 3-4, 10-11, 12, 17
ಕೃಪಾಳು ದೇವಾ ಕರುಣಿಸೆಮ್ಮನು, ಏಕೆಂದರೆ
ನಿಮ್ಮ ವಿರುದ್ಧ ಪಾಪವನ್ನು ಮಾಡಿದ್ದೇವೆ
3 : ಒಪ್ಪಿಕೊಂಡೆನಿದೋ, ನಾನೇ ಅಪರಾಧಿ / ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ //
4 : ಹೌದು ದೇವಾ, ನಿನಗೆ ದ್ರೋಹವೆಸಗಿದೆ / ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ // ನಿನ್ನ ನಿರ್ಣಯವು ನ್ಯಾಯಯುತ / ನೀ ನೀಡುವ ತೀರ್ಪು ನಿರ್ಲಿಪ್ತ //
10 : ಶುದ್ಧ ಹೃದಯವನು ದೇವಾ, ನಿರ್ಮಿಸು / ಅಂತರಂಗವನು ಚೇತನಗೊಳಿಸು //
11 : ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ / ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ //
12 : ಜೀವೋದ್ಧಾರವನು ಮರಳಿ ಸವಿಯುವಂತೆ ಮಾಡು / ವಿಧೇಯನಾಗಿ ನಡೆವ ಸಿದ್ಧ ಮನಸ್ಸನು ನೀಡು //
17 : ಮುರಿದ ಮನವೇ ದೇವನೊಲಿವ ಯಜ್ಞವು / ನೊಂದು ಬೆಂದ ಮನವನಾತ ಒಲ್ಲೆಯೆನನು //
-----------------
ಎರಡನೇ ವಾಚನ: ರೋಮನರಿಗೆ 5.12-19 
12 : ಒಬ್ಬ ಮನುಷ್ಯನಿಂದಲೇ ಪಾಪ, ಪಾಪದಿಂದ ಮರಣ, ಈ ಲೋಕವನ್ನು ಪ್ರವೇಶಿಸಿದವು. ಎಲ್ಲರೂ ಪಾಪ ಮಾಡಿದ್ದರಿಂದ ಮರಣವು ಎಲ್ಲರಿಗೂ ಪ್ರಾಪ್ತಿಯಾಯಿತು.
13 : ಧರ್ಮಶಾಸ್ತ್ರವನ್ನು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿತ್ತು. ಆದರೆ ಧರ್ಮಶಾಸ್ತ್ರ ಇಲ್ಲದೆ ಇದ್ದುದರಿಂದ ಪಾಪವನ್ನು ಗಣನೆಗೆ ತಂದುಕೊಳ್ಳಲಾಗಲಿಲ್ಲ.
14 : ಆದರೂ, ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣವು ದಬ್ಬಾಳಿಕೆ ನಡೆಸುತ್ತಿತ್ತು. ದೇವರ ಆಜ್ಞಾವಿಧಿಗಳನ್ನು ವಿೂರಿ ಆದಾಮನು ಮಾಡಿದ ಪಾಪಕ್ಕೆ ಸಮನಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ, ಮರಣದ ಆಳ್ವಿಕೆ ನಡೆಯುತ್ತಿತ್ತು. ಆದಾಮನು ಮುಂಬರಲಿದ್ದ ಮಹಾತ್ಮನ ಮುನ್ಸೂಚನೆಯಾಗಿದ್ದಾನೆ.
15 : ಆದರೆ ಆದಾಮನ ಪಾಪಕ್ಕೂ ದೇವರ ಅನುಗ್ರಹಕ್ಕೂ ವ್ಯತ್ಯಾಸವಿದೆ. ಒಬ್ಬ ಮನುಷ್ಯನ ಅಪರಾಧದಿಂದ ಎಲ್ಲರೂ ಮರಣಕ್ಕೊಳಗಾದರು ಎಂಬುದೇನೋ ನಿಜ. ಆದರೆ ದೇವರ ಅನುಗ್ರಹವು ಅದಕ್ಕಿಂತಲೂ ಅತ್ಯಧಿಕವಾದುದು. ಅಂತೆಯೇ, ಯೇಸುಕ್ರಿಸ್ತ ಎಂಬ ಒಬ್ಬ ಮಹಾತ್ಮನ ಅನುಗ್ರಹದಿಂದ ಲಭಿಸುವ ಉಚಿತಾರ್ಥ ವರಗಳು ಇನ್ನೂ ಅಧಿಕಾಧಿಕವಾದುವು ಎಂಬುದೂ ನಿಜ.
16 : ದೇವರ ಉಚಿತಾರ್ಥ ವರಕ್ಕೂ ಒಬ್ಬ ಮನುಷ್ಯನ ಪಾಪದ ಪರಿಣಾಮಕ್ಕೂ ಎಷ್ಟೋ ವ್ಯತ್ಯಾಸವಿದೆ. ಆ ಒಂದು ಪಾಪದ ಪರಿಣಾಮವಾಗಿ ಮನುಷ್ಯನು ಅಪರಾಧಿಯೆಂದು ನಿರ್ಣಯಿಸಲ್ಪಟ್ಟನು. ಆದರೆ ಅನೇಕರು ಅಪರಾಧಿಗಳಾದ ಮೇಲೂ ಕೊಡಲಾಗುವ ಉಚಿತಾರ್ಥ ವರವು ದೇವರೊಡನೆ ಸತ್ಸಂಬಂಧವನ್ನು ಉಂಟುಮಾಡುತ್ತದೆ.
17 : ಒಬ್ಬ ಮನುಷ್ಯನ ಅಪರಾಧದ ಕಾರಣ, ಒಬ್ಬ ವ್ಯಕ್ತಿಯ ಮುಖಾಂತರ ಮರಣವು ಎಲ್ಲಾ ಮಾನವರ ಮೇಲೆ ದಬ್ಬಾಳಿಕೆ ನಡೆಸಿತು. ಆದರೆ, ಹೇರಳವಾದ ದೈವಾನುಗ್ರಹವನ್ನೂ ದೇವರೊಡನೆ ಸತ್ಸಂಬಂಧವೆಂಬ ಉಚಿತಾರ್ಥ ವರವನ್ನೂ ಪಡೆದವರಾದರೋ ಯೇಸುಕ್ರಿಸ್ತ ಎಂಬ ಮಹಾತ್ಮನ ಮುಖಾಂತರ ಮತ್ತಷ್ಟು ವಿಪುಲವಾಗಿ ಸಜ್ಜೀವವನ್ನು ಪಡೆದು ರಾಜ್ಯವಾಳುತ್ತಾರೆ.
18 : ಒಬ್ಬನ ಅಪರಾಧದಿಂದ ಎಲ್ಲಾ ಮಾನವರು ದಂಡನೆಯ ತೀರ್ಪಿಗೆ ಗುರಿಯಾಗುತ್ತಾರೆ. ಹಾಗೆಯೇ ಒಬ್ಬನ ಸತ್ಕಾರ್ಯದಿಂದ ಎಲ್ಲಾ ಮಾನವರು ವಿಮೋಚನೆಯನ್ನೂ ಸಜ್ಜೀವವನ್ನೂ ಪಡೆಯುತ್ತಾರೆ.
19 : ಹೇಗೆ ಒಬ್ಬ ಮನುಷ್ಯನ ಅವಿಧೇಯತೆಯಿಂದ ಎಲ್ಲರೂ ಪಾಪಿಗಳಾದರೋ, ಹಾಗೆಯೇ ಒಬ್ಬ ಮನುಷ್ಯನ ವಿಧೇಯತೆಯಿಂದ ಎಲ್ಲರೂ ದೇವರೊಡನೆ ಸತ್ಸಂಬಂಧವನ್ನು ಹೊಂದುತ್ತಾರೆ.
--------------------
ಶುಭಸಂದೇಶ: ಮತ್ತಾಯ 4.1-11
1 : ಯೇಸುಸ್ವಾಮಿ ಪಿಶಾಚಿಯಿಂದ ಪರಿಶೋಧಿತರಾಗಲೆಂದು ಪವಿತ್ರಾತ್ಮ ಅವರನ್ನು ಬೆಂಗಾಡಿಗೆ ಕರೆದೊಯ್ದರು.
2 : ಅಲ್ಲಿ ಯೇಸು ನಲವತ್ತು ದಿನ ಹಗಲಿರುಳೂ ಉಪವಾಸವಿದ್ದರು. ಅನಂತರ ಅವರಿಗೆ ಬಹಳ ಹಸಿವಾಯಿತು.
3 : ಆಗ ಶೋಧಕನು ಬಂದು, "ನೀನು ದೇವರ ಪುತ್ರನೆಂಬುದು ಸತ್ಯವಾದರೆ, ಈ ಕಲ್ಲುಗಳು ರೊಟ್ಟಿಗಳಾಗಲೆಂದು ಆಜ್ಞೆಮಾಡು," ಎಂದನು.
4 : ಅದಕ್ಕೆ ಯೇಸುಸ್ವಾಮಿ, "ಪವಿತ್ರ ಗ್ರಂಥದಲ್ಲಿ ಹೇಳಿರುವ ಪ್ರಕಾರ, "ಮಾನವನು ಜೀವಿಸುವುದು ಆಹಾರದಿಂದ ಮಾತ್ರವಲ್ಲ; ದೇವರಾಡುವ ಪ್ರತಿಯೊಂದು ನುಡಿಯಿಂದ", ಎಂದರು.
5 : ಬಳಿಕ ಪಿಶಾಚಿ ಅವರನ್ನು ಪವಿತ್ರ ನಗರಕ್ಕೆ ಅಂದರೆ ಜೆರುಸಲೇಮಿಗೆ ಕರೆದೊಯ್ದು ಮಹಾದೇವಾಲಯದ ಗೋಪುರದ ತುದಿಯ ಮೇಲೆ ನಿಲ್ಲಿಸಿ,
6 : "ನೀನು ದೇವರ ಪುತ್ರನೆಂಬುದು ಸತ್ಯವಾದರೆ ಕಳಕ್ಕೆ ಧುಮುಕು. ಏಕೆಂದರೆ, ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ, ‘ದೇವರೇ ತಮ್ಮ ದೂತರಿಗೆ ಆಜ್ಞೆ ಮಾಡುವರು’ ಮತ್ತು ‘ಇವರು ನಿನ್ನ ಕಾಲುಗಳು ಕಲ್ಲುಗಳಿಗೆ ತಾಕದಂತೆ ನಿನ್ನನ್ನು ಕೈಗಳಲ್ಲಿ ಆತುಗೊಳ್ಳುವರು,’ ಎಂದಿತು.
7 ಅದಕ್ಕೆ ಯೇಸು, “ ‘ನಿನ್ನ ದೇವರು ಸರ್ವೇಶ್ವರ; ನೀನು ಅವರನ್ನು ಪರೀಕ್ಷಿಸಬಾರದು’, ಎಂದೂ ಸಹ ಪವಿತ್ರಗ್ರಂಥದಲ್ಲಿ ಬರೆದಿದೆ,” ಎಂದರು.
8 : ಅನಂತರ ಪಿಶಾಚಿ ಯೇಸುವನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದು, ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ತೋರಿಸಿತು.
9 : "ನೀನು ನನಗೆ ಅಡ್ಡಬಿದ್ದು ಆರಾಧಿಸುವೆಯಾದರೆ ಇವೆಲ್ಲವನ್ನು ನಿನಗೆ ಕೊಡಬಲ್ಲೆ," ಎಂದಿತು.
10 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಸೈತಾನನೇ, ತೊಲಗು, ‘ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೇ ಸೇವೆಸಲ್ಲಿಸು,’ ಎಂದೂ ಪವಿತ್ರಗ್ರಂಥದಲ್ಲಿ ಬರೆದಿದೆ," ಎಂದರು.
11 : ಆಗ ಪಿಶಾಚಿ ಯೇಸುವನ್ನು ಬಿಟ್ಟು ತೊಲಗಿತು. ದೇವದೂತರು ಬಂದು ಅವರನ್ನು ಉಪಚರಿಸಿದರು.
--------------------
ಚಿಂತನೆ
ಒಮ್ಮೆ ಒಬ್ಬ ಕಥೋಲಿಕ ಗುರುಗಳು ದಾರಿಯಲ್ಲಿ ನಡೆದು ಹೋಗುತ್ತಿದ್ದರು. ಹೋಗುತ್ತಿರುವಾಗ ಹಿಂದಿನಿಂದ ಕಳ್ಳನೊಬ್ಬ ಚಾಕುವನ್ನು ಹಿಡಿದು, ‘ನಿನ್ನ ಬಳಿಯಿರುವ ಹಣವನ್ನೆಲ್ಲ ಕೊಡು’ ಎಂದ. ಅದಕ್ಕೆ ಗುರುಗಳು ತನ್ನ ಜೇಬಿಗೆ ಕೈ ಹಾಕುತ್ತಿರುವಾಗ ಇವರೊಬ್ಬ ಗುರುಗಳು ಎಂದು ತಿಳಿದು ‘ಕ್ಷಮಿಸಿ ಫಾದರ್! ನೀವು ಗುರುಗಳು ಅಂತ ಗೊತ್ತಿರಲಿಲ್ಲ. ನಿಮ್ಮ ಹಣ ನನಗೆ ಬೇಡ’ ಎಂದ. ಗುರುಗಳು ‘ಹೋಗಲಿ’ ಎಂದು ಜೇಬಿನಿಂದ ಒಂದು ಸಿಗರೇಟನ್ನು ಅವನಿಗೆ ಕೊಡಲು ಮುಂದಾದಾಗ ಕಳ್ಳ, ‘ಬೇಡ ಫಾದರ್! ತಪಸ್ಸು ಕಾಲದಲ್ಲಿ ಸಿಗರೇಟು ಬಿಟ್ಟಿದ್ದೀನಿ’ ಎಂದ.
ಈ ಕಥೆಯನ್ನು ಓದುತ್ತಿದ್ದರೆ ನಗು ಬರುವುದು ಸಹಜ. ಇದು ಅನೇಕ ಕ್ರೈಸ್ತರ ಜೀವನದಲ್ಲಿ ಆಗುವಂತಹ ಸತ್ಯ ಘಟನೆ. ಇಂದು ತಪಸ್ಸು ಕಾಲದ ಮೊದಲನೆಯ ಭಾನುವಾರ. ಅನೇಕರು ಅದು ಬಿಡಬೇಕು ಇದು ಬಿಡಬೇಕು ಎಂದು ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೆಚ್ಚಿನವರು ಮನಪರಿವರ್ತನೆ ಹೊಂದುತ್ತಾರೆ. ಆದರೆ ಇನ್ನೂ ಕೆಲವರು ತಪಸ್ಸುಕಾಲಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ. ತಪಸ್ಸುಕಾಲ ಆದ ನಂತರ ಏನೋ ಹೇಳುತ್ತಾರಲ್ಲ ‘back to square one’ ಅಂತ ಹಾಗೆ. ಇಂದಿನ ಆರಾಧನಾ ವಿಧಿಯೂ ಸಹ ತಪಸ್ಸುಕಾಲದಲ್ಲಿ ನಾವು ಹೇಗಿರಬೇಕು, ಏನನ್ನು ಮಾಡಬೇಕು ಎಂದು ತಿಳಿಸುತ್ತವೆ. ಮಾತ್ರವಲ್ಲ ನಮ್ಮ ಜೀವನದ ಆಗು ಹೋಗುಗಳನ್ನು ಅವಲೋಕಿಸಿ ದೇವರಿಗೆ ಪ್ರಾಧಾನ್ಯತೆಯನ್ನು ಕೊಡಬೇಕೆಂದು ಕರೆ ನೀಡುತ್ತದೆ. 
ಯೇಸು ಮರಳುಗಾಡಿಗೆ ತೆರಳಿ ಅಲ್ಲಿ ನಲವತ್ತು ದಿನ ಉಪವಾಸ ಕೈಗೊಂಡು ಸೈತಾನನ ಪ್ರಲೋಭನೆಗೆ ಒಳಗಾಗುತ್ತಾರೆ. ಕ್ರಿಸ್ತ ದೇವರ ಕುಮಾರನಾಗಿದ್ದರೂ ಒಬ್ಬ ಸಾಧಾರಣ ಮನುಷ್ಯನಂತೆ ಈ ಭುವಿಗೆ ಬಂದ. ಹಾಗಾಗಿ ನಮ್ಮೆಲ್ಲರಂತೆ ಅವರೂ ಸಹ ಪ್ರಲೋಭನೆಗೆ ಒಳಗಾದರು. ಆದರೆ ನಾವು ಅವುಗಳಿಗೆ ಮಾರುಹೋದೆವು. ಆದರೆ ಕ್ರಿಸ್ತ ಅವುಗಳನ್ನೆಲ್ಲ ಮೆಟ್ಟಿನಿಂತು ಸಂಪೂರ್ಣವಾಗಿ ದೇವರ ಮೇಲೆ ಅವಲಂಬಿಸುತ್ತಾರೆ. ದೇವರೊಬ್ಬರನ್ನು ಬಿಟ್ಟರೆ ಯಾವುದೂ ಶಾಶ್ವತವಲ್ಲ ಎಂದು ತೋರಿಸಿಕೊಡುತ್ತಾರೆ. 
ದೇವರಲ್ಲಿ ಸಂಪೂರ್ಣವಾದ ಭರವಸೆ, ನಂಬಿಕೆ ಮತ್ತು ವಿಶ್ವಾಸವಿರಿಸಬೇಕು ಇದೇ ತಪಸ್ಸುಕಾಲ. ಈ ತಪಸ್ಸುಕಾಲದಲ್ಲಿ ಕ್ರಿಸ್ತನಿಗೆ ಹತ್ತಿರವಾಗೋಣ. ನಮ್ಮ ಹಳೆಯ ಸ್ವಭಾವವನ್ನು ಬಿಟ್ಟು ಕ್ರಿಸ್ತನನ್ನು ಹಿಂಬಾಲಿಸೋಣ.
----------------------------
ತಪಸ್ಸು ಕಾಲ ದೈವಪ್ರಸಾದ ಕಾಲ. ಪರಿವರ್ತನೆಯ ಕಾಲ, ಪ್ರಾರ್ಥನೆ, ಉಪವಾಸ ಮತ್ತು ದಾನಧರ್ಮದಿಂದ ದೇವರಿಗೆ ಶರಣಾಗುವ ಕಾಲ. ಜೀವನದಲ್ಲಿ ಎದುರಾಗುವ ಪ್ರಲೋಭನೆಗಳನ್ನು ಎದುರಿಸುತ್ತಾ ಕ್ರಿಸ್ತನಿಗೆ ಸನಿಹವಾಗುವ ಕಾಲ ಬಾಳಿನುದ್ದಕ್ಕೂ ಪ್ರಲೋಭನೆಗಳು ನಿರಂತರ ಬರುತ್ತವೆ. ಈ ಪ್ರಲೋಭನೆಗಳು ಕೆಲವೊಮ್ಮೆ ನಮ್ಮ ವಿಶ್ವಾಸವನ್ನು ಅಲುಗಾಡಿಸಬಹುದು ಅಥವಾ ಹೆಚ್ಚಿಸಬಹುದು. ಕ್ರಿಸ್ತ ಕೂಡ ಈ ಪ್ರಲೋಭನೆಗಳಿಗೆ ಹೊರತಾಗಿರಲಿಲ್ಲ. ಪ್ರಲೋಭನೆಗಳನ್ನು ಜಯಿಸಿ, ಹಿಮ್ಮೆಟ್ಟಿಸಿ ನಮಗೆ ಮಾದರಿಯಾಗಿದ್ದಾರೆ.
ಯೇಸುವಿನ ಪ್ರಲೋಭನೆಗಳಿಗೂ ಮತ್ತು ಇಸ್ರಾಯೇಲರ ಪ್ರಲೋಭನೆಗಳಿಗೂ ಇದ್ದ ಸಾಮ್ಯತೆ ಮತ್ತು ವ್ಯತ್ಯಾಸ.
1) ಮೊದಲ ಪ್ರಲೋಭನೆ: ಕಲ್ಲುಗಳನ್ನು ರೊಟ್ಟಿಗಳನ್ನಾಗಿ ಮಾಡಲು: ಆಹಾರದ ಕೊರತೆ ಎದುರಾದಾಗ ಮರಳುಗಾಡಿನಲ್ಲಿ ಇಸ್ರಾಯೇಲರು ಮೋಶೆಯ ವಿರುದ್ದ ಗೊಣಗುಟ್ಟುತ್ತಾರೆ (ವಿ.ಕಾ. 18:3) ದೇವರ ವಿರುದ್ದ ಪಾಪ ಕಟ್ಟಿಕೊಳ್ಳುತ್ತಾರೆ. ಆದರೆ ಯೇಸು ತಮ್ಮ ಶಕ್ತಿಯನ್ನು ಸ್ವಂತಕ್ಕೆ ಉಪಯೋಗಿಸದೆ ಧರ್ಮೋಪದೇಶಕಾಂಡ 8:3 ವಾಕ್ಯವನ್ನು ಆಧರಿಸಿ ಸೈತಾನನಿಗೆ ದಿಟ್ಟ ಉತ್ತರ ನೀಡುತ್ತಾರೆ. ದೇವರ ಆಜ್ಞೆ ಪಾಲನೆಗಿಂತ, ವಿಧೇಯತೆಗಿಂತ ಆಹಾರ ಶ್ರೇಷ್ಠವಲ್ಲ ಎಂದು ಮನಗಾಣಿಸುತ್ತಾರೆ.
2) ದೇವರ ಪುತ್ರನಾದರೆ ಕೆಳಕ್ಕೆ ದುಮುಕು: ಇಸ್ರಾಯೇಲರು ಮರುಭೂಮಿಯಲ್ಲಿ ಕುಡಿಯಲು ನೀರಿಲ್ಲದಿದ್ದಾಗ ದೇವರು ನಿಜವಾಗಿಯೂ ನಮ್ಮೊಡನೆ ಇದ್ದಾರೆಯೇ ಎಂದು ಪ್ರಶ್ನಿಸುತ್ತಾರೆ (ವಿ.ಕಾ. 17:3). ಆದರೆ ಕ್ರಿಸ್ತ ದೇವರನ್ನು ಪ್ರಶ್ನಿಸದೆ ತಮ್ಮ ಅಚಲ ವಿಶ್ವಾಸ ಮೆರೆಯುತ್ತಾರೆ. ಧ.ಕಾ 6:16ರ ಮೂಲಕ ಸೈತಾನನಿಗೆ ಉತ್ತರಿಸುತ್ತಾರೆ.
3) ನೀನು ಅಡ್ಡ ಬಿದ್ದು ಆರಾಧಿಸುವೆಯಾದರೆ ಇದೆಲ್ಲವನ್ನು ನಿನಗೆ ಕೊಡಬಲ್ಲೆ: ಧ.ಕಾ. 6:13-15ರಲ್ಲಿ ಕಾಣುವಂತೆ ಇಸ್ರಾಯೇಲರು ಮರುಭೂಮಿಯಲ್ಲಿ ನಿಜ ದೇವರನ್ನು ಮರೆತು ಅನ್ಯ ದೇವರನ್ನು ಆರಾಧಿಸಿದರು. ಆದರೆ ಕ್ರಿಸ್ತ  ಸೈತಾನನ ಬಲೆಗೆ ಬೀಳದೆ ತಂದೆ ದೇವರಲ್ಲಿ ತಮ್ಮ ಪ್ರೀತಿ, ನಿಷ್ಠೆಯನ್ನು ಪ್ರದರ್ಶಿಸುತ್ತಾರೆ.
--------------------------

© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ


No comments:

Post a Comment