ಏಪ್ರಿಲ್ 4,
2020 ಶನಿವಾರ [ನೇರಳೆ]
ಸಂತ ಇಸಿದೋರ್ [ಧರ್ಮಾಧ್ಯಕ್ಷ/ಧರ್ಮಪಂಡಿತ] (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೆಜೆಕಿಯೇಲ 37:21-28
ಕೀರ್ತನೆ ಯೆರೆಮೀಯ 31:10, 11, 12, 13 ಶ್ಲೋಕ.10
ಕುರಿಮಂದೆಯನ್ನು ಕಾಯುವ ಕುರುಬನಂತೆ,
ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ
ಶುಭಸಂದೇಶ: ಯೊವಾನ್ನ 11:45-57
ಮೊದಲ ವಾಚನ: ಯೆಜೆಕಿಯೇಲ 37:21-28
21 : ಇದನ್ನೂ ಅವರಿಗೆ ನುಡಿ, ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಇಗೋ, ಇಸ್ರಯೇಲರು ವಶವಾಗಿರುವ ಜನಾಂಗಗಳಿಂದ ನಾನು ಅವರನ್ನು ಉದ್ಧರಿಸಿ, ಎಲ್ಲ ಕಡೆಯಿಂದಲು ಒಟ್ಟುಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು.
22 : ಅಲ್ಲಿ ಇಸ್ರಯೇಲಿನ ಪರ್ವತಗಳ ಮೇಲೆ, ಒಂದೇ ಜನಾಂಗವನ್ನಾಗಿ ಮಾಡುವೆನು; ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು; ಅವರು ಇನ್ನೆಂದಿಗೂ ಎರಡು ಜನಾಂಗದವರಾಗಿರರು; ಭಿನ್ನರಾಜ್ಯದವರಾಗಿ ಇರರು.
23 : ತಮ್ಮ ವಿಗ್ರಹಗಳಿಂದಾಗಲಿ, ಅಸಹ್ಯ ವಸ್ತುಗಳಿಂದಾಗಲಿ, ಯಾವ ದುರಾಚಾರದಿಂದಲೇ ಆಗಲಿ, ತಮ್ಮನ್ನು ಇನ್ನು ಮುಂದೆ ಹೊಲೆಗೆ ಹೊಯ್ದುಕೊಳ್ಳರು. ಅವರು ಪಾಪ ಮಾಡಿಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸಿ ಶುದ್ಧೀಕರಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.
24 : ನನ್ನ ದಾಸ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗು ಒಬ್ಬನೇ ಪಾಲಕನಿರುವನು; ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವರು.
25 : ನನ್ನ ದಾಸ ಯಕೋಬನಿಗೆ ನಾನು ದಯಪಾಲಿಸಿದ ನಾಡಿನಲ್ಲಿ ಅವರು ವಾಸಿಸುವರು. ಹೌದು, ನಿಮ್ಮ ಪಿತೃಗಳು ವಾಸಿಸಿದ ನಾಡಿನಲ್ಲಿ ಅವರೂ ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು; ನನ್ನ ದಾಸ ದಾವೀದನು ಅವರಿಗೆ ಸದಾ ಪ್ರಭುವಾಗಿರುವನು.
26 : ನಾನು ಅವರೊಂದಿಗೆ ಶಾಂತಿಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ, ವೃದ್ಧಿಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು.
27 : ಹೌದು, ನನ್ನ ವಾಸಸ್ಥಾನವು ಅವರ ಮಧ್ಯೆಯಿರುವುದು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.
28 : ನನ್ನ ಪವಿತ್ರಾಲಯ ಅವರ ಮಧ್ಯೆ ಶಾಶ್ವತವಾಗಿರಲು ಇಸ್ರಯೇಲನ್ನು ವಿೂಸಲು ಮಾಡಿಕೊಂಡಾತ ಸರ್ವೇಶ್ವರ ನಾನೇ ಎಂದು ಜನಾಂಗಗಳಿಗೆ ತಿಳಿದುಬರುವುದು”.
ಕೀರ್ತನೆ ಯೆರೆಮೀಯ 31:10, 11, 12, 13 ಶ್ಲೋಕ.10
ಕುರಿಮಂದೆಯನ್ನು ಕಾಯುವ ಕುರುಬನಂತೆ,
ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ
10 : ರಾಷ್ಟ್ರಗಳೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ: ದೂರದ ದ್ವೀಪಗಳಲ್ಲೂ ಅದನ್ನು ಸಾರಿರಿ: ಇಸ್ರಯೇಲರನ್ನು ಚದುರಿಸಿದಾತ ಕುರಿಮಂದೆಯನ್ನು ಕಾಯುವ ಕುರುಬನಂತೆ ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ.
11 : ಸರ್ವೇಶ್ವರ ಯಕೋಬರ ವಿಮೋಚಕ ಅವರನ್ನು ಅವರಿಗಿಂತ ಬಲಿಷ್ಠರ ಕೈಯಿಂದ ಬಿಡಿಸಿದಾತ.
12 : ಅವರು ಬಂದು ಹಾಡುವರು ಸಿಯೋನ್ ಶಿಖರದಲ್ಲಿ ಬರುವರು ಪ್ರವಾಹ ಪ್ರವಾಹವಾಗಿ ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕುರಿ, ಕುರಿಮರಿ, ಸರ್ವೇಶ್ವರನ ಈ ವರದಾನಗಳನ್ನು ಅನುಭವಿಸಲಿಕ್ಕಾಗಿ. ಹದವಾಗಿ ನೀರುಹಾಯಿಸಿದ ಉದ್ಯಾನವನದಂತೆ ಅವರ ಜೀವನ ಇನ್ನು ಅವರಿಗಿರದು ವ್ಯಸನ.
13 : ಆಗ ನಾಟ್ಯವಾಡಿ ನಲಿವಳು ಯುವತಿ ಹರ್ಷಿಸುವರು ಯುವಕರು ಮುದುಕರು ಜೊತೆಯಾಗಿ. ಅವರ ದುಃಖವನ್ನು ಸಂತೋಷವಾಗಿಸುವೆನು ವ್ಯಸನ ತೊರೆದು ಆನಂದಿಸುವಂತೆ ಅವರನ್ನು ಸಂತೈಸುವೆನು.
ಶುಭಸಂದೇಶ: ಯೊವಾನ್ನ 11:45-57
5 : ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು.
46 : ಕೆಲವರಾದರೋ ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದೆಲ್ಲವನ್ನೂ ತಿಳಿಸಿದರು.
47 : ಮುಖ್ಯ ಯಾಜಕರೂ ಫರಿಸಾಯರೂ ‘ನ್ಯಾಯಸಭೆ’ಯನ್ನು ಕರೆದರು. “ಈಗ ನಾವೇನು ಮಾಡೋಣ? ಈ ಮನುಷ್ಯನು ಎಷ್ಟೋ ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ;
48 : ಇವನನ್ನು ಹೀಗೆಯೇ ಬಿಟ್ಟರೆ ಜನರೆಲ್ಲರೂ ಇವನನ್ನೇ ನಂಬುವರು. ರೋಮನರು ಬಂದು ನಮ್ಮ ಪವಿತ್ರ ದೇವಾಲಯವನ್ನೂ ರಾಷ್ಟ್ರವನ್ನೂ ನೆಲಸಮ ಮಾಡುವರು,” ಎಂದು ವಾದಿಸಿದರು.
49 : ಆ ವರ್ಷ ಪ್ರಧಾನ ಯಾಜಕನಾಗಿದ್ದ ಕಾಯಫನು,
50 : “ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ,” ಎಂದು ನುಡಿದನು.
51 : ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಆ ವರ್ಷ ಆತನು ಪ್ರಧಾನ ಯಾಜಕನಾಗಿದ್ದ ಕಾರಣ, ಯೇಸು ಜನತೆಗಾಗಿ ಪ್ರಾಣತ್ಯಾಗ ಮಾಡಲಿದ್ದಾರೆ ಎಂದು ಹೀಗೆ ಪ್ರವಾದಿಸಿದನು.
52 : ಆ ಜನತೆಗಾಗಿ ಮಾತ್ರವಲ್ಲ, ಚದರಿಹೋಗಿದ್ದ ದೇವಜನರನ್ನು ಒಂದುಗೂಡಿಸುವ ಸಲುವಾಗಿಯೂ ಪ್ರಾಣತ್ಯಾಗ ಮಾಡಲಿದ್ದಾರೆಂಬುದು ಆ ಮಾತಿನ ಇಂಗಿತ.
53 : ಅಂದಿನಿಂದಲೇ ಯೆಹೂದ್ಯ ಅಧಿಕಾರಿಗಳು ಯೇಸುವನ್ನು ಕೊಲ್ಲಬೇಕೆಂದು ನಿರ್ಧಾರ ಮಾಡಿಕೊಂಡರು.
54 : ಎಂದೇ ಯೇಸು ಜುದೇಯದಲ್ಲಿ ಬಹಿರಂಗವಾಗಿ ಓಡಾಡುವುದನ್ನು ಕೈಬಿಟ್ಟರು. ಬೆಂಗಾಡಿನ ಪಕ್ಕದಲ್ಲಿದ್ದ ಪ್ರದೇಶಕ್ಕೆ ತೆರಳಿ ಎಫ್ರಯಿಮ್ ಎಂಬ ಗ್ರಾಮದಲ್ಲಿ ತಮ್ಮ ಶಿಷ್ಯರ ಸಂಗಡ ತಂಗಿದರು.
55 : ಆಗ ಯೆಹೂದ್ಯರ ಪಾಸ್ಕಹಬ್ಬವು ಸಮೀಪಿಸಿತ್ತು. ಹಬ್ಬಕ್ಕೆ ಮುಂಚೆ ನಡೆಯುವ ಶುದ್ದೀಕರಣಕ್ಕಾಗಿ ಹಲವರು ಜೆರುಸಲೇಮಿಗೆ ಗ್ರಾಮಾಂತರ ಪ್ರದೇಶಗಳಿಂದ ಮೊದಲೇ ಬಂದಿದ್ದರು.
56 : ಯೇಸುವನ್ನು ನೋಡಬೇಕೆಂಬ ಆಶೆ ಅವರಿಗಿತ್ತು. “ಆತ ಹಬ್ಬಕ್ಕೆ ಬರುತ್ತಾನೋ ಇಲ್ಲವೋ ನಿಮ್ಮ ಎಣಿಕೆ ಏನು?” ಎಂದು ಮಹಾದೇವಾಲಯದಲ್ಲಿ ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದರು.
57 : ಯೇಸುವನ್ನು ಬಂಧಿಸುವ ಉದ್ದೇಶದಿಂದ ಮುಖ್ಯಯಾಜಕರೂ ಫರಿಸಾಯರೂ ಆತನ ಸುಳಿವು ಯಾರಿಗಾದರೂ ಸಿಕ್ಕಿದ್ದೇ ಆದರೆ ತಮಗೆ ತಿಳಿಸಬೇಕೆಂದು ಆಜ್ಞೆ ಹೊರಡಿಸಿದ್ದರು.
-----------------
-----------------
ಚಿಂತನೆ
ಮಾನವೀಯತೆಯೇ ಶ್ರೇಷ್ಠ ಕಾನೂನು
ಪ್ರವಾದಿ ಯೆರೆಮೀಯ ಮತ್ತು ಕ್ರಿಸ್ತ ತಮ್ಮ ಬದುಕಿನಲ್ಲಿ ಕಂಡ ಬವಣೆಗಳು ಇಂದಿನ ವಾಚನಗಳಲ್ಲಿ ಉಲ್ಲೇಖಿತವಾಗಿರುವಂತೆ ವಾಸ್ತವ ಸಮಾಜದಲ್ಲೂ ಪ್ರತಿಬಿಂಬಿತವಾಗುತ್ತಿವೆ. ಸತ್ಯಕ್ಕೆ ಸಾಕ್ಷಿ ನುಡಿದ ಯೇಸುವಿಗೆಯೆಹೂದ್ಯರು ಕಲ್ಲು ಬೀರಲು ಮುಂದಾಗುತ್ತಾರೆ. ಯೆಹೂದ್ಯ ನಿಯಮಗಳ ಪ್ರಕಾರ ದೇವದೂಷಣೆ ಮಾಡಿದ ವ್ಯಕ್ತಿಗಳಿಗೆ ಕಲ್ಲು ಬೀರಿ ಕೊಲ್ಲುವ ಶಿಕ್ಷೆ ಜಾರಿಯಲ್ಲಿತ್ತು.
ಸತ್ಯ ಕಣ್ಣ ಮುಂದೆ ಇದ್ದರೂ ಸಣ್ಣ ಪುಟ್ಟ ವಿಷಯಗಳಿಗೂ ನಿಯಮ ನಿಬಂಧನೆಗಳಿಂದಲೇ ನ್ಯಾಯ ಬಯಸುವ ನಮ್ಮ ಒಣ ಆದರ್ಶಗಳು, ತಪ್ಪುಗಳಿಗೆ ಸಿಗಬೇಕಾದ್ದು ಕ್ಷಮೆಯೇ ವಿನಃ ಶಿಕ್ಷೆಯಲ್ಲ ಎಂಬುದನ್ನುಅರಿಯಬೇಕಾಗಿದೆ, ನಾವೂ ಬಾಳುವ ಮತ್ತು ಇತರರನ್ನು ಬಾಳಗೊಡುವ ಪಾಠವನ್ನು ರೂಢಿಸಿಕೊಳ್ಳಬೇಕಾಗಿದೆ. ನಿಯಮ ಕಾನೂನುಗಳು ಒಳ್ಳೆಯವು, ಅವು ಸಮಾಜವನ್ನು ವ್ಯವಸ್ಥಿತವಾಗಿಯೂ,ಸುಸ್ಥಿತಿಯಲ್ಲೂ ಇಡಬಲ್ಲವು; ಅವೆಲ್ಲವೂ ನಮ್ಮ ಒಳಿತಿಗೆಂದು ಮಾಡಿಕೊಂಡವು. ಆದರೆ ಮಾನವಿಕ ಕಾನೂನುಗಳ ಮುಂದೆ ಇವೆಲ್ಲ ತಲೆಬಾಗಲೇಬೇಕು. ನಮ್ಮ ಕಾನೂನುಗಳು ಮತ್ತೊಬ್ಬರ ಕನಿಷ್ಠ ಸಂತೋಷಕ್ಕೂ ಮುಳ್ಳಾದಾಗ, ಬದುಕಲಿಚ್ಛಿಸಿದರೂ ಮನೋವೇದನೆಯಿಂದ ಸಾವಿಗೆ ಶರಣಾಗಲೇಬೇಕಾದ ದುಃಸ್ಥಿತಿಗೆ ಒಳಗಾದಾಗ ಕಾನೂನುಗಳು ನಿರರ್ಥಕ ಮಾತ್ರವಲ್ಲ ಅವು ಅಪರಾಧಿ ಸ್ಥಾನದಲ್ಲಿನಿಲ್ಲುತ್ತವೆ. ಇನ್ನಾದರೂ ಮಾನವೀಯತೆ ಬೇಕೆನಿಸಿದಾಗ ನಮ್ಮ ನಿಯಮಗಳನ್ನು ಸಡಿಲಗೊಳಿಸೋಣ. ಆಗ ಮತ್ತೊಬ್ಬ ಕ್ರಿಸ್ತನಿಗೆ ಕಲ್ಲು ತೂರಿದ ಪಶ್ಚಾತ್ತಾಪ ನಮ್ಮನ್ನು ಕಾಡದು.
---------------------

No comments:
Post a Comment