Sunday, 2 February 2020

ಸಾಧಾರಣ ಕಾಲದ ನಾಲ್ಕನೆಯ ಗುರುವಾರ

06 ಫೆಬ್ರವರಿ  2020
ಗುರುವಾರ /ಹಸಿರು/ಸಾಧಾರಣ ಕಾಲದ ನಾಲ್ಕನೆಯ ಗುರುವಾರ   
1ನೇ  ವಾಚನ  -  1 ಅರಸುಗಳು 2:1-4,10-12
ಕೀರ್ತನೆ  -  ಪೂ. ಕಾ. ಇ.  29:10-12
ಶುಭಸಂದೇಶ  -  ಮಾರ್ಕ 6: 7-13       
-----------------
1ನೇ  ವಾಚನ  -  1 ಅರಸುಗಳು 2:1-4,10-12
1 : ದಾವೀದನ ಮರಣಸಮಯ ಸಮೀಪಿಸಿದಾಗ ಅವನು ತನ್ನ ಮಗ ಸೊಲೊಮೋನನಿಗೆ ಹೀಗೆಂದು ಆಜ್ಞಾಪಿಸಿದನು:
2 : “ಜಗದ ಜನರೆಲ್ಲರು ಹೋಗುವ ದಾರಿಯನ್ನು ನಾನು ಈಗ ಹಿಡಿಯಬೇಕು; ನೀನು ಧೈರ್ಯದಿಂದಿರು. ನಿನ್ನ ಸಾಮಥ್ರ್ಯವನ್ನು ತೋರಿಸು.
3 : ನಿನ್ನ ದೇವರಾದ ಸರ್ವೇಶ್ವರಸ್ವಾಮಿಯ ಕಟ್ಟಳೆಯನ್ನು ಕೈಗೊಂಡು ಅವರ ಮಾರ್ಗದಲ್ಲೇ ನಡೆದುಕೋ; ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಅವರ ಆಜ್ಞಾ ನಿಯಮ-ವಿಧಿನಿರ್ಣಯಗಳನ್ನು ಪಾಲಿಸು. ಹೀಗೆ ಮಾಡುವುದಾದರೆ ನೀನು ಏನು ಮಾಡಿದರೂ ಎಲ್ಲಿಗೆ ಹೋದರೂ ಕೃತಾರ್ಥನಾಗುವೆ.
4 : ಇದಲ್ಲದೆ ಸರ್ವೇಶ್ವರ, ‘ನಿನ್ನ ಸಂತಾನದವರು ಪೂರ್ಣ ಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ನನಗೆ ನಂಬಿಗಸ್ತರಾಗಿ ನಡೆದುಕೊಳ್ಳುವುದರಲ್ಲಿ ಜಾಗರೂಕರಾಗಿದ್ದರೆ ಅವರು ಇಸ್ರಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ತಪ್ಪದು,’ ಎಂದು ನನಗೆ ಮಾಡಿದ ವಾಗ್ದಾನವನ್ನು ಅವರು ಸ್ಥಿರಪಡಿಸುವರು.
10 : ಅನಂತರ ದಾವೀದನು ಮರಣಹೊಂದಿ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು.
11 : ದಾವೀದನು ಇಸ್ರಯೇಲರನ್ನು ಆಳಿದ್ದು ನಾಲ್ವತ್ತು ವರ್ಷ: ಹೆಬ್ರೋನಿನಲ್ಲಿ ಏಳು ವರ್ಷ, ಜೆರುಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು.
12 : ಸೊಲೊಮೋನನು ತನ್ನ ತಂದೆ ದಾವೀದನ ಸಿಂಹಾಸನವನ್ನು ಏರಿದನು. ಅವನ ರಾಜ್ಯ ಸಮೃದ್ಧಿಯಾಗಿ ಬೆಳೆಯಿತು.
--------------------
ಕೀರ್ತನೆ  -  29:10-12
10 : ಅನಂತರ ದಾವೀದನು ನೆರೆದ ಸಭೆಯ ಮುಂದೆ ಸರ್ವೇಶ್ವರನನ್ನು ಹೀಗೆ ಸ್ತುತಿಸಿದನು:
11 : “ಹೇ ಸರ್ವೇಶ್ವರಾ, ನಮ್ಮ ಪಿತೃ ಯಕೋಬನ ದೇವರೇ, ಸದಾಕಾಲಕ್ಕೂ ಸ್ತುತಿಸ್ತೋತ್ರ ಸಲ್ಲಲಿ ನಿಮಗೆ ! ಹೇ ಸರ್ವೇಶ್ವರಾ, ಮಹಿಮೆ, ಪ್ರತಾಪ, ವೈಭವ, ಪರಾಕ್ರಮ, ಪ್ರತಿಭೆ, ನಿಮ್ಮವೇ. ಭೂಮ್ಯಾಕಾಶಗಳಲ್ಲಿರುವ ಸಮಸ್ತವೂ ನಿಮ್ಮದೇ. ಸರ್ವೇಶ್ವರಾ, ರಾಜ್ಯಭಾರವೂ ನಿಮ್ಮದೇ. ಸರ್ವವನು ಮಹೋನ್ನತರಾಗಿ ಆಳುವವರೂ ನೀವೇ.
12 : ಆಸ್ತಿ-ಪಾಸ್ತಿ, ಐಶ್ವರ್ಯ ಬರುವುದು ನಿಮ್ಮಿಂದಲೇ ಸರ್ವಾಧಿಕಾರ, ಬಲಪರಾಕ್ರಮ ಇರುವುದು ನಿಮ್ಮ ಕೈಯಲ್ಲೇ. ಪಟ್ಟ ಪದವಿಗೆ, ಸರ್ವಶಕ್ತಿ ಸಾಹಸಕ್ಕೆ ಮೂಲ ನೀವೇ.
---------------------
ಶುಭಸಂದೇಶ  -  ಮಾರ್ಕ 6: 7-13
7 : ಅನಂತರ ಯೇಸುಸ್ವಾಮಿ ಸುತ್ತಮುತ್ತಲಿನ ಊರುಗಳಿಗೆ ಹೋಗಿ ಜನರಿಗೆ ಪ್ರಬೋಧಿಸಿದರು. ಇದಲ್ಲದೆ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ದೆವ್ವಬಿಡಿಸುವ ಅಧಿಕಾರವನ್ನಿತ್ತು, ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು.
8 : ಕಳುಹಿಸುವಾಗ, “ಪ್ರಯಾಣ ದಂಡವೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ.
9 : ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ, ಯಾವುದೂ ಬೇಡ. ಪಾದರಕ್ಷೆಯನ್ನು ಮೆಟ್ಟಿಕೊಂಡರೆ ಸಾಕು. ಎರಡು ಅಂಗಿಗಳನ್ನೂ ತೊಟ್ಟುಕೊಳ್ಳಬೇಡಿ,” ಎಂದು ಅಪ್ಪಣೆ ಮಾಡಿದರು.
10 : ಇದಲ್ಲದೆ, “ನೀವು ಯಾವುದೇ ಒಂದು ಊರಿಗೆ ಹೋದಾಗ ಆ ಊರನ್ನು ಬಿಡುವವರೆಗೂ ಆತಿಥ್ಯ ನೀಡುವ ಯಾವುದಾದರೂ ಒಂದು ಮನೆಯಲ್ಲೇ ಉಳಿದುಕೊಳ್ಳಿ.
11 : ಯಾವುದೇ ಊರಿನ ಜನರು ನಿಮ್ಮನ್ನು ಸ್ವಾಗತಿಸದೆಯೂ ನಿಮ್ಮ ಬೋಧನೆಗೆ ಕಿವಿಗೊಡದೆಯೂ ಹೋದರೆ, ಆ ಊರನ್ನು ಬಿಟ್ಟು ಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅವರ ವಿರುದ್ಧ ಅದು ಸಾಕ್ಷಿಯಾಗಿರಲಿ,” ಎಂದರು.
12 : ಶಿಷ್ಯರು ಹೊರಟು ಹೋಗಿ, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ,” ಎಂದು ಜನರಿಗೆ ಸಾರಿ ಹೇಳಿದರು.
13 : ದೆವ್ವ ಹಿಡಿದಿದ್ದ ಅನೇಕರಿಂದ ದೆವ್ವಗಳನ್ನು ಹೊರಗಟ್ಟಿದರು. ತೈಲಲೇಪನಮಾಡಿ ಅನೇಕ ರೋಗಿಗಳನ್ನು ಗುಣಪಡಿಸಿದರು.
--------------------------
“ಶುಭಸಂದೇಶ ಪ್ರಚಾರದ ಕಾರ್ಯವೊಂದೇ ನಮಗೆ ಮುಖ್ಯವಾಗಿರಬೇಕು ”
ಎಲ್ಲಿಗೆ ಹೇಗೆ ಹೋದರೂ, ನಾವು ಕೃತಾರ್ಥರಾಗಬೇಕಾದರೆ ಏನು ಮಾಡಬೇಕೆಂಬುವುದನ್ನು ಮೊದಲನೆಯ ವಾಚನ ಮನಮುಟ್ಟುವಂತೆ ತಿಳಿಸುತ್ತದೆ. “ನಿನ್ನ ದೇವರಾದ ಸರ್ವೇಶ್ವರಸ್ವಾಮಿಯ ಕಟ್ಟಳೆಯನ್ನು ಕೈಗೊಂಡು ಅವರ ಮಾರ್ಗದಲ್ಲೇ ನಡೆದುಕೋ; ಅವರ ಆಜ್ಞಾನಿಯಮ, ವಿಧಿನಿರ್ಣಯಗಳನ್ನು ಪಾಲಿಸು.” ಈ ಆದೇಶವನ್ನು ನಾವು ಪಾಲಿಸಿದ್ದೇ ಆದರೆ, ನಾವು ಕೂಡ ಯಾವಾಗಲೂ ಕೃತಾರ್ಥರಾಗಿ ಬಾಳುತ್ತೇವೆ. ಯೇಸು, ತಮ್ಮ ಶುಭಸಂದೇಶವನ್ನು ಸಾರಲು, ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಶಿಷ್ಯರನ್ನು ಕಳುಹಿಸಿಕೊಡುವುದನ್ನು ಇಂದಿನ ಶುಭಸಂದೇಶದ ಓದು ತಿಳಿಸುತ್ತದೆ. ಪ್ರಯಾಣದ ಕೋಲೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ, ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ ಯಾವುದೂ ಬೇಡ ಎಂದು ಯೇಸು ಶಿಷ್ಯರಿಗೆ ಆದೇಶ ಕೊಡುತ್ತಾರೆ. ತಂದೆಯಾದ ದೇವರು ಸಹಾ ಮೋಶೆಯ ಕೋಲನ್ನು ಅನುಮೋದಿಸಿದ್ದನ್ನು ನಮ್ಮ ಗಮನಕ್ಕೆ ತರುತ್ತದೆ. ವಿಮೋಚನಾಕಾಂಡ 4: 2-31ರಲ್ಲಿ “ಅದಕ್ಕೆ ಸರ್ವಶಕ್ತ `ನಿನ್ನ ಕೈಯಲ್ಲಿರುವುದು ಏನು’ ಎಂದು ಕೇಳಿದರು. ಅವನು `ಇದು ಕೋಲು’ ಎಂದನು.” ಅದೇ ಕೋಲಿನಿಂದ ಮೋಶೆ ಇಡೀ ಇಸ್ರಾಯೇಲ್ ಜನರನ್ನು ದಾಸತ್ವದಿಂದ ಬಿಡಿಸಿಕೊಂಡು ಬಂದನು. ಅದೇ ಕೋಲಿನಿಂದ ಕೆಂಪು ಸಮುದ್ರವನ್ನು ಇಬ್ಭಾಗ ಮಾಡಿದನು. ಅದೇ ಕೋಲಿನಿಂದ ಬಂಡೆಯನ್ನು ಹೊಡೆದು ಜನರಿಗೆ ನೀರನ್ನು ಕೊಟ್ಟನು. ಹಾಗೆ ಯೇಸು ಶಿಷ್ಯರಿಗೆ ಕೋಲನ್ನು ಕೊಟ್ಟು ಅವರನ್ನು ದೇವರ ಸಾಧನಗಳನ್ನಾಗಿ ಮಾಡಿ ದೇವರ ಸಂದೇಶ ಸಾರಲು, ರೋಗಿಗಳನ್ನು ಸ್ವಸ್ಥಪಡಿಸಲು, ದೆವ್ವಗಳನ್ನು ಬಿಡಿಸಲು ಅಧಿಕಾರವನ್ನು ನೀಡುತ್ತಾರೆ. 
ಒಬ್ಬ ನಿಷ್ಠಾವಂತ ದೇವರ ಸೇವಕನಿಗೆ ಬೇಕಾಗಿರುವುದು ಬುತ್ತಿ, ಜೋಳಿಗೆ, ಹಣವಲ್ಲ, ಬೇಕಾಗಿರುವುದು ದೇವರ ಕಾರ್ಯದಲ್ಲಿ ಆಸಕ್ತಿ. ಕೆಲವೊಮ್ಮೆ ಇಂತಹ ಸವಲತ್ತುಗಳಿಗೆ ನಮ್ಮ ಮುಖ್ಯ ಉದ್ದೇಶಗಳನ್ನೇ ಮರೆಸಿಬಿಡುವ ಸಾಧ್ಯತೆ ಇದೆ. ದೇವರು ನಮ್ಮ ಕಾರ್ಯಕ್ಕೆ ಬೇಕಾದುದನ್ನು ಒದಗಿಸುತ್ತಾರೆಂಬ ಅಚಲ ವಿಶ್ವಾಸದಿಂದ ಪ್ರಚಾರ ಕಾರ್ಯವನ್ನು ಕೈಗೊಳ್ಳಬೇಕು ಮತ್ತು ದೇವರ ಶುಭಸಂದೇಶ ಪ್ರಚಾರದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿರುವ ನಾವು ದೇವರ ಕೈಸಾಧನಗಳು ಮಾತ್ರ ಎಂಬ ಅರಿವಿನಲ್ಲಿ ಮುನ್ನಡೆಯಬೇಕು. ನೆನಪಿಡಿ: ಮದರ್ ತೆರೇಸಾರವರು ನಿರ್ಗತಿಕರ ಸೇವೆ ಮಾಡಲು ಪ್ರಾರಂಭಿಸಿದ್ದು ಬರಿಗೈಯಲ್ಲಿ.



No comments:

Post a Comment